ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೨
ಅಧ್ಯಕ್ಷರು : ಎಂ. ಕಾಂತರಾಜ ಅರಸು (೧೯೨0-೧೯೨೩)
ಜೀವನ :
ಕಾಂತರಾಜ ಅರಸು ಅವರು ೧೯೨0-೧೯೨೩ ಅವಧಿಯಲ್ಲಿ ಪರಿಷತ್ತಿನ ಅಧ್ಯಕ್ಷರಾಗಿದ್ದರು. ವಿಶ್ವೇಶ್ವರಯ್ಯನವರ ನಂತರ ೧೯೧೯-೧೯೨೨ರವರೆಗೆ ದಿವಾನರಾದ ಇವರು ನಾಲ್ವಡಿ ಕೃಷ್ಣರಾಜ ಒಡೆಯರ ಸೋದರ ಮಾವಂದಿರು ಮತ್ತು ಅವರ ಸೋದರಿ ಜಯಲಕ್ಷ್ಮಮ್ಮಣಿ ಅವರ ಪತಿ. ಇವರು ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ ಮೇಲೆ ಅಸಿಸ್ಟೆಂಟ್ ಕಮಿಷನರ್, ಆಪ್ತಕಾರ್ಯದರ್ಶಿ, ಸ್ಪೆಷಲ್ ಸಬ್ ಡಿವಿಷನ್ ಆಫೀಸ್ ಡೆಪ್ಯೂಟಿ ಕಮಿಷನರ್ ಮೊದಲಾದ ನಾನಾ ಹುದ್ದೆಗಳನ್ನು ನಿರ್ವಹಿಸಿದ ನಂತರ ದಿವಾನ್ ಪದವಿಯನ್ನು ೧೯೧೮ರಲ್ಲಿ ಅಲಂಕರಿಸಿದರು. ಇವರು ತಮ್ಮ ಅಧಿಕಾರಾವಧಿಯಲ್ಲಿ ಆರ್ಥಿಕ ಸೇವಾ ಸಮಿತಿಯನ್ನು ಪುನರ್ರಚಿಸಿದರು. ನ್ಯಾಯವಿಧಾಯಕ ಸಮಿತಿಯನ್ನು ವಿಸ್ತರಿಸಿದರು. ಗಣಿಕಾರ್ಯಗಳ ಅಧೀಕ್ಷಕ ಹುದ್ದೆಯನ್ನು ನಿರ್ಮಿಸಿದರು. ಸರ್ಕಾರಿ ಸೇವೆಯಲ್ಲಿ ಮೀಸಲಾತಿ ಬಗ್ಗೆ ಆದೇಶ ಹೊರಡಿಸಿದರು. ೧೯೨೧ರಲ್ಲಿ ಚಿಕ್ಕಜಾಜೂರಿನಿಂದ ಚಿತ್ರದುರ್ಗದವರೆಗೆ ರೈಲುಮಾರ್ಗ ಹಾಕಿಸಿದರು. ೧೯೧೪ರಲ್ಲಿ ಬ್ರಿಟಿಷ್ ಸರ್ಕಾರದಿಂದ ಸಿ.ಎಸ್.ಐ. ಪ್ರಶಸ್ತಿ ಪಡೆದರು. ೧೯೫೧ರಲ್ಲಿ ಜಪಾನಿಗೆ ತೆರಳಿ ಅಲ್ಲಿನ ಆಡಳಿತ ಪ್ರಗತಿಯನ್ನು ದೇಶದ ಮುನ್ನಡೆಯನ್ನು ಅಧ್ಯಯನ ಮಾಡಿಕೊಂಡು ಬಂದರು. ಪ್ರಾಥಮಿಕ ಮಾಧ್ಯಮಿಕ ತರಗತಿಗಳಿಗೆ ಪಾಠ ಶುಲ್ಕವನ್ನು ರದ್ದು ಮಾಡಿದರು. ಹೀಗೆ ನಾನಾ ಪ್ರಗತಿಪರ ಸುಧಾರಣೆಗಳನ್ನು ಕೈಗೊಂಡ ಕಾಂತರಾಜ ಅರಸು ಅವರು ೨-೧0-೧೯೨೩ರಂದು ನಿಧನರಾದರು.
