ರಾಜಧಾನಿಯಲ್ಲಿ ಕನ್ನಡ ರಥದ ಅದ್ಧೂರಿ ಮೆರವಣಿಗೆ: ಸಮಸ್ತ ಕನ್ನಡಿಗರಿಗೆ ಅಕ್ಷರ ಜಾತ್ರೆಗೆ ಆಹ್ವಾನ ನೀಡಿದ ಕನ್ನಡ ಸಾಹಿತ್ಯ ಪರಿಷತ್ತು
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಜ್ಯೋತಿಯನ್ನು ಹೊತ್ತ ಕನ್ನಡದ ಸ್ವಾಭಿಮಾನದ ಸಂಕೇತವಾದ ಕನ್ನಡ ರಥದ ಜಾಥಾವನ್ನು ಪರಿಷತ್ತು ಹಮ್ಮಿಕೊಂಡಿದ್ದು, ಹೊಸ ಪರಂಪರೆಗೆ ನಾಂದಿ ಹಾಡಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯಪಟ್ಟರು.
ಇಂದು ಬೆಂಗಳೂರಿಗೆ ಆಗಮಿಸಿದ ಕನ್ನಡ ರಥಕ್ಕೆ ಪೂಜೆ ಸಲ್ಲಿಸಿ ಜಾಥಾಕ್ಕೆ ಬೆಂಗಳೂರು ಮಹಾನಗರದಲ್ಲಿ ಚಾಲನೆ ನೀಡಿ ಮಾತನಾಡಿದರು. ಹಾವೇರಿಯಲ್ಲಿ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ. ದೋಡ್ಡರಂಗೇಗೌಡ ಅವರು, ಶ್ರೀ ಬೇಲಿಮಠ ಪೀಠಾಧ್ಯಕ್ಷರಾದ ಶ್ರೀ ಶಿವರುದ್ರ ಸ್ವಾಮಿಜಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಡಾ. ಮನು ಬಳಿಗಾರ, ಹಿರಿಯ ಇತಿಹಾಸ ತಜ್ಞರಾದ ಡಾ. ತಲಕಾಡು ಚಿಕ್ಕರಂಗೇಗೌಡ, ಕರ್ನಾಟಕ ನವ ನಿರ್ಮಾಣ ಸೇನೆಯ ಅಧ್ಯಕ್ಷರಾದ ಶ್ರೀ ಭಿಮಾಶಂಕರ ಪಾಟೀಲ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ, ಶ್ರೀ ಕೆ. ಮಹಾಲಿಂಗಯ್ಯ, ಗೌರವ ಕೋಶಾಧ್ಯಕ್ಷರಾದ ಶ್ರೀ.ಬಿ.ಎಮ್. ಪಟೇಲ್‌ಪಾಂಡು ಸೇರಿದಂತೆ ಅನೇಕ ಕನ್ನಡಾಭಿಮಾನಿಗಳು, ಸಾಹಿತಿಗಳು ಹಾಗೂ ಕನ್ನಡ ಪರ ಹೋರಾಟಗಾರರು ಬಾಗವಹಿಸಿದ್ದರು.
ಹೆಸರಾಂತ ಹಿರಿಯ ಕವಿ ಡಾ. ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ 2023ರ ಜನವರಿ ೦6 ಶುಕ್ರವಾರ, ೦7 ಶನಿವಾರ ಹಾಗೂ ೦8 ಭಾನುವಾರದಂದು ಮೂರು ದಿನಗಳ ಕಾಲ ಆಚರಿಸಲಾಗುತ್ತಿರುವ ಕನ್ನಡದ ನುಡಿ ಜಾತ್ರೆಯನ್ನು ಐತಿಹಾಸಿಕ ದಾಖಲೆಯನ್ನಾಗಿಸುವ ಸದುದ್ದೇಶದಿಂದ ಕನ್ನಡದ ಜ್ಯೋತಿ ಹೊತ್ತ ಕನ್ನಡ ರಥವನ್ನು ನಾಡಿನಾದ್ಯಂತ ಸಂಚರಿಸುವ ಮೂಲಕ ಎಲ್ಲ ಕನ್ನಡಿಗರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗುತ್ತಿದೆ. ಜೊತೆಗೆ ಕನ್ನಡ ತಾಯಿ ಭುವನೇಶ್ವರಿಯ ಸನ್ನಿಧಾನದಿಂದ ತರಲಾದ ಪವಿತ್ರ ಕನ್ನಡ ಜ್ಯೋತಿಯನ್ನು ಕನ್ನಡಿಗರಿಗೆ ದರ್ಶನ ಮಾಡಿಸುವುದರ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸುವ ಪ್ರಯತ್ನ ಇದಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದರು.
