ರಾಜಕೀಯದಲ್ಲಿ ಸಾಹಿತ್ಯವಿರ ಬೇಕೆ ಹೊರತು ಸಾಹಿತ್ಯದಲ್ಲಿ ರಾಜಕೀಯವಿರ ಬಾರದು: ನಾಡೋಜ ಡಾ.ಮಹೇಶ ಜೋಶಿ ವಿಶ್ಲೇಷಣೆ
ಬೆಂಗಳೂರು: ಸಾಹಿತ್ಯ ರಾಜಕೀಯವನ್ನು ಎಚ್ಚರಿಸುವ ಶಕ್ತಿಯಾಗ ಬೇಕೆಂದು ರಾಷ್ಟ್ರಕವಿ ಕುವೆಂಪು ಅವರ ಬಯಸಿದ್ದರು. ‘ಅಖಂಡ ಕರ್ನಾಟಕ:ಅಲ್ತೊ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ!ಇಂದು ಬಂದು ನಾಳೆ ಸಂದುಹೋಹ ಸಚಿವ ಮಂಡಲರಚಿಸುವೊಂದು ಕೃತಕವಲ್ತೊ ಸಿರಿಗನ್ನಡ ಸರಸ್ವತಿಯವಜ್ರ ಕರ್ಣಕುಂಡಲ!’ ಎಂದು ಬಹು ಹಿಂದೆಯೇ ಎಚ್ಚರಿಸಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಹೇಳಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಸಭಾಂಗಣದಲ್ಲಿ ಪರಿಷತ್ತಿನ ಎರಡು ಪ್ರಮುಖ ಪ್ರಶಸ್ತಿಗಳಾದ ಕುವೆಂಪು ಸಿರಿಗನ್ನಡ ದತ್ತಿ ಹಾಗೂ ಕನ್ನಡ ಚಳವಳಿ ವೀರಸೇನಾನಿ ಮ.ರಾಮಮೂರ್ತಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಸಾಹಿತ್ಯವು ವ್ಯಕ್ತಿತ್ವ ನಿರ್ಮಾಣದಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸ ಬೇಕು ಎಂದು ಕುವೆಂಪು ಅವರ ಬಯಸಿದ್ದರು ಎಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿಯವರು ಇಂತಹ ಮನಸ್ಥಿತಿಯನ್ನು ಪಡೆಯಲು ಅವರಿಗೆ ರಾಮಕೃಷ್ಣಾಶ್ರಮದಲ್ಲಿ ದೊರೆತ ಸಂಸ್ಕಾರ ಕಾರಣವಾಗಿತ್ತು ಎಂದರು.
೧೯೨೮ರಲ್ಲಿ ಕಲ್ಬುರ್ಗಿಯಲ್ಲಿ ಜರುಗಿದ ೧೪ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಟ್ಟಪ್ಪನವರ `ಯಮನ ಸೋಲು’ ನಾಟಕವನ್ನು ಅಭಿನಯಿಸಲಾಯಿತು. ಸತ್ಯವಾನನ ಪಾತ್ರಧಾರಿ ಗೈರುಹಾಜರಾಗಿದ್ದರಿಂದ ಸತ್ಯವಾನ್ ಪಾತ್ರವನ್ನು ನಿರ್ವಹಿಸುವ ಜವಾಬ್ದಾರಿಯು ಕುವೆಂಪು ಅವರದಾಯಿತು. ಜನರ ಮೆಚ್ಚುಗೆಯನ್ನು ಅವರು ಪಡೆದುಕೊಂಡರು. ೩೩ನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೈಸೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಈ ಕಾಲಮಾನದಲ್ಲಿ ಸಂಯೋಜಿಸಿದ ಕೀರ್ತಿ ಕುವೆಂಪು ಅವರಿಗೆ ಸೇರುತ್ತದೆ ಎಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿಯವರು ಕುವೆಂಪು ಅವರು ಕನ್ನಡದ ಅಸ್ಮಿತೆಯ ಪ್ರತೀಕವಾದರೆ ಮ.