ಮಹಾನ್ ಛಾಯಾಗ್ರಾಹಕ ಕೆ. ಜಿ. ಸೋಮಶೇಖರ್ ಇನ್ನಿಲ್ಲ
ಮಹಾನ್ ಛಾಯಾಗ್ರಾಹಕ ಕೆ. ಜಿ. ಸೋಮಶೇಖರ್ ಅವರು ನಿಧನರಾಗಿದ್ದಾರೆ ಎಂದು ತಿಳಿದು ದುಃಖವಾಯಿತು. ಕನ್ನಡದ ಬಹುತೇಕ ಸಾಹಿತಿ, ಕಲಾವಿದರನ್ನೆಲ್ಲಾ ಮನೋಜ್ಞವಾಗಿ ತೆರೆದಿಟ್ಟ ಈ ಕ್ಯಾಮರಾ ಕಣ್ಣು ಇಂದು ತನ್ನ ಬದುಕಿನ ಕಿಂಡಿಯನ್ನು ಮುಚ್ಚಿ ಹೋಗಿದೆ. ಈ ಆತ್ಮ ಶಾಂತಿಯಲ್ಲಿರಲಿ
ನೋಡನೋಡುತ್ತಿದ್ದಂತೆಯೇ ಕಳೆದುಹೋಗುವ ಬದುಕಿನ ಕ್ಷಣಗಳನ್ನು ನಮಗಾಗಿ ಹಿಡಿದುಕೊಡುವುದು ಛಾಯಾಚಿತ್ರಗಳ ವೈಶಿಷ್ಟ್ಯ. ಹಾಗೆ ಹಿಡಿದುಕೊಡುವ ಕೆಲಸ ಬರಿಯ ಕ್ಯಾಮೆರಾ ಒಂದರಿಂದಲೇ ಆಗುವಂಥದ್ದಲ್ಲ; ಕ್ಯಾಮೆರಾ ಹಿಂದಿನ ಕಣ್ಣಿನ ಜೊತೆಗೆ ಆ ಕಣ್ಣಿನಿಂದ ನೋಡುವ ಕಲಾತ್ಮಕ ಮನಸ್ಸು ಸೇರಿದಾಗಲೇ ಛಾಯಾಚಿತ್ರಗಳು ಕಲಾಕೃತಿಗಳಾಗುವುದು ಸಾಧ್ಯ. ಛಾಯಾಚಿತ್ರಗಳಿಗೆ ಹಾಗೊಂದು ಕಲಾಕೃತಿಯ ರೂಪಕೊಡುವ ಶಕ್ತಿ ಎಲ್ಲೋ ಕೆಲವರಿಗಷ್ಟೆ ಇರುತ್ತದೆ. ಸೃಜನಶೀಲತೆ ಹಾಗೂ ತಾಂತ್ರಿಕ ನೈಪುಣ್ಯಗಳೆರಡೂ ಒಟ್ಟುಸೇರಿದಾಗ ರೂಪುಗೊಳ್ಳುವ ಶಕ್ತಿ ಅದು. ಅಂತಹ ಅಪರೂಪದ ಶಕ್ತಿ ಇರುವವರಲ್ಲಿ ಕೆ.ಜಿ. ಸೋಮಶೇಖರ್ ಒಬ್ಬರು. ಜೀವನದ ಬಹುಭಾಗದಲ್ಲಿ ಛಾಯಾಗ್ರಹಣ ಅವರ ಸಂಗಾತಿಯಾಗಿ ಬಂದಿತ್ತು. ಈ ಸಹಯಾನದ ಸಂದರ್ಭದ ಹಲವು ಘಟನೆಗಳನ್ನು, ಅನುಭವಗಳನ್ನು ನಮ್ಮೊಡನೆ ಹಂಚಿಕೊಳ್ಳುವ ಕೃತಿಯೇ ‘ನನ್ನ ಬದುಕು, ನನ್ನ ಫೊಟಾಗ್ರಫಿ’. ಪತ್ರಕರ್ತ ಬಿ.ಎಸ್. ಜಯಪ್ರಕಾಶ ನಾರಾಯಣ ನಿರೂಪಿಸಿರುವ ಈ ಕೃತಿಯನ್ನು ಬೆಂಗಳೂರಿನ ‘ಆಕೃತಿ ಪುಸ್ತಕ’ ಕಳೆದ ವರ್ಷ ಪ್ರಕಟಿಸಿತ್ತು.
