ಬೊಳುವಾರು ಮಹಮದ್ ಕುಂಞಿ

bolwar_photo

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡದ ಪ್ರಸಿದ್ಧ  ಕಥೆಗಾರರಾದ ಮಹಮದ್‌ ಕುಂಞಿ ಅವರು ಅಕ್ಟೋಬರ್ 22, 1951ರಂದು  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೊಳುವಾರು ಎಂಬಲ್ಲಿ ಜನಿಸಿದರು. ತಂದೆ ಅಬ್ಬಾಸ್ ಬ್ಯಾರಿ, ತಾಯಿ ಕುಲ್ಸುಂ.  ಅವರ ಪ್ರಾರಂಭಿಕ ಶಿಕ್ಷಣ ಬೊಳುವಾರು, ಪುತ್ತೂರು, ಮಂಗಳೂರುಗಳಲ್ಲಿ ನೆರವೇರಿತು. ಮೈಸೂರು ವಿಶ್ವವಿದ್ಯಾಲಯದಿಂದ ಕುವೆಂಪು ಚಿನ್ನದ ಪದಕದೊಡನೆ ಎಂ.ಎ. (ಕನ್ನಡ) ಪದವಿ ಗಳಿಸಿದರು.  ಉದ್ಯೋಗಕ್ಕಾಗಿ ಸಿಂಡಿಕೇಟ್ ಬ್ಯಾಂಕ್ ಸೇರಿದ ಬೊಳುವಾರರು ಮಹಾಪ್ರಬಂಧಕ ಹುದ್ದೆಯವರೆಗೆ ವಿವಿಧ ಜವಾಬ್ಧಾರಿಗಳನ್ನು ನಿರ್ವಹಿಸಿ ನಿವೃತ್ತರಾಗಿದ್ದಾರೆ.

ಬೊಳುವಾರು ಮಹಮದ್ ಕುಂಞಿ ಅವರು ಚಿಕ್ಕಂದಿನಲ್ಲೇ ಸಾಹಿತ್ಯದಲ್ಲಿ ಒಲವು ಮೂಡಿಸಿಕೊಂಡರಾದರೂ ಬರವಣಿಗೆಯಲ್ಲಿ ಹೆಚ್ಚು ಆಸಕ್ತಿವಹಿಸಿದವರಲ್ಲ.  ಒಮ್ಮೆ ಬರವಣಿಗೆಯಲ್ಲಿ ಅಂದಿನ ದಿನಗಳಲ್ಲಿ ಹೆಸರು ಮಾಡಿದವರೊಬ್ಬರನ್ನು  ಸಾಹಿತ್ಯದ ಬಗ್ಗೆ ಕೇಳಿದಾಗ “ಅದು ಸುಲಭವಾಗಿ ನಿನಗೆ ದಕ್ಕುವಂತದ್ದಲ್ಲ” ಎಂಬ ವರಸೆಯಲ್ಲಿ ಆಡಿದ ಮಾತು, ಬೊಳುವಾರು ಅವರನ್ನು ಸಾಹಿತ್ಯ ಸೃಷ್ಟಿಯ ಬಗ್ಗೆ ಆಳವಾಗಿ ತೊಡಗಿಕೊಳ್ಳುವಂತೆ ಮಾಡಿತು.  ಮುಂದೆ ಆದದ್ದು ಇತಿಹಾಸ.  ಬೊಳುವಾರರು ಕಥಾಸಂಕಲನ, ನಾಟಕ, ಜೀವನ ಚರಿತ್ರೆ, ಪ್ರವಾಸ ಕಥನ, ಸಂಪಾದನೆ,  ಅನುವಾದ ಹೀಗೆ ವಿಶಾಲವಾದ ಹರಹುಳ್ಳ ಸಾಹಿತ್ಯ ಸಾಧನೆಗಳ ಜೊತೆಗೆ ಅವರು ಮಕ್ಕಳ ಸಾಹಿತ್ಯಕ್ಕೂ ವಿಶಿಷ್ಟ ಕೊಡುಗೆಯನ್ನಿತ್ತಿದ್ದಾರೆ.  ಸಾಹಿತ್ಯದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯಿಂದ ಮೊದಲ್ಗೊಂಡು ಮಹತ್ವದ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.

ಬೊಳುವಾರರ ‘ಪ್ರವಾದಿ ಮುಹಮ್ಮದರ ಜೀವನಾಧಾರಿತ ಮೊತ್ತಮೊದಲ ಐತಿಹಾಸಿಕ ಕಾದಂಬರಿ – ಓದಿರಿ’ಯಲ್ಲಿನ  ಪ್ರಾರಂಭಿಕ  ಪುಟದಲ್ಲಿ ಇಂತಿದೆ:  “ಈ ವೇದ, ಉಪನಿಷತ್, ತ್ರಿಪಿಟಿಕಾ, ಭಗವದ್ಗೀತೆ, ಜಿನಶಾಸನ, ತೌರಾತ್, ಝಬೂರ್, ಬೈಬಲ್, ಕುರಾನ್ ಅಥವಾ ಗುರು ಗ್ರಂಥ್ ಸಾಹಿಬ್ ಯಾ ಮತ್ತೊಂದು; ಧರ್ಮಗ್ರಂಥಗಳು ಯಾವುದೇ ಇರಲಿ, ಅವುಗಳನ್ನು ಸಮರ್ಥಿಸುವ ಅಥವಾ ವಿರೋಧಿಸುವ ಮೊದಲು ಒಮ್ಮೆಯಾದರೂ ಓದು ಎಂಬ ಪ್ರಥಮ ಸತ್ಯ ಊಡಿಸಿದ್ದ ನನ್ನಪ್ಪ ಅಬ್ಬಾಸ್ ಬ್ಯಾರಿಯವರಿಗೆ” ಎಂಬ ಅರ್ಪಣೆಯಿದೆ.  ಇದು ಇವರ ವಿಶಾಲ ಹರಹನ್ನು ಸೂಚಿಸುವಂತದ್ದು.

