ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ
ನಮ್ಮ ತಪ್ಪನೆನಿತೊ ತಾಳ್ವೆ ಅಕ್ಕರೆಯಿಂದೆಮ್ಮನಾಳ್ವೆ
ನೀನೆ ಕಣಾ ನಮ್ಮ ಬಾಳ್ವೆ ನಿನ್ನ ಮರೆಯಲಮ್ಮೆವು
ತನು ಕನ್ನಡ ಮನ ಕನ್ನಡ ನುಡಿ ಕನ್ನಡವೆಮ್ಮವು.
ಹಣ್ಣನೀವ ಕಾಯನೀವ ಪರಿಪರಿಯ ಮರಂಗಳೋ
ಪತ್ರಮೀವ ಪುಷ್ಪಮೀವ ಲತೆಯ ತರತರಂಗಳೋ
ತೆನೆಕೆನೆಯ ಗಾಳಿಯೋ ಖಗಮೃಗೋರಗಾಳಿಯೋ
ನದಿ ನಗರ ನಗಾಳಿಯೋ ಇಲ್ಲಿಲ್ಲದುದುಳಿದುದೆ?
ಜೇನು ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ?
ಬುಗುರಿಯೀಯೆ ಶಬರಿ ಕಾಯೆ ರಾಮನಿಲ್ಲಿ ಬಂದನೆ?
ಕನ್ನಡ ದಳ ಕೂಡಿಸಿ ಖಳ ದಶಾಸ್ಯನಂ ಕೊಂದನೆ?
ಪಾಂಡವರಜ್ಞಾತಮಿದ್ದ, ವಲಲಂ ಕೀಚಕನ ಗೆದ್ದ;
ಕುರುಕುಲಮಂಗದನ ಮೆದ್ದ ನಾಡು ನೋಡಿದಲ್ಲವೇ?
ನಂದನಂದನನಿಲ್ಲಿಂದ ಸಂದಿಗಯ್ದನಲ್ಲವೇ?
ಶಕವಿಜೇತನಮರ ಶಾತವಾಹನಾಖ್ಯನೀ ಶಕಂ,
ನಿನ್ನೊಳಂದು ತೊಡಗಿ ಸಂದುದರ್ಧ ಭರತದೇಶಕಂ
ಚಳುಕ್ಯರಾಷ್ಟ್ರಕೂಟರೆಲ್ಲಿ ಗಂಗರಾ ಕದಂಬರೆಲ್ಲಿ
ಹೊಯ್ಸಳ ಕಳಚುರ್ಯರೆಲ್ಲ ವಿಜಯನಗರ ಭೂಪರು
ಆಳ್ದರಿಲ್ಲಿಯಲ್ಲದೆಲ್ಲಿ ತಾಯೆ ಮೇಣಲೂಪರು.
ಜೈನರಾದ ಪೂಜ್ಯಪಾದ ಕೊಂಡಕುಂದವರ್ಯರ,
ಮಧ್ವಯತಿಯೆ ಬಸವಪತಿಯೆ ಮುಖ್ಯಮತಾಚಾರ್ಯರ
ಶರ್ವ ಪಂಪ ರನ್ನರ, ಲಕ್ಷ್ಮೀಪತಿ ಜನ್ನರ
ಷಡಕ್ಷರಿ ಮುದ್ದಣ್ಣರ ಪುರಂದರವರೇಣ್ಯರ
ತಾಯೆ ನಿನ್ನ ಬಸಿರೆ ಹೊನ್ನಗನಿ ವಿದ್ಯಾರಣ್ಯರ
ಹಳೆಯಬೀಡ ಬೇಲನಾಡ ಮಾಡಮೆನಿತೊ ಸುಂದರಂ,
ಬಿಳಿಯ ಕೊಳದ ಕಾರಕಳದ ನಿಡುಕರೆನಿತೊ ಬಂಧುರಂ,
ಇಲ್ಲಿಲ್ಲದ ಶಿಲ್ಪಮಿಲ್ಲ, ನಿನ್ನ ಕಲ್ಲೆ ನುಡಿವುದಲ್ಲ
ಹಿಂಗತೆಯಿನಿವಾಲಸೊಲ್ಲನೆಮಗೆ ತೃಷೆ ದಕ್ಕಿಸು
ಹೊಸತು ಕಿನ್ನರಿಯಲಿ ನಿನ್ನ ಹಳೆಯ ಹಾಡನುಕ್ಕಿಸು.
ಆರ್ಯರಿಲ್ಲಿ ಬಾರದಲ್ಲಿ ಬಾಸೆ ಎಲ್ಲಿ ಸಕ್ಕದಂ?
ನಿನ್ನ ನುಡಿಯಿನಚ್ಚುಪಡಿಯನಾಂತರೆನಿತೊ ತಕ್ಕುದಂ?
ಎನಿತೊ ಹಳೆಯ ಕಾಲದಿಂದ ಬರ್ದಿಲಮೀ ಬಾಸೆಯಿಂದ
ಕಾಲನ ಮೂದಲಿಸಿ ನಿಂದ ನಿನಗೆ ಮರೆವೆ ಹೊದೆವುದೆ?
ನಿನ್ನ ನುಡಿಗೆ ನಿನ್ನ ನಡೆಗೆ ಮುದುಪುಮೆಂದುಮೊದೆವುದೆ?
ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡುಕುವ!
ಕನ್ನಡ ಕಸ್ತೂರಿಯನ್ನ ಹೊಸತುಸಿರಿಂ ತೀಡದನ್ನ
ಸುರಭಿ ಎಲ್ಲಿ ನೀನದನ್ನ ನವಶಕ್ತಿಯನೆಬ್ಬಿಸು
ಹೊಸ ಸುಗಂಧದೊಸಗೆಯಿಂದ ಜಗದಿ ಹೆಸರ ಹಬ್ಬಿಸು!
ನಿನ್ನ ಪಡೆಯ ಕತೆಯ ಕಡೆಯ ನುಡಿಯೆ ತಾಳಿಕೋಟೆಯು?
ಕಡಲಿನೊರತೆಗೊಳವೆ ಕೊರತೆ ಬತ್ತದು ನಿನ್ನೂಟೆಯು
ಸೋಲಗೆಲ್ಲವಾರಿಗಿಲ್ಲ ಸೋತು ನೀನೆ ಗೆದ್ದೆಯಲ್ಲ
ನಿನ್ನನಳಿವು ತಟ್ಟಲೊಲ್ಲ ತಾಳಿಕೋಟೆ ಸಾಸಿರಂ
ಬಾಹುಬಲದಿ ಮನೋಬಲದಿ ತಾಯೆ ಗೆಲುವೆ ಭಾಸುರಂ!
ಕುಗ್ಗದಂತೆ ಹಿಗ್ಗಿಪಂತೆ ನಿನ್ನ ಹೆಸರ ಟೆಕ್ಕೆಯಂ
ನೀಗದಂತೆ ಸಾಗಿಪಂತೆ ನಿನ್ನ ನುಡಿಯ ಢಕ್ಕೆಯಂ
ನಮ್ಮೆದೆಯಂ ತಾಯೆ ಬಲಿಸು ಎಲ್ಲರ ಬಾಯಲ್ಲಿ ನೆಲೆಸು
ನಮ್ಮ ಮನಮನೊಂದೆ ಕಲಸು ಇದನೊಂದನೆ ಕೋರುವೆ
ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮಗೆ ತೋರುವೆ?
ಸಾಹಿತ್ಯ: ಮಂಜೇಶ್ವರ ಗೋವಿಂದ ಪೈ
ಪ್ರತಿಕ್ರಿಯೆ