ಸಾಹಿತ್ಯ ಸಮ್ಮೇಳನ-೧ : ಬೆಂಗಳೂರು
ಮೇ ೧೯೧೫

ಅಧ್ಯಕ್ಷರು: ಹೆಚ್.ವಿ. ನಂಜುಂಡಯ್ಯ

hv-nanjundaiah

, , ೩ನೇ ಸಮ್ಮೇಳನಾಧ್ಯಕ್ಷರು

ಹೆಚ್.ವಿ. ನಂಜುಂಡಯ್ಯ

ಆಂಧ್ರದಿಂದ ಕರ್ನಾಟಕಕ್ಕೆ ವಲಸೆಬಂದ ಸಾಮಾನ್ಯ ಬಡ ಕುಟುಂಬದಲ್ಲಿ ಸುಬ್ಬಯ್ಯ ಮತ್ತು ಅನ್ನಪೂರ್ಣಮ್ಮ ದಂಪತಿಗಳಿಗೆ ೨ನೇ ಮಗನಾಗಿ ಹೆಚ್.ವಿ. ನಂಜುಂಡಯ್ಯನವರು (ಹೆಬ್ಬಳಲು ವೇಲ್ಪನೂರು ನಂಜುಂಡಯ್ಯ) ೧೩-೧0-೧೮೬0ರಲ್ಲಿ ಜನ್ಮ ತಾಳಿದರು. ಮೈಸೂರು ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದು ೧೮೮೬ರಲ್ಲಿ ಬಿಎಲ್ ಪರೀಕ್ಷೆಯಲ್ಲಿ ೧೮೮೫ರಲ್ಲಿ ಎಂಎ ಪದವಿಯನ್ನು ಪಡೆದರು. ೧೮೯೫ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯ ಫೆಲೋಷಿಪ್ ನೀಡಿ ಗೌರವಿಸಿತು.

೧೮೮೫ರಲ್ಲಿ ಮೈಸೂರು ಸರ್ಕಾರದಲ್ಲಿ ಉದ್ಯೋಗಕ್ಕೆ ಸೇರಿ ಮುನ್ಸೀಫರಾದರು. ೧೮೮೬ರಲ್ಲಿ ರೆವಿನ್ಯೂ ಇಲಾಖೆಯಲ್ಲಿ ಅಸಿಸ್ಟೆಂಟ್ ಕಮೀಷನರ್ ಅನಂತರ ಅಂಡರ್ ಸೆಕ್ರೆಟರಿ, ಸಬ್ ಜಡ್ಜ್ ಆಗಿ ಸೇವೆ ಸಲ್ಲಿಸಿದ ನಂತರ ಚೀಫ್ ಜಡ್ಜ್ ಆಗಿ ಸೇವೆ ಸಲ್ಲಿಸಿ ೧೯೧೬ರಲ್ಲಿ ನಿವೃತ್ತರಾದರು.

ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಥಮ ಉಪಕುಲಪತಿಗಳಾಗಿ ನೇಮಕಗೊಂಡು ೪ ವರ್ಷಗಳ ಕಾಲ ಅದರ ಪ್ರಗತಿಗೆ ದುಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಶ್ರಮಿಸಿದವರಲ್ಲಿ ಇವರೂ ಒಬ್ಬರು ಮತ್ತು ೧೯೧೫ರಿಂದ ೩ ಸಮ್ಮೇಳನಗಳಿಗೆ ಅಧ್ಯಕ್ಷರಾದ ಇವರು ಸಮ್ಮೇಳನಗಳ ಇತಿಹಾಸದಲ್ಲೇ ವಿಕ್ರಮ ಸಾಧಿಸಿದ್ದಾರೆ. ಬೇರಾವ ಅಧ್ಯಕ್ಷರೂ ಒಂದಕ್ಕಿಂತ ಹೆಚ್ಚು ಬಾರಿ ಸಮ್ಮೇಳನಾಧ್ಯಕ್ಷರಾಗಿಲ್ಲ.

ಬ್ರಿಟಿಷ್ ಸರ್ಕಾರ ೧೯೧೪ರಲ್ಲಿ ಸಿ.ಐ.ಇ. (ಕಂಪಾನಿಯನ್ ಆಫ್ ದಿ ಇಂಡಿಯನ್ ಎಂಪೈರ್) ಬಿರುದು ನೀಡಿತು. ಮೈಸೂರು ಮಹಾರಾಜರು ರಾಜಮಂತ್ರಪ್ರವೀಣ ಬಿರುದನ್ನು ನೀಡಿದರು.

