ನಮ್ಮ ಪರಿಷತ್ತು
ಕನ್ನಡ ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ ದಿನಾಂಕ ೫-೫-೧೯೧೫ರಲ್ಲಿ ಸ್ಥಾಪನೆಯಾದ ಕನ್ನಡಿಗರ ಸಾಂಸ್ಕೃತಿಕ ಮೇರು ಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ತು. ಕನ್ನಡ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸುವವರ ಪ್ರೋತ್ಸಾಹಕ್ಕಾಗಿ, ಸ್ವತಂತ್ರಾಧಿಕಾರವುಳ್ಳ ಪರಿಷತ್ತೊಂದು ಇರಬೇಕು ಮತ್ತು ಸರ್ಕಾರದವರು ಆ ಪರಿಷತ್ತನ್ನು ಅಂಗೀಕರಿಸಿ ಅದಕ್ಕೆ ವಿಶೇಷ ಸಹಾಯ ಮಾಡುವುದು ಉಚಿತ ಎಂದು ೧೯೧೪ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಸಂಪದಭ್ಯುದಯ ಸಮಾಜ ತನ್ನ ವಾರ್ಷಿಕ ಅಧಿವೇಶನದಲ್ಲಿ ಕೈಗೊಂಡ ಮಹತ್ವದ ನಿರ್ಧಾರ ಕನ್ನಡ ಸಾಹಿತ್ಯ ಪರಿಷತ್ತಿನ ಉಗಮಕ್ಕೆ ಕಾರಣವಾಯ್ತು. ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಬೆಂಗಳೂರಿನ ಶಂಕರಪುರ ಬಡಾವಣೆಯಲ್ಲಿ ಚಿಕ್ಕ ಕೊಠಡಿಯೊಂದರಲ್ಲಿ ಆರಂಭವಾದ ಅಂದಿನ ಕರ್ಣಾಟಕ ಸಾಹಿತ್ಯ ಪರಿಷತ್ತೇ ಇಂದು ‘ಕನ್ನಡ ಸಾಹಿತ್ಯ ಪರಿಷತ್ತು’ಆಗಿ ಹೆಮ್ಮರವಾಗಿ ಬೆಳೆದಿದೆ. ರಾಜ್ಯಾದ್ಯಂತ ಅಷ್ಟೇಕೆ ಹೊರನಾಡಿನಲ್ಲೂ ತನ್ನ ಬಿಳಿಲುಗಳನ್ನು ಬಿಟ್ಟಿದೆ.
ಬೃಹತ್ ಬೆಂಗಳೂರು ಮಹಾನಗರದ ಹೃದಯಭಾಗದಲ್ಲಿರುವ ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿ ಇರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಶ್ರೀ ಕೃಷ್ಣರಾಜ ಪರಿಷನ್ಮಂದಿರ ಸಭಾಂಗಣ,ಬಿ.ಎಂ.ಶ್ರೀ ಅಚ್ಚುಕೂಟ, ಸುವರ್ಣ ಮಹೋತ್ಸವ ಕಟ್ಟಡ ಹಾಗೂ ವಜ್ರ ಮಹೋತ್ಸವ ಕಟ್ಟಡಗಳಿದ್ದು, ಇಲ್ಲಿ ಕನ್ನಡದ ಕೈಂಕರ್ಯ ನಿರಂತರವಾಗಿ ಸಾಗಿದೆ. ಶತಮಾನೋತ್ಸವ ಕಟ್ಟಡದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ೧೯೪೦ರಲ್ಲಿ ರಜತ ಮಹೋತ್ಸವವನ್ನೂ, ೧೯೭೩ರಲ್ಲಿ ಸುವರ್ಣ ಮಹೋತ್ಸವವನ್ನೂ, ೧೯೭೭ರಲ್ಲಿ ವಜ್ರ ಮಹೋತ್ಸವವನ್ನೂ, ೧೯೯೧ರಲ್ಲಿ ಅಮೃತ ಮಹೋತ್ಸವವನ್ನೂ, ೨೦೧೫ರ ವರ್ಷದಲ್ಲಿ ಶತಮಾನೋತ್ಸವವನ್ನೂ ಪರಿಷತ್ತು ಆಚರಿಸಿದೆ.
