ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರು

ಫೆಬ್ರವರಿ 7, 1926ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಹುಟ್ಟಿದ ಜಿ. ಎಸ್. ಶಿವರುದ್ರಪ್ಪ (ಜೀಯೆಸ್ಸೆಸ್) ಈ ನಾಡಿನಲ್ಲಿ ವ್ಯಾಪಕವಾಗಿ ಸಂಚರಿಸಿದ್ದವರು.  ಪ್ರವಾಸ ಪ್ರೀತಿಯ ಜೀಯೆಸ್ಸೆಸ್ ಈ ಸುತ್ತುವಿಕೆಯಿಂದ ಬಹುಶ್ರುತತೆಯನ್ನುಸಮಚಿತ್ತವನ್ನುಜನಸಂಪರ್ಕವನ್ನು ಪಡೆದಿದ್ದರು. 

 

ಸೃಜನವಿಮರ್ಶೆಮೀಮಾಂಸೆಅಧ್ಯಯನಅಧ್ಯಾಪನಆಡಳಿತಸಂಘಟನೆ – ಈ ಮುಂತಾದ ಸಾಂಸ್ಕೃತಿಕ ನೆಲೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡುಕನ್ನಡ ಸಂಸ್ಕೃತಿಯ ಚಲನಶೀಲತೆಗೆ ತಮ್ಮ ಕೊಡುಗೆ ನೀಡುತ್ತ ಬಂದ ಮುಖ್ಯರಲ್ಲಿ ಒಬ್ಬರಾಗಿದ್ದಾರೆ.  ಡಾ. ಜಿ. ಎಸ್. ಶಿವರುದ್ರಪ್ಪನವರು ಗೋವಿಂದ ಪೈಕುವೆಂಪು ನಂತರ ಮೂರನೆಯ ರಾಷ್ಟ್ರಕವಿಯಾಗಿ ನಮ್ಮ ಕನ್ನಡಿಗರ ಹೆಮ್ಮೆಯಾಗಿದ್ದಾರೆ. 

 

ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯಾಗಿದೂರ ದೂರದ ಹಳ್ಳಿಗಾಡುಗಳಲ್ಲಿ ಓದಿನ ಸೌಲಭ್ಯಗಳಿಗಾಗಿ ನಿಧಾನವಾಗಿ ತೆರೆದುಕೊಳ್ಳುತ್ತಿದ್ದ ಜನಸಮುದಾಯದಿಂದ ಬಂದು ಶ್ರಮನಿಷ್ಠೆಹಾಗೂ ಪ್ರತಿಭೆಗಳಿಂದ ರಂಗದಲ್ಲಿ ಮುಖ್ಯರಾಗತೊಡಗಿದ್ದಹಾಗೆ ತೊಡಗಿ ಯಶಸ್ಸು ಪಡೆದ ಮೊದಲ ತಲೆಮಾರಿಗೆ ಜೀಯೆಸ್ಸೆಸ್ ಸೇರುತ್ತಾರೆ.  ಕನ್ನಡ ನವೋದಯದ  ಮುಂದಾಳುಗಳು ರೂಪಿಸಿದ ಹಾದಿಯಲ್ಲಿ ನಡೆದು ಸಮರ್ಥ ಉತ್ತರಾಧಿಕಾರಿಗಳು ಎಂದು ಸಾಬೀತು ಮಾಡಿದ್ದಾರೆ.

 

