ಶ್ರೀ ಹರಿಕೃಷ್ಣ ಪುನರೂರು

a21

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೨೧

ಹರಿಕೃಷ್ಣ ಪುನರೂರು (೨0000)

ಜೀವನ 

ವ್ಯವಹಾರ ಚತುರರೂ, ಸಾಹಿತ್ಯ ಪ್ರೇಮಿಗಳೂ, ಕಲಾಪೋಷಕರೂ ಆದ ಹರಿಕೃಷ್ಣ ಪುನರೂರು ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಾಜ ಸೇವೆಯಲ್ಲಿ ನಿರತರು. ಅವರು ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಿಗಾಗಿ  ಧರ್ಮದರ್ಶಿ ಎಂಬ ಬಿರುದನ್ನು ಪಡೆದಿದ್ದಾರೆ. ಜನ ಅವರನ್ನು ಗುರುತಿಸುವುದೇ ಧರ್ಮದರ್ಶಿ ಹರಿಕೃಷ್ಣ ಪುನರೂರು ಎಂದರೆ ತಪ್ಪಿಲ್ಲ. ವಾಸುದೇವರಾವ್-ಲಕ್ಷ್ಮಿಅಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದ ಇವರು ಹೋಟೆಲ್ ಉದ್ಯಮಿಯಾಗಿ ವೃತ್ತಿರಂಗಕ್ಕೆ ಕಾಲಿಟ್ಟು ಉದ್ಯಮದಲ್ಲಿ ಮುನ್ನಡೆ ಸಾಧಿಸಿ ಇಂಡಿಯನ್ ಆಯಿಲ್ ವಿತರಕರಾಗಿ ಅಭಿವೃದ್ಧಿ ಹೊಂದಿದರು. ಅದರಿಂದ ಬಂದ ಶ್ರೀಮಂತಿಕೆಯನ್ನು ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆಯೊ ಎಂಬಂತೆ ಸಮಾಜೋದ್ಧಾರಕ್ಕಾಗಿ  ಶಿಕ್ಷಣ ಕಲಾಭಿವೃದ್ಧಿಗೆ ಸದಾ ಶ್ರಮಿಸಿ ಅರ್ಥ ವಿನಿಯೋಗ ಮಾಡಿದ್ದಾರೆ. ಬಡಕೂಲಿಕಾರ ಮಕ್ಕಳಿಗೆ ಶಾಲೆ ನಿರ್ಮಿಸಿಕೊಟ್ಟಿದ್ದಾರೆ. ಮೂಲ್ಕಿ ಶಿಕ್ಷಣ ಸಂಸ್ಥೆ, ಶಾರದಾ ಶಿಕ್ಷಣ ಸಂಸ್ಥೆ, ನೇತ್ರ ಚಿಕಿತ್ಸಾ ಕೇಂದ್ರ, ನೃತ್ಯಕಲಾ ಸಂಸ್ಥೆ ಮೊದಲಾದ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಿದ್ದಾರೆ. ವಸತಿಹೀನರಿಗೆ, ಅಂಗಹೀನರಿಗೆ, ವೃದ್ಧರಿಗೆ ವಸತಿ ನಿರ್ಮಾಣ ಇವರ ಇನ್ನೊಂದು ದೊಡ್ಸ ಸಾಧನೆ.

ಸ್ವತಃ ಅನೇಕ ಸಂಸ್ಥೆಗಳಲ್ಲಿ ನಿರ್ದೇಶಕರು, ಉಪಾಧ್ಯಕ್ಷರು, ಕಾರ್ಯದರ್ಶಿ ಸದಸ್ಯರು ಆಗಿ ಸಕ್ರಿಯವಾಗಿ ಆ ಸಂಸ್ಥೆಗಳ ಪುರೋಭಿವೃದ್ಧಿಗೆ ನೆರವಾಗಿದ್ದಾರೆ. ಬ್ಯಾಂಕ್ ಮತ್ತು ಉದ್ಯಮ ಸಂಸ್ಥೆ, ಪರಿರಕ್ಷಣ ಸಂಘ, ಅರಣ್ಯ ಪೋಷಣೆ ಸಂಸ್ಥೆ, ಭಾರತ ಸೇವಾದಳ, ಮಹಾತ್ಮಾಗಾಂಧಿ ಶಾಂತಿ ಪ್ರತಿಷ್ಠಾನ, ಯಕ್ಷಭಾರತ ಮತ್ತು ಸಹಕಾರ ಸಂಸ್ಥೆಗಳು, ಲಯನ್ಸ್ ಸಂಸ್ಥೆ ಮೊದಲಾದವುಗಳಲ್ಲಿ ಸಕ್ರಿಯ ಪಾತ್ರವಹಿಸಿದ್ದಾರೆ.