ಸದಸ್ಯ ಸಂಪತ್ತು: ೧೮ ವರ್ಷ ಮೇಲ್ಪಟ್ಟ, ಕನ್ನಡ ಓದು ಬರಹ ಬಲ್ಲ ಯಾರೇ ಆದರೂ ಪರಿಷತ್ತಿನ ಸದಸ್ಯರಾಗಬಹುದು. ದೇಶ,ವಿದೇಶಗಳಲ್ಲೂ ಸದಸ್ಯರಿದ್ದಾರೆ. ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಸದಸ್ಯತ್ವವನ್ನು ಹೊಂದುತ್ತಿರುವ ಪರಿಷತ್ತು ಪ್ರಸಕ್ತದಲ್ಲಿ ೩.೨೫ ಲಕ್ಷ ಸದಸ್ಯರನ್ನು ಹೊಂದಿದ್ದು, ಒಂದು ಸಾಹಿತ್ಯಕ ಸಂಸ್ಥೆಯಾಗಿ ಇಷ್ಟೊಂದು ಬೃಹತ್ ಸದಸ್ಯ ಬಲವನ್ನು ಹೊಂದಿರುವ ಸಂಸ್ಥೆಗಳಲ್ಲಿ ಅನನ್ಯವೆನಿಸುವಂತಹ ಗೌರವವನ್ನು ತನ್ನದಾಗಿಸಿಕೊಂಡಿದೆ. ಚುನಾಯಿತ ಸ್ಥಾನಗಳಿಗೆ ಮತ ಚಲಾಯಿಸಲು, ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು, ದ್ವೈಮಾಸಿಕ ಪತ್ರಿಕೆ ‘ಕನ್ನಡ ನುಡಿ’ಯನ್ನು ಉಚಿತವಾಗಿ ಪಡೆದುಕೊಳ್ಳಲು, ಗ್ರಂಥಭಂಡಾರವನ್ನು ಬಳಸಿಕೊಳ್ಳಲು ಸದಸ್ಯರಿಗೆ ಹಕ್ಕು ನೀಡಲಾಗಿದೆ. ಕನ್ನಡಪರ ಸಂಸ್ಥೆಗಳೂ ಪರಿಷತ್ತಿನ ಸದಸ್ಯ ಸಂಸ್ಥೆಗಳಾಗಬಹುದಾಗಿದೆ.
ನಿಯತಕಾಲಿಕೆಗಳು: ದ್ವೈಮಾಸಿಕ ಪತ್ರಿಕೆಯಾಗಿ ‘ಕನ್ನಡ ನುಡಿ’ ಪ್ರಕಟಗೊಳ್ಳುತ್ತಿದ್ದು, ಎಲ್ಲ ಸದಸ್ಯರಿಗೂ ಇದನ್ನು ಉಚಿತವಾಗಿ ಕಳುಹಿಸಲಾಗುತ್ತಿದೆ. ಪರಿಷತ್ತಿನ ಕಾರ್ಯ ಯೋಜನೆಗಳು, ಕಾರ್ಯಕ್ರಮಗಳು, ಜಿಲ್ಲಾ ಘಟಕಗಳ ಸುದ್ದಿಗಳು, ಗಣ್ಯವರೇಣ್ಯರ ಸಾದರ ಸ್ವೀಕಾರ, ನಾಡು ನುಡಿಗಳ ವಿಶಿಷ್ಟ ಪರಿಚಯ ಮುಂತಾದ ಅನೇಕ ಮಹತ್ವದ ಸಾಹಿತ್ಯ ಸಾಂಸ್ಕೃತಿಕ ಸವಿಯನ್ನು ‘ಕನ್ನಡ ನುಡ’ ಭಿತ್ತರಿಸುತ್ತಿದೆ.
