ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೧
ಅಧ್ಯಕ್ಷರು : ಹೆಚ್. ವಿ. ನಂಜುಂಡಯ್ಯ (೧೯೧೫–೧೯೨0)
ಜೀವನ
ಆಂಧ್ರದಿಂದ ಕರ್ನಾಟಕಕ್ಕೆ ವಲಸೆಬಂದ ಸಾಮಾನ್ಯ ಬಡ ಕುಟುಂಬದಲ್ಲಿ ಸುಬ್ಬಯ್ಯ ಮತ್ತು ಅನ್ನಪೂರ್ಣಮ್ಮ ದಂಪತಿಗಳಿಗೆ ೨ನೇ ಮಗನಾಗಿ ಹೆಚ್.ವಿ. ನಂಜುಂಡಯ್ಯನವರು (ಹೆಬ್ಬಳಲು ವೇಲ್ಪನೂರು ನಂಜುಂಡಯ್ಯ) ೧೩-೧0-೧೮೬0ರಲ್ಲಿ ಜನ್ಮ ತಾಳಿದರು. ಮೈಸೂರು ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದು ೧೮೮೬ರಲ್ಲಿ ಬಿಎಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ೧೮೮೫ರಲ್ಲಿ ಎಂಎ ಪದವಿಯನ್ನು ಪಡೆದರು. ೧೮೯೫ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯ ಫೆಲೋಷಿಪ್ ನೀಡಿ ಗೌರವಿಸಿತು.
೧೮೮೫ರಲ್ಲಿ ಮೈಸೂರು ಸರ್ಕಾರದಲ್ಲಿ ಉದ್ಯೋಗಕ್ಕೆ ಸೇರಿ ಮುನ್ಸೀಫರಾದರು. ೧೮೮೬ರಲ್ಲಿ ರೆವಿನ್ಯೂ ಇಲಾಖೆಯಲ್ಲಿ ಅಸಿಸ್ಟೆಂಟ್ ಕಮೀಷನರ್ ಅನಂತರ ಅಂಡರ್ ಸೆಕ್ರೆಟರಿ, ಸಬ್ ಜಡ್ಜ್ ಆಗಿ ಸೇವೆ ಸಲ್ಲಿಸಿದ ನಂತರ ಚೀಫ್ ಜಡ್ಜ್ ಆಗಿ ಸೇವೆ ಸಲ್ಲಿಸಿ ೧೯೧೬ರಲ್ಲಿ ನಿವೃತ್ತರಾದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಥಮ ಉಪಕುಲಪತಿಗಳಾಗಿ ನೇಮಕಗೊಂಡು ೪ ವರ್ಷಗಳ ಕಾಲ ಅದರ ಪ್ರಗತಿಗೆ ದುಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಶ್ರಮಿಸಿದವರಲ್ಲಿ ಇವರೂ ಒಬ್ಬರು. ೧೯೧೫ರಿಂದ ೩ ಸಮ್ಮೇಳನಗಳಿಗೆ ಅಧ್ಯಕ್ಷರಾದ ಇವರು ಸಮ್ಮೇಳನಗಳ ಇತಿಹಾಸದಲ್ಲೇ ವಿಕ್ರಮ ಸಾಧಿಸಿದ್ದಾರೆ. ಬೇರಾವ ಅಧ್ಯಕ್ಷರೂ ಒಂದಕ್ಕಿಂತ ಹೆಚ್ಚು ಬಾರಿ ಸಮ್ಮೇಳನಾಧ್ಯಕ್ಷರಾಗಿಲ್ಲ.
ಬ್ರಿಟಿಷ್ ಸರ್ಕಾರ ೧೯೧೪ರಲ್ಲಿ ಸಿ.ಐ.ಇ. (ಕಂಪಾನಿಯನ್ ಆಫ್ ದಿ ಇಂಡಿಯನ್ ಎಂಪೈರ್) ಬಿರುದು ನೀಡಿತು. ಮೈಸೂರು ಮಹಾರಾಜರು ರಾಜಮಂತ್ರಪ್ರವೀಣ ಬಿರುದನ್ನು ನೀಡಿದರು.
