ಖಾಸಗಿ ಕಾರ್ಖಾನೆಗಳಲ್ಲಿಯೂ ಕನ್ನಡಿಗರಿಗೆ ಮೀಸಲು: ನಾಡೋಜ ಡಾ.ಮಹೇಶ ಜೋಶಿ ಸ್ವಾಗತ

ಖಾಸಗಿ ಕಾರ್ಖಾನೆಗಳಲ್ಲಿಯೂ ಕನ್ನಡಿಗರಿಗೆ ಮೀಸಲು: ನಾಡೋಜ ಡಾ.ಮಹೇಶ ಜೋಶಿ ಸ್ವಾಗತ

ಬೆಂಗಳೂರು: ರಾಜ್ಯದಲ್ಲಿರುವ ಖಾಸಗಿಯೂ ಸೇರಿದಂತೆ ಎಲ್ಲಾ ಕಾರ್ಖಾನೆಗಳಲ್ಲಿಯೂ ಸಿ ಮತ್ತು ಡಿ ವರ್ಗದ ಉದ್ಯೋಗದಲ್ಲಿ ಶೇ 100 ರಷ್ಟು ಮೀಸಲಾತಿ ಕಲ್ಪಿಸುವ ವಿಧೇಯಕಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದ್ದು ಸದನದಲ್ಲಿ ಮಂಡನೆಗೆ ಸಿದ್ದವಾಗಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಸ್ವಾಗತಿಸಿದ್ದಾರೆ, ಎಲ್ಲಾ ಶಾಸಕರೂ ಪಕ್ಷಬೇಧವನ್ನು ಮರೆತು ಕನ್ನಡಿಗರ ಹಿತಾಸಕ್ತಿಯನ್ನು ರಕ್ಷಿಸುವ ಈ ವಿಧೇಯಕವು ಅಂಗೀಕಾರಗೊಳ್ಳಲು ಏಕಧ್ವನಿಯಿಂದ ಬೆಂಬಲ ನೀಡಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಖಾಸಗಿ ವಲಯಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಕೈಗಾರಿಕೆಗಳಲ್ಲಿನ ಉದ್ಯೋಗಗಳು ಪರರಾಜ್ಯದವರ ಪಾಲಾಗುತ್ತಿವೆ. ರಾಜ್ಯದ ಭೂಮಿ, ವಿದ್ಯುತ್, ನೀರು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಪಡೆಯುವ ಈ ಕಾರ್ಖಾನೆಗಳು ಉದ್ಯೋಗದ ವಿಚಾರ ಬಂದಾಗ ಕನ್ನಡಿಗರನ್ನು ಕಡೆಗಣಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯು ಸ್ಥಳೀಯರಿಗೆ ಉದ್ಯೋಗದ ಭದ್ರತೆ ನೀಡುವ ಈ ವಿಧೇಯಕವನ್ನು ರೂಪಿಸಿದೆ ಎಂದು ಇದರ ಹಿಂದಿನ ಪ್ರಕ್ರಿಯೆಗಳನ್ನು ನೆನಪು ಮಾಡಿ ಕೊಂಡಿರುವ ನಾಡೋಜ ಡಾ.ಮಹೇಶ ಜೋಶಿಯವರು ಈ ಹಿಂದೆ ಡಾ.ಸರೋಜಿನಿ ಮಹಿಷಿ ವರದಿ ಅನ್ವಯ ಐವತ್ತಕ್ಕಿಂತ ಹೆಚ್ಚು ಕಾರ್ಮಿಕರನ್ನು ಉಳ್ಳ ಬೃಹತ್, ಮಧ್ಯಮ, ಸಣ್ಣ ಕೈಗಾರಿಕೆಗಳಲ್ಲಿ ಎ ಮತ್ತು ಬಿ ವರ್ಗದಲ್ಲಿ ಶೇ 50ರಷ್ಟು ಸಿ ಮತ್ತು ಡಿ ವರ್ಗದಲ್ಲಿ ಶೇ 100ರಷ್ಟು ಉದ್ಯೋಗವನ್ನು ಸ್ಥಳೀಯರಿಗೆ ಮೀಸಲಿಡುವಂತೆ ಸೂಚಿಸಲಾಗಿತ್ತು. ಆದರೆ ಕನ್ನಡಿಗರಿಗೆ ಮೀಸಲಾತಿ ನೀಡುವ ಯಾವುದೇ ಪ್ರಸ್ತಾಪವನ್ನು ಸರ್ಕಾರ ರೂಪಿಸದೇ ಹೋಗಿದ್ದರಿಂದ ನ್ಯಾಯಾಲಯಗಳಲ್ಲಿ ಇಂತಹ ನೇಮಕಾತಿಗಳು ಊರ್ಜಿತವಾಗುತ್ತಿರಲಿಲ್ಲ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ -2022ರಲ್ಲಿ ಕೂಡ ರಾಜ್ಯ ಸರ್ಕಾರದಿಂದ ತೆರಿಗೆ ವಿನಾಯತಿ ಮತ್ತು ಇತರ ಸೌಲಭ್ಯ ಪಡೆಯುವ ಕೈಗಾರಿಕೆಗಳು ಕನ್ನಡಿಗರಿಗೆ ಉದ್ಯೋಗ ಮೀಸಲಿಡ ಬೇಕು ಎಂದು ಹೇಳಿದ್ದರೂ ಇದಕ್ಕೆ ಸೂಕ್ತ ನೀತಿ ನಿಯಮಗಳು ಇರಲಿಲ್ಲ. ಈಗ ರೂಪುಗೊಂಡಿರುವ ವಿಧೇಯಕ ಅಂಗೀಕಾರಗೊಂಡು ಕಾನೂನಿನ ಸ್ವರೂಪ ಪಡೆದರೆ ಕನ್ನಡಿಗರಿಗೆ ಉದ್ಯೋಗ ಭದ್ರತೆ ದೊರಕಲಿದೆ ಎಂದು ನಾಡೋಜ ಡಾ.ಮಹೇಶ ಜೋಶಿ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ.

ಈಗ ರೂಪುಗೊಂಡಿರುವ ವಿಧೇಯಕವು ಬದಲಾದ ಉದ್ಯೋಗದ ಸ್ವರೂಪವನ್ನು ಗಮನದಲ್ಲಿರಿಸಿ ಕೊಂಡಿರುತ್ತದೆ ಎನ್ನುವ ವಿಶ್ವಾಸ ವ್ಯಕ್ತ ಪಡಿಸಿರುವ ನಾಡೋಜ ಡಾ.ಮಹೇಶ ಜೋಶಿಯವರು ಈ ವಿಧೇಯಕವು ಅಂಗೀಕಾರವಾಗುವುದರ ಜೊತೆಗೆ ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ಬರಲಿ ಎಂದು ಆಶಿಸಿದ್ದಾರೆ.

ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)