ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಬೇಜವಾಬ್ದಾರಿಯಾಗಿ ನಡೆದುಕೊಳ್ಳಬಾರದು… ನಾಡೋಜ ಡಾ. ಮಹೇಶ್ ಜೋಶಿ
ಬೆಂಗಳೂರು: ರಾಯಚೂರು ಜಿಲ್ಲೆಯನ್ನು ತೆಲಂಗಾಣಕ್ಕೆ ಸೇರಿಸಿ ಎಂದು ಕಾಲುಕೆರೆದು ಗಡಿ ತಂಟೆಗೆ ನಾಂದಿ ಹಾಡುತ್ತಿರುವ ತೆಲಂಗಾಣಾ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಅಸಂಬದ್ಧ ಹೇಳಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಖಂಡಿಸುತ್ತದೆ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಉಭಯ ರಾಜ್ಯಗಳ ಶಾಂತಿ ಸಾಮರಸ್ಯವನ್ನು ಕದಡುವಂತಹ ಗಡಿಸಂಘರ್ಷಕ್ಕೆ ಕಾರಣವಾಗುವಂತಹ ಬೇಜವಾಬ್ದಾರಿಯುತ ಹೇಳಿಕೆಯನ್ನು ನೀಡಬಾರದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ತೆಲಂಗಾಣದ ನೂತನ ಜಿಲ್ಲೆ ವಿಕಾರಾಬಾದ್ ನಲ್ಲಿ ಹೊಸ ಜಿಲ್ಲಾಡಳಿತದ ಕಚೇರಿ ಉದ್ಘಾಟನೆ ಸಂದರ್ಭದಲ್ಲಿ ಕೆ.ಚಂದ್ರಶೇಖರ ರಾವ್, ಕರ್ನಾಟಕದ ರಾಯಚೂರು ಜಿಲ್ಲೆಯ ಜನರು ಟಿಆರ್ಎಸ್ ಸರ್ಕಾರದ ಕಲ್ಯಾಣ ಯೋಜನೆಗಳಿಂದ ಆಕರ್ಷಿತರಾಗಿದ್ದಾರೆ. ಅದಕ್ಕೆ ಆ ಭಾಗವನ್ನು ತೆಲಂಗಾಣಕ್ಕೆ ವಿಲೀನಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ಗಡಿ ವಿವಾದದ ಕಿಚ್ಚಿಗೆ ತುಪ್ಪ ಸುರಿದಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಶಾಂತಿಯುತವಾಗಿರುವ ಜನರಲ್ಲಿ ವಿವಾದದ ಕಿಡಿ ಹಚ್ಚುವುದು ಎಷ್ಟರ ಮಟ್ಟಿಗೆ ಸೂಕ್ತ?
ನಾಡಿನ ಗಡಿಭಾಗದಲ್ಲಿ ನಿರಂತರ ಗಡಿ ಕ್ಯಾತೆಗೆ ಇಂಬುಕೊಡುವ ರಾಜಕಾರಣಿಗಳ ನಡೆಯನ್ನು ಕೆಸಿಆರ್ ಅನುಸರಿಸುತ್ತಿದ್ದಾರೆ. ತಮ್ಮ ಸಾಧನೆಗಳನ್ನು ಹೇಳಿಕೊಳ್ಳುವ ಭರದಲ್ಲಿ ಕರ್ನಾಟಕ ರಾಜ್ಯವನ್ನು ಹೀನಾಯವಾಗಿ ಕಡೆಗಣಿಸಿ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ಪ್ರಯತ್ನವನ್ನು ಕೆಸಿಆರ್ ಮಾಡಿದ್ದಾರೆ ಎಂದು ನಾಡೋಜ ಡಾ. ಮಹೇಶ ಜೋಶಿ ಕಿಡಿ ಕಾರಿದ್ದಾರೆ.