ಕನ್ನಡ ನವೋದಯ ಕಾಲದ ಪ್ರಾರಂಭಘಟ್ಟದಲ್ಲಿ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದವರಲ್ಲಿ ಹೆಚ್.ವಿ. ನಂಜುಂಡಯ್ಯನವರೂ ಒಬ್ಬರು. ಇವರು ರಚಿಸಿದ ಪ್ರಮುಖ ಕೃತಿಗಳು ಹೀಗಿವೆ.

 ೧. ವ್ಯವಹಾರದೀಪಿಕೆ (ನ್ಯಾಯಶಾಸ್ತ್ರ) – ೧೮೯0  ೨. ಅರ್ಥಶಾಸ್ತ್ರ – ೧೯0೧  ೩. ಲೇಖ್ಯಬೋಧಿನಿ   ೪. ರಿಲಿಜನ್ ಅಂಡ್ ಮಾರೆಲ್ ಎಜುಕೇಷನ್ (ಇಂಗ್ಲಿಷ್)  ೫. ಆಂಗ್ಲೋ ಇಂಡಿಯನ್ ಎಂಪೈರ್ (ಇಂಗ್ಲಿಷ್)  ೬. ಮೈಸೂರು ಟ್ರೈಬ್ಸ್ ಅಂಡ್ ಕ್ಯಾಸ್ಟ್ಸ್ (ಸಂಪಾದನೆ)  ೭. ವ್ಯವಹಾರ ಧರ್ಮಶಾಸ್ತ್ರ  ೮. ವಿಕ್ಟರ್ ಹ್ಯೂಗೋವಿನ ಫ್ರೆಂಚ್ ಕವಿತೆಗಳ ಅನುವಾದ

ಶ್ರೀಯುತರು ದಿನಾಂಕ ೨-೫-೧೯೨0ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ

ಅಧ್ಯಕ್ಷರು:  ಹೆಚ್.ವಿ. ನಂಜುಂಡಯ್ಯ

ದಿನಾಂಕ ೩, , , ಮೇ ೧೯೧೫,

ಸ್ಥಳ : ಸರ್ಕಾರಿ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು, ಬೆಂಗಳೂರು

ದೇಶಭಾಷೆಗೆ ಮಹಾರಾಜರ ಪ್ರೋತ್ಸಾಹ

ಈ ಸಂಸ್ಥಾನದಲ್ಲಿ ಕನ್ನಡಭಾಷೆಯ ಪ್ರಚಾರಕ್ಕಾಗಿ ಸರ್ಕಾರದವರೂ ಪ್ರಜೆಗಳೂ ವಿಶೇಷವಾದ ಆದರದಿಂದ ಪ್ರೋತ್ಸಾಹವನ್ನು ಕೊಡುತ್ತಿರಬೇಕಾದುದು ಸಹಜವಾಗಿಯೇ ಇದೆ. ಇಲ್ಲಿಯ ಪಾಠಶಾಲೆಗಳಲ್ಲಿ ಸ್ವಲ್ಪ ದೂರದವರೆಗೆ ಕನ್ನಡವನ್ನು ಕಲಿಸುತ್ತಿರುವರು; ಪಾಠಶಾಲೆಗಳಲ್ಲಿ ಉಪಯೋಗಿಸುವ ಪುಸ್ತಕಗಳ ಮೂಲಕವೂ ಕರ್ಣಾಟಕ ಭಾಷಾಭಿವೃದ್ಧಿಯು ತಕ್ಕಮಟ್ಟಿಗೆ ಆಗುತ್ತಿರುವುದು; ಸಂಸ್ಥಾನದ ವಿದ್ಯಾಭ್ಯಾಸದ ಇಲಾಖೆಯೂ, ಇತರ ಇಲಾಖೆಗಳೂ, ಅಕ್ಷರಜ್ಞರಾದ ಜನಗಳೂ ಕೊಡುತ್ತಿರುವ ಪ್ರೋತ್ಸಾಹದಿಂದ, ಕರ್ಣಾಟಕ ಭಾಷಾಪಾಂಡಿತ್ಯಕ್ಕೆ ಸ್ವಲ್ಪಮಟ್ಟಿಗೆ ಸಹಾಯವು ದೊರೆಯುತ್ತಿರುವುದು. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಶ್ರೀಮನ್ ಮಹಾರಾಜರವರೂ ಅವರ ಪೂರ್ವಿಕರೂ, ಸಹಜವಾದ ರಾಜಧರ್ಮಾನುಗುಣವಾಗಿ ಕಲಾಸಾಹಿತ್ಯಗಳ ವಿಷಯದಲ್ಲಿ ಸಮರ್ಥರಾದವರನ್ನು ವಿಮರ್ಶೆಯಿಂದ ಸತ್ಕರಿಸಿ, ಅವರವರ ಯೋಗ್ಯತೆಗೆ ತಕ್ಕಂತೆ ಅವರನ್ನು ಸಂಭಾವಿಸುವುದರಲ್ಲಿ ಬದ್ಧರಾಗಿದ್ದುದರಿಂದ ದೇಶಭಾಷೆಯು ಬಹಳವಾಗಿ ಅಭಿವೃದ್ಧಿ ಹೊಂದಿರುವುದು.

