ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ

ಎಸ್. ವಿ ಪರಮೇಶ್ವರ ಭಟ್ಟ

‘ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ ನೀ ಬಂದು ನಿಂತಿಲ್ಲಿ ದೀಪ ಹಚ್ಚ,
ನಲ್ಲ ನೀ ಬಂದಂದು ಕಣ್ಣಾರೆ ಕಂಡದು ಮನೆಯೆಲ್ಲ ಹೊಳೆದಂತೆ ದೀಪ ಹಚ್ಚ’

ಈ ಗೀತೆಯನ್ನು ಅದೆಷ್ಟು ಸಲ ಕೇಳಿದ್ದರೂ ಪ್ರತಿಬಾರಿ ಕೇಳುವಾಗಲೂ ಹೊಸದಾಗಿ ದೀಪ ಹಚ್ಚಿದಂತೆ ಹೃದ್ಭಾವ ತುಂಬುತ್ತದೆ.  ಈ ಪ್ರೀತಿಯ ಹಾಡಿನಿಂದ ನನಗೆ ಎಸ್. ವಿ. ಪರಮೇಶ್ವರ ಭಟ್ಟರೆಂದರೆ ಕೂಡ ಹೃದಯಲ್ಲಿ ಪ್ರೀತಿ.  ಇದೇ ಗೌರವ ಮೈಸೂರು ಅನಂತ ಸ್ವಾಮಿಗಳಿಗೆ ಮತ್ತು ಅದನ್ನು ಆತ್ಮೀಯವಾಗಿ ಹಾಡಿರುವ ಸುನೀತ ಅನಂತಸ್ವಾಮಿ ಅವರಿಗೆ ಕೂಡಾ ಸಲ್ಲುತ್ತದೆ.  ನಾವು ಪೂಜಿಸುವ ದೇವರುಗಳನ್ನೆಲ್ಲ ಕಲ್ಲಾಗಿಸಿಬಿಡುತ್ತೇವೆ.  ನಾವು ಯಾವುದನ್ನು ಪ್ರೀತಿ ಎನ್ನುತ್ತೇವೋ ಅದು ತಟಸ್ಥವಾಗುವ ಅಪಾಯವಿದೆ.  ಎಸ್. ವಿ. ಪರಮೇಶ್ವರ ಭಟ್ಟರ ಒಂದು ರಚನೆಯ ಬಗ್ಗೆ ನನ್ನ ಪ್ರೀತಿ ಏನೇ ಇದ್ದರೂ, ಅವರ ಅಗಾಧತೆಯ ಆಳಕ್ಕೆ ಇಳಿದಷ್ಟೂ  ಇಂತಹ ಹಲವು ಕೃತಿಗಳನ್ನು ಮೀರಿದ ಸಹಸ್ರ ಸಹಸ್ರ ಪಾಲಿನ ಕೃತಿ ಶಕ್ತಿ, ದಿವ್ಯ ತೇಜದ ಬದುಕಿನ ಶಕ್ತಿಯನ್ನು ಅರಿಯಬಹುದಾಗಿದೆ.

‘ಕನ್ನಡದ ಕಾಳಿದಾಸ’ರೆಂದೇ ಹೆಸರು ಮಾಡಿರುವ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟರು, ಕನ್ನಡ ನವೋದಯ ಕಾಲದ ಪ್ರಮುಖ ವಿದ್ವಾಂಸರೂ, ಕವಿಗಳೂ ಆಗಿ, ಮೆಚ್ಚಿನ ಪ್ರಾಧ್ಯಾಪಕರಾಗಿ ಪ್ರಾಜ್ಞ ಜನ ಮನದಲ್ಲಿ ನೆಲೆಸಿದ್ದಾರೆ.  ದಕ್ಷಿಣ ಕನ್ನಡ ಜಿಲ್ಲೆಯ ಮೂಲದವರಾದ ಪರಮೇಶ್ವರ ಭಟ್ಟರ ಹಿರಿಯರು ಮಲೆನಾಡಿನ ತೀರ್ಥಹಳ್ಳಿಯ ಸೆರಗಿನಲ್ಲಿ ನೆಲೆಸಿದ್ದವರು.  ಸದಾಶಿವರಾಯರು ಮತ್ತು ಲಕ್ಷಮ್ಮನವರ ಕುಲಪುತ್ರರಾಗಿ ಪರಮೇಶ್ವರ ಭಟ್ಟರು 1914ರ ಫೆಬ್ರವರಿ 8ರಂದು ಮಾಳೂರಿನಲ್ಲಿ ಜನಿಸಿದರು.  ಚಿಕ್ಕವಯಸ್ಸಿನಲ್ಲೇ ಓದು, ಯಕ್ಷಗಾನ, ನಾಟಕಗಳಲ್ಲಿ ಆಸಕ್ತಿಯಿದ್ದು, ತಂದೆ ತಾಯಿಗಳಲ್ಲಿದ್ದ ಅದೇ ತೆರನಾದ ಕಲಾಪ್ರೀತಿಯಿಂದ ಪುಟ್ಟ ಹುಡುಗನಾಗಿದ್ದಾಗಲೇ ಬಾಲಕೃಷ್ಣ, ಉತ್ತರೆಯ ವೇಷಗಳನ್ನು ಧರಿಸಿದ್ದರು.