ಬೆಂಗಳೂರಿನಲ್ಲಿ ಇರುವ ಐ.ಟಿ ಕಂಪನಿಗಳನ್ನು ಹೈದ್ರಾಬಾದಗೆ ಬರುವಂತೆ ಆಹ್ವಾನಿಸುತ್ತಿರುವುದು ಸಹಿಸಲಿಕ್ಕೆ ಸಾಧ್ಯವಿಲ್ಲ. ಸಾಧ್ಯವಾದರೆ ಹೈದ್ರಾಬಾದನಲ್ಲಿ ಐಟಿ ಹಬ್ ನಿರ್ಮಾಣ ಮಾಡಲಿ. ಅದನ್ನು ಬಿಟ್ಟು ಇಲ್ಲಿರುವ ಕಂಪನಿಗಳಿಗೆ ಆಮಿಷ ಒಡ್ಡಿ ತಮ್ಮ ರಾಜ್ಯಕ್ಕೆ ಕರೆಯುವುದು ಮನೆಮುರುಕ ಬುದ್ಧಿಯಾಗಿದೆ. ಜನಸಾಮಾನ್ಯರಲ್ಲಿ ಗೊಂದಲ ಸೃಷ್ಟಿಸಿ ಸರಕಾರ ನಡೆಸುವ ಔಚಿತ್ಯ ಕೆಸಿಆರ್ಗೆ ಯಾಕೆ ಬೇಕು? ಎನ್ನುವ ಪ್ರಶ್ನೆಯನ್ನು ನಾಡೋಜ ಜೋಶಿ ಮುಂದಿಟ್ಟಿದ್ದಾರೆ.
ರಾಜಕೀಯ ಪಕ್ಷಗಳ ಕೆಸರೆರೆಚಾಟದಲ್ಲಿ ಗಡಿ ಗಲಾಟೆ ಶುರುವಿಟ್ಟ ಕೆಸಿಆರ್ ಒಂದು ವರ್ಷದ ಹಿಂದೆ ಕರ್ನಾಟಕದಲ್ಲಿ ಆಗುತ್ತಿರುವ ಅಭಿವೃದ್ಧಿಯ ಮಾದರಿಯನ್ನು ತನ್ನ ರಾಜ್ಯದಲ್ಲಿ ಮಾಡಬೇಕಿದೆ ಎಂದು ಹೇಳಿಕೆ ಕೊಟ್ಟಿದ್ದರು. ಅಂದು ಆಗಿರದ ಅಭಿವೃದ್ಧಿ ಕಾರ್ಯ ದಿನ ಬೆಳಗಾವುದರೊಳಗೆ ಮಾಡಿಮುಗಿಸಿದ್ದೇವೆ ಎನ್ನುವ ಹುಸಿ ನುಡಿಗಳನ್ನು ಆಡಿ ಜನರ ಮನಸ್ಸನ್ನು ಹಾಳುಮಾಡುವ ಕಾರ್ಯ ಮಾಡಲಾಗುತ್ತಿದೆ.
ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದ ಎಲ್ಲಾ ಗಡಿ ಪ್ರದೇಶವನ್ನು ಕಾಯ್ದು ಕೊಳ್ಳುವಲ್ಲಿ ಯಾವುದೆ ಕಾರಣಕ್ಕೂ ಹಿಂದೇಟು ಹಾಕುವುದಿಲ್ಲ. ರಾಜ್ಯ ಸರಕಾರವೂ ಸಹಿತ ಎಚ್ಚತ್ತು ಜನರ ವಿಶ್ವಾಸವನ್ನು ಗಳಿಸುವಲ್ಲಿ ಮುಂದಾಗಬೇಕು. ಗಡಿನಾಡಿನ ಅಭಿವೃದ್ಧಿಯಲ್ಲಿ ಯಾವುದೇ ತಾರತಮ್ಯ ಮಾಡಬಾರದು. ಒಂದು ವೇಳೆ ಗಡಿ ಭಾಗದ ನಿರ್ಲಕ್ಷವಾದರೆ ಕೆಸಿಆರ್ ನಂತಹ ಕಿಡಿಗೇಡಿಗಳು ಹುಟ್ಟಿಕೊಳಲುತ್ತಲೇ ಇರುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಸರಕಾರಕ್ಕೆ ಎಚ್ಚರಿಸಿದ್ದಾರೆ.
ಜನರ ಮನಸ್ಸು ಕೆಡಿಸುವ ಕೆಲಸ ಶಾಸಕರು ನಿಲ್ಲಿಸಬೇಕು….
