ಸಾಹಿತ್ಯ ಸಮ್ಮೇಳನ-೪ : ಧಾರವಾಡ
ಮೇ ೧೯೧೮

ಅಧ್ಯಕ್ಷತೆ: ಆರ್. ನರಸಿಂಹಾಚಾರ್

r-narasimhachar

೪ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಆರ್. ನರಸಿಂಹಾಚಾರ್

ಶಾಸನಗಳ ಸಂಶೋಧನಾ ತಜ್ಞರು ಮತ್ತು ಕರ್ಣಾಟಕ ಕವಿಚರಿತೆ ರಚಕರು, ಕರ್ನಾಟಕ ಸಾಹಿತ್ಯ ಪರಿಷತ್ತಿನ ಸ್ಥಾಪಕರಲ್ಲಿ ಒಬ್ಬರಾದ ಆರ್. ನರಸಿಂಹಾಚಾರ್ಯ ಮಂಡ್ಯದ ಕೊಪ್ಪಲು ಗ್ರಾಮದಲ್ಲಿ ತಿರುನಾರಾಯಣ ಪೆರುಮಾಳ್ ಮತ್ತು ಶಿಂಗಮ್ಮಾಳ್ ದಂಪತಿಗಳಿಗೆ ೯-೪-೧೮೬0ರಲ್ಲಿ ಜನಿಸಿದರು. ಕೂಲಿಮಠದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮದರಾಸಿನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದು ಮೆಟ್ರಿಕ್ ಪರೀಕ್ಷೆಯಲ್ಲಿ ಪಾಸಾಗಿ ಬೆಂಗಳೂರು ಸೆಂಟ್ರಲ್  ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ೧೮೮೨ರಲ್ಲಿ ಬಿಎ ಪದವಿಯನ್ನು ೧೮೮೩ರಲ್ಲಿ ಮದರಾಸ್ ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿ ಗಳಿಸಿದರು.  ಆ ವಿಶ್ವವಿದ್ಯಾನಿಲಯದಿಂದ ಮೊಟ್ಟಮೊದಲನೆಯ ಕನ್ನಡ ಎಂ.ಎ. ಪದವಿ ಪಡೆದ ಹಿರಿಮೆ ಇವರದು.

ವಿದ್ಯಾಭ್ಯಾಸದ ಕಾಲದಲ್ಲಿಯೇ ಪ್ರೌಢಶಾಲೆ, ಕಾಲೇಜುಗಳಲ್ಲಿ ಅಧ್ಯಾಪಕ ವೃತ್ತಿ ಮಾಡಿದ ಇವರು ಎಂ.ಎ. ಪದವಿ ಪಡೆದ ಮೇಲೆ ೧೮೯೪ರಲ್ಲಿ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಭಾಷಾಂತರಕಾರರಾಗಿ ೫ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ೧೮೯೯ರಲ್ಲಿ ಪ್ರಾಚ್ಯವಿದ್ಯಾ ಇಲಾಖೆಯಲ್ಲಿ ಲೂಯಿರೈಸರಿಗೆ ಸಹಾಯಾಧಿಕಾರಿಯಾಗಿ ನೇಮಕಗೊಂಡು, ಪಂಪ ಭಾರತದ ಪರಿಷ್ಕರಣ ಕಾರ್ಯದಲ್ಲಿ ನೆರವಾದರು.೧೯0೬ರಿಂದ ೧೯೨೨ರವರೆಗೆ ಶಾಸನ ಇಲಾಖೆಯಲ್ಲಿಯೇ ಮುಖ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ರಾಯಲ್ ಏಷ್ಯಾಟಿಕ್ ಸೊಸೈಟಿಯ ಸದಸ್ಯರಾಗಿದ್ದ ಇವರು ಎಸ್.ಜಿ. ನರಸಿಂಹಾಚಾರ್ಯರೊಂದಿಗೆ ಕವಿಚರಿತೆಯ ಮೊದಲನೇ ಸಂಪುಟವನ್ನೂ ಉಳಿದೆರಡು ಸಂಪುಟಗಳನ್ನು ತಾವೇ ಸಂಪಾದಿಸಿದರು. ೫000 ಹೊಸ ಶಾಸನಗಳನ್ನು ಶೋಧಿಸಿದರು; ೧000 ಪ್ರಾಚ್ಯ ಕಟ್ಟಡಗಳನ್ನು ಪರಿಶೀಲಿಸಿದರು. ೧00 ನಾಣ್ಯ ಸಂಶೋಧನೆ, ನಕ್ಷೆಗಳ ತಯಾರಿ ಮಾಡಿದ ಇವರು ಶಿಲ್ಪಕಲೆಯಲ್ಲಿ ಹೊಯ್ಸಳ ಶೈಲಿಯನ್ನು ಗುರುತಿಸಿದರು. ಉಭಯವೇದಾಂತ ಪ್ರದರ್ಶನ ಸಭೆಗೆ ೩೫ ವರ್ಷಗಳ ಕಾಲ ಮಾರ್ಗದರ್ಶಕರಾಗಿದ್ದರು. ಪರಿಷತ್ತಿನ ಸ್ಥಾಪನೆಗೆ ಮಾರ್ಗದರ್ಶನ ಪ್ರೇರಣೆ ನೀಡಿದ ಆರ್. ನರಸಿಂಹಾಚಾರ್ಯರು ಆ ಕಾಲದಲ್ಲಿ ಎಲ್ಲರಿಗೂ ಪೂಜ್ಯರಾಗಿದ್ದರು.