ಸಾಹಿತ್ಯ ಚಟುವಟಿಕೆಗಳಲ್ಲಿ ಸದಾಸಕ್ತರಾದ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ೨00೧ ರಿಂದ ೨00೪ರವರೆಗೆ ಶ್ರಮಿಸಿದ್ದಾರೆ.

ಸಾಹಿತ್ಯ, ಧರ್ಮ, ಕಲೆ ಮೂರರಲ್ಲೂ ಸಮಾನಾಸಕ್ತರಾಗಿ ಶ್ರದ್ಧೆಯಿಂದ ದುಡಿದ ಕೀರ್ತಿ  ಇವರದ್ದಾಗಿದೆ.

ಸಾಧನೆ

ಪ್ರಕಟನೆಗಳು : ಪರಿಷತ್ತಿನ ನಿಘಂಟುಗಳ ಮರುಮುದ್ರಣದ ಜತೆಗೆ ಕನ್ನಡ – ಕನ್ನಡ ಪರಿಷ್ಕೃತ ನಿಘಂಟನ್ನು (ಇಂಗ್ಲಿಷ್ ಲಿಪ್ಯಂತರ ಕನ್ನಡ ಪದಗಳು ಮತ್ತು ಇಂಗ್ಲಿಷ್ ಅರ್ಥಸಹಿತ) ಪ್ರಕಟಿಸಲಾಯಿತು. ಕುವೆಂಪು ಜನ್ಮಶತಮಾನೋತ್ಸವ ಮಾಲಿಕೆಯಲ್ಲಿ  ೧0೧ ಪುಸ್ತಕಗಳನ್ನು ಪ್ರಕಟಿಸಲಾಯಿತು.

ಇವರ ಅವಧಿಯಲ್ಲಿ ಷಾಣ್ಮಾಸಿಕವಾದ ಪರಿಷತ್ ಪತ್ರಿಕೆಯನ್ನು ತ್ರೈಮಾಸಿಕ ಮಾಡಲಾಯಿತು ಮತ್ತು ೩೩೭ ಪುಸ್ತಕಗಳನ್ನು ಮರುಮುದ್ರಣ ಮಾಡಲಾಯಿತು.

ಪಂಪಸಭಾಂಗಣ ನಿರ್ಮಾಣ : ವಜ್ರಮಹೋತ್ಸವ ಕಟ್ಟಡದ ಕಚೇರಿಗಳನ್ನು ಮೊದಲ ಮಹಡಿಗೆ ವರ್ಗಾಯಿಸಿ ಎರಡನೇ ಮಹಡಿಯ ವಿಶಾಲ ಜಾಗವನ್ನು ಸರಳ ಸಭಾಗೃಹವನ್ನಾಗಿ ಮಾರ್ಪಡಿಸಿ ಪಂಪ ಸಭಾಂಗಣವೆಂದು ಕರೆದು ಕನ್ನಡ ಕಾರ್ಯಕ್ರಮಗಳಿಗೆ ಕಡಿಮೆ ಬಾಡಿಗೆ ದರದಲ್ಲಿ ಕೊಡಲು ವ್ಯವಸ್ಥೆ ಆಯಿತು. ಅನಂತರ ಬಂದ ಅಧ್ಯಕ್ಷರು ಪಂಪ ಸಭಾಂಗಣವೆಂಬ ಅದರ ಹೆಸರನ್ನು ಕುವೆಂಪು ಸಭಾಂಗಣವೆಂದು ಬದಲಾಯಿಸಿದರು.

