೧೧ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಬೆನಗಲ್ ರಾಮರಾವ್
ಕವಿ, ನಾಟಕಕಾರ, ಕೋಶರಚಕ, ಇತಿಹಾಸ ಕೃತಿ ಸಂಪಾದಕರಾದ ಬೆನಗಲ್ ರಾಮರಾಯರು “ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ” ಎಂಬ ಕವಿತೆಯೊಂದಿಗೆ ನಾಡಿನಾದ್ಯಂತ ಮನೆಮಾತಾದವರು. ಮಂಜುನಾಥಯ್ಯ-ರಮಾಬಾಯಿ ದಂಪತಿಗಳಿಗೆ ಜನಿಸಿದ ಇವರು ಮುಲ್ಕಿ, ಮಂಗಳೂರು, ಪುತ್ತೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ಜೀವವಿಜ್ಞಾನ, ಭೂಗರ್ಭಶಾಸ್ತ್ರ ಮತ್ತು ಕನ್ನಡ ವಿಷಯಗಳಲ್ಲಿ ಬಿ.ಎ. ಪದವಿ ಗಳಿಸಿದರು. ೧೯00ರಲ್ಲಿ ಮದರಾಸು ವಿಶ್ವವಿದ್ಯಾಲಯಗಳಲ್ಲಿ ಎಂ.ಎ. ಪದವಿ ಗಳಿಸಿದರು. ಮುಂಬಯಿ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿ ಪಡೆದರು.
ಸುವಾಸಿನಿ ಪತ್ರಿಕೆಯ ಸಂಪಾದಕರಾಗಿ ವೃತ್ತಿ ಜೀವನಕ್ಕೆ ಬಂದವರು ಮೈಸೂರು ನಾರ್ಮಲ್ ಸ್ಕೂಲಿನಲ್ಲಿ ಕನ್ನಡ ಅಧ್ಯಾಪಕರಾಗಿ ೧೯0೨ರಲ್ಲಿ ಮುಂಬಯಿ ಸರಕಾರದಲ್ಲಿ ಭಾಷಾಂತರಕಾರರಾಗಿ ಸೇರಿದರು. ೧೯೧೭ರಿಂದ ಮದರಾಸು ಸರ್ಕಾರದಲ್ಲಿ ಭಾಷಾಂತರಕಾರರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ಸೇವೆ: ಮದರಾಸು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಏಕೀಕರಣ ಸಂಘದ ಅಧ್ಯಕ್ಷರಾಗಿದ್ದರು. ಪತ್ರಿಕೋದ್ಯಮದಲ್ಲಿ ಆಸಕ್ತಿ ಹೊಂದಿದ ಇವರು ಸುವಾಸಿನಿ, ವಾಗ್ಭೂಷಣ ಪತ್ರಿಕೆಗಳ ಸಂಪಾದಕರಾಗಿದ್ದರು. ಸುಗುಣವಿಲಾಸ ನಾಟಕಸಭೆಯ ಕನ್ನಡ ವಿಭಾಗದ ಕಾರ್ಯದರ್ಶಿ ಆಗಿದ್ದರೂ, ಅಭಿನಯದಲ್ಲೂ ಭಾಗವಹಿಸುತ್ತಿದ್ದರು. ಕರ್ನಾಟಕದ ನಕ್ಷೆಯನ್ನು ರೂಪಿಸಿದರು.
೧೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ೧೯೨೫ರಲ್ಲಿ ಆಯ್ಕೆಯಾದರು. ಪರಿಷತ್ತಿನ ಸ್ಥಾಪಕರಲ್ಲಿ ಒಬ್ಬರಾದ ಇವರು ಕನ್ನಡಿಗರ ಏಕೀಕರಣಕ್ಕೆ ಶ್ರಮಿಸಿದರು.
ಪುರಾಣನಾಮ ಚೂಡಾಮಣಿ, ಕೈಫಿಯತ್ತುಗಳ ಸಂಪಾದನೆ, ಇರಾವತಿ, ರಮಾಮಾಧವ (ಕಾದಂಬರಿ), ಸತ್ಯರಾಜ ಪೂರ್ವದೇಶ ಚರಿತ್ರೆ (ತೆಲುಗಿನಿಂದ), ಅವಿಮಾರಕ (ಸಂಸ್ಕೃತದಿಂದ), ಸುಭದ್ರಾವಿಜಯ (ಮರಾಠಿಯಿಂದ), ಕಲಹಪ್ರಿಯಾ (ಬಂಗಾಳಿಯಿಂದ) ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.
