ಕರ್ಪೂರಿ ಠಾಕೂರರಿಗೆ ಭಾರತ ರತ್ನ ನಾಡೋಜ ಡಾ.ಮಹೇಶ ಜೋಶಿ ಸ್ವಾಗತ

ಕರ್ಪೂರಿ ಠಾಕೂರರಿಗೆ ಭಾರತ ರತ್ನ ನಾಡೋಜ ಡಾ.ಮಹೇಶ ಜೋಶಿ ಸ್ವಾಗತ

kasapa_img1

ಹಿರಿಯ ಸಮಾಜವಾದಿ ಧುರೀಣ ಕರ್ಪೂರಿ ಠಾಕೂರ್ ಅವರಿಗೆ ‘ಭಾರತ ರತ್ನ’ ಗೌರವವನ್ನು ಘನತೆವೆತ್ತ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಪ್ರಕಟಿಸಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಸ್ವಾಗತಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿ ಶಿಕ್ಷಣ ಕ್ಷೇತ್ರದಲ್ಲಿಯೂ ಅಪಾರ ಸೇವೆ ಸಲ್ಲಿಸಿದ ಕರ್ಪೂರಿ ಠಾಕೂರರು ಎರಡು ಅವಧಿಗೆ ಬಿಹಾರದ ಮುಖ್ಯಮಂತ್ರಿಗಳಾಗಿದ್ದವರು. ಎಂಟನೆಯ ತರಗತಿಯವರೆಗೆ ಉಚಿತ ಶಿಕ್ಷಣವನ್ನು ನೀಡುವ ಮೂಲಕ ಹೊಸ ಕ್ರಾಂತಿಯನ್ನೇ ಮಾಡಿದ್ದ ಅವರು ಸರ್ಕಾರಿ ಉದ್ಯೋಗದಲ್ಲಿ ದಮನಿತರಿಗೆ ಶೇ 26ರಷ್ಟು ಮೀಸಲಾತಿ ತಂದಿದ್ದರು. ರಾಜ್ಯದ ಎಲ್ಲಾ ನೌಕರರಿಗೆ ಸಮಾನ ವೇತನದ ಕಲ್ಪನೆಯನ್ನು ತಂದ ಅವರು ದೊಡ್ಡ ಪ್ರಮಾಣದಲ್ಲಿ ಇಂಜಿನಿಯರ್ ಮತ್ತು ವೈದ್ಯರನ್ನು ನೇಮಕ ಮಾಡಿ ಕೊಂಡು ಈ ಕ್ಷೇತ್ರಗಳನ್ನು ಪ್ರೋತ್ಸಾಹಿಸಿದರು. ರಾಜಕಾರಣಿಗಳ ಭ್ರಷ್ಟಾಚಾರದ ಕಥೆಗಳನ್ನೇ ದಿನನಿತ್ಯ ಓದುತ್ತಿರುವ ನಮಗೆ ಕರ್ಪೂರಿ ಠಾಕೂರರು ಎರಡು ಸಲ ಮುಖ್ಯಮಂತ್ರಿಗಳಾಗಿದ್ದರೂ ಸ್ವಂತ ಮನೆಯನ್ನು ಮಾಡಿ ಕೊಂಡಿರಲಿಲ್ಲ ಎನ್ನುವುದು ಅಚ್ಚರಿಯ ವಿಷಯವಾಗಿ ಕಾಣ ಬಹುದು ಎಂದು ನಾಡೋಜ ಡಾ.ಮಹೇಶ ಜೋಶಿಯವರು ಕರ್ಪೂರಿ ಠಾಕೂರರ ಸಾಧನೆಗಳನ್ನು ನೆನಪು ಮಾಡಿ ಕೊಂಡಿದ್ದಾರೆ.

ಇವತ್ತು ಅವರ ನೂರನೆಯ ಜನ್ಮದಿನವಾಗಿದ್ದು (ಜನನ 24 ಜನವರಿ 1924) ಇಂದೇ ಈ ಸುದ್ದಿ ಪ್ರಕಟವಾಗಿದ್ದು ಸಂತೋಷದ ಸಂಗತಿ. ದೇಶದಲ್ಲಿ ಇನ್ನೂ ಅನೇಕ ಮಹತ್ವದ ಸಾಧಕರಿದ್ದು ಸರ್ಕಾರ ಅವರನ್ನು ಗುರುತಿಸಿ ಭಾರತ ರತ್ನ ಪುರಸ್ಕಾರವನ್ನು ಜೀವಂತವಿದ್ದಾಗಲೇ ನೀಡ ಬೇಕು ಎಂದು ನಾಡೋಜ ಡಾ.ಮಹೇಶ ಜೋಶಿಯವರು ಅಭಿಪ್ರಾಯ ಪಟ್ಟಿದ್ದಾರೆ.

ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)