ಡಾ. ಮನು ಬಳಿಗಾರ್

manubaligar

ಮನು ಬಳಿಗಾರ್ ಅನ್ನುವ ಹೆಸರು  ಕರ್ನಾಟಕದಲ್ಲಿ ಕನ್ನಡಿಗರಿಗೆ ಚಿರಪರಿಚತವಾದ ಹೆಸರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರಾಗಿ ಹಾಗೂ   ಕರ್ನಾಟಕದ  ವಿವಿಧ  ಇಲಾಖೆಗಳಲ್ಲಿ  ದಕ್ಷ ಸೇವೆ ಸಲ್ಲಿಸಿರುವುದರ  ಜೊತೆಗೆ  ಸಾಹಿತಿಗಳಾಗಿಯೂ  ಮಹತ್ವದ   ಕೃಷಿ ಮಾಡಿರುವ  ಮೂಲತಃ ಕೃಷಿ  ಕುಟುಂಬದಿಂದ  ಬಂದ   ಡಾ. ಮನು ಬಳಿಗಾರ್ ಅವರು  ಶತಮಾನ  ಪೂರೈಸಿರುವ  ಕನ್ನಡ  ಸಾಹಿತ್ಯ  ಪರಿಷತ್ತಿನ ಇಪ್ಪತ್ತೈದನೆಯ ಅಧ್ಯಕ್ಷರಾಗಿ ೨೦೧೬ರ  ವರ್ಷದಲ್ಲಿ  ಅಧಿಕಾರವಹಿಸಿಕೊಂಡಿದ್ದಾರೆ.

ಬಹುಮುಖೀ  ಸಾಧಕರಾದ ಮನು ಬಳಿಗಾರ್ ಅವರು ಹುಟ್ಟಿದ್ದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ. ಕೃಷಿ ಪ್ರಧಾನ ಕುಟುಂಬದ ರೈತ ಪರಮೇಶ್ವರಪ್ಪನವರು  ಇವರ ತಂದೆ. ತಂದೆಯ ಆಸಕ್ತಿ ಹಾಗೂ ಕಾಳಜಿಯ ಜೊತೆ ಕಟ್ಟುನಿಟ್ಟಿನ ಶಿಸ್ತುಬದ್ಧ  ಜೀವನಕ್ರಮವೇ, ಮನು ಬಳಿಗಾರರ ಜೀವನದಲ್ಲಿ ಅತ್ಯಂತ ಶಿಸ್ತುಬದ್ಧ ದೈನಂದಿನ ರೂಪುಗೊಳ್ಳಲು ಕಾರಣ. ಮನು ಬಳಿಗಾರ್ ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತಮ್ಮ ಗ್ರಾಮವಾದ  ಶಿಗ್ಲಿಯಲ್ಲೇ  ಪೂರೈಸಿದರು.  ಮುಂದೆ  ಇಂಗ್ಲಿಷ್ ಸಾಹಿತ್ಯದಲ್ಲಿ  ಬಿ.ಎ ಹಾಗೂ ಕಾನೂನಿನ ಎಲ್ ಎಲ್ ಬಿ ಶಿಕ್ಷಣ ಮುಗಿಸಿದ ಅವರು ತಮ್ಮ  ಕಾರ್ಯಕ್ಷೇತ್ರವಾಗಿ ಕರ್ನಾಟಕ ಆಡಳಿತ ಸೇವೆಯನ್ನು ಆಯ್ದುಕೊಂಡರು.

