ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ನಮಗೆಲ್ಲರಿಗೂ ಮಾದರಿ: ನಾಡೋಜ ಡಾ.ಮಹೇಶ ಜೋಶಿ

ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ನಮಗೆಲ್ಲರಿಗೂ ಮಾದರಿ: ನಾಡೋಜ ಡಾ.ಮಹೇಶ ಜೋಶಿ

WhatsApp Image 2024-06-28 at 11.09.03 AM

ಬೆಂಗಳೂರು: ಬೆಂಗಳೂರು ನಗರವನ್ನು ನಿರ್ಮಿಸಿದ ನಾಡಪ್ರಭು ಕೆಂಪೇಗೌಡರು ಕೆರೆಗಳು ಮತ್ತು ಸಾಲುಮರಗಳಿಂದ ತಂಪಾದ ಹವೆ ಉಂಟಾಗುವಂತೆ ಅತ್ಯಂತ ಮಾದರಿಯಾಗಿ ಬೆಂಗಳೂರು ನಗರವನ್ನು ನಿರ್ಮಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಅಭಿಪ್ರಾಯ ಪಟ್ಟರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಯೋಜಿತವಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಸಾಮಂತ ದೊರೆಗಳಾಗಿದ್ದರೂ ವಿಜಯನಗರದ ರಾಜಧಾನಿ ಹಂಪಿಯ ಮಾದರಿಯನ್ನು ಕಲ್ಪಿಸಿದ ಕೊಂಡು ಕ್ರಿ.ಶ 1537ರಲ್ಲಿ ಬೆಂಗಳೂರು ನಗರವನ್ನು ಕೆಂಪೇಗೌಡರು ನಿರ್ಮಿಸಿದರು. ಅವರು ರೂಪಿಸಿದ ಕಾವಲು ಗೋಪುರಗಳು ನಗರಕ್ಕೆ ಇರಬೇಕಾದ ಮಿತಿಯನ್ನು ಸೂಚಿಸುತ್ತಿದ್ದವು. ಈ ಮಿತಿಯೊಳಗಿದ್ದರೆ ನಗರಕ್ಕೆ ಬೇಕಾದ ನೀರು, ಆಹಾರದ ವ್ಯವಸ್ಥೆಯನ್ನು ಒದಗಿಸಲು ಸಾಧ್ಯವೆಂದು ಅವರು ಅರಿತಿದ್ದರು. ಈ ಮಿತಿಯನ್ನು ಮೀರಿದ ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟ ನಾಡೋಜ ಡಾ.ಮಹೇಶ ಜೋಶಿಯವರು ಇದು ನಮ್ಮ ಜೀವನಕ್ಕೂ ಇರಬೇಕಾದ ಮಿತಿಯ ಸೂಚಕವಾಗಿದೆ ಎಂದರು. ಕೆಂಪೇಗೌಡರು ಕಲೆ, ಸಾಹಿತ್ಯದ ಪೋಷಕರಾಗದ್ದರು, ಮುಖ್ಯ ಕನ್ನಡ ಭಾಷೆಯ ಪ್ರೇಮಿಗಳಾಗಿದ್ದರು. ಈ ಕಾರಣದಿಂದಲೇ ಮುಂದೆ ಬೆಂಗಳೂರಿನಲ್ಲಿ ಕಲೆ, ಸಂಸ್ಕೃತಿ, ಶಿಕ್ಷಣ ಸಂಸ್ಥೆಗಳು ಬೆಳೆಯಲು ಸಾಧ್ಯವಾಯಿತು. ಇಂದಿಗೂ ಹೊಸ ನಗರವನ್ನು ನಿರ್ಮಿಸುವಾಗ ಬೆಂಗಳೂರನ್ನು ಮಾದರಿಯಾಗಿ ನೋಡುತ್ತಾರೆ ಎನ್ನುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವೆಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದರು.

ಶ್ರೀಸಾಮನ್ಯನೊಬ್ಬ ರಾಜ್ಯದ ದೊರೆಯಾಗಬಹುದು ಎಂದು ತೋರಿಸಿ ಕೊಟ್ಟ ಮೇರು ಉದಾಹರಣೆ ಕೆಂಪೇಗೌಡರದು ಎಂದು ಹೇಳಿದ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಅವರು ದೊ‍ಡ್ಡಪೇಟೆ, ಚಿಕ್ಕಪೇಟೆ, ನಗರ್ತಪೇಟೆ, ಬಳೇಪೇಟೆ, ಅಕ್ಕಿಪೇಟೆ ಹೀಗೆ ವೃತ್ತಿಆಧರಿತ ಬಡಾವಣೆಗಳನ್ನು ರೂಪಿಸಿ ಆರ್ಥಿಕ ವ್ಯವಸ್ಥೆಯಲ್ಲಿ ಸ್ಥಿರತೆ ತಂದರು,ಸಾಮಾಜಿಕ ನ್ಯಾಯವನ್ನೂ ಸಾಧಿಸಿದ ಅವರ ಮಾದರಿಯನ್ನು ಮುಂದೆ ಆಧುನಿಕ ಕರ್ನಾಟಕದಲ್ಲಿ ವಿಶ್ವ ವರ್ಕ್ ಶೆಡ್ ಹೆಸರಿನಲ್ಲಿ ಅಳವಡಿಸಿ ಕೊಳ್ಳಲಾಗಿತ್ತು ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು ಅವರು ಕೃಷಿ ಮತ್ತು ನೀರಾವರಿಗೆ ವ್ಯವಸ್ಥೆಯಲ್ಲಿ ಕೆಂಪೇಗೌಡರು ನೀಡಿದ ಕೊಡುಗೆಯನ್ನು ಸ್ಮರಿಸಿ ಕೊಂಡು ಪ್ರತಿಸಲ ಬೆಂಗಳೂರು ಅಂತರರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಇಟ್ಟಿರುವ ಅವರ ಹೆಸರಿನ ಉದ್ಘೋಷಣೆಯನ್ನು ಕೇಳಿದಾಗ ರೋಮಾಂಚನವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೌಗೌಡರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಲಾಯಿತು

ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)