ಪ್ರೊ. ಎ. ಎನ್. ಮೂರ್ತಿರಾವ್

a11

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೧೧

ಅಧ್ಯಕ್ಷರು : ಎ. ಎನ್. ಮೂರ್ತಿರಾವ್ (೧೯೫೪೧೯೫೬)

ಜೀವನ

ಕನ್ನಡದಲ್ಲಿ ಶ್ರೇಷ್ಠ ಪ್ರಬಂಧಕಾರರೂ, ವಿಮರ್ಶಕರೂ, ಆಗಿದ್ದು ‘ದೇವರು’ ಪುಸ್ತಕದ ಮೂಲಕ ಜನಪ್ರಿಯರಾದ ಪ್ರೊ.ಎ.ಎನ್. ಮೂರ್ತಿರಾವ್ ಅವರು ಎಂ.ಸುಬ್ಬರಾವ್ ಮತ್ತು ಪುಟ್ಟಮ್ಮ ದಂಪತಿಗಳ ಪುತ್ರರಾಗಿ (ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿರಾವ್) ೧೮-೬-೧೯00ರಲ್ಲಿ ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳಿನಲ್ಲಿ ಜನ್ಮ ತಳೆದರು. ಬಾಲ್ಯದ ದಿನಗಳನ್ನು ಮೇಲುಕೋಟೆ, ನಾಗಮಂಗಲಗಳಲ್ಲಿ ಕಳೆದ ಮೇಲೆ ೧೯೧೩ರಲ್ಲಿ ಮೈಸೂರಲ್ಲಿ ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ಶಾಲಾ ಶಿಕ್ಷಣ ಮುಗಿಸಿ ಮೈಸೂರು ಮಹಾರಾಜ ಕಾಲೇಜನ್ನು ಸೇರಿದರು. ೧೯೨೨ರಲ್ಲಿ ಬಿ.ಎ. ಪದವಿ ಮುಗಿಸಿ ೧೯೨೪ರಲ್ಲಿ ಎಂ.ಎ.ಪದವಿ ಪಡೆದರು.

೧೯೨೪ರಲ್ಲಿ ಮಹಾರಾಜ ಕಾಲೇಜಿನಲ್ಲಿ ಟ್ಯೂಟರ್ ಆಗಿ ೧೯೨೭ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ೧೯೪0ರಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಬಡ್ತಿ ಪಡೆದರು. ೧೯೪0ರಿಂದ ೧೯೪೩ವರೆಗೆ ಶಿವಮೊಗ್ಗ ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದು, ೧೯೪೩ರಲ್ಲಿ ಆಕಾಶವಾಣಿಯ ಸಹಾಯಕ ನಿರ್ದೇಶಕರಾದರು. ೧೯೪೮ರಲ್ಲಿ ಚಿತ್ರದುರ್ಗ ಕಾಲೇಜಿನಲ್ಲಿ ಮುಖ್ಯಸ್ಥರಾಗಿದ್ದು, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ೧೯೫೫ರಲ್ಲಿ ನಿವೃತ್ತಿಗೊಂಡರು.

೧೯೫೫ರಲ್ಲಿ ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದರು. ೧೯೫೪-೫೬ರಲ್ಲಿ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಸದರ್ನ್ ಲಾಂಗ್ವೇಜಸ್ ಬುಕ್ ಟ್ರಸ್ಟ್ನ ಕನ್ನಡ ಶಾಖೆಯ ಸಂಚಾಲಕ ಅಧ್ಯಕ್ಷರಾಗಿ ೪ ವರ್ಷಗಳ ಕಾಲ ಆಕಾಶವಾಣಿಯಲ್ಲಿ ಸೆಂಟ್ರಲ್ ಪ್ರೋಗ್ರಾಂ ಅಡ್ವೈಸರಿ ಕಮಿಟಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಎ.ಎನ್. ಮೂರ್ತಿರಾವ್ ಅವರು ಸಾಕಷ್ಟು ವಿದೇಶ ಪ್ರವಾಸ ಮಾಡಿದ್ದರು. ಅವರು ತಮ್ಮ ಲೋಕಾನುಭವದಿಂದ ಬರೆದ ಅಪರ ವಯಸ್ಕನ ಅಮೇರಿಕ ಯಾತ್ರೆಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಚಿತ್ರಗಳು ಮತ್ತು ಪತ್ರಗಳು ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್(೧೯೭೭), ಸಮಗ್ರ ಸಾಹಿತ್ಯಕ್ಕೆ ಮಾಸ್ತಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಗೌರವ, ಡಿ.ಲಿಟ್. ಪ್ರಶಸ್ತಿ, ‘ದೇವರು’ ಗ್ರಂಥಕ್ಕೆ ಪಂಪ ಪ್ರಶಸ್ತಿ ಮುಂತಾದವು ಇವರಿಗೆ ಸಂದಿವೆ.