ಶಾಲೆಯಲ್ಲಿ ಕಮಕೋಡು ನರಸಿಂಹ ಶಾಸ್ತ್ರಿಗಳು, ಕಾಲೇಜಿನಲ್ಲಿ ಎ. ಆರ್. ಕೃಷ್ಣಶಾಸ್ತ್ರಿಗಳು, ವಿ.ಸೀತಾರಾಮಯ್ಯ, ಕೆ. ವೆಂಕಟರಾಮಪ್ಪ, ಡಿ. ವಿ. ಶೇಷಗಿರಿರಾಯರು, ಮೊದಲಾದವರು ಭಟ್ಟರಲ್ಲಿ ಸಾಹಿತ್ಯಾಭಿರುಚಿ ಮೈಗೂಡಲು ಒತ್ತಾಸೆಗಳಾದರು.   ಅಂದಿನ ದಿನಗಳಲ್ಲಿ ‘ಸಿರಿಗನ್ನಡಿಗರ ಡಿಂಗರಿಗ’ ಎಂಬ ಕಾವ್ಯನಾಮವನ್ನು ಹೊತ್ತು ಪ್ರಕಟವಾಗುತ್ತಿದ್ದ ಅವರ ಬರಹಗಳನ್ನು ಕಂಡು ಮೆಚ್ಚಿದ ಅ.ನ. ಕೃಷ್ಣರಾಯರು, ಒಮ್ಮೆ ಅವರನ್ನು ಭೇಟಿಯಾದಾಗ “ಏನು ಭಟ್ಟರೆ, ಬಿರುದು ಅದ್ಭುತವಾಗಿ ಗಡಗಡಿಸುತ್ತಿದೆಯೆಲ್ಲ” ಎಂದು ಹಾಸ್ಯ ಮಾಡಿದಾಗ, ಭಟ್ಟರು ಆ ಕಾವ್ಯನಾಮವನ್ನು ಕೈಬಿಟ್ಟರಂತೆ!

ಬಿ. ಎ ತರಗತಿಗಳಲ್ಲಿ ಓದುತ್ತಿದ್ದಾಗ ಎಚ್. ಎಂ. ಶಂಕರನಾರಾಯಣ ರಾಯರು ಮತ್ತು ಜಿ. ವೆಂಕಟಸುಬ್ಬಯ್ಯನವರೂ ಇವರ ಸಹಪಾಠಿಗಳಾಗಿದ್ದರು.  ಬಿ.ಎಂ.ಶ್ರೀ ಮತ್ತು ಟಿ. ಎಸ್. ವೆಂಕಣ್ಣಯ್ಯ ಹಿರಿಯ ಪ್ರಾಧ್ಯಾಪಕರು.  ಎಂ.ಎ ತರಗತಿಗೆ ಬಂದಾಗ ತೀ.ನಂ. ಶ್ರೀ ಮತ್ತು ಡಿ. ಎಲ್. ನರಸಿಂಹಾಚಾರ್ಯರು ಗುರುವೃಂದದಲ್ಲಿ ಸೇರಿದರು.  ಕುವೆಂಪು ಅವರ ಪಾಠ ತರಗತಿಯಲ್ಲಿ ಕೇಳಲಾಗದಿದ್ದರೂ ತರಗತಿಯ ಆಚೆ ಅವರ ಹಿಂದೆ ಹಿಂದೆಯೇ ಇದ್ದರು.  ಅಂದಿನ ದಿನಗಳಲ್ಲಿ ರಾಮಾಯಣ ದರ್ಶನಂ ರಚಿಸುತ್ತಿದ್ದ ಕುವೆಂಪು ಅವರು, ಬರೆದು ಮುಗಿಸಿದ ಭಾಗಗಳನ್ನು ಭಟ್ಟರನ್ನು ಕೂರಿಸಿಕೊಂಡು ಓದಿ ಹೇಳುತ್ತಿದ್ದರಂತೆ.  ನಾ. ಕಸ್ತೂರಿ ಅವರೊಂದಿಗೆ ಸೇರಿಕೊಂಡು ಭಟ್ಟರು ಕುವೆಂಪು ಅವರ ‘ರಕ್ತಾಕ್ಷಿ’ ನಾಟಕದಲ್ಲಿ ಕೂಡ ಅಭಿನಯಿಸಿದ್ದರು.

