ಶ್ರೀ ಜಿ. ನಾರಾಯಣ

a14

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೧೪

ಅಧ್ಯಕ್ಷರು : ಜಿ. ನಾರಾಯಣ (೧೯೬೯೧೯೭೮)

ಜೀವನ :

ಕನ್ನಡ ದೇಶಭಕ್ತರೂ ಪತ್ರಿಕಾ ಸಂಪಾದಕರೂ ಕಾಂಗ್ರೆಸ್ ಭಕ್ತರೂ, ಸಂಘಟಕರೂ ಆದ ದೇಶಹಳ್ಳಿ ಜಿ.ನಾರಾಯಣ ಅವರು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿಗೆ ಸೇರಿದ ದೇಶಹಳ್ಳಿಯಲ್ಲಿ ೨-೯-೧೯೨೩ರಲ್ಲಿ ಜನಿಸಿದರು.  ಅವರು ಮದ್ದೂರಿನಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗಲೇ ಶಿವಪುರದಲ್ಲಿ ನಡೆದ ಮೈಸೂರು ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದ್ದರು. ೧೯೪೨ರಲ್ಲಿ `ಬ್ರಿಟಿಷರೇ’ ಭಾರತ ಬಿಟ್ಟು ತೊಲಗಿ ‘ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆ ಸೇರಿದ್ದರು. ೧೯೫೭ರಲ್ಲಿ ಬೆಂಗಳೂರು ಕಾರ್ಪೋರೇಷನ್ನಿನ ಕೌನ್ಸಿಲರ್ ಆಗಿದ್ದ ಇವರು ೧೯೬೪ರಲ್ಲಿ ಮೇಯರಾಗಿ ಚುನಾಯಿತರಾದರು. ಕನ್ನಡ ಪತ್ರಿಕಾ ಅಕಾಡೆಮಿ ಅಧ್ಯಕ್ಷರೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದರು.

ಕಾಂಗ್ರೆಸ್ ಪಕ್ಷದ ವಾರ್ತಾ ಪತ್ರದ ವ್ಯವಸ್ಥಾಪಕರಾದ ಇವರು ತಮ್ಮದೇ ಆದ ಸ್ವತಂತ್ರ ಮುದ್ರಣಾಲಯವನ್ನು ಬೆಂಗಳೂರು ಚಾಮರಾಜಪೇಟೆಯಲ್ಲಿ ಸ್ಥಾಪಿಸಿ ವಿನೋದ ಮಾಸಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸಿದರು. ಈಗಲೂ ಆ ಪತ್ರಿಕೆ ಪ್ರಕಟವಾಗುತ್ತಿದೆ. ಅನೇಕ ಸಂಘಸಂಸ್ಥೆಗಳ ಸ್ಥಾಪನೆಯಲ್ಲಿ ನಿರ್ವಹಣೆಯಲ್ಲಿ ಮಾರ್ಗದರ್ಶಕರಾಗಿದ್ದ ಇವರು ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

೧೯೬೯ರಿಂದ ೧೯೭೮ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ತ್ರೈವಾರ್ಷಿಕ ಮತ್ತು ಪಂಚವಾರ್ಷಿಕ ಯೋಜನೆಗಳ ಮೂಲಕ ಪರಿಷತ್ತಿನ ಅಭಿವೃದ್ಧಿಗೆ ಕಾರಣಕರ್ತರಾದರು. ಬೆಂಗಳೂರು ನಗರಪಾಲಿಕೆ  ಮುಂದೆ ಕೆಂಪೇಗೌಡನ ಪ್ರತಿಮೆಯನ್ನು ಸ್ಥಾಪಿಸಿದ ಹೆಗ್ಗಳಿಕೆ ಇವರದು. ಇವರ ಸಾರ್ವಜನಿಕ ಸೇವೆಗೆ ಸರ್ಕಾರ, ಸಂಘಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಪ್ರಶಸ್ತಿ ನೀಡಿವೆ. ೧೯೭೨ರಲ್ಲಿ ರಾಜ್ಯ ಸರ್ಕಾರದ ಪ್ರಶಸ್ತಿ ಇವರಿಗೆ ದೊರೆತಿದೆ.