ನಾಡು, ನುಡಿಗಳಿಗೆ, ಶಾಸನ ಸಾಹಿತ್ಯ ಸಂಶೋಧನೆಗಳಿಗೆ ಅಪಾರ ಸೇವೆ ಸಲ್ಲಿಸಿದ ಆರ್. ನರಸಿಂಹಾಚಾರ್ಯರಿಗೆ ಅನೇಕ ಪ್ರಶಸ್ತಿಗಳು ಲಭ್ಯವಾಗಿವೆ. ಕಲ್ಕತ್ತಾದ ಅಖಿಲ ಭಾರತ ಸಾಹಿತ್ಯ ಸಂಘ `ಪ್ರಾಚ್ಯವಿದ್ಯಾವೈಭವ’ ಬಿರುದನ್ನು ೧೯೨೯ರಲ್ಲಿ ನೀಡಿತು. ಮಹಾರಾಜರು ಪ್ರಾಕ್ತನ ವಿಮರ್ಶೆ ವಿಚಕ್ಷಣ ಪ್ರಶಸ್ತಿ (೧೯೧೩) ಪ್ರದಾನ ಮಾಡಿದರು. ಕೇಂದ್ರ ಸರ್ಕಾರ ೧೯೩೪ರಲ್ಲಿ ‘ಮಹಾಮಹೋಪಾಧ್ಯಾಯ  ಪ್ರಶಸ್ತಿ’ ನೀಡಿತು. ಧರ್ಮಸ್ಥಳದ ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಇವರು ೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠ ಅಲಂಕರಿಸಿದರು.

ಶಾಸನ, ಸಾಹಿತ್ಯ ಚರಿತ್ರೆ ಗ್ರಂಥಸಂಪಾದನೆ ಅನುವಾದ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಇವರ ಕೆಲವು ಕೃತಿಗಳು ಹೀಗಿವೆ.

೧. ನೀತಿಮಂಜರಿ (ತಮಿಳಿನ ಕುರುಳ್ ಅನುವಾದ)  ೨. ನಗೆಗಡಲು (ಹಾಸ್ಯಪ್ರಸಂಗಗಳ ಸಂಕಲನ)  ೩. ಕಾವ್ಯಾವಲೋಕನ (ಸಂಪಾದನೆ)  ೪. ಶಬ್ದಾನುಶಾಸನ (ಸಂಪಾದನೆ)  ೫. ಭಾಷಾಭೂಷಣ (ಸಂಪಾದನೆ)  ೬. ಕರ್ಣಾಟಕ ಕವಿಚರಿತೆ (೩ ಭಾಗಗಳು), ೭. ಹಿಸ್ಟರಿ  ಆಫ್  ಕನ್ನಡ  ಲಿಟರೇಚರ್ (ಇಂಗ್ಲಿಷ್) ೮. ಹಿಸ್ಟರಿ ಆಫ್  ಕನ್ನಡ  ಲ್ಯಾಂಗ್ವೇಜ್ (ಇಂಗ್ಲಿಷ್) ೯. ಶಾಸನ ಪದ್ಯಮಂಜರಿ  ಇತ್ಯಾದಿ

