ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೧೨
ಅಧ್ಯಕ್ಷರು : ಬಿ. ಶಿವಮೂರ್ತಿ ಶಾಸ್ತ್ರಿ (೧೯೫೬ – ೧೯೬೪)
ಜೀವನ :
ಕರ್ನಾಟಕಕ್ಕೆ ಏಕೀಕರಣಕ್ಕೆ ದುಡಿದವರೂ, ಕೀರ್ತನ ಕೇಸರಿಗಳೂ ಶರಣ ಸಾಹಿತ್ಯ ವಿದ್ವಾಂಸರೂ ಆದ ಬಿ. ಶಿವಮೂರ್ತಿಶಾಸ್ತ್ರಿಗಳು ಬಸವಯ್ಯ ಹುಲಿಕುಂಟೆಮಠ- ನೀಲಮ್ಮ ದಂಪತಿಗಳಿಗೆ ತುಮಕೂರಿನಲ್ಲಿ ೨೩-೨-೧೯0೩ರಲ್ಲಿ ಜನಿಸಿದರು.
೧೯೨೩ರಲ್ಲಿ ಅಪ್ಪರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ೧೯೨೪ರಿಂದ ೧೯೨೫ರವರೆಗೆ ಗುಬ್ಬಿಯ ವೆಸ್ಲಿಯನ್ ಮಿಷನ್ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು.
೧೯೩೬ರಲ್ಲಿ ಮೈಸೂರು ಸಂಸ್ಥಾನದ ವಿದ್ವಾಂಸರಾದರು. ೧೯೫೬-೧೯೬0ರಲ್ಲಿ ಸಾಹಿತ್ಯ ಪರಿಷತ್ತಿನ ಕನ್ನಡನುಡಿ ಮತ್ತು ಪರಿಷತ್ ಪತ್ರಿಕೆಗಳಿಗೆ ಸಂಪಾದಕರಾಗಿದ್ದರು. ೧೭-೬-೧೯೫೬ರಿಂದ ೨೪-೧0-೧೯೬೪ರವರೆಗೆ ಮೈಸೂರು ಸರ್ಕಾರದ ಪ್ರತಿನಿಧಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿದ್ದರು. ಶರಣ ಸಾಹಿತ್ಯ ಮತ್ತು ಸ್ವತಂತ್ರ ಕರ್ನಾಟಕ ಪತ್ರಿಕೆಗಳ ಸ್ಥಾಪಕರೂ ಸಂಪಾದಕರೂ ಆಗಿ ಕಾರ್ಯ ನಿರ್ವಹಿಸಿದರು.
ಇವರ ಸೇವಾಕಾರ್ಯ ಮೆಚ್ಚಿ ಇವರಿಗೆ ಆಸ್ಥಾನ ವಿದ್ವಾನ್ ಬಿರುದಿನ ಜೊತೆಗೆ ಕೀರ್ತನ ಕೇಸರಿ ಎಂಬ ಬಿರುದೂ ಲಭಿಸಿತ್ತು. ೧೯೬೬ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ದೊರಕಿತು. ೧೯೭೫ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ನೀಡಿತು. ೧೯೬೮ರಲ್ಲಿ ಜನತೆ ದೇವಗಂಗೆ ಎಂಬ ಅಭಿನಂದನ ಗ್ರಂಥವನ್ನು ಅವರಿಗೆ ಸಮರ್ಪಿಸಿ ಗೌರವಿಸಿತು.
ಇವರು ವೀರಶೈವ ಸಾಹಿತ್ಯಕ್ಕೆ ಸಂಬಂಧಿಸಿದ ಅನೇಕ ಅಮೂಲ್ಯಗ್ರಂಥಗಳನ್ನು ಸಂಪಾದಿಸಿದ್ದಾರೆ. ರಾಘವಾಂಕನ ವೀರೇಶ ಚರಿತೆ, ಕೋಡಿಹಳ್ಳಿ ಕೇಶೀರಾಜನ ‘ಷಡಕ್ಷರ ಮಂತ್ರ ಮಹಿಮೆ’ ಗುರುಸಿದ್ದನ ಮಾದೇಶ್ವರ ಸಾಂಗತ್ಯ ಇತ್ಯಾದಿ.
ಬಿ. ಶಿವಮೂರ್ತಿ ಶಾಸ್ತ್ರಿಗಳು ೧೫-೧-೧೯೭೬ರಲ್ಲಿ ಲಿಂಗೈಕ್ಯರಾದರು.
