ಕನ್ನಡ ಶಾಲೆ ದುರಸ್ತಿ ನಿರ್ಲಕ್ಷ್ಯ ಹಿನ್ನೆಲೆ : ಶಾಲೆ ಎದುರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಂದ ಪ್ರತಿಭಟನೆ
ಬೆಂಗಳೂರು: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದ ಕನ್ನಡ ಶಾಲೆಯ ಕಟ್ಟಡ ದುರಸ್ತಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಅನುದಾನ ಇಲ್ಲ ಎಂದು ಹೇಳುತ್ತಿರುವ ಅಧಿಕಾರಿಗಳ ವರ್ತನೆ ಆಕ್ಷೇಪಾರ್ಹವಾಗಿದ್ದು. ಕನ್ನಡ ಶಾಲೆಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವುದನ್ನು ಕನ್ನಡ ಸಾಹಿತ್ಯ ಪರಿಷತ್ತು ಸಹಿಸಿಕೊಳ್ಳುವುದಿಲ್ಲ ಎಂದು ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಖಾನಾಪುರ ತಾಲೂಕು ಗಡಿ ಪ್ರದೇಶದಲ್ಲಿ ಇದ್ದು, ಈ ಭಾಗದಲ್ಲಿ ಕನ್ನಡ ಕಟ್ಟುವ ಕಾರ್ಯ ಮಾಡಬೇಕಾದ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ವರ್ತನೆ ಮಾಡುವುದು ಸರಿಯಲ್ಲ. ಲಿಂಗನಮಠ ಗ್ರಾಮದಲ್ಲಿರುವ ಶಾಲೆಯ ಒಂದೇ ಆವರಣದಲ್ಲಿ ಕನ್ನಡ ಮತ್ತು ಉರ್ದು ಮಾಧ್ಯಮದ ಶಾಲೆಗಳಿದ್ದು, ಎರಡು ಶಾಲೆಗಳ ಕಟ್ಟಡ ಶಿಥಿಲಾವಸ್ಥೆಗೆ ತಲುಪಿವೆ. ದುರಸ್ತಿಗೆ ಮನವಿ ಮಾಡಿದಾಗ ಉರ್ದು ಶಾಲೆಯ ಕಟ್ಟಡ ದುರಸ್ತಿ ಮಾಡಲು ಒಪ್ಪಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕನ್ನಡ ಶಾಲೆಯ ಕಟ್ಟಡವನ್ನು ದುರಸ್ತಿಗೆ ಅನುದಾನದ ಕೊರತೆ ಇದೆ ಎಂದು ಹೇಳಿರುವ ವರದಿಗಳು ಬಿತ್ತರವಾಗುತ್ತಿವೆ. ಬಹರೇನ್ ಕನ್ನಡ ಸಂಘದ ಕನ್ನಡ ಭವನ ಉದ್ಘಾಟನೆ ನಿಮಿತ್ತ ಬಹರೇನ್ ಗೆ ತೆರಳಿರುವ ನಾಡೋಜ ಡಾ. ಮಹೇಶ ಜೋಶಿ ಅವರು, ಅಲ್ಲಿಂದಲೇ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉರ್ದು ಶಾಲೆಗೆ ನೀಡುತ್ತಿರುವ ಮನ್ನಣೆ, ಕನ್ನಡ ಶಾಲೆಗೆ ನೀಡದೇ ಇರುವುದು ಖಂಡನಾರ್ಹ. ತಕ್ಷಣದಲ್ಲಿ ಕನ್ನಡ ಶಾಲೆಯ ದುರಸ್ತಿಗೆ ಮುಂದಾಗದಿದ್ದಲ್ಲಿ, ಖಾನಾಪುರ ತಾಲ್ಲೂಕಿನ ಲಿಂಗನಮಠ ಕನ್ನಡ ಶಾಲೆಯ ಎದುರೇ ಖುದ್ದು ತಾವೇ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ಹಿರಿಯ ಸಾಹಿತಿ ಡಾ. ಎಸ್.ಎಲ್ ಭೈರಪ್ಪ ಅವರ ಅಧ್ಯಕ್ಷತೆಯಲ್ಲಿ ನಾಡಿನ ವಿವಿಧ ಶಿಕ್ಷಣ ತಜ್ಞರು, ಮಠಾಧೀಶರು, ಚಿಂತಕರು ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ.