ಕಸಾಪ ದಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ

ಸಾಮಾಜಿಕ ಮೌಲ್ಯಗಳ ಅವನತಿಯ ಕಾಲದಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರ ಮಹತ್ವ ಇನ್ನಷ್ಟು ಹೆಚ್ಚಾಗಿದೆ: ತಿಮ್ಮಪ್ಪ ಭಟ್‌ ಅಭಿಪ್ರಾಯ

Kasapa- Photo 15-09

ಭಾವಚಿತ್ರ: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡ ಸರ್‌ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಸಂದರ್ಭದಲ್ಲಿ ಗಣ್ಯರಿಂದ ಸರ್‌ ಎಂ.ವಿ. ಅವರ ಭಾವಚಿತ್ರಕ್ಕೆ ಪುಷ್ಪನಮನ.

ಬೆಂಗಳೂರು: ಸರ್‌ ಎಂ. ವಿಶ್ವೇಶ್ವರಯ್ಯುನವರು ಕೇವಲ ವ್ಯಕ್ತಿಯಲ್ಲ, ಸಾಮಾಜಿಕ ಬದ್ಧತೆಯ ಸಂಸ್ಥೆಯಂತೆ ಇದ್ದವರು ಶಿಸ್ತು ಮತ್ತು ಮೌಲ್ಯಯುತವಾದ ಬದುಕನ್ನು ಕಟ್ಟಿಕೊಂಡಿದ್ದರು. ಸಮಾಜಕ್ಕಾಗಿ ಜೀವನ ನಡೆಸುವ ಮೂಲಕ ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆದವರು ಎಂದು ಹಿರಿಯ ಪತ್ರಕರ್ತ ‍ಶ್ರೀ ತಿಮ್ಮಪ್ಪ ಭಟ್ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಾಡಿನ ಹಿರಿಯ ಚೇತನ, ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲೊಬ್ಬರಾದ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆಯನ್ನು ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸಕಾರರಾಗಿ ಮಾತನಾಡುತ್ತಿದ್ದರು, ಹಳೆ ಮೈಸೂರು ಭಾಗದ ಪ್ರತಿಯೊಬ್ಬರ ಮನೆಯಲ್ಲೂ ಸರ್‌ ಎಂ.ವಿ. ಅವರು ಇಂದಿಗೂ ಪೂಜಿಸಲ್ಪಡುತ್ತಾರೆ. ಒಂದು ರೀತಿಯಲ್ಲಿ ದಂತ ಕಥೆಯಾಗಿದ್ದ ಅವರು ಮಹಾನ್‌ ಚೇತನವಾಗಿದ್ದರು. ಸರ್‌ ಎಂ.ವಿ. ಅವರು ಮೌಲ್ಯಯುತ ಜೀವನ ನಡೆಸಿದ್ದರಿಂದ ಎಂದೂ ಒಂದು ಚೌಕಟ್ಟಿಗೆ ಸಿಲುಕಿದವರಲ್ಲ, ಹೊರನೋಟಕ್ಕೆ ಠಾಕುಠೀಕಿನ ಜೀವನ ಪದ್ಧತಿ ಅಳವಡಿಸಿಕೊಂಡಂತೆ ಕಂಡರೂ ವಾಸ್ತವದಲ್ಲಿ ಅವರು ಸಂತನಂತೆ ಜೀವನ ನಡೆಸಿದ್ದರು. ಉಡುಪಿನಲ್ಲಿ ಪೇಟಾ, ಟೈ, ಸೂಟು, ಬೂಟು ಇಲ್ಲದೇ ಯಾವತ್ತೂ ಅವರು ಹೊರಗೆ ಬಂದವರಲ್ಲ. ಇಂತಹ ಶಿಸ್ತಿನಲ್ಲಿಯೇ ಜೀವನದ ಮೌಲ್ಯವನ್ನು ಕಂಡುಕೊಂಡಿದ್ದರು ಎಂದು ಶ್ರೀ ತಿಮ್ಮಪ್ಪ ಭಟ್‌ ಹೇಳಿದರು.