ಉಪಾಧ್ಯಕ್ಷರು : ಕರ್ಪೂರ ಶ್ರೀನಿವಾಸರಾವ್ (೧೯೨0-೧೯೩೩)
ಸಾಧನೆ :
ಕರ್ನಾಟಕ ಸಾಹಿತ್ಯ ಪರಿಷತ್ತಿನ ಕನ್ನಡ ನಿರ್ಮಾಪಕರಲ್ಲಿ ಅಗ್ರಗಣ್ಯರು ಕರ್ಪೂರ ಶ್ರೀನಿವಾಸರಾಯರು. ಅವರು ಪರಿಷತ್ತಿಗೆ ಮೊದಲು ಸ್ವಂತನೆಲೆ ಒದಗಿಸಿದವರು. ಡಿವಿಜಿ ಹೇಳಿರುವಂತೆ “ಕರ್ನಾಟಕ ಸಾಹಿತ್ಯ ಪರಿಷತ್ತನ್ನು ಕಟ್ಟುವುದಕ್ಕಾಗಿ ಕರ್ಪೂರ ಶ್ರೀನಿವಾಸರಾಯರು ಪಟ್ಟಶ್ರಮ ಅಸಾಧ್ಯವಾದುದು. ಅವರು ಎಲ್ಲಿಂದಲೋ ಸದಸ್ಯರನ್ನೂ ಹಣವನ್ನೂ ತಂದು ಸೇರಿಸುತ್ತಿದ್ದರು. ಸಮಸ್ತ ಕರ್ನಾಟಕದ ವಿದ್ವಜ್ಜನದ ಪರಿಚಯವೂ ಅವರಿಗಿತ್ತು. ಅವರು ಪರಿಷತ್ತಿನ ಒಂದು ಸಮ್ಮೇಳನವನ್ನೂ ತಪ್ಪಿಸಿಕೊಂಡವರಲ್ಲ. ಪ್ರತಿಯೊಂದು ಸಮ್ಮೇಳನದಲ್ಲಿಯೂ ಹಾಜರಿದ್ದು ಭಾಷಣ ಮಾತ್ರದಿಂದಲೇ ಅಲ್ಲದೆ, ತಮ್ಮ ವ್ಯಕ್ತಿ ಪ್ರಭಾವದಿಂದಲೂ ಕಳೆಕಟ್ಟಿಸುತ್ತಿದ್ದರು” (ಜ್ಞಾ ಚಿಶಾ ಪು೬೬). ಈ ರೀತಿಯ ಶ್ರಮವಿದ್ದುದರಿಂದಲೇ ಶ್ರೀಕೃಷ್ಣರಾಜ ಪರಿಷನ್ಮಂದಿರ ನಿರ್ಮಾಣವಾಯಿತು. ಪರಿಷತ್ತಿನ ಹಿತದ ಬಗ್ಗೆ ಹಗಲೂರಾತ್ರಿ ಚಿಂತಿಸುತ್ತಿದ್ದವರು ಅಧ್ಯಕ್ಷರಾದ ಕರ್ಪೂರರು. ಇದಕ್ಕೆ ನಿದರ್ಶನವಾಗಿ ಡಿವಿಜಿ ಪ್ರಸಂಗವೊಂದನ್ನು ಹೇಳಿದ್ದಾರೆ: “ಒಂದಾನೊಂದು ವರ್ಷ ಸಮ್ಮೇಳನದ ಅಧ್ಯಕ್ಷರ ಪದವಿಗೆ ಗುಂಪುಗಾರಿಕೆ ಮಾಡುತ್ತಿದ್ದ ವಿದ್ವಾಂಸರೊಬ್ಬರು ನಾಲ್ಕೈದು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು. ಅವರು ಉಮೇದುವಾರಿಕೆ ಪತ್ರವನ್ನು ಕೊನೆಯ ದಿನ ಶಂಕರಪುರದಲ್ಲಿದ್ದ ಪರಿಷತ್ತಿನ ಕಚೇರಿಯಲ್ಲಿ ಹಾಕಿ ಹೋಗಿದ್ದರು. ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದು ಯಾರಿಗೂ ಇಷ್ಟವಿರಲಿಲ್ಲ. ಹಾಗಾಗಿ ಅಧ್ಯಕ್ಷರು ಚಿಂತಾಕ್ರಾಂತರಾದರು. ಮಾರನೇ ದಿನ ಬೆಳಿಗ್ಗೆ ಏಕಾಂತವಾಗಿ ಕುಳಿತು ಧ್ಯಾನ-ಪಾರಾಯಣ ಮಾಡುವ ಕಾಲದಲ್ಲಿ ಅವರಿಗೆ ಹೊಳೆಯಿತು. ಕೊನೆಯ ದಿನದ ಸೂಯಾಸ್ತಮದವರೆಗೆ ಅವರಿಗೆ ಸಮಯವಿದ್ದಿತು. ಆದರೆ ಅವರು ಸೂರ್ಯಾಸ್ತದ ನಂತರ ಉಮೇದುವಾರಿಕೆ ಸಲ್ಲಿಸಿದ್ದರು. ಆದ್ದರಿಂದ ತಿರಸ್ಕರಿಸಬಹುದು ಎಂದು ಹೊಳೆಯಿತಂತೆ. ಅದನ್ನು ಕೂಗಿಕೊಂಡು ಬಂದು ಮಿತ್ರರಿಗೆ ಹೇಳಿದ್ದರು. ಹೀಗೆ ಹಗಲೂ ರಾತ್ರಿ ಪರಿಷತ್ತಿನ ಬಗ್ಗೆ ಚಿಂತಿಸುತ್ತಿದ್ದ ಅಧ್ಯಕ್ಷರು ಕರ್ಪೂರ ಶ್ರೀನಿವಾಸರಾಯರು. ಪರಿಷತ್ತಿನ ಹಳೆಯ ಕಟ್ಟಡದ ಶಂಕುಸ್ಥಾಪನೆ ಅವರಿಂದಲೇ ಆಗಿದೆ.
