ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೧೫
ಅಧ್ಯಕ್ಷರು : ಹಂಪನಾಗರಾಜಯ್ಯ (೧೯೭೮ – ೧೯೮೬)
ಜೀವನ
ಭಾಷಾ ಶಾಸ್ತ್ರಜ್ಞರು, ಸಂಶೋಧಕರು, ಪ್ರಾಧ್ಯಾಪಕರು, ಜೈನ ವಿದ್ವಾಂಸರು ಆದ ಹಂಪನಾ ಅವರು (ಹಂಪಸಂದ್ರದ ಪದ್ಮನಾಥಯ್ಯನವರ ಪುತ್ರ ನಾಗರಾಜಯ್ಯ) ೭-೧0-೧೯೩೬ರಲ್ಲಿ ಪದ್ಮನಾಭಯ್ಯ-ಪದ್ಮಾವತಮ್ಮ ದಂಪತಿಗಳಿಗೆ ೪ನೇ ಮಗುವಾಗಿ ಗೌರಿಬಿದನೂರಿನ ಹಂಪಸಂದ್ರದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಹಂಪಸಂದ್ರದಲ್ಲೂ ಪ್ರೌಢಶಿಕ್ಷಣ ಗೌರಿಬಿದನೂರು, ಮಧುಗಿರಿಗಳಲ್ಲಿ, ಕಾಲೇಜು ಶಿಕ್ಷಣ ಮಧುಗಿರಿ, ಮೈಸೂರುಗಳಲ್ಲಿ ಮುಂದುವರೆಯಿತು. ೧೯೫೯ರಲ್ಲಿ ಎಂ.ಎ. ಪದವಿ ಗಳಿಸಿ, ೧೯೫೯ರಲ್ಲಿ ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಪ್ರಾರಂಭಿಸಿದ ಹಂಪನಾ ೧೯೭0ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ, ಪ್ರವಾಚಕ, ಪ್ರಾಧ್ಯಾಪಕ, ಕೇಂದ್ರ ನಿರ್ದೇಶಕ ಹುದ್ದೆಗಳನ್ನು ಅಲಂಕರಿಸಿ ೧೯೯೬ರಲ್ಲಿ ನಿವೃತ್ತರಾದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿರುವ ಇವರು ೧೯೬೬ ರಿಂದ ೧೯೭೪ರವರೆಗೆ ೮ ವರ್ಷಗಳ ಕಾಲ ಗೌರವ ಕಾರ್ಯದರ್ಶಿಗಳಾಗಿ ಮತ್ತು ೧೯೭೮ ರಿಂದ ೧೯೮೬ರವರೆಗೆ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಇವರಿಗೆ ಹತ್ತಾರು ಪ್ರಶಸ್ತಿಗಳು ಲಭ್ಯವಾಗಿವೆ. ಸಾಹಿತ್ಯ ಪರಿಷತ್ತಿನ ಚಾವುಂಡರಾಯ ಪ್ರಶಸ್ತಿ, ಬೆಂಗಳೂರಿನ ತೇರಾಪಂಥಿ ಸಂಘ ನೀಡಿರುವ ಮಹಾಪ್ರಾಜ್ಞ ಜೈನಸಾಹಿತ್ಯ ಪ್ರಶಸ್ತಿ, ಶ್ರವಣಬೆಳಗೊಳದ ಜೈನ ಶಾಸನ ಸಾಹಿತ್ಯ ಪ್ರಶಸ್ತಿ, ಅಮೇರಿಕಾ ಸಂಯುಕ್ತ ಸಂಸ್ಥಾನದ ಜೈನ್ ವರ್ಲ್ಡ್ ಫೌಂಡೇಷನ್ ಸಂಸ್ಥೆ ನೀಡಿರುವ ಜ್ಯೂವೆಲ್ಸ್ ಆಫ್ ಜೈನ್ ಅವಾರ್ಡ್, ಹಂಪಿ ವಿಶ್ವವಿದ್ಯಾಲಯದ ನಾಡೋಜ ಗೌರವ ಮುಂತಾದ ಪ್ರಶಸ್ತಿಗಳನ್ನು ಹೊಂದಿದ್ದಾರೆ.