ಕನ್ನಡ ನವೋದಯ ಕಾಲದ ಪ್ರಾರಂಭಘಟ್ಟದಲ್ಲಿ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದವರಲ್ಲಿ ಹೆಚ್.ವಿ. ನಂಜುಂಡಯ್ಯನವರೂ ಒಬ್ಬರು. ಇವರು ರಚಿಸಿದ ಪ್ರಮುಖ ಕೃತಿಗಳು ಹೀಗಿವೆ.
೧. ವ್ಯವಹಾರದೀಪಿಕೆ (ನ್ಯಾಯಶಾಸ್ತ್ರ) – ೧೮೯0 ೨. ಅರ್ಥಶಾಸ್ತ್ರ – ೧೯0೧ ೩. ಲೇಖ್ಯಬೋಧಿನಿ ೪. ರಿಲಿಜನ್ ಅಂಡ್ ಮಾರೆಲ್ ಎಜುಕೇಷನ್ (ಇಂಗ್ಲಿಷ್) ೫. ಆಂಗ್ಲೋ ಇಂಡಿಯನ್ ಎಂಪೈರ್ (ಇಂಗ್ಲಿಷ್) ೬. ಮೈಸೂರು ಟ್ರೈಬ್ಸ್ ಅಂಡ್ ಕ್ಯಾಸ್ಟ್ಸ್ (ಸಂಪಾದನೆ) ೭. ವ್ಯವಹಾರ ಧರ್ಮಶಾಸ್ತ್ರ ೮. ವಿಕ್ಟರ್ ಹ್ಯೂಗೋವಿನ ಫ್ರೆಂಚ್ ಕವಿತೆಗಳ ಅನುವಾದ
ಶ್ರೀಯುತರು ದಿನಾಂಕ ೨-೫-೧೯೨0ರಲ್ಲಿ ನಿಧನರಾದರು.
ಸಾಧನೆ :
ಹೆಚ್.ವಿ. ನಂಜುಂಡಯ್ಯನವರು (೧೯೧೫ರಿಂದ ೧೯೨0ರವರೆಗೆ) ಪರಿಷತ್ತಿನ ಪ್ರಥಮ ಅಧ್ಯಕ್ಷರಾದರು. ಪರಿಷತ್ತಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೂರು ಸಮ್ಮೇಳನಗಳಿಗೆ ಅಧ್ಯಕ್ಷರಾದರು. ಇದುವರೆಗಿನ ನೂರು ವರ್ಷಕ್ಕೂ ಹೆಚ್ಚಿನ ಇತಿಹಾಸದಲ್ಲಿ, ಪರಿಷತ್ತಿನ ಸಮ್ಮೇಳನಗಳಲ್ಲಿ ಅಧ್ಯಕ್ಷರಾದವರಲ್ಲಿ ಇವರನ್ನು ಬಿಟ್ಟರೆ ಉಳಿದವರೆಲ್ಲರೂ ಒಂದೊಂದೇ ಬಾರಿ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಇವರು ಅಧ್ಯಕ್ಷರಾದ ಕಾಲದಲ್ಲಿ ಅರಮನೆಯ ಬೆಂಬಲವಿದ್ದರೂ, ಸರ್ಕಾರದ ಅಲ್ಪಸ್ವಲ್ಪ ಸಹಾಯ ದೊರಕಿದರೂ ಪರಿಷತ್ತಿನ ಚಟುವಟಿಕೆಗಳಿಗೆ ಧನದ ಅಭಾವ ವಿಪರೀತವಾಗಿತ್ತು. ಮಹಾಯುದ್ಧದ ಕಾಲ ಬೇರೆ ಮತ್ತು ಆಗತಾನೇ ಪ್ರಾರಂಭವಾದ ಪರಿಷತ್ತು ಹೆಚ್ಚು ಕಡಿಮೆ ವಿದ್ವನ್ಮಂಡಲ ಆಗಿತ್ತು. ಜನಸಾಮಾನ್ಯರೊಂದಿಗೆ ಮಿಳಿತಗೊಂಡ ಸಂಸ್ಥೆ ಆಗಿರಲಿಲ್ಲ. ಇಂಥ ಸನ್ನಿವೇಶದಲ್ಲಿ ನಂಜುಂಡಯ್ಯನವರು ತಮ್ಮ ವೈಯ್ಯಕ್ತಿಕ ಪ್ರಭಾವದಿಂದ ಪರಿಷತ್ತನ್ನು