ಶಿಕ್ಷಕ ತಂದೆಯೊಡನೆ ಸುತ್ತುತ್ತ ಊರೂರುಗಳಲ್ಲಿ ಶಿಕ್ಷಣ ಪಡೆದು ಮೈಸೂರು ಸೇರಿ ವೆಂಕಣ್ಣಯ್ಯಕುವೆಂಪು ಅವರ ಒತ್ತಾಸೆಯಲ್ಲಿ ಬಿ.ಎ (ಆನರ್ಸ್)ಎಂ.ಎ ಹಾಗೂ ಪಿ.ಎಚ್.ಡಿ ಗಳನ್ನು ಪಡೆದರು.  ಮಹಾರಾಜ ಕಾಲೇಜು ಆಗ ಟಂಕಸಾಲೆ.  ಅಲ್ಲಿ ಪ್ರಮಾಣೀಕರಣಗೊಂಡರೆ ಮಾತ್ರ ಸಾಹಿತ್ಯಕ ವ್ಯಕ್ತಿತ್ವಕ್ಕೆ ಚಲಾವಣೆ ಸಿಗುವಂತೆ ಇದ್ದ ಕಾಲ.  ವಿಶ್ವವಿದ್ಯಾಲಯದ ಹೊರಗಿದ್ದವರೂ ಒಂದಲ್ಲ ಒಂದು ಬಗೆಯಲ್ಲಿ ಈ ಟಂಕಸಾಲೆಯ ವ್ಯಾಪ್ತಿಯ ಒಳಗಾಗಿಯೇ ಇದ್ದರೆಂಬುದಕ್ಕೆ ಪ್ರಬುದ್ಧ ಕರ್ನಾಟಕ ಹಾಗೂ ಮಹಾರಾಜ ಕಾಲೇಜು ಕರ್ನಾಟಕ ಸಂಘ ಪ್ರಕಟಿಸಿದ ಗ್ರಂಥಗಳ ಪುಟಗಳು ಸಾಕ್ಷಿಯಾಗಿವೆ.  ಜೀಯೇಸ್ಸೆಸ್ ಅಲ್ಲಿ ಕವಿಯಾಗುವ ಹಂಬಲಕ್ಕೆ ಪುಷ್ಟಿ ಪಡೆದರು.  ಮಾಸ್ತಿಯವರು ‘ಜೀವನದಲ್ಲಿ ಈ ಕವಿಯನ್ನು ಮೊದಲು ಅನಾವರಣಗೊಳಿಸಿದರಾದರೂ ಜೀಯೆಸ್ಸೆಸ್ ಹಸಿರು ಬಾವುಟ ಕಂಡದ್ದು ಕುವೆಂಪು ಅವರಲ್ಲಿ.  ಈ ಮಹಾರಾಜ ಕಾಲೇಜು ಇವರೊಳಗಿನ ವಿಮರ್ಶಕ ಮೀಮಾಂಸಕರನ್ನೂ ಬೆಳೆಸಿತು.

 

