ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೨0
ಎನ್. ಬಸವಾರಾಧ್ಯ (೧೯೯೮–೨00೧)
ಜೀವನ
ನಿಘಂಟು ತಜ್ಞರೂ ಹಳಗನ್ನಡ ವಿದ್ವಾಂಸರೂ ವೀರಶೈವ ಸಾಹಿತ್ಯ ಪರಿಣತರೂ ಆದ ಎನ್. ಬಸವಾರಾಧ್ಯರು ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ನಾರಸಿಂಹನಹಳ್ಳಿಯಲ್ಲಿ ನಂಜುಂಡಾರಾಧ್ಯ-ಗಿರಿಜಮ್ಮ ದಂಪತಿಗಳ ಸುಪುತ್ರರಾಗಿ ೨0-೭-೧೯೨೬ರಲ್ಲಿ ಜನಿಸಿದರು. ಗೌರಿಬಿದನೂರಿನಲ್ಲಿ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಮುಗಿಸಿ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಬೆಂಗಳೂರು ಕೋಟೆ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಇಂಟರ್‍ಮೀಡಿಯೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಡಿಗ್ರಿ ವ್ಯಾಸಂಗಕ್ಕೆ ಮೈಸೂರು ಮಹಾರಾಜ ಕಾಲೇಜಿಗೆ ಸೇರಿದರು. ೧೯೫0 ರಲ್ಲಿ ಎಂ.ಎ. ಪಾಸಾದರು.
ಅನಂತರ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ಸ್ನಾತಕ ವಿಶೇಷ ತಜ್ಞರಾಗಿ ಸೇರಿದ ಅವರು ಪರಿಷತ್ತಿನ ಕನ್ನಡ ನಿಘಂಟು ಯೋಜನೆಯಲ್ಲಿ ಉಪಸಂಪಾದಕ. ಸಂಪಾದಕ, ಮುಖ್ಯ ಸಂಪಾದಕ, ಪ್ರಧಾನ ಸಂಪಾದಕ ಹುದ್ದೆಗಳನ್ನು ಅಲಂಕರಿಸಿ ಪರಿಷತ್ತಿನ ೮ ಸಂಪುಟಗಳಲ್ಲಿ ನಿರಂತರವಾಗಿ ಕೆಲಸ ಮಾಡಿದ ವ್ಯಕ್ತಿಯಾದರು. ೧೯೮೬ರಲ್ಲಿ ನಿವೃತ್ತರಾದರು.
ಮೈಸೂರು ವಿಶ್ವವಿದ್ಯಾನಿಲಯ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಪಂಡಿತ ಪರೀಕ್ಷಾ ಮಂಡಳಿ, ಕಾಮರಾಜ ವಿಶ್ವವಿದ್ಯಾನಿಲಯದಲ್ಲಿ ವಿಶೇಷ ತಜ್ಞರು. ಇವರು ಪಠ್ಯಪುಸ್ತಕ ಸಮಿತಿ ಅಧ್ಯಕ್ಷರಾಗಿ ೧೯೮0ರಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡದಲ್ಲಿ ಕಚೇರಿ ಕೈಪಿಡಿ, ಇಂಗ್ಲಿಷ್-ಕನ್ನಡ ನಿಘಂಟು ಪರಿಷ್ಕರಣ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ಸೇವೆಗೆ ಮೆಚ್ಚಿ ಅನೇಕ ಸಂಘಸಂಸ್ಥೆಗಳು ಸನ್ಮಾನಿಸಿವೆ. ಪ್ರಶಸ್ತಿಗಳನ್ನು ನೀಡಿವೆ. ಭಾರತ ಭಾಷಾಭೂಷಣ, ಶಿವರತ್ನ, ಶಿವಕಮಲ ಪ್ರಶಸ್ತಿಗಳು ಪ್ರಾಪ್ತವಾಗಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವೀರಶೈವ ಸಾಹಿತ್ಯ ಶ್ರೇಷ್ಠ ಕೃತಿ ಪ್ರಶಸ್ತಿ, ದೇವರಾಜ ಬಹದ್ದೂರ್ ಬಹುಮಾನ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನಗಳು ಇವರಿಗೆ ದೊರೆತಿವೆ.
