ಕನ್ನಡ ಸಾಹಿತ್ಯ ಸಮ್ಮೇಳನ-೬ : ಹೊಸಪೇಟೆ
ಜೂನ್ ೧೯೨0

ಅಧ್ಯಕ್ಷತೆ: ರೊದ್ದ ಶ್ರೀನಿವಾಸರಾಯರು

rodda-srinivasarayaru

೬ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

 ರೊದ್ದ ಶ್ರೀನಿವಾಸರಾಯರು

ಕರ್ನಾಟಕದ ಪಿತಾಮಹರೆನಿಸಿದ, ಪರೋಪಕಾರಿ ರೊದ್ದ ಶ್ರೀನಿವಾಸರಾಯರು ಧಾರವಾಡದ ಮರಿಹಾಳದಲ್ಲಿ ೧೭-೯-೧೮೫0ರಲ್ಲಿ  ಜನಿಸಿದರು. ತಂದೆ ಕೋನೇರಿರಾಯ, ತಾಯಿ ಸುಬ್ಬಮ್ಮ. ಮುದಿಹಾಳ, ಹುಬ್ಬಳ್ಳಿ, ಬೆಳಗಾವಿ, ಪುಣೆಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ ಇವರು ಕಷ್ಟಪಟ್ಟು ಓದಿದರು.

೧೮೭೨ರಲ್ಲಿ ಕಾರವಾರದಲ್ಲಿ ಪ್ರೌಢಶಾಲೆ ಶಿಕ್ಷಕರಾಗಿ, ನಂತರ ಧಾರವಾಡದಲ್ಲಿ ಶಿಕ್ಷಣಾಧಿಕಾರಿಯಾಗಿ  ಕೊನೆಗೆ ಧಾರವಾಡದ ಟ್ರೈನಿಂಗ್ ಕಾಲೇಜಿನ ಪ್ರಿನ್ಸಿಪಾಲರಾಗಿ ಸೇವೆಗೈದು ೧೯0೮ರಲ್ಲಿ ನಿವೃತ್ತರಾದರು.

ಬಡವಿದ್ಯಾರ್ಥಿಗಳ ಹಿತೈಷಿಗಳಾದ ಇವರು ವಿದ್ಯಾರ್ಥಿಗಳ ಸಲುವಾಗಿ ನಾನಾ ಬಗೆಯ ಫಂಡುಗಳನ್ನು ವ್ಯವಸ್ಥೆ ಮಾಡಿದರು. ಧಾರವಾಡದ ಹೆಣ್ಣುಮಕ್ಕಳ ಶಿಕ್ಷಣ ವಿದ್ಯಾಲಯ, ಕರ್ನಾಟಕ ಹೈಸ್ಕೂಲ್ ಮೊದಲಾದ ಸಂಸ್ಥೆಗಳನ್ನು ಸ್ಥಾಪಿಸಿದರು. ೧೯೧೯ರಲ್ಲಿ ಕರ್ನಾಟಕ ಎಜುಕೇಷನ್ ಬೋರ್ಡ್ ಸ್ಥಾಪಿಸಿದರು. ಮುಂಬಯಿ ಲೆಜಿಸ್ಲಿಟಿವ್ ಕೌನ್ಸಿಲ್ ಸದಸ್ಯರಾಗಿದ್ದು ಇವರು ಧಾರವಾಡದ ನಗರಸಭೆಯ ಅಧ್ಯಕ್ಷರೂ ಆಗಿದ್ದರು.

ರೊದ್ದ ಅವರು ಸಮಾಜಕ್ಕಾಗಿ ಶಿಕ್ಷಣಕ್ಕಾಗಿ ಮಾಡಿದ ಸೇವೆಯನ್ನು ಗುರುತಿಸಿ ಬ್ರಿಟಿಷ್ ಸರ್ಕಾರ ೧೯0೯ರಲ್ಲಿ ರಾವ್ ಬಹದ್ದೂರ್ ಬಿರುದನ್ನು, ಸಾರ್ವಜನಿಕ ಸೇವೆಗಾಗಿ ೧೯೨೩ರಲ್ಲಿ ದಿವಾನ್ ಬಹದ್ದೂರ್ ಬಿರುದನ್ನು ನೀಡಿತು. ೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಇವರು ಕರ್ಣಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿದ್ದರು.

ಇವರು  ರಚಿಸಿದ  ಕೃತಿಗಳು: ೧. ನಂದಿನಿ (ಬುದ್ಧನ ಚರಿತ್ರೆ) ೨. ಸ್ತ್ರೀ ಶಿಕ್ಷಣದ ಆವಶ್ಯಕತೆ

ಪರಿಷತ್ತಿನ ಆರಂಭಕಾಲದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಇವರು ೪-೮-೧೯೨೯ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ,