ಕನ್ನಡಭಾಷೆಯು ಮೈಸೂರು ಸಂಸ್ಥಾನದವರಿಗೆ ಮಾತ್ರವೇ ಸೇರಿರುವುದಾಗಿಲ್ಲ. ಕನ್ನಡವನ್ನು ಮಾತನಾಡುವವರಲ್ಲಿ ಅರ್ಧಸಾಲಿಗಿಂತಲೂ ಹೆಚ್ಚುಮಂದಿ ಸಂಸ್ಥಾನದ ಸುತ್ತಮುತ್ತಲೂ ಇರುವ ಬ್ರಿಟಿಷ್ ಇಂಡಿಯಾದಲ್ಲಿಯೂ ಹೈದರಾಬಾದ್ ಸಂಸ್ಥಾನದಲ್ಲಿಯೂ ವಾಸಿಸುತ್ತಿರುವರು. ರಾಜಕೀಯ ವಿಷಯಗಳಲ್ಲಿ ಮೂರು ನಾಲ್ಕು ಸರ್ಕಾರದವರಿಗೆ ಅಧೀನವಾಗಿದ್ದರೂ, ಬೇರೆ ಬೇರೆಯಾಗಿ ಕಾಣುವ ಕನ್ನಡ ನಾಡುಗಳಲ್ಲಿಯೂ, ಕನ್ನಡ ಮಾತನಾಡುವವರಲ್ಲಿಯೂ, ಕೆಲವು ಸಾಮಾನ್ಯ ಲಕ್ಷಣಗಳು ಕಾಣಬರುತ್ತವೆ. ಆದುದರಿಂದ ಭಾಷಾಭಿವೃದ್ಧಿ, ಗ್ರಂಥರಚನೆ ಇವುಗಳ ವಿಷಯದಲ್ಲಿ ಕನ್ನಡಿಗರೆಲ್ಲರನ್ನೂ ಒಟ್ಟುಗೂಡಿಸಲಾದರೆ, ವಿಶೇಷ ಪ್ರಯೋಜನವುಂಟು. ಈ ಉದ್ದೇಶದಿಂದಲೇ, ಕನ್ನಡ ಭಾಷಾಭಿವೃದ್ಧಿಯಲ್ಲಿ ಆಸಕ್ತರಾಗಿಯೂ, ಸಮರ್ಥರಾಗಿಯೂ, ಕಾರ್ಯಭಾರವನ್ನು ವಹಿಸಲು ತಕ್ಕವರಾಗಿಯೂ ಇರುವ ಜನಗಳು ಸೇರಿ, ಅನ್ಯೋನ್ಯ ಸಹಾಯದಿಂದ ಒಟ್ಟುಗೂಡಿ ಕೆಲಸಮಾಡತಕ್ಕ ಒಂದು ಸಭೆಯನ್ನು ಸರ್ಕಾರದ ಸಂಬಂಧವಿಲ್ಲದೆ ನಿರ್ಮಿಸಬೇಕೆಂದು ಈ ಸಮ್ಮೇಳನವನ್ನು ಏರ್ಪಾಡು ಮಾಡಲಾಗಿದೆ.