ಸೋಮಶೇಖರರ ಪರಿಚಯ ಬಹಳ ಜನರಿಗೆ ಇರಲಿಕ್ಕಿಲ್ಲ. ಆದರೆ ಅವರು ಕ್ಲಿಕ್ಕಿಸಿದ ಛಾಯಾಚಿತ್ರಗಳನ್ನು ನೋಡದ ಕನ್ನಡಿಗರು ಅಪರೂಪ ಎನ್ನಬೇಕು. ಈ ಕೃತಿಯ ಮುನ್ನುಡಿಯಲ್ಲಿ ಡಾ. ಎಸ್.ಆರ್. ರಾಮಸ್ವಾಮಿಯವರು ಹೇಳಿರುವಂತೆ ಇಂದು ಯಾವುದೇ ಪತ್ರಿಕೆಯಲ್ಲಿಯೋ ಪ್ರಕಟಣೆಯಲ್ಲಿಯೋ ಸಭಾಗಾರದಲ್ಲಿಯೋ ವೇದಿಕೆಯಲ್ಲಿಯೋ ಡಿ.ವಿ.ಜಿ, ಕುವೆಂಪು, ಮಾಸ್ತಿ, ವಿ.ಸೀ., ಶಿವರಾಮ ಕಾರಂತ, ಜಿ.ಪಿ. ರಾಜರತ್ನಂ, ಗೋಪಾಲಕೃಷ್ಣ ಅಡಿಗ, ಮಲ್ಲಿಕಾರ್ಜುನ ಮನಸೂರ ಮೊದಲಾದವರ ಅತ್ಯಂತ ಚೇತೋಹಾರಿ ಚಿತ್ರಗಳು ಕಂಡವೆಂದರೆ ಅವು ಬಹುತೇಕ ಸೋಮಶೇಖರ್ ತೆಗೆದಿರುವವೇ ಆಗಿರುತ್ತವೆ.
ಸೋಮಶೇಖರರ ಆಸಕ್ತಿಗಳು ಒಂದೆರಡಲ್ಲ. ಶಾಲಾದಿನಗಳಲ್ಲೇ ಅವರಿಗೆ ಸಿನೆಮಾ ನೋಡುವ ಹವ್ಯಾಸ ವಿಪರೀತವಾಗಿತ್ತಂತೆ. ಸಂಗೀತವೂ ಇಷ್ಟದ ವಿಷಯ. ಚಿತ್ರಕಲೆಯ ಕುರಿತೂ ಬಹಳ ಆಸಕ್ತಿ.
ಇಂಟರ್‌ಮೀಡಿಯೆಟ್ ವ್ಯಾಸಂಗಕ್ಕೆಂದು ಬೆಂಗಳೂರಿನ ವಿಜಯಾ ಕಾಲೇಜಿಗೆ ಸೇರಿದರೂ ಸರಿಯಾಗಿ ಕ್ಲಾಸಿಗೆ ಹೋಗದ ಈ ಶಿಷ್ಯನನ್ನು ಅಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಪ್ರೊ. ಜಿ.ವಿ. ಒಮ್ಮೆ ಕರೆದು ‘ಸುಮ್ಮನೆ ಕಾಲಕಳೆಯುವ ಬದಲು ಚಿತ್ರಕಲೆಯನ್ನಾದರೂ ಕಲಿ’ ಎಂದರಂತೆ. ಕಲಾರಂಗದಲ್ಲಿ ತಮ್ಮ ಬದುಕು ರೂಪಿಸಿಕೊಳ್ಳಲು ಸೋಮಶೇಖರರಿಗೆ ಪ್ರೇರಣೆಯಾದದ್ದು ಇದೇ ಮಾತು. ಮುಂದೆ ಬಹಳ ವರ್ಷಗಳ ನಂತರ ಚಿತ್ರಕಲೆಯನ್ನು ಬಿಟ್ಟು ಛಾಯಾಗ್ರಹಣದತ್ತ ಹೊರಳಿಕೊಳ್ಳಲು ಕಾರಣವಾದದ್ದು ಅವರ ಕಣ್ಣಿನ ಸಮಸ್ಯೆ ಎನ್ನುವುದಂತೂ ಇದಕ್ಕಿಂತ ಅಚ್ಚರಿಯ ವಿಷಯ. ಅನಿವಾರ್ಯತೆಯಿಂದ ಆಯ್ದುಕೊಂಡ ಕ್ಷೇತ್ರದಲ್ಲಿ ಇಷ್ಟರಮಟ್ಟಿಗೆ ಸಾಧನೆ ಮಾಡಿರುವವರು ಬಹಳ ಜನ ಇರಲಾರರೇನೋ.