ಬೆನಗಲ್ ರಾಮರಾಯರು ೮-೫-೧೯೪೩ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೧೧,
ಅಧ್ಯಕ್ಷರು : ಬೆನಗಲ್ ರಾಮರಾವ್
ದಿನಾಂಕ ೯, ೧0, ೧೧ ಮೇ ೧೯೨೫
ಸ್ಥಳ : ಬೆಳಗಾವಿ
ಪರಿಷತ್ತಿನ ಸ್ಥಾಪನೆ ವಿಚಾರ
ಮಿತ್ರರೇ! ಭಾಷಾಪೋಷಕರಲ್ಲಿಯೂ ಕಲಾಭಿಮಾನಿಗಳಲ್ಲಿಯೂ ಅಗ್ರಗಣ್ಯರೆನಿಸಿದ ಮೈಸೂರು ಸಂಸ್ಥಾನದ ಮಹಾಪ್ರಭುಗಳಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ಜಿ.ಸಿ.ಎಸ್.ಐ. ಮಹಾಸ್ವಾಮಿಗಳವರು ಮತ್ತು ಹಿಂದೆ ದಿವಾನಗಿರಿಯನ್ನು ವಹಿಸಿದ್ದ ದೇಶಾಭಿಮಾನಿಗಳೂ ರೂಪದರ್ಶಿಗಳೂ ರಾಜನೀತಿ ಪ್ರವೀಣರೂ ಪ್ರತಿಭಾಸಂಪನ್ನರೂ ಎನಿಸಿದ ಸರ್ ಎಂ. ವಿಶ್ವೇಶ್ವರಯ್ಯನವರ ಔದಾರ್ಯ ಪುರಸ್ಕೃತವಾದ ಒತ್ತಾಸೆಯಿಂದ ಅಭ್ಯುದಯಾಕಾಂಕ್ಷಿಯಾದ ಈ ಸಂಸ್ಥೆಯು ಹತ್ತು ವರ್ಷಗಳ ಹಿಂದೆ ಬೆಂಗಳೂರು ಪಟ್ಟಣದಲ್ಲಿ ಸ್ಥಾಪಿತವಾದುದೆಂಬುದು ತಮಗೆ ಹೊಸ ವಿಷಯವಲ್ಲ. ೧೯೧೫ನೆಯ ವರ್ಷದ ಮೇ ತಿಂಗಳಲ್ಲಿ ಬೆಂಗಳೂರು ಪಟ್ಟಣದಲ್ಲಿ ನಡೆದ ಪ್ರಥಮ ಸಮಾರಂಭ ಮಹೋತ್ಸವವನ್ನು ಅನುಭವಿಸುವ ಭಾಗ್ಯವನ್ನು ಪಡೆದಿದ್ದ ನಾವು ಆ ಸುದಿನವನ್ನು ಪೂಜನೀಯವಾದ ನಮ್ಮ ಮಾತೃಭೂಮಿಯ ಮತ್ತು ಅದರ ಪುರಾತನವಾದ ಸಾಹಿತ್ಯ ಇತಿಹಾಸದಲ್ಲಿ ಚಿರಸ್ಮರಣೀಯವಾದ ದೊಡ್ಡ ಹಬ್ಬದ ದಿನವೆಂದು ಭಾವಿಸದಿರಲಾರೆವು. ಅಂದಿನ ಮಹೋತ್ಸವ ವೈಭವವೂ, ಕರ್ಣಾಟಕ ನಾನಾ ಭಾಗಗಳಿಂದ ಬಿಜಯಮಾಡಿಸಿ ಆ ಕಾಲದಲ್ಲಿ ಶ್ರೀಮನ್ಮಹಾರಾಜರವರ ಸರಕಾರದಿಂದ ಆತಿಥ್ಯವನ್ನು ಕೈಕೊಂಡ ಅನೇಕಾನೇಕ ಪಂಡಿತೋತ್ತಮರ ಮತ್ತು ಸಮಾಜ ನಾಯಕರ ದೊಡ್ಡ ಸಮೂಹವೂ, ಮೈಸೂರು ಸಂಸ್ಥಾನದ ಮಹೋನ್ನತಾಧಿಕಾರಿವರ್ಗವೂ ಇತರ ನಾಗರಿಕ ಮಹಾಶಯರೂ ಏಕೀಭವಿಸಿ ಅಲ್ಲಿ ನೆರೆದಿದ್ದವರೆಲ್ಲರನ್ನೂ ನಿರ್ವಿಶೇಷವಾಗಿ ಗೌರವಿಸಿ ನಡೆಯಿಸಿದ ಆದರಾತಿಥ್ಯವೂ, ಅಂದಿನ ಸಭಾಧ್ಯಕ್ಷರ ವಿದ್ವತ್ತಾ ಪ್ರಚಾರವೂ ಗಂಭೀರವೂ ಎನಿಸಿದ ಪ್ರಾರಂಭೋಪನ್ಯಾಸವೂ, ಭಿನ್ನ ಭಿನ್ನ ಪ್ರಾಂತದ ಕರ್ಣಾಟಕಾಭಿಮಾನಿಗಳ ಪ್ರೌಢಿಮೆಯನ್ನೊಳಗೊಂಡ ಉಪನ್ಯಾಸಗಳೂ ಲೇಖನಗಳೂ ಸಮ್ಮೇಳನದ ಉಪಕ್ರಮದಿಂದ ಉಪಸಂಹಾರ ಪರ್ಯಂತ ಏಕರೂಪವಾಗಿ ತುಂಬಿ ತುಳುಕುತ್ತಿದ್ದ ಉತ್ಸಾಹ ರಸವೂ, ಉಪಸಂಹಾರ ಕಾಲದಲ್ಲಿ ನಮ್ಮ ನಮ್ಮ ಸಾಮಾಜಿಕ ವ್ಯಾವಹಾರಿಕ ಮತ್ತು ಮತಸಂಬಂಧಿಗಳಾದ ವೈಷ್ಯಮ್ಯಗಳು ಎಷ್ಟೇ ಇದ್ದರೂ,
“ಕರ್ಣಾಟಕವು ಅವಿಭಕ್ತವಾದ ಒಂದೇ ಪ್ರಾಂತವಾಗಿರುವುದರಿಂದ ಮಾತೃ
ಭಾಷೆಯ ಮತ್ತು (ಸಾಹಿತ್ಯವು ಆ ಆ ರಾಷ್ಟ್ರದ ಅಥವಾ ಜನಪದದ ಶ್ರೇಷ್ಠತೆಯ
ಪ್ರತಿಬಿಂಬವಾಗಿರುವುದರಿಂದ) ಯಶಸ್ವಿನಿಯಾದ ನಮ್ಮ ಮಾತೃಭೂಮಿಯ
ಉನ್ನತಿಗಾಗಿ ಕೆಲಸಮಾಡುವ ಸಂದರ್ಭದಲ್ಲಿ ಮನಃಪೂರ್ವಕವಾಗಿ ಒಬ್ಬರಿಗೊಬ್ಬರು ನಿರ್ವಂಚನೆಯಾಗಿ ಸಹಾಯಮಾಡುವುದು ನಮ್ಮ ಮುಖ್ಯ ಕರ್ತವ್ಯ”ವೆಂಬ ಧೃಡ ಭಾವನೆಯು ಮನಸ್ಸಿನಲ್ಲಿ ಮೂರ್ತಿಭವಿಸಿ, ‘ಪ್ರತಿ ವರ್ಷವೂ ಇದೇ ಉದ್ದೇಶದಿಂದಲೇ ಬಾರಿಬಾರಿಗೂ ನಾವೆಲ್ಲರೂ ಸೇರಬೇಕು’ ಎಂಬ ಆಶಯವನ್ನಿಟ್ಟುಕೊಂಡು ಚಿರಕಾಲಾವಸ್ಥಾಯಿಯೂ ಪ್ರೇಮಭರಿತವೂ ಎನಿಸಿದ ಸದಭಿಸಂಧಿಯಿಂದ ಆತಿಥೇಯರನ್ನು ಬೀಳ್ಕೊಟ್ಟು ತೆರಳಿದುದೂ – ಇವೆಲ್ಲವೂ ಈಗಲೂ ನಮ್ಮ ಕಣ್ಣೆದಿರಿಗೆ ನಡೆಯುವಂತಿರುವುದು.