ಸಾಧನೆ :
ಕರ್ನಾಟಕ ಏಕೀಕರಣಕ್ಕೆ ದುಡಿದವರು, ಕೀರ್ತನಕೇಸರಿಗಳಾಗಿ ನಾಡಿನಲ್ಲೆಲ್ಲಾ ಸಂಚರಿಸಿದವರು. ಪರಿಷತ್ತಿಗೆ ಅಖಿಲ ಕರ್ಣಾಟಕದ ವ್ಯಾಪ್ತಿಯನ್ನು ತಮ್ಮ ಪ್ರಚಾರದಿಂದ ತಂದವರು ಬಿ. ಶಿವಮೂರ್ತಿ ಶಾಸ್ತ್ರಿಗಳು. ಇವರು ಅಧಿಕಾರಕ್ಕೆ ಬಂದ ಸ್ವಲ್ಪ ಕಾಲದಲ್ಲೇ ಕರ್ನಾಟಕ ರಾಜ್ಯೋದಯವಾಯಿತು (೧-೧೧-೫೬) ಈ ಸಂದರ್ಭದಲ್ಲಿ ಪರಿಷತ್ತಿಗಾಗಿ ದುಡಿದ ಹಿಂದಿನ ಸಮ್ಮೇಳನಗಳ ಅಧ್ಯಕ್ಷರುಗಳನ್ನು ಆಹ್ವಾನಿಸಿ ಸನ್ಮಾನ ಸಮಾರಂಭವನ್ನು ಏರ್ಪಡಿಸಿ ರಾಜ್ಯಪಾಲರಾದ ಶ್ರೀ ಜಯಚಾಮರಾಜ ಒಡೆಯರಿಂದ ಅದರ ಉದ್ಘಾಟನೆಯನ್ನು ಮಾಡಿಸಿದರು.
ಕನ್ನಡ ನಿಘಂಟು ಕಾರ್ಯ : ಸ್ವತಃ ವಿದ್ವಾಂಸರಾದ ಶಾಸ್ತ್ರಿಗಳೂ ಪರಿಷತ್ತಿನಲ್ಲಿ ಸಾಗಿದ್ದ ನಿಘಂಟು ರಚನಾ ಕಾರ್ಯದಲ್ಲಿ ಆಸಕ್ತಿ ತಳೆದರು. ಬೃಹತ್ ನಿಘಂಟು ಪೂರ್ಣವಾಗಿ ಸಿದ್ದವಾಗಲು ಸಾಕಷ್ಟು ಹಣದ ಆವಶ್ಯಕತೆ ಇದೆ ಮತ್ತು ಸೌಕರ್ಯಗಳನ್ನು ಈ ಸಮಿತಿಗೆ ಒದಗಿಸಬೇಕು ಎಂಬುದನ್ನು ಮನಗಂಡರು. ನಿಘಂಟಿನ ಕಾರ್ಯಕ್ಕೆ ಸ್ಥಳಾವಕಾಶ ಸಾಲದೆ ಇದ್ದುದನ್ನು ಗಮನಿಸಿದರು. ಪರಿಷತ್ತಿನ ಈಗಿನ ಮಾರಾಟ ವಿಭಾಗವಿರುವ ಸಭಾಂಗಣದ ಬಲಭಾಗದ ವರಾಂಡದಲ್ಲಿ ನಿಘಂಟು ಕಚೇರಿ ಇತ್ತು. ಪರಿಷತ್ತಿನ ಅಚ್ಚುಕೂಟದ ಮೇಲ್ಭಾಗದಲ್ಲಿ ಮಹಡಿಯನ್ನು ಹಾಕಿ ನಿಘಂಟು ಕಚೇರಿಗೆ ಪ್ರತ್ಯೇಕ ಸ್ಥಳ ಮಾಡಿಕೊಟ್ಟರು. ನಿಘಂಟು ರಚನಾ ಕಾರ್ಯಕ್ಕಾಗಿ ೧೫ ಲಕ್ಷ ರೂ.ಗಳನ್ನು ಸರ್ಕಾರದಿಂದ ಪರಿಷತ್ತಿಗೆ ದೊರಕಿಸಿದರು. ೧ ಲಕ್ಷರೂ ವೆಚ್ಚದಲ್ಲಿ ಮುದ್ರಣಯಂತ್ರ ಮತ್ತು ಇತರ ಯಂತ್ರೋಪಕರಣಗಳನ್ನು ಅಚ್ಚುಕೂಟಕ್ಕೆ ಒದಗಿಸಲಾಯಿತು. ೧೯೬೪ರಲ್ಲಿ ನಿಘಂಟಿನ ಪ್ರಥಮ ಸಂಚಿಕೆ ಹೊರಬಂದಿತು.