ಕಾದಂಬರಿ, ಕಾವ್ಯ, ಇತಿಹಾಸ, ಭಾಷಾಶಾಸ್ತ್ರ, ಜೈನ ಸಾಹಿತ್ಯ ಇತ್ಯಾದಿ ಕ್ಷೇತ್ರಗಳಲ್ಲಿ ೬೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಹಂಪನಾ ಅವರು ಸಂಶೋಧಕರೆಂದೇ ಪ್ರಸಿದ್ಧರಾಗಿದ್ದಾರೆ.
ಇವರ ಕೆಲವು ಕೃತಿಗಳು ಹೀಗಿವೆ:
ದ್ರಾವಿಡ ಭಾಷಾವಿಜ್ಞಾನ, ನಾಗಕುಮಾರ ಚರಿತೆ, ಧನ್ಯಕುಮಾರ ಚರಿತೆ, ಸೌಳವ ಭಾರತ, ಚಂದ್ರಸಾಗರವರ್ಣಿಯ ಕೃತಿಗಳು, ರತ್ನಾಕರನ ಹಾಡುಗಳು, ಇತ್ಯಾದಿ ಜೈನ ಕೃತಿಗಳನ್ನು ಸಂಪಾದಿಸಿದ್ದಾರೆ. ನಾಗಶ್ರೀ (ಕಾದಂಬರಿ), ಚಾರುವಸಂತ (ಕಾವ್ಯ) ರಚಿಸಿದ್ದಾರೆ.
ಸಮಗ್ರ ಜೈನ ಸಾಹಿತ್ಯ ಸಂಪುಟಗಳ ಮಾಲಿಕೆಯಲ್ಲಿ ರನ್ನ, ಪೊನ್ನ, ಕಮಲ ಸಂಭವರ ಕೃತಿಗಳ ಸಂಪುಟಗಳನ್ನು ಸಂಪಾದಿಸಿದ್ದಾರೆ.
ಯಕ್ಷಯಕ್ಷಿಯರು, ಸಾಂತರು ಒಂದು ಅಧ್ಯಯನ, ಚಂದ್ರಕೊಡೆ, ನೋಂಪಿಯ ಕಥೆಗಳು, ಯಾಪನೀಯ ಸಂಘ ಭಾಜಿಯವಿನ ಆರಾಧನಾ, ಕರ್ನಾಟಕ ಟೀಕಾ ಗ್ರಂಥ, ಶಾಸನಗಳಲ್ಲಿ ಎರಡು ವಂಶಗಳು ಮುಂತಾದ ಕೃತಿಗಳು ಜೈನ ಸಂಶೋಧನಾ ಕೃತಿಗಳಾಗಿವೆ.
ಸಾಧನೆ :
ರಾಜ್ಯ ಸಮ್ಮೇಳನಗಳು : ಇವರ ಅವಧಿಯಲ್ಲಿ ೭ ಸಾಹಿತ್ಯ ಸಮ್ಮೇಳನಗಳು ಇವರ ನೇತೃತ್ವದಲ್ಲಿ ನಡೆದಿದೆ.
ಜಿಲ್ಲಾ ಸಮ್ಮೇಳನಗಳು : ಇವುಗಳಲ್ಲದೆ ೧೯ ಜಿಲ್ಲಾ ಸಮ್ಮೇಳನಗಳು ನಡೆದಿರುವುದು ಶ್ಲಾಘನೀಯ ಕಾರ್ಯವಾಗಿದೆ. ತೆರೆಮರೆಯ, ಪ್ರಚಾರಪ್ರಿಯರಲ್ಲದ ಶ್ರೇಷ್ಠ ಸಾಹಿತಿಗಳನ್ನು ಗುರುತಿಸಿ ಗೌರವಿಸುವ ಕೆಲಸ ಜಿಲ್ಲಾ ಸಮ್ಮೇಳನಗಳಿಂದಾಗಿದೆ.