ಗೌರವಸದಸ್ಯತ್ವ ನೀಡಿಕೆ : ಪರಿಷತ್ತಿನ ಅತ್ಯುನ್ನತ ಗೌರವ ಮನ್ನಣೆಯಾದ ಗೌರವ ಸದಸ್ಯತ್ವವನ್ನು ಡಾ. ಪಾಟೀಲ ಪುಟ್ಟಪ್ಪ, ಡಾ. ಎಸ್. ಕರೀಂಖಾನರಿಗೆ ಪ್ರದಾನ ಮಾಡಲಾಯಿತು.

ಪುಸ್ತಕಭಂಡಾರ : ರಾಜ್ಯದ ಕೇಂದ್ರ ಗ್ರಂಥಾಲಯ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿ ಸದಸ್ಯರಾಗಿ ಭಾಗವಹಿಸುತ್ತಿದ್ದ ಪುನರೂರು ಅವರು ಅಲ್ಲಿ ಆಯ್ಕೆಗೆ ಬಂದ ಪುಸ್ತಕಗಳ ಒಂದೊಂದು ಪ್ರತಿ ಪರಿಷತ್ತಿನ ಪುಸ್ತಕ ಭಂಡಾರಕ್ಕೆ ಸೇರಿಸುವ ವ್ಯವಸ್ಥೆ ಮಾಡಿದರು. ಮತ್ತು ಲೋಕಸಭಾ ಸದಸ್ಯರಾದ ಅನಂತಕುಮಾರ್ ಅವರಿಂದ ೧೫ ದೊಡ್ಡ ಕಪಾಟುಗಳನ್ನು ಕೊಡುಗೆಯಾಗಿ ಪುಸ್ತಕ ಭಂಡಾರಕ್ಕೆ ಕೊಡಿಸಿದರು.

ಸರಳ ವೆಚ್ಚದ ಅಧ್ಯಕ್ಷರು : ಹರಿಕೃಷ್ಣ ಪುನರೂರು ಅವರು ಪರಿಷತ್ತಿಗೆ ಅಧ್ಯಕ್ಷರಾದವರು ತ್ಯಾಗದ ಮನೋಭಾವದಿಂದ ಪರಿಷತ್ತಿನ ಮೇಲಿನ ಅಭಿಮಾನ ನಿಷ್ಠೆಗಳಿಂದ ಆದರ್ಶ ಆಚರಣೆಗಳನ್ನು ಅನುಸರಿಸಲು ಶಕ್ಯ ಎಂಬುದಕ್ಕೆ ನಿದರ್ಶನವಾಗಿದ್ದಾರೆ. ಯಾವುದೇ ರೀತಿಯಲ್ಲೂ ಪರಿಷತ್ತಿನಿಂದ ನ್ಯಾಯಬದ್ಧವಾಗಿ, ನಿಯಮಬದ್ಧವಾಗಿ ಪಡೆಯಬಹುದಾದ ವೆಚ್ಚವನ್ನೂ ತೆಗೆದುಕೊಳ್ಳದೆ ಪರಿಷತ್ತಿಗೆ ಸೇವೆ ಸಲ್ಲಿಸಿದವರಲ್ಲಿ ಹರಿಕೃಷ್ಣ ಪುನರೂರು ಅವರು ಒಬ್ಬರು.

“ಅಧ್ಯಕ್ಷರ ಮನೆಯ ಫೋನ್ ವೆಚ್ಚ, ಮನೆಗೆ ತರಿಸುವ ದಿನಪತ್ರಿಕೆಗಳ ವೆಚ್ಚ ಹೊರ ಊರುಗಳಿಗೆ ಹೋಗಿಬರಲು ಆಗುವ ಪ್ರಯಾಣ ವೆಚ್ಚ ಅಧ್ಯಕ್ಷರನ್ನು ಕಾಣಲು ಬರುವ ಅತಿಥಿಗಳಿಗೆ ಕಾಫಿ ತಿಂಡಿಗಳನ್ನು ಪರಿಷತ್ತಿನ ಹಣದಿಂದ ಭರಿಸಲು ನಿಯಮದಲ್ಲಿ ಅವಕಾಶವಿದೆ. ಆದರೆ ಪುನರೂರು ಅವರು ಇದಾವುದನ್ನೂ ಪಡೆಯದೆ ಈ ವೆಚ್ಚಗಳಿಗಾಗಿ ಸ್ವಂತ ಹಣವನ್ನು ವಿನಿಯೋಗಿಸಿದರು. ಬೇರೆಬೇರೆ ಸ್ಥಳಗಳಿಗೆ ಪರಿಷತ್ತಿನ ಕಾರ್ಯಗಳಿಗಾಗಿ ಹೋಗಿಬಂದಾಗಲೂ ತಮ್ಮ ಸ್ವಂತ ವಾಹನವನ್ನೇ ಬಳಸುತ್ತಿದ್ದರು”

ಪ್ರಗತಿಪರ ಹೆಜ್ಜೆಗಳು : ಪುನರೂರು ಅವರು ತಮ್ಮ ಅಧಿಕಾರವಧಿಯಲ್ಲಿ ೬000ಕ್ಕೂ ಹೆಚ್ಚು ಸದಸ್ಯರನ್ನು ಪರಿಷತ್ತಿಗೆ ಸೇರಿಸಿದರು. ತಾಲ್ಲೂಕು ಜಿಲ್ಲಾ ಸಮ್ಮೇಳನಗಳಿಗೆ ಹಣ ಬಿಡುಗಡೆ ಮಾಡಲು ಯೋಜನೆಯನ್ನು ಸರ್ಕಾರದ ಮುಂದೆ ಮಂಡಿಸಿದರು. ಪರಿಷತ್ತಿನ ಪ್ರಕಟನೆಗಳನ್ನು ರಿಯಾಯಿತಿ ದರದಲ್ಲಿ ಮಾರುವ ಮೂಲಕ ಹಳೆಯ ಪುಸ್ತಕ ದಾಸ್ತಾನು ಖರ್ಚಾಗುವಂತೆ ಮಾಡಿದರು. ಜಿಲ್ಲಾ ಅಧ್ಯಕ್ಷರು ಪರಿಷತ್ತಿಗೆ ಬಂದು ಹೋಗಲು ಉಚಿತ ಬಸ್‍ಪಾಸ್ ವ್ಯವಸ್ಥೆಯನ್ನು ಸಾರಿಗೆ ಸಂಸ್ಥೆಯಿಂದ ಮಾಡಿಸಿದರು.

ಎಸ್. ಎಸ್. ಎಲ್. ಸಿ.ಯಲ್ಲಿ ಅತ್ಯುನ್ನತ ಅಂಕಗಳಿಸಿದವರಿಗೆ ಕನ್ನಡದಲ್ಲಿ ಡಾಕ್ಟರೇಟ್ ಪಡೆದವರಿಗೆ ಸನ್ಮಾನ ಮಾಡುವ ವ್ಯವಸ್ಥೆ ಮಾಡಿದರು.

ಜಿಲ್ಲಾ ಸಮ್ಮೇಳನಗಳ ಜತೆಗೆ ತಾಲ್ಲೂಕು, ಹೋಬಳಿ, ಗ್ರಾಮ, ಮಟ್ಟದ ಸಮ್ಮೇಳನಗಳನ್ನು ನಡೆಸಿದರು. ದತ್ತಿನಿಧಿಗಳನ್ನು ಹೆಚ್ಚಿಸಿದ ಅವರು ಪುಸ್ತಕ ಭಂಡಾರದಲ್ಲಿ ಗಣಕೀಕರಣ ವ್ಯವಸ್ಥೆ ಮಾಡಿದರು. ಅಚ್ಚುಕೂಟವನ್ನು ಅಭಿವೃದ್ಧಿಗೊಳಿಸಿದರು.

ಸಮ್ಮೇಳನಗಳು : ಪುನರೂರು ಅವರ ಅವಧಿಯಲ್ಲಿ ೩ ಅಖಿಲ  ಭಾರತ  ಸಾಹಿತ್ಯ  ಸಮ್ಮೇಳನಗಳು ನಡೆದವು.

Tag: Harikrishna Punaruru

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)