೧೯೭೯ರ ಅವಧಿಯ  ಕೆಎಎಸ್ ಅಧಿಕಾರಿಗಳಾದ  ಮನು ಬಳಿಗಾರರು, ಮಂಗಳೂರಿನಲ್ಲಿ ತಹಶೀಲ್ದಾರ್ ಹುದ್ದೆಯೊಂದಿಗೆ ತಮ್ಮ ವೃತ್ತಿ ಜೀವನ ಆರಂಭಿಸಿದರು. ಬಳಿಕ ಅವರು  ಸರ್ಕಾರದ ಅನೇಕ ಹುದ್ದೆಗಳಲ್ಲಿ ಗುಲ್ಬರ್ಗ, ವಿಜಾಪುರ, ಬೆಳಗಾವಿಗಳಲ್ಲಿ ಸೇವೆ ಸಲ್ಲಿಸಿದರು. ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ  ಇಲಾಖೆ, ಶಿಕ್ಷಣ ಇಲಾಖೆ, ಆಹಾರ ನಾಗರೀಕ  ಪೂರೈಕೆ ಇಲಾಖೆ,  ಪ್ರವಾಸೋದ್ಯಮ ಇಲಾಖೆ,  ಐ.ಟಿ.ಬಿ.ಟಿ. ಇಲಾಖೆ  ಮುಂತಾದ   ಇಲಾಖೆಗಳಲ್ಲಿನ  ಆಪ್ತ  ಕಾರ್ಯದರ್ಶಿಯಾಗಿ;  ಬೆಂಗಳೂರು  ಮಹಾನಗರ  ಪಾಲಿಕೆಯ  ಉಪ ಆಯುಕ್ತರಾಗಿ, ಕೌನ್ಸಿಲ್ ಕಾರ್ಯದರ್ಶಿಗಳಾಗಿ; ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ, ಕಂದಾಯ ಇಲಾಖೆಗಳ ನಿರ್ದೇಶಕರಾಗಿ;  ಹಾಗೂ  ಕನ್ನಡ  ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರಾಗಿ  ಹೀಗೆ  ವಿವಿಧ  ಸರ್ಕಾರಿ ಜವಾಬ್ದಾರಿಗಳನ್ನು ಅವರು  ದಕ್ಷತೆಯಿಂದ ನಿರ್ವಹಿಸಿ ನಾಡಿನಲ್ಲಿ  ಹೆಸರಾಗಿದ್ದಾರೆ.

ವಿಜಯಪುರದಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಅಲ್ಲಿನ ಸಮಗ್ರ ಗ್ರಾಮಾಣಾಭಿವೃದ್ಧಿ ಯೋಜನೆಯನ್ನು  ಸಮರ್ಪಕವಾಗಿ  ಜಾರಿಗೊಳಿಸಿದ್ದಕ್ಕಾಗಿ,  ಮನುಬಳಿಗಾರ್ ಅವರಿಗೆ  ಎರಡು ಸುವರ್ಣ ಪದಕಗಳು ಅರಸಿ ಬಂದವು.  ಬೆಳಗಾವಿಯಲ್ಲಿ ಸೇವೆ ಸಲ್ಲಿಸುವ ವೇಳೆಯಲ್ಲಿ  ಅಲ್ಲಿನ  ಮರಾಠಿ ಭಾಷಿಕರ ಜೊತೆ ಬೆರೆತು, ಅವರನ್ನೂ ಕನ್ನಡ ಕಲಿಯಲು ಉತ್ತೇಜಿಸಿದ್ದು ಮನು ಬಳಿಗಾರರ ಸಾರ್ವಜನಿಕ ಸರಳ ಸಂಪರ್ಕ ಸ್ವಭಾವಕ್ಕೆ ಸಾಕ್ಷಿ ಎನಿಸಿದೆ. ಹೀಗೆ ಗಡಿನಾಡಿನಲ್ಲಿ ಕ್ಷೀಣವಾಗುತ್ತಿರುವ ಕನ್ನಡಕ್ಕೆ ಹೊಸ ಧ್ವನಿ ನೀಡಿದ ಕೀರ್ತಿ ಅವರದ್ದು. ಇದಲ್ಲದೆ  ಗಡಿ ನಾಡಿನ ಕನ್ನಡಿಗರ ಶ್ರೇಯೋಭಿವೃದ್ಧಿಗಾಗಿ  ಅವರು ಅನೇಕ ಮಹತ್ವದ ಯೋಜನೆಗಳನ್ನು ರೂಪಿಸಿ ಯಶಸ್ವಿಗೊಳಿಸಿದ  ಕೀರ್ತಿಗೆ  ಭಾಜನರಾದವರು.  ಬೆಂಗಳೂರು ಮಹಾನಗರ  ಪಾಲಿಕೆಯ ಉಪಾಯುಕ್ತರಾಗಿ ಸೇವೆ ಸಲ್ಲಿಸಿದ  ಸಂದರ್ಭದಲ್ಲಿ,  ಮಹಾನಗರದಲ್ಲಿ ಸ್ವಚ್ಛತೆ ಕಾಪಾಡಲು ಅನೇಕ ಯೋಜನೆಗಳನ್ನು ಅವರು ಜಾರಿಗೆ ತಂದಿದ್ದರು. ಜೊತೆಗೆ ಸ್ವತಃ ಮುತುವರ್ಜಿಯಿಂದ ನಗರವಾಸಿಗಳಲ್ಲಿ ನೈರ್ಮಲ್ಯದ ಕುರಿತಾಗಿ ಅರಿವು ಮೂಡಿಸಲು ಮುಂದಾಗಿದ್ದರು. ಈ ನಿಟ್ಟಿನಲ್ಲಿ  ಪಾಲಿಕೆಯಲ್ಲಿನ ಸಹೋದ್ಯೋಗಿ  ಅಧಿಕಾರಿಗಳೊಂದಿಗೆ ಸ್ವಯಂ ತಾವೇ ಕೊಳಚೆ ಪ್ರದೇಶಗಳು, ಮಾರುಕಟ್ಟೆ ಮೊದಲಾದ ಸ್ಥಳಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ ಅಹವಾಲುಗಳನ್ನು ಸ್ವೀಕರಿಸಿ ಪರಿಹಾರ ಕಾರ್ಯಗಳನ್ನು  ಅಳವಡಿಸುವ  ಮನೋಭಾವ  ಹೊಂದಿದ್ದವರು.  ಕನ್ನಡ  ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಆಯುಕ್ತರಾಗಿ   ಅವರು  ಕೈಗೊಂಡ  ಮಹತ್ವದ  ಯೋಜನೆಗಳು ಮತ್ತು  ಸಾಂಸ್ಕೃತಿಕ  ಬೆಳವಣಿಗೆಗೆ  ನೀಡಿದ  ಅಪರಿಮಿತ  ಪ್ರೋತ್ಸಾಹಗಳು  ಸಾಂಸ್ಕೃತಿಕ  ವಲಯದಲ್ಲಿ  ಬಹುಮೆಚ್ಚಿಗೆ  ಗಳಿಸಿವೆ.

ಕನ್ನಡ ಸಾಹಿತ್ಯ ಲೋಕದಲ್ಲೂ ತಮ್ಮ  ಬರಹಗಳಿಂದ  ಪ್ರಸಿದ್ಧರಾಗಿರುವ ಮನು ಬಳಿಗಾರ್ ಅವರು ಕಥಾ ಸಂಕಲನ, ಕಾವ್ಯ, ಲಲಿತ ಪ್ರಬಂಧ, ಸಂಪಾದನೆ, ನಾಟಕ, ಜೀವನ ಚರಿತ್ರೆ, ಅನುವಾದ ವಿವಿಧ ರೀತಿಯಲ್ಲಿ  ಕೃಷಿ ಮಾಡಿದ್ದು  ಅವುಗಳ ಸಂಕ್ಷಿಪ್ತ  ವಿವರಗಳು ಇಂತಿವೆ:

ಕಥಾ ಸಂಕಲನ: ಅವ್ಯಕ್ತ(೧೯೮೩), ಋಣ(೧೯೯೮), ಬದುಕು ಮಾಯೆಯ ಮಾಟ(೨೦೦೨ ) ದ ಡೆಟ್ ಅಂಡ್ ಅದರ್ ಸ್ಟೋರೀಸ್(೨೦೦೪),  ಕೆಲವುಕತೆಗಳು (೨೦೦೫)