ಮೈಸೂರು ಕನ್ನಡಕ್ಕೆ ಪ್ರಾಶಸ್ತ್ಯ ಕೊಡಿ

ಅನೇಕ ಮಹನೀಯರು ಹೊರಗಿನಿಂದ ದಯಮಾಡಿ ಸೇರಿರುವ ಈ ಸಭೆಯಲ್ಲಿ ಮೈಸೂರು ದೇಶದಲ್ಲಿ ವಾಡಿಕೆಯಾಗಿರುವ ಕನ್ನಡವೇ ಈ ಸ್ಥಾನಕ್ಕೆ ಯೋಗ್ಯವಾದುದೆಂದು ಹೇಳಲು ಸ್ವಲ್ಪ ಸಂಕೋಚಪಡಬೇಕಾಗಿದೆ.  ಆದರೂ ನಾನು ಹೀಗೆ ನಂಬಿರುವೆನೆಂದು ಹೇಳುವ ಮಾತು ಕೇವಲ ಸ್ವದೇಶ ಪಕ್ಷವಾದ ದುರಭಿಮಾನದಿಂದ ನಾನು ಹೇಳಿದಂತೆ ಭಾವಿಸಕೂಡದು.

ಬುದ್ಧಿ ಕೌಶಲ್ಯದ ವಿಷಯದಲ್ಲಿ ಬ್ರಿಟಿಷ್ ಇಂಡಿಯಾದಲ್ಲಿರುವ ಜನರಿಗೆ ನಮಗಿಂತಲೂ ಹೆಚ್ಚು ಆನುಕೂಲ್ಯಗಳಿವೆ. ಇಲ್ಲಿಯವರಿಗಿಂತಲೂ ಆ ಜನರಿಗೆ ಉದಾರಾಶ್ರಯರಾದ ಪಂಡಿತರ ಸಹವಾಸವು ದೊರೆಯುವುದು ಹೆಚ್ಚು.  ಒಟ್ಟು ಚಕ್ರಾಧಿಪತ್ಯಕ್ಕೆ ಸಂಬಂಧಪಟ್ಟ ರಾಜಕೀಯ ವಿಷಯ ವಿಚಾರದಲ್ಲಿಯೂ ಜಿಜ್ಞಾಸೆಯಲ್ಲಿಯೂ ಇಲ್ಲಿಯವರಿಗಿಂತ ಅವರಿಗೆ ಪ್ರವೇಶ ಹೆಚ್ಚು. ಇಲ್ಲಿಯವರಾದ ನಮಗಾದರೋ, ದೇಶದಲ್ಲಿ ನೆಲೆಗೊಂಡಿರುವ ಶಾಂತಿ ತೃಪ್ತಿಗಳಿಂದ ಸುಲಭ ಜೀವನವು ಅಭ್ಯಾಸವಾಗಿ, ಎಲ್ಲಾ ಕೆಲಸಗಳನ್ನೂ ಪಿತೃವಾತ್ಸಲ್ಯದಿಂದ ಕಾಪಾಡುವ ನಮ್ಮ ಸರಕಾರದವರಿಗೆ ಒಪ್ಪಿಸಿಬಿಡುವುದರಲ್ಲಿಯೇ ಬದ್ಧರಾಗಿದ್ದೇವೆ. ಆದುದರಿಂದ ಒಂದು ಭಾಗಕ್ಕೆ ಹೊರಗಿನವರಿಗಿರುವ ಆನುಕೂಲ್ಯಗಳಲ್ಲಿ ಕೆಲವನ್ನು ನಾವೂ ಸಂಪಾದಿಸಿಕೊಳ್ಳುವ ಉದ್ದೇಶದಿಂದ ಭಾಷಾವಿಷಯದಲ್ಲಿ ಅವರೊಡನೆ ಸಮೀಪ ಸಂಬಂಧವನ್ನು ಬೆಳೆಯಿಸುವುದಕ್ಕೆ ಅಪೇಕ್ಷಿಸಬೇಕಾಗಿದೆ. ಆದರೆ ಈ ವಿಷಯದಲ್ಲಿ, ಅವರು ಉಪಯೋಗಿಸುತ್ತಿರುವ ಭಾಷೆಯಲ್ಲಿ ಕಾಣಬರುವ ವೈಲಕ್ಷಣ್ಯಗಳು ನಮಗೆ ಪ್ರತಿಬಂಧಕವಾಗಿವೆ.