ನೂರಾರು ಸಂಶೋಧನ ಲೇಖನಗಳು (ವಿದ್ವತ್ ಪತ್ರಿಕೆಗಳಲ್ಲಿ ಪ್ರಕಟ)

ಶ್ರೀಯುತರು ದಿನಾಂಕ ೬-೧೨-೧೯೩೬ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ

ಅಧ್ಯಕ್ಷರು: ಆರ್. ನರಸಿಂಹಾಚಾರ್

ದಿನಾಂಕ ೧೧, ೧೨, ೧೩ ಮೇ ೧೯೧೮

ಸ್ಥಳ ಧಾರವಾಡ

ಕನ್ನಡನುಡಿಯ ಈಗಿನ ಸ್ಥಿತಿ

ಈಗಲಾದರೋ ಕನ್ನಡನುಡಿ ನಾವು ಪೂರ್ವದಲ್ಲಿ ಭಾಷೋನ್ನತಿಗಾಗಿ ಉತ್ಕಟೇಚ್ಛೆಯಿಂದ ಕೃಷಿ ಮಾಡಿದ ಕನ್ನಡಿಗರ ಸಂತತಿಯವರೋ ಅಲ್ಲವೋ ಎಂದು ಸಂದೇಹಪಡಬಹುದಾದಷ್ಟು ಹೀನಸ್ಥಿತಿಗೆ ಬಂದಿದೆ.  ಈ ಹೀನಸ್ಥಿತಿಯನ್ನು ನೋಡಿ ಯಾವ ನಿಜವಾದ ಕನ್ನಡಿಗನ ಹೃದಯ ತಾನೇ ಶೋಕಪೂರಿತವಾಗದು? ಯಾವ ದೇಶಬಾಂಧವನಾದ ಕನ್ನಡಿಗನ ಮುಖವು ತಾನೇ ಕಂದದು? ಯಾವ ಭಾಷಾಭಿಮಾನಿಯಾದ ಕನ್ನಡಿಗನ ಕಣ್ಣು ತಾನೇ ನೀರಿನಿಂದ ತುಂಬದು? ಈ ಹೀನಸ್ಥಿತಿಯನ್ನು ನಿವಾರಣ ಮಾಡಲಿಕ್ಕಾಗಿ ಬದ್ಧಕಂಕಣರಾಗಿ ಸರ್ವಪ್ರಯತ್ನವನ್ನು ಮಾಡಬೇಕಾದುದು ನಮ್ಮ ಕರ್ತವ್ಯವಾಗಿದೆ. ಈ ಹೀನಸ್ಥಿತಿಗೆ ಹಲವು ಕಾರಣಗಳುಂಟು. ಅವುಗಳಲ್ಲಿ ಕೆಲವನ್ನು ತಿಳಿಸುತ್ತೇನೆ. ಕನ್ನಡಿಗರಿಗೆ ತಮ್ಮ ಭಾಷೆಯಲ್ಲಿರಬೇಕಾದ ಆದರಾತಿಶಯಕ್ಕೆ ಪ್ರತಿಯಾಗಿ ಅಸಡ್ಡೆ ನೆಲೆಗೊಂಡಿರುವುದು ಪ್ರಬಲ ಕಾರಣವೆಂದು ಹೇಳಬಹುದು. ಅನೇಕರು