ಮುನ್ನಡೆಸಿದರು. ಕನ್ನಡ ಹಸ್ತಪ್ರತಿಗಳ ಸಂಗ್ರಹ, ಸಂಪಾದನೆ, ಪರಿಷತ್ಪತ್ರಿಕೆ ಪ್ರಾರಂಭ, ಕನ್ನಡ ಗ್ರಂಥಗಳ ಪ್ರಕಟನೆಗಳಿಗೆ ಚಾಲನೆ ದೊರಕಿದವು. ಮೊದಲು ಪರಿಷತ್ತಿಗೆ ಸ್ವಂತ ಕಟ್ಟಡವಿರಲಿಲ್ಲ. ಇವರ ಕಾಲದಲ್ಲಿ ಚಾಮರಾಜಪೇಟೆಯಲ್ಲಿದ್ದ ಒಂದು ಬಾಡಿಗೆ ಕಟ್ಟಡದಿಂದ ಶಂಕರಪುರದ ೪ನೇ ಅಡ್ಡರಸ್ತೆಯಲ್ಲಿದ್ದ ಇನ್ನೊಂದು ಬಾಡಿಗೆ ಕಟ್ಟಡಕ್ಕೆ ವರ್ಗಾವಣೆ ಆಯಿತು. ಪರಿಷತ್ತಿಗೆ ಸ್ವಂತ ಕಟ್ಟಡ ಪಡೆಯಲು ಪ್ರಯತ್ನ ಮೊದಲಾಯಿತು. ಪರಿಷತ್ತಿನ ಬಾಡಿಗೆ ಕಟ್ಟಡದಲ್ಲೇ ಗ್ರಂಥಭಂಡಾರ ವಾಚನಾಲಯವನ್ನು ನಂಜುಂಡಯ್ಯನವರು ಪ್ರಾರಂಭಿಸಿದರು.
ಉಪಾಧ್ಯಕ್ಷರು : ಎಂ. ಶಾಮರಾವ್
ಜೀವನ :
ಹೆಚ್.ವಿ. ನಂಜುಂಡಯ್ಯನವರು ಪರಿಷತ್ತಿನ ಅಧ್ಯಕ್ಷರಾಗಿದ್ದ ಕಾಲದಲ್ಲಿ ಉಪಾಧ್ಯಕ್ಷರಾಗಿದ್ದವರು. ಪ್ರಸಿದ್ಧ ಶಿಕ್ಷಣತಜ್ಞರೂ, ಇತಿಹಾಸ ತಜ್ಞರು, ಪರಿಷತ್ತಿನ ಪರಿಷತ್ತಿನ ಸಂಸ್ಥಾಪಕರಲ್ಲಿ ಒಬ್ಬರೂ ಆಗಿದ್ದ ಎಂ. ಶಾಮರಾವ್ ಅವರು ಮೈಸೂರು ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ೧೫-೮-೧೮೬0ರಲ್ಲಿ ಶೇಷಾಚಾರ್ ನಾರಾಯಣರಾಯರ ಪುತ್ರರಾಗಿ ಜನಿಸಿದರು. ೧೮೭೫ರಿಂದ ಮೈಸೂರು ರಾಜಾ ಸ್ಕೂಲಿನಲ್ಲಿ ಶಿಕ್ಷಣವನ್ನು ಪಡೆದು ನಂತರ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ೧೮೮0ರಲ್ಲಿ ಬಿಎ ಪದವಿ ಗಳಿಸಿದರು. ೧೮೮೫ರಲ್ಲಿ ಎಂ.ಎ. ಪದವಿ ಗಳಿಸಿದ ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸಹಾಯಕ ಅಧ್ಯಾಪಕರಾಗಿ ಸೇರಿ ಅನಂತರ ೧೮೯೫ರಲ್ಲಿ ಅಸಿಸ್ಟೆಂಟ್ ಕಮೀಷನರ್ ಆದರು. ಮೈಸೂರು ಸಂಸ್ಥಾನದ ವಿವಿಧ ಕ್ಷೇತ್ರಗಳಲ್ಲಿ ಅಧಿಕಾರಿಗಳಾಗಿ ದುಡಿದರು. ಕೊನೆಗೆ ವಿದ್ಯಾಇಲಾಖೆಯ ಮುಖ್ಯಸ್ಥರಾಗಿ ೬ ವರ್ಷ ಕೆಲಸ ಮಾಡಿ ೧೯೧೮ರಲ್ಲಿ ನಿವೃತ್ತರಾದರು.
