ಹೊರನಾಡ ಕನ್ನಡಿಗರ ರಾಷ್ಟ್ರೀಯ ಸಮಾವೇಶ

ಹೊರನಾಡ ಕನ್ನಡಿಗರ ರಾಷ್ಟ್ರೀಯ ಸಮಾವೇಶ

ಗಣ್ಯರಿಂದ ಉದ್ಘಾಟನೆ
ಗಣ್ಯರಿಂದ ಸಮಾವೇಶದ ಆರಂಭಕ್ಕೆ ದೀಪಜ್ಯೋತಿ: ಶ್ರೀ ಅನಂತಕುಮಾರ್, ಶ್ರೀಮತಿ ಉಮಾಶ್ರೀ, ಶ್ರೀ ಅಪ್ಪಾಜಿ ಸಿ.ಎಸ್. ನಾಡಗೌಡ, ಡಾ. ತೇಜಸ್ವಿ ಕಟ್ಟಿಮನಿ, ಶ್ರೀ ವಸಂತಶೆಟ್ಟಿ ಬೆಳ್ಳಾರೆ ಅವರೊಂದಿಗೆ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್

ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರ  ಸಮರ್ಥ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತನ್ನ ನೂರೊಂದು ವರ್ಷಗಳ ಇತಿಹಾಸದಲ್ಲಿ, ಪ್ರಪ್ರಥವಾಗಿ “ಹೊರನಾಡ ಕನ್ನಡಿಗರ ರಾಷ್ಟ್ರೀಯ ಸಮಾವೇಶವನ್ನು” ೨೦೧೬ ವರ್ಷದ ಅಕ್ಟೋಬರ್ ೮ ಮತ್ತು ೯ ದಿನಗಳಂದು ದೇಶದ ರಾಜಧಾನಿಯಾದ ನವದೆಹಲಿಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಿತು.  ಈ ಸಮಾವೇಶಕ್ಕೆ ಮಧ್ಯಪ್ರದೇಶದ ಅಮರಕಂಟಕದಲ್ಲಿರುವ ಇಂದಿರಾಗಾಂಧೀ  ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಹಾಗೂ  ದೆಹಲಿ ಕರ್ನಾಟಕ ಸಂಘಗಳು  ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ  ಸಮರ್ಥ ರೀತಿಯಲ್ಲಿ  ಸಹಯೋಗ ನೀಡಿದವು.

ಕರ್ನಾಟಕದಾಚೆಗಿನ ಕನ್ನಡಿಗರೊಂದಿಗೆ  ಮುಖಾಮುಖಿ ಆಗುವುದರೊಂದಿಗೆ, ಅವರ ಅಸ್ಮಿತೆ ಕುರಿತಂತೆ  ಚರ್ಚೆ, ಈ ಜನರು ತಮ್ಮ ತಮ್ಮ ರಾಜ್ಯಗಳಲ್ಲಿ  ಸಾಮರಸ್ಯದಿಂದ  ಇತರರೊಂದಿಗೆ ಬದುಕುವ ಬಗೆ, ಅಲ್ಲಿ  ಉಂಟಾಗುವ ಹಲವಾರು ಸವಾಲುಗಳು – ಇವೇ ಮುಂತಾದ ವಿಚಾರಗಳ ಕುರಿತ ಚಿಂತನ – ಮಂಥನ ಅತ್ಯಂತ ಗಹನವಾದ  ವಿಚಾರ ವಿನಿಮಯಗಳ ಆಳದಲ್ಲಿ ಈ ಎರಡು ದಿನಗಳ ಸಮಾವೇಶದಲ್ಲಿ ಕೈಗೂಡಿತು.  ಸಮಾವೇಶದಲ್ಲಿ ನಡೆದ ಉಪನ್ಯಾಸ  ಮತ್ತು ಚರ್ಚೆಗಳಲ್ಲಿ   ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿನ ಗಣ್ಯ ಮಂತ್ರಿಗಳು, ವಿದ್ವಾಂಸರುಗಳೇ ಅಲ್ಲದೆ  ಬೇರೆ ಬೇರೆ ರಾಜ್ಯಗಳಿಂದ  ೩೦೦ಕ್ಕೂ ಹೆಚ್ಚು ಪ್ರತಿನಿಧಿಗಳು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ  ಹಾಗೂ  ೪ ಗಡಿನಾಡ ಘಟಕಗಳಿಂದ ಚುನಾಯಿತರಾದ  ಕಾರ್ಯಕಾರಿ ಸಮಿತಿ ಸದಸ್ಯರೂ ಹೀಗೆ  ಒಟ್ಟು  ೬೦೦ಕ್ಕೂ  ಹೆಚ್ಚು ಮಂದಿ  ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.  ವಿಚಾರಗೋಷ್ಠಿಗಳ  ಜೊತೆಗೆ ಹಿರಿಯ ಮತ್ತು ಯುವಪ್ರತಿಭೆಗಳ  ಕವಿಗೋಷ್ಠಿ ಹಾಗೂ   ಎರಡೂ ದಿನಗಳ  ಸಂಜೆಯ ವೇಳೆಯಲ್ಲಿ  ಪ್ರಸಿದ್ಧ  ಕಲಾವಿದರ ತಂಡಗಳಿಂದ ಏರ್ಪಾಡಾಗಿದ್ದ ಸಾಂಸ್ಕೃತಿಕ  ಕಾರ್ಯಕ್ರಮಗಳೂ  ಸಭಾಸದಸರನ್ನು  ಆಪ್ತವಾಗಿ ಸೆಳೆದವು.

ಈ ಸಮಾವೇಶದಲ್ಲಿ  ಜರುಗಿದ  ವೈವಿಧ್ಯಮಯ   ಹಾಗೂ ವಿಚಾರಪೂರಿತ ಗೋಷ್ಠಿಗಳ ಮೂಲಕ ವಿವಿಧ ಭಾಗಗಳಲ್ಲಿನ ಕನ್ನಡ ಜನರ  ಸಮಸ್ಯೆಗಳನ್ನು ಕುರಿತು  ಕೇಂದ್ರ ಸರ್ಕಾರದ  ಗಮನ ಸೆಳೆದಿರುವುದರ ಜೊತೆ ಜೊತೆಗೆ, ಈ  ಗೋಷ್ಠಿಗಳಲ್ಲಿ  ಲಭಿಸಿರುವ   ಉತ್ತಮ  ಫಲಿತಾಂಶವನ್ನು ಕನ್ನಡ ಸಾಹಿತ್ಯ ಪರಿಷತ್ತು  ತನ್ನ ಗಮನಕ್ಕೆ  ತೆಗೆದುಕೊಂಡಿದ್ದು ಎಲ್ಲಾ ಕನ್ನಡಿಗರನ್ನೂ  ಭಾವನಾತ್ಮಕವಾಗಿ  ಒಂದುಮಾಡುವತ್ತ  ತನ್ನ ದಿಟ್ಟ ಹೆಜ್ಜೆಗಳನ್ನು ಮುಂದುವರೆಸಿದೆ. ಕನ್ನಡಿಗರೆಲ್ಲರ ಆಸೆ ಆಶಯಗಳಿಗನುಗುಣವಾಗಿ  ಗುಣಾತ್ಮಕವಾಗಿ  ಕಾರ್ಯನಿರ್ವಹಿಸಲು  ಬದ್ಧತೆಯಿಂದ  ಮುಂದೆ ಸಾಗಿದೆ.

Tag: Horanada Kannadigara Rashtreeya Samavesha

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)