ಸಮಾಜದ ಬಗ್ಗೆ ತುಂಬಾ ಕಳಕಳಿ ಇದ್ದದ್ದರಿಂದ ಅವರು ಕಂಡ ಪ್ರತಿಯೊಂದು ಕನಸುಗಳು ನಾಡಿನ ಕನಸಾಗಿದ್ದವು. ಆ ಕನಸುಗಳನ್ನು ನನಸು ಮಾಡುವುದಕ್ಕೆ ಅವಿರತವಾಗಿ ಪ್ರಯತ್ನಿಸಿದರು. ಅವರ ಸಾಧನೆಯ ವ್ಯಾಪ್ತಿಯನ್ನು ನೋಡಿದರೆ ಅವರನ್ನು ಕೇವಲ ಇಂಜಿನಿಯರ್‌ ಎಂದು ಕರೆಯುವುದು ತಪ್ಪಾಗುತ್ತದೆ, ಅವರೊಬ್ಬ ಮತ್ಸದ್ಧಿಯಾಗಿದ್ದರು. ಅದರ ಪರಿಣಾಮವೇ ಶಿಕ್ಷಣ, ಉದ್ಯಮ, ಉದ್ಯೋಗ, ಕೃಷಿ, ನೀರಾವರಿ, ಕಲೆ, ಸಾಹಿತ್ಯ, ನಾಡು-ನುಡಿ, ಇತ್ಯಾದಿಗಳ ಬಗ್ಗೆ ಕಳಕಳಿ ಹೊಂದಿದ್ದರು ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು, ಕನ್ನಡದ ಕಟ್ಟಾಳು, ಶಿಸ್ತುಬದ್ಧ ಜೀವನ ಹಾಗೂ ಸಮಯ ಪ್ರಜ್ಞೆಯ ಸಾಕಾರ ಮೂರ್ತಿಯಾಗಿದ್ದ ಸರ್‌ ಎಂ. ವಿಶ್ವೇಶ್ವರಯ್ಯನವರ ಬದುಕು ನಮಗೆಲ್ಲಾ ಮಾರ್ಗದರ್ಶಿ. ಅವರ ೧೦೨ ವರ್ಷದ ತುಂಬು ಜೀವನದಲ್ಲಿ ನಾಡಿನ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುವ ಮೂಲಕ ನಮಗೆಲ್ಲರಿಗೂ ಆದರ್ಶವಾಗಿದ್ದಾರೆ. ನಿಷ್ಠುರ ವ್ಯಕ್ತಿತ್ವದ ಸರ್‌ ಎಂ. ವಿಶ್ವೇಶ್ವರಯ್ಯನವರು ಕೆಲವು ವಿಷಯಗಳ ಬಗ್ಗೆ ಸ್ಪಷ್ಟತೆ, ಗಟ್ಟಿತನದಿಂದ ವಿಷಯಗಳನ್ನು ಮಂಡಿಸುತ್ತಿದ್ದರು. ನಾಡಿನ ಬಗೆಗಿನ ಕಾಳಜಿ ಮತ್ತು ದೂರದೃಷ್ಟಿತ್ವವನ್ನು ಅವರು ಹೊಂದಿದ್ದರಿಂದ ಎಲ್ಲರೂ ಅವರ ಮಾತನ್ನು ಗಂಭೀರವಾಗಿ ಪರಿಗಣಿಸುವ ವಾತಾವರಣವನ್ನು ನಿರ್ಮಾಣ ಮಾಡಿದ್ದರು ಎಂದು ನಾಡೋಜ ಡಾ. ಮಹೇಶ ಜೋಶಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿ ಸಂಸ್ಥಾಪಕರಲ್ಲಿ ಒಬ್ಬರಾದ ಸರ್‌ ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕಗಳಲ್ಲಿ ಆಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜನ್ಮ ದಿನಾಚರಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ಘಟಕಗಳಲ್ಲಿ ಹಮ್ಮಿಕೊಂಡಿದ್ದು. ಮುಂದಿನ ದಿನಗಳಲ್ಲಿ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ ಜನ್ಮದಿನಾಚರಣೆಯನ್ನು ನಾಡಿನಾದ್ಯಂತ ಇರುವ ಎಲ್ಲಾ ಘಟಕಗಳಲ್ಲಿ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದೆ ಎಂದು ಡಾ. ಮಹೇಶ ಜೋಶಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ. ರಾಮಲಿಂಗ ಶೆಟ್ಟಿ ಅವರು ಸ್ವಾಗತಿಸಿದರು. ಶ್ರೀ ಕೆ. ಮಹಾಲಿಂಗಯ್ಯ ಅವರು ವಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಶ್ರೀ ಬಿ.ಎಂ. ಪಟೇಲ್‌ಪಾಂಡು ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.

ಶ್ರೀನಾಥ್‌ ಜೆ.
ಮಾಧ್ಯಮ ಸಲಹೆಗಾರರು
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು.
Kasapa-ಸರ್_. ಎಂವಿ ಜನ್ಮದಿನಾಚರಣೆ - 15-09-2022

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)