ರಾಮಮೂರ್ತಿಯವರು ಕನ್ನಡದ ಹೋರಾಟದ ಪ್ರತೀಕವೆಂದು ಹೇಳಿ ಚಳವಳಿ ಅನಿವಾರ್ಯವಾದಾಗ ಮಾತ್ರ ಮೂಡ ಬೇಕು ಎಂಬ ಎಚ್ಚರಿಕೆ ಕನ್ನಡಿಗರಲ್ಲಿದೆ. ಸ್ವಭಾವತ: ಕನ್ನಡಿಗರು ಶಾಂತಿ ಪ್ರಿಯರು, ಆದರೆ ಕನ್ನಡಿಗರಿಗೇ ಅವರ ನೆಲದಲ್ಲಿ ನೆಲೆ ಇಲ್ಲದ ಸ್ಥಿತಿ ಬಂದಾಗ ಮ.ರಾಮಮೂರ್ತಿಯವರು ಹೋರಾಟದ ಹಾದಿಯನ್ನು ಹಿಡಿದವರು ಅವರ ಹೋರಾಟದ ಫಲವಾಗಿಯೇ ಇಂದು ಕನ್ನಡಿಗರು ತಮ್ಮ ಸ್ವಂತಿಕೆ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿ ಕನ್ನಡ ಬಾವುಟ ಇರುವವರೆಗೂ ರಾಮಮೂರ್ತಿಯವರ ನೆನಪು ಇರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಸದಾ ಕನ್ನಡಿಗರ ಪ್ರಬುದ್ದತೆ ಮತ್ತು ಬದ್ದತೆಗೆ ಬೆಂಬಲವಾಗಿ ನಿಲ್ಲಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನವನ್ನು ಮಾಡಿದ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿಯವರು ಚಳುವಳಿಗಳು ಸದಾ ಕನ್ನಡವನ್ನು ಕಾಪಾಡುತ್ತಲೇ ಬಂದಿವೆ. ಕನ್ನಡವು ಸದಾ ನಮ್ಮ ಆದ್ಯತೆಯಾಗ ಬೇಕು. ಮನೆಯಲ್ಲಿ ಕನ್ನಡ ವಾತಾವರಣವಿದ್ದರೆ ಮುಂದಿನ ಪೀಳಿಗೆಯ ಮನಸ್ಸಿನಲ್ಲಿಯೂ ಕನ್ನಡ ಉಳಿಯಲಿದೆ. ಕನ್ನಡ ನಮ್ಮ ಸರ್ಕಾರದ ಆದ್ಯತೆಯಾಗಲಿದೆ ಎಂದು ಒತ್ತಿ ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ಹಿರಿಯ ನಿವೃತ್ತ ಪೋಲೀಸ್ ಅಧಿಕಾರಿ ಶ್ರೀ.ಬಿ.ಕೆ.ಶಿವರಾಂ ಮಾತನಾಡಿ ವಿದ್ಯಾರ್ಥಿ ಚಳವಳಿ, ಭಾಷಾ ಚಳವಳಿ, ದಲಿತ ಚಳವಳಿ,ರೈತ ಚಳವಳಿಗಳು ನಮ್ಮ ಸಾಂಸ್ಕೃತಿಕ ಸಂದರ್ಭವನ್ನು ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದು ನಮ್ಮ ರಾಜಕೀಯ ಸಂದರ್ಭ ಅವುಗಳನ್ನು ನಾಶಗೊಳಿಸಿತು. ಮತ್ತೆ ಚಳವಳಿಗಳ ಕಾಲ ಬರಬೇಕು ಇದು ಕನ್ನಡಿಗರ ಜೀವನ್ಮರಣದ ಪ್ರಶ್ನೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ರೂಪುಗೊಂಡಿರುವ ಕನ್ನಡಪರ ವಾತಾವರಣಕ್ಕಾಗಿ ನಾಡೋಜ ಡಾ.ಮಹೇಶ ಜೋಶಿಯವರನ್ನು ಶಿವರಾಂ ವಿಶೇಷವಾಗಿ ಅಭಿನಂದಿಸಿದರು.
