ಡಿ. ವಿ. ಗುಂಡಪ್ಪ

dvg

ಉಪಾಧ್ಯಕ್ಷರು:  ಡಿ. ವಿ. ಗುಂಡಪ್ಪ (೧೯೩೪೧೯೩೭)

ಸಾಧನೆ :

ವಿದ್ವಾಂಸರು, ಪತ್ರಿಕಾಸಂಪಾದಕರು, ಸಾಹಿತ್ಯ ವಿದ್ವಾಂಸರ ನಿಕಟ ಪರಿಚಯವಿದ್ದ ಡಿ.ವಿ. ಗುಂಡಪ್ಪನವರು ೧೯೩೩ರಲ್ಲಿ  ಪರಿಷತ್ತಿಗೆ ಅಧ್ಯಕ್ಷರಾಗಿ ಬಂದ ಮೇಲೇ ಪರಿಷತ್ತಿಗೆ ನವದೆಸೆ ಉಂಟಾಯಿತು. ಪರಿಷತ್ತಿಗೆ ಭವ್ಯವಾದ ಶ್ರೀಕೃಷ್ಣರಾಜಪರಿಷ್ಮನಂದಿರ ಕಟ್ಟಡ ನೆಲೆಯಾಗಿ ಸಿಕ್ಕಿತು. ಪರಿಷತ್ತಿನ ಕಾರ್ಯಾಲಯವನ್ನು ಸುವ್ಯವಸ್ಥೆಗೊಳಿಸಿದರು. ಪ್ರತಿವಾರವೂ ಪರಿಷತ್ತಿನಲ್ಲಿ ಸಾರ್ವಜನಿಕವಾಗಿ ಭಾಷಣ, ಕಾವ್ಯವಾಚನ ಇತ್ಯಾದಿ ನಡೆಯತೊಡಗಿತು.

ಪರಿಷತ್ತು ಜನಪ್ರಿಯವಾಗಲು ಹೆಚ್ಚು ಹೆಚ್ಚು ಜನರು ಸದಸ್ಯರಾಗಬೇಕು ಎಂಬುದು ಡಿವಿಜಿ ಅವರ ಆಶಯವಾಗಿತ್ತು. ಅದಕ್ಕಾಗಿ ಸದಸ್ಯರ ಸಂಖ್ಯೆ ಹೆಚ್ಚಿಸಿದರು.

ಸಂಸ್ಥೆಯ ನಿಬಂಧನೆ ಎಂಬುದು ಸಂಸ್ಥೆಗೆ ದಿಕ್ಸೂಚಿ – ಅಂಕುಶವಿದ್ದಂತೆ. ಅದು ಸಕಾಲಿಕವಾಗಿರಬೇಕು, ಸಮರ್ಪಕವಾಗಿರಬೇಕು, ಮತ್ತು ಸಮಗ್ರವಾಗಿರಬೇಕು ಎಂದು ಅದುವರೆಗೆ ಹಲವಾರು ವಾರ್ಷಿಕಾಧಿವೇಶನಗಳಲ್ಲ್ಲಿ ಆಗಿದ್ದ ನಿಬಂಧನೆಯ ತಿದ್ದುಪಡಿಗಳನ್ನೆಲ್ಲ ಸೇರ್ಪಡೆ ಮಾಡಿ ಒಂದೂಗೂಡಿಸಿ ನಿಬಂಧನಾವಳಿಯನ್ನು ಪ್ರಕಟಿಸಿದರು.