ಶಾಮರಾಯರ ಸೇವಾಕಾರ್ಯಗಳನ್ನು ಗಮನಿಸಿದ ಬ್ರಿಟಿಷ್ ಸರ್ಕಾರ ೧೯೧೪ರಲ್ಲಿ ರಾವ್ ಬಹಾದ್ದೂರ್ ಪ್ರಶಸ್ತಿಯನ್ನು, ನಾಲ್ವಡಿ ಕೃಷ್ಣರಾಜ ಒಡೆಯರ್ ೧೯೧೭ರಲ್ಲಿ ರಾಜಕಾರ್ಯಪ್ರಸಕ್ತ ಪ್ರಶಸ್ತಿಯನ್ನು ನೀಡಿದರು. ತಮ್ಮ ಆಡಳಿತದ ಅವಧಿಯಲ್ಲಿ ರಾಜ್ಯಾದ್ಯಂತ ಸಹಕಾರ ಸಂಘಗಳನ್ನು ಸಹಕಾರ ಚಳವಳಿಯನ್ನು ಪ್ರವರ್ಧಮಾನಕ್ಕೆ ತಂದು ಮೈಸೂರು ಸಂಸ್ಥಾನದ ಸಹಕಾರ ಚಳವಳಿಯ ಜನಕರು ಎಂಬ ಮನ್ನಣೆಗೆ ಪಾತ್ರರಾದರು. ಅಂದಿನ ಲೆಜಿಸ್ಲೇಟಿವ್ ಕೌನ್ಸಿಲ್ ಸದಸ್ಯರಾಗಿದ್ದ ಇವರು ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿ ಅಮೋಘ ಸೇವೆ ಸಲ್ಲಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಕಾರಣವಾದ ವಿದ್ಯಾಸಮಿತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪರಿಷತ್ತಿನ ಪ್ರಥಮ ಉಪಾಧ್ಯಕ್ಷರಾಗಿ (೧೯೧೫-೧೯೧೯) ಕೂಡ ಸೇವೆ ಸಲ್ಲಿಸಿದರು.
ಶಿಕ್ಷಣ ಮತ್ತು ಸಾಹಿತ್ಯರಂಗಗಳಲ್ಲಿ ಅನುಪಮ ಸೇವೆ ಸಲ್ಲಿಸಿರುವ ಎಂ. ಶ್ಯಾಮರಾಯರು ಕರ್ಣಾಟಕ ಗ್ರಂಥ ಸಮಿತಿ ಎಂಬ ಸಾಹಿತ್ಯ ಪತ್ರಿಕೆಯನ್ನು ೧೮೯೩ರಲ್ಲಿ ಸ್ಥಾಪಿಸಿದರು. ವಿದ್ಯಾದಾಯಿನಿ ಎಂಬ ಶಿಕ್ಷಣ ಮಾಸಪತ್ರಿಕೆ ಸ್ಥಾಪನೆ ನಡೆಸಿದ ಶ್ರೇಯಸ್ಸು ಇವರದೇ. ಎಂ. ಶಾಮರಾಯರು, ಮೈಸೂರು ಸಂಸ್ಥಾನದ ಚರಿತ್ರೆ (ಕನ್ನಡ ಗ್ರಂಥ), ಟೆನ್ ಇಯರ್ಸ್ ಆಫ್ ನೇಟಿವ್ ಇನ್ ಮೈಸೂರು (೧೮೯೧) ದಿ ಇಂಡಿಯನ್ ಹಿರೋಸ್ (೧೯೨೨) ಮಾಡರ್ನ್ ಮೈಸೂರು ( ೨ ಸಂಪುಟಗಳು ೧೯೩೬) ಎಂಬ ಇಂಗ್ಲಿಷ್ ಗ್ರಂಥಗಳನ್ನು ರಚಿಸಿದ್ದಾರೆ. ಇವಲ್ಲದೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ರಚಿಸಿರುವ ಅನೇಕ ಲೇಖನಗಳು ಅಮೂಲ್ಯವಾಗಿವೆ. ಶಾಮರಾಯರ ಬಗ್ಗೆ ಮೊದಲು ವಿವರವಾಗಿ ಬರೆದಿರುವ ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ ಅವರು ಹೇಳಿರುವ ಹಾಗೆ ಮಹಿಷಿ ಶಾಮರಾವ್ (ಎಂ. ಶಾಮರಾವ್) ಕನ್ನಡ ಭಾಷೆ ಸಾಹಿತ್ಯಗಳ ನವೋದಯ ಕಾಲದ ಅಗ್ರಗಣ್ಯ ಪುನರುಜ್ಜೀವಕರೂ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಲ್ಲಿ ಒಬ್ಬರೂ ಆಗಿದ್ದರು.
ಸಾಧನೆ :
ಕರ್ನಾಟಕ ಸಾಹಿತ್ಯ ಪರಿಷತ್ತು ೧೯೧೫ರಲ್ಲಿ ಸ್ಥಾಪನೆಯಾದಾಗ ಮೊದಲ ಅಧ್ಯಕ್ಷರಾಗಿ ರಾಜಮಂತ್ರಪ್ರವೀಣ ಹೆಚ್.ವಿ. ನಂಜುಂಡಯ್ಯನವರು ಆಯ್ಕೆಯಾದರು.
ಗ್ರಂಥ ಪ್ರಕಟನೆ : ನಂಜುಂಡಯ್ಯನವರ ಕಾಲದಲ್ಲಿ ಗ್ರಂಥಪ್ರಕಟನೆ ಸಾಹಸದ ಕೆಲಸವಾಗಿತ್ತು. ಜೇಂಸ್ ಅಬ್ರಹಾಂ ಗಾರ್‍ಫೀಲ್ಡ್‍ನ ಚರಿತ್ರೆಯನ್ನು ಪ್ರಕಟಿಸಲು ಮತ್ತು ಪರಿಷತ್ ಪತ್ರಿಕೆ ಮುದ್ರಣಕ್ಕಾಗಿ ೪೨00ರೂಗಳಿಗಾಗಿ ಸಾರ್ವಜನಿಕ ಪ್ರಕಟಣೆ ಕೊಟ್ಟದ್ದನ್ನು ಕಾಣಬಹುದು.
ಇನ್ನು ವಿದ್ವಾಂಸರು ಪ್ರಕಟಿಸಲು ಉತ್ತಮ ಹಸ್ತಪ್ರತಿಗಳನ್ನು ತಂದರೂ ಆರ್ಥಿಕ ಕೊರತೆ ಕಾರಣದಿಂದ ತಿರಸ್ಕರಿಸಬೇಕಾದ ಪರಿಸ್ಥಿತಿ ಇತ್ತು. ಉದಾಹರಣೆಗೆ ಹೇಳುವುದಾದರೆ ನಂಜುಂಡಯ್ಯನವರ ಕಾಲದಲ್ಲಿ ಹೊಸಕೆರೆ ಚಿದಂಬರಯ್ಯನವರು ಬೊಬ್ಬೂರು ರಂಗನ ಪರಶುರಾಮ ರಾಮಾಯಣವೆಂಬ ಅಪ್ರಕಟಿತ ಗ್ರಂಥವನ್ನು ಪ್ರಕಟಣೆಗಾಗಿ ಪರಿಷತ್ತಿಗೆ ಸಲ್ಲಿಸಿದಾಗ ಪ್ರಕಟಣೆಯ ಕಾರ್ಯ ನೋಡಿಕೊಳ್ಳುತ್ತಿದ್ದ ಬೆಳ್ಳಾವೆ ಅವರು. “ಕನ್ಯೆಯೇನೋ ಸಾಲಂಕೃತಳಾಗಿ ಯೋಗ್ಯಳಾಗಿದ್ದಾಳೆ. ಆದರೆ ಆಕೆಯ ಕಲ್ಯಾಣ ನಮ್ಮಿಂದ ಸಾಧ್ಯವಿಲ್ಲ ಎಂದು ವಿಷಾದದಿಂದ ತಿಳಿಸಬೇಕಾಗಿದೆ” ಎಂದು ಕಾವ್ಯಾತ್ಮಕ ಭಾಷೆಯಲ್ಲಿ ಹೇಳಿಕಳಿಸಿದರಂತೆ.