ಜೀಯೆಸ್ಸೆಸ್ ಮೈಸೂರು ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳಲ್ಲಿ (ದಾವಣಗೆರೆಶಿವಮೊಗ್ಗೆಮೈಸೂರು) ಅಧ್ಯಾಪಕರಾಗಿ ವೃತ್ತಿಜೀವನವನ್ನು ಆರಂಭಿಸಿದರು.  ಹೈದರಾಬಾದ್ ಉಸ್ಮಾನಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯರಾಗಿ ಕೆಲಸಮಾಡಿಮರಳಿ ಮಹಾರಾಜಾ ಕಾಲೇಜಿಗೆ ಬಂದುಅನಂತರ (1966) ಬೆಂಗಳೂರು ವಿಶ್ವವಿದ್ಯಾಲಯ ಸೇರಿ, 1970ರಿಂದ ಕನ್ನಡ ಅಧ್ಯಯನ ಕೇಂದ್ರದ ಮುಖ್ಯರಾದರು.  ಇಲ್ಲಿ ಎರಡು ದಶಕಗಳ ಕಾಲ ಕಾವ್ಯಕಾವ್ಯಮೀಮಾಂಸೆಗಳ ಪಾಠ ಹೇಳಿದ್ದಾರೆ.  ಕನ್ನಡದ ಅತಿ ಪ್ರಭಾವಶಾಲಿ ಅಧ್ಯಾಪಕರ ಪರಂಪರೆಗೆ ಜೀಯೆಸ್ಸೆಸ್ ಸೇರುತ್ತಾರೆ.  ಪ್ರಾಚೀನ ಹಾಗೂ ಆಧುನಿಕ ಕನ್ನಡ ಕಾವ್ಯಇಂಗ್ಲಿಷ್ ರೋಮಾಂಟಿಕ್ ಕಾವ್ಯಐರೋಪ್ಯ ನವ್ಯಕಾವ್ಯಪಾಶ್ಚಾತ್ಯ ಮಹಾಕಾವ್ಯ ಹಾಗೂ ತೌಲನಿಕ ಕಾವ್ಯ ಮೀಮಾಂಸೆ – ಇವು ಅವರು ಪಾಠ ಹೇಳಿದ ಮುಖ್ಯ ವಲಯಗಳು.  ಎಲ್ಲ ಕಾಲದಎಲ್ಲ ದೇಶದ ಕವಿಗಳನ್ನು ಕನ್ನಡದ ಸಂವೇದನೆಯ ಮೂಲಕವೇ ಗ್ರಹಿಸಬಯಸುವಪರೋಕ್ಷವಾಗಿ ಒಂದು ಬಗೆಯ ಶುದ್ಧ ಕಾವ್ಯವನ್ನು ಹುಡುಕುವ ವಿಧಾನವನ್ನು ಬಳಸಿದರು.  ಅವರ ಪಾಠಗಳು ಪೂರ್ವಸಿದ್ಧತೆವಿವರಗಳ ಮಂಡನೆಚಿಂತನಶೀಲತೆಸಾಮಯಿಕ ಒಳನೋಟಗಳನ್ನು ಒಳಗೊಂಡಿರುವುದರ ಜೊತೆಗೆ ಹೊಸದನ್ನು ಅಳವಡಿಸಿಕೊಳ್ಳುವಹೊಸದಾದುದಕ್ಕೆ ಪ್ರತಿಕ್ರಯಿಸುವ ಆಸಕ್ತಿಯಿಂದ ಕೂಡಿರುತ್ತಿದ್ದವು. ಅವರ ಪಾಠಗಳು ಅವರ ವಿದ್ಯಾರ್ಥಿಗಳನ್ನು ಚಿಂತನೆಗೆ ಹಚ್ಚಿ ಮೊಳೆತು ಬೆಳೆದಿವೆಯಾಗಿಜೀಯೆಸ್ಸೆಸ್ ಪರೋಕ್ಷವಾಗಿ ತರಗತಿಯ ಹೊರಗೂ ಮೇಷ್ಟರಾಗಿದ್ದಾರೆ. ಅವರ ಹಲವಾರು ಶಿಷ್ಯರು  ಕನ್ನಡ ವಿಮರ್ಶೆ ಮತ್ತು ಸಾಹಿತ್ಯಾಧ್ಯಯನದ ಕ್ಷೇತ್ರದ ಕೃಷಿಯಲ್ಲಿ ತೊಡಗಿದ್ದಾರೆ.

 

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಿರ್ದೇಶಕರಾಗಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸಾಹಿತ್ಯ ಸಂಬಂಧದ ಚಟುವಟಿಕೆಗಳನ್ನು ಸಂಯೋಜಿಸಿಸಂಘಟಿಸಿನಿರ್ವಹಿಸಿ ಜೀಯೆಸ್ಸೆಸ್ ಹೆಸರಾಗಿದ್ದಾರೆ.  ಕನ್ನಡ ವಿಮರ್ಶೆಯ ಬೆಳವಣಿಗೆಗೆ ಅವರು ಹಾಕಿಕೊಂಡ ಹಲವು ಯೋಜನೆಗಳನ್ನು ಕಾರ್ಯಗತ ಮಾಡಿದ್ದಾರೆ.  ‘ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟಗಳು ಮತ್ತು ‘ಸಾಹಿತ್ಯ ವಾರ್ಷಿಕದ ಯೋಜನೆಗಳು ಅನನ್ಯವಾದವು.  ಸಾಂಸ್ಥಿಕ ಪ್ರಯತ್ನದ ಸಾಹಿತ್ಯ ಚರಿತ್ರೆಯ ಯೋಜನೆಯಲ್ಲಿ ವಿವಿಧ ಚಿಂತನಾಕ್ರಮಗಳ ಮೇಳವನ್ನು ‘ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯು ಸಾಧಿಸಿದರೆ, ‘ಸಾಹಿತ್ಯ ವಾರ್ಷಿಕ’ ದಾಖಲೆಯ ಜೊತೆಗೆ ವಿಮರ್ಶೆಯ ಬೆಳವಣಿಗೆಯ ದಿಕ್ಕನ್ನು ಕೂಡ ಸಾಧಿಸಲು ಸಮರ್ಥವಾಗಿದೆ.  ಇಂಥ ಪ್ರಯತ್ನಗಳನ್ನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಜೀಯೆಸ್ಸೆಸ್ ಮುಂದುವರೆಸಿ ಯಶಸ್ಸು ಸಾಧಿಸಿದ್ದರು.