‘ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ’ ಪರಿಷತ್ತಿನ ತ್ರೈಮಾಸಿಕವಾಗಿದೆ. ಕಾವ್ಯ,ಸಂಸ್ಕೃತಿ ಸಂಶೋಧನೆ ಇತ್ಯಾದಿ ವಿಷಯಗಳಲ್ಲಿ ಅಧ್ಯಯನಪೂರ್ಣ ಮೌಲಿಕ ಲೇಖನಗಳಿದ್ದು, ಚಂದಾದಾರರಿಗೆ ಕಳುಹಿಸಲಾಗುತ್ತಿದೆ.
ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳು: ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಪರಿಷತ್ತಿನ ಜಿಲ್ಲಾ ಘಟಕಗಳು, ತಾಲ್ಲೂಕು ಘಟಕಗಳು ಹಾಗೂ ಹೋಬಳಿ ಘಟಕಗಳು ಅಧಿಕೃತವಾಗಿ ಅಸ್ತಿತ್ವದಲ್ಲಿವೆ. ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ನಾಡಿನಾದ್ಯಂತ ಚಟುವಟಿಕೆ ನಡೆಸುತ್ತಿವೆ. ಸಮ್ಮೇಳನ, ಗೋಷ್ಠಿ, ಸ್ಪರ್ಧೆ, ಉಪನ್ಯಾಸ, ವಸಂತ ಸಾಹಿತ್ಯೋತ್ಸವ, ಸಾಹಿತ್ಯ ರಚನಾ ತರಬೇತಿ ಶಿಬಿರಗಳು, ಪರಿಷತ್ತಿನ ಸ್ಥಾಪನಾ ದಿನಾಚರಣೆ, ಪ್ರತಿಭಾ ಪುರಸ್ಕಾರ, ರಾಜ್ಯೋತ್ಸವ ಇತ್ಯಾದಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಕೆಲವು ಜಿಲ್ಲೆಗಳಲ್ಲಿ ನಿವೇಶನಗಳಿವೆ. ಜಿಲ್ಲಾ ಸಾಹಿತ್ಯ ಭವನಗಳು ಅನೇಕ ಕಡೆ ನಿರ್ಮಾಣವಾಗಿವೆ – ನಿರ್ಮಾಣಗೊಳ್ಳುತ್ತಲಿವೆ. ಜಿಲ್ಲಾ ಘಟಕಗಳ ವತಿಯಿಂದಲೂ ಪುಸ್ತಕ ಪ್ರಕಟಣೆಯಾಗುತ್ತಿವೆ.
ಗಡಿನಾಡ ಘಟಕಗಳು: ಪರಿಷತ್ತಿನ ಚಟುವಟಿಕೆ ಹೊರರಾಜ್ಯದಲ್ಲಿಯೂ ಹರಡಿದ್ದು ಅಲ್ಲಿ ವ್ಯವಸ್ಥಿತವಾಗಿ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಧಿಕೃತ ಗಡಿನಾಡ ಘಟಕಗಳನ್ನು ರಚಿಸಲಾಗಿದೆ. ಮಹಾರಾಷ್ಟ್ರ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ಅವು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ.