ಕಾಲೇಜು ಬಿಟ್ಟ ನಂತರ ಸೋಮಶೇಖರರು ಕೆಲಸಗಳಿಗೆ ಪ್ರಯತ್ನಿಸಿದ್ದು, ಹವ್ಯಾಸಗಳ ಬೆನ್ನುಹತ್ತಿದ್ದನ್ನೆಲ್ಲ ಕುರಿತು ಓದುವಾಗ ಅವರು ಯಾರ ಬಲವಂತಕ್ಕೋ ಮಣಿದು ತಮಗೆ ಹಿಡಿಸದ ಯಾವ ಕೆಲಸವನ್ನೂ ಮಾಡದಿರುವುದು ಹಾಗೂ ತಮಗಿಷ್ಟವಾದ ಕೆಲಸಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡಿರುವುದು ನಮ್ಮ ಗಮನಕ್ಕೆ ಬರುತ್ತದೆ.
ವಿವಿಧ ಕ್ಷೇತ್ರಗಳ ಸಾಧಕರ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಅಭಿಯಾನ ಕೈಗೊಂಡು ಸೋಮಶೇಖರ್ ಮಾಡಿರುವ ಅಗಾಧ ಪ್ರಮಾಣದ ಕಾಯಕಕ್ಕಾಗಿ ‘ಅವರಿಗೆ ಲಭಿಸಿರುವ ಕ್ಯಾಶ್ ಮತ್ತು ಕ್ರೆಡಿಟ್ ಎರಡೂ ಅಲ್ಪವೇ’ ಎನ್ನುವುದು ಅವರ ಕುರಿತಾದ ಮೇಲ್ಕಂಡ ಕೃತಿಯ ಮುನ್ನುಡಿಕಾರರು ಹೇಳಿರುವ ಮಾತು.
ಸಾಹಿತ್ಯವಷ್ಟೇ ಅಲ್ಲದೆ ಇನ್ನೂ ಹಲವು ಕ್ಷೇತ್ರದ ಸಾಧಕರನ್ನು ಸೋಮಶೇಖರ್ ತಮ್ಮ ಕ್ಯಾಮೆರಾದಿಂದ ಚಿತ್ರಿಸಿದ್ದಾರೆ. ಚಿತ್ರನಟ ಅಶೋಕ್ ಕುಮಾರರ ಸರಳತೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಹಾಸ್ಯಪ್ರಜ್ಞೆಗಳೆಲ್ಲ ಸೋಮಶೇಖರ್ ಸುಂದರವಾಗಿ ಸೆರೆಹಿಡಿದಿದ್ದರು.
ಸೋಮಶೇಖರ್ ಅವರ ನಿಧನದಿಂದ ನಮ್ಮ ನಾಡು ಒಬ್ಬ ಶ್ರೇಷ್ಠ ಸಾಹಿತ್ಯ ಮತ್ತು ಸಂಸ್ಕೃತಿಯ ಒಂದು ಮಹತ್ವದ ಕಣ್ಣನ್ನು ಕಳೆದುಕೊಂಡಂತಾಗಿದೆ. ಈ ಮಹಾನ್ ಕಲಾತ್ಮಕ ಚೇತನದ ಆತ್ಮಕ್ಕೆ ಶಾಂತಿ ಸಿಗಲಿ.
ಪ್ರತಿಕ್ರಿಯೆ