ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಪಾಯ ಭದ್ರ ಪಡಿಸಿದ ಪ್ರೊ.ಜಿ.ವಿ: ನಾಡೋಜ ಡಾ.ಮಹೇಶ ಜೋಶಿ ಬಣ್ಣನೆ

ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಪಾಯ ಭದ್ರ ಪಡಿಸಿದ ಪ್ರೊ.ಜಿ.ವಿ: ನಾಡೋಜ ಡಾ.ಮಹೇಶ ಜೋಶಿ ಬಣ್ಣನೆWhatsApp Image 2024-08-30 at 1.17.30 PM

ಬೆಂಗಳೂರು: ಕಟ್ಟಡ ಭವ್ಯವಾಗಿ ನಿಂತ ನಂತರ ಕೆಳಗಡೆ ಇರುವ ಭದ್ರ ಅಡಿಪಾಯ ಮರೆಯಾಗಿರುತ್ತದೆ. ಆದರೆ ಕಟ್ಟಡ ಸುಭದ್ರವಾಗಿ ನಿಲ್ಲಲು ಅಡಿಪಾಯ ವೇ ಮುಖ್ಯವೆನ್ನುವುದನ್ನು ನಾವು ಮರೆಯ ಬಾರದು. ಅದೇ ರೀತಿಯಲ್ಲಿ ಪ್ರೊ.ಜಿ.ವೆಂಕಟಸುಬ್ಬಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಪಾಯವನ್ನು ಭದ್ರಗೊಳಿಸಿದವರು ಹೀಗಾಗಿ ಅವರ ಸ್ಮರಣೆಗೆ ವಿಶೇಷ ಮಹತ್ವವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಿಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಹೇಳಿದರು ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಪ್ರೊ.ಜಿ.ವೆಂಕಟಸುಬ್ಬಯ್ಯನವರ 112ನೆಯ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಕನ್ನಡ ಸಾಹಿತ್ಯ ಪರಿಷತ್ ಜೊತೆಗಿನ ವೆಂಕಟಸುಬ್ಬಯ್ಯನವರ ಒಡನಾಟಕ್ಕೆ ಸುದೀರ್ಘ ಪರಂಪರೆ ಇದೆ. ೧೯೫೪ರಲ್ಲಿ ಮೊದಲು ಕಾರ್ಯದರ್ಶಿಯಾದರು. ೧೯೬೪ರಲ್ಲಿ ಅಧ್ಯಕ್ಷರಾದರು.ಅವರು ಅಧ್ಯಕ್ಷರಾದಾಗ ಪರಿಷತ್ತಿನ ಪರಿಸ್ಥಿತಿ ಸಂಕಷ್ಟದಲ್ಲಿ ಇತ್ತು.ನಲವತ್ತು ಸಾವಿರ ರೂಪಾಯಿಗಳ ಸಾಲವಿತ್ತು.ಸದಸ್ಯರ ಸಂಖ್ಯೆ ಕೂಡ ಬಹಳ ಕಡಿಮೆ ಇದ್ದು.ಸರ್ಕಾರದ ಬಳಿ ಅನುದಾನ ಕೇಳಿದರೆ ಮೊದಲು ಸಾಲ ತೀರಿಸಿ ಎನ್ನುವ ಉತ್ತರ ಬಂದಿತು.ಬೇರೆ ಯಾರಾಗಿದ್ದರೂ ಅಧ್ಯಕ್ಷಗಿರಿಯೇ ಬೇಡ ಎಂದು ಬಿಟ್ಟು ಹೋಗುತ್ತಿದ್ದರು. ಆದರೆ ಜಿ.ವಿ ಹಾಗೆ ಮಾಡಲಿಲ್ಲ. ಜಿದ್ದಿನಿಂದ ಓಡಾಡಿ ಹಿರಿಯರಿಂದ ಕನ್ನಡ ಪ್ರೇಮಿಗಳಿಂದ ಅನುದಾನ ತಂದರು. ಸರಸ್ವತಿ ಮಂದಿರದಲ್ಲಿ ನಿರಂತರ ಕಾರ್ಯಕ್ರಮಗಳನ್ನು ತೋರಿಸಿದರು.ಪ್ರಕಟಣೆಗಳನ್ನೂ ಮಾಡಿದರು ಎಂದು ಪ್ರೊ.ಜಿ.ವೆಂಕಟಸುಬ್ಬಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಿದ ಕೊಡುಗೆಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯುಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ವರ್ಣಿಸಿದರು.
ಮೈಸೂರು ಪ್ರಾಂತ್ಯಕ್ಕೆ ಹೆಚ್ಚು ಸೀಮಿತವಾಗಿದ್ದ ಪರಿಷತ್ತಿಗೆ ಅಖಿಲ ಕರ್ನಾಟಕದ ಸ್ವರೂಪ ನೀಡಿದ್ದೂ ಕೂಡ ಜಿ.ವಿಯವರ ಹೆಗ್ಗಳಿಕೆ. ಪರಿಷತ್ತಿನ ಅಂಗರಚನೆಯಲ್ಲಿ ಇಂತಹ ಮಾರ್ಪಟು ಮಾಡಿದರು.ಕಾರ್ಯಕಾರಿ ಸಮಿತಿಯ ವ್ಯಾಪ್ತಿಯನ್ನು ರಾಜ್ಯಾದ್ಯಂತ ವಿಸ್ತರಿಸಿ ಅದನ್ನು ಸದೃಢ ಮತ್ತು ಸಕ್ರಿಯಗೊಳಿಸಿದರು.ಅದಕ್ಕಾಗಿ ನಿರಂತರ ಪ್ರವಾಸಗಳನ್ನೂ ಕೂಡ ಕೈಗೊಂಡರು ಎಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿಯವರು ಹಾಗೆ ನೋಡಿದರೆ ಜಿ.ವಿಯವರಿಗೆ ಎಲ್ಲವೂ ವಿಳಂಭವಾಗಿಯೇ ಬಂದಿತು. ಅವರಿಗೆ ನಾಡೋಜ ಗೌರವ ಸಂದಾಗ ೯೨ ವರ್ಷ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ ೯೮ ವರ್ಷ, ಪಂಪ ಪ್ರಶಸ್ತಿ ಬಂದಾಗ ೧೦೧ ವರ್ಷ, ಪದ್ಮಶ್ರೀ ಬಂದಾಗ ೧೦೪ ವರ್ಷ, ಕೇಂದ್ರ ಸರ್ಕಾರದ ಭಾಷಾ ಸಮ್ಮಾನ ಗೌರವ ಬಂದಾಗ ೧೦೫ ವರ್ಷ.ಜಿ.ವಿಯವರು ಇದರ ಕುರಿತು ಎಂದಿದೂ ಆಕ್ಷೇಪ ವ್ಯಕ್ತಪಡಿಸದಿದ್ದರೂ ನಮ್ಮ ವ್ಯವಸ್ಥೆ ಇದರ ಕುರಿತು ಯೋಚಿಸ ಬೇಕು ಎಂದು ಹೇಳಿದರು.

