ಕೋ. ಚೆನ್ನಬಸಪ್ಪ

ನಿವೃತ್ತ ನ್ಯಾಯಮೂರ್ತಿಗಳು, ಸ್ವಾತಂತ್ರ್ಯ ಮತ್ತು ಏಕೀಕರಣ ಹೋರಾಟಗಾರರು, ಕನ್ನಡದ ಹಿರಿಯ ಬರಹಗಾರರು ಹೀಗೆ ವಿವಿಧ ಮುಖೀ ವ್ಯಕ್ತಿತ್ವದ ನ್ಯಾಯಮೂರ್ತಿ ಕೋ. ಚೆನ್ನಬಸಪ್ಪನವರು ಫೆಬ್ರವರಿ 27, 1922ರಂದು ಬಳ್ಳಾರಿ ಜಿಲ್ಲೆಯ ಆಲೂರಿನ ಸಮೀಪದ ಕಾನಮಡುಗು ಎಂಬಲ್ಲಿ ಜನಿಸಿದರು.  ತಂದೆ ವೀರಣ್ಣನವರು ಮತ್ತು ತಾಯಿ ಬಸಮ್ಮನವರು. ಕಾನಮಡುಗು ಮತ್ತು ಬಳ್ಳಾರಿಯಲ್ಲಿ ಶಾಲಾ ವಿದ್ಯಾಭ್ಯಾಸ ನಡೆಸಿದ ಚೆನ್ನಬಸಪ್ಪನವರು ಅನಂತಪುರದಲ್ಲಿ ಕಾಲೇಜು ವ್ಯಾಸಂಗ ನಡೆಸಿದರು.  ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಸ್ವಾತಂತ್ರ್ಯ ಚಳುವಳಿಗೆ ಧುಮುಕಿ, ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳುವಳಿಯಲ್ಲಿ ವಿದ್ಯಾರ್ಥಿ ಮುಖಂಡರಾಗಿ ಭಾಗವಹಿಸಿ ಸೆರೆಮನೆವಾಸ ಅನುಭವಿಸಿದರು.  ಸೆರೆಮನೆಯಿಂದ  ಹೊರಬಂದ ನಂತರದಲ್ಲಿ ಬಿ. ಎ ಪದವಿ ಪಡೆದರು.  ನಂತರದಲ್ಲಿ  ಕಾನೂನು ಪದವಿಯನ್ನೂ, ಚರಿತ್ರೆ ಮತ್ತು ರಾಜ್ಯಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವಿಗಳನ್ನೂ ಪಡೆದರು.

1946ರ ವರ್ಷದಲ್ಲಿ ಮುಂಬೈ ಶ್ರೇಷ್ಠ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸತೊಡಗಿದ ಚೆನ್ನಬಸಪ್ಪನವರು, 1965ರ ವರ್ಷದಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ  ನೇಮಕಗೊಂಡರು.  ನಿವೃತ್ತಿಯ ನಂತರದಲ್ಲಿ ಕರ್ನಾಟಕ ಶ್ರೇಷ್ಠ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ನಡೆಸುವುದರ ಜೊತೆಗೆ ಹಲವಾರು ಕಾರ್ಮಿಕ ಸಂಘಟನೆಗಳ ಮತ್ತು ಭ್ರಷ್ಟಾಚಾರ ನಿರ್ಮೂಲಕ ಸಮಿತಿಯ ಅಧ್ಯಕ್ಷತೆ ಮುಂತಾದ ಹಲವಾರು ಜವಾಬ್ಧಾರಿಗಳನ್ನು ನಿರ್ವಹಿಸಿದರು.

ಅರವಿಂದಾಶ್ರಮದ ನಿಕಟವರ್ತಿಗಳಾದ  ಚೆನ್ನಬಸಪ್ಪನವರು ಕರ್ನಾಟಕ ವಿಭಾಗದ ಅರವಿಂದಾಶ್ರಮವನ್ನು ಪ್ರಾರಂಭಿಸಿದರು. ಪ್ರಾರಂಭದಿಂದಲೂ ಸಾಹಿತ್ಯದ ಗೀಳು ಹಚ್ಚಿಕೊಂಡ ಇವರು ನಾಡಿನ ಪ್ರಮುಖ ಪತ್ರಿಕೆಗಳಿಗೆಲ್ಲಾ ಬರೆದ ಲೇಖನಗಳು ಅಪಾರ. ಕನ್ನಡಪ್ರಭ ಪತ್ರಿಕೆಯಲ್ಲಿ ಮೂಡಿಬಂದ ‘ನ್ಯಾಯಾಧೀಶರ ನೆನಪುಗಳು’ ಮತ್ತು ಪ್ರಜಾಮತ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ‘ನ್ಯಾಯಾಲಯದಲ್ಲಿ  ಸತ್ಯ ಕಥೆಗಳು’ ಅಂದಿನ ದಿನಗಳಲ್ಲಿ ಪ್ರಖ್ಯಾತಿ ಪಡೆದಿದ್ದವು.

ಎಂಭತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಕೋ. ಚೆನ್ನಬಸಪ್ಪನವರ ಕೃತಿಗಳಲ್ಲಿ, ಸ್ವಾತಂತ್ರ್ಯ ಮಹೋತ್ಸವ, ಪ್ರಾಣಪಕ್ಷಿ, ಜೀವತೀರ್ಥ ಮುಂತಾದ ಕವನ ಸಂಕಲನಗಳು; ಗಡಿಪಾರು, ನಮ್ಮೂರ ದೀಪ, ಗಾಯಕನಿಲ್ಲದ ಸಂಗೀತ ಮುಂತಾದ  ಕಥಾ ಸಂಕಲನಗಳು; ಹಿಂದಿರುಗಿ ಬರಲಿಲ್ಲ, ನೊಗದ ನೇಣು, ರಕ್ತತರ್ಪಣ, ಬೇಡಿ ಕಳಚಿತು-ದೇಶ ಒಡೆಯಿತು ಮೊದಲಾದ  ಕಾದಂಬರಿಗಳು; ಶ್ರೀ ಅರವಿಂದರು, ಶ್ರೀ ಮಾತಾಜಿ, ಶ್ರೀ ಮೃತ್ಯುಂಜಯಸ್ವಾಮಿಗಳು ಮೊದಲಾದ  ಜೀವನಚರಿತ್ರೆಗಳು; ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ, ದೃಢಪ್ರತಿಜ್ಞೆ, ಕುವೆಂಪು ವೈಚಾರಿಕತೆ ಮೊದಲಾದ ವಿಮರ್ಶಾ ಗ್ರಂಥಗಳು;  ರಕ್ಷಾಶತಕಂ, ಶ್ರೀ ಕುವೆಂಪು ಭಾಷಣಗಳು, ಬಿನ್ನವತ್ತಳೆಗಳು ಮುಂತಾದ ಸಂಪಾದಿತ ಕೃತಿಗಳು ಪ್ರಮುಖವಾಗಿವೆ. ಚೆನ್ನಬಸಪ್ಪನವರ   ’ದಾಸರಯ್ಯನ ಪಟ್ಟಿ’, ’ಹಿಂದಿರುಗಿ ಬರಲಿಲ್ಲ’, ’ಬೇಡಿಕಳಚಿತು ದೇಶ ಒಡೆಯಿತು’, ’ನ್ಯಾಯಾಧೀಶನ ನೆನಪುಗಳು’ ಮುಂತಾದ ಕೃತಿಗಳು ಸಾಮಾನ್ಯರಿಂದ ವಿದ್ವಾಂಸರೆಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ..

ಕೋ. ಚೆನ್ನಬಸಪ್ಪನವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಸ.ಸ.ಮಾಳವಾಡ ಪ್ರಶಸ್ತಿ, ಚಿಂತನಶ್ರೀ ಪ್ರಶಸ್ತಿ, ಸಂ.ಶಿ. ಭೂಸನೂರ ಮಠ ಪ್ರಶಸ್ತಿ, ಕನ್ನಡಶ್ರೀ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.   ಬಿಜಾಪುರದಲ್ಲಿ ಜರುಗಿದ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವವನ್ನು ನೀಡುವುದರ ಮೂಲಕ ನಾಡು ಈ ಹಿರಿಯರನ್ನು ಗೌರವಿಸಿದೆ.

ಕನ್ನಡ ನಾಡು, ನುಡಿ ಹಾಗೂ ದೇಶಕ್ಕಾಗಿ ದುಡಿಯುತ್ತಿರುವ  ಈ ಹಿರಿಯರಿಗೆ ಜನ್ಮದಿನದ ಹೃತ್ಪೂರ್ವಕ ಶುಭ ಹಾರೈಕೆಗಳು.

Tag: Ko. Channabasappa

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)