ಭಾಷಣ ಕಲಾತರಗತಿಗಳು : ಶಾಸ್ತ್ರಿಗಳು ಸ್ವತಃ ಶ್ರೇಷ್ಠವಾಗ್ಮಿಗಳು, ಕೀರ್ತನಕೇಸರಿ ಬಿರುದಾಂಕಿತರು. ಪ್ರಜಾಪ್ರಭುತ್ವದಲ್ಲಿ ಭಾಷಣಕಲೆಗೆ ವಿಶೇಷ ಮಹತ್ವವಿದೆ. ಜನತಾ ಪ್ರತಿನಿಧಿಗಳು, ಸಾಹಿತಿಗಳು ಪ್ರಭಾವ ಬೀರುವುದೇ ಭಾಷಣಗಳ ಮೂಲಕ ಜನರು ಅದ್ಭುತ ವಾಗ್ವೈಖರಿಗೆ ಸುಲಭವಾಗಿ ಮಾರುಹೋಗುತ್ತಾರೆ. ಭಾಷಣ ಕಲೆ ಅತ್ಯುತ್ತಮ ಮಾಧ್ಯಮವೆಂದು ತಿಳಿದಿದ್ದ ಅಧ್ಯಕ್ಷರು ಕನ್ನಡ ನಾಡಿನಲ್ಲೇ ಪ್ರಪ್ರಥಮವಾಗಿ ಭಾಷಣಕಲಾತರಗತಿಗಳನ್ನು ಪ್ರಾರಂಭಿಸಿದ ಹಿರಿಮೆ ಶಾಸ್ತ್ರಿಗಳದಾಗಿದೆ.
ಪರಿಷನ್ಮಂದಿರಲ್ಲಿ ಸುಧಾರಣೆಗಳು : ಪರಿಷತ್‍ಕಟ್ಟಡಗಳು ಭವ್ಯವಾಗಿರಬೇಕು ಎಂಬುದು ಅಧ್ಯಕ್ಷರ ಆಶಯವಾಗಿತ್ತು. ಪರಿಷತ್ತಿನ ಬಿದ್ದುಹೋದ ಪೌಳಿಗೋಡೆಯನ್ನು ಕಟ್ಟಿದರು. ಸಭಾಭವನದಲ್ಲಿ ಕುರ್ಚಿಗಳಿರಲಿಲ್ಲ. ಅವುಗಳನ್ನು ತರಿಸಿದರು. ಪುಸ್ತಕ ಭಂಡಾರವನ್ನು ಪೀಠೋಪಕರಣಗಳಿಂದ ಸಜ್ಜುಗೊಳಿಸಿದರು, ಪರಿಷತ್ತಿನ ವೇದಿಕೆಯನ್ನು ಸಿಂಗಾರಗೊಳಿಸಿದರು.
ಪುಸ್ತಕ ಪ್ರಕಟನೆಗಳು : ಶಿವಮೂರ್ತಿ ಶಾಸ್ತ್ರಿಗಳ ಅವಧಿಯಲ್ಲಿ ಪುಸ್ತಕ ಭಂಡಾರಕ್ಕೆ ಸುಮಾರು ೪000 ಪುಸ್ತಕಗಳ ಸೇರ್ಪಡೆ ಆಯಿತು. ಆರ್. ನರಸಿಂಹಾಚಾರ್ಯರ ಕವಿಚರಿತ್ರೆ ಪರಿಷ್ಕೃತವಾಗಿ ಪ್ರಕಟವಾಯಿತು. ಪ್ರಾಚೀನ ಕೃತಿಗಳು ಮರುಮುದ್ರಣಗಳಾದವು. ಆಧುನಿಕ ಸಾಹಿತ್ಯ ಮತ್ತು ಪ್ರಾಚೀನ ಸಾಹಿತ್ಯಗಳೆರಡಕ್ಕೆ ಪ್ರಕಟನೆಗಳಿಗೆ ಪ್ರಾಶ್ತಸ್ಯಕೊಡಲಾಯಿತು.