ದಕ್ಷಿಣ ಕನ್ನಡ, ಅಥವಾ ಧಾರವಾಡ ಬೆಳಗಾಂ ಪ್ರಾಂತಗಳಲ್ಲಿ ಈಗಲೂ ಕೆಲವು ಶಬ್ದಗಳೂ ಪ್ರಯೋಗಗಳೂ ಪೂರ್ವದಲ್ಲಿದ್ದಂತೆ ಶಬ್ದರೂಪದಲ್ಲಿ ಉಳಿದುಕೊಂಡಿರಬಹುದು; ಅವುಗಳನ್ನು ಇಲ್ಲಿ ನಾವು ನಿಷ್ಕಾರಣವಾಗಿ ಬಿಟ್ಟುಬಿಟ್ಟಿರಬಹುದು; ಇಲ್ಲವೆ ಆ ರೂಪಗಳನ್ನು ಕೆಡಿಸಿರಬಹುದು. ಅಂತಹ ಸಂದರ್ಭಗಳು ಸರಿಯಾಗಿ ಸಿದ್ದಾಂತಪಟ್ಟರೆ, ನಾವು ಅವರನ್ನೇ ಅನುಸರಿಸಲಿಚ್ಛಿಸುವೆವು. ವ್ಯಾಕರಣ ನಿಯಮಗಳಿಗೂ ಔಚಿತ್ಯ ನ್ಯಾಯಕ್ಕೂ ವಿರುದ್ಧವಾದ ಪ್ರಯೋಗಗಳು ಎಲ್ಲಿದ್ದರೂ ಅವುಗಳನ್ನು ತಿದ್ದಲೇಬೇಕು. ಆದರೆ ಯಾವುದಾದರೂ ಭಾಷಾರೂಢಿಯ ಅಥವಾ ಭಾಷಾವೈಪರೀತ್ಯದ ಪ್ರಯೋಗವು ಸಾಧುವೇ ಅಲ್ಲವೇ ಎಂದು ಚರ್ಚೆ ಹುಟ್ಟಿದಾಗ ಮೈಸೂರು ಕನ್ನಡಕ್ಕೆ ಪ್ರಾಶಸ್ತ್ಯವನ್ನು ತೋರಿಸುವುದು ಉಚಿತವಾಗಿರುತ್ತದೆ.

ಮೈಸೂರು ದೇಶದಲ್ಲಾದರೋ ಕನ್ನಡವೇ ಎಲ್ಲೆಲ್ಲಿಯೂ ಹರಡಿಕೊಂಡಿದೆ. ಇಂಗ್ಲಿಷ್ ಒಂದನ್ನು ಬಿಟ್ಟರೆ, ಕನ್ನಡವನ್ನು ಮರೆಯಿಸಿ ತಲೆಯೆತ್ತಬಲ್ಲ ಭಾಷೆ ಮತ್ತೊಂದು ಕಾಣುವುದಿಲ್ಲ. ಶ್ರೀಮಾನ್ ಮಹಾರಾಜರವರ ಆಸ್ಥಾನದಲ್ಲಿಯೂ, ಸರಕಾರದ ಅನೇಕ ಕಚೇರಿಗಳಲ್ಲಿಯೂ ನಡೆಯುವ ವ್ಯವಹಾರಗಲ್ಲೆಲ್ಲಾ ಕನ್ನಡವನ್ನೇ ಪೂರ್ವಕಾಲದಿಂದಲೂ ಉಪಯೋಗಿಸುತ್ತಿರುವರು. ಬಹುಕಾಲದಿಂದ ಮೈಸೂರಿನಲ್ಲಿ ಮುಖ್ಯವಾಗಿ ಜೈನಪಂಡಿತರೂ ಲಿಂಗಾಯತ ವಿದ್ವಾಂಸರೂ ಪಾರಂಪರ್ಯವಾಗಿ ಕನ್ನಡವನ್ನೇ ವ್ಯಾಸಂಗ ಮಾಡುತ್ತ ಬಂದಿರುವರು. ಈಚೆಗೆ ಶ್ರೀಮಾನ್ ಮಹಾರಾಜರವರು ಮತ್ತು ಮಹಾಸ್ವಾಮಿಯವರ ಕೃಪಾಪೋಷಣೆಯಿಂದ ಕನ್ನಡಕ್ಕೆ ಮತ್ತಷ್ಟು ಪ್ರಾಶಸ್ತ್ಯವುಂಟಾಗಿದೆ. ನಮ್ಮ ಶ್ರೀಮಾನ್ ಮಹಾರಾಜರವರ ಪಿತಾಮಹರು ಇತರ ಭಾಷೆಗಳ ಜೊತೆಯಲ್ಲಿ ಕನ್ನಡ ಭಾಷೆಗೂ ಉದಾರಾಶ್ರಯವನ್ನು ಕೊಟ್ಟಿರುವರಲ್ಲದೆ, ಸ್ವಯಂ ಅನೇಕ ಉದ್ಗ್ರಂಥಗಳನ್ನು ರಚಿಸಿರುವರು.

