ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೫
ಅಧ್ಯಕ್ಷರು : ರಾಜಾ ಲಕುಮನ ಗೌಡ ಸರ್‍ದೇಸಾಯಿ (೧೯೪೧ – ೧೯೪೬)
ಉಪಾಧ್ಯಕ್ಷರು : ಮಾಸ್ತಿ ವೆಂಕಟೇಶ ಅಯ್ಯಂಗಾರ್ (೧೯೪೩–೧೯೪೭)
ಸಾಧನೆ :
ಮೈಸೂರು ಸರ್ಕಾರದಿಂದ ನಿವೃತ್ತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರರು ಪರಿಷತ್ತಿನ ಉಪಾಧ್ಯಕ್ಷರಾಗಿ ೧೯೪೩ರಲ್ಲಿ ಬಿಎಂಶ್ರೀ ಅವರ ನಂತರ ಅಧಿಕಾರವನ್ನು ಸ್ವೀಕರಿಸಿದರು. ತಮ್ಮ ಸ್ವಂತ ವೆಚ್ಚದಿಂದಲೇ ಪ್ರವಾಸ ಮಾಡಿ ಪರಿಷತ್ತಿನ ಪ್ರಚಾರ ಮಾಡಿದರು. ಪರಿಣಾಮವಾಗಿ ಸದಸ್ಯರ ಸಂಖ್ಯೆ ಮೊದಲಬಾರಿಗೆ ೧೫00ವರೆಗೆ ಏರಿತು. ಸಾಹಿತ್ಯೋತ್ಸವ, ಗಮಕ ಪ್ರಚಾರ, ಪರೀಕ್ಷೆಗಳು ಮೊದಲಾದ ಕಾರ್ಯಕ್ರಮಗಳು ಮುಂದುವರೆದವು. ಜೊತೆಗೆ ತಮ್ಮ ಪ್ರಭಾವದಿಂದ ಗಣ್ಯರಿಂದ ದತ್ತಿ ಪಡೆದು ದತ್ತಿಗಳನ್ನು ಹೆಚ್ಚಿಸಿದರು. ದತ್ತಿ ಹಣ ಎಂದರೆ ಸಂಸ್ಥೆಗೆ ಕಾಯಂ ಆದಾಯಕ್ಕೆ ದಾರಿ ಎಂದರ್ಥ. ಬೆಳ್ಳಾವೆ ವೆಂಕಟನಾರಣಪ್ಪನವರ ನಿಧಿ, ಜಾವಳಿ ಗಣೇಶರಾಯರ ನಿಧಿ, ಸೋಸಲೆ ಗರಳಪುರಿ ಶಾಸ್ತ್ರಿಗಳ ಮತ್ತು ವೆಂಕಟಸುಬ್ಬಮ್ಮನವರ ದತ್ತಿ, ತೂಬುಗೆರೆ ನಂಜಪ್ಪನವರ ದತ್ತಿನಿಧಿ ಮೊದಲಾದ ದತ್ತಿಗಳು ಪರಿಷತ್ತಿಗೆ ದೊರೆತು ಹಲವಾರು ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಯಿತು.
ಗಮಕ ತರಬೇತಿಯಲ್ಲಿ ಪರಿಷತ್ತು ಪ್ರೌಢ ತರಗತಿಗಳನ್ನು ಆರಂಭಿಸಿತು. ಬೇರೆಬೇರೆ ಭಾಗಗಳಿಂದ ಆರಿಸಿದ ೬ ಜನ ಗಮಕ ಅಧ್ಯಾಪಕರನ್ನು ಆಯ್ಕೆಮಾಡಿ ತರಬೇತಿ ನೀಡಿತು. ೩ ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡಲಾಯಿತು. ಹೀಗೆ ತರಬೇತಿ ಹೊಂದಿದ ಗಮಕಿಗಳು ಊರೂರಿಗೆ ಹೋಗಿ ಗಮಕ ಪ್ರಚಾರ ಮಾಡಬೇಕಾಗಿತ್ತು.
Tag: Raja Lakumana Gowda Sardesai, Masti Venkatesha Iyengar
ಪ್ರತಿಕ್ರಿಯೆ