ಮೈಸೂರಿನ ಮಹಾರಾಣಿ ಕಾಲೇಜು, ಶಿವಮೊಗ್ಗೆಯ ಕಾಲೇಜು, ಮೈಸೂರು ಮಾಹಾರಾಜ ಕಾಲೇಜುಗಳಲ್ಲಿ ತಮ್ಮ ವಿದ್ಯಾರ್ಥಿಗಳಿಂದ ವಿದ್ವಾಂಸ – ವಿನೋದಪ್ರಿಯ ಪ್ರಾಧ್ಯಾಪಕರೆನಿಸಿಕೊಂಡು ಪರಮೇಶ್ವರ ಭಟ್ಟರು ಅಪಾರ ಜನಪ್ರಿಯತೆ ಪಡೆದಿದ್ದರು.  1960ರಲ್ಲಿ ಮಾನಸಗಂಗೋತ್ರಿ ಜನ್ಮತಾಳಿದಾಗ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪರಮೇಶ್ವರಭಟ್ಟರು ಪ್ರವಾಚಕರಾಗಿ ಹಲವು ಕಾಲ ಕೆಲಸ ಮಾಡಿದರು.  ನಂತರ ಮಂಗಳೂರಿನಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಪ್ರಾಧ್ಯಾಪಕರು ಮತ್ತು ನಿರ್ದೇಶಕರಾಗಿ ಪರಮೇಶ್ವರ ಭಟ್ಟರು ನೇಮಿಸಲ್ಪಟ್ಟರು.  ಆ ಕೇಂದ್ರಕ್ಕೆ ಮಂಗಳ ಗಂಗೋತ್ರಿ ಎಂದು ನಾಮಕರಣ ಮಾಡಿ, ಅದರ ಸಮಗ್ರ ವಿಕಾಸದ ಶಿಲ್ಪಿಯೆನಿಸಿಕೊಂಡರು.  ಮಂಗಳೂರಿನಲ್ಲಿ ಅವರು ಕಳೆದ ದಿನಗಳು ಬಂಗಾರದ ದಿನಗಳು.  ಮಂಗಳೂರಿನಲ್ಲಿ ಅವರ ಜನಪ್ರಿಯತೆ ಎಷ್ಟಿತ್ತೆಂದರೆ ಅವರನ್ನು ಬಿಟ್ಟು ಜಿಲ್ಲೆಯ ಯಾವೊಂದು ಸಾಂಸ್ಕೃತಿಕ ಉತ್ಸವ ಚಟುವಟಿಕೆಗಳೂ ನಡೆಯುತ್ತಿರಲಿಲ್ಲ.  ಅವರ ವಿನೋದ ಪ್ರಿಯತೆ, ಸರಸ ಮಾತುಗಾರಿಕೆಗಳಿಂದ, ಒಳ್ಳೆಯ ವಾಗ್ಮಿ ಎಂಬ ಕೀರ್ತಿ ಹಬ್ಬಿತ್ತು.  ಸ್ನಾತಕೋತ್ತರ ತರಗತಿಗಳೇ ಇರಲಿ, ಕಾವ್ಯ ಕೃತಿಗಳ ಸೊಗಸನ್ನು ಹಾಸ್ಯ ಪರಿಲೇಪನದೊಂದಿಗೆ ವರ್ಣಿಸಿ ಶಿಷ್ಯಗಣದ ಹೃದಯ ಸೂರೆಗೊಂಡರು.  ಗುರು ಪರಂಪರೆಗೆ ಗೌರವ ತಂದುಕೊಟ್ಟ ಶ್ರೇಷ್ಠ ಪ್ರಾಧ್ಯಾಪಕರುಗಳ ಸಾಲಿನಲ್ಲಿ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟರು ವಿರಾಜಿಸಿದರು.

