ಖ್ಯಾತ ಬರಹಗಾರ ನಾ.ಡಿಸೋಜ ಅವರ ನಿಧನಕ್ಕೆ ನಾಡೋಜ ಡಾ.ಮಹೇಶ ಜೋಶಿ ತೀವ್ರ ಸಂತಾಪ 

ಪ್ರಕೃತಿ ಕಾಳಜಿಯ ಮನವುಳ್ಳ ಬರಹಗಾರರೆಂದು ಪ್ರಖ್ಯಾತರಾಗಿದ್ದ ನಾರ್ಬರ್ಟ್ ಡಿಸೋಜಾ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ತೀವ್ರ ಸಂತಾಪವನ್ನು ಸೂಚಿಸಿದ್ದಾರೆ. ನಾ ಡಿಸೋಜ ಅವರು 2014 ವರ್ಷದಲ್ಲಿ ಮಡಿಕೇರಿಯಲ್ಲಿ ನೆಡೆದ 80 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು ಎಂದು ನೆನಪು ಮಾಡಿಕೊಂಡಿರುವ ನಾಡೋಜ ಡಾ.ಮಹೇಶ ಜೋಶಿ ಅವರು ಸಮ್ಮೇಳನಾಧ್ಯಕ್ಷರಾಗಿ ಆಡಿದ ಮಾನವೀಯ ಕಾಳಜಿಯನ್ನು ಸ್ಮರಿಸಿ ಕೊಂಡು. ಕನ್ನಡ ಸಾಹಿತ್ಯ ಪರಿಷತ್ತು ಕಳೆದ ವರ್ಷವಿನ್ನೂ ಅವರಿಗೆ ಫಾದರ್ ಚೆಸೇರಾ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಅವರು ಸದಾ ನಿಕಟ ಸಂಬಂಧವನ್ನು ಇಟ್ಟು ಕೊಂಡಿದ್ದರು ಎಂದು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.

ನಾ. ಡಿಸೋಜ ಅವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 1937ರ ಜೂನ್ 6ರಂದು ಜನಿಸಿದರು. ಇವರ ತಂದೆ ಫಿಲಿಪ್ ಡಿಸೋಜ ಅವರು ಶಾಲಾ ಮಾಸ್ತರರಾಗಿದ್ದರು. ಅವರು ಶಾಲಾಮಕ್ಕಳಿಗೆ ಕಲಿಸಲು ಬರೆದುಕೊಂಡಿದ್ದ ಪುಸ್ತಕಗಳಲ್ಲಿನ ಪದ್ಯಗಳನ್ನು ಓದತೊಡಗಿದ ಬಾಲಕ ನಾ ಡಿಸೋಜ ಅವರಲ್ಲಿ ತಾನೇತಾನಾಗಿ ಸಾಹಿತ್ಯದೊಲವು ಮೊಳೆಯಿತು. ಜೊತೆಗೆ ತಾಯಿ ರೊಪೀನಾ ಅವರು ಹೇಳುತ್ತಿದ್ದ ಜನಪದ ಹಾಡುಗಳು ಮತ್ತು ಕತೆಗಳು ಡಿಸೋಜ ಅವರ ಮನಸ್ಸಿನ ಮೇಲೆ ಮೋಡಿ ಮಾಡತೊಡಗಿದ್ದವು. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ತಮ್ಮ ಗೊರೂರು ನರಸಿಂಹಾಚಾರ್ ಅವರು ಅಕರ್ಷಕವಾಗಿ ಶಾಲೆಯಲ್ಲಿ ಬೋಧಿಸುತ್ತಿದ್ದ ರೀತಿ ಮತ್ತು ಕಾಲೇಜಿನ ದಿನಗಳಲ್ಲಿ ಗುರುಗಳಾಗಿದ್ದ ಡಾ. ಜಿ. ಎಸ್. ಶಿವರುದ್ರಪಗಪನವರ ಪಾಂಡಿತ್ಯದ ಪ್ರಭಾವ ನಾ. ಡಿಸೋಜಾ ಅವರನ್ನು ಸಾಕಷ್ಟು ಮೋಡಿಮಾಡಿತ್ತು.ನಾ. ಡಿಸೋಜ ಅವರು ಲೋಕೋಪಯೋಗಿ ಇಲಾಖೆಯಲ್ಲಿ ವೃತ್ತಿಜೀವನ ಪ್ರಾರಂಭಿಸಿ ಶರಾವತಿ ಯೋಜನೆ, ಕಾರ್ಗಲ್, ಮಾಸ್ತಿಕಟ್ಟೆ, ತೀರ್ಥಹಳ್ಳಿ, ಸಾಗರಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು ಎಂದು ನಾಡೋಜ ಡಾ.ಮಹೇಶ ಜೋಶಿಯವರು ಡಿಸೋಜ ಅವರ ಚಿತ್ರಣವನ್ನು ಸ್ಮರಿಸಿ ಕೊಂಡಿದ್ದಾರೆ. 