ಕವನ ಸಂಕಲನ       : ನನ್ನ ನಿನ್ನೊಳಗೆ(೧೯೮೩), ಎದ್ದವರು ಬಿದ್ದವರು(೧೯೯೪), ಸಾಕ್ಷರ ಗೀತೆಗಳು(೧೯೯೪), ನಯಾಗರ ಮತ್ತು ಜಲಪಾತಗಳು(೧೯೯೮), ಕವಿ ರವೀಂದ್ರರ ಮಿಂಚಿನ ಹನಿಗಳು(೨೦೦೪), ಆಯ್ದ ಕವನಗಳು (೨೦೧೧)

ಲಲಿತ ಪ್ರಬಂಧ ಸಂಕಲನ: ಏಕಾಂತ ಮತ್ತು ಏಕಾಗ್ರತೆ (೨೦೦೪) ಬೆಳಕ ಬೆಡಗು(೨೦೦೯), ಸಂಸ್ಕೃತಿ  ವಿಹಾರ(೨೦೧೨)

ನಾಟಕ: ಮೈಲಾರ ಮಹಾದೇವ (೨೦೦೭)

ಜೀವನ ಚರಿತ್ರೆಗಳು: ಅತಿ ವಿರಳ ರಾಜಕಾರಣಿ ಎಸ್.ಆರ್.ಕಂಠಿ (೨೦೦೧), ಪ್ರತಿಭಾವಂತ ಸಂಸದೀಯ ಪಟುಗಳು, ಅಬ್ದುಲ್ ನಜೀರ್  ಸಾಬ್ (೨೦೦೫), ಅಪ್ಪ (೨೦೧೨)

ಸಂಪಾದನೆ: ಬಹುಮುಖಿ(ಶಿವರಾಮ ಕಾರಂತರ ಬದುಕು ಬರಹ), ಗಾನಗಂಧರ್ವ(ಕುಮಾರಗಂಧರ್ವರ ಜೀವನ ಸಾಧನೆ), ಜ್ಞಾನಪ್ರಭಾ, ಕಲ್ಪವೃಕ್ಷ, ತಲಸ್ಪರ್ಶಿ, ತುಳಸಿ ಇತ್ಯಾದಿ.

ಭಾಷಾಂತರ: ರವೀಂದ್ರನಾಥ ಠಾಕೂರರ 207 ಕವನಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.

ಡಾ. ಮನು ಬಳಿಗಾರರ  ಹಲವಾರು ಕಥೆಗಳು ಇಂಗ್ಲೀಷ್, ಒರಿಯಾ, ತೆಲುಗು ಮತ್ತು ಹಿಂದಿಗೆ ಭಾಷಾಂತರಗೊಂಡಿವೆ.

ಸಂಗೀತ ಮನು ಬಳಿಗಾರರ ಇನ್ನೊಂದು ಆಸಕ್ತಿಕರ ಕ್ಷೇತ್ರ. ಇವರು ಭೀಮ್ಸೇನ್ ಜೋಶಿ, ಸಿದ್ಧರಾಮ ಜಂಬಲದಿನ್ನಿ, ಟಿ. ಎಸ್. ಸತ್ಯವತಿ, ಎಸ್.ಎಂ ಶೀಲಾ ಮುಂತಾದ ಸಂಗೀತ ಪರಿಣಿತರಿಂದ ಪ್ರಭಾವಿತರಾದವರು. ಇವರು ಸ್ವತಃ ಅಕ್ಕಮಹಾದೇವಿ ಹಾಗೂ ಬಸವಣ್ಣನವರ ವಚನಗಳು, ರಾಷ್ಟ್ರಕವಿ ಕುವೆಂಪು ಹಾಗೂ ವರಕವಿ ಬೇಂದ್ರೆಯವರ ಭಾವಗೀತೆಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡುತ್ತಾರೆ.