ಇವರು ಅಕ್ಷರ ನೀವ್ ಕಲಿಯಿರಿ ಎಂಬ ಗೋವಿನ ಹಾಡಿನ ಧಾಟಿಯ ೧00 ಪದ್ಯಗಳ ಗ್ರಂಥವನ್ನು ಬರೆದಿದ್ದಾರೆ. ವಿನೋದ ಪತ್ರಿಕೆಯಲ್ಲಿ ಸಂಪಾದಕೀಯಗಳನ್ನು ಸೊಗಸಾಗಿ ಬರೆಯುತ್ತಿದ್ದರು. ಅವರ ಭಾಷಣಗಳೆಲ್ಲಾ ಲಿಖಿತರೂಪದಲ್ಲಿದ್ದು ಅದನ್ನು ಪ್ರಕಟಿಸಿದರೆ ಸೊಗಸಾದ ಉಪಯುಕ್ತ ಲೇಖನ ಸಂಗ್ರಹವಾಗುತ್ತದೆ. ಮುಖ್ಯವಾಗಿ ಜಿ.ನಾರಾಯಣರು ನಿಸ್ವಾರ್ಥ ಸಾರ್ವಜನಿಕ ಸೇವಾ ಧುರೀಣರಾಗಿದ್ದರು.

ಸಾಧನೆ :

ಶ್ರೇಷ್ಠ ಸಂಘಟಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿದ್ದ ಜಿ. ನಾರಾಯಣರು ಪರಿಷತ್ತಿನ ಅಧ್ಯಕ್ಷರಾಗಿ ಒಂದು ಹೊಸ ಶಕೆ ಪ್ರಾರಂಭಿಸಿದರು. ಸಾಹಿತಿಗಳು ವಿದ್ವಾಂಸರೂ ಅಲ್ಲದ ಪತ್ರಕರ್ತರೊಬ್ಬರು ಅಧ್ಯಕ್ಷರಾದುದು ಅದೇ ಮೊದಲು. ಪರಿಷತ್ತಿನ ಪ್ರಗತಿಗೆ ಕಾರ್ಯಚಟುವಟಿಕೆಗಳಿಗೆ ಯೋಜನೆಗಳನ್ನು ರೂಪಿಸಿ ಆ ಪ್ರಕಾರ ಯೋಜನಾಬದ್ಧವಾಗಿ ಕಾರ್ಯನಿರ್ವಹಿಸಿದ ಅಧ್ಯಕ್ಷರಲ್ಲಿ ಅವರೇ ಮೊದಲಿಗರು. ಅವರ ಕಾಲದ ಸಾಧನೆಗಳ ಸಂಕ್ಷಿಪ್ತ ಚಿತ್ರಣವನ್ನು ಹೀಗೆ ನಿರೂಪಿಸಬಹುದು. ಅವರ ಮೊದಲ ಅಧಿಕಾರಾವಧಿಯಲ್ಲಿ ತ್ರೈವಾರ್ಷಿಕ ಯೋಜನೆಯನ್ನು ಪರಿಷತ್ತಿನ ಅಭಿವೃದ್ಧಿಯ ಬಗ್ಗೆ ರೂಪಿಸಿದರು.

ಸುವರ್ಣಮಹೋತ್ಸವ : ಜಿ. ನಾರಾಯಣರು ನಡೆಸಿದ ಕಾರ್ಯಕ್ರಮಗಳಲ್ಲೆಲ್ಲಾ ಐತಿಹಾಸಿಕವೂ, ಅದ್ದೂರಿಯೂ ಆದ ಕಾರ್ಯಕ್ರಮ ಸುವರ್ಣಮಹೋತ್ಸವ ಮತ್ತು ಆ ಸಮಯದಲ್ಲಿ ಜರುಗಿದ ದೇಜಗೌ ಅಧ್ಯಕ್ಷತೆಯ ೪೭ನೇ ಕನ್ನಡ ಸಾಹಿತ್ಯ ಸಮ್ಮೇಳನ. ಬೆಂಗಳೂರು ಕೋಟೆ ಹೈಸ್ಕೂಲಿನ ಮೈದಾನದಲ್ಲಿ ಕಾರ್ಯಕ್ರಮ ನಡೆಯಿತು. ಅಂತರಭಾರತಿ ಎಂಬ ಸಾಹಿತ್ಯ ವಿಚಾರ ಸಂಕಿರಣ ನಡೆಯಿತು. ‘ಚಿನ್ನದ ಬೆಳಸು’ ಎಂಬ ಆಕರಗ್ರಂಥವಾಗುವಂತಹ ವಿಶೇಷ ಸಂಚಿಕೆ ಎಂ. ವಿ. ಸೀ. ಅವರ ಸಂಪಾದಕತ್ವದಲ್ಲಿ ಪ್ರಕಟವಾಯಿತು.

ಮಹಿಳಾ ವರ್ಷ ಆಚರಣೆ : ೧೯೭೫ನೇ ವರ್ಷವನ್ನು ಯುನೆಸ್ಕೊ ಅಂತರರಾಷ್ಟ್ರೀಯ ಮಹಿಳಾ ವರ್ಷವೆಂದು ಘೋಷಿಸಿತು. ಇದರಂಗವಾಗಿ ಪರಿಷತ್ತು ೨00 ಗೋಷ್ಠಿಗಳನ್ನು ನಡೆಸಿತು. ಮಹಿಳೆಯರಿಗೆ ಸಂಬಂಧಿಸಿದ ೨೫ ಪುಸ್ತಕಗಳನ್ನು ಪ್ರಕಟಿಸಲಾಯಿತು. ರಾಜ್ಯಮಟ್ಟದ ಮಹಿಳಾ ಸಮ್ಮೇಳನ ನಡೆಸಲಾಯಿತು. ೧000 ರೂಗಳ ಮಹಿಳಾ ದತ್ತಿಯೊಂದನ್ನು ಮಹಿಳೆಯರ ಉತ್ತಮ ಕೃತಿಗಳಿಗೆ ನೀಡಲು ವ್ಯವಸ್ಥೆ ಮಾಡಿತು.

ಪ್ರಕಟನೆಗಳು : ಗ್ರಾಮಕಲೆಗಳು ನಶಿಸುತ್ತಿರುವ ಈ ಕಾಲದಲ್ಲಿ ಜಾನಪದ ಸಂಸ್ಕೃತಿಯ ವಿವಿಧ ಮುಖಗಳ ಅಭಿವ್ಯಕ್ತಿಯನ್ನು ಮುಂದಿನ ಪೀಳಿಗೆಗೆ ನೀಡಲು ಹಳ್ಳಿಹಳ್ಳಿಗೆ ಪದವೀಧರರನ್ನು ಕಳಿಸಿ ಮಾಹಿತಿ ಸಂಗ್ರಹಿಸಿ ‘ಕರ್ನಾಟಕ ಜನಪದ ಕಲೆಗಳು’ ಎಂಬ ಗ್ರಂಥವನ್ನು ಪ್ರಕಟಿಸಲಾಯಿತು.

ಕನ್ನಡ ನಿಘಂಟಿನ ೨ ಮತ್ತು ೩ನೇ ಸಂಪುಟಗಳ ಬಿಡುಗಡೆ ಆದವು. ಜನಸಾಮಾನ್ಯರ ಬಳಕೆಗಾಗಿ ಸಂಕ್ಷಿಪ್ತ ನಿಘಂಟು. ಮತ್ತು ವಿದ್ಯಾರ್ಥಿಗಳಿಗಾಗಿ ‘ರತ್ನಕೋಶ’ವನ್ನು ಪ್ರಕಟಿಸಲಾಯಿತು. ಅಗ್ಗದ ಬೆಲೆಯಲ್ಲಿ ಜನರಿಗೆ ಕೊಡಲು ಸರ್ಕಾರ ಇವುಗಳಿಗೆ ಧನಸಹಾಯ ನೀಡಿತು.

ಪರಿಷತ್ತಿನ ಪ್ರಕಟನೆಗಳ ಜತೆಗೆ ಲೇಖಕರು, ಪ್ರಕಾಶಕರು, ದಾನಿಗಳಿಂದ ಗ್ರಂಥಗಳನ್ನು ಸಂಗ್ರಹಿಸಿ ಹೊರನಾಡಿನ ಕನ್ನಡ ಸಂಘಗಳಿಗೆ ಉಚಿತ ವಿತರಣೆ ಮಾಡಲಾಯಿತು. ಅಲ್ಲಿನವರಲ್ಲಿ ಕನ್ನಡಾಸಕ್ತಿ ಬೆಳೆಸಲು ಈ ಯೋಜನೆಯನ್ನು ಕೈಗೊಳ್ಳಲಾಯಿತು. ವಿದೇಶದ ಕನ್ನಡ ಸಂಘಗಳಿಗೂ ಕನ್ನಡ ಪುಸ್ತಕಗಳನ್ನು ವಿತರಿಸಲಾಯಿತು.

