ಕನ್ನಡ ಸಾಹಿತ್ಯ ಪರಿಷತ್ತಿಗೆ ೧ ಲಕ್ಷ ರೂ. ನೀಡಿ ಮಹಾಪೋಷಕರಾದ ಬೇಲಿಮಠದ ಸ್ವಾಮಿಗಳು
ಬೆಂಗಳೂರು: ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಬೇಲಿಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ನಿ.ಪ.ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮಿಜಿಗಳು ೧ ಲಕ್ಷ ರೂ. ನೀಡಿ ಮಾಹಾಪೋಷಕರಾಗಿದ್ದಾರೆ.
ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಹಾಗೂ ಕನ್ನಡ-ಕನ್ನಡಿಗ-ಕರ್ನಾಟಕದ ಹಿನ್ನೆಲೆಯಲ್ಲಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ರೂಪಿಸುವ ಉದ್ದೇಶದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ʻಕೋಟಿ ಸದಸ್ಯತ್ವ ಅಭಿಯಾನʼ, ʻಮನೆ ಮನೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುʼ ಎಂಬಿತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ರಾಜ್ಯಾದ್ಯಂತ ಗಣ್ಯರಿಂದ ಜನಸಾಮಾನ್ಯರವರೆಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರುಗಳ ಮನೆಗೆ, ಕಚೇರಿಗೆ, ಬಡಾವಣೆಗಳಿಗೆ ಭೇಟಿ ನೀಡಿ ಪರಿಷತ್ತಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವ ಹೊಂದಿದ ಪರಿಷತ್ತಿಗೆ ಬೇಲಿ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ನಿ.ಪ. ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮಿಜಿಗಳು ಇಂದು ಸೋಮವಾರ ಪರಿಷತ್ತಿನ ಕಚೇರಿಗೆ ಆಗಮಿಸಿ ಕನ್ನಡ ಸಾಹಿತ್ಯ ಪರಿಷತ್ತಿಗೆ ೧ ಲಕ್ಷ ರೂ. ನೀಡಿ ಮಹಾಪೋಷಕರಾದರು. ನಂತರ ಶ್ರೀಗಳು ಮಾತನಾಡಿ, ಕನ್ನಡ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುತ್ತಿರುವ ಪರಿಷತ್ತಿನ ಚಟುವಟಿಕೆಗಳನ್ನು ಕೆಲವು ದಿನಗಳಿಂದ ಗಮನಿಸುತ್ತಿದ್ದೇನೆ. ಪರಿಷತ್ತು ಜನಸಾಮಾನ್ಯರ ಪರಿಷತ್ತು ಆಗುವ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ಹಮ್ಮಿಕೊಂಡು ಮುನ್ನುಗುತ್ತಿರುವುದು ಕನ್ನಡಿಗರಾದ ಪ್ರತಿಯೊಬ್ಬರಿಗೂ ಹೆಮ್ಮೆಯ ಸಂಗತಿ. ಕನ್ನಡ ನಾಡು-ನುಡಿಯ ಕಾರ್ಯಕ್ಕೆ ಎಲ್ಲರನ್ನು ಒಟ್ಟುಗೂಡಿಸಿಕೊಂಡು ಸಾಗುತ್ತಿರುವುದು ಶ್ಲಾಘನೀಯ. ೧೦೭ ವರ್ಷಗಳಿಂದ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಈ ಕನ್ನಡ ಸಾಹಿತ್ಯ ಪರಿಷತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾದರಿ ಸಂಸ್ಥೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಮಾತನಾಡಿ, ಕನ್ನಡ ನಾಡು ನುಡಿ ರಕ್ಷಣೆಗೆ ಬೇಲಿಮಠದ ಕೊಡುಗೆ ಅಪಾರವಾಗಿದೆ. ಸ್ವಾಮಿಗಳು ಇಂದು ಪರಿಷತ್ತಿನ ಮಹಾಪೋಷಕರಾಗುವ ಮೂಲಕ ಕನ್ನಡದ ಕೈಂಕರ್ಯಕ್ಕೆ ಇನ್ನಷ್ಟು ಬಲ ನೀಡಿದ್ದಾರೆ. ಅವರ ಮಾರ್ಗದರ್ಶನ ಕನ್ನಡ ಸಾಹಿತ್ಯ ಪರಿಷತ್ತಿಗೆ ನಿತ್ಯವೂ ದೊರೆಯುತ್ತಿರಲಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶ್ಯಾಧ್ಯಕ್ಷರಾದ ಬಿ.ಎಂ. ಪಟೇಲ್‌ಪಾಂಡು, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗಶೆಟ್ಟಿ ಉಪಸ್ಥಿತರಿದ್ದರು
ಪ್ರತಿಕ್ರಿಯೆ