ಡಾ. ಮನು ಬಳಿಗಾರ್  ಅವರಿಗೆ  ಅನೇಕ  ಸಾಹಿತ್ಯಕ  ಹಾಗೂ  ಸೇವಾ  ಪುರಸ್ಕಾರಗಳು  ಸಂದಿವೆ.  ರನ್ನ ಸಾಹಿತ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ,       ಕೆಂಪೇಗೌಡ ಸಾಹಿತ್ಯ ಪ್ರಶಸ್ತಿ, ಲಿಂಗರಾಜದೇಸಾಯಿ ಸಾಹಿತ್ಯ ಪ್ರಶಸ್ತಿ, ಬೆಳಗಾವಿಯ ಎಂ.ಕೆ.ಪಬ್ಲಿಸಿಟಿ ಪ್ರಶಸ್ತಿ, ಮುಂತಾದವು ಅವರಿಗೆ  ಸಂದಿರುವ  ಕೆಲವು  ಸಾಹಿತ್ಯಕ  ಪ್ರಶಸ್ತಿಗಳು.  ಇವರ  ಮಹತ್ವದ  ಸಾಹಿತ್ಯಕ  ಕೊಡುಗೆಗಳಿಗಾಗಿ  ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು  ೨೦೧೧ರ  ವರ್ಷದಲ್ಲಿ  ಡಾಕ್ಟೊರೇಟ್ ಗೌರವವನ್ನು  ಸಮರ್ಪಿಸಿದೆ.  ಸರ್ಕಾರಿ ಸೇವೆಯಲ್ಲಿನ  ದಕ್ಷ  ಸೇವೆಗಾಗಿ ಅವರಿಗೆ  ೧೯೮೨-೮೩ ರಿಂದ ೧೯೮೬-೮೭ ಅವಧಿಯಲ್ಲಿ  ಎರಡು ಚಿನ್ನದ ಪದಕಗಳೂ  ಸೇರಿ ಐದು ಪ್ರಮುಖ  ಬಹುಮಾನಗಳು  ಸಂದಿದ್ದವು.  ಬೆಳಗಾವಿ  ಜಿಲ್ಲಾ  ಸಮಿತಿಯ ಪಾಕ್ಷಿಕ ‘ಅಕ್ಷರ ಪ್ರಭಾ’ದ   ಸಂಪಾದಕರಾಗಿದ್ದಾಗ ಇವರು  ಕೈಗೊಂಡ  ಮಹತ್ವದ ಕಾರ್ಯಕ್ರಮಗಳ  ದೆಸೆಯಿಂದಾಗಿ  ೧೯೯೪-೦೫ ವರ್ಷದಲ್ಲಿ, ಜಿಲ್ಲೆಗೆ  ರಾಷ್ಟ್ರಪತಿಗಳ     ‘ಸತ್ಯೇನ್  ಮೈತ್ರ’ ಪ್ರಶಸ್ತಿ  ಸಂದಿತು.  ಡಾ. ಮನು ಬಳಿಗಾರ್ ಅವರಿಗೆ  ೨೦೦೮ ವರ್ಷದಲ್ಲಿ  ವಿಶ್ವಮಾನವ  ಪ್ರಶಸ್ತಿಯೂ  ಸಂದಿತು.