ತಮ್ಮಂತಹ ಮಹನೀಯರು ಸೇರಿ ಉದಾರವಾದ ಆಶ್ರಯವುಳ್ಳುದಾಗಿಯೂ ಶಾಶ್ವತವಾಗಿಯೂ ನಡೆದು ಬರತಕ್ಕ ಒಂದು ಸಂಘವನ್ನು ಸ್ಥಾಪಿಸಿದುದೇ ಆದರೆ ಸ್ವಭಾಷೆಯನ್ನು ಸಂಸ್ಕರಿಸಿ ಗ್ರಂಥಾಭಿವೃದ್ಧಿಯನ್ನು ಮಾಡುವ ಘನವಾದ ಕಾರ್ಯವನ್ನು ನಡೆಯಿಸಲು ಬಹು ವಿಧದಲ್ಲಿ ಅನುಕೂಲವಾಗುವುದು.

ಮುಖ್ಯವಾಗಿ ಇಂತಹ ಸಂಘದಿಂದ ಗ್ರಂಥಗಳ ಗುಣದೋಷ ವಿಮರ್ಶೆ ಮಾಡುವ ಸಾಮರ್ಥ್ಯಕ್ಕೆ ಪ್ರಬಲವಾದ ಸಾಧನವಿದ್ದಂತಾಗುವುದು. ಈ ಕೆಲಸಕ್ಕಾಗಿ ಧಾರಾಳವಾದ ಮನಸ್ಸನ್ನೂ, ಅಲ್ಪಧಿಷಣಗಳನ್ನು ಲೆಕ್ಕಿಸದೆ ಗುಣಗ್ರಹಣ ಮಾಡುವ ತಾಳ್ಮೆಯನ್ನೂ ಪಡೆದ ಪಂಡಿತರ ಉಪಸಭೆಯೊಂದನ್ನು ನಿರ್ಮಿಸಿದುದೇ ಆದರೆ ಈ ಮಹಾಕಾರ್ಯವು ಬಹು ಸಮರ್ಪಕವಾಗಿ ನಡೆಯುವುದು; ಹಾಗಲ್ಲದೆ ತಮ್ಮ ತಮ್ಮ ಗ್ರಂಥಗಳಿಗೇ ಪ್ರಶಸ್ತಿಯನ್ನುಂಟುಮಾಡಿಕೊಳ್ಳುತ್ತಲೂ, ತಮ್ಮ ತಮ್ಮೊಳಗೆ ಒಬ್ಬರಿಗೊಬ್ಬರು ದಾಕ್ಷಿಣ್ಯದಿಂದ ಸಹಾಯಮಾಡುತ್ತಲೂ ಇರುವವವವರ ಕೈಗೆ ಈ ಕೆಲಸವು ಸಿಕ್ಕಿಹೋಯಿತೆಂದರೆ, ಉಪಕಾರವಾಗುವುದಕ್ಕೆ ಪ್ರತಿಯಾಗಿ ಅಪಾರವಾದ ಅನರ್ಥವುಂಟಾಗುವುದು. ಇದಲ್ಲದೆ ಇಂತಹ ಸಂಘವು ಗ್ರಂಥಕಾರರಿಗೆ ಆಶ್ರಯವನ್ನು ಕೊಟ್ಟು ಪ್ರೋತ್ಸಾಹಿಸಬಹುದು. ಆದರೆ ಈ ಭಾಗದಲ್ಲಿ ಸಂಘದಿಂದ ಆಗತಕ್ಕ ಸಹಾಯವು, ಅದಕ್ಕೆ ಸರ್ಕಾರದಿಂದಲೂ, ಪರೋಪಕಾರ ಬುದ್ಧಿಯುಳ್ಳ ಜನರಿಂದಲೂ ದೊರೆಯುವ ದ್ರವ್ಯಸಹಾಯಕ್ಕೆ ತಕ್ಕಂತೆ ಇರುವುದು. ಸರ್ಕಾರದವರು ತೋರಿಸಬಹುದಾದ ಸಹಾಯವನ್ನೂ, ಐಶ್ವರ್ಯವಂತರು ತಾವು ಕೊಡುವುದು ಸಾರ್ಥಕವಾಗುವುದೆಂದು ನಂಬಿ ಕೊಡಬಹುದಾದ ಸಹಾಯ ದ್ರವ್ಯವನ್ನೂ ಪಡೆದುಕೊಳ್ಳಲು ಈ ಸಂಘವು ಸರಿಯಾದ ಪಾತ್ರವೇ ಸರಿ. ಆದರೆ ಬೇಕಾದಷ್ಟು ಪ್ರಪಂಚಕ್ಕೆ ಶುಭ ಪರಿಣಾಮವೆ ಉಂಟಾಗುವುದೆಂಬ ಭಾವನೆಯನ್ನು ಹುಟ್ಟಿಸತಕ್ಕ ಲಘುಕಾವ್ಯಗಳು ನಮ್ಮಲ್ಲಿ ಇಲ್ಲವೇ ಇಲ್ಲವೆಂದು ಹೇಳಬೇಕಾಗಿದೆ. ನಮ್ಮ ದೇಶದ ಮತ್ತು ನಮ್ಮ ಜನಸಮುದಾಯದ ಆಚಾರ ವಿಚಾರಗಳನ್ನು ಪರಿಶೀಲಿಸಿ ತಿಳಿಯುವುದಕ್ಕೆ ತಕ್ಕ ಅವಕಾಶವಿಲ್ಲದ ಕಾರಣ ಈ ಲಘುಕಾವ್ಯರಚನೆಯ ಪ್ರಯತ್ನವು ಅಷ್ಟಾಗಿ ಸಫಲವಾಗದೆ ಇರಬಹುದು. ಆದರೂ ಲೇಖಕರಿಗೂ ವಾಚಕರಿಗೂ ಈ ವಿಧವಾದ ಗ್ರಂಥ ಲೇಖನದಲ್ಲಿಯೂ ಗ್ರಂಥಾವಲೋಕನದಲ್ಲಿಯೂ, ಅಭಿರುಚಿಯನ್ನು ಹುಟ್ಟಿಸುವುದಕ್ಕೆ ಪ್ರಯತ್ನಿಸುವುದರಿಂದ ಬಹಳ ಪ್ರಯೋಜನವಿದೆ.