ಕನ್ನಡ ಭಾಷೆಯಲ್ಲಿ ಮಾತನಾಡುವುದನ್ನು, ಪತ್ರಗಳನ್ನು ಬರೆಯುವುದನ್ನು ಅವಮಾನಕರವೆಂದು ಭಾವಿಸಿದ್ದಾರೆ. ಇದಕ್ಕಿಂತಲೂ ಶೋಚನೀಯವಾದ ವಿಷಯವುಂಟೆ? ಈಗಿನ ಶಿಕ್ಷಣ ಪದ್ಧತಿಯೂ ಈ ಅಸಡ್ಡೆಗೆ ಸಹಕಾರಿಯಾಗಿದೆ. ಪಾಠಶಾಲೆಗಳಲ್ಲಿ ಎಲ್ಲಾ ವಿಷಯಗಳನ್ನೂ ಇಂಗ್ಲಿಷ್ ಭಾಷೆಯಲ್ಲಿಯೇ ಕಲಿಸುತ್ತಾರೆ. ಬ್ರಿಟಿಷ್ ಕರ್ಣಾಟಕದ ಪ್ರಾಂತಗಳಲ್ಲಿ ಪ್ರಾಥಮಿಕ ಶಿಕ್ಷಣವು ಕನ್ನಡದಲ್ಲಿ ದೊರೆಯುವುದಿಲ್ಲ. ಭಾಷೆಗೂ ಸಾಹಿತ್ಯಕ್ಕೂ ಪೂರ್ವದಂತೆ ರಾಜರ ಪ್ರೋತ್ಸಾಹವಿಲ್ಲ. ನಮ್ಮಲ್ಲಿಯೂ ಇಂಗ್ಲಿಷ್ ಬಲ್ಲವರೇ ಬುದ್ಧಿವಂತರು, ದೇಶ ಭಾಷಾಪಂಡಿತರು ಅಪ್ರಯೋಜಕರು ಎಂಬ ನಿಷ್ಕಾರಣವಾದ ಭಾವನೆ ಹುಟ್ಟಿದೆ. ಸರಕಾರದ ಕಾಗದಪತ್ರಗಳೆಲ್ಲಾ ಇಂಗ್ಲಿಷ್ ಭಾಷೆಯಲ್ಲಿಯೇ ಇವೆ. ಮುಂಬಯಿ, ಮದರಾಸು, ಕೊಡಗು ಎಂಬ ಬ್ರಿಟಿಷ್ ಕರ್ಣಾಟಕದ ದೇಶವಿಭಾಗವು ಭಾಷೆಯ ಅನವಸ್ಥೆಗೂ ಭಿನ್ನರೂಪತೆಗೂ ಕಾರಣವಾಗಿದೆ. ಮೇಲೆ ಹೇಳಿದ ಕಾರಣಗಳಲ್ಲಿ ಕೆಲವು ಪ್ರಕೃತಸ್ಥಿತಿಯಲ್ಲಿ ಅಪರಿಹಾರ್ಯವೆಂದು ತೋರಿದರೂ ನಮ್ಮಲ್ಲಿ ನೆಲೆಗೊಂಡಿರುವ ಅಸಡ್ಡೆಯೆಂಬ ಪಿಶಾಚವನ್ನು ದೇಶಾಭಿಮಾನ ಭಾಷಾಭಿಮಾನಗಳೆಂಬ ಮಂತ್ರಗಳ ಬಲದಿಂದ ಉಚ್ಛಾಟನ ಮಾಡಿದರೆ ಭಾಷೋನ್ನತಿಯ ಕೆಲಸವು ಕೂಡಿದ ಮಟ್ಟಿಗೆ ಫಲಕಾರಿಯಾಗಬಹುದು.