೨0ನೇ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ (೧೯೯೮-೨00೧) ಆಯ್ಕೆಯಾದ ಇವರು ಉಪಾಯನ, ದೇವಗಂಗೆ, ಅಮರವಾಣಿ, ಅಭಿನಂದನ ಗ್ರಂಥಗಳನ್ನು ಹೊರತಂದಿದ್ದಾರೆ. ಹಳಗನ್ನಡ ನಿಘಂಟು, ಸಚಿತ್ರ ಶಾಲಾ ನಿಘಂಟು (ಭಾಷಾಂತರ), ಕನ್ನಡ ಗದ್ಯಾವಲೋಕನ, ಶತಕ ಸಾಂಗತ್ಯಗಳು, ತ್ರಿಪುರ ದಹನ ಸಾಂಗತ್ಯ, ಹರಿಶ್ಚಂದ್ರ ಕಾವ್ಯ, ತೊರವೆ ರಾಮಾಯಣ ಗ್ರಂಥಗಳನ್ನು ಸಂಪಾದಿಸಿದ್ದಾರೆ. ೩0ಕ್ಕೂ ಹೆಚ್ಚು ಸಂಪಾದಿತ ಕೃತಿಗಳನ್ನು, ೧00ಕ್ಕೂ ಹೆಚ್ಚು ವಿದ್ವತ್ಪೂರ್ಣ ಲೇಖನಗಳನ್ನು ಬರೆದಿದ್ದಾರೆ.
ಕನ್ನಡ ನಿಘಂಟು ನಿಷ್ಣಾತರಾದ ಇವರು ದಿನಾಂಕ ೬-೧೨-೨0೧೩ರಲ್ಲಿ ನಿಧನರಾದರು.
ಸಾಧನೆ
ಪರಿಷತ್ತಿನ ಭವನಗಳು : ಕನ್ನಡ ಸಾಹಿತ್ಯ ಪರಿಷತ್ತಿನ, ಜಿಲ್ಲಾ ಘಟಕಗಳು ಮತ್ತು ತಾಲ್ಲೂಕು ಘಟಕಗಳಿಗೆ ತಮ್ಮದೇ ಆದ ಸ್ವಂತ ಕಟ್ಟಡಗಳು ಇರಬೇಕು ಎಂಬುದು ಮೊದಲಿನಿಂದಲೂ ಎಲ್ಲರೂ ಬಯಸುತ್ತಿರುವ ವಿಚಾರ. ಇದಕ್ಕೆ ಅನುಗುಣವಾಗಿ ಕೆಲವು ಜಿಲ್ಲಾ ತಾಲ್ಲೂಕು ಘಟಕಗಳು ಸ್ಥಳೀಯ ವ್ಯಕ್ತಿಗಳ ಹಾಗೂ ಸಂಸ್ಥೆಗಳ ನೆರವಿನಿಂದ ಸ್ವಂತ ನಿವೇಶನ ಪರಿಷತ್ತಿನ ಭವನಗಳು ಆಯಾ ಜಿಲ್ಲೆಯ / ತಾಲ್ಲೂಕಿನ ಅಧ್ಯಕ್ಷರ ಕೈವಾಡದಿಂದ ಖಾಸಗೀ ಟ್ರಸ್ಟಿಗೆ ಸೇರಿ ಪರಿಷತ್ತಿನ ಕೈತಪ್ಪಿ ಹೋಗಿವೆ. ಇದಕ್ಕೆ ನಿಯಮಗಳಲ್ಲಿ ಕಂಡು ಬರುವ ಲೋಪಗಳೇ ಕಾರಣವೆಂದು ತಿಳಿದು ಬಸವಾರಾಧ್ಯರು ಜಿಲ್ಲಾ / ತಾಲ್ಲೂಕು ಭವನಗಳ ಬಗಗ್ಗೆ ಕಟ್ಟಡದ ದಾಖಲೆ – ಕಟ್ಟಡ ವಿನ್ಯಾಸ ಹಕ್ಕುದಾರಿಕೆ ಮೊದಲಾದ ವಿಷಯಗಳ ಬಗ್ಗೆ ಉಪನಿಬಂಧನೆಗಳನ್ನು ರಚಿಸಿ ಜಾರಿಗೆ ತಂದರು.
ಪರಿಷನ್ಮಂದಿರದಿಂದ ಸುಧಾರಣೆ : ಹಳೆಯ ಕಟ್ಟಡ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಆಧುನಿಕ ಯಂತ್ರಗಳನ್ನು ಅಳವಡಿಸಿ ಧ್ವನಿ ವ್ಯವಸ್ಥೆಯನ್ನು ಸುಸಜ್ಜಿತಗೊಳಿಸಲಾಯಿತು. ಆಂತರಿಕ ದೂರವಾಣಿ ವ್ಯವಸ್ಥೆಯ ಮೂಲಕ ಎಲ್ಲಾ ವಿಭಾಗಗಳಿಗೂ ಸಂಪರ್ಕ ಇರುವಂತೆ ಮಾಡಲಾಯಿತು.