ಇಂಗ್ಲಿಷ್ ಬಲ್ಲವರು ಮಾಡಬೇಕು ಎಂದು ಅವುಗಳನ್ನು ಇಲ್ಲಿ ನಾವು ನಿಷ್ಕಾರಣವಾಗಿ ಬಿಟ್ಟುಬಿಟ್ಟಿರಬಹುದಾ ಕೆಲಸ

ಇಷ್ಟಾಗಿ,ಈ ಕಾಲಕ್ಕೆ ತಕ್ಕ ಕನ್ನಡ ಗ್ರಂಥಗಳು ಅಭಿವೃದ್ಧಿಯಾಗದಿರುವುದಕ್ಕೆ, ಸಂಘಗಳೂ ಪೋಷಕರೂ ಇಲ್ಲದೆ ಇರುವುದು ಮುಖ್ಯ ಕಾರಣವಲ್ಲ; ಅದಕ್ಕೆ  ಉತ್ಸಾಹಶೀಲರಾಗಿಯೂ ಅಲ್ಪ ಲಾಭದಿಂದಲೇ ತೃಪ್ತಿಪಡತಕ್ಕವರಾಗಿಯೂ ಇರುವ ಗ್ರಂಥಕಾರರು ಹೇರಳವಾಗಿ ಇಲ್ಲದಿರುವುದೇ ಕಾರಣವು. ಅಲ್ಲದೆ ನಮ್ಮವರೊಳಗೆ ಪಾಶ್ಚಾತ್ಯವಿದ್ಯೆಯಲ್ಲಿ ಪಾರಂಗತರಾದವರು ದೇಶ ಭಾಷೆಯನ್ನು ದೇಶ ಭಾಷಾಗ್ರಂಥಗಳನ್ನೂ ವ್ಯಾಸಂಗಮಾಡತಕ್ಕ ವಿಷಯದಲ್ಲಿ ಉದಾಸೀನರಾಗಿಯೂ ಇದ್ದಾರೆ. ದಿನಪತ್ರಿಕೆಗಳಲ್ಲಿರುವ ಕ್ಷಣಿಕ ವೃತ್ತಾಂತಗಳನ್ನೂ ತಾತ್ಕಾಲಿಕ ಗ್ರಂಥಗಳೆನ್ನಿಸಿಕೊಂಡು ಅತಿಸಾಮಾನ್ಯವಾದ ಕಲ್ಪಿತಕಥೆಗಳ ರೂಪದಲ್ಲಿ ಅಪರಿಮಿತವಾಗಿ ಪ್ರಕಟವಾಗುತ್ತಿರುವ ಅಲ್ಪವಿಷಯಗಳನ್ನೂ ಓದುವುದರಿಂದ ಎಷ್ಟು ಆನಂದವುಂಟಾಗುವುದೋ, ಅಷ್ಟೇ ಆನಂದವನ್ನೇ ನಮ್ಮ ಸ್ವಭಾಷೆಯಲ್ಲಿ ಬರೆದಿರುವ ಪ್ರಾಚೀನ ಗ್ರಂಥಗಳ ವ್ಯಾಸಂಗದಿಂದ, ಮತ್ತೊಂದು ರೀತಿಯಿಂದಲಾದರೂ ಅನುಭವಿಸಬಹುದೆಂಬುದನ್ನು ಈ ಜನರು ಅರಿಯಲಾರದವರಾಗಿದ್ದಾರೆ. ಆದುದರಿಂದ ಅಂತಹವರು ತಮ್ಮ ಭಾಷೆಯಲ್ಲಿಯೇ ದೊರೆಯುವ ಉತ್ಕೃಷ್ಟವಾದ ಗ್ರಂಥಗಳನ್ನು ಮನಃಪೂರ್ವಕವಾಗಿ ವ್ಯಾಸಂಗಮಾಡಿ, ಆ ಮೂಲಕ ತಾನಾಗಿ ಹುಟ್ಟುವ ದೇಶ ಭಾಷಾವಾತ್ಸಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕೆಂದು ವಿನಯಪೂರ್ವಕವಾಗಿ ವಿಜ್ಞಾಪಿಸುತ್ತೇನೆ. ಹೀಗೆ ಮಾಡಿದುದೇ ಆದರೆ, ಇಂಗ್ಲಿಷ್ ಮೊದಲಾದ ಪಾಶ್ಚಾತ್ಯ ವಿದ್ಯೆಯಿಂದಲೂ, ಶಿಕ್ಷಣಕ್ರಮದಿಂದಲೂ ಉಂಟಾಗುವ ವಿಸ್ತಾರವಾದ ಜ್ಞಾನಭಂಡಾರಗಳ ಸಹಾಯದಿಂದ ಸ್ವಭಾಷೆಯನ್ನು ಅಭಿವೃದ್ಧಿಪಡಿಸುವುದಕ್ಕೆ ಏನಾದರೂ ಯತ್ನಮಾಡಬೇಕೆಂಬ ಪ್ರೇರಣೆಯು ಅವರಿಗೇ ಹುಟ್ಟುವುದು.