ಪರೀಕ್ಷೆಗಳು ಮತ್ತು ತರಗತಿಗಳು : ಭಾಷಣ ಕಲಾ ತರಗತಿಗಳನ್ನು ಪ್ರಾರಂಭಿಸಿದ ಹಾಗೆಯೇ ಹರಿದಾಸರ ಮತ್ತು ಶಿವಶರಣರ ಕೃತಿಗಳ ತರಗತಿಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಹಾಡಲು ಕಲಿಸುವ ಪ್ರಯತ್ನವನ್ನು ಇವರು ಎರಡು ವರ್ಷ ನಡೆಸಿದರು. ಕಾರಣಾಂತರಗಳಿಂದ ತರಗತಿಗಳು ನಿಂತಿತು. ಗಮಕ ತರಗತಿಗಳು ಚೆನ್ನಾಗಿ ನಡೆದು ನೂರಾರು ಜನ ಪರೀಕ್ಷೆಗೆ ಕುಳಿತರು. ೧೯೫೬ರಿಂದ ೧೯೬೪ ಅವಧಿಯಲ್ಲಿ ೫೨೨ಕ್ಕೂ ಹೆಚ್ಚು ಮಂದಿ ಉತ್ತೀರ್ಣರಾಗಿದ್ದಾರೆ.
ಕನ್ನಡ ಜಾಣ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಹೈದ್ರಾಬಾದ್ ಮುಂಬಯಿ ಭಾಗಗಳಲ್ಲಿ ಉಪಾಧ್ಯಾಯ ಹುದ್ದೆ ದೊರೆಯುತ್ತಿದ್ದ ಕಾರಣ ಹೆಚ್ಚು ಜನರು ಪರೀಕ್ಷೆಗೆ ಕೊಡುತ್ತಿದ್ದರು. ೧೯೫೬-೧೯೬೪ರ ಅವಧಿಯಲ್ಲಿ ೨00೪ ಮಂದಿ ಪರೀಕ್ಷೆಗೆ ಕುಳಿತಿದ್ದರು.
ಕಾರ್ಯಕ್ರಮಗಳು: ದತ್ತಿನಿಧಿಗಳ ಹಣದಿಂದ ಅನೇಕ ಉಪನ್ಯಾಸಗಳನ್ನು ಏರ್ಪಡಿಸಲಾಯಿತು. ಗಡಿನಾಡಿನ ಪ್ರದೇಶಗಳಲ್ಲಿ ಸಾಹಿತ್ಯೋತ್ಸವ ನಡೆಸಲಾಯಿತು. ಮಹಾನ್ ವ್ಯಕ್ತಿಗಳ, ಮಹಾಕವಿಗಳ ಜಯಂತೋತ್ಸವ ನಡೆಸಲಾಯಿತು. ರಾಷ್ಟ್ರಪತಿ ರಾಜೇಂದ್ರಪ್ರಸಾದರು ಪರಿಷತ್ತಿಗೆ ಭೇಟಿಕೊಡಲು ವ್ಯವಸ್ಥೆ ಮಾಡಲಾಯಿತು.
ಕನ್ನಡ ರಾಜ್ಯೋದಯದ ಸಂದರ್ಭದಲ್ಲಿ ಅದುವರೆಗೆ ನಡೆದ ಸಮ್ಮೇಳನಗಳ ಅಧ್ಯಕ್ಷರುಗಳಿಗೆ ಸನ್ಮಾನ ಏರ್ಪಡಿಸಿ ಗೌರವಿಸಲಾಯಿತು. ಇದೊಂದು ವಿಶಿಷ್ಟಕಾರ್ಯಕ್ರಮವಾಗಿತ್ತು.
ಬಿ. ಶಿವಮೂರ್ತಿ ಶಾಸ್ತ್ರಿಗಳು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ೬ ಸಮ್ಮೇಳನಗಳು ನಡೆದಿವೆ. ಪರಿಷತ್ತಿಗೆ ನಾಡಿನ ನಾನಾ ಸಂಸ್ಥೆಗಳಲ್ಲಿ ಆಕಾಶವಾಣಿ, ದೂರದರ್ಶನ, ಶಿಕ್ಷಣ ಇಲಾಖೆ ಸಂಸ್ಕೃತಿ ಇಲಾಖೆ ಮೊದಲಾದ ಕಡೆ ಪ್ರಾತಿನಿಧ್ಯವಿರುವಂತೆ ಮಾಡಿದ್ದು ಶಾಸ್ತ್ರಿಗಳ ಹೆಗ್ಗಳಿಕೆಗಳಲ್ಲಿ ಒಂದು.
Tag: B. Shivamurthy Shastri, B.Shivamurthy Shastri
ಪ್ರತಿಕ್ರಿಯೆ