ಕರ್ನಾಟಕದೊಳಗೆ ಮರಾಠಿ ನಾಮಫಲಕ ಅಳವಡಿಸುವ ಕೃತ್ಯಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಖಂಡನೆ
ಕರ್ನಾಟಕದ ಗಡಿಯೊಳಗೆ ಮಹಾರಾಷ್ಟ್ರ ಸರ್ಕಾರದ ಲೋಕೋಪಯೋಗಿ ಇಲಾಖೆಯವರು ಮರಾಠಿ ಭಾಷೆಯಲ್ಲಿ ನಾಮಫಲಕ ಹಾಕಿರುವ ಕ್ರಮ ಸರಿಯಲ್ಲ. ಇದರಿಂದ ಗಡಿಭಾಗದ ಜನರಲ್ಲಿ ಮತ್ತೇ ಭಾಷಾ ವಿವಾದ ಕಿಡಿ ಹಚ್ಚಿದಂತಾಗುತ್ತದೆ. ಮಹಾರಾಷ್ಟ್ರ ಸರಕಾರದ ಲೋಕೋಪಯೋಗಿ ಇಲಾಖೆಯ ಈ ಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಕಟುವಾಗಿ ಖಂಡಿಸುತ್ತದೆ ಎಂದು *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ* ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಗಡಿಯಲ್ಲಿ ಕ್ಯಾತೆ ಮಾಡುವುದು ಮರಾಠಿಗರ ಪದ್ಧತಿಯಾಗಿದೆ. ಅವರ ಈ ಕೃತ್ಯಕ್ಕೆ ಮಹಾರಾಷ್ಟ್ರ ಸರಕಾರವು ಕುಮ್ಮಕ್ಕು ನೀಡುವಂತೆ, ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಗಡಿ ಭಾಗವಾದ ಸಂಕೇಶ್ವರ ಸಮಿಪದ ಗಡಹಿಂಗ್ಲಜ್ ರಸ್ತೆಯ ಸೇತುವೆಯ ಬಳಿ ಮರಾಠಿ ನಾಮಫಲಕ ಹಾಕಲಾಗಿತ್ತು. ಇದನ್ನು ಸ್ಥಳೀಯ ಕನ್ನಡ ಪರ ಸಂಘಟನೆಗಳು ಗಮನಿಸಿ ಆಕ್ರೋಶ ವ್ಯಕ್ತ ಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಸಂಕೇಶ್ವರ ಪೊಲೀಸರು ರಾಜ್ಯದೊಳಗೆ ಇರುವ ಮಹಾರಾಷ್ಟ್ರ ಸರಕಾರದ ಲೋಕೋಪಯೋಗಿ ಇಲಾಖೆ ಹಾಕಿರುವ ನಾಮಫಲಕವನ್ನು ತೆರವು ಮಾಡಿರುವ ವರದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.
ರಾಜ್ಯದ ಗಡಿಯೊಳಗೆ ಬೇರೆ ರಾಜ್ಯದ ಅಧಿಕೃತ ಇಲಾಖೆಯವರು ನಾಮಫಲಕ ಹಾಕಿರುವುದನ್ನು ಅಧಿಕಾರಿಗಳು ಈಗ ತೆರವು ಮಾಡಿದ್ದಾರೆ. ಇದಕ್ಕೆ ಕಾರಣವಾದ ಕನ್ನಡ ಪರ ಸಂಘಟನೆಯವರು ಎಚ್ಚೆತ್ತು ಪೊಲೀಸರ ಗಮನಕ್ಕೆ ತಂದಿರುವುದು. ವಿಷಯ ತಿಳಿದ ತಕ್ಷಣ ಸಂಕೇಶ್ವರ ಪೊಲೀಸರು ವಿವಾದಿತ ನಾಮಫಲಕವನ್ನು ತೆರವು ಮಾಡಿದಕ್ಕೆ ಪರಿಷತ್ತು ಅಭಿನಂದಿಸುತ್ತದೆ ಎಂದು ನಾಡೋಜ.ಡಾ.ಮಹೇಶ ಜೋಶಿ ತಿಳಿಸಿದ್ದಾರೆ.
ಅನ್ಯ ಭಾಷಿಕರು ಗಡಿಭಾಗದಲ್ಲಿ ಇಂತಹ ಕೃತ್ಯ ಎಸಗುವುದನ್ನು ತಡೆಯಲು ಸ್ಥಳೀಯ ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ, ಸ್ಥಳೀಯ ಪೊಲೀಸ್ ಇಲಾಖೆ ಎಚ್ಚರದಿಂದ ಇರಬೇಕಾಗಿದೆ. ಮಹಾರಾಷ್ಟ್ರ ಸರಕಾರ ನಮ್ಮ ನೆಲದಲ್ಲಿ ಬಂದು ನಾಮಫಲಕ ಹಾಕುವವರೆಗೆ ನಮ್ಮ ಅಧಿಕಾರಿಗಳು ಮೌನವಹಿಸಿದ್ದು ಸರಿಯಲ್ಲ. ಇಂತಹ ಪರಿಸ್ಥಿತಿ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಎಚ್ಚರಿಸಿದ್ದಾರೆ.
ಪ್ರತಿಕ್ರಿಯೆ