ಪ್ರಶಸ್ತಿ ಪುರಸ್ಕೃತರಾದ ಸಾ.ರಾ.ಗೋವಿಂದು ಮತ್ತು ಜೆ.ಹುಚ್ಚಪ್ಪನವರು ತಮ್ಮ ಹೋರಾಟದ ಹಾದಿಯಯನ್ನು ನೆನಪು ಮಾಡಿಕೊಂಡು ತಮಗೆ ಜೊತೆ ನೀಡಿದವರಿಗೂ ಈ ಪುರಸ್ಕಾರ ಸಲ್ಲುತ್ತದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿಯವರು ಸ್ವಾಗತವನ್ನು ಕೋರಿದರೆ ಡಾ.ಪದ್ಮಿನಿ ನಾಗರಾಜು ವಂದನಾರ್ಪಣೆಯನ್ನು ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಅವರ ಕಾರ್ಯಕ್ರಮವನ್ನು ನಿರ್ವಹಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಘನತೆಯನ್ನು ಎತ್ತಿ ಹಿಡಿಯುತ್ತೇನೆ
ಸಾ.ರಾ.ಗೋವಿಂದು ಅವರ ಹೋರಾಟದ ಕಥೆಗಳನ್ನು ಪುಸ್ತಕ ರೂಪದಲ್ಲಿ ತರಬೇಕು ಎಂಬ ಮಾನ್ಯ ಸಚಿವರಾದ ರಾಮಲಿಂಗ ರೆಡ್ಡಿಯವರ ಸಲಹೆಗೆ ಸ್ಪಂದಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಎನ್ನುವ ಪದವೇ ಇಲ್ಲ, ಇರುವುದು ಸಹಸ್ಪರ್ಧಿಗಳಷ್ಟೇ ಚುನಾವಣೆ ಮುಗಿದ ಮೇಲೆ ಎಲ್ಲರೂ ಸೇರಿ ಕನ್ನಡದ ಕೆಲಸವನ್ನು ಮಾಡಬೇಕು. ಪರಿಷತ್ತಿನ ಪಾಲಿಗೆ ಇರುವುದು ಯಾವುದೇ ಪಕ್ಷದ್ದಾದರೂ ಅದು ಕನ್ನಡದ ಸರ್ಕಾರ ಇಂತಹ ಸಮನ್ವಯ ಮನಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದರೂ ನಿರಂತರವಾಗಿ ನಡೆಯುತ್ತಿರುವ ಸತ್ಯವಿಲ್ಲದ ಅಪಪ್ರಚಾರ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆಯನ್ನು ಎತ್ತಿ ಹಿಡಿಯಲು ಧ್ವರನಿ ಎತ್ತಲೇ ಬೇಕಾದ ಅನಿವಾರ್ಯತೆ ಉಂಟಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಿರುವ ಪಂಪ ಮಹಾಕವಿ ರಸ್ತೆಯ ಹೆಸರನ್ನು ಬದಲಾಯಿಸುವ ಯಾವ ಉದ್ದೇಶವಿಲ್ಲದಿದ್ದರೂ ಈ ಕುರಿತು ತಪ್ಪು ಮಾಹಿತಿಯನ್ನು ಹರಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯ ದರ್ಶನ ಎಲ್ಲರಿಗೂ ಲಭಿಸಲಿ ಎಂದ ಸದುದ್ದೇಶದಿಂದ ಅದನ್ನು ಸ್ಥಳಾಂತರ ಮಾಡಿದ್ದರೂ ಕಳುವಾಗಿದೆ ಎಂಬ ಸುಳ್ಳ ಸುದ್ದಿಯನ್ನು ಹಬ್ಬಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಪಾರಂಪರಿಕ ಕಟ್ಟಡದ ಮೇಲೆ ದುರದ್ದೇಶಪೂರ್ವಕ ಭಿತ್ತಿ ಚಿತ್ರಗಳನ್ನು ಅಂಟಿಸಿ ವಿರೂಪಗೊಳಿಸಲು ಪ್ರಯತ್ನಿಸಲಾಯಿತು. ಇದನ್ನು ಕಾನೂನಿನ ಹಂತಕ್ಕೆ ತಂದಾಗ ಸಂಬಂಧ ಪಟ್ಟವರು ತಪ್ಪನ್ನು ಒಪ್ಪಿ ಕೊಂಡು ದಂಡ ಕಟ್ಟಿದಾಗಲೇ ಕುತಂತ್ರದ ಸ್ವರೂಪ ಬದಲಾಯಿತು. ಹೀಗೆ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆಯನ್ನು ಎತ್ತಿ ಹಿಡಿಯಲು ನಿರಂತರವಾಗಿ ಪ್ರಯತ್ನಿಸಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದರು.
ಪ್ರತಿಕ್ರಿಯೆ