ಆರ್ಥಿಕ ಸುಧಾರಣೆ : ಪರಿಷತ್ತಿಗೆ ಆದಾಯ ಬರುವುದಕ್ಕಾಗಿ ವಜ್ರಮಹೋತ್ಸವ ಕಟ್ಟಡದ ನೆಲಮಹಡಿಯ ಸ್ವಲ್ಪಭಾಗವನ್ನು ಮೊದಲು ಪುಸ್ತಕ ಮಾರಾಟವಿದ್ದ ಭಾಗವನ್ನು ಬ್ಯಾಂಕೊಂದಕ್ಕೆ ಬಾಡಿಗೆಗೆ ಕೊಟ್ಟು ಪರಿಷತ್ತಿಗೆ, ವರಮಾನ ಬರುವಂತೆ ಮಾಡಿದರು. ನಿಘಂಟುಗಳ ಪರಿಷ್ಕೃತ ಮುದ್ರಣದ ಆವೃತ್ತಿ ತರಲು ಮತ್ತು ಆಯ್ದ ಪುಸ್ತಕಗಳನ್ನು ಪ್ರಕಟಿಸಲು ಯೋಜನೆಯೊಂದನ್ನು ಸಿದ್ಧಪಡಿಸಿ ಸರ್ಕಾರದಿಂದ ೨ ಕಂತುಗಳಲ್ಲಿ ೧ ಕೋಟಿ ರೂಪಾಯಿಗಳ ಧನ ಸಹಾಯವನ್ನು ಪಡೆದರು.
ಅಚ್ಚುಕೂಟದ ಪ್ರಗತಿ : ಮುದ್ರಣ ತಂತ್ರಜ್ಞಾನ ಬಹಳವಾಗಿ ಮುಂದುವರೆದು ಆಧುನಿಕ ಆಫ್‍ಸೆಟ್ ಮುದ್ರಣಗಳು ಬಂದಿದ್ದ ಕಾಲದಲ್ಲಿ, ಪರಿಷತ್ತಿನ ಅಚ್ಚುಕೂಟವು ಮೊಳೆಯಚ್ಚು ಸಿಲಿಂಡರ್ ಟ್ರೆಡಲ್‍ಗಳ ಹಳೆಯ ಯಂತ್ರಗಳ ಅಚ್ಚುಕೂಟವಾಗಿತ್ತು. ಬಸವರಾಧ್ಯರು ಹಳೆಯ ತಂತ್ರಜ್ಞಾನದಿಂದ ಅಚ್ಚುಕೂಟವನ್ನು ಮುಕ್ತಗೊಳಿಸಿ ಆಧುನಿಕ ಯಂತ್ರಗಳನ್ನು ಅಳವಡಿಸಿದರು. ಬಿಎಂಶ್ರೀ ಅಚ್ಚುಕೂಟ ಆಫ್‍ಸೆಟ್ ಎಂಬ ನೂತನ ಅಭಿದಾನ ನೀಡಿದರು. ಪರಿಷತ್ತಿಗೆ ಆದಾಯ ಮೂಲವಾಗಲಿ ಎಂಬ ಆಶಯದಿಂದಲೂ ಪರಿಷತ್ತಿನ ಮುದ್ರಣದ ಅಗತ್ಯಗಳನ್ನು ಶೀಘ್ರದಲ್ಲಿ ಪೂರೈಸಲೂ ಈ ಬದಲಾವಣೆಗಳನ್ನು ಮಾಡಿದರು.
ಪ್ರಕಟನೆಗಳು : ವಿದ್ವಾಂಸರಿಗೆ ಉಪಯುಕ್ತವೆನಿಸಿದ ಹಳಗನ್ನಡ ಅಕ್ಷರಗಳ ನಿಘಂಟು ಇವರ ಕಾಲದಲ್ಲಿ ಅಚ್ಚಾಗಿ ಬಿಡುಗಡೆ ಆಯಿತು. ಕನಕಪುರ ಸಮ್ಮೇಳನದ ಸಂದರ್ಭದಲ್ಲಿ ೭೫ ಗ್ರಂಥಗಳನ್ನು ಪ್ರಕಟಿಸಲಾಯಿತು. ಇದರ ಕಾಗದ ವೆಚ್ಚವನ್ನು ಸಮ್ಮೇಳನದ ಸ್ವಾಗತ ಸಮಿತಿಯಿಂದ ಪಡೆಯಲಾಯಿತು. ಪರಿಷತ್ತಿಗೆ ಅಷ್ಟರಮಟ್ಟಿಗೆ ಆರ್ಥಿಕ ಲಾಭ ಆಯಿತು.
