ಕನ್ನಡ ಸಾಹಿತ್ಯ ಪರಿಷತ್ತಿನ ಪ್ರೊ.ಸಿ.ಎಚ್.ಮರಿದೇವರು ದತ್ತಿ ಪ್ರಶಸ್ತಿಗೆ ನಾಲ್ವರು ಗಣ್ಯರು ಮತ್ತು ಸಂಸ್ಥೆಯ ಆಯ್ಕೆ
ಬೆಂಗಳೂರು: 2024ನೆಯ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರೊ.ಸಿ.ಎಚ್.ಮರೀದೇವರು ದತ್ತಿ ಪ್ರಶಸ್ತಿಗೆ ಶಿಕ್ಷಣ ಕ್ಷೇತ್ರದಿಂದ ಡಾ.ಬಿ.ವಿ.ವಸಂತ ಕುಮಾರ್, ಸಾಹಿತ್ಯ ಕ್ಷೇತ್ರದಿಂದ ಡಾ.ಮ.ನಂಜುಂಡ ಸ್ವಾಮಿ, ಸಂಸ್ಕೃತಿ ಮತ್ತು ಕಲಾ ಕ್ಷೇತ್ರದಿಂದ ಸುಧಾ ನರಸಿಂಹ ರಾಜು, ಕೃಷಿ ಮತ್ತು ನೀರಾವರಿ ಕ್ಷೇತ್ರದಿಂದ ಸಿದ್ಧಗಂಗಯ್ಯ ಹೊಲತಾಳು ಮತ್ತು ಕನ್ನಡ ಸೇವೆಗಾಗಿ ಚಿಕ್ಕನಾಯಕನ ಹಳ್ಳಿ ಕನ್ನಡ ಸಂಘವನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯ ಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರ ನೇತೃತ್ವದ ಆಯ್ಕೆ ಸಮಿತಿ ಈ ಆಯ್ಕೆಗಳನ್ನು ಮಾಡಿದೆ.
ತುಮಕೂರು ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯ ಕ್ಷರೂ, ಹಿರಿಯ ಲೇಖಕರೂ, ಶಿಕ್ಷಣ ತಜ್ಞರೂ, ವೈಚಾರಿಕ ಚಿಂತಕರೂ ಆಗಿದ್ದ ಪ್ರೊ.ಸಿ.ಎಚ್.ಮರಿದೇವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಿಕ್ಷಣ, ಸಾಹಿತ್ಯ, ಕೃಷಿ, ನೀರಾವರಿ, ಕನ್ನಡ ಸೇವೆ, ಸಂಗೀತ ಕ್ಷೇತ್ರದಲ್ಲಿ ಮೌಲಿಕ ಸೇವೆ ಸಲ್ಲಿಸಿದ ಐವರು ಸಾಧಕರಿಗೆ ಪುರಸ್ಕಾರ ನೀಡಲು ದತ್ತಿಯನ್ನು ಸ್ಥಾಪಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ತಿಪ್ಪಗೊಂಡನಹಳ್ಳಿಯವರಾದ ಬಿ.ವಿ.ವಸಂತ ಕುಮಾರ್ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೊತ್ತರ ಪದವಿಯನ್ನು ಪಡೆದು ‘ಕೈಲಾಸಂ ಕನ್ನಡ ಒಂದು ಅಧ್ಯಯನ’ ಎಂಬ ವಿಷಯದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪ್ರಾಧ್ಯಪಕರಾಗಿರುವ ಇವರು ಸೃಜನಾತ್ಮಕ ಮತ್ತು ಸಂಶೋಧನೆ ಎರಡೂ ನೆಲೆಯಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದು ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಅವರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ಎಂ.ನಂಜುಂಡಸ್ವಾಮಿಯವರು ಇಂಜಿನಿಯರಿಂಗ್ ಪದವೀಧರರಾದರೂ ಐ.ಪಿ.ಎಸ್. ಸೇವೆಯನ್ನು ಸೇರಿ ಮಹತ್ವದ ಸಾಧನೆಯನ್ನು ಮಾಡಿ ಈಗ ಎಡಿಜಿಪಿ ಮತ್ತು ಎಡಿಜಿ ಆಗಿ (ಅಗ್ನಿಶಾಮಕ ಮತ್ತು ತುರ್ತು ಸೇವೆಗಳು/ರಾಜ್ಯ ವಿಪತ್ತು ಸ್ಪಂದನಾ ಪಡೆ) ಸೇವೆ ಸಲ್ಲಿಸುತ್ತಿದ್ದಾರೆ. ಬರಹಗಾರರಾಗಿಯೂ ಹೆಸರು ಮಾಡಿರುವ ಅವರು ಅನೇಕ ಕೃತಿಗಳನ್ನೂ ಕೈಪಿಡಿಗಳನ್ನು ರಚಿಸಿದ್ದು ಭಾರತೀಯ ಇತಿಹಾಸದ ಬಗ್ಗೆ ಆಳವಾದ ಸಂಶೋಧನೆಯನ್ನು ನಡೆಸಿದ್ದಾರೆ. ಅವರ ಕನ್ನಡ ಸೇವೆಯನ್ನು ಗುರುತಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಕಲಾ ಕ್ಷೇತ್ರದಿಂದ ಆಯ್ಕೆಯಾಗಿರುವ ಸುಧಾ ನರಸಿಂಹ ರಾಜು ತುಮಕೂರು ಜಿಲ್ಲೆ ತಿಪಟೂರಿನವರು. ಖ್ಯಾತ ನಟ ನರರಸಿಂಹ ರಾಜು ಅವರ ಮಗಳು. ರಥಸಪ್ತಮಿ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ಅವರು ಇದುವರೆಗೂ ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದು ಹಲವಾರು ಕಿರುತೆರೆ ಧಾರವಾಹಿಗಳಲ್ಲಿ ಕೂಡ ಅಭಿನಯಿಸಿರುವ ಇವರು ತಮ್ಮ ತಂದೆಯವರ ಸಾಧನೆಗಳ ಕುರಿತು ವಿಶಿಷ್ಟ ಧಾರಾವಾಹಿಯನ್ನು ದೂರದರ್ಶನಕ್ಕೆ ನಿರ್ಮಿಸಿದ್ದರು.