ಕನ್ನಡದಲ್ಲಿ ನಿಘಂಟು ಎನ್ನುವ ಪದ ಕೇಳಿದ ಕೂಡಲೇ ನೆನಪಾಗುವುದೇ ವೆಂಕಟಸುಬ್ಬಯ್ಯನವರ ಹೆಸರು ಎಂದು ಹೇಳಿದ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್.ಶ್ರೀಧರ ಮೂರ್ತಿಯವರು ೧೯೪೩ರಲ್ಲಿಯೇ ಡಿ.ಎಲ್.ನರಸಿಂಹಾಚಾರ್ಯರು ಪದ ಸಂಗ್ರಹದ ತರಬೇತಿಯನ್ನು ನೀಡಿ ಅವರನ್ನು ಈ ಕ್ಷೇತ್ರಕ್ಕೆ ಕರೆ ತಂದರು. ಅವರ ಗುರುಗಳಾದ ಎ.ಆರ್.ಕೃಷ್ಣಶಾಸ್ತ್ರಿಗಳು ‘ಇದು ನೀನೇ ಮಾಡ ಬೇಕಾದ ಕೆಲಸ’ ಎಂದು ಸೂಚಿಸಿದರು.ಸ್ವತ: ಜಿ.ವಿಯವರೇ ರೂಪಿಸಿದ ಹದಿನಾಲ್ಕು ನಿಘಂಟುಗಳು ಇರುವಂತೆ ನಿಘಂಟು ಶಾಸ್ತ್ರದ ಪರಿಚಯ ನೀಡುವ ಎರಡು ಮುಖ್ಯ ಕೃತಿಗಳನ್ನೂ ಅವರು ರಚಿಸಿದ್ದಾರೆ. ೧೯೯೩ರಲ್ಲಿ ಅವರು ‘ಕನ್ನಡ ನಿಘಂಟು ಶಾಸ್ತ್ರದ ಪರಿಚಯ’ ಕೃತಿ ರಚಿಸುವುದಕ್ಕೆ ಮೊದಲು ಆ ಕ್ಷೇತ್ರದಲ್ಲಿ ಕೃತಿಗಳೇ ಇರಲಿಲ್ಲ. ಅಲ್ಲಿಂದ ಮುಂದೆ ಅದು ಆ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆಲ್ಲರಿಗೂ ಅದು ಆಚಾರ್ಯ ಕೃತಿಯಾಯಿತು.‘ಕನ್ನಡ ನಿಘಂಟು ಪರಿವಾರ’ ನಿಘಂಟು ರಚನೆಯ ಹಿಂದಿನ ತಾತ್ವಿಕತೆಯನ್ನು ವಿವರಿಸುವಂತಹ ಕೃತಿ.ಇಲ್ಲಿನ ೧೯ ಲೇಖನಗಳೂ ಕೂಡ ನಿಘಂಟು ರಚನೆಯ ಹಿಂದಿನ ಕುಶಲತೆಯನ್ನು ದಕ್ಷವಾಗಿ ವಿವರಿಸುತ್ತವೆ ಎಂದು ಹೇಳಿ ಅವರ ಜೊತೆ ಕೆಲಸ ಮಾಡಿದ ಅನುಭವಗಳನ್ನು ಹಂಚಿ ಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು ಮತ್ತು ನೇ.ಭ.ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು, ದುಬೈ ಕನ್ನಡ ಸಂಘದ ನಾಗನಾಥ್, ಪರಿಷತ್ತಿನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)