೧೯೮೪ರಲ್ಲಿ ಕೈವಾರಗಳಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ೫೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದರು.

ಇವರು ರಚಿಸಿರುವ ಕೃತಿಗಳಲ್ಲಿ ಹಗಲುಕನಸುಗಳು, ಅಲೆಯುವ ಮನ, ಮಿನುಗು ಮಿಂಚು(ಪ್ರಬಂಧ ಸಂಕಲನ), ಬಿಎಂಶ್ರೀ, ಪೂರ್ವಸೂರಿಗಳೊಡನೆ, ಶೇಕ್ಸ್‍ಪಿಯರ್, ಮಾಸ್ತಿಯವರ ಕಥೆಗಳು(ವಿಮರ್ಶಾ ಕೃತಿಗಳು), ಆಷಾಢಭೂತಿ, ಮೋಲಿಯೇರನ ೨ ನಾಟಕಗಳು, ಚಂಡಮಾರುತ(ನಾಟಕಗಳು), ಪಾಶ್ಚಾತ್ಯ ಸಣ್ಣ ಕಥೆಗಳು ಇತ್ಯಾದಿ ಕೃತಿಗಳು ಪ್ರಸಿದ್ಧವಾಗಿವೆ.

ಇಂಗ್ಲಿಷಿನಲ್ಲೂ ಹಲವಾರು ಗ್ರಂಥಗಳನ್ನು ಬರೆದಿದ್ದಾರೆ.

ಕಾರಂತರ ಮರಳಿ ಮಣ್ಣಿಗೆ ಕಾದಂಬರಿಯನ್ನು `ದಿ ರಿಟರ್ನ್ ಟು ದಿ ಸಾಯಲ್’ ಎಂದು ಅನುವಾದಿಸಿದ್ದಾರೆ. ಎಸ್. ರಾಧಾಕೃಷ್ಣನ್, ಎಂ.ವಿಶ್ವೇಶ್ವರಯ್ಯ, ಬಿ.ಎಂ.ಶ್ರೀಕಂಠಯ್ಯ ಅವರುಗಳನ್ನು ಕುರಿತು ಇಂಗ್ಲಿಷಿನಲ್ಲಿ ಸ್ವತಂತ್ರವಾಗಿ ಬರೆದಿದ್ದಾರೆ.

ಎ.ಎನ್. ಮೂರ್ತಿರಾವ್‍ರು ತಮ್ಮ ೧0೪ನೇ ವಯಸ್ಸಿನಲ್ಲಿ ೨೩-೮-೨00೩ರಲ್ಲಿ ನಿಧನರಾದರು.

ಸಾಧನೆ :

ಪರಿಷತ್ತಿನ ಅಧ್ಯಕ್ಷರಾಗಿದ್ದ ಎಂ. ಆರ್. ಶ್ರೀ ಅವರ ನಿಧನಾನಂತರ ೩ ವರ್ಷಗಳಲ್ಲಿನ ಉಳಿದ ಅವಧಿಗೆ ಅಧ್ಯಕ್ಷರಾದ ಮಾಸ್ತಿ ಅವರು ಸುಮಾರು ೮ ತಿಂಗಳ ಕಾಲ ಪರಿಷತ್ತನ್ನು ನಡೆಸಿದ ಮೇಲೆ ೯.೫.೧೯೫೪ರಿಂದ ೧೭.೫.೧೯೫೬ವರೆಗೆ ಶತಾಯುಷಿಗಳಾದ ಮತ್ತು ಇಂಗ್ಲಿಷ್ ಪ್ರಾಧ್ಯಾಪಕರಾದರೂ ಕನ್ನಡದಲ್ಲಿ ಶ್ರೇಷ್ಠಗ್ರಂಥಗಳನ್ನು ಬರೆದ ಎ. ಎನ್. ಮೂರ್ತಿರಾಯರು  ಮಾಸ್ತಿ ಅವರಿಂದ ಪರಿಷತ್ತಿನ ಅಧ್ಯಕ್ಷಸ್ಥಾನವನ್ನು ಸ್ವೀಕರಿಸಿದರು.

ಇವರ ಅವಧಿಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ಚಟುವಟಿಕೆಗಳಲ್ಲಿ ಪರಿಷತ್ತನ್ನು ಭಾಗಿಯನ್ನಾಗಿ ಮಾಡಿಕೊಂಡು ಅದರ ಗ್ರಂಥ ಪ್ರಕಟನೆಯ ಕಾರ್ಯವನ್ನು ಪರಿಷತ್ತಿಗೆ ವಹಿಸಿತು. ಪರಿಷತ್ತಿನ ಕೆಲವು ಗ್ರಂಥಗಳು ಪುನರ್ಮುದ್ರಣವಾದವು.

Tag: A.N.Murthy Rao, A.N.Murthyrao, A. N. Murthyrao

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)