ಕೃಷಿ ಕ್ಷೇತ್ರದಿಂದ ಪ್ರೊ.ಸಿ.ಎಚ್.ಮರಿದೇವರು ಪುರಸ್ಕಾರಕ್ಕೆ ಆಯ್ಕೆಯಾಗಿರುವ ಡಾ.ಸಿದ್ಧಗಂಗಯ್ಯ ಹೊಲತಾಳು ಮೂರು ದಶಕಗಳ ಪ್ರಾಥಮಿಕ ಹಂತದಿಂದ ಸ್ನಾತಕೊತ್ತರದ ಹಂತದವರೆಗೆ ಬೋಧನೆಯ ಅನುಭವವಿರುವ ಶಿಕ್ಷಕರು. ‘ಕಾವ್ಯ ಸಂವಹನ’ ಅವರ ಡಿ.ಲಿಟ್ ಪ್ರಬಂಧ. ತುಮಕೂರು ಜಿಲ್ಲೆಯ ಸಿದ್ಧರ ಬೆಟ್ಟದ ದಕ್ಷಿಣದ ತಪ್ಪಲಿನಲ್ಲಿ ಕೃಷಿ ಮಾಡುತ್ತಾ ಎಲ್ಲರಿಗೂ ಆದರ್ಶವಾಗಿದ್ದಾರೆ.
ಕನ್ನಡ ಸೇವೆಗಾಗಿ ಆಯ್ಕೆಯಾಗಿರುವ ಚಿಕ್ಕನಾಯಕನ ಹಳ್ಳಿ ಕನ್ನಡ ಸಂಘವು ಗೋಕಾಕ್ ಚಳುವಳಿಯಿಂದ ಆರಂಭಿಸಿ ಕನ್ನಡ ಭಾಷೆಯ ಅಭ್ಯುದಯಕ್ಕೆ ತನ್ನನ್ನು ಸಮರ್ಪಿಸಿ ಕೊಂಡಂತಹ ಸಂಸ್ಥೆ. ಕರ್ನಾಟಕ ನಾಮಕರಣಗೊಂಡ ಸಂದರ್ಭದಲ್ಲಿ ಮೊದಲ ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಕೊಂಡ ಸಂಸ್ಥೆ ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಕನ್ನಡದ ಹಿರಿಯ ಲೇಖಕರೆಲ್ಲರೂ ಇಲ್ಲಿಗೆ ಭೇಟಿ ನೀಡಿದ್ದು ಅನೇಕ ಮಹತ್ವದ ಕಾರ್ಯಗಾರಗಳನ್ನೂ ನಡೆಸಿದೆ.
ನಾಡೋಜ ಡಾ.ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ದತ್ತಿ ಆಯ್ಕೆ ಸಭೆಯಲ್ಲಿ ದತ್ತಿ ದಾನಿಗಳ ಪರವಾಗಿ ಎಚ್.ರಾಜಶೇಖರ್, ಎಂ.ಎಸ್.ರವಿಕುಮಾರ್, ಕೆ.ಎಸ್.ಸಿದ್ಧಲಿಂಗಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗಶೆಟ್ಟಿ, ಗೌರವ ಕೋಶಾಧಕ್ಷರಾದ ಬಿ.ಎಂ.ಪಟೇಲ್ ಪಾಂಡು ಅವರು ಭಾಗವಹಿಸಿದ್ದರು.
ಪ್ರೊ.ಸಿ.ಎಚ್.ಮರೀದೇವರು ದತ್ತಿ ಪುರಸ್ಕೃತರಾದ ಡಾ.ಬಿ.ವಿ.ವಸಂತ ಕುಮಾರ್, ಡಾ.ಮ.ನಂಜುಂಡ ಸ್ವಾಮಿ, ಸುಧಾ ನರಸಿಂಹ ರಾಜು, ಸಿದ್ಧಗಂಗಯ್ಯ ಹೊಲತಾಳು ಮತ್ತು ಚಿಕ್ಕನಾಯಕನ ಹಳ್ಳಿ ಕನ್ನಡ ಸಂಘವನ್ನು ವಿಶೇಷವಾಗಿ ಅಭಿನಂದಿಸಿರುವ ನಾಡೋಜ ಡಾ.ಮಹೇಶ ಜೋಶಿಯವರು ಪುರಸ್ಕೃತರು ನಾಡಿಗೆ ಇನ್ನಷ್ಟು ಸೇವೆಯನ್ನು ಸಲ್ಲಿಸಿ ಎಂದು ಆಶಿಸಿದ್ದಾರೆ.
ಪ್ರತಿಕ್ರಿಯೆ