ಗ್ರಂಥಭಂಡಾರ: ಅತ್ಯಂತ ಅಪರೂಪವಾಗಿರುವ ಸುಮಾರು ೭೦ಸಾವಿರಕ್ಕೂ ಹೆಚ್ಚು ಅಮೂಲ್ಯ ಪುಸ್ತಕಗಳನ್ನು ಹೊಂದಿರುವ ಪರಿಷತ್ತಿನ ಸರಸ್ವತೀ ಭಂಡಾರವು ನಾಡಿನ ಪ್ರಮುಖ ಹಳೆಯ ಗ್ರಂಥಾಲಯಗಳಲ್ಲಿ ಒಂದು. ಪ್ರತ್ಯೇಕವಾಗಿರುವ ಸಂಶೋಧನಾ ವಿಭಾಗದಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ಅಮೂಲ್ಯ ಗ್ರಂಥಗಳನ್ನು ಪರಾಮರ್ಶನಕ್ಕಾಗಿ ಇರಿಸಿ ಸಾಹಿತ್ಯಾಸಕ್ತರ ಉಚಿತ ಅನುಕೂಲಕ್ಕಾಗಿ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿದಿನ ಅನೇಕ ಸಾಹಿತ್ಯಾಸಕ್ತರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ಧ್ವನಿಮುದ್ರಣ ಮತ್ತು ಸಾಕ್ಷ್ಯಚಿತ್ರ ಭಂಡಾರ,ವಸ್ತು ಸಂಗ್ರಹಾಲಯ: ಸಾಹಿತ್ಯ ಲೋಕದ ಗಣ್ಯರ ಅಮೂಲ್ಯ ಭಾಷಣಗಳು, ಕಲಾವಿದರ ಹಾಡುಗಳನ್ನು ಒಳಗೊಂಡ ಧ್ವನಿಮುದ್ರಣ ಭಂಡಾರ ಮತ್ತು ಪರಿಷತ್ತಿನ ಮತ್ತು ಕನ್ನಡ ಸಾಹಿತಿಗಳ ಹಾಗೂ ಜನಪದ ಕಲೆಗಳ ಪರಿಚಯ ನೀಡುವ ಸಾಕ್ಷ್ಯಚಿತ್ರ ಭಂಡಾರ ಪರಿಷತ್ತಿನ ಅಮೂಲ್ಯ ಆಸ್ತಿಯಾಗಿದೆ. ಅಪರೂಪವಾದಂತಹ ನಾಣ್ಯಗಳು, ಕೈಬರಹಗಳು, ತಾಮ್ರ ಫಲಕಗಳು, ಜಾನಪದ ವಸ್ತುಗಳು, ವಿಗ್ರಹಗಳು ಮೊದಲಾದವುಗಳನ್ನೊಳಗೊಂಡ ವಸ್ತುಸಂಗ್ರಹಾಲಯ ಪರಿಷತ್ತಿನಲ್ಲಿದ್ದು ವಿದ್ಯಾರ್ಥಿಗಳ ಮತ್ತು ಸಂಶೋಧಕರ ಆಸಕ್ತಿಕರ ಭೇಟಿಯ ತಾಣವಾಗಿದೆ.
ಪುಸ್ತಕ ಮಾರಾಟ ಮಳಿಗೆ/ಪುಸ್ತಕ ಸಂತೆ: ಪರಿಷತ್ತಿನಲ್ಲಿ ಪುಸ್ತಕ ಮಾರಾಟ ಮಳಿಗೆಯಲ್ಲಿ ಪರಿಷತ್ತು ಪ್ರಕಟಿಸುವ ಎಲ್ಲ ಪುಸ್ತಕಗಳು ಸೂಕ್ತ ರಿಯಾಯಿತಿ ದರದಲ್ಲಿ ದೊರೆಯುವಂತೆ ಏರ್ಪಾಟು ಮಾಡಲಾಗಿದೆ. ಇದಲ್ಲದೆ ಸಮ್ಮೇಳನಗಳ ಸಂದರ್ಭದಲ್ಲಿ ಇತರೆ ಲೇಖಕ ಪ್ರಕಾಶಕರ ಪುಸ್ತಕಗಳ ಮಾರಾಟಕ್ಕೆ ಪರಿಷತ್ತು ವ್ಯವಸ್ಥೆ ಕಲ್ಪಿಸುತ್ತಾ ಬಂದಿದೆ.