ಜಿ. ನಾರಾಯಣರ ಕಾಲದಲ್ಲಿ ಆದ ದೊಡ್ಡ ಕೆಲಸಗಳಲ್ಲಿ ಒಂದು ಕನ್ನಡ ಕಾವ್ಯಗಳ ಗದ್ಯಾನುವಾದಗಳು. ಹಳಗನ್ನಡ ಮತ್ತು ನಡುಗನ್ನಡ ಕಾವ್ಯಗಳ ಗದ್ಯಾನುವಾದವನ್ನು ಮೂಲದೊಡನೆ ಕೊಡುವ ಯೋಜನೆಯನ್ನು ಜಾರಿಗೆ ತಂದು ಕನ್ನಡಾಭ್ಯಾಸಿಗಳಿಗೆ ಮೂಲ ಮತ್ತು ಅನುವಾದವಿರುವ ಗ್ರಂಥಗಳನ್ನು ಸುಲಭ ಬೆಲೆಗೆ ನೀಡಲಾಯಿತು. ಈ ಪ್ರಯತ್ನಕ್ಕೆ ಜನರಿಂದ ಭಾರಿ ಮೆಚ್ಚುಗೆ ಸಿಕ್ಕಿತು. ಸಮ್ಮೇಳನಾಧ್ಯಕ್ಷರ ಭಾಷಣಗಳ ೩ ಸಂಪುಟಗಳು ಇವರ ಕಾಲದಲ್ಲಿ ಪ್ರಕಟವಾದವು.

ವಜ್ರಮಹೋತ್ಸವ : ೧೯೭೭ರಲ್ಲಿ ಏಪ್ರಿಲ್ ೨೩ರಿಂದ ೨೮ರವರೆಗೆ ೬ ದಿನಗಳ ಕಾಲ ಪರಿಷತ್ತಿನ ವಜ್ರಮಹೋತ್ಸವ ನಡೆಯಿತು. ವಜ್ರಮಹೋತ್ಸವ ಕಟ್ಟಡದ ಶಂಕುಸ್ಥಾಪನೆ, ಅಂತರಭಾರತಿ ಸಾಹಿತ್ಯಗೋಷ್ಠಿ, ಇಂಗ್ಲಿಷ್ ಮತ್ತು ಕನ್ನಡಗಳಲ್ಲಿ ಕೌಸ್ತುಭವೆಂಬ ಸಂಸ್ಕರಣ ಸಂಚಿಕೆ ಬಿಡುಗಡೆ, ಜ್ಞಾನಪೀಠ ಪುರಸ್ಕೃತರಿಗೆ ಸನ್ಮಾನ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ, ಮುಂತಾದ ವಿಶೇಷ ಕಾರ್ಯಕ್ರಮಗಳು ಜರುಗಿದವು.

ಸಾಹಿತ್ಯ ಪ್ರಸಾರ ಯೋಜನೆ : ಪರಿಷತ್ತಿನಿಂದ ಪುಸ್ತಕ ವರ್ಷದ ಕಾರ್ಯಕ್ರಮಗಳನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿದ ಪ್ರಕಾರ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಯಿತು. ಇದಕ್ಕಾಗಿ ಒಂದು ಯೋಜನೆಯನ್ನು ರೂಪಿಸಲಾಯಿತು. ಅದೇ ಸಾಹಿತ್ಯ ಪ್ರಸಾರ ಯೋಜನೆ. ಈ ಯೋಜನೆಯಡಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಯಿತು.

ಹಳ್ಳಿಹಳ್ಳಿಗೆ ಪುಸ್ತಕಗಳ ಪ್ರದರ್ಶನ ಸಾಹಿತ್ಯಿಕ ಸ್ಪರ್ಧೆಗಳನ್ನು ಶಾಲಾ ಕಾಲೇಜುಗಳಲ್ಲಿ ವ್ಯವಸ್ಥೆ ಮಾಡುವುದು. ಪುಸ್ತಕೋದ್ಯಮದ ಬಗ್ಗೆ ಲೇಖಕರು, ಪ್ರಕಾಶಕರು, ಮಾರಾಟಗಾರರಿಂದ ವಿಚಾರಸಂಕಿರಣ, ಪ್ರತಿದಿನ ಪ್ರದರ್ಶನದ ಸ್ಥಳಗಳಲ್ಲಿ ಉಪನ್ಯಾಸ, ಚಲನಚಿತ್ರ ಪ್ರದರ್ಶನ, ಜಾನಪದ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಯಿತು.

ಪುಸ್ತಕ ಪ್ರಕಟನೆ, ಪುಸ್ತಕ ಪ್ರದರ್ಶನ, ಪುಸ್ತಕ ಮಾರಾಟ ಈ ರೀತಿ  ಮುಮ್ಮುಖ ಕಾರ್ಯಕ್ರಮಗಳು ಇವರ ಅಧ್ಯಕ್ಷಾವಧಿಯಲ್ಲಿ ನಡೆದವು.