ಕನ್ನಡ ಪುರೋಭಿವೃದ್ಧಿಗೆ ಮಹಾರಾಜರು ಸಿದ್ಧ

ಹಿಂದೆ ಬಹುಕಾಲದವರೆಗೆ ಉತ್ಕೃಷ್ಟದಶೆಯಲ್ಲಿದ್ದುದಾಗಿಯೂ, ಮುಂದೆಯೂ ಮಹಾಮಹಿಮರಾದ ಪಾಶ್ಚಾತ್ಯರ ನವೀನ ವಿದ್ಯಾಪಾಂಡಿತ್ಯದೊಡನೆಯೂ ನವೀನ ಶಿಕ್ಷಣಕ್ರಮದೊಡನೆಯೂ ತಕ್ಕ ಮಟ್ಟಿಗೆ ಸೇರಿ ಉತ್ತರೋತ್ತರಾಭಿವೃದ್ಧಿಗೆ ಬರಬಹುದಾಗಿಯೂ ಇರುವ ಈ ಕನ್ನಡ ಭಾಷೆಯನ್ನು ಪುರೋಭಿವೃದ್ಧಿಗೆ ತಂದು ಊರ್ಜಿತಪಡಿಸುವುದಕ್ಕೆ ನಮ್ಮ ಶ್ರೀಮನ್ಮಹಾರಾಜರವರು ತಮ್ಮ ದಿವ್ಯಚಿತ್ತದಲ್ಲಿ ನಿಜವಾದ ಅಭಿಮಾನವನ್ನೂ ಆದರಾತಿಶಯವನ್ನೂ ಧರಿಸಿದವರಾಗಿ ತಾವೂ ತಮ್ಮ ಸರ್ಕಾರದವರೂ ಸಾಧ್ಯವಾದ ಸಕಲ ಸಹಾಯಗಳನ್ನೂ ಕಲ್ಪಿಸಿಕೊಡಲು ಸಿದ್ಧರಾಗಿರುವರೆಂದು ನಾನು ದೃಢವಾಗಿ ಹೇಳುತ್ತೇನೆ.

Tag: Kannada Sahitya Sammelana 1, 1st Kannada Sahitya Sammelana

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)