ಇವರ ಕಾಲದಲ್ಲಿ ಕರ್ನಾಟಕ ಭಾಷೆಯ ಉದ್ಗ್ರಂಥಗಳಾದ ಪಂಪಭಾರತ ಪಂಪರಾಮಾಯಣ ಗ್ರಂಥಗಳನ್ನು ಪರಿಶೋಧಿಸಿ ಶುದ್ಧಪ್ರತಿಗಳನ್ನು ಸಿದ್ಧಪಡಿಸಿ ಮುದ್ರಿಸಿಕೊಡಲು ಸರ್ಕಾರ ಪರಿಷತ್ತನ್ನು ಕೇಳಿತು. ಗಾರ್‍ಫೀಲ್ಡ್‍ನ ಗ್ರಂಥ ಪಠ್ಯವಾದದ್ದರಿಂದ (೧೯೧೯ರಲ್ಲಿ) ಪರಿಷತ್ತಿಗೆ ಸ್ವಲ್ಪಮಟ್ಟಿಗೆ ನೆರವು ಸಿಕ್ಕಿತು.
ನಂಜುಂಡಯ್ಯನವರು ಪರಿಷತ್ತಿನ ಧ್ಯೇಯವಾದ “ಕನ್ನಡ ನಾಡಿನ ಏಕೀಕರಣ ಮತ್ತು ಭಾಷಾ ಪ್ರಗತಿಗೆ, ಲೇಖಕರಿಗೆ ಪ್ರೋತ್ಸಾಹ ಗ್ರಂಥ ಪ್ರಕಟನೆಗೆ ಸಹಾಯ” ಈ ಧ್ಯೇಯಗಳಿಗೆ ಶ್ರಮಿಸಿದರು.
ಇವರು ಅಧ್ಯಕ್ಷರಾಗಿದ್ದ ೫ ವರ್ಷಗಳ ಕಾಲದಲ್ಲಿ ಉಪಾಧ್ಯಕ್ಷರಾಗಿ ಕೆಲಸ ಮಾಡಿದವರು. ಎಂ. ಶಾಮರಾವ್ ಅವರು. ಹೆಚ್.ವಿ. ನಂಜುಂಡಯ್ಯನವರ ಕಾಲದಲ್ಲಿ ಪರಿಷತ್ತಿನಿಂದ ಪಠ್ಯಗಳನ್ನು ವಿದ್ಯಾಇಲಾಖೆಗಾಗಿ ಸಿದ್ಧಪಡಿಸಲಾಗುತ್ತಿತ್ತು, ಆ ರೀತಿ ಸಿದ್ಧವಾದ ಗ್ರಂಥಗಳಿವು:
ಕನ್ನಡ ಭಾಗವತದ ೪ನೇ ಸ್ಕಂಧ, ಕನ್ನಡ ಭಾರತದ ಅರಣ್ಯ ಪರ್ವ, ಕನ್ನಡ ಭಾರತದ ದ್ರೋಣಪರ್ವ, ಇವುಗಳನ್ನು ಪಾಠಾಂತರ, ಟಿಪ್ಪಣಿಗಳೊಂದಿಗೆ ಪಂಡಿತರ ಸಹಾಯದಿಂದ ಸಿದ್ಧಪಡಿಸಲಾಗಿತ್ತು.