ವಿಶಿಷ್ಟ ಸಮ್ಮೇಳನಗಳು : ಅಖಿಲ ಕರ್ನಾಟಕ ವ್ಯಂಗ್ಯ ಚಿತ್ರಕಾರರ ೨ನೇ ಸಮ್ಮೇಳನ (೧೯೭೯), ಅಖಿಲ ಕರ್ನಾಟಕ ಕನ್ನಡ ಶೀಘ್ರಲಿಪಿ ಬೆರಳಚ್ಚುಗಾರರ ಸಮ್ಮೇಳನ (೧೯೭೯), ಕನ್ನಡ ಸಂಘ – ಸಂಸ್ಥೆಗಳ ಸಮ್ಮೇಳನ (೧೯೮0), ಪರಿಷತ್ತಿನಿಂದ ನಡೆದುದು ವಿಶೇಷವಾಗಿದೆ. ಇದಲ್ಲದೆ ೩0 ವಿಚಾರ ಸಂಕಿರಣಗಳು ವಿವಿಧ ವಿಷಯಗಳ ಬಗ್ಗೆ ನಡೆದಿರುವುದು ಪ್ರಶಂಸನೀಯ ಸಂಗತಿಯಾಗಿದೆ.
ಕಾರ್ಯಕ್ರಮಗಳು : ೧೯೭೯ರಲ್ಲಿ ಅಖಿಲ ಕರ್ನಾಟಕ ಗಮಕ ಸಮ್ಮೇಳನ, ೧೯೮0ರಲ್ಲಿ ಅಖಿಲ ಕರ್ನಾಟಕ ಕೀರ್ತನಕಾರರ ಸಮ್ಮೇಳನ, ಹತ್ತುದಿನಗಳ ಗೀತಸಂಧ್ಯಾ ಕಾರ್ಯಕ್ರಮ, ಅಂತರಾಷ್ಟ್ರೀಯ ಮಕ್ಕಳ ವರ್ಷ (೧೯೭೯)ದ ಅಂಗವಾಗಿ ೧ ವಾರ ಕಾಲ ಮಕ್ಕಳ ಮೇಳ ಮತ್ತು ಸಮ್ಮೇಳನಗಳನ್ನು ಏರ್ಪಡಿಸಲಾಯಿತು.
ಶತಮಾನೋತ್ಸವಗಳು : ಆಲೂರು ವೆಂಕಟರಾಯರು, ಹಳಕಟ್ಟಿ, ಉತ್ತಂಗಿ ಚೆನ್ನಪ್ಪ, ಗೋವಿಂದ ಪೈ, ಡೆಪ್ಯೂಟಿ ಚೆನ್ನಬಸಪ್ಪ, ಬಿಎಂಶ್ರೀ, ಟಿಪಿಕೈಲಾಸಂ ಮೊದಲಾದವರ ಶತಮಾನೋತ್ಸವ ಕಾರ್ಯಕ್ರಮಗಳು ಇವರ ಅವಧಿಯಲ್ಲಿ ನೆರವೇರಿದವು.
ಕವಿಗಳ ವಿಚಾರ ಸಂಕಿರಣಗಳು : ಕುಮಾರವ್ಯಾಸ, ರನ್ನ, ಹರಿಹರ, ರಾಘವಾಂಕ, ಲಕ್ಷ್ಮೀಶ, ರುದ್ರಭಟ್ಟ, ಚಾಮರಸ ಮೊದಲಾದ ಹಳಗನ್ನಡ ಮತ್ತು ನಡುಗನ್ನಡ ಕವಿಗಳ ಬಗ್ಗೆ ಆಯಾ ಕವಿಗಳ ಹುಟ್ಟೂರುಗಳಲ್ಲಿ ಜೀವನಕೃತಿಗಳ ಬಗ್ಗೆ ವಿಚಾರ ಸಂಕಿರಣಗಳು ನಡೆದವು.