ಕನ್ನಡ ಕಾವ್ಯಗಳು ಜನರಲ್ಲಿ ಪ್ರಚಾರವಾಗಬೇಕಾದರೆ ಗಮಕ ಕಲೆಯೊಂದೇ ದಾರಿ. ಗಮಕವಾಚನದಿಂದಲೇ ಹಳಗನ್ನಡ ನಡುಗನ್ನಡ ಕಾವ್ಯಗಳು ಜನಕ್ಕೆ ತಲುಪಲು ಸಾಧ್ಯ. ಗ್ರಂಥಗಳ ಮೂಲಕ ಜನಸಾಮಾನ್ಯರಿಗೆ ಕಾವ್ಯ ತಲುಪುವುದಿಲ್ಲ. ಕಾವ್ಯ ದೊರೆತರೂ ಜನಸಾಮಾನ್ಯರೂ ಅರ್ಥೈಸಿಕೊಳ್ಳಲಾರರು, ಆನಂದಿಸಲಾರರು. ಗಮಕವಾಚನ ವ್ಯಾಖ್ಯಾನ ಕಾರ್ಯಕ್ರಮದಿಂದ ಅದು ಸಾಧ್ಯ ಎಂದು ನಂಬಿದ್ದರು. ಡಿ.ವಿ.ಜಿ. ಅದಕ್ಕಾಗಿ ಪರಿಷತ್ತಿನಲ್ಲಿ ಗಮಕ ತರಗತಿಗಳನ್ನು ಪ್ರಾರಂಭಿಸಿದರು. ಗಮಕಿಗಳು ತಯಾರಾಗತೊಡಗಿದರು. ಈ ತರಗತಿಗಳಿಂದ ಉತ್ತೀರ್ಣರಾಗಿ ಬಂದವರಲ್ಲಿ ನಾಡಿನ ಪ್ರಸಿದ್ದ ಗಮಕ ಕಲಾವಿರಾದ ಶಕುಂತಲಾ ಬಾಯಿ, ಬಿಂದೂರಾವ್ ಅವರೂ ಸೇರಿದ್ದಾರೆ.  ಅನೇಕ ಪ್ರಖ್ಯಾತ ಗಮಕಿಗಳು ಬಿಂದೂರಾಯರ ಶಿಷ್ಯರು ಎಂಬುದು ಗಮನಾರ್ಹ ಸಂಗತಿಯಾಗಿದೆ.

ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಪರವಾಗಿ ಪರಿಷತ್ತಿನ ಕಾರ್ಯಗಳನ್ನು ನಿರ್ವಹಿಸಿದವರು ೨ನೇ ಉಪಾಧ್ಯಕ್ಷರಾದ ಡಿ. ವಿ. ಗುಂಡಪ್ಪನವರು. ೧೯೩೩ರಲ್ಲಿ ಪರಿಷತ್ತಿನ ಉಪಾಧ್ಯಕ್ಷರಾಗಿ ಡಿವಿಜಿ ಅವರು ಆಯ್ಕೆಗೊಂಡರು.

ಕಚೇರಿ ವ್ಯವಸ್ಥೆ: ಪರಿಷತ್ತಿನ ಕಾರ್ಯಾಲಯವನ್ನು ಪುನರ್‍ಘಟಿಸಿ ವ್ಯವಸ್ಥಿತಗೊಳಿಸಿದರು. ಸಮಯ ಪಾಲನೆ, ವೇಷಭೂಷಣಗಳಲ್ಲಿ ಶಿಸ್ತನ್ನು ತಂದರು. ಒಮ್ಮೆ ಪರಿಷತ್ತಿನ ಸಿಬ್ಬಂದಿಯಲ್ಲಿದ್ದ ಪ್ರಸಿದ್ಧ ನಾಟಕಕಾರ ಕೈವಾರ ರಾಜಾರಾವ್ ಕಚ್ಚೆಪಂಚೆ ಉಡದೆ ದಟ್ಟಿಪಂಚೆಯನ್ನು ಉಟ್ಟು ಬಂದಾಗ, ಅವರನ್ನು ಒಳಕೋಣೆಗೆ ಕರೆದು ಕಚ್ಚೆ ಹಾಕಿಸಿ ಕಳಿಸಿದ್ದರು. ಕಚೇರಿಯಲ್ಲಿ ಕೆಲಸ ಮಾಡುವವರು ವೇಷಭೂಷಣಗಳ ಕಡೆ ನಿಗಾ ಕೊಡಬೇಕು ಎಂದರು.

