ನಗರದಲ್ಲಿ ಮೂರು ದಿನ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ವೈಭವದ ತೆರೆ ಬಿದ್ದಿತ್ತು.
ಸಮ್ಮೇಳನದ ಮೂರೂ ದಿನ ಜನಸಮೂಹ ಪ್ರವಾಹದ ರೀತಿ ಹರಿದು ಬಂತು. ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದು ದಾಖಲೆ.
ಮೊದಲ ದಿನ ಮತ್ತು ಎರಡನೇ ದಿನ ನಿತ್ಯ ಸರಾಸರಿ ಲಕ್ಷ ಜನರು ಹಾಗೂ ಅಂತಿಮ ದಿನವಾದ ಭಾನುವಾರ ೧.೫ ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಂಡು ಸಂಭ್ರಮಿಸಿದರು. ವಿದ್ಯಾರ್ಥಿ ಸಮೂಹ ಅತಿಹೆಚ್ಚು ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಭಾಗಿಯಾಗಿದ್ದು ಸಹ ವಿಶೇಷವಾಗಿತ್ತು.
ವೈವಿಧ್ಯಮಯ ಗೋಷ್ಠಿಗಳ ಜೊತೆಗೆ ಪ್ರಧಾನ ವೇದಿಕೆ ಹಾಗೂ ಎರಡು ಸಮಾನಾಂತರ ವೇದಿಕೆಗಳಲ್ಲಿ ನಿತ್ಯವೂ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜನ ಕಿಕ್ಕಿರಿದು ಸೇರಿ ಸಂಗೀತ ಸುಧೆಗೆ ತಲೆದೂಗಿದರು. ಸಂಗೀತದ ಸೊಬಗು ಸವಿಯಲಿಕ್ಕಾಗಿಯೇ ರಾಯಚೂರು ನಗರದ ಬಹುತೇಕ ಮಹಿಳೆಯರು ಮಕ್ಕಳೊಂದಿಗೆ ಜಾತ್ರೆಗೆ ಬರುವವರಂತೆ ಬರುತ್ತಿದ್ದ ದೃಶ್ಯ ಕಣ್ಣಿಗೆ ಕಟ್ಟಿದಂತಿತ್ತು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಅವರು, ‘ಇದು ವಿರಾಟ್ ಸಾಹಿತ್ಯ ಸಮ್ಮೇಳನ’ ಎಂದು ಬಣ್ಣಿಸಿದರೆ, ‘ಹಿಂದಿನ ಯಾವುದೇ ಸಾಹಿತ್ಯ ಸಮ್ಮೇಳನದಲ್ಲಿ ಸೇರದಿರುವಷ್ಟು ಜನ ಈ ಸಮ್ಮೇಳನದಲ್ಲಿ ಸೇರಿದ್ದರು’ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ ಸಂತಸ ವ್ಯಕ್ತಪಡಿಸಿದರು.
ಕೃಪೆ: ಪ್ರಜಾವಾಣಿ
ಕಾಮೆಂಟ್ = ಪ್ರತಿ ಕ್ರಿಯೆ
ಇಮೇಲ್ = ಇ ತಂತಿ
ಪಬ್ಲಿಶ್ ಮಾಡುವುದಿಲ್ಲ = ಪ್ರಕಟಣೆ ಮಾಡುವುದಿಲ್ಲ / ಬಹಿರಂಗ ಗೊಳಿಸುವದಿಲ್ಲ