ದತ್ತಿ ಪ್ರಶಸ್ತಿ – ಜಿ. ಮಾದೆಗೌಡರಿಗೆ ಗಾಂಧೀ ಪುದುವಟ್ಟು ಗೌರವ

ಶ್ರೀ ಎ.ಆರ್. ನಾರಾಯಣ ಘಟ್ಟ-ಸರೋಜಮ್ಮ ಗಾಂಧೀ ಪುದುವಟ್ಟು

ಶ್ರೀ ನಾರಾಯಣ ಘಟ್ಟ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಗಾಂಧೀ ಪುದುವಟ್ಟಿನ ಸ್ಥಾಪಕರು. ಶ್ರೀಯುತರು  ಬೆಂಗಳೂರಿನ ರಾಷ್ಟ್ರೀಯ ವಿದ್ಯಾಲಯದಲ್ಲಿ ಮುಖ್ಯೋಪಾಧ್ಯಾಯರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾದವರು.

ಶ್ರೀ ನಾರಾಯಣ ಘಟ್ಟ ಅವರ ಬದುಕಿನ ಪ್ರಮುಖ ಘಟ್ಟಗಳೆಂದರೆ, ಕರ್ನಾಟಕ ಪಠ್ಯಪುಸ್ತಕ ಇಲಾಖೆಯಲ್ಲಿ ಪಠ್ಯ ಪುಸ್ತಕ ರಚನೆ ಮತ್ತು ಪರಿಷ್ಕರಣಾ ಕಾಯಕ, ಬೆಂಗಳೂರು ಆಕಾಶವಾಣಿಯಲ್ಲಿ ಕನ್ನಡ ಭಾಷೆ ಮತ್ತು ಇತಿಹಾಸದ ಬಗ್ಗೆ ೫೦ಕ್ಕೂ ಹೆಚ್ಚು ಶೈಕ್ಷಣಿಕ ಕಾರ್ಯಕ್ರಮಗಳ ಪ್ರಸಾರ, ಸ್ವಾತಂತ್ರ್ಯ ಸುವರ್ಣ ವರ್ಷದಲ್ಲಿ ‘ಕೆಚ್ಚೆದೆಯ ಕಲಿಗಳು’ ಎಂಬ ೧೪ ಕಂತುಗಳ ರೂಪಕ ಪ್ರಸಾರ, ಬೆಂಗಳೂರು ದೂರದರ್ಶನದಲ್ಲಿ ‘ಚಲೇಜಾವ್ ರಾಷ್ಟ್ರೀಯ ನಾಟಕ’ ಎರಡು ಕಂತುಗಳಲ್ಲಿ ಪ್ರಸಾರ, ‘ಗೀತಾ ಕುಟೀರ’ ಪ್ರಕಾಶನದ ಮೂಲಕ ಕಥಾ ಸಂಕಲನ, ಕವನ ಸಂಕಲನ, ಕಾದಂಬರಿ, ನಾಟಕ, ವಿಚಾರ – ಇತ್ಯಾದಿ ಹಲವು ಪ್ರಕಾರಗಳಲ್ಲಿ ೫೬ ಕೃತಿಗಳ ಪ್ರಕಟಣೆ. ‘ಬಹುಜನ ಕನ್ನಡಿಗರು’ ಕನ್ನಡ ಪಾಕ್ಷಿಕದಲ್ಲಿ ‘ವಿಚಾರ ವಿಹಾರ’ ಎಂಬ ಅಂಕಣದಲ್ಲಿ ಅವರ ಹಲವಾರು ಲೇಖನಗಳು ಪ್ರಕಟಗೊಂಡಿವೆ. ಈ ಇಳಿವಯಸ್ಸಿನಲ್ಲಿಯೂ ಬಹಳ ಹುಮ್ಮಸ್ಸಿನಿಂದಲೇ ಸಾಹಿತ್ಯಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಶ್ರೀ ಘಟ್ಟ ಅವರು ತಲ್ಲೀನರಾಗಿರುವುದು ಅವರ ಮನಸ್ಸಿನ ಆರೋಗ್ಯವನ್ನು ಸೂಚಿಸುತ್ತದೆ.

ಚಿತ್ರದುರ್ಗದಲ್ಲಿ ನಡೆದ ೭೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀ ನಾರಾಯಣ ಘಟ್ಟರನ್ನು ಸನ್ಮಾನಿಸಲಾಗಿದೆ. ಶ್ರೀ ಎ.ಆರ್. ನಾರಾಯಣ ಘಟ್ಟ ಮತ್ತು ಅವರ ಧರ್ಮಪತ್ನಿ ಸರೋಜಮ್ಮ ಅವರ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇರಿಸಿರುವ ೨ ಲಕ್ಷ ರೂಪಾಯಿಗಳ ಪುದುವಟ್ಟಿನಿಂದ ಬರುವ ಆದಾಯದಲ್ಲಿ ಪ್ರತಿವರ್ಷ ನಾಡಿನ ಹಿರಿಯ ಗಾಂಧೀ ವಾದಿಗಳೊಬ್ಬರಿಗೆ ನಗದು ರೂ. ೧೦ ಸಾವಿರ ಒಳಗೊಂಡಂತೆ ಪ್ರಶಸ್ತಿ ಪತ್ರ, ಫಲಕ ಹಾಗೂ ಫಲತಾಂಬೂಲಗಳನ್ನು ನೀಡಿ ಅವರನ್ನು ಸನ್ಮಾನಿಸಲಾಗುತ್ತದೆ. ಶ್ರೀ ನಾರಾಯಣ ಘಟ್ಟ ದಂಪತಿಗಳ ಈ ಮೆಚ್ಚುಗೆ ಕಾರ್ಯಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಹೆಚ್ಚಿನ ಸಂತಸ ವ್ಯಕ್ತಪಡಿಸಿ ಹಾರ್ದಿಕವಾಗಿ ಅವರನ್ನು ಅಭಿನಂದಿಸುತ್ತದೆ. 