 

ಜೀಯೆಸ್ಸೆಸ್ ಅವರು ಕನ್ನಡ ಸಾಹಿತ್ಯ ಪಂಡಿತರಿಗೆಸಾಹಿತ್ಯ ಚಿಂತಕರಿಗೆಸಾಹಿತ್ಯ ಪ್ರಿಯರಿಗೆ ಎಷ್ಟು ಪ್ರಿಯರೋಜನಸಾಮಾನ್ಯರಿಗೆ ಕೂಡ ಬಲುಪ್ರಿಯರು.  ಅವರ ಭಾವಗೀತೆಗಳು ಹಲವಾರು ಪ್ರಮುಖ ಹಾಡುಗಾರರಜನಸಾಮಾನ್ಯರ ಧ್ವನಿಗಳಲ್ಲಿ ಹಲವಾರು ದಶಕಗಳಿಂದ ನಲಿಯುತ್ತ ಸಾಗಿದೆ.  ‘ಎದೆ ತುಂಬಿ ಹಾಡಿದೆನು ಅಂದು ನಾನು’ ಹಾಡನ್ನು ಅನುಭಾವಿಸದ ಕನ್ನಡಿಗನೇ ಇಲ್ಲ.  ಎಲ್ಲ ಮಾದರಿಯ ಕವಿತೆಗಳಲ್ಲಿಹಾಡುಗಳಲ್ಲಿ ಅದು ನಿರಂತರವಾಗಿ ಜನರ ನಾಲಿಗೆಯಲ್ಲಿಜನಮಾನಸದಲ್ಲಿ ಬೆಳಗುತ್ತಿದೆ.  ‘ಉಡುಗಣವೇಷ್ಟಿತ ಚಂದ್ರ ಸುಶೋಭಿತ ನೀಲಾಂಬರ ಸಂಚಾರಿ’, ‘ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ’, ‘ಕಾಣದ ಕಡಲಿಗೆ ಹಂಬಲಿಸಿದೆ ಮನ’, ‘ಯಾರವರು ಯಾರವರು ಯಾರವರು ಯಾರೋ’, ‘ಆಕಾಶದ ನೀಲಿಯಲ್ಲಿ ಚಂದ್ರತಾರೆ ತೊಟ್ಟಿಲಲ್ಲಿ’, ‘ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು’, ‘ಹಾಡು ಹಳೆಯದಾದರೇನು’, ‘ಯಾವುದೀ ಪ್ರವಾಹವೂ’, ‘ಬೆಳಗು ಬಾ ಹಣತೆಯನು‘, ‘ನೀನು ಮುಗಿಲು ನಾನು ನೆಲ‘  ಹೀಗೆ ಅವರ ಭಾವಗೀತೆಗಳನ್ನು  ಒಂದಾದ ಮೇಲೆ ಒಂದು ನೆನಪಿಸಿಕೊಳ್ಳುತ್ತಲೇ ಇರಬೇಕು ಎಂದೆನಿಸುತ್ತದೆ ಮಾತ್ರವಲ್ಲ ಆ ನೆನಪೇ ಒಂದು ಸವಿ ಪಯಣದ ಮೆಲುಕಿನಂತಿರುತ್ತದೆ.  ಜೀಯೆಸ್ಸೆಸ್ ಕನ್ನಡಪರ ಚಳುವಳಿಗಳಲ್ಲಿಖಾಳಜಿಗಳಲ್ಲಿ ಕೂಡಾ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದವರು.