ಅಧ್ಯಕ್ಷರು, ರೊದ್ದ ಶ್ರೀನಿವಾಸರಾಯರು

ದಿನಾಂಕ ೨0, ೨೧ ಜೂನ್ ೧೯೨0

ಸ್ಥಳ ಹೊಸಪೇಟೆ

ಪರಿಷತ್ತಿನ ಸ್ಥಾಪನೆಗೆ ಕಾರಣ

ಧಾರವಾಡದಲ್ಲಿ ಕರ್ಣಾಟಕ ವಿದ್ಯಾವರ್ಧಕ ಸಂಘವು ಸ್ಥಾಪಿತವಾಗಿ ಪ್ರಾಚೀನ ಕನ್ನಡ ವಾಙ್ಮಯದ ಅಭ್ಯಾಸಕ್ಕೂ ನೂತನ ವಾಙ್ಮಯದ ನಿರ್ಮಾಣಕ್ಕೂ ಅವಸರ ದೊರೆಯಲು ಮಾರ್ಗವಾಯಿತು. ಮೈಸೂರು ಶ್ರೀಮನ್ಮಹಾರಾಜರವರ ಸರಕಾರದವರೂ ಇತ್ತ ಮುಂಬಯಿ ಸರಕಾರದವರೂ ನಮ್ಮ ಸಂಘದ ಮಾಹಿತಿಯನ್ನು ಕೃಪಾಪೂರ್ವಕ ಒಪ್ಪಿಕೊಂಡು ಅದಕ್ಕೆ ಪ್ರತಿಯೊಂದು ಬಗೆಯ ಸಹಾಯವನ್ನೂ ಮಾಡಲು ಸಿದ್ಧರಾದರು. ಮೈಸೂರು ಸರಕಾರದ ವಿಶೇಷಾನುಗ್ರಹದಿಂದ ಅಲ್ಲಿಯ ಕನ್ನಡ ವಾಙ್ಮಯ ಪಂಡಿತರಿಬ್ಬರು ವಿದ್ಯಾವರ್ಧಕ ಸಂಘದ ವಾರ್ಷಿಕ ಪರೀಕ್ಷೆ ಹಾಗೂ ಇನಾಮಿನ ಸಮಾರಂಭಗಳಿಗಾಗಿ ಪ್ರತಿವರ್ಷ ಬರಹತ್ತಿದ್ದೇ ಮೈಸೂರು ಮತ್ತು ಮುಂಬಯಿ ಕರ್ಣಾಟಕಗಳನ್ನು ಭಾಷೆಯ ದೃಷ್ಟಿಯಿಂದ ಒಂದುಗೂಡಿಸುವ ಪ್ರಚಂಡ ಕಾರ್ಯದ ಮಂಗಳಾಚರಣರೂಪವಾದ ಮಂಗಳಮೂರ್ತಿಯ ಪೂಜನವೆಂದು ಹೇಳಲು ಅಡ್ಡಿಯಿಲ್ಲ. ಮೈಸೂರು, ಮುಂಬಯಿ, ಕರ್ಣಾಟಕಗಳ ಈ ಸಂಘಟನವು ವಿಶೇಷ ದೃಢಮೂಲವಾಗುವಂತೆ ಪರಸ್ಪರ ಬಳಕೆಯೂ ಪರಿಚಯವೂ ಬೆಳೆಯಲು ಅನುಕೂಲವಾಗಬೇಕೆಂದು ಕರ್ಣಾಟಕ ವಿದ್ಯಾವರ್ಧಕ ಸಂಘದ ಪರೀಕ್ಷೆಗಳ ಜತೆಗೆ ಕನ್ನಡ ಗ್ರಂಥಕಾರರ ಸಮ್ಮೇಳನವೆಂಬ ಕೂಟವೊಂದು ೧೯0೭ನೇ ವರ್ಷ ಉಪಕ್ರಮವಾಯಿತು. ಕರ್ಣಾಟಕ ವಾಙ್ಮಯದ  ನಿಸ್ಸೀಮ ಭಕ್ತರೂ ಪ್ರಖ್ಯಾತ ಪಂಡಿತರೂ ಆದ ಗತಿಸಿದ ಶ್ರೀಮಾನ್ ಎಸ್.ಜಿ. ನರಸಿಂಹಾಚಾರ್ಯರವರ ಅಧ್ಯಕ್ಷತೆಯಲ್ಲಿ ಈ ಸಮ್ಮೇಳನವು ಎರಡು ವರ್ಷಕೂಡಿತ್ತು. ಮುಂದೆ ಇದೇ ಕಾರ್ಯವು ಕರ್ಣಾಟಕದ ಎಲ್ಲ ಭಾಗಗಳ ಜನರ ಸಂಯುಕ್ತ ಪ್ರಯತ್ನದಿಂದ ಸುಸಂಘಟಿತವಾಗಿ ಸಾಗುವಂತಾಗಬೇಕೆಂದು ೧೯೧೫ರಲ್ಲಿ ಬೆಂಗಳೂರಿನಲ್ಲಿ ಮೊದಲನೆಯ ಕರ್ಣಾಟಕ ಸಾಹಿತ್ಯ ಸಮ್ಮೇಳನವು ಕೂಡಿ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾಯಿತು. ಅಂದಿನಿಂದ ಇಂದಿನವರೆಗೆ ಪ್ರಾಚೀನ ಮತ್ತು ಅರ್ವಾಚೀನ ಕನ್ನಡ ವಾಙ್ಮಯದ ಅಭಿವೃದ್ಧಿಗಾಗಿ ನಡೆದಿರುವ ಪ್ರಯತ್ನಗಳೆಲ್ಲ ಎಲ್ಲರಿಗೂ ತಿಳಿದ ವಿಷಯವೇ ಆಗಿರುವುದು.

Tag: Kannada Sahitya Sammelana 6, Rodda Srinivasa Rao

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)