ಕನ್ನಡನುಡಿಯ ಏಳಿಗೆಗೆ ಉಪಾಯಗಳು

ಪೂರ್ವದಂತೆ ಉದ್ದಾಮಕವಿಗಳು ಹುಟ್ಟಬೇಕೆಂದಾಗಲಿ ಪೂರ್ವದಂತೆ ರಾಜರೂ ಮಂಡಲಿಕರೂ ಅಧಿಕಾರಿಗಳೂ ಪ್ರೋತ್ಸಾಹಕರಾಗಬೇಕೆಂದಾಗಲಿ ಹಾರೈಸುವುದರಿಂದ ಫಲವಿಲ್ಲ. ಪ್ರಕೃತ ಕಾಲಕ್ಕೆ ಅನುಗುಣವಾಗಿ ಕನ್ನಡಿಗರೆಲ್ಲರೂ ಅಸಡ್ಡೆಯನ್ನು ತೊಲಗಿಸಿ ಭಾಷಾಸೇವೆಯಲ್ಲಿ ನಿರತರಾಗಬೇಕು. ಪಂಡಿತರನ್ನು ಗೌರವಿಸಬೇಕು. ಕನ್ನಡನುಡಿಗಾಗಿ ಶ್ರಮಪಡುವವರಿಗೆ ಮರ್ಯಾದೆಯನ್ನು ಮಾಡಬೇಕು. ಸಾಹಿತ್ಯವನ್ನು ವೃದ್ಧಿಗೊಳಿಸುವುದಕ್ಕಾಗಿ ಶಾಸ್ತ್ರೀಯ ಗ್ರಂಥಗಳೇ ಮೊದಲಾದುವನ್ನು ಅನ್ಯಭಾಷೆಗಳಿಂದ ಪರಿವರ್ತಿಸಬೇಕು. ಕೋಶಗಳನ್ನೂ ಸಾಂಕೇತಿಕ ಶಬ್ದಗಳ ಪಟ್ಟಿಯನ್ನೂ ಏರ್ಪಡಿಸಬೇಕು. ಗ್ರಂಥಸ್ಥಭಾಷೆಗೆ ಏಕರೂಪತೆಯನ್ನು ಉಂಟುಮಾಡಬೇಕು. ವಿದ್ಯಾವಂತನಾದ ಪ್ರತಿಯೊಬ್ಬ ಕನ್ನಡಿಗನೂ ತನಗಿಂತ ವಿದ್ಯೆಯಲ್ಲಿ ಕಡಿಮೆಯಾದ ಕನ್ನಡಿಗರ ಉಪಯೋಗಾರ್ಥವಾಗಿ ಗ್ರಂಥ ನಿರ್ಮಾಣವನ್ನು ಮಾಡುವುದು ತನ್ನ ಕರ್ತವ್ಯವೆಂದು ತಿಳಿಯಬೇಕು. ಜ್ಞಾನವೃದ್ಧಿಕರವಾದ ಪತ್ರಿಕೆಗಳನ್ನು ಹೊರಡಿಸಬೇಕು. ಭಾಷೆಯ ಏಕೀಭಾವ, ಪರಸ್ಪರ ಮೈತ್ರಿ. ಮುದ್ರಣ ಸೌಕರ್ಯ, ಗ್ರಂಥ ಪ್ರಚಾರಕ್ಕೆ ಅನುಕೂಲ ಇವುಗಳನ್ನು ಉಂಟು ಮಾಡುವುದಕ್ಕಾಗಿ ಗ್ರಂಥರ್ತರ ಮತ್ತು ಪತ್ರಿಕಾಸಂಪಾದಕರ ಒಂದು ಸಂಘವನ್ನು ಏರ್ಪಡಿಸಬಹುದು. ಎಲ್ಲಾ ಕರ್ಣಾಟಕ ಭಾಗಗಳ ವಿದ್ವಾಂಸರನ್ನು ಸೇರಿಸಿ ಒಂದು ಗ್ರಂಥಪರಿಶೀಲಕ ಮಂಡಲಿಯನ್ನೂ ಏರ್ಪಡಿಸಬಹುದು.