ರಾಯಚೂರು ಜಿಲ್ಲೆಯನ್ನು ಕಡೆಗಣಿದ್ದಾರೆ, ಉತ್ತರ ಕರ್ನಾಟಕ ಎಂದರೆ ಹುಬ್ಬಳ್ಳಿ, ಧಾರವಾಡ, ಬೆಳಗಾವಿ. ಕಲ್ಯಾಣ ಕರ್ನಾಟಕ ಎಂದರೆ ಕಲಬುರಗಿ, ಬೀದರ್ ಎನ್ನುವಂತಾಗಿದೆ ಅದಕ್ಕೆ ರಾಯಚೂರುಯ ಅಭಿವೃದ್ಧಿ ಕುಂಠಿತವಾಗಿದೆ. ಹೀಗಾಗಿ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಬಿಡಿ ಎಂದು ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿದ್ದ ಹೇಳಿಕೆಯನ್ನು ಸ್ವಾಭಿಮಾನಿ ಕನ್ನಡಿಗರಾದ ಯಾರೊಬ್ಬರೂ ಸಹಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ.
ಶಿವರಾಜ್ ಪಾಟೀಲ್ ಒಬ್ಬ ಸುಶಿಕ್ಷಿತ ವೈದ್ಯರಾಗಿ ತನ್ನ ಸ್ಥಾನಮಾನವನ್ನು ಮರೆತು ಮಾತನಾಡುತ್ತಿದ್ದಾರೆ. ಸದ್ಯ ಎರಡನೇ ಬಾರಿ ಜನರು ಇವರನ್ನು ಶಾಸಕರಾಗಿ ಆಯ್ಕೆಮಾಡಿ ಕಳಿಸಿದ್ದಾರೆ. ಸರಿ ಸುಮಾರು ೯ ವರ್ಷಗಳ ಕಾಲ ಈ ಭಾಗದ ಶಾಸಕರಾಗಿ ರಾಯಚೂರಿನಲ್ಲಿ ಅಭಿವೃದ್ಧಿ ಆಗಲಿಲ್ಲ ಎನ್ನುವುದು ಇವರದ್ದೇ ವೈಫಲ್ಯವಲ್ಲವೇ.?
ಸರಕಾರದ ಮಟ್ಟದಲ್ಲಿ ತಮ್ಮ ಕ್ಷೇತ್ರಕ್ಕೆ ಆಗಬೇಕಿದ್ದ ಕೆಲಸಗಳನ್ನು ಮಾಡಿಸುವಲ್ಲಿ ಇವರೇ ವಿಫಲರಾಗಿದ್ದಾರೆ. ರಾಯಚೂರು ಜಿಲ್ಲೆಗೆ ನೀಡಲಾಗಿದ್ದ ಅನುದಾನವನ್ನು ಏನು ಮಾಡಿದ್ದಿರಿ ಎನ್ನವ ಪ್ರಶ್ನೆಗೆ ಶಾಸಕ ಶಿವರಾಜ ಪಾಟೀಲ್ ಉತ್ತರ ನೀಡಬೇಕು. ರಾಜ್ಯದ ಯಾವುದೋ ಭಾಗದಲ್ಲಿ ಅಭಿವೃದ್ಧಿಯಾಗಿದೆ ಎಂದು ಹೇಳುವ ನೀವು ನಿಮ್ಮಲ್ಲಿ ಅಭಿವೃದ್ಧಿಯಾಗಿಲ್ಲ ಎಂದರೆ ಏನು ಅರ್ಥ?
ಜನರ ಮನಸ್ಸನ್ನು ಕೆಡಿಸಿ ನಂತರ ಸಮಾಧಾನ ಪಡಿಸುವ ಪ್ರಯತ್ನವನ್ನು ನಿಲ್ಲಿಸಬೇಕು. ಎದ್ದಿರುವ ಗಡಿವಿವಾದಕ್ಕೆ ಇತಿಶ್ರೀ ಹಾಡುವುದಕ್ಕೆ ಸರಕಾರ ಮುಂದಾಗಿ ಶಿವರಾಜ ಪಾಟೀಲ ಅವರಿಗೆ ಬುದ್ದಿ ಹೇಳಬೇಕು. ಶಾಸಕ ಶಿವರಾಜ ಪಾಟೀಲರು ಕರ್ನಾಟಕದ ಜನತೆಯಲ್ಲಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಎಚ್ಚರಿಸಿದ್ದಾರೆ.
ಪ್ರತಿಕ್ರಿಯೆ