ನಿಬಂಧನೆ ಕ್ರೋಡೀಕರಣ: ಬೇರೆಬೇರೆ ವರ್ಷಗಳಲ್ಲಿ ಆದ ತಿದ್ದುಪಡಿಗಳನ್ನೆಲ್ಲ ಒಗ್ಗೂಡಿಸಿ ಹೊಸ ನಿಬಂಧನೆಗಳನ್ನು ಸಿದ್ಧಪಡಿಸಿದರು. ಸದಸ್ಯರಿಗೆಲ್ಲಾ ಅದನ್ನು ಪ್ರಕಟಿಸಲಾಯಿತು.

ವಾರದ ಕಾರ್ಯಕ್ರಮ: ಪ್ರತಿವಾರವೂ ಸಾರ್ವಜನಿಕ ಕಾರ್ಯಕ್ರಮವಾಗಿ ಉಪನ್ಯಾಸ, ಕಾವ್ಯವಾಚನಗಳ ಕಾರ್ಯಕ್ರಮಗಳನ್ನು  ಇಟ್ಟುಕೊಂಡಿದ್ದಕ್ಕೆ ಪರಿಷತ್ತಿಗೆ ಬರುವ ಜನರು ಹೆಚ್ಚಾದರು. ಪರಿಣಾಮವಾಗಿ ಸದಸ್ಯರ ಸಂಖ್ಯೆ ಅಧಿಕವಾಯಿತು.

ಗಮಕ ಕಲಾ ತರಗತಿಗಳ ಪ್ರಾರಂಭ: ಕನ್ನಡ ಕಾವ್ಯಗಳು ಜನ ಸಾಮಾನ್ಯರಿಗೆ  ಗಮಕ ವಾಚನದ ಮೂಲಕ ಮುಟ್ಟುವುದು ಸಾಧ್ಯ. ಶುದ್ಧ ಸಂಗೀತದಿಂದಲೇ ಕಾವ್ಯವನ್ನು ಇಡಿಯಾಗಿ ಪರಿಚಯಿಸಲಾಗದು. ಹೀಗಾಗಿ ಗಮಕದ ತರಗತಿಗಳನ್ನು ಭಾರತ ಸಾರೋದ್ಧಾರದ ಬಿಂದೂರಾಯರ ನೇತೃತ್ವದಲ್ಲಿ ನಡೆಸಿದರು. ಪ್ರಥಮ ತಂಡದ ಗಮಕ ಕಲಾ ತರಗತಿ ವಿದ್ಯಾರ್ಥಿಗಳಲ್ಲಿ ಗಮಕಿ ಶಕುಂತಲಾಬಾಯಿ ಪಾಂಡುರಂಗರಾವ್ ಅವರೂ ಒಬ್ಬರು.

ಗ್ರಂಥ ಪ್ರದರ್ಶನ: ವಸಂತೋತ್ಸವ ಕಾರ್ಯಕ್ರಮವನ್ನು ಬೇಸಿಗೆ ಕಾಲದಲ್ಲಿ ನಡೆಸುವ ಪದ್ಧತಿಯನ್ನು ಜಾರಿಗೆ ತಂದಾಗ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು. ನವೀನ ಉಪನ್ಯಾಸಗಳ ಜತೆಗೆ ಮನರಂಜನಾ ಕಾರ್ಯಕ್ರಮಗಳನ್ನೂ ಏರ್ಪಡಿಸುತ್ತಿದ್ದರು. ಮನೋವಿಲಾಸದ ಈ ಕಾರ್ಯಕ್ರಮದಲ್ಲೇ ಮನೋವಿಕಾಸದ ಅಂಗವಾಗಿ ಕನ್ನಡ ಗ್ರಂಥ ಪ್ರದರ್ಶನ ಏರ್ಪಾಟಾಯಿತು. ೧೯೩೪ರಲ್ಲಿ ಒಂದು ವಾರ ನಡೆದ ಗ್ರಂಥ ಪ್ರದರ್ಶನದಲ್ಲಿ ೨೪೩೨ ಕನ್ನಡ ಗ್ರಂಥಗಳ ಪ್ರದರ್ಶನವೆಂದರೆ ಆ ಕಾಲಕ್ಕೆ ಅದು ದೊಡ್ಡ ಗ್ರಂಥಪ್ರದರ್ಶನವೇ ಸರಿ. ಪರಿಷತ್ತಿನ ಎದುರಿಗಿರುವ ಸಂಸ್ಕೃತ ಕಾಲೇಜಿನಲ್ಲಿ ಏರ್ಪಾಟಾಗಿತ್ತು. ಜನರಿಗೆ ವಿನೂತನ ಅನುಭವವನ್ನು ಆ ಪ್ರದರ್ಶನ ಒದಗಿಸಿತು.