ಬೊಳುವಾರರರ ಕಥಾ ಸಂಕಲನಗಳಲ್ಲಿ ಅತ್ತ ಇತ್ತಗಳ ಸುತ್ತಮುತ್ತ, ದೇವರುಗಳ ರಾಜ್ಯದಲ್ಲಿ, ಅಂಕ, ಆಕಾಶಕ್ಕೆ ನೀಲಿ ಪರದೆ, ಒಂದು ತುಂಡುಗೋಡೆ. ರೊಟ್ಟಿ ಪಾತುಮ್ಮ ಮುಂತಾದವು ಪ್ರಮುಖವಾಗಿವೆ.   ರುಖಿಯಾ ಹೆಸರಿನಿಂದ ಮಲಯಾಳಂ ಭಾಷೆಗೆ ಅನುವಾದಗೊಂಡ ಎರಡು ಕಥಾ ಸಂಕಲನಗಳನ್ನು ಅವರು ರಚಿಸಿದ್ದಾರೆ. ಪುನ್ನಪ್ರ ವಯಲಾರ ಸಮರ ಎಂಬುದು ಇತಿಹಾಸದ ವಸ್ತುವನ್ನು ಒಳಗೊಂಡಿದೆ. ಅವರ ಸಂಪಾದನೆಗಳಲ್ಲಿ ಶತಮಾನದ ಸಣ್ಣ ಕಥೆಗಳು, ದೆಹಲಿ ಕನ್ನಡ ಸಾಹಿತ್ಯ ಸೇರಿವೆ. ಮಕ್ಕಳಿಗಾಗಿ ತಟ್ಟು ಚಪ್ಪಾಳೆ ಪುಟ್ಟ ಮಗು, ಸಂತಮ್ಮಣ್ಣ, ಪಾಪು ಗಾಂಧೀ ಬಾಪೂ ಆದ ಕತೆ (ಮಹಾತ್ಮ ಗಾಂಜಿ ಜೀವನ ಚರಿತ್ರೆಯಾಧಾರಿತ ಕಾದಂಬರಿ), ಮಕ್ಕಳ ನಾಟಕಗಳ ಮೂರು ಸಂಪುಟಗಳು (ಪುಸ್ತಕ ಪ್ರಾಧಿಕಾರಕ್ಕಾಗಿ) ಮುಂತಾದವುಗಳನ್ನು ಪ್ರಕಟಿಸಿದ್ದಾರೆ. ‘ಸ್ವಾತಂತ್ರ್ಯದ ಓಟ’ 1,110ಪುಟಗಳ ಬ್ರಹತ್ ಕಾದಂಬರಿಯಾಗಿದೆ.  ಹಲವಾರು ಭಾಷೆಗಳಿಗೆ ಇವರ ಕೃತಿಗಳು  ಅನುವಾದಗೊಂಡಿವೆ.

ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿರುವ ಬೊಳುವಾರು ಮಹಮದ್  ಕುಂಞಿ ಅವರು  ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷರಾಗಿ, ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿ, ಚಿತ್ರ ಸಮುದಾಯದ ಅಧ್ಯಕ್ಷರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ ಮುಂತಾದುವುಗಳಲ್ಲಿ ವಿವಿಧ ರೀತಿಯ  ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಮೂರು ಬಾರಿ ಪುರಸ್ಕಾರ, ದೆಹಲಿಯ ಕಥಾ ಪ್ರಶಸ್ತಿ, ಭಾರತೀಯ ಸಂಸ್ಥಾನ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಪರಶುರಾಮ ಪ್ರಶಸ್ತಿ, ‘ಮುನ್ನುಡಿ’  ಮತ್ತು ‘ಅತಿಥಿ’ ಚಲನಚಿತ್ರಗಳ  ಕಥೆಗಾಗಿ  ರಾಷ್ಟ್ರಪ್ರಶಸ್ತಿ  ಮತ್ತು  ರಾಜ್ಯಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಬೊಳುವಾರರಿಗೆ ಸಂದಿವೆ.  ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ ಇವರ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ’  ಕೃತಿ 2010 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿತು.  “ಈ ಕೃತಿ ಗಾಂಧಿಯವರನ್ನು ಕುರಿತು ಮಕ್ಕಳು ಮತ್ತು ಹಿರಿಯರೆಲ್ಲರಿಗೂ ಸಲ್ಲುವಂತಹ ಶ್ರೇಷ್ಠ ಕೃತಿಯಾಗಿದೆ” ಎಂದು ಈ ಕೃತಿಯನ್ನು ಬಿಡುಗಡೆ ಮಾಡಿದ  ಡಾ. ಯು. ಆರ್. ಅನಂತಮೂರ್ತಿ ಅವರು ನುಡಿದಿದ್ದರು.    ಈ ಕೃತಿ ಹಲವಾರು ಮರುಮುದ್ರಣಗಳನ್ನು ಕಂಡಿದೆ.  ಬೊಳುವಾರು ಮಹಮದ್ ಕುಂಞಿ ಅವರ ಕಾದಂಬರಿ ‘ಸ್ವಾತಂತ್ರ್ಯದ ಓಟ’ 2016ರ ವರ್ಷದಲ್ಲಿ  ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವಕ್ಕೆ ಪಾತ್ರವಾಗಿದೆ.

Tag: Bolwar Mahammad Kunhi

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)