ಎಸ್. ವಿ. ಪರಮೇಶ್ವರ ಭಟ್ಟರು  ಕನ್ನಡ ನವೋದಯದ ಕಾಲದ ಬಹುಶ್ರುತ ವಿದ್ವಾಂಸ ಬರಹಗಾರರು, ಕವಿತೆಗಳು, ಭಾವಗೀತೆ, ವಚನ, ಮುಕ್ತಕಗಳೇ ಮೊದಲಾಗಿ ಸಾವಿರಾರು ಸಂಖ್ಯೆಯ ಸೃಜನಶೀಲ ಕಾವ್ಯಗಳನ್ನು ಸೃಷ್ಟಿಸಿದರಲ್ಲದೆ, ಸಂಸ್ಕೃತ ಮಹಾಕವಿಗಳ ಕಾವ್ಯ, ನಾಟಕ, ಗೀತೆ, ಮುಕ್ತಕಗಳನೇಕವನ್ನು  ಅನುವಾದಗಳಲ್ಲಿ ತಂದು ಮರುಸೃಷ್ಟಿ ಮಾಡಿದ್ದಾರೆ.  ಹಲವು ಮಹಾಸಂಪುಟಗಳಲ್ಲಿ ಬಂದ ಅವರ ಅನುವಾದ ಸಾಹಿತ್ಯವು ವಿಸ್ಮಯ ಹುಟ್ಟಿಸುವಂತಿದೆ.  ಅವರ ವಿಮರ್ಶೆ, ಉಪನ್ಯಾಸಗಳು, ಪ್ರಬಂಧಗಳು, ಮುನ್ನುಡಿಗಳು, ಗ್ರಂಥ ಸಂಪಾದನೆ, ಸ್ವಂತ ಸೃಷ್ಟಿಯ ಗಾದೆಗಳು ಒಗಟುಗಳು ಎಲ್ಲವೂ ಸೇರಿ, ಪ್ರಯೋಗ ವೈವಿಧ್ಯವನ್ನು ತೋರುತ್ತವೆ.

‘ರಾಗಿಣಿ’, ‘ಗಗನ ಚುಕ್ಕಿ’, ‘ಅಂಚೆಯಪೆಟ್ಟಿಗೆ’, ‘ಕೃಷ್ಣ ಮೇಘ’, ‘ಸಂಜೆ ಮಲ್ಲಿಗೆ’ ಮೊದಲಾದವು ಅವರ ಕವನ ಸಂಗ್ರಹಗಳು.  ‘ಮಾಚಯ್ಯ’, ‘ಜಹನಾರ’ ನೀಳ್ಗವನಗಳು.   ‘ಚಂದ್ರವೀಧಿ’, ‘ಇಂದ್ರಚಾಪ’, ‘ತುಂಬೆಹೂ’, ‘ಚಿತ್ರಕಥೆ’ ಮೊದಲಾದವು ಮುಕ್ತಕ ಸಂಗ್ರಹಗಳು.   ‘ಉಪ್ಪುಕಡಲು’, ‘ಪಾಮರ’, ‘ಉಂಬರ’ ಇವು ವಚನ ಸಂಕಲನಗಳು – ಈ ಎಲ್ಲ ಕೃತಿಗಳಲ್ಲೂ ಭಟ್ಟರ ಪ್ರಯೋಗಶೀಲ ಪ್ರವೃತ್ತಿ ಎದ್ದು ಕಾಣುವಂಥದ್ದು.

ಪರಮೇಶ್ವರ ಭಟ್ಟರ ಪ್ರಕೃತಿ ಮತ್ತು ಪ್ರಣಯ ಗೀತಗಳು ಪದಲಾಲಿತ್ಯ, ಭಾವ ಸಂಯೋಜನೆಗಳಿಂದ ನಮ್ಮನ್ನು ಸೆರೆಹಿಡಿಯುತ್ತವೆ.  ಅಲ್ಲಿ ಕನಸುಗಳು ತೇಲಾಡುತ್ತವೆ.  ‘ತಿಳಿ ಮುಗಿಲ ತೊಟ್ಟಿಲಲಿ, ಮಲಗಿರುವ ಚಂದಿರನ ಗಾಳಿ ಜೋಗುಳ ಹಾಡಿ ತೂಗುವ ಹಾಗೆ’, ‘ಗರಿಮುದುರಿ ಮಲಗಿದ್ದ  ಹಕ್ಕಿ ಗೂಡುಗಳಲ್ಲಿ ಇರುಳು ಹೊಂಗನಸೂಡಿ ಸಾಗುವ ಹಾಗೆ’, ಪ್ರತಿಮಾ ರೂಪದ ಚಿತ್ರಗಳು ಅಲ್ಲಿ ಸಿಗುತ್ತವೆ.