ವಸಂತೋತ್ಸವ: ಸಮಕಾಲೀನ ಜಗತ್ತಿನಲ್ಲಿ ಸಾಹಿತ್ಯ, ವಿಜ್ಞಾನ ಕಲೆಗಳ ಕ್ಷೇತ್ರಗಳಲ್ಲಿ ಆಗಿರುವ ಹೊಸಬೆಳವಣಿಗೆಗಳು ಜನಕ್ಕೆ ತಿಳಿಯಬೇಕೆಂದು ವಸಂತೋತ್ಸವವೆಂಬ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಿದರು. ನಾಟಕ, ನೃತ್ಯ ಸಂಗೀತಗಳ ಮನರಂಜನೆ ಕಾರ್ಯಕ್ರಮಗಳು ಇದರ ಜತೆ ಇದ್ದುದರಿಂದ ಜನರು ಆಕರ್ಷಿತರಾದರು.

ನಗರದಲ್ಲಿ ನಡೆದ ವಸಂತೋತ್ಸವ ಜನಪ್ರಿಯವಾಗಿ ಗ್ರಾಮಾಂತರ ಪ್ರದೇಶಗಳಲ್ಲೂ ನಡೆಸಲು ಒತ್ತಡ ಬಂದಿತು. ಅನವಟ್ಟಿ, ಗದಗ, ಕೊಳ್ಳೆಗಾಲ, ಹುಬ್ಬಳ್ಳಿ, ಶಿರಾಳಕೊಪ್ಪ ಮೊದಲಾದ ಕಡೆಗಳಲ್ಲಿ ವಸಂತೋತ್ಸವಗಳು ನಡೆದವು. ಅಲ್ಲೆಲ್ಲಾ ಪರಿಷತ್ತನ್ನು ಪರಿಚಯಿಸುವ ಕಾರ್ಯಕ್ರಮಗಳು ಏರ್ಪಟ್ಟವು. ಅಲ್ಲಿಯೂ ಗ್ರಂಥ ಪ್ರದರ್ಶನಗಳು ನಡೆದವು.

ಪರಿಷತ್ಪತ್ರಿಕೆ ವಿದ್ವತ್‍ಪತ್ರಿಕೆಯಾಗಿ ಪ್ರಕಟವಾಗಲು ಒಂದು ವ್ಯವಸ್ಥೆ ಮಾಡಬೇಕೆಂದು ಇಡೀ ಕರ್ನಾಟಕಕ್ಕೆ ಪ್ರಾತಿನಿಧ್ಯವಿರುವಂತೆ ೧೫ ಜನರ ಸಂಪಾದಕ ಮಂಡಲಿಯನ್ನು ಏರ್ಪಡಿಸಿದರು.

ಸಾಹಿತ್ಯ ಪರಿಷತ್ತಿನ ಕಾರ್ಯಗಳು ಮತ್ತು ಸಾಹಿತ್ಯ ಪರಿಚಯಗಳು ನಾಡಿನ ಮೂಲೆಮೂಲೆಗಳಲ್ಲಿ ಹಳ್ಳಿಹಳ್ಳಿಗೂ ಹಬ್ಬಬೇಕು ಎಂದು ಡಿವಿಜಿ ಅವರು ಒಂದು ಯೋಜನೆಯನ್ನು ರೂಪಿಸಿದರು. ಅದೇ “ಸಂಚಾರೋಪನ್ಯಾಸ ಯೋಜನೆ”. ಹೀಗೆ ಹತ್ತು ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಷತ್ತಿನ ವ್ಯಾಪಕತೆಯನ್ನೂ ಪ್ರಭಾವವನ್ನೂ ಹೇಗೆ ಬೆಳೆಸಬಹುದು ಎಂಬುದನ್ನು ಡಿ. ವಿ. ಗುಂಡಪ್ಪನವರು ತೋರಿಸಿಕೊಟ್ಟರು.