 

ಕನ್ನಡದ ಮುಖ್ಯಕವಿಗಳಾಗಿ ಜೀಯೆಸ್ಸೆಸ್ ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಕಾವ್ಯರಚನೆ ಮಾಡಿದ್ದಾರೆ.  ಕುವೆಂಪು ಮತ್ತು ಪು.ತಿ.ನ ಅವರ ಕಾವ್ಯರಚನೆಗಳಿಂದ ಬೇರೆ ಬೇರೆ ಬಗೆಯಲ್ಲಿ ಬೇರೆ ಬೇರೆ ಪ್ರಮಾಣಗಳಲ್ಲಿ ಪ್ರಭಾವಿತರಾಗಿ ಕವಿತೆಗಳನ್ನು ಬರೆಯತೊಡಗಿದ ಜೀಯೆಸ್ಸೆಸ್ ಮುಂದಿನ ಕನ್ನಡ ಕಾವ್ಯದ ಬೆಳವಣಿಗೆಯಲ್ಲಿ ಬೆರೆಯುತ್ತ ಬೆಳೆದರು.  ನವೋದಯನವ್ಯಬಂಡಾಯಗಳೆಂಬ ಮಾರ್ಗಗಳು ಅವರ ಕಾವ್ಯರಚನೆಯನ್ನು ಪ್ರಭಾವಿಸಿವೆ. ಇವುಗಳ ಪ್ರಭಾವ ಏನೇ ಇದ್ದರೂಜೀಯೆಸ್ಸೆಸ್ ಅವರ ಮುಖ್ಯ ಕವಿತೆಗಳಲ್ಲಿ ತುಂಬಿರುವುದು ಪ್ರಸಾದ ಗುಣ.  ಇವರ ಕವನ ಸಮುದಾಯದ ಅಧಿಕತಮ ಕವಿತೆಗಳ ಸಾಧಾರಣ ಧರ್ಮವನ್ನು ಗಮನಿಸಿದರೆ ಕವಿಕಾವ್ಯಶರೀರವನ್ನುಪದಸಂಯೋಜನೆಯನ್ನುಅರ್ಥವು ಓದುಗನಿಗೆ ಸಂವಹನಗೊಳಿಸುವ ಪಾರದರ್ಶಕ ಮಾಧ್ಯಮವನ್ನಾಗಿ ಬಳಸುತ್ತಿರುವುದು ಸ್ಪಷ್ಟಗೊಳ್ಳುತ್ತದೆ.  ಕಾವ್ಯಶರೀರ ‘ಅರ್ಥವನ್ನು ಮುಚ್ಚಿಡಲು ರೂಪುಗೊಂಡುದಲ್ಲ.  ಹಾಗೆಯೇ ‘ಅರ್ಥವನ್ನು ಗ್ರಹಿಸಿಕೊಳ್ಳಲೆಂದೇ ಕಾವ್ಯ ಶರೀರವನ್ನು ರೂಪಿಸುವ ನವ್ಯಕವಿಗಳ ಮಾದರಿಯೂ ಇವರದ್ದಲ್ಲ.  ಕವಿ ತನ್ನ ಅನುಭವಕ್ಕೆ ದಕ್ಕಿದ ಭಾವಾರ್ಥಗಳನ್ನು ಭಾಷಿಕವಾಗಿ ಮಂಡಿಸುತ್ತಾರೆಹೀಗಾಗಿ ಇದೊಂದು ಬಗೆಯ ಧ್ಯಾನಿತ ಕಾವ್ಯ.   ಹಾಗಾಗಿ  ಕವಿ ಅನುಭವದ ಗ್ರಹಿಕೆಗೆ ಕಾವ್ಯ ಬಿಡುಗಡೆಯ ಮಾಧ್ಯಮವಾಗುತ್ತದೆ.