ಕರ್ಪೂರ ಶ್ರೀನಿವಾಸರಾಯರ ಅಧಿಕಾರಾವಧಿಯಲ್ಲಿ ನಡೆದದ್ದು ಮುಖ್ಯವಾಗಿ ಎರಡು ಕೆಲಸಗಳು ಒಂದು, ಪರಿಷತ್ ಕಟ್ಟಡ ಸ್ಥಾಪನೆ; ಇನ್ನೊಂದು, ಹಳಗನ್ನಡ ಗ್ರಂಥಗಳ ಸಂಪಾದನೆ.
ಇವರು ಪಂಪನ ವಿಕ್ರಮಾರ್ಜುನ ವಿಜಯವನ್ನು ತಾಳೆಗರಿಗಳ ಆಧಾರದಲ್ಲಿ ಸಂಶೋಧಿಸಿ ಪ್ರಕಟಿಸಿದರು. ಪಂಪಭಾರತ, ಪಂಪ ರಾಮಾಯಣಗಳನ್ನು ವಿದ್ಯಾ ಇಲಾಖೆಗಾಗಿ ಸಿದ್ಧಪಡಿಸಿದರು. ಇವರ ಅವಧಿಯಲ್ಲಿ ಪಂಪರಾಮಾಯಣ, ಸೋಮೇಶ್ವರ ಶತಕ, ಶಬ್ದಮಣಿದರ್ಪಣ, ಚಾವುಂಡರಾಯ ಪುರಾಣ, ಷಟ್ಪದಿ ಕಾವ್ಯಗಳ ನಿಘಂಟು, ಜ್ಯೋತಿರ್ವಿನೋದಿನಿ ಮುಂತಾದ ಗ್ರಂಥಗಳು ಸಂಶೋಧಿತವಾಗಿ ಪ್ರಕಟಗೊಂಡವು.
ಕರ್ಪೂರರ ಅವಧಿಯಲ್ಲಿ ಬಹುಕಾಲ ಕಾರ್ಯದರ್ಶಿಗಳೂ, ೬ವರ್ಷಗಳ ಕಾಲ ಕೋಶಾಧಿಕಾರಿಗಳೂ ಆದವರು ಬೆಳ್ಳಾವೆ ವೆಂಕಟನಾರಣಪ್ಪನವರು. ಅವರ ದುಡಿಮೆ ಎಷ್ಟಿತ್ತು ಎಂದರೆ ಡಿ.ವಿ.ಜಿ. ಹೇಳುವಂತೆ ಬೆಳ್ಳಾವೆ ವೆಂಕಟ ನಾರಣಪ್ಪ ಎಂದರೆ ಪರಿಷತ್ತು ಎಂಬಷ್ಟರಮಟ್ಟಿಗೆ ಅವರು ದುಡಿಯುತ್ತಿದ್ದರು. ಇಂಥ ನಿಸ್ವಾರ್ಥ ಸೇವಕರ ಕಾಲ ಕರ್ಪೂರ ಶ್ರೀನಿವಾಸರಾಯರ ಅಧಿಕಾರಾವಧಿ ಆಗಿತ್ತು.
ಸಮ್ಮೇಳನಗಳು: ಕರ್ಪೂರ ಶ್ರೀನಿವಾಸರಾಯರು ಉಪಾಧ್ಯಕ್ಷರಾಗಿ ೧೯೨0ರಿಂದ ೧೯೩೩ರವರೆಗೆ ೧೩ವರ್ಷಗಳ ಕಾಲ ಪರಿಷತ್ತನ್ನು ಮುನ್ನಡೆಸಿದರು. ಅವರ ಕಾಲದಲ್ಲಿ ಅಧ್ಯಕ್ಷರಾಗಿ ಎಂ. ಕಾಂತರಾಜ ಅರಸು (೧೯೨0-೧೯೨೩) ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಪ್ರೋತ್ಸಾಹಕರಾಗಿ ಹಾಗೂ ನಂತರ ಪರಿಷತ್ತಿನ ಅಧ್ಯಕ್ಷರಾಗಿ ಇದ್ದರು. ೬ನೇ ಸಮ್ಮೇಳನದಿಂದ ೧೮ನೇ ಸಮ್ಮೇಳನದವರೆಗೆ ೧೩ ಸಮ್ಮೇಳನಗಳನ್ನು ನಡೆಸಿದರು. ಇದುವರೆಗೆ ಯಾವ ಪರಿಷತ್ತಿನ ಅಧ್ಯಕ್ಷರೂ ತಮ್ಮ ಅಧಿಕಾರಾವಧಿಯಲ್ಲಿ ಇಷ್ಟೊಂದು ಸಮ್ಮೇಳನಗಳನ್ನು ನಡೆಸಿಲ್ಲ.
Tag: M.Kantharaja Urs, M.Kantharaja Arasu, Karpoora Srinivasarao, Karupura Sreenivasarao
ಪ್ರತಿಕ್ರಿಯೆ