ಪ್ರತಿಮೆಯ ಸ್ಥಾಪನೆ: ವಸ್ತು ಸಂಗ್ರಹಾಲಯದಲ್ಲಿದ್ದ ಶ್ರೀಕೃಷ್ಣರಾಜ ಒಡೆಯರ್ ಪ್ರತಿಮೆಯನ್ನು ಗ್ರಾನೈಟ್ ಕಂಬದ ಪೀಠದಮೇಲೆ ಕಚೇರಿಯ ಬಾಗಿಲ ಬಳಿ ಪ್ರತಿಷ್ಠಾಪಿಸಲಾಯಿತು.
ಸಮ್ಮೇಳನಗಳು : ೨ ಸಮ್ಮೇಳನಗಳು ಇವರ ಅವಧಿಯಲ್ಲಿ ನಡೆದಿವೆ.
ಕಾರ್ಯಕ್ರಮಗಳು : ವಿಶೇಷ ಕಾರ್ಯಕ್ರಮಗಳು ಇವರ ಅವಧಿಯಲ್ಲಿ ನಡೆದವು. ಜನ್ಮದಿನೋತ್ಸವಗಳ ಕಾರ್ಯಕ್ರಮಗಳ ಮಾಲೆಯನ್ನು ಪ್ರಾರಂಭಿಸಿದರು. ಈ ಜನ್ಮದಿನೋತ್ಸವ ಕಾರ್ಯಕ್ರಮದ ಅಂಗವಾಗಿ ಬೆಳ್ಳಾವೆ ವೆಂಕಟನಾರಣಪ್ಪ (೧೨೭ನೇ ಜನ್ಮದಿನ), ಗೋವಿಂದ ಪೈ ೧೧೭ನೇ ಜನ್ಮದಿನ ಹಾಗೂ ದ.ರಾ. ಬೇಂದ್ರ ಜನ್ಮದಿನೋತ್ಸವ ಮುಂತಾದ ಹಿರಿಯ ಬರಹಗಾರ ನೆನಪು ಮಾಡಿಕೊಳ್ಳುವ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು.
ಎ. ಎನ್. ಮೂರ್ತಿರಾಯರಿಗೆ ಪರಿಷತ್ತಿನ ಗೌರವ ಪ್ರಶಸ್ತಿ ನೀಡಲಾಯಿತು. ೧೩೧ ದತ್ತಿನಿಧಿಗಳು ಹೊಸದಾಗಿ ಪರಿಷತ್ತಿನಲ್ಲಿ ಸ್ಥಾಪನೆ ಆದವು. ಸದಸ್ಯತ್ವದ ಸಂಖ್ಯೆ ೧೧೬೨೮ಕ್ಕೆ ಏರಿತು. ಅಮೃತ ನಿಧಿಗೆ ಇವರ ಕಾಲದಲ್ಲಿ ೨ ಲಕ್ಷಕ್ಕೂ ಮೀರಿ ಧನಸಂಗ್ರಹವಾಯಿತು. ಇನ್ಫೋಸಿಸ್ ಸಂಸ್ಥೆಯ ಶ್ರೀಮತಿ ಸುಧಾಮೂರ್ತಿ ಅವರಿಂದ ೨ ಕಂಪ್ಯೂಟರ್‍ಗಳನ್ನು ಹಾಗೂ ಪುಸ್ತಕ ಪ್ರಕಟನೆಗೆ ೧ ಲಕ್ಷ ದತ್ತಿಯನ್ನು ಪರಿಷತ್ತಿಗೆ ಪಡೆಯಲಾಯಿತು.
ಒಟ್ಟಿನಲ್ಲಿ ಬಸವಾರಾಧ್ಯರು ಪರಿಷತ್ತಿನ ಆರ್ಥಿಕ ಪ್ರಗತಿಗೆ ಶ್ರಮಿಸಿದರು ಮತ್ತು ಕೆಲವು ವಿನೂತನ ಕಾರ್ಯಕ್ರಮಗಳನ್ನು ಕೈಗೊಂಡರು.
Tag: N.Basavaradhya, N. Basavaradhya
ಪ್ರತಿಕ್ರಿಯೆ