 

ಸಾಮಗಾನ’, ‘ಚೆಲುವು-ಒಲವು’, ‘ದೇವಶಿಲ್ಪ’, ‘ದೀಪದ ಹೆಜ್ಜೆ’, ‘ಅನಾವರಣ’, ‘ತೆರೆದ ಬಾಗಿಲು’, ‘ಗೋಡೆ’, ‘ವ್ಯಕ್ತಮಧ್ಯ’, ‘ತೀರ್ಥವಾಣಿ’, ‘ಕಾರ್ತಿಕ’, ಕಾಡಿನ ಕತ್ತಲಲ್ಲಿ’, ‘ಪ್ರೀತಿ ಇಲ್ಲದ ಮೇಲೆ’, ‘ಚಕ್ರಗತಿ’ ಅವರ ಪ್ರಮುಖ ಕವನ ಸಂಕಲನಗಳು.  ಜೀಯೆಸ್ಸೆಸ್ ತಮ್ಮ ಕವಿತೆಗಳಲ್ಲಿ ಎರಡು ಜಗತ್ತುಗಳಿಗೆ ಸ್ಪಂದಿಸುವ ಹೊಣೆ ಹೊರಲು ಸಿದ್ಧರಾಗುವುದು ಕಂಡುಬರುತ್ತದೆ.  ಒಂದು ಜೀವಸಂಮೃದ್ಧ ಪ್ರಕೃತಿಇನ್ನೊಂದು ಮಾನವ ಕೇಂದ್ರಿತ ಸಮಾಜ.  ವಿಸ್ಮಯ ಉತ್ಸುಕತೆಗಳು ಅವರ ಕವಿತೆಗಳ ಪ್ರಧಾನ ಭಾವಗಳಾಗುತ್ತವೆ.  ಪ್ರಕೃತಿಯ ನಿಯತ ಲಯಗಳು ಕವಿಗೆ ಸದಾ ಆಕರ್ಷಣೆಯನ್ನು ಉಂಟುಮಾಡಿವೆ.  ಇನ್ನೊಂದು ನೆಲೆಯಲ್ಲಿ ನಿರೂಪಕ ಸಾಮಾಜಿಕ ಹೊಣೆಗಾರಿಕೆಯನ್ನು ಪಡೆದುಕೊಳ್ಳುತ್ತಾನೆ.  ಆವರಣದ ಮಾನವ ಜಗತ್ತಿನ ವೈಸಾದೃಶ್ಯಗಳನ್ನುಲಯರಾಹಿತ್ಯವನ್ನುಅಪಶ್ರುತಿಗಳನ್ನು ಗ್ರಹಿಸಿ ಅವುಗಳನ್ನು ತನ್ನ ಕವಿತೆಗಳಲ್ಲಿ ಮಂಡಿಸುವುದು ಈ ನಿರೂಪಕನ ಹೊಣೆ. 

 

ಕಾಲ’ ಮತ್ತು ‘ಮನುಷ್ಯ’ ತಮ್ಮ ಕಾವ್ಯದ ಕೇಂದ್ರಗಳು ಎಂದು ಜೀಯೆಸ್ಸೆಸ್ ಹೇಳಿರುವುದುಂಟು.  ನಿರಂತರವಾದದ್ದು ಹಾಗೂ ಅದರ ಒಂದು ಘಟಕದಲ್ಲಿ ನಿಜವಾಗವಂಥದ್ದು ಇವೆರಡೂ,  ಅತೀತವಾದದ್ದು ಅನ್ಯವಲ್ಲಅದು ಲೋಕವೇ ಎಂಬ ನೆಲೆಯಲ್ಲಿರುವ ಇವರ ಕಾವ್ಯ ಲೋಕಪ್ರೀತಿಯದು.

 