ಕನ್ನಡದ ಕೆಲಸವನ್ನು ಎಲ್ಲರೂ ಸೇರಿ ಒಟ್ಟೊಟ್ಟಾಗಿ ಮಾಡಬೇಕು. ಆಗ ಸಾರ್ಥಕ ಸೇವೆ ಸಾಧ್ಯ. ಹೆಚ್ಚು ಜನರನ್ನು ಕಾರ್ಯಕ್ರಮಗಳು ತಲುಪುತ್ತವೆ ಎಂಬ ಹಿನ್ನೆಲೆಯಲ್ಲಿ ಕನ್ನಡಕ್ಕಾಗಿ ಶ್ರಮಿಸುತ್ತಿದ್ದ ಹಲವು ಹತ್ತು ಸಂಸ್ಥೆಗಳನ್ನು ಒಗ್ಗೂಡಿಸಿ, ಅಖಿಲ ಕರ್ಣಾಟಕ ಸಂಘಗಳ ಸಮ್ಮೇಳನವನ್ನು ಸಂಘಟಿಸಿದರು.

ಕರ್ನಾಟಕ ಸಂಘಗಳ ಸಮ್ಮೇಳನ: ಕರ್ಣಾಟಕ ಸಂಘ ಮೊದಲು ಪ್ರಾರಂಭವಾದುದು ಸೆಂಟ್ರಲ್ ಕಾಲೇಜಿನಲ್ಲಿ ಎ.ಆರ್.ಕೃ. ಅವರು ಅದರ ಪ್ರಾರಂಭಕರ್ತರು. ಅನಂತರ ನಾಡಿನ ನಾನಾ ಕಡೆ ಕರ್ನಾಟಕ ಸಂಘಗಳು ಹುಟ್ಟಿಕೊಂಡವು. ಆಗ ಕನ್ನಡಕ್ಕಾಗಿ ದುಡಿಯುವ ಸಂಘ ಸಂಸ್ಥೆಗಳನ್ನು ಸೇರಿಸಿ ಡಿವಿಜಿ ಅವರು ಅಖಿಲ ಕರ್ಣಾಟಕ ಸಂಘಗಳ ಸಮ್ಮೇಳನ ಏರ್ಪಡಿಸಿದರು. ಇದರಿಂದ ಯುವ ಸಂಘಟನೆಯನ್ನು ವ್ಯವಸ್ಥಿತವಾಗಿ ಮಾಡಲು ಸಾಧ್ಯವಾಯಿತು. ಸಂಘ ಸಂಸ್ಥೆಗಳನ್ನು ಅಂಗಸಂಸ್ಥೆಗಳ ಸದಸ್ಯತ್ವವನ್ನು ಕುರಿತಂತೆ ಪರಿಷತ್ತು ತನ್ನ ನಿಬಂಧನೆಯಲ್ಲಿ ಸೇರ್ಪಡೆ ಮಾಡಿತ್ತು.