ಸಿಂಗಪುರದಲ್ಲಿ ನಡೆದ ವಿಶ್ವ ಕನ್ನಡ ಸಂಸ್ಕೃತಿ  ಸಮ್ಮೇಳನದ ಅಧ್ಯಕ್ಷತೆ (೨೦೦೫); ಅಮೇರಿಕಾದ ವಿ.ಎಸ್.ಎನ್.ಎ. ರಜತ ಮಹೋತ್ಸವದಲ್ಲಿ ಪ್ರಧಾನ ಭಾಷಣ – ೧೯೯೭, ೨೦೦೩, ೨೦೦೭; ಆಸ್ಟ್ರೇಲಿಯಾದ ಮೆಲ್ಬರ್ನ್‍ ಕನ್ನಡ ಸಂಘದ ರಜತ ಮಹೋತ್ಸವದಲ್ಲಿ ಮುಖ್ಯಅತಿಥಿ–ಉಪನ್ಯಾಸ–೨೦೧೦; ಲಂಡನ್‍ನಲ್ಲಿ ರವೀಂದ್ರನಾಥ್‍ಟ್ಯಾಗೂರ್ ೧೫೦ನೇ ವರ್ಷಾಚರಣೆಯಲ್ಲಿ ಮುಖ್ಯಅತಿಥಿ–ಉಪನ್ಯಾಸ–೨೦೧೧; ಗದಗ ಜಿಲ್ಲಾಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (೨೦೦೪); ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯತ್ವ  (೧೯೯೯-೨೦೦೧);      ಬಿಜಾಪುರ ಜಿಲ್ಲಾ 5ನೇ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯಧ್ಯಕ್ಷತೆ (೧೯೮೯-೯೦); ಮಾರ್ಚ್ ೨೦೧೧ರಲ್ಲಿ ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸುವಲ್ಲಿ ಮಹತ್ವದ ಪಾತ್ರ; ಅಖಿಲ ಭಾರತ ಸಾಹಿತ್ಯ ಸಮ್ಮೇಳಗಳಲ್ಲಿ  ೧೯೯೯ರ ವರ್ಷದಲ್ಲಿ  ಕನಕಪುರದಲ್ಲಿ  ಕವಿಗೋಷ್ಥಿಯಲ್ಲಿ ಕಾವ್ಯಮಂಡನೆ  ಹಾಗೂ ೨೦೦೩ರ ವರ್ಷದ  ಮೂಡಬಿದ್ರೆ  ಸಮ್ಮೇಳನದಲ್ಲಿ  ಸಾಂಸ್ಕೃತಿಕ ಗೋಷ್ಥಿಯಲ್ಲಿ ಪ್ರಬಂಧ ಮಂಡನೆ; ನವ ದೆಹಲಿಯಲ್ಲಿ ೨೦೧೦ರ ವರ್ಷದಲ್ಲಿ ನಡೆದ ರಾಷ್ಟ್ರೀಯ ಕನ್ನಡ ಸಮ್ಮೇಳನ ಅಧ್ಯಕ್ಷತೆ; ೨೦೦೮ ಮತ್ತು ೨೦೦೯ರಲ್ಲಿ ಪ್ರಜಾವಾಣಿ ದಿನಪತ್ರಿಕೆಯಲ್ಲಿ ‘ಸಾಕ್ಷಿಪ್ರಜ್ಷೆ’ ಎಂಬ ಅಂಕಣ ಬರೆದದ್ದು; ಅಮೆರಿಕಾ, ಯುರೋಪ್, ಆಸ್ಟ್ರೇಲಿಯಾ, ಥೈಲ್ಯಾಂಡ್, ಮಲೇಷಿಯಾ, ದುಬೈ, ಸಿಂಗಾಪುರಗಳಲ್ಲಿ ೧೯೯೭-೨೦೦೩-೨೦೦೫-೨೦೦೭-೨೦೦೮, ೨೦೧೦,೨೦೧೧ ಅವಧಿಯಲ್ಲಿ  ವ್ಯಾಪಕ ಪ್ರವಾಸದ  ಸಂದರ್ಭದಲ್ಲಿ  ಮಾಡಿದ  ವೈವಿಧ್ಯಪೂರ್ಣ   ಉಪನ್ಯಾಸಗಳು: ರವೀಂದ್ರನಾಥ ಠಾಗೊರ್ ಆ್ಯಂಡ್ ಇಂಡಿಯನ್ ಆರ್ಟ್&ಕಲ್ಚರ್; ಇಂಟರ್‍ನ್ಯಾಷನಲ್ ಅಂಡರ್‍ಸ್ಟಾಂಡಿಂಗ್ ಅಂಡ್ ವಚನ ಲಿಟರೆಚರ್; ಇಂಡಿಯನ್ ಕಲ್ಚರ್ ಅಂಡ್ ಹೆರಿಟೇಜ್; ಚಾಲೆಂಜಸ್ ಬಿಫೋರ್‍ ರಿಲಿಜನ್; ಕನ್ನಡ ಸಂಸ್ಕೃತಿ – ಒಂದು ಅಧ್ಯಯನ ಇತ್ಯಾದಿ, ಇತ್ಯಾದಿಗಳು  ಡಾ.  ಮನು ಬಳಿಗಾರ್  ಅವರ  ವೈವಿಧ್ಯಮಯ  ಸಾಹಿತ್ಯಕ ಮತ್ತು  ಸಾಂಸ್ಕೃತಿಕ  ವ್ಯಾಪ್ತಿಯ  ಇನ್ನಿತರ  ಹರಹುಗಳಲ್ಲಿ  ಪ್ರಮುಖವಾದವುಗಳಾಗಿವೆ.