ಪರಿಶೀಲನದಿಂದ’ ಮೊದಲಾಗಿ ‘ಗತಿಬಿಂಬ’, ‘ನವೋದಯ’, ‘ಅನುರಣನ’, ‘ಪ್ರತಿಕ್ರಿಯೆ’, ಮತ್ತು ‘ಬೆಡಗು’ ವರೆಗಿನ ಅವರ ವಿಮರ್ಶೆಯ ಸಂಕಲನಗಳು ಪ್ರಾಚೀನಮಧ್ಯಕಾಲೀನ ಹಾಗೂ ಆಧುನಿಕ ಸಾಹಿತ್ಯ ಕೃತಿಗಳ ಬಗೆಗೆ ಸಮರ್ಥ ಒಳನೋಟಗಳನ್ನು ನೀಡುತ್ತವೆ.  ಕನ್ನಡ ನವೋದಯ ವಿಮರ್ಶೆಯ ವಿಚಾರಮೂಲವಾದಿ ಆಕೃತಿಗಳನ್ನು ಇಡಿಯಾಗಿ ಕನ್ನಡ ಸಾಹಿತ್ಯ ಪರಂಪರೆ ಮತ್ತು ಸಮಕಾಲೀನ ಕಾವ್ಯಕ್ಕೆ ಸಮರ್ಥವಾಗಿ ಅನ್ವಯಿಸುವ ಜೀಯೆಸ್ಸೆಸ್ ಅವರ ‘ಸೌಂದರ್ಯ ಸಮೀಕ್ಷೆ’ ಮಹಾಪ್ರಬಂಧ ಅವರ ವಿಮರ್ಶಾ ಪ್ರಯತ್ನದ ಪ್ರಮುಖ ಹಂತ.  ಅವರ ‘ಸೌಂದರ್ಯ ಸಮೀಕ್ಷೆಯಲ್ಲಿ ಕಾವ್ಯಗಳಲ್ಲಿಕೃತಿಭಾಗಗಳಲ್ಲಿ ಕಂಡು ಬರುವ ‘ಲೋಕಾನುಭವ ಪರಿವರ್ತನೆಯನ್ನು ವ್ಯಾಖ್ಯಾನಿಸುವ ಬಗೆ ಸಾಹಿತ್ಯಾಭ್ಯಾಸಿಗಳಿಗೆ ಈಗಲೂ ಸಾಹಿತ್ಯಾಧ್ಯಯನಕ್ಕೆ ಪ್ರವೇಶವನ್ನುಸಾಹಿತ್ಯಾಭಿರುಚಿಗೆ ಮಾದರಿಯನ್ನು ಒದಗಿಸಬಲ್ಲದು.  ತಾತ್ವಿಕವಾಗಿ ಕನ್ನಡ ಕಾವ್ಯಪರಂಪರೆಯನ್ನು ವ್ಯಾಖ್ಯಾನಿಸುವ ಅವರ ಇನ್ನೆರಡು ಪ್ರಯತ್ನಗಳೆಂದರೆ ‘ಕನ್ನಡ ಸಾಹಿತ್ಯ ಸಮೀಕ್ಷೆ’ ಮತ್ತು ‘ಕನ್ನಡ ಕವಿಗಳ ಕಾವ್ಯ ಕಲ್ಪನೆ’.  ಕನ್ನಡ ಸಾಹಿತ್ಯ ಮೀಮಾಂಸೆಯ ಚೌಕಟ್ಟನ್ನು ರಚಿಸಲು ಬೇಕಾದ ಮೂಲಭೂತ ಅಂಶಗಳು ಈ ಕೃತಿಗಳಲ್ಲಿ ಚರ್ಚಿತವಾಗಿವೆ. 

 

ಮಹಾಕಾವ್ಯ ಸಮೀಕ್ಷೆ’ ಗ್ರಂಥದಲ್ಲಿ ಭಾರತೀಯ ಮತ್ತು ಪಾಶ್ಚಾತ್ಯ ಮಹಾಕಾವ್ಯ ಸಂಬಂಧ ತತ್ತ್ವಗಳನ್ನು ತೌಲನಿಕವಾಗಿ ವಿವೇಚಿಸಲಾಗಿದೆ.  ಇಂಥ ಹೋಲಿಕೆಯ ಅಧ್ಯಯನವನ್ನು ಸಾಹಿತ್ಯ ತತ್ವಗಳತಾತ್ತ್ವಿಕ ಪರಿಕಲ್ಪನೆಗಳ ನೆಲೆಯಲ್ಲಿ ಬಳಸಿ ಬರೆದ ಲೇಖನಗಳ ಸಂಕಲನ, ‘ಕಾವ್ಯಾರ್ಥ ಚಿಂತನ’.  ಜೀಯೆಸ್ಸೆಸ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನು ತಂದು ಕೊಟ್ಟ ಕೃತಿ ಇದು. 