ನಾಗೇಶ್ ಅವರ ಉಪಸ್ಥಿತಿಯಲ್ಲಿ ʻಕನ್ನಡ ಶಾಲೆಗಳನ್ನು ಉಳಿಸಿ : ಕನ್ನಡ ಬೆಳೆಸಿʼ ಎನ್ನುವ ವಿಷಯದಲ್ಲಿ ʻದುಂಡು ಮೇಜಿನ ಸಭೆʼಯನ್ನು ನಡೆಸಿ ಕನ್ನಡ ಶಾಲೆಗಳ ಉಳಿವಿಗಾಗಿ ಮತ್ತು ಬೆಳೆವಣಿಗೆಗಾಗಿ ಸೂಕ್ತ ಮಾರ್ಗದರ್ಶನವನ್ನು ನೀಡಲಾಗಿದೆ. ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳಿಗೆ ಬೇಕಾದ ಅನುದಾನ ಬಿಡುಗಡೆ ಮಾಡುವಲ್ಲಿ ಸರಕಾರ ಮೀನ ಮೇಷ ಎಣಿಸಬಾರದು. ಕನ್ನಡ ಶಾಲೆಗಳ ಮೂಲಭೂತ ಸೌಕರ್ಯ ವ್ಯವಸ್ಥೆಮಾಡುವಲ್ಲಿ ತಾರತಮ್ಯವಾಗಬಾರದು ಎಂಬ ಖಡಕ್ ಸೂಚನೆಯನ್ನು ಶಿಕ್ಷಣ ಇಲಾಖೆ ಸೇರಿದಂತೆ ಸರಕಾರಕ್ಕೆ ನೀಡಲಾಗಿದೆ. ಆದರೂ ಖಾನಾಪುರ ತಾಲೂಕಿನ ಲಿಂಗನಮಠದ ಕನ್ನಡ ಶಾಲೆ ಕಟ್ಟಡ ದುರಸ್ತಿ ಮಾಡದೆ ಅದರ ಪಕ್ಕದಲ್ಲಿಯೇ ಇರುವ ಉರ್ದು ಶಾಲೆಯನ್ನು ದುರಸ್ತಿಗೆ ಇರುವ ಅನುದಾನ ಕನ್ನಡ ಶಾಲೆಯ ಕಾಮಗಾರಿ ಮಾಡಲು ಇರುವುದಿಲ್ಲ ಎನ್ನುವುದು ಎಷ್ಟು ಸರಿ ಎಂದು ನಾಡೋಜ ಡಾ. ಮಹೇಶ ಜೋಶಿ ಪ್ರಶ್ನೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲಾಡಳಿತ ಹಾಗೂ ಬೆಳಗಾವಿ ಜಿಲ್ಲಾಪಂಚಾಯಿತಿ ಅಧಿಕಾರಿಗಳು ಲಿಂಗನಮಠ ಕನ್ನಡ ಶಾಲೆಗೆ ತೆರಳಿ ದುರಸ್ತಿ ಕಾರ್ಯಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಬೇಕು. ಅದಕ್ಕೆ ಬೇಕಾದ ಅನುದಾನದ ಕೊರತೆಯಾದಲ್ಲಿ ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರ, ಶಾಸಕರ ಗಮನಕ್ಕೆ ತರುವ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಅನುದಾನ ತರಿಸಿಕೊಂಡಾದರೂ ಎಲ್ಲಾ ದುರಸ್ತಿ ಕಾರ್ಯ ಮಾಡಿ ಮುಗಿಸುವ ಮೂಲಕ ಕನ್ನಡ ಶಾಲೆಗಳ ಉಳಿವಿಗೆ ಮುಂದಾಗಬೇಕಿದೆ ಎಂದು ಆಗ್ರಹಿಸಿದ್ದಾರೆ.
ಉರ್ದು ಶಾಲೆಗಳ ಕೊಠಡಿಗಳ ನಿರ್ಮಾಣಕ್ಕೆ ಹಣವೂ ಬಿಡುಗಡೆಯಾಗಿ, ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕನ್ನಡ ಶಾಲೆಯ ದುರಸ್ತಿಯ ಕುರಿತು ಅಧಿಕಾರಿಗಳು ಸ್ಪಂದಿಸದೇ ಇರುವುದು ಅಸಮರ್ಪಕ ನಡೆ ಎಂದು ನಾಡೋಜ ಡಾ. ಮಹೇಶ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಿಂಗನಮಠ ಗ್ರಾಮದಲ್ಲಿ ಕೂಡಲೇ ಕನ್ನಡ ಶಾಲೆಯ ಕಟ್ಟಡ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪ್ರತಿಕ್ರಿಯೆ