ಶ್ರೀ ಜಿ. ಮಾದೇಗೌಡ

ಕನ್ನಡದ ನೆಲ, ಜಲ, ರೈತ ಹಿತರಕ್ಷಣೆಯ ವಿಚಾರ ಬಂದಾಗಲೆಲ್ಲಾ ಜನಮಾನಸದಲ್ಲಿ ಮೂಡಿಬರುವ ನಾಯಕರುಗಳಲ್ಲಿ ಜಿ. ಮಾದೇಗೌಡರು ಪ್ರಮುಖರು. ‘ಮಂಡ್ಯದ ಗಾಂಧೀ’, ‘ನೇರ ನಿಷ್ಠುರ ಪಾರದರ್ಶಕ ಹೋರಾಟಗಾರ’ ಮುಂತಾದ ಬಿರುದುಗಳಿಗೆ ಇವರು ಪಾತ್ರರಾಗಿದ್ದಾರೆ. 1928ರಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗುರುದೇವರಹಳ್ಳಿಯಲ್ಲಿ ಜನಿಸಿದ ಮಾದೇಗೌಡರು, ಹತ್ತರ ಎಳವೆಯಲ್ಲೇ ಶಿವಪುರದ ಸತ್ಯಾಗ್ರಹ ಸಂದರ್ಭದಲ್ಲಿ ಭಾಗವಹಿಸಿದ ಸತ್ಯಾಗ್ರಹಿಗಳಿಗೆ ನೀರು ಕೊಡುವ ಕಾಯಕದಲ್ಲಿ ತೊಡಗಿ, ಮುಂದೆ ಸ್ವಯಂ ತಾವೇ ಸತ್ಯಾಗ್ರಹಿಯಾಗಿ ಬೆಳೆದರು. ಮಹಾತ್ಮ ಗಾಂಧೀಯವರು 1942ರಲ್ಲಿ ಕರೆಕೊಟ್ಟ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಹೋರಾಟದ ಸಂದರ್ಭದಲ್ಲಿ, ಚಳವಳಿಯ ಪ್ರಚಾರಕ್ಕಾಗಿ ಶಾಲೆಯನ್ನೇ ಬಿಟ್ಟು ಹೊರಬಂದರು. ಮುಂದೆ ತಮ್ಮ ನಡೆ, ನುಡಿ, ಆಚಾರ, ವಿಚಾರಗಳಲ್ಲೆಲ್ಲಾ ಗಾಂಧೀ ಮಾರ್ಗವನ್ನು ಅವಲಂಭಿಸಿದ ಗೌಡರು ಬಿ.ಎ. ಪದವಿ ಮತ್ತು ಕಾನೂನು ಪದವಿಗಳನ್ನು ಗಳಿಸಿದರು. ನಿರಂತರ ಜನಾನುರಾಗಿಗಳಾಗಿ ಜನಪರದನಿಯಾಗಿದ್ದ ಮಾದೇಗೌಡರು 1959ರಲ್ಲಿ ತಾಲ್ಲೂಕು ಮಂಡಳಿ ಚುನಾವಣೆಗಳಲ್ಲಿ ಜಯಿಸಿದ್ದು ಮೊದಲ್ಗೊಂಡಂತೆ, ಆರು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿ ಮಂಡ್ಯ ಜಿಲ್ಲೆಯನ್ನು ಪ್ರತಿನಿಧಿಸಿ ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. 89 ವರ್ಷದ ಇಳಿವಯಸ್ಸಿನಲ್ಲಿಯೂ ಕಾವೇರಿ ನದಿ ನೀರಿನ ವಿಷಯವಾಗಿ ನಿರಂತರ ಹೋರಾಟ ನಡೆಸುತ್ತಿರುವುದು ಮಾದರಿಯಾಗಿದೆ.

ಇದೀಗ ಕನ್ನಡ ಸಾಹಿತ್ಯ ಪರಿಷತ್ತು ಶ್ರೀ ಜಿ. ಮಾದೇಗೌಡ ಅವರಿಗೆ ಅವರ ಅನುಪಮ ಸೇವೆಯನ್ನು ಗುರುತಿಸಿ  “ಶ್ರೀ ಎ.ಆರ್. ನಾರಾಯಣ ಘಟ್ಟ-ಸರೋಜಮ್ಮ ಗಾಂಧೀ ಪುದುವಟ್ಟು” ಗೌರವ ನೀಡಿ ಸನ್ಮಾನಿಸುತ್ತಿದೆ.

 

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)