 

ಇಷ್ಟೆಲ್ಲಾ ಬರಹಗಳ ನಡುವೆ ಜೀಯೆಸ್ಸೆಸ್ ಮೂರು ಪ್ರವಾಸ ಕಥನಗಳನ್ನು (ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಂಗೆಯ ಶಿಖರಗಳಲ್ಲಿ ಮತ್ತು ಅಮೆರಿಕದಲ್ಲಿ ಕನ್ನಡಿಗ)ಒಂದು ಜೀವನಚಿತ್ರವನ್ನು (ಕರ್ಮಯೋಗಿ) ಹಾಗೂ ಆತ್ಮಕಥನ ಭಾಗವನ್ನು (ಚತುರಂಗ) ಬರೆದಿದ್ದಾರೆ.  ಪ್ರವಾಸಕಥನಗಳು ಸಮೃದ್ಧ ವಿವರಗಳ ಜೊತೆಗೆ ಸಂವೇದನಾಶೀಲವಾದ ಮನಸ್ಸಿನ ತುಡಿತಗಳನ್ನು ಒಳಗೊಂಡು ಮುಖ್ಯವಾಗುತ್ತದೆ. 

 

ಕರ್ಮಯೋಗಿ’ ಸಿದ್ಧರಾಮನನ್ನು ಕುರಿತು ಬರೆದ ಜೀವನಚಿತ್ರ.  ಕನ್ನಡ ಕಾವ್ಯಗಳನ್ನುಅವುಗಳ ಕಥನವನ್ನು ಆಧುನಿಕ ನುಡಿಕಟ್ಟಿನಲ್ಲಿ ಹೇಳುವ ಪ್ರಯತ್ನಗಳಲ್ಲಿ ಇದು ಒಂದು.  ‘ಚತುರಂಗದಲ್ಲಿ ತಮ್ಮ ಜೀವನದ ಬೇರೆಬೇರೆ ಹಂತಗಳನ್ನುನೆಲೆಗಳನ್ನು ಗಮನಿಸಿ ಮುಖ್ಯವಾದ ವಿವರಗಳನ್ನು ಬಳಸಿ ಒಂದು ಆತ್ಮಕಥಾನಕವನ್ನು ಬರೆದಿದ್ದಾರೆ. 

 

ಕಳೆದ ಶತಮಾನದ ಸಾಹಿತ್ಯ ಚರಿತ್ರೆ ಬರೆಯುವವರು ಗಮನಿಸಲೇಬೇಕಾದ ಬಹುಮುಖ್ಯ ಕೃತಿಗಳನ್ನು ಜೀಯೆಸ್ಸೆಸ್ ಬರೆದಿದ್ದಾರೆ.  ಮಾತ್ರವಲ್ಲ ಸಾಹಿತ್ಯದ ಬೆಳವಣಿಗೆಯ ಹಲವು ನೆಲೆಗಳಲ್ಲಿ ಪರೋಕ್ಷವಾಗಿ ತಮ್ಮ ಸಾಹಿತ್ಯಕ ವ್ಯಕ್ತಿತ್ವದಿಂದ ಪ್ರೇರಣೆಯನ್ನು ಒದಗಿಸಿದ್ದಾರೆ ಎಂಬುದನ್ನು ನಾವು ಇಲ್ಲಿ ಪ್ರಮುಖವಾಗಿ ಗಮನಿಸಬೇಕು. 

 

ಈ ಸಾಹಿತ್ಯಾಚಾರ್ಯರು ಡಿಸೆಂಬರ್ 23, 2013ರಂದು ಈ ಲೋಕವನ್ನಗಳಿದರು.  ಈ ಮಹಾನ್ ಚೇತನಕ್ಕೆ ಅವರ ಜನ್ಮದಿನದ ನೆನಪಲ್ಲಿ ಸಾಷ್ಟಾಂಗ ನಮನ.

 

(ಆಧಾರ:  ಈ ಲೇಖನದಲ್ಲಿನ ಬಹುತೇಕ ಪ್ರಮುಖ ವಿಚಾರಗಳಿಗೆ ಡಾ. ಕೆ. ವಿ. ನಾರಾಯಣರ ಜಿ. ಎಸ್. ಶಿವರುದ್ರಪ್ಪನವರ ಕುರಿತಾದ ಬರಹವನ್ನು ಆಧರಿಸಿದ್ದೇನೆ)

Tag: G. S. Shivarudrappa

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)