‘ನೂರು ವರುಷಗಳಲ್ಲಿ, ಒಮ್ಮೆ ಸುಲಿದೊಂದಳಿಯ ಸಖ ಸಂಗ ಸಾಕು’ ಎಂಬ ಧನ್ಯೋಸ್ಮಿ ಭಾವನೆಯನ್ನು ಕವಿ ತಳೆಯುತ್ತಾರೆ.  ‘ನೌಕಾ ಕ್ರೀಡನವೆಳೆಸಿದವಾಗಲೆ ತುಂಗೆಯ ಶೀತಲ ವೇಳೆಯಲಿ ನಲಿದೆವು ಒಲಿದೆವು ಆನಂದಿಸಿದೆವು ರಾಸಕ್ರೀಡೆಯ ಲೀಲೆಯಲಿ’ ಮುಂತಾದ ‘ಭಾವಗೀತೆ’ಯ ಸಾಲುಗಳಲ್ಲಿ ಪ್ರಕೃತಿ ಪ್ರಣಯಗಳ ಸಂಗಮದಲ್ಲಿ ರಾಧಾಕೃಷ್ಣರ ಸಮಾಗಮದ ಸಮರ್ಪಣ ಭಾವವಿದ್ದರೆ, ದಾಂಪತ್ಯ ಜೀವನ ಗೀತಗಳಲ್ಲಿ ನೋವುಂಡು ನಲಿದ ಸಮರಸಭಾವಗಳು ಮೈದಳೆಯುತ್ತವೆ.

‘ಹಗಲಿನುದ್ದಕ್ಕೂ ಬಿಸಿಲ ಬೇಗೆಯೇ ಇದ್ದರೇನು ಹೇ ಸಖಿ, ಸಂಜೆಯ ಹೊತ್ತಿಗೆ ಕಡಲ ಗಾಳಿಗೆ ಮೈಯನ್ನೊಡ್ಡುವ ಸುಖವ ನೆನೆಯುತ, ನಾ ಸುಖಿ’ ಎಂದು ಸಹಿಷ್ಣುಶೀಲ ಪ್ರವೃತ್ತಿಯನ್ನು ಕವಿ ಬೆಳೆಸಿಕೊಳ್ಳುತ್ತಾರೆ.  ಒಂದೊಂದು ಕಾಲದಲ್ಲಿ ‘ಒಂದೊಂದು ರೀತಿಯಲ್ಲಿ, ಒಂದೊಂದು ಸುಖವಿಹುದು, ದುಃಖವಿಹುದು;  ಅದರದರಕಾಲದಲ್ಲಿ ಸುಖ ದುಃಖಗಳ ಸವಿದ ಬಾಳು ಹಸನಾಗಿಪುದೆ ಸೃಷ್ಟಿಯೊಸಗೆ’ ಎಂಬ ತಾತ್ವಿಕ ನೆಲೆಗೆ ಕವಿ ತಲುಪುತ್ತಾರೆ.

ಪರಮೇಶ್ವರ ಭಟ್ಟರು 1965 ಮತ್ತು 66ರಲ್ಲಿ ಪ್ರಕಟಿಸಿದ ಮುಕ್ತಕ ಸಂಗ್ರಹಗಳು ಇಂದ್ರಚಾಪ ಮತ್ತು ಚಂದ್ರವೀಧಿ, ಇವು ಮುಕ್ತಕ ಸಾಹಿತ್ಯಕ್ಕೆ ಅವರ ಅಪೂರ್ವ ಕೊಡುಗೆಗಳು.  ಇವುಗಳಲ್ಲೊಂದೊಂದರಲ್ಲೂ 700 ಮುಕ್ತಕಗಳಿವೆ.  ಇವು ಕನ್ನಡದ ಗಾಥಾಸಪ್ತಶತಿಗಳೆಂದು  ಪ್ರಸಿದ್ಧವಾಗಿವೆ.  ಇವುಗಳ ಕೆಲವು ತುಣುಕುಗಳನ್ನು ನಾವಿಲ್ಲಿ ನೋಡಬಹುದು.