ಕನ್ನಡ ರಥಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಶ್ರೀ ಬೇಲಿಮಠದ ಪೀಠಾಧಿಕಾರಿಗಳಾದ ಶೀ ಶಿವರುದ್ರ ಸ್ವಾಮಿಜಿಗಳು ಮಾತನಾಡಿ ಕನ್ನಡ ತಾಯಿ ಭುವನೇಶ್ವರಿಯ ಪೂರ್ಣ ಕೃಪೆ ಸಮಸ್ತ ಕನ್ನಡಿಗರ ಮೇಲಿದೆ. ಈ ಸತ್ಯವನ್ನು ಇಂದು ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಎಲ್ಲ ಮೂಲೆ ಮೂಲೆಗಳ ಕನ್ನಡಿಗರಿಗೆ ರಥದಲ್ಲಿ ಕನ್ನಡ ಜ್ಯೋತಿ ದರ್ಶನ ಮಾಡಿಸುವುದರ ಮೂಲಕ ತೋರಿಸಿಕೊಟ್ಟಿದೆ ಎಂದು ಹೇಳಿದರು.
೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾದ್ಯಕ್ಷರಾದ ಡಾ. ದೋಡ್ಡರಂಗೇಗೌಡ ಅವರು ಮಾತನಾಡಿ ಕನ್ನಡ ಸಾಹಿತ್ಯ ಸಮ್ಮೇಳವು ಕನ್ನಡಿಗರ ಹೆಮ್ಮೆಯ ಪ್ರತೀಕವಾಗಬೇಕಿದೆ. ಆ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಕಾರಾತ್ಮಕವಾದ ಹೆಜ್ಜೆಯನ್ನು ಇಡುತ್ತಿದೆ. ಎಲ್ಲ ಕನ್ನಡಿಗರು ಹಾವೇರಿಯಲ್ಲಿ ನಡೆಯುವ ಕನ್ನಡದ ಅಕ್ಷರ ಜಾತ್ರೆಯಲ್ಲಿ ಭಾಗವಹಿಸುವ ಮೂಲಕ ಕನ್ನಡಾಭಿಮಾನವನ್ನು ಎತ್ತಿ ತೋರಿಸಬೇಕಿದೆ ಎಂದು ಹೇಳಿದರು.
ವಿವಿಧ ಕಲಾ ತಂಡಗಳನ್ನೊಳಗೊಂಡ ಕನ್ನಡ ರಥದ ಅದ್ಧೂರಿ ಮೆರವಣಿಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಿಂದ ಹೊರಟು, ಪಂಪಮಹಾಕವಿ ರಸ್ತೆಯ ಮೂಲಕ ಚಾಮರಾಜಪೇಟೆ, ಬಸವನಗುಡಿ ಮಾರ್ಗವಾಗಿ ಬನಶಂಕರಿ ತೆರಳಿ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಪೂಜೆ ಸ್ವೀಕರಿಸಿ, ಕೋಣನಕುಂಟೆ, ಬನ್ನೇರುಘಟ್ಟ, ಜಿಗಣಿ ಮಾರ್ಗವಾಗಿ ಆನೇಕಲ್‌ಗೆ ತೆರಳಿ ಅಲ್ಲಿ ಭವ್ಯ ಸ್ವಾಗತದೊಂದಿಗೆ ಕನ್ನಡ ರಥವನ್ನು ಬರಮಾಡಿಕೊಂಡರು. ನಂತರ ಚಂದಾಪುರ ಮಾರ್ಗವಾಗಿ ಮಡಿವಾಳ, ಡೈರಿ ವೃತ, ಲಾಲ್‌ಬಾಗ್ ಮಾರ್ಗವಾಗಿ ಮತ್ತೆ ಕನ್ನಡ ಸಾಹಿತ್ಯ ಪರಿಷತ್ತಿಗೆ ತಲುಪಿತು. ನಾಳೆ ಬೆಳಗ್ಗೆ ಮೈಸೂರು ರಸ್ತೆಯಿಂದ ತೆರಳಿ ಶ್ರೀ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿ ಕೆಂಗೇರಿ ಮಾರ್ಗವಾಗಿ ರಾಮನಗರ ಜಿಲ್ಲೆಗೆ ಕನ್ನಡ ರಥ ತೆರಳಲಿದೆ.
ಪ್ರತಿಕ್ರಿಯೆ