ಶ್ರವಣಬೆಳಗೊಳದ ಬಾಹುಬಲಿಗೆ ೧೯೯೩ರಲ್ಲಿ ನಡೆದ ಮಸ್ತಕಾಭಿಷೇಕದ ಸವಿನೆನಪಾಗಿ ‘ಚಾವುಂಡರಾಯ ಪ್ರಶಸ್ತಿ’ಯನ್ನು ನೀಡಲು ಶ್ರವಣಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಪ್ರತಿಷ್ಠಾಪಿಸಿದ್ದಾರೆ. ಈ ಪ್ರಶಸ್ತಿಗೆ ಡಾ. ಧರಣೇಂದ್ರ ಕುರಕುರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ರೂ. ೩೦,೦೦೦/= ನಗದು ಪುರಸ್ಕಾರವನ್ನೊಳಗೊಂಡಿದ್ದು, ಪ್ರಶಸ್ತಿ ಫಲಕ ನೀಡಿ ಗೌರವ ಪದಾನ ಮಾಡಲಾಗುವುದು.
ಸುಮಾರು ಐದು ದಶಕಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಸೇವೆಗೈದಿರುವ ಪ್ರೊ. ಧರಣೇಂದ್ರ ಕುರಕುರಿ ಅವರು ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದವರು. ಇಲ್ಲಿಯವರೆಗೆ ಮೌಲಿಕ ಮತ್ತು ಅನುವಾದಿತ ೨೮ ಕೃತಿಗಳನ್ನು ಪ್ರಕಟಿಸಿದ್ದಾರೆ. ಅನುವಾದಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಸ್ವೀಕರಿಸಿದ್ದಾರೆ. ಶ್ರವಣಬೆಳಗೊಳದ ಇತಿಹಾಸವನ್ನು ಚಿತ್ರಿಸುವ ‘ಚಾವುಂಡರಾಯ ವೈಭವ’ ಎಂಬ ಕನ್ನಡ ಕಾದಂಬರಿಯನ್ನು ಹಿಂದಿ ಭಾಷೆಗೆ ಅನುವಾದಿಸಿ ಭಾರತೀಯರೆಲ್ಲರಿಗೂ ಶ್ರವಣಬೆಳಗೊಳದ ಇತಿಹಾಸವನ್ನು ಪರಿಚಯಿಸಿದ ಶ್ರೇಯಸ್ಸು ಇವರದು. ಇದಲ್ಲದೆ ಕನ್ನಡದ ಸಾಹಿತಿ ದಿಗ್ಗಜರ ಅನೇಕ ಕೃತಿಗಳನ್ನೂ ಹಿಂದಿಗೆ ಅನುವಾದಿಸಿ ಕನ್ನಡದ ಕಂಪನ್ನು ಹಿಂದೀ ಭಾಷಿಗರಿಗೆ ಪರಿಚಯಿಸಿದ್ದಾರೆ.
ಪ್ರೊ. ಧರಣೇಂದ್ರರು ವಿವಿಧ ಜೈನ ಮಠಗಳ ಸದಸ್ಯರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವುದರ ಮುಖೇನ ಜೈನ ಸಮಾಜದ ಸಂಘಟನೆಗೆ ಶ್ರಮಿಸಿದ್ದಾರೆ. ಇವರ ಸಾಹಿತ್ಯ ಮತ್ತು ಸಮಾಜ ಸೇವೆಯನ್ನು ಗುರುತಿಸಿ ದಕ್ಷಿಣ ಭಾರತ ಜೈನ ಮಹಾಸಭೆಯು ೨೦೧೪ರಲ್ಲಿ ‘ಬಾಹುಬಲಿ ಸಾಹಿತ್ಯ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಸಹಾ ಸೇವೆ ಸಲ್ಲಿಸಿರುವ ಪ್ರೊ. ಧರಣೇಂದ್ರರು ‘ಸನ್ಮತಿ ಸಾಹಿತ್ಯ ಪೀಠ” ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅನೇಕ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನೂ ನಡೆಸುತ್ತಿದ್ದಾರೆ.
Tag: Dharanendra Kurakuri
ಪ್ರತಿಕ್ರಿಯೆ