ಸಾಹಿತ್ಯ ಮತ್ತು ಸಂಸ್ಕೃತಿ ಪ್ರಿಯರಾದ  ಡಾ.  ಮನು ಬಳಿಗಾರರ  ಬಳಿ ದೊಡ್ಡ ಗ್ರಂಥ ಭಂಡಾರವೇ ಇದೆ. ಬಿಡುವಿಲ್ಲದ  ಕಾರ್ಯವೈವಿಧ್ಯಗಳ ನಡುವೆಯೂ   ಏನಾದರು ಓದುವುದಕ್ಕೆ  ಮತ್ತು  ಬರೆಯುವುದಕ್ಕೆ  ಆಸ್ಪದ  ಮಾಡಿಕೊಳ್ಳುವ  ಮನು ಬಳಿಗಾರ್ ಅವರು, ಅತ್ಯಂತ ಸರಳ, ನಿಸ್ಪೃಹ, ಸಜ್ಜನ ಸ್ನೇಹ ಜೀವಿ ಎಂದು  ಎಲ್ಲೆಡೆ  ಗುರುತಿಸಲ್ಪಟ್ಟಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಆಯುಕ್ತರಾಗಿದ್ದೂ  ಒಳಗೊಂಡಂತೆ  ತಮ್ಮ  ಸೇವಾ  ಅವಧಿಯಲ್ಲಿ  ಅನೇಕ ಮಹತ್ವದ ಕನ್ನಡಪರ ಕೆಲಸಗಳನ್ನು ನಿರ್ವಹಿಸಿರುವ  ಡಾ. ಮನು ಬಳಿಗಾರ್  ಅವರು, ಪ್ರಸಕ್ತ ವರ್ಷದಲ್ಲಿ   ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷತೆ ವಹಿಸಿಕೊಂಡ  ಪ್ರಾರಂಭದ  ಕ್ಷಣಗಳಿಂದಲೂ ಕನ್ನಡ  ಸಾಹಿತ್ಯ  ಪರಿಷತ್ತು ಮತ್ತು  ಕನ್ನಡಪರ  ಹಿತಚಿಂತನಗಳ    ಕುರಿತಾಗಿ  ಕ್ಷಿಪ್ರದೆಸೆಯಲ್ಲಿ   ಕಾರ್ಯೋನ್ಮುಖರಾಗಿದ್ದು, ಆ  ನಿಟ್ಟಿನಲ್ಲಿ  ಮಹತ್ವದ   ಯೋಜನೆಗಳನ್ನು  ರೂಪಿಸಿ  ಕಾರ್ಯರೂಪಕ್ಕೆ ತರಲು  ವ್ಯಾಪಕವಾದ  ಕಾರ್ಯಕ್ರಮಗಳನ್ನು   ಕೈಗೊಂಡು  ನಿರಂತರವಾಗಿ  ಶ್ರಮಿಸುತ್ತಾ  ಮುನ್ನಡೆದಿದ್ದಾರೆ.

Tag: Dr. Manu Baligar

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)