ಪುಸ್ತಕ ಪ್ರಕಟನೆಯ ಅಂಗವಾಗಿ ಪುಸ್ತಕಭಾಗ್ಯ, ಸ್ವಾತಂತ್ರ್ಯೋತ್ತರ ಸಾಹಿತ್ಯ, ಜನಪದ ಕಥೆಗಳು, ಕವನಗಳು, ಎಂಬ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಪುಸ್ತಕ ಪ್ರದರ್ಶನಕ್ಕಾಗಿ ವಿವಿಧ ಪುಸ್ತಕ ಸಂಸ್ಥೆಗಳಿಂದ, ಸರ್ಕಾರದ ಸಂಸ್ಥೆಗಳಿಂದ ಪುಸ್ತಕಗಳನ್ನು ಸಂಗ್ರಹಿಸುವ ಕಾರ್ಯ ಪ್ರಾರಂಭವಾಯಿತು. ಅದಕ್ಕಾಗಿ ಸಿಬ್ಬಂದಿ, ಪುಸ್ತಕಗಳ ಪ್ರದರ್ಶನಕ್ಕೆ ಕಬ್ಬಿಣದ ಸ್ಟ್ಯಾಂಡುಗಳು ಪ್ರದರ್ಶನ ಸ್ಥಳಕ್ಕೆ ಪುಸ್ತಕ ಒಯ್ಯಲು ವಾಹನ ವ್ಯವಸ್ಥೆ ಹೀಗೆ ನಾಡಿನಾದ್ಯಂತ ಪುಸ್ತಕಯೋಜನೆ ಕಾರ್ಯಗತವಾದರೆ ಬೆಂಗಳೂರಿನಲ್ಲಿ ಪುಸ್ತಕ ಪ್ರದರ್ಶನ-ಮಾರಾಟ ವಿಶಿಷ್ಟರೀತಿಯಲ್ಲಿ ಆಯಿತು. ೧೯೭೨ರ ಫೆಬ್ರವರಿ ೧೧ರಿಂದ ೩ ದಿನಗಳ ಕಾಲ ವಿವಿಧ ಬಡಾವಣೆಗಳಲ್ಲಿ ಲೇಖಕರು ಓದುಗರು ಪುಸ್ತಕಗಳನ್ನು ಬಗಲುಚೀಲಗಳಲ್ಲಿ ತುಂಬಿಕೊಂಡು ಮನೆಮನೆಗೆ ಪಾದಯಾತ್ರೆ ಮಾಡಿ ಮಾರಾಟಮಾಡಿದರು. ಸ್ವಾತಂತ್ರ್ಯಪೂರ್ವದಲ್ಲಿ ಗಳಗನಾಥರು ಬೆಂಗಳೂರಿನಲ್ಲಿ ತಲೆಮೇಲೆ ಪುಸ್ತಕ ಹೊತ್ತು ಅವರ ಕೃತಿಗಳನ್ನು ಮನೆಮನೆಗೆ ಮಾರಾಟ ಮಾಡಿದ್ದನ್ನು ಕೆಲವರು ನೆನಪಿಸಿಕೊಳ್ಳಬೇಕು.

ಸಾಹಿತ್ಯ ಪ್ರಸಾರ ಯೋಜನೆ, ಅಂತರಭಾರತಿ ಪುಸ್ತಕ ಪ್ರದರ್ಶನ ಕಾರ್ಯಕ್ರಮದೊಂದಿಗೆ ೧೯೭೩ ಆಗಸ್ಟ್ನಲ್ಲಿ  ವಿಧಾನ ಸೌಧದಲ್ಲಿ ಸಮಾರೋಪವಾಯಿತು.

ನಾಲ್ಕು ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಜಿ. ನಾರಾಯಣರ ಅಧಿಕಾರಾವಧಿಯಲ್ಲಿ ನಡೆಯಿತು.

ಈ ಸಮ್ಮೇಳನಗಳಲ್ಲಿ ಮೊದಲಬಾರಿಗೆ ದೆಹಲಿಯಲ್ಲಿ ೧೯೭೮ರಲ್ಲಿ ಜಿ. ಪಿ. ರಾಜರತ್ನಂ ಅವರ ಅಧ್ಯಕ್ಷತೆಯ ೫0ನೇ ಸಮ್ಮೇಳನವನ್ನು ಮಾಡಿದ್ದು ಪರಿಷತ್ತಿನ ಇತಿಹಾಸದಲ್ಲಿ ಒಂದು ದಾಖಲೆ ಆಗಿದೆ.