ಚಂದ್ರವೀಧಿ –

 ಬಳೆಯಿಲ್ಲ ಕೈಯೊಳು, ಹೂವಿಲ್ಲ ಮುಡಿಯೊಳು

ಕುಂಕುಮವಿಲ್ಲ ಹಣೆಯೊಳು ಚೆಲುವಿಲ್ಲ ತನುವೊಳು

ಗೆಲುವಿಲ್ಲ ಮನದೊಳು

ಓದಿದ ನಮ್ಮ ಹೆಣ್ಣಿವಳು

ಇಂದ್ರಚಾಪ –

ಕಾಫಿಗೆ ಸಕ್ಕರೆ ಹೆಚ್ಚಾಯಿತೆಂದೆನು

ಅಷ್ಟಕ್ಕೆ ಇಷ್ಟೇಕೆ ಸಿಟ್ಟೆ

ನಾಲಗೆ ಸಿಹಿಯಾಯಿತಾದರೂ ಮನವನು

ಕಹಿ ಮಾಡಿಬಿಟ್ಟೆ

ಮೇಲಕ್ಕೆ ಹತ್ತಿರಿ, ಮುಂದಕೆ ಬನ್ನಿರಿ

ಎಂದು ಕಂಡಕ್ಟರು ಕರೆಯೆ

ಉಳಿದೆಲ್ಲ ಕಡೆಯೊಳು ಹಿಂದಕೆ ತಳ್ಳಿಸಿ

ಕೊಂಡವನಾನಂದಕೆ ಎಣೆಯಿದೆಯೇ!

ಭಟ್ಟರು ರಚಿಸಿದ ‘ಸುರಗಿನ ಸುರಹೊನ್ನೆ’ಯಲಿ ಏಳುನೂರು ತ್ರಿಪದಿಗಳೂ ‘ತುಂಬೆಹೂ’ನಲ್ಲಿ ಏಳುನೂರು ಎಳೆಗಳೂ ಬಿಡಿಮುತ್ತುಗಳಂತೆ ಶೋಭಿಸುತ್ತವೆ.

‘ಜ್ಯೋತಿಗೆ ಬೆನ್ನಾಗಿ ಕೂತುಕೊಂಡರೆ, ನೀನು;

ಜ್ಯೋತಿಯ ಬೆಳಕು ಸುತ್ತಲೂ ಇದ್ದರು

ಜ್ಯೋತಿ ಕಾಣುವುದೇ ಸರಸಿಯೇ’

ಎಂಬ ತ್ರಿಪದಿಯಲ್ಲಾಗಲಿ, ‘ಕರೆವಾಗ ಹಿತವಾಗಿ ಕೆರೆದ ಮೇಲುರಿಯುವ ತುರಿಯ ಹಾಗಿಹುದು ಜಗವಿದು’ ಎಂಬ ಎಳೆಯಲ್ಲಾಗಲಿ, ಲೋಕಾನುಭವದ ಮಾತುಗಳು, ಲೋಕಜೀವನದ ಸಂಕೀರ್ಣತೆಗೆ ಕನ್ನಡಿ ಹಿಡಿಯುತ್ತವೆ.

ಎಸ್ ವಿ  ಪರಮೇಶ್ವರ ಭಟ್ಟರು ವಚನಗಳನ್ನು ಸಾವಿರಾರು ಸಂಖ್ಯೆಯಲ್ಲಿ ಬರೆದು ಸೃಷ್ಟಿಸಿ ವಚನಬ್ರಹ್ಮರೆಂದು ಕರೆಸಿಕೊಂಡರು.  ಅವರ ಮುಕ್ತಕ ಸಾಹಿತ್ಯದಲ್ಲಿರುವಂತೆಯೇ, ಇಲ್ಲಿಯೂ ಕೂಡ ಸಮಕಾಲೀನ ಬದುಕಿನ, ಸಮಷ್ಟಿ ಜೀವನದ ವಿವಿಧ ಅನುಭವಗಳಿಗೆ ರೂಪ ಕೊಟ್ಟಿದ್ದಾರೆ.  ಪಡುವಣಕಡಲ ಸೆರಗಿನಲ್ಲಿ ಕೆಲವು ಕಾಲ ನೆಲೆಸಿದ ಪರಮೇಶ್ವರ ಭಟ್ಟರಿಗೆ ‘ಉಪ್ಪುಕಡಲು’ ಆತ್ಮಾವಲೋಕನ, ಜಿಜ್ಞಾಸೆಗಳಿಗೆ ಗ್ರಾಸ ಒದಗಿಸಿತು.  ಕಡಲಿನ ಅಗಾಧತೆಯ ಮುಂದೆ ಮನುಷ್ಯತನದ ಇತಿಮಿತಿಗಳು ಗೋಚರವಾದವು.  ಅದರ ಫಲವಾಗಿ ‘ಉಪ್ಪುಕಡಲು’, ‘ಪಾಮರ’, ‘ಉಂಬರ’ ಮೊದಲಾದ ವಚನ ಸಂಕಲನಗಳು ಅವರಿಂದ ಸೃಷ್ಟಿಯಾದವು.

