ಪಡುವಣ ಕಡಲಿನ ನೀಲಿಯ ಬಣ್ಣ,
ಮುಡಿಯೊಳು ಸಂಜೆಯ ಅಂಚಿನ ಚಿನ್ನ,
ಹೊಳೆಗಳ ಸೆರಗಿನ ಪಚ್ಚೆಯ ಬಯಲು,
ಬಿಡುಮಳೆಗಂಜದ ಬೆಟ್ಟದ ಸಾಲು,
ಹುಲಿ ಕಾಡಾನೆಗಳಲೆಯುವ ಕಾಡಿದು
ಸಿರಿಗನ್ನಡ ನಾಡು!
ಕಲ್ಲಿಗೆ ಬಯಸಿದ ರೂಪವ ತೊಡಿಸಿ,
ಮುಗಿಲಿಗೆ ತಾಗುವ ಮೂರ್ತಿಯ ನಿಲಿಸಿ,
ದಾನ ಧರ್ಮಗಳ ಕೊಡುಗೈಯಾಗಿ,
ವೀರಾಗ್ರಣಿಗಳ ತೊಟ್ಟಿಲ ತೂಗಿ,
ಬೆಳಗಿದ ನಾಡಿದು, ಚಂದನಗಂಪಿನ
ಸಿರಿಗನ್ನಡ ನಾಡು!
ಇಲ್ಲಿ ಅರಳದಿಹ ಹೂವುಗಳಿಲ್ಲ;
ಹಾಡಲು ಬಾರದ ಹಕ್ಕಿಗಳಿಲ್ಲ –
ಸಾವಿರ ದೀಪಗಳರಮನೆಯೊಳಗೆ
ಶರಣೆನ್ನುವೆನೀ ವೀಣಾಧ್ವನಿಗೆ.
ಕನ್ನಡ ನಾಡಿದು; ಮಿಂಚುವ ಕಂಗಳ
ಸಿರಿಗನ್ನಡ ನಾಡು!
ಸಾಹಿತ್ಯ: ಕೆ. ಎಸ್. ನರಸಿಂಹಸ್ವಾಮಿ
ಪ್ರತಿಕ್ರಿಯೆ