ನಾ. ಡಿಸೋಜ ಅವರು 75 ಕಾದಂಬರಿಗಳು, 6 ಚಾರಿತ್ರಿಕ ಕಾದಂಬರಿ, ಮಕ್ಕಳಿಗಾಗಿ 25 ಕಾದಂಬರಿ, 9 ಕಥಾ ಸಂಕಲನ, ಸಮಗ್ರ ಕಥೆಗಳ ಎರಡು ಸಂಪುಟಗಳು, ಸುಮಾರು 500 ಕಥೆಗಳು, ಹತ್ತಾರು ನಾಟಕಗಳು, ರೇಡಿಯೋ ನಾಟಕಗಳು, ಅನೇಕ ಪತ್ರಿಕಾ ಲೇಖನಗಳು ಹೀಗೆ ವಿಶಾಲ ವ್ಯಾಪ್ತಿಯ ಬರಹ ಮಾಡುತ್ತಾ ಬಂದಿದ್ದಾರೆ. ಇವರ ‘ಮುಳುಗಡೆಯ ಊರಿಗೆ ಬಂದವರು’ ಎಂಬ ಮಕ್ಕಳ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಬಾಲ ಸಾಹಿತ್ಯ ಪುರಸ್ಕಾರ’ ಸಂದಿದೆ. ‘ದ್ವೀಪ’ ಮತ್ತು ‘ಕಾಡಿನ ಬೆಂಕಿ’ ಕಾದಂಬರಿಗಳು ಚಲನಚಿತ್ರಗಳಾಗಿ ರಾಷ್ಟ್ರಿಯ ಪ್ರಶಸ್ತಿಯನ್ನು ಗಳಿಸಿವೆ.ನಾ ಡಿಸೋಜ ಅವರ ಕತೆಗಳು ಪ್ರಪಂಚ ಪತ್ರಿಕೆಯಲ್ಲಿ ಮೊದಲು ಪ್ರಕಟಗೊಂಡು ಮುಂದೆ ಎಲ್ಲ ಪತ್ರಿಕೆಗಳಲ್ಲೂ ಬಹುಬೇಡಿಕೆ ಪಡೆದವು. ಡಿಸೋಜ ಅವರ ಹಲವಾರು ಸಣ್ಣಕತೆಗಳು ಕೊಂಕಣಿ, ಮಲಯಾಳಂ, ತೆಲುಗು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಅನುವಾದಗೊಂಡಿವೆ ಎಂದು ಅವರ ಹೆಗ್ಗಳಿಕೆಗಳನ್ನು ನಾಡೋಜ ಡಾ.ಮಹೇಶ ಜೋಶಿಯವರು ಸ್ಮರಿಸಿ ಕೊಂಡಿದ್ದಾರೆ. 

ಡಿಸೋಜರ ಮೊದಲ ಕಾದಂಬರಿ ‘ಬಂಜೆ ಬೆಂಕಿ’ 1964ರಲ್ಲಿ ಬೆಳಕಿಗೆ ಬಂತು. ಹಸಿರಿನಳಿವು, ಕ್ರಿಸ್ತುವ ಮಂದಿಯ ನಡೆನುಡಿ, ಕಳ್ಳ ಸಂಪಾದನೆ, ಹಿಂದುಳಿದ ಬುಡಕಟ್ಟು ಜನರ ಬದುಕು ಹೀಗೆ ಹಲವು ಹತ್ತು ಚಿತ್ತಾರಗಳನ್ನೊಳಗೊಂಡ ಅವರ ಕಾದಂಬರಿಗಳು ಓದುಗರ ಮನಸೂರೆಗೊಂಡಿವೆ. ಸುರೇಶ್ ಹೆಬ್ಳೀಕರ್ ಅವರ ನಿರ್ದೇಶನದಲ್ಲಿ ‘ಕಾಡಿನ ಬೆಂಕಿ’, ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ‘ದ್ವೀಪ’, ಸಿರಿಗಂದ ಶ್ರೀನಿವಾಸಮೂರ್ತಿಯವರ ನಿರ್ದೇಶನದಲ್ಲಿ ‘ಬಳುವಳಿ’, ಕೋಡ್ಲು ರಾಮಕೃಷ್ಣ ನಿರ್ದೇಶನದಲ್ಲಿ ‘ಬೆಟ್ಟದಪುರದ ದಿಟ್ಟಮಕ್ಕಳು’ ಮತ್ತು ಮನು ಅವರ ನಿರ್ದೇಶನದಲ್ಲಿ ‘ಆಂತರ್ಯ’ ಕಾದಂಬರಿಗಳು ಚಲನಚಿತ್ರಗಳಾಗಿವೆ. ದ್ವೀಪ ಕಾದಂಬರಿಯು ‘ಅಯ್ಲ್ಯಾಂಡ್’ ಎಂಬ ಹೆಸರಿನಲ್ಲಿ ಇಂಗ್ಲಿಷಿಗೆ ಬಂದಿದೆ. ‘ಮುಳುಗಡೆ’, ‘ಕೊಳಗ’, ‘ಒಳಿತನ್ನು ಮಾಡಲು ಬಂದವರು’, ‘ಬಣ್ಣ’, ‘ಪಾದರಿಯಾಗುವ ಹುಡುಗ’, ‘ಇಬ್ಬರು ಮಾಜಿಗಳು’ ಮುಂತಾದ ಕಾದಂಬರಿಗಳು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪಠ್ಯಗಳಾಗಿದ್ದವು ಅವರ ನಿಧನ ಕನ್ನಡ ಸಾರಸ್ವತ ಲೋಕಕ್ಕೆ ಬಹುದೊಡ್ಡನಷ್ಟವಾಗಿದ್ದು, ಅವರ ಕುಟುಂಬದವರಿಗೆ ಇದನ್ನು ಭರಿಸುವ ಶಕ್ತಿ ಬರಲಿ ಎಂದು ತಮ್ಮ ಸಂತಾಪದ ಸಂದೇಶದಲ್ಲಿ ನಾಡೋಜ ಡಾ.ಮಹೇಶ ಜೋಶಿ ಹೇಳಿದ್ದಾರೆ.

ಎನ್.ಎಸ್.ಶ್ರೀಧರ ಮೂರ್ತಿ(ಸಂಚಾಲಕರು, ಪ್ರಕಟಣಾ ವಿಭಾಗ ಕನ್ನಡ ಸಾಹಿತ್ಯ ಪರಿಷತ್ತು.)

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)