ಪರಿಷತ್ತಿನ ರಾಜ್ಯಮಟ್ಟದ ಸಮ್ಮೇಳನಗಳ ಜತೆಗೆ ಅಖಿಲ ಕರ್ಣಾಟಕ ಕೀರ್ತನಕಾರರ ಸಮ್ಮೇಳನ ೧೯ ಜಿಲ್ಲಾ ಸಾಹಿತ್ಯ ಸಮ್ಮೇಳನಗಳು ೩ ಹೊರನಾಡ ಸಮ್ಮೇಳನಗಳನ್ನು ಜಿ. ನಾರಾಯಣರು ನಡೆಸಿದರು. ಪರಿಷತ್ತಿನ ಅಧ್ಯಕ್ಷರುಗಳ ಪೈಕಿ ಅತಿ ಹೆಚ್ಚು ಸಮ್ಮೇಳನಗಳನ್ನು ನಡೆಸಿದರು ಎಂಬ ಕೀರ್ತಿಗೆ ಇವರು ಭಾಜನರಾಗಿದ್ದಾರೆ.

ಸುವರ್ಣ ಮಹೋತ್ಸವ ಕಟ್ಟಡ : ಪರಿಷತ್ತಿನ ಸುವರ್ಣ ಮಹೋತ್ಸವದ ನೆನಪಿಗೆ ಎರಡಂತಸ್ತಿನ ಕಟ್ಟಡಕ್ಕೆ ೧೯೭0ರಲ್ಲಿ ಶಂಕುಸ್ಥಾಪನೆ ಆಗಿ ೨೯.೧೨.೧೯೭೩ರಲ್ಲಿ ಉದ್ಘಾಟನೆ ಆಯಿತು. ೧೫ ಲಕ್ಷಗಳ ವೆಚ್ಚದಲ್ಲಿ ನಿರ್ಮಾಣವಾದ ಈ ಕಟ್ಟಡದಲ್ಲಿ ಆಡಳಿತ ಸಿಬ್ಬಂದಿ ಕಚೇರಿಗೆ, ಗಮಕ ತರಗತಿ ಕೋಣೆ, ಗ್ರಂಥಭಂಡಾರ, ವಾಚನಾಲಯ, ೨ನೇ ಅಂತಸ್ತಿನಲ್ಲಿ ವಸ್ತುಸಂಗ್ರಹಾಲಯ ಸ್ಥಿರಪುಸ್ತಕಪ್ರದರ್ಶನ, ನೆಲಮಾಳಿಗೆಯಲ್ಲಿ ದಾಸ್ತಾನು ಸಂಗ್ರಹ, ಆಂತರಿಕ ದೂರವಾಣಿ ಅಳವಡಿಕೆ ಇವುಗಳನ್ನು ಒಳಗೊಂಡಿತು. ಈ ಕಟ್ಟಡದಲ್ಲೇ ಕನ್ನಡ ಶೀಘ್ರಲಿಪಿ ಬೆರಳಚ್ಚು ತರಗತಿಗಳು ಪ್ರಾರಂಭವಾದವು.

ಪರಿಷತ್ತಿನ ಅಭಿಮಾನಿಗಳಾದ ಕಂಟ್ರಾಕ್ಟರ್ ಆಗಿ ಬಿ. ಎಂ. ರಾಘವೇಂದ್ರರಾಯರು, ದಿವಾಕರ್ ಅವರು. ವಿನ್ಯಾಸಕಾರರಾಗಿ ಕಟ್ಟಡ ನಿರ್ಮಾಣದ ಕಾರ್ಯನಿರ್ವಹಿಸಿದರು.

ವಿಶೇಷ ಕಾರ್ಯಕ್ರಮಗಳು : ಪರಿಷತ್ತಿನಲ್ಲಿ ದೃಶ್ಯಮಾಧ್ಯಮ ಶ್ರವ್ಯ ಮಾಧ್ಯಮಗಳಿಗೆ ಗಮನವಿತ್ತ ಅಧ್ಯಕ್ಷರು ಹೆಚ್ಚಿಲ್ಲ. ಏಕೆಂದರೆ ಅವರ ಕಾಲಕ್ಕೆ ಈಗಿನ ಕಾಲದಷ್ಟು ಆ ಮಾಧ್ಯಮಗಳು ಪ್ರಭಾವಶಾಲಿ ಆಗಿರಲಿಲ್ಲ. ಜಿ. ನಾರಾಯಣರ ಕಾಲಕ್ಕೆ ಸಾಕಷ್ಟು ಪ್ರಭಾವಶಾಲಿ ಮಾಧ್ಯಮವಾಗಿದ್ದವು. ೨00ಕ್ಕೂ ಹೆಚ್ಚು ಮಂದಿ ಪ್ರತಿಭಾವಂತ ಸಾಹಿತಿ, ಕಲಾವಿದ, ಗಮಕಿ, ಕೀರ್ತನಕಾರರ ಮತ್ತು ಇತರರ ಧ್ವನಿ ಮುದ್ರಿಕೆಗಳನ್ನು ಸಂಗ್ರಹಿಸಲಾಯಿತು.