ವಿದ್ಯಾರ್ಥಿಯಾಗಿದ್ದಾಗ ವರ್ಡ್ಸ್ ವರ್ತ್ ಕವಿಯ ಮೈಕೇಲ್ (ಮಾಚಯ್ಯ) ಕೃತಿಯಿಂದ ತೊಡಗಿದ ಅವರ ಅನುವಾದ ಕಾರ್ಯ ವಿರಾಮವಿಲ್ಲದೆ ಅವರ ವೃದ್ಧಾಪ್ಯದವರೆಗೂ ನಿರಂತರವಾಗಿ ಮುಂದುವರೆಯಿತು, ಅದನ್ನು ತಪಸ್ಸಾಗಿಸಿಕೊಂಡದ್ದು ಅವರ ಸಾಧನೆಯೆನ್ನಬೇಕು.  ಕಾಲಕಾಲಕ್ಕೆ ಸಂಸ್ಕೃತ ಸಾಹಿತ್ಯ ಮಹಾನದಿಯಿಂದ, ಸಾರವತ್ತಾದ ನೀರನ್ನು ಬೊಗಸೆ ಬೊಗಸೆಯಾಗಿ ಮೊಗೆದು ಕನ್ನಡ ತೋಟಕ್ಕೆ ಹಾಯಿಸಿ ಫಲಭರಿತ ತೆಂಗು ಕೌಂಗುಗಳನ್ನು ಬೆಳೆಸಿದ್ದಾರೆ.  ಕಾಳಿದಾಸ, ಭಾಸ, ಭವಭೂತಿ, ಶ್ರೀಹರ್ಷ, ಅಶ್ವಘೋಷ, ಹಾಲ, ಅಮರು, ಜಯದೇವ ಮೊದಲಾದ ಅತಿರಥ ಮಹಾರಥರೆಲ್ಲರೂ ಕನ್ನಡದಲ್ಲಿ ಸಮಗ್ರವಾಗಿ ಪರಿಚಯವಾಗುವಂತೆ ಭಟ್ಟರು ಮಾಡಿರುವ  ಉಪಕಾರವನ್ನು ಮರೆಯುವಂತಿಲ್ಲ.  ಇಷ್ಟೊಂದು ಸಮಗ್ರವಾಗಿ ಕನ್ನಡವಿರಲಿ, ಇನ್ಯಾವುದೇ ಭಾಷೆಯಲ್ಲಿ ಕೂಡಾ ಇಷ್ಟೊಂದು ಸುದೀರ್ಘತೆಯ ಸಂಸ್ಕೃತ ಅನುವಾದದ ಕೆಲಸ ನಡೆದಿಲ್ಲ ಎಂಬುದು ಭಟ್ಟರ ಸಾಧನೆಯ ಅಗಾಧತೆಯನ್ನು ಬಿಂಬಿಸುತ್ತದೆ.

ಕಾಳಿದಾಸನ ಮೇಘದೂತ, ಋತುಸಂಹಾರ, ರಘುವಂಶ, ಕುಮಾರ ಸಂಭವಗಳಂಥ ಕಾವ್ಯಗಳು ಮತ್ತು ಶಾಕುಂತಲ, ವಿಕ್ರಮೋರ್ವಶೀಯ, ಮಾಳವೀಕಾಗ್ನಿಮಿತ್ರ, ಭಾಸನ ಪ್ರತಿಮಾ, ಊರು ಭಂಗ, ಮೊದಲಾದ ನಾಟಕಗಳು  ಪರಮೇಶ್ವರ ಭಟ್ಟರ ಪಾಂಡಿತ್ಯ ವಿದ್ವತ್ತುಗಳೊಂದಿಗೆ, ಸ್ವಂತ ಕವಿತಾ ಪ್ರತಿಭೆಯನ್ನೂ ಪರಿಚಯ ಮಾಡಿಕೊಡುತ್ತವೆ.    ಮೂಲ ಶಾಕುಂತಲದ “ತವಾಸ್ಮಿ ಗೀತರಾಗೇಣ ಹಾರಿಣಾ ಪ್ರಸಭಂ ಹೃತಃ ಏಷ ರಾಜೇವ ದುಷ್ಯಂತ ಸ್ಯಾರಂಗೇಣಾತಿರಂ ಹಸಾ”  ಎಂಬ ಸಾಲುಗಳು ಕವಿ ಪರಮೇಶ್ವರ ಭಟ್ಟರ ಮಾತಿನಲ್ಲಿ ಅಡಕವಾಗಿ ಮೂಡಿ ಬಂದಿರುವ ರೀತಿ ಇದು: ‘ಮನ ಸೆಳೆಯುವ ಈ ರಾಗದೆ ಹೃತನಾದೆನು ಭರದೆ!  ಅತಿವೇಗದೆ ಸಾರಂಗದೆ ದೃಷ್ಯಂತನ ತೆರೆದೇ!’ ಹದವಾಗಿ ಬೆಂದ ಪಕ್ವಾನ್ನದ ರುಚಿ ನೋಡಲು, ಇಂತಹ ಒಂದಗುಳು ಸಾಕಲ್ಲವೆ?