ವಜ್ರಮಹೋತ್ಸವ ಭವನದ ನಿರ್ಮಾಣ : ೧೯೮೧ರಲ್ಲಿ ನಿರ್ಮಿಸಲಾದ ವಜ್ರಮಹೋತ್ಸವ ಕಟ್ಟಡವು ಪರಿಷತ್ತಿನ ಚಟುವಟಿಕೆಗಳಿಗೆ ಅನುಕೂಲಗಳನ್ನು ಒದಗಿಸಿತು. ಪದಾಧಿಕಾರಿಗಳಿಗೆ ಪ್ರತ್ಯೇಕ ಕೊಠಡಿ, ಪುಸ್ತಕ ದಾಸ್ತಾನಿಗೆ ನೆಲಮಾಳಿಗೆ, ಅಂತಸ್ತುಗಳಿಗೇರಲು ಲಿಫ್ಟ್‍ಗಳು ಈ ಭವನದಲ್ಲಿವೆ.
ಗೌರವ ಸದಸ್ಯತ್ವ ನೀಡಿಕೆ : ಸಾಹಿತ್ಯ ಪುರಸ್ಕಾರಗಳಿಗಿಂತ ಭಿನ್ನವಾದ ಹಾಗೂ ಶ್ರೇಷ್ಠವಾದ ಮನ್ನಣೆಯನ್ನು ಜೀವಮಾನದ ಅವಿಸ್ಮರಣೀಯ ಸಾಧನೆ ಮಾಡಿದ ಮಹನೀಯರಿಗೆ ಗೌರವ ಸದಸ್ಯತ್ವ ನೀಡುವುದನ್ನು ಪ್ರಾರಂಭಿಸಲಾಯಿತು. (‘ನಿಬಂಧನೆಗಳು’ ಅಧ್ಯಾಯದಲ್ಲಿ ಇದರ ವಿವರಗಳಿವೆ) ಇದೊಂದು ವಿಶಿಷ್ಟಯೋಜನೆ ಆಗಿದೆ.
ಸಂಶೋಧನ ವಿಭಾಗ ಪ್ರಾರಂಭ : ಸಂಶೋಧಕರಿಗೆ ಒಂದು ಸುಸಜ್ಜಿತ ಗ್ರಂಥ ಭಂಡಾರ ಬೇಕೆಂಬ ದೃಷ್ಟಿಯಿಂದ ಪರಿಷತ್ತಿನ ಪುಸ್ತಕ ಭಂಡಾರ ಮತ್ತು ಸಂಶೋಧನ ಭಾಗದ ಆಕರಗ್ರಂಥಗಳನ್ನು, ಪತ್ರಿಕೆಗಳನ್ನು ಒಂದೆಡೆ ಜೋಡಿಸಿ, ಕನ್ನಡ ಸಂಶೋಧನಾ ವಿಭಾಗವನ್ನು ಪ್ರಾರಂಭ ಮಾಡಲಾಯಿತು. ಇದು ಹಲವು ಕಾಲ ಅಸ್ತಿತ್ವದಲ್ಲಿತ್ತು. ಅನಂತರ ಆ ಜಾಗದಲ್ಲಿ ಪುಸ್ತಕ ಭಂಡಾರ ಸಾಮಾನ್ಯವಿಭಾಗ ಬಂದು ಸಂಶೋಧನ ವಿಭಾಗ ಸ್ಥಗಿತಗೊಂಡಿತು.
ಹಸ್ತಪ್ರತಿ ವಿಭಾಗದ ಕಥೆ: ಕೇಂದ್ರ ಸರ್ಕಾರದ ಆರ್ಥಿಕ ನೆರವಿನಿಂದ ಪ್ರಾರಂಭವಾದ ಹಸ್ತಪ್ರತಿ ಸಂಗ್ರಹ ಕಾರ್ಯ ನಿರಂತರವಾಗಿ ನಡೆಯಲಿಲ್ಲ. ಸಂಗ್ರಹವಾದ ಹಸ್ತಪ್ರತಿಗಳ ಅಧ್ಯಯನಗ್ರಂಥ ವರ್ಣನಾಸೂಚಿ ತಯಾರಾದ ನಂತರ ಈ ವಿಭಾಗದ ಪರ್ಯಾವಸಾನವಾಯಿತು.
