ಪ್ರೊ. ಜಿ. ವೆಂಕಟಸುಬ್ಬಯ್ಯ

a13

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೧೩

ಅಧ್ಯಕ್ಷರು : ಜಿ. ವೆಂಕಟಸುಬ್ಬಯ್ಯ (೧೯೬೪೧೯೬೯)

ಜೀವನ

ಶತಾಯುಷಿಯಾದ ಕನ್ನಡ ವಿದ್ವಾಂಸ ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಶ್ರೀರಂಗಪಟ್ಟಣದ ಗಂಜಾಂಗ್ರಾಮಕ್ಕೆ ಸೇರಿದವರು. ಶಿಕ್ಷಕರೂ ವಿದ್ವಾಂಸರೂ ಆದ ಗಂಜಾಂ ತಿಮ್ಮಣ್ಣಯ್ಯ ಮತ್ತು ತಾಯಿ ಸುಬ್ಬಮ್ಮ ದಂಪತಿಗಳ ಜ್ಯೇಷ್ಠಪುತ್ರರಾಗಿ ೨೩-೮-೧೯೧೩ರಂದು ಜನಿಸಿದರು. ೧೯೨೭ ರಿಂದ ೧೯೩0ರ ವರೆಗೆ ಪ್ರೌಢಶಾಲೆ ಶಿಕ್ಷಣವನ್ನು ಮಧುಗಿರಿಯಲ್ಲಿ ಮುಗಿಸಿ ೧೯೩೭ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನೂ ೧೯೩೮ರಲ್ಲಿ ಬಿ.ಟಿ. ಪದವಿಯನ್ನೂ ಪಡೆದರು.

೧೯೩೮ ರಿಂದ ೧೯೭೨ ರವರೆಗೆ ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ೧೯೭೩ರಲ್ಲಿ ನಿವೃತ್ತರಾದರು.

ಇವರು ೧೯೫೪-೫೬ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿದ್ದರು. ೧೯೬೪-೬೯ರಲ್ಲಿ ಪರಿಷತ್ತಿನ ಅಧ್ಯಕ್ಷರಾದರು, ೧೯೭೩ ರಿಂದ ೧೯೯೨ವರೆಗೆ ಕನ್ನಡ ನಿಘಂಟಿನ ಪ್ರಧಾನ ಸಂಪಾದಕರಾಗಿ ಶ್ರಮಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಅಖಿಲ ಭಾರತ ನಿಘಂಟುಕಾರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗ್ರಂಥ ಪ್ರಶಸ್ತಿ(೧೯೮೭), ಮಾಸ್ತಿ ಪ್ರಶಸ್ತಿ(೨00೫) ಸೇಡಿಯಾಪು ಪ್ರಶಸ್ತಿ(೧೯೯೪), ನಾಡೋಜ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಅಧ್ಯಕ್ಷಗೌರವ, ಗೋಕಾಕ್ ಪ್ರಶಸ್ತಿ, ಅನಕೃ ನಿರ್ಮಾಣ್ ಸ್ವರ್ಣ ಪ್ರಶಸ್ತಿ ಇತ್ಯಾದಿ ಸಂದಿವೆ.

ನಿಘಂಟು ಸಂಪಾದನೆ, ಸಾಹಿತ್ಯ ಚರಿತ್ರೆ ಗ್ರಂಥ ರಚನೆಯಲ್ಲಿ ತಜ್ಞರಾದ ಇವರು ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೆಲವು ಹೀಗಿವೆ:

ನಯಸೇನ, ಅನುಕಲ್ಪನೆ, ಕಬೀರ್, ಸರ್ವಜ್ಞ, ಕವಿಜನ್ನ, ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿ, ಕನ್ನಡವನ್ನು ಉಳಿಸಿ ಬೆಳಸಿದವರು, ಎರಲು ಶಬ್ದಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕ್ಲಿಷ್ಟಪದಕೋಶ, ಇಗೋ ಕನ್ನಡ ಇತ್ಯಾದಿ.

ಸಾಧನೆ :

ವಿದ್ವಾಂಸರೂ, ಶಿಕ್ಷಣತಜ್ಞರೂ, ನಿಘಂಟು ಪರಿಣತರೂ ಆದ ಜಿ. ವೆಂಕಟಸುಬ್ಬಯ್ಯನವರು ೧೩ನೇ ಅಧ್ಯಕ್ಷರಾಗಿ ಪರಿಷತ್ತಿನ ಹೊಣೆಗಾರಿಕೆಯನ್ನು ಹೊತ್ತರು. ಪ್ರಚಾರ ಕಾರ್ಯಕ್ಕೆ ಹೆಚ್ಚು ಒತ್ತು ನೀಡದೆ ನಿಘಂಟು ರಚನೆ ಬಗ್ಗೆ ಹೆಚ್ಚು ಆಸಕ್ತಿ ತಳೆದರು.

ಆರ್ಥಿಕ ತೊಂದರೆ ನಿವಾರಣೆ: ಪರಿಷತ್ತು ಆರ್ಥಿಕವಾಗಿ ಸಂಕಷ್ಟದಲ್ಲಿದಾಗ ಜಿ. ವೆಂಕಟಸುಬ್ಬಯ್ಯನವರು ಅಧ್ಯಕ್ಷರಾದರು ಸರ್ಕಾರದಿಂದ ದೊರೆಯುತ್ತಿದ್ದ ವಾರ್ಷಿಕ ಅನುದಾನವನ್ನು ೨೫000ಕ್ಕೆ ಹೆಚ್ಚಿಸಿದ್ದು ಅವರ ಹೆಗ್ಗಳಿಕೆಯಾಯಿತು.

