ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಾಡೋಜ ಡಾ.ಕಮಲಾ ಹಂಪನಾ ಅವರಿಗೆ ನುಡಿ ಗೌರವ
ಬೆಂಗಳೂರು: ಇತ್ತೀಚೆಗೆ ನಮ್ಮನ್ನು ಅಗಲಿದ ಮೇರು ಬರಹಗಾರ್ತಿ, ಸಂಶೋಧಕಿ ನಾಡೋಜ ಡಾ.ಕಮಲಾ ಹಂಪನಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು 12ನೆಯ ಜುಲೈ ಶುಕ್ರವಾರದಂದು ‘ನುಡಿ ಗೌರವ’ ಸಲ್ಲಿಸಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ‘ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ’ದಲ್ಲಿ ಸಂಜೆ ಐದು ಗಂಟೆಗೆ ಆಯೋಜಿತವಾಗಿರುವ ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ, ಹಿರಿಯ ವಿದ್ವಾಂಸ ನಾಡೋಜ ಡಾ.ಹಂಪ ನಾಗರಾಜಯ್ಯ, ಕರ್ನಾಟಕ ಸರ್ಕಾರದ ಮಾನ್ಯ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವರಾದ ಡಿ.ಸುಧಾಕರ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಟಿ.ಎ.ನಾರಾಯಣಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ, ಹಿರಿಯ ಲೇಖಕಿ ಡಾ.ಕೆ.ಆರ್.ಸಂಧ್ಯಾರೆಡ್ಡಿ ಮತ್ತು ಸಪ್ನ ಬುಕ್ ಹೌಸ್ನ ದೊಡ್ಡೇಗೌಡ ಅವರು ಅಗಲಿದ ಮಹಾನ್ ಲೇಖಕಿಗೆ ನುಡಿ ಗೌರವವನ್ನು ಸಲ್ಲಿಸಲಿದ್ದಾರೆ.
ಕಮಲಾ ಹಂಪನಾ ಅವರ ಅಗಲುವಿಕೆಯಿಂದ ಕನ್ನಡ ಸಾಹಿತ್ಯದಲ್ಲಿ ಒಂದು ಯುಗದ ಮುಕ್ತಾಯವಾಗಿದೆ ಎಂದರೆ ತಪ್ಪಾಗದು. ಪತಿ ನಾಡೋಜ ಡಾ.ಹಂಪನಾಗರಾಜಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗುವುದಕ್ಕಿಂತ ಮುಂಚಿನಿಂದಲೂ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ನಿಕಟ ಸಂಬಂಧವನ್ನು ಇಟ್ಟುಕೊಂಡಿದ್ದ ಡಾ.ಕಮಲಾ ಹಂಪನಾ 2003ರ ಡಿಸೆಂಬರ್ 18,19, 20 ಮತ್ತು 21ರಂದು ಮೂಡಬಿದರೆಯಲ್ಲಿ ನಡೆದ 71ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಜಿಲ್ಲಾ ಸಾಹಿತ್ಯ ಸಮ್ಮೇಳನ, ಲೇಖಕಿಯರ ಸಮ್ಮೇಳನ, ಅತ್ತಿಮಬ್ಬೆ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಹೀಗೆ ಹಲವು ಪ್ರಮುಖ ಸಮ್ಮೇಳನಗಳ ಅಧ್ಯಕ್ಷತೆಯ ಗೌರವ ಅವರಿಗೆ ದೊರಕಿದೆ. ಇದರ ಜೊತೆಗೆ ಹತ್ತಾರು ದೇಶ ವಿದೇಶಗಳಲ್ಲಿ ನಡೆದ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ ಲೇಖಕಿಯರಲ್ಲಿ ಕಮಲಾ ಅವರೇ ಮೊದಲಿಗರು. 2012ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅವರಿಗೆ ತನ್ನ ಪ್ರತಿಷ್ಟಿತ ‘ಚಾವುಂಡರಾಯ ದತ್ತಿ ಪ್ರಶಸ್ತಿ’ಯನ್ನು ನೀಡಿ ಗೌರವಿಸಿತ್ತು. ತೀರಾ ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಕನ್ನಡ ತಾಯಿ ಭುವನೇಶ್ವರಿಯ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಹಳ ಮುಖ್ಯವಾಗಿ ಸದಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಹಿರಿಯಕ್ಕನಂತೆ ಮಾರ್ಗದರ್ಶನ ಮಾಡುತ್ತಿದ್ದರು.
ಕಮಲಾ ಹಂಪನಾ ಸಾಹಿತ್ಯ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದವರು. ಅವರು ಶೈಕ್ಷಣಿಕ ವಲಯದಲ್ಲಿ ಚಿರಪರಿಚಿತರು. ಮಹಿಳಾ ಸಾಹಿತ್ಯ ಜಗತ್ತಿನಲ್ಲಿ ಅಚ್ಚಳಿಯದೆ ಉಳಿದ ಹೆಸರು. ಕಮಲಾ ಎಂದರೆ ತಾವರೆ, ಅದು ಕೆಸರಿನಲ್ಲಿ ಹುಟ್ಟಿದರೂ ಆಕಾಶದೆಡೆ ಮುಖ ಚಾಚಿದ್ದು ಕಮಲಾ ಹಂಪನಾ ಕೂಡ ಸಿರಿತನದಲ್ಲಿ ಹುಟ್ಟಿದ್ದರೂ ತಂದೆಯ ಸಾವಿನಿಂದ ಬಡತನದ ಬೆಂಕಿಗೆ ಬಿದ್ದು ನರಳಿದವರು. ಹೋರಾಟದಿಂದಲೇ ಸಿದ್ದಿಯನ್ನು ಪಡೆದವರು. ಕಥೆ, ಕಾವ್ಯ, ನಾಟಕ, ಸಂಶೋಧನೆ, ಸಂಪಾದನೆ, ವಿಮರ್ಶೆ ಜೊತೆಗೆ ತಮ್ಮ ಬಹುತೇಕ ಸಮಕಾಲೀನ ಲೇಖಕಿಯರಿಗಿಂತ ಭಿನ್ನವಾಗಿ ಸಂಪಾದನೆ, ಸಂಶೋಧನಾ ಕ್ಷೇತ್ರಗಳಲ್ಲಿಯೂ ಮುನ್ನುಗ್ಗಿ ಹೆಸರನ್ನು ಮಾಡಿರುವುದು ಗಮನಾರ್ಹ ಸಂಗತಿಯಾಗಿದೆ.
ಸಾಂಸ್ಕೃತಿಕ ಮಹತ್ವದ ಕಾರ್ಯಕ್ರಮದ ವಿವರಗಳನ್ನು ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸುವುದರೊಂದಿಗೆ ಕಾರ್ಯಕ್ರಮಕ್ಕೆ ನಿಮ್ಮ ವರದಿಗಾರರನ್ನು, ಛಾಯಾಗ್ರಾಹಕರನ್ನು ಕಳುಹಿಸಿ ಕೊಡ ಬೇಕಾಗಿ ವಿನಂತಿ
ಪ್ರತಿಕ್ರಿಯೆ