ತರಗತಿಗಳು ಮತ್ತು ಪರೀಕ್ಷೆಗಳು : ಜಾನಪದ ಸಾಹಿತ್ಯಕ್ಕಿಂತ ಶಿಷ್ಟಸಾಹಿತ್ಯಕ್ಕೆ ಪರಿಷತ್ತು ಪ್ರಾರಂಭದಲ್ಲಿ ಕೊಟ್ಟಿತ್ತು. ಆದರೆ ಕಾಲಾನುಕ್ರಮದಲ್ಲಿ ಜಾನಪದ ಸಾಹಿತ್ಯ ಸಂಗ್ರಹ ಬೆಳೆದು ಅಧ್ಯಯನ ವಿಷಯವಾಯಿತು. ವಿಶ್ವವಿದ್ಯಾನಿಲಯ ಜಾನಪದ ಎಂ.ಎ. ತರಗತಿಗಳೇ ಪ್ರಾರಂಭವಾದವು. ಅನೇಕ ಪಿಎಚ್‍ಡಿ ಪ್ರಬಂಧಗಳು ಜಾನಪದಕ್ಕೆ ಸಂಬಂಧಿಸಿದಂತೆ ಪ್ರಕಟವಾಗಿವೆ. ಪರಿಷತ್ತು ಜಾನಪದಕ್ಕೆ ಸಂಬಂಧಿಸಿದಂತೆ ಹಲವಾರು ಯೋಜನೆಗಳನ್ನು ಕೈಗೊಂಡಿತು. ಕಂಬಾರರ ಸಂಪಾದಕತ್ವದಲ್ಲಿ ಕನ್ನಡ ಜಾನಪದ ವಿಶ್ವಕೋಶ (೨ ಸಂಪುಟಗಳು ಸಿದ್ಧಗೊಂಡವು)
ಕನ್ನಡ ಜನಪದ ವೈದ್ಯಕೋಶ ತಯಾರಿಕೆಯ ಕಾರ್ಯ ಯಶಸ್ವಿಯಾಗಲಿಲ್ಲ. ಪರಿಷತ್ತಿನಲ್ಲಿ ಜಾನಪದ ಪ್ರವೇಶ ಪ್ರೌಢ ತರಗತಿ ಪ್ರಾರಂಭವಾದವು. ೧೯೭೯ರಲ್ಲಿ ರಾಜ್ಯಮಟ್ಟದ ಜಾನಪದ ಮೇಳವನ್ನು ನಡೆಸಲಾಯಿತು.
ಕೆಲವು ಹಿನ್ನಡೆಗಳು : ಸಾಕಷ್ಟು ವ್ಯಾಪಕವಾಗಿ ವೈವಿಧ್ಯಮಯವಾಗಿ ಕಾರ್ಯಕ್ರಮಗಳನ್ನು ನಡೆಸಿ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿಸಿದ ಹಂಪನಾ ಅವರ ಅವಧಿಯಲ್ಲಿ ಸರ್ಕಾರಕ್ಕೆ ದೂರು ಸಲ್ಲಿಕೆಯಾಗಿ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಹತ್ತಿ ಶಾಮಸುಂದರ ಆಯೋಗ ತೀರ್ಪಿತ್ತ ಫಲವಾಗಿ ಪರಿಷತ್ತಿಗೆ ಆಡಳಿತಾಧಿಕಾರಿಗಳು ನೇಮಕವಾದರು.
ಶ್ರೀಕೃಷ್ಣರಾಜ ಪರಿಷನ್ಮಂದಿರವನ್ನು ಕೆಡವಿ ನೂತನ ಭವನ ನಿರ್ಮಾಣಮಾಡುವ ಹಂಪನಾ ಅವರ ಯೋಜನೆಗೆ ಸಾರ್ವಜನಿಕ ವಿರೋಧ ಬಂದು ಕಟ್ಟಡ ನಿರ್ಮಿತಿ ಯೋಜನೆ ರದ್ದಾಯಿತು.
Tag: Hampa Nagarajaiah, Hampanagarajaiah, Hampana
ಪ್ರತಿಕ್ರಿಯೆ