ನಿಬಂಧನೆಗಳ ತಿದ್ದುಪಡಿ : ಇವರ ಕಾಲದಲ್ಲಿ ನಿಬಂಧನೆಗಳು ತಿದ್ದುಪಡಿ ಆದುದು ಒಂದು ಮುಖ್ಯ ಘಟನೆಯಾಗಿದೆ. ೫೧ನೇ ಸಕಲ ಸದಸ್ಯರ ಸಭೆಯಲ್ಲಿ ಮ. ರಾಮಮೂರ್ತಿ ಅವರು “ಕರ್ನಾಟಕ ಏಕೀಕರಣಗೊಂಡು ೧೧ ವರ್ಷಗಳಿಂದಲೂ ಅಖಿಲ ಕರ್ಣಾಟಕ ಪ್ರಾತಿನಿಧ್ಯವಿಲ್ಲದಿರುವ ನಿಬಂಧನೆಗಳು ಜಾರಿಯಲ್ಲಿವೆ. ಅದನ್ನು ತಿದ್ದುಪಡಿ ಮಾಡಿ ನಂತರ ಚುನಾವಣೆ ನಡೆಸಿ” ಎಂದು ಒತ್ತಾಯಿಸಿದರು. ಅದರಂತೆ ನಿಬಂಧನೆಗಳು ತಿದ್ದುಪಡಿಯಾಗಿ ಮಹತ್ವದ ಮಾರ್ಪಾಟುಗಳಾದವು; ಕಾರ್ಯಕಾರಿ ಸಮಿತಿಯಲ್ಲಿ ಜಿಲ್ಲಾವಾರು ಪ್ರಾತಿನಿಧ್ಯ ದೊರೆಯಿತು. ಸರ್ಕಾರದ ವಿದ್ಯಾ ಇಲಾಖೆ ವಿಶ್ವವಿದ್ಯಾನಿಲಯ, ಪತ್ರಿಕಾಕರ್ತರು, ಮಹಿಳಾ ವರ್ಗ – ಇವರಿಗೂ ಕಾರ್ಯಕಾರಿ ಸಮಿತಿಯಲ್ಲಿ ಪ್ರಾತಿನಿಧ್ಯ ಸಿಕ್ಕಿತು. ಪರಿಷತ್ತಿನ ಕಾರ್ಯವ್ಯಾಪ್ತಿ ಹಿಗ್ಗಿತು.

ದತ್ತಿನಿಧಿ ವಿಚಾರ : ಅಧ್ಯಕ್ಷರಾದ ವೆಂಕಟಸುಬ್ಬಯ್ಯನವರ ಕರ್ಣಕರ್ಣಾಮೃತ ಸಂಗ್ರಹ ಪಿಯುಸಿಗೆ ಪಠ್ಯವಾದಾಗ ಅದರ ಹಣ ಸಂಪಾದಕರಿಗೆ ಸೇರಬೇಕೇ ಪರಿಷತ್ತಿಗೆ ಸೇರಬೇಕೇ ಎಂದು ಚರ್ಚೆಯಾಗಿ ಕೊನೆಗೆ ಶ್ರೀಮತಿ ಲಕ್ಷ್ಮಿ ಜಿ. ವೆಂಕಟಸುಬ್ಬಯ್ಯನವರ ಹೆಸರಿನಲ್ಲಿ ನಿಧಿಯಾಗಿಡಬೇಕೆಂದು ತೀರ್ಮಾನವಾಯಿತು. ಈ ನಿಧಿಮೊತ್ತ ಅದುವರೆಗೆ ಬಂದ ದತ್ತಿನಿಧಿಗಳಲ್ಲೇ ಅತಿ ಹೆಚ್ಚಿನ ಮೊತ್ತ (೮000) ಆಗಿತ್ತು.

ಕಾರ್ಯಕ್ರಮಗಳು : ಪಾಕಿಸ್ಥಾನ ಭಾರತದ ಮೇಲೆ ಆಕ್ರಮಣ ಮಾಡಿದ ಕಾಲದಲ್ಲಿ ವೀರರಸ ಪ್ರಧಾನ ಗೀತೆಗಳನ್ನು ಹಾಡಿಸುವ ಪ್ರಸಂಗಗಳನ್ನು ನಿರೂಪಿಸುವ ಕಾರ್ಯಕ್ರಮಗಳನ್ನು ಪರಿಷತ್ತಿನಿಂದ ಹಮ್ಮಿಕೊಳ್ಳಲಾಯಿತು.

ಪುಸ್ತಕ ಭಂಡಾರ : ಪರಿಷತ್ತಿನ ಪುಸ್ತಕ ಭಂಡಾರದಲ್ಲಿ ಕನ್ನಡದಲ್ಲಿ ಪ್ರಕಟವಾಗುತ್ತಿರುವ ಎಲ್ಲಾ ಪುಸ್ತಕಗಳು ಸಿಗಬೇಕೆಂದು ಅದಕ್ಕಾಗಿ ಎಲ್ಲ ಪುಸ್ತಕಗಳ ಒಂದೊಂದು ಪ್ರತಿಯನ್ನು ಪರಿಷತ್ತು ಕೊಳ್ಳಬೆಕೆಂದು ನಿರ್ಧರಿಸಲಾಯಿತು. ಆ ಬಗ್ಗೆ ಕನ್ನಡ ನುಡಿಯಲ್ಲಿ ಪ್ರಕಟನೆ ಕೊಡಲಾಯಿತು.

Photo: Prof. G. Venkatasubbaiah, G.Venkatasubbaiah

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)