ಇದಲ್ಲದೆ ೨೦೦೪ ನವೆಂಬರ್ನಿಂದೀಚೆಗೆ ಲೇಖಕ ಪ್ರಕಾಶಕರ ಉತ್ತೇಜನಕ್ಕಾಗಿ ಪರಿಷತ್ತು ಪುಸ್ತಕ ಸಂತೆಯೆಂಬ ವಿನೂತನ ಕಾರ್ಯಕ್ರಮವನ್ನು ಕೂಡಾ ಹಲವಾರು ಬಾರಿ ನಡಿಸಿದೆ. ನಾಡಿನ ಪುಸ್ತಕ ಮಾರಾಟಗಾರರಿಗೆ ಉಚಿತವಾಗಿ ಪರಿಷತ್ತಿನ ಆವರಣದಲ್ಲಿ ಸ್ಥಳಾವಕಾಶ ನೀಡಿ ಕನ್ನಡ ಪುಸ್ತಕಗಳ ಮಾರಾಟಕ್ಕೆ ಅನುವುಮಾಡಿಕೊಟ್ಟಿದೆ. ಪುಸ್ತಕ ಮಾರಾಟದ ಜೊತೆಯಾಗಿಯೇ ಅಂಗಳದಲ್ಲಿಯೇ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸಲಾಗಿದೆ.
ಸಭಾಂಗಣ: ಪ್ರಾರಂಭದಲ್ಲಿ ಪರಿಷತ್ತನ್ನು ಕಟ್ಟಿ ಬೆಳೆಸಲು ನೆರವಾದ ಮೈಸೂರು ಮಹಾರಾಜ ಶ್ರೀ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ “ಶ್ರೀ ಕೃಷ್ಣರಾಜ ಪರಿಷನ್ಮಂದಿರ” ಸಭಾಂಗಣವಿದೆ. ಇಲ್ಲಿ ಸಭೆ, ಸಮಾರಂಭ, ನೃತ್ಯ, ನಾಟಕ ಇತ್ಯಾದಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ.
ಗೌರವ ಸದಸ್ಯತ್ವ: ಕನ್ನಡಕ್ಕಾಗಿ ಗಮನಾರ್ಹ ಸೇವೆ ಸಲ್ಲಿಸಿರುವ ಗಣ್ಯ ಸಾಹಿತಿಗಳಿಗೆ ಪರಿಷತ್ತಿನ ಅತ್ಯುಚ್ಚ ಮನ್ನಣೆಯಾದ‘ಗೌರವ ಸದಸ್ಯತ್ವ’ವನ್ನು ನೀಡಲಾಗುತ್ತಿದೆ.ಇದು ಫೆಲೋಷಿಪ್ ಮಾದರಿಯದು. ಪುರಸ್ಕೃತರ ಒಂದು ಪ್ರಾತಿನಿಧಿಕ ಕೃತಿಯನ್ನು ಮುದ್ರಿಸಿ ಸುಲಭ ಬೆಲೆಗೆ ಮಾರಲಾಗುತ್ತಿದೆ.
ದತ್ತಿ ಪ್ರಶಸ್ತಿಗಳು: ಕನ್ನಡ ನಾಡಿನ ಮಹನೀಯರು, ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತರು ಪರಿಷತ್ತಿನಲ್ಲಿ ಇರಿಸಿರುವ ದತ್ತಿನಿಧಿಗಳ ಮೂಲಕ ಆ ದತ್ತಿ ನಿಧಿಗಳ ಮೂಲೋದ್ದೇಶಕ್ಕೆ ಅನುಗುಣವಾಗಿ ವಿವಿಧ ರೀತಿಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಾಧಕರಿಗೆ ಪ್ರಶಸ್ತಿ ಗೌರವಗಳನ್ನು ನೀಡಿ ಸಂಮಾನಿಸಲಾಗುತ್ತಿದೆ ಮತ್ತು ಉತ್ತಮ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೇಂದ್ರ ಸಾಹಿತ್ಯ ಪರಿಷತ್ತಿನಲ್ಲಷ್ಟೇ ಅಲ್ಲದೆ ನಾಡಿನಾದ್ಯಂತ ನಡೆಸುತ್ತಿದೆ. ಈ ದತ್ತಿ ನಿಧಿ ಪ್ರಶಸ್ತಿಗಳಲ್ಲಿ ‘ನೃಪತುಂಗ’ ಪ್ರಶಸ್ತಿಯಂತಹ ಮಹತ್ವದ ಸಾಹಿತ್ಯಕ ಪ್ರಶಸ್ತಿಗಳೂ ಒಳಗೊಂಡಿರುವುದು ಮಹತ್ವದ ಸಂಗತಿಯಾಗಿದೆ.
ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು ಮತ್ತು ಇತರ ಮಹತ್ವದ ಕಾರ್ಯಕ್ರಮಗಳು: ಕನ್ನಡ ಬಾಷೆಯ ಬೆಳವಣಿಗೆ, ಕರ್ನಾಟಕ ಏಕೀಕರಣ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರಗತಿಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಒಂದು ಶತಮಾನಕ್ಕೂ ಹೆಚ್ಚು ಅವಧಿಯಲ್ಲಿ ಶ್ರೇಷ್ಠ ಮಹನೀಯರ ಅಧ್ಯಕ್ಷತೆಗಳ ನಡೆಸಿರುವ ಸಮ್ಮೇಳನಗಳ ಕೊಡುಗೆ ಚಾರಿತ್ರಿಕ ಮಹತ್ವವನ್ನು ಹೊಂದಿದ್ದಾಗಿದೆ. ಈ ಕಾರ್ಯಕ್ರಮಗಳೇ ಅಲ್ಲದೆ ಅನೇಕ ಸಾಹಿತ್ಯಕ, ಸಾಂಸ್ಕೃತಿಕ, ಚಾರಿತ್ರಿಕ ಮತ್ತು ವರ್ತಮಾನದ ಪ್ರಸ್ತುತೆಗಳಿಗೆ ಅನುಗುಣವಾದ ಅನೇಕ ಮಹತ್ವದ ಕಾರ್ಯಕ್ರಮಗಳನ್ನೂ ಸಹಾ ಪರಿಷತ್ತು ನಡೆಸಿಕೊಂಡು ಬಂದಿದೆ. ಪರಿಷತ್ತು ೨೦೧೬ರ ವರ್ಷದ ಅಕ್ಟೋಬರ್ ಮಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಅಖಿಲ ಭಾರತ ಹೊರನಾಡ ಕನ್ನಡಿಗರ ರಾಷ್ತ್ರೀ ಸಮಾವೇಶವನ್ನು ದೆಹಲಿಯಲ್ಲಿ ನಡೆಸಿದ್ದು ಈ ಕಾರ್ಯಕ್ರಮಗಳಿಗೆ ಮಹತ್ವದ ವಿಸ್ತ್ರುತೆಯನ್ನು ಪಡೆದುಕೊಂಡದ್ದಾಗಿದೆ. ಈ ವರ್ಷದಿಂದ ಕರ್ನಾಟಕ ಲೇಖಕಿಯರ ಸಂಘದ ಸಹಯೋಗದಲ್ಲಿ ಪ್ರಾರಂಭಗೊಂಡಿರುವ ಪ್ರತಿ ತಿಂಗಳೂ ತಪ್ಪದೆ ನಡೆಯುತ್ತಿರುವ ‘ಸಾಧಕರೊಡನೆ ಸಂವಾದ’ ಈ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ.
ಪರಿಷತ್ತನ್ನು ಕಟ್ಟಿ ಬೆಳೆಸಿದ ಮಹನೀಯರ ಆಶಯದಂತೆ ನಿಜವಾದ ಅರ್ಥದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇಂದು ಮಹತ್ವದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕೇಂದ್ರವಾಗುವ ನಿಟ್ಟಿನಲ್ಲಿ ಸಾಗಲು ಸಮಸ್ತ ಕನ್ನಡಿಗರ ಹಾಗೂ ಕರ್ನಾಟಕ ಸರ್ಕಾರದ ಹೃತ್ಪೂರ್ವಕ ಬೆಂಬಲ ನಿರಂತರವಾಗಿ ದೊರಕುತ್ತಿರುವುದು ಹರ್ಷದಾಯಕ ಸಂಗತಿಯಾಗಿದೆ.
Tag: Namma Parishattu