ಕಾರ್ಯಕ್ರಮಗಳು : ಆಗ ಕಾರ್ಯಕ್ರಮಗಳು ರೂಪಿತವಾಗುತ್ತಿದ್ದ ರೀತಿಗೆ ಒಂದು ಉದಾಹರಣೆ ಎಂದರೆ ೧೯೧೯ಡಿಸೆಂಬರ್ ೫ರಂದು ಸಂಜೆ ೪.೩0ರಲ್ಲಿ ಸೇರಿದ್ದ ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ನಡೆದ ಚರ್ಚೆಯಲ್ಲಿ ಅಂಗೀಕಾರವಾದ ವಿಷಯಗಳು ಹೀಗಿವೆ.
೧) ಜಿಜ್ಞಾಸಾರೂಪವಾಗಿ ಗ್ರಂಥ ವಿಮರ್ಶೆ ಮಾಡಿ ಹಂಪೆ ಹರಿಹರದೇವರ ಗಿರಿಜಾಕಲ್ಯಾಣದ ಮೇಲೆ ಚರ್ಚಾರೂಪವಾದ ಒಂದು ಲೇಖನವನ್ನು ೩ ತಿಂಗಳೊಳಗಾಗಿ ಬರೆದು ಕಳಿಸದವರಿಗೆ ೧00 ರೂ ಬಹುಮಾನ ಕೊಡುವುದು.
೨) ನಮ್ಮ ಕನ್ನಡ ದೇಶದಲ್ಲಿ ಹೆಂಗಸರು, ಗಂಡಸರು ಸಹ ಮಕ್ಕಳಿಗೂ ದೊಡ್ಡವರಿಗೂ ಹೇಳುವ ಪುಡಿಕತೆಗಳಲ್ಲಿ ೧0 ಕತೆಗಳಿಗೆ ಕಡಿಮೆಯಿಲ್ಲದಂತೆ ಬರೆದು ಕಳಿಸಿದವರಿಗೆ ಬಹುಮಾನ.
೩) ಕನ್ನಡ ಮಾತನಾಡತಕ್ಕ ಶೈಲಿಯಲ್ಲಿ ಲಾಲಿತ್ಯವಾಗಿ ಕಾವ್ಯ ಬರೆದವರಿಗೆ ಬಹುಮಾನ.
೪) ಕನ್ನಡದೇಶದ ನಕ್ಷೆಯನ್ನು ಬರೆಸುವುದು.
೫) ಇಂಗ್ಲಿಷ್ – ಕನ್ನಡ ನಿಘಂಟುವಿನ ವಿಚಾರವಾಗಿ ಶ್ರೀ ನಂಗಪುರಂ ವೆಂಕಟೇಶ ಅಯ್ಯಂಗಾರರು ಸಲಹೆ ಕೊಡತಕ್ಕದ್ದು.
ಸಮ್ಮೇಳನಗಳು : ಪರಿಷತ್ತಿನ ಅಧ್ಯಕ್ಷರೇ ೧, ೨, ೩ ನೇ ಸಮ್ಮೇಳನಗಳ ಅಧ್ಯಕ್ಷರೂ ಆಗಿದ್ದರು. ಆರ್. ನರಸಿಂಹಾಚಾರ್ ಅಧ್ಯಕ್ಷತೆಯ ಧಾರವಾಡದ ೪ನೇ ಸಮ್ಮೇಳನವನ್ನು ಅವರೇ ೧೯೧೯ರಲ್ಲಿ ನಡೆಸಿದರು.
Tag: M. Shamarao, upadhyaksharu
Tag: H. V. Nanjundaiah, ಎಚ್.ವಿ.ನಂಜುಂಡಯ್ಯ, ಎಚ್. ವಿ. ನಂಜುಂಡಯ್ಯ, ಎಂ.ಶಾಮರಾವ್, ಎಂ. ಶಾಮರಾವ್, upadhyaksharu
ಪ್ರತಿಕ್ರಿಯೆ