ಪರಿಷತ್ತಿನ ಕಾರ್ಯಕ್ರಮಗಳ, ಜನಪದ ಕಲೆಗಳ ಸಾಹಿತ್ಯ ದಿಗ್ಗಜರ ಜೀವನದ ಬಗೆಗೆ ಸಾಕ್ಷ್ಯಚಿತ್ರಗಳನ್ನು ಸಿದ್ಧಗೊಳಿಸಿ ಪ್ರದರ್ಶನಕ್ಕಾಗಿ ಪ್ರೊಜೆಕ್ಟರ್ ಇತ್ಯಾದಿ ಸಾಮಗ್ರಿಗಳನ್ನು ಪರಿಷತ್ತಿನಲ್ಲಿ ವ್ಯವಸ್ಥೆಮಾಡಿದರು.

೧೯೭೪ರಲ್ಲಿ ರಾಜ್ಯೋತ್ಸವ ಆಚರಣೆಯನ್ನು ಸರ್ವಜ್ಞ ಕವಿಯ ೪00ನೇ ವರ್ಷದ ಉತ್ಸವಾಚರಣೆಯನ್ನು ಒಂದು ವಾರದ ಕಾಲ ನಡೆಸಲು ನಿರ್ಧರಿಸಲಾಯಿತು. ನಾಡಿನೆಲ್ಲೆಡೆ ಸರ್ವಜ್ಞನ  ಬಗ್ಗೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ೧000 ಆಯ್ದ ಸರ್ವಜ್ಞನ ವಚನಗಳನ್ನು ಮುದ್ರಿಸಿ ೫000 ಪ್ರತಿಗಳನ್ನು ಹಂಚಲಾಯಿತು. ಸರ್ವಜ್ಞನ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸಿದ್ದು ಇದೇ ಮೊದಲು.

ಸಾಂಸ್ಕೃತಿಕ ವಸ್ತುಸಂಗ್ರಹಾಲಯ : ೧೯೭೪ರಲ್ಲಿ ಈ ವಿಭಾಗ ಪ್ರಾರಂಭವಾಯಿತು ಕರ್ನಾಟಕದ ಭವ್ಯಪರಂಪರೆ ಸಾರುವ ಚಿತ್ರಸಂಗ್ರಹ, ಜನಪದ ವಾದ್ಯ ಸಂಗ್ರಹ ಇತ್ಯಾದಿಗಳನ್ನು ಒಳಗೊಂಡ ಈ ಸಾಂಸ್ಕೃತಿಕ ವಸ್ತು ಸಂಗ್ರಹಾಲಯಕ್ಕೆ ಕನ್ನಡಾಭಿಮಾನಿ ಮಾನ್ಯ ನಾರಾಯಣರು ತಮ್ಮಲ್ಲಿದ್ದ ಅನೇಕ ಅಪೂರ್ವ ವಸ್ತುಗಳನ್ನು ದಾನವಾಗಿ ಕೊಟ್ಟರು.

ಇವೆಲ್ಲದರ ಜತೆಗೆ ಪ್ರಾಚೀನ ಇತಿಹಾಸ ಲಿಪಿಯ ಅಧ್ಯಯನಕ್ಕಾಗಿ ಶಾಸನತರಗತಿಗಳನ್ನು ನಡೆಸಲು ನಿರ್ಧರಿಸಿದರು. ಶಾಸನ ತರಗತಿಗಳು ಇತಿಹಾಸದ ವಿಚಾರವಾಗಿ ಅದರ ವಿಭಾಗದ ಮುಖ್ಯರಾಗಿದ್ದ ದೇವರಕೊಂಡಾರೆಡ್ಡಿಯವರು ಹೇಳಿರುವ ಮಾತುಗಳಿವು.