ಬೃಹತ್ ಕೋಶದ ರಚನೆಯ ಅಗತ್ಯ

ಸರಿಯಾದ ಬೃಹತ್ಕೋಶವಿಲ್ಲದುದರಿಂದ ಉಂಟಾಗಿರುವ ಅನರ್ಥಕ್ಕೆ ಒಂದು ಉದಾಹರಣವನ್ನು ಕೊಡುತ್ತೇನೆ:-

ಕ್ರಿಸ್ತಶಕ ಹತ್ತನೆಯ ಶತಮಾನದ ಮಧ್ಯಭಾಗದಲ್ಲಿ ಹುಟ್ಟಿದ ಒಂದು ಶಾಸನದಲ್ಲಿ ‘’ಬಿಸುಗೆಯೆ ಕಳನಾಗೆ ಬೂತುಗಂ ರಾಜಾದಿತ್ಯನಂ ಕೊಂದಂ” ಎಂಬ ವಾಕ್ಯವಿದೆ. ಇದಕ್ಕೆ ಆಂಗ್ಲೇಯ ಪಂಡಿತರು ‘’ರೇಗಿಸಲು ಕಳ್ಳನಾಗಿ ಬೂತುಗನು ರಾಜಾದಿತ್ಯವನ್ನು ಕೊಂದನು” ಎಂದು ಅಪಾರ್ಥವನ್ನು ಮಾಡಿ ಗಂಗರಾಜನಾದ ಬೂತಗನ ಮೇಲೆ ಇಲ್ಲದ ಕಳಂಕವನ್ನು ಆರೋಪಿಸಿದರು. ಈ ಅಪಾರ್ಥವೇ ಇಂಪೀರಿಯಲ್ ಗೆಜೆಟಿಯರಲ್ಲಿಯೂ ಪ್ರಕಟವಾಗಿದೆ. ನಮ್ಮ ಕನ್ನಡನಾಡಿನ ಪೂರ್ವರಾಜನಾದ ಬೂತುಗನ ಮೇಲೆ ಅಜ್ಞಾನದಿಂದ ಆರೋಪಿತವಾದ ಈ ಅಪವಾದವನ್ನು ನೋಡಿ ಮನಮರುಗಿ ನಾನು ಶೋಧನೆಮಾಡಿ ಈ ವಾಕ್ಯದ ನಿಜವಾದ ಅರ್ಥವನ್ನು ನಿರ್ಧರಿಸಿ ಈ ವಿಚಾರವನ್ನು ರಾಯಲ್ ಏಷಿಯಾಟಿಕ್  ಸೊಸೈಟಿ ಜರ್ನಲಿನಲ್ಲಿ ಪ್ರಕಟಮಾಡಿದ ಬಳಿಕ ಯೂರೋಪಿನಲ್ಲಿ ಅನೇಕ ಪಂಡಿತರು ಬೂತುಗನಿಗೆ ಅನ್ಯಾಯವಾಗಿ ಉಂಟಾಗಿದ್ದ ಅಪಯಶಸ್ಸನ್ನು ಹೋಗಲಾಡಿಸಿದುದಕ್ಕಾಗಿ ನನಗೆ ಶ್ಲಾಘಾಪತ್ರಗಳನ್ನು ಬರೆದರು. ‘ಬಿಸುಗೆ’ ಯೆಂದರೆ ಆನೆಯ ಮೇಲಣ ಅಂಬಾರಿ. ‘ಕಳ’ ಎಂದರೆ ಯುದ್ಧರಂಗ. ಅಂಬಾರಿಯೇ ಯುದ್ಧರಂಗವಾಗಲು ಬೂತಗನು ರಾಜಾದಿತ್ಯವನ್ನು ಕೊಂದನು-ಎಂಬುದು ಆ ವಾಕ್ಯದ ನಿಜವಾದ ಅರ್ಥ. ಆದುದರಿಂದ ಶುದ್ಧವಾದ ಬೃಹತ್ ಕೋಶವನ್ನು ಏರ್ಪಡಿಸಿದರೆ ಇಂತಹ ಅನರ್ಥಗಳಿಗೆ ಅವಕಾಶವಿಲ್ಲದಂತಾಗವುದು.

ಸ್ವಾಗತಮಂಡಳಿ ವ್ಯವಸ್ಥೆ

ಸ್ವಾಗತಮಂಡಲಿಯವರು ಸಮ್ಮೇಳನಕ್ಕೆ ಬಂದಿರುವ ಪ್ರತಿನಿಧಿಗಳ ಮಾನಸಿಕ ಸುಖ ಮತ್ತು ಶಾರೀರಿಕ ಸುಖ ಇವುಗಳಿಗಾಗಿ ಮಾಡಿದ ಏರ್ಪಾಡುಗಳು ಬಹಳ ಶ್ಲಾಘನೀಯವಾಗಿವೆ. ನಾಟಕ, ಸಂಗೀತ, ಹರಿಕಥೆ, ಪಾಂಡಿತ್ಯಸೂಚಕವಾದ ನಿಬಂಧಗಳು, ನಾನಾ ಪ್ರಾಂತಗಳ ಕನ್ನಡಿಗರ ಪರಸ್ಪರದರ್ಶನ ಸಲ್ಲಾಪಾದಿಗಳಿಗೆ ಅವಕಾಶ-ಇವೆಲ್ಲವೂ ಮನಸ್ಸಿಗೆ ಹೇರಳವಾಗಿ ಆನಂದವನ್ನುಂಟುಮಾಡಿವೆ. ಇನ್ನು ಶರೀರಸೌಖ್ಯಕ್ಕೆ ಮಾಡಿದ ಆನುಕೂಲ್ಯವಾದರೋ ವರ್ಣನಾತೀತವಾಗಿದೆ.

 Tag: Kannada Sahitya Sammelana 4, R. Narasimhachar

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)