‘ಅಕ್ಕಮಹಾದೇವಿ’, ‘ಭಾವಗೀತೆ’, ‘ಸೀಳುನೋಟ’ ಇವು ಪರಮೇಶ್ವರ ಭಟ್ಟರ ಪ್ರಮುಖ ವಿಮರ್ಶಾ ಕೃತಿಗಳು.  ಅವರು ನಿವೃತ್ತರಾದ ನಂತರದಲ್ಲಿ ‘ರಸಋಷಿ ಕುವೆಂಪು ಕವಿ ಕಾವ್ಯ ಪರಿಚಯ’ ಎಂಬ ಪ್ರೌಢ ಪ್ರಬಂಧವನ್ನು ಬರೆದು ಮುಗಿಸಿದರು.  ಇದನ್ನು ಕುವೆಂಪು ಅವರು ಬದುಕಿದ್ದಾಗಲೇ ಸಿದ್ಧಪಡಿಸಿದ್ದರು.  ಅದನ್ನು ಕುವೆಂಪು ಅವರು ಸ್ವತಃ ಓದಿ ಮೆಚ್ಚಿಕೊಂಡಿದ್ದರೆಂದು ತಿಳಿದು ಬರುತ್ತದೆ.  ಮುದ್ದಣ ಕವಿಯ ಶ್ರೀರಾಮ ಪಟ್ಟಾಭಿಷೇಕಂ ಮತ್ತು ಅದ್ಭುತ ರಾಮಾಯಣಂ ಕೃತಿಗಳನ್ನು ಪರಮೇಶ್ವರ ಭಟ್ಟರು ಸಂಪಾದಿಸಿದ್ದಾರೆ.    ಅವರ ಮಕ್ಕಳ ಸಾಹಿತ್ಯದಲ್ಲಿ ‘ಭೂಮಿ ಮತ್ತು ಧೂಮಕೇತು’, ‘ಕಣ್ಣಾಮುಚ್ಚಾಲೆ’ ಪ್ರಮುಖವಾದುವು.

ಪರಮೇಶ್ವರ ಭಟ್ಟರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ.  ‘ತುಂಬಿದ ಕೊಡ ತುಳುಕುವುದಿಲ್ಲವೆಂಬಂತೆ’ ಯಾವೊಂದು ಸದ್ದು ಅಬ್ಬರಗಳಿಲ್ಲದೆ, ವಿನಯವಂತರಾಗಿ ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ ಅವರ ಸಾಧನೆಗಳು ಅನನ್ಯವಾದುದು.   ಇಂತಹ ಮಹಾನ್ ಸಾಧಕರಾದ ಡಾ. ಎಸ್. ವಿ. ಪರಮೇಶ್ವರಭಟ್ಟರು ಅಕ್ಟೋಬರ್ 27, 2000 ವರ್ಷದಲ್ಲಿ ನಿಧನರಾದರು.  ಈ ಮಹಾನ್ ಸಾಧಕರಿಗೆ ಗೌರವಪೂರ್ಣ ನಮನಗಳು.

(ಆಧಾರ:  ಪಾ.ಶ. ಶ್ರೀನಿವಾಸರು ಬರೆದಿರುವ ಎಸ್. ವಿ. ಪರಮೇಶ್ವರ ಭಟ್ಟರ ಕುರಿತಾದ ಲೇಖನ ಮತ್ತು  ಪ್ರೊ. ಜಿ. ವೆಂಕಟಸುಬ್ಬಯ್ಯನವರ  ‘ಸಾಹಿತ್ಯಲೋಕದ  ಸಾರಸ್ವತರು’ ಕೃತಿ)

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)