ಶಾಸನ ಶಾಸ್ತ್ರದ ತರಗತಿಗಳು ೧೯೭೪ರಲ್ಲಿ ಮೊದಲ ತರಗತಿ ಆರಂಭವಾಯಿತು. ಈ ತರಗತಿಗಳಲ್ಲಿ ಶಾಸನ ಪಠ್ಯ, ಕರ್ಣಾಟಕ ಸಾಂಸ್ಕೃತಿಕ ಚರಿತ್ರೆ ಶಾಸನಲಿಪಿ ಕಲಿಕೆ ಪಠ್ಯಗಳಾಗಿವೆ. ಅಣ್ಣಿಗೇರಿಯವರನ್ನು ಸಂಶೋಧನಾ ವಿಭಾಗಕ್ಕೆ ಮುಖ್ಯಸ್ಥರಾಗಿದ್ದರು. ಪ್ರಸಿದ್ಧ ಶಾಸನ ತಜ್ಞರಾದ ಶೇಷಶಾಸ್ತ್ರಿ, ಲಕ್ಷ್ಮಣ ತೆಲಗಾವಿ, ಹೆಚ್. ಎಸ್. ಗೋಪಾಲರಾವ್, ಪಿ. ವಿ. ಕೃಷ್ಣಮೂರ್ತಿ, ವಸಂತಲಕ್ಷ್ಮಿ, ಸ್ಮಿತಾ ದೇವರಾಜಸ್ವಾಮಿ ಅವರು ಶಾಸನ ತರಗತಿಗಳನ್ನು ನಡೆಸಿಕೊಂಡು ಬಂದಿದ್ದಾರೆ. ಇಲ್ಲಿ ಶಾಸನ ತರಗತಿಗಳಲ್ಲಿ ಅಭ್ಯಾಸ ಮಾಡಿದವರು ರಾಜ್ಯಮಟ್ಟದಲ್ಲಿ, ದೇಶಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಪಾಂಡಿತ್ಯ ಪೋಷಣೆಯನ್ನು ಪರಿಷತ್ತು ಮಾಡುತ್ತಿದೆ ಎಂಬುದಕ್ಕೆ ಈ ಶಾಸನ ತರಗತಿಗಳು ಸಾಕ್ಷಿಯಾಗಿವೆ.

ಸ್ಥಿರಪುಸ್ತಕಪ್ರದರ್ಶನ : ಜಿ. ನಾರಾಯಣರ ಕಲ್ಪನೆ ಇದು. ಈ ಸ್ಥಿರಗ್ರಂಥಪ್ರದರ್ಶನದಲ್ಲಿ ಆ ವರ್ಷ ಪ್ರಕಟಗೊಂಡ ಕನ್ನಡ ಪುಸ್ತಕಗಳನ್ನು ವಿಷಯಾನುಸಾರ ವಿಂಗಡಿಸಿ ಆಯಾ ಕಪಾಟುಗಳಲ್ಲಿ ಇಡುತ್ತಿದ್ದರು. ಅಧ್ಯಯನಶೀಲರಿಗೆ ಇದು ಬಹು ಅನುಕೂಲವಾಗಿತ್ತು. ವಿಮರ್ಶಕರಿಗಂತು ಅತ್ಯುಪಯುಕ್ತವಾಗಿತ್ತು.

ತಾಳೆಗರಿ ಸಂಗ್ರಹ : ೧೯೭೫-೭೬ರಲ್ಲಿ ಸಂಶೋಧನಾ ವಿಭಾಗದ ಅಂಗವಾಗಿ ತಾಳೆಗರಿಗಳ ಸಂಗ್ರಹವಿತ್ತು. ಅದನ್ನು ಕ್ರಮಬದ್ಧಗೊಳಿಸಿ ಹಸ್ತಪ್ರತಿ ಕ್ಯಾಟಲಾಗನ್ನು ಪ್ರಸಿದ್ಧ ತಾಳೆಗರಿ ತಜ್ಞ ಶಿವಣ್ಣನವರು  ಸಿದ್ಧಪಡಿಸಿದರು. ಎಲ್ಲಿಯೂ ಇಲ್ಲದ ಅಪರೂಪದ ಪ್ರತಿಗಳು ಕೆಲವು ಇಲ್ಲಿವೆ.

ಜಿ. ನಾರಾಯಣರು ವಿದ್ವಾಂಸಲ್ಲದಿದ್ದರೂ ಶಾಸ್ತ್ರ ಪಾಂಡಿತ್ಯವಿಲ್ಲದಿದ್ದರೂ ಅವರ ಶಾಸ್ತ್ರಪ್ರೇಮ ವಿದ್ವತ್ ಪ್ರೇಮಕ್ಕೆ ಈ ಸಂಶೋಧನಾ ವಿಭಾಗದ ಕಾರ್ಯಗಳು ಸಾಕ್ಷಿಯಾಗಿವೆ.

ತಮ್ಮ ಅಧಿಕಾರಾವಧಿಯಲ್ಲಿ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ನಾನಾರೀತಿಯಲ್ಲಿ ಬೆಳೆಸಿದವರಲ್ಲಿ ಜಿ. ನಾರಾಯಣರು ಅಗ್ರಗಣ್ಯರಾಗಿದ್ದಾರೆ.

Tag: G.Narayana, G. Narayana

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)