೧೯೩೪ರಲ್ಲಿ ಕನ್ನಡ ಸಂಘಗಳ ಸಮ್ಮೇಳನ ನಡೆದ ಮೇಲೆ ಡಿವಿಜಿ ಅವರು ಆ ಬಗ್ಗೆ ವಿಶೇಷ ಕಾಳಜಿವಹಿಸಿದರು. ೧೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಡಿಕೇರಿಯಲ್ಲಿ ನಡೆದಾಗ ಸಮ್ಮೇಳನದ ಅಧ್ಯಕ್ಷರಾದ ಡಿವಿಜಿ ಅವರು ಸ್ವಾಗತ ಸಮಿತಿಯವರಿಂದ ತಮಗೆ ಬರಬೇಕಾದ ಹಣವನ್ನು ಮತ್ತು ಪರಿಷತ್ತಿಗೆ ಬರಬೇಕಾದ ಹಣವನ್ನು ಕೊಡಗಿನ ಕರ್ನಾಟಕ ಸಂಘದ ಸ್ಥಾಪನೆಗೆ ನೀಡಿದರು. ಹೀಗೆ ಸ್ಥಾಪಿತವಾದ ಕರ್ಣಾಟಕ ಸಂಘಗಳು ಸಾಕಷ್ಟು ಕೆಲಸ ಮಾಡಿವೆ. ಶಿವಮೊಗ್ಗ ಕರ್ನಾಟಕ ಸಂಘ ೨೭ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವ್ಯವಸ್ಥೆ ಮಾಡಿದರೆ ಮೈಸೂರು ಮಹಾರಾಜ ಕಾಲೇಜ್  ಸಂಘ ೧೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ ನಡೆದಾಗ ವ್ಯವಸ್ಥೆಯ ಭಾರವನ್ನೆಲ್ಲ ಹೊತ್ತಿಕೊಂಡಿತ್ತು. ಬಿಎಂಶ್ರೀ ಮತ್ತು ಮಾಸ್ತಿ ಅವರು ಕರ್ನಾಟಕವನ್ನೆಲ್ಲ ಸುತ್ತುವಾಗ ಕರ್ಣಾಟಕ ಸಂಘಗಳನ್ನು ಸಾಧ್ಯವಿದ್ದೆಡೆಗಳಲ್ಲಿ ಸ್ಥಾಪಿಸಲು ಪ್ರಯತ್ನಿಸಿದರು. ಈ ಪ್ರಯತ್ನಗಳ ಫಲವಾಗಿ ೧೯೫೬ರಲ್ಲಿ ಪರಿಷತ್ತಿನ ಅಂಗಸಂಸ್ಥೆಗಳ ಸಂಖ್ಯೆ ೧0 ಇದ್ದುದ್ದು ೫0ಕ್ಕೆ ಏರಿತು. ಕೆಲವು ಕಡೆ ಕರ್ನಾಟಕ ಸಂಘಗಳಿಗೆ ಅಂಗಸಂಸ್ಥೆಗಳಿದ್ದವು. ೧೯೪೫ರಲ್ಲಿ ಸ್ಥಾಪಿತವಾದ ಹೈದರಾಬಾದಿನ ಕರ್ನಾಟಕದ ಸಾಹಿತ್ಯ ಪರಿಷತ್ತಿಗೆ ಹಲವಾರು ಅಂಗ ಸಂಸ್ಥೆಗಳಿದ್ದವು. ಕರ್ನಾಟಕ ಸಂಘಗಳು ಸ್ಥಾಪನೆಗೊಂಡು ಪ್ರವರ್ಧಮಾನಕ್ಕೆ ಬಂದಿದ್ದರಿಂದ ಜನರಲ್ಲಿ ಕನ್ನಡ ಜಾಗೃತಿ ಹೆಚ್ಚಲು ಸಾಧ್ಯವಾಯಿತು. ಪರಿಷತ್ತಿನ ಕೆಲಸವನ್ನು ಈ ಸಂಸ್ಥೆಗಳು ಮಾಡಿದವು.

ಹತ್ತು ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಷತ್ತಿನ ವ್ಯಾಪಕತೆಯನ್ನು ಪ್ರಭಾವವನ್ನು ಹೇಗೆ ಬೆಳೆಸಬಹುದೆಂಬುದನ್ನು  ಡಿವಿಜಿ ತೋರಿಸಿಕೊಟ್ಟರು.

ಸಮ್ಮೇಳನಗಳು: ಡಿವಿಜಿ ಅವರು ಉಪಾಧ್ಯಕ್ಷರಾಗಿದ್ದ ಕಾಲದಲ್ಲಿ ನಾಲ್ಕು ಸಮ್ಮೇಳನಗಳು ನಡೆದವು.

Tag:  D. V. Gundappa

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)