ಹತ್ತು ವರುಷಗಳ ಸಾಧನೆ
ಮೇಲೆ ಹೇಳಿದಂತೆ ಪರಿಷತ್ತು ಸ್ಥಾಪಿತವಾಗಿ ಇಂದಿಗೆ ಹತ್ತು ವರುಷಗಳಾದುವು. ಆದುದರಿಂದ ಪರಿಷತ್ತು ಇದುವರೆಗೆ ಎಷ್ಟರಮಟ್ಟಿಗೆ ಕೆಲಸಮಾಡಿದೆ? ಅದರ ಆಶೋತ್ತರಗಳಾವುವು? ಅವು ಎಷ್ಟರಮಟ್ಟಿಗೆ ನೆರವೇರಿವೆ? ಆಡಚಣೆಗಳು ಒದಗಿರುವ ಪಕ್ಷದಲ್ಲಿ, ಅವು ಏತರ ಮೂಲಕ ಸಂಭವಿಸಿದುವು? ಎಂಬುದನ್ನು- ಸಂಗ್ರಹವಾಗಿ ಹೇಳುವುದಾದರೆ. ಪರಿಷತ್ತು ಈಗ ಯಾವ ಸ್ಥಿತಿಯಲ್ಲಿದೆ? ಎಂಬುದನ್ನು- ಕಂಡುಹಿಡಿದು ಆತಂಕಗಳನ್ನು ಪರಿಹರಿಸುವುದಕ್ಕೂ ಕಾರ್ಯಗಳು ಮತ್ತಷ್ಟು ಶೀಘ್ರವಾಗಿ ನೇರವೇರುವುದಕ್ಕೂ ಯಾವ ಉಪಾಯಗಳನ್ನು ಕೈಕೊಳ್ಳತಕ್ಕುದೆಂದು ತಿಳಿಯಲು ನಮ್ಮಲ್ಲಿ ಕೆಲವರಿಗೆ ಕುತೂಹಲವಿರುವುದು ಸಹಜ. ಈ ವಿಷಯವನ್ನು ತಿಳಿಯಬೇಕಾದರೆ ಪ್ರಥಮ ಸಮ್ಮೇಳನ ಕಾಲದಲ್ಲಿ ಅಧ್ಯಕ್ಷರಾಗಿದ್ದ ದೇಶ ಭಾಷಾಭಿಮಾನಿಗಳಾದ ರಾಜಮಂತ್ರ ಪ್ರವೀಣ ದಿವಂಗತ ಶ್ರೀಮಾನ್ ಎಚ್.ವಿ. ನಂಜುಂಡಯ್ಯ, ಎಂ.ಎ., ಎಂ.ಎಲ್., ಸಿ.ಐ.ಇ. ಅವರು ಮಾಡಿದ ಉಪನ್ಯಾಸವನ್ನೂ ಅವರು ನಮಗೆ ತಿಳಿಯಹೇಳಿದ ಉದ್ದೇಶಗಳನ್ನೂ ‘’ಕರ್ಣಾಟಕ ಸಾಹಿತ್ಯ ಪರಿಷತ್ತು” ಎಂಬ ಶಾಶ್ವತವಾದ ಸಂಘವನ್ನು ಏರ್ಪಡಿಸುವಲ್ಲಿ ಗೊತ್ತುಪಡಿಸಲಾದ ನಿಬಂಧನೆಗಳನ್ನೂ ಪರ್ಯಾಲೋಚಿಸತಕ್ಕದ್ದು ಆವಶ್ಯಕವಾಗಿರುವುದು. ಪ್ರಥಮ ಸಮ್ಮೇಳನದ ಕಾಲದಲ್ಲಿ ನಂಜುಂಡಯ್ಯನವರು ಉದಾತ್ತವಾದ ತಮ್ಮ ಉಪನ್ಯಾಸದಲ್ಲಿ,
“ಕರ್ಣಾಟಕ ದೇಶವು ರಾಜಕೀಯ ವಿಷಯಗಳಲ್ಲಿ ಮೂರು ನಾಲ್ಕು ಸರಕಾರದವರಿಗೆ ಅಧೀನವಾಗಿದ್ದರೂ ಬೇರೆ ಬೇರೆಯಾಗಿ ಕಾಣುವ ಕನ್ನಡ ನಾಡುಗಳಲ್ಲಿಯೂ ಕನ್ನಡ ಮಾತನಾಡುವವರಲ್ಲಿಯೂ ಕೆಲವು ಸಾಮಾನ್ಯ ಲಕ್ಷಣಗಳು ಕಾಣಬರುತ್ತವೆ; ಆದುದರಿಂದ ಭಾಷಾಭಿವೃದ್ಧಿ, ಗ್ರಂಥರಚನೆ- ಇವುಗಳ ವಿಷಯದಲ್ಲಿ ಕನ್ನಡಿಗರೆಲ್ಲರನ್ನೂ ಒಟ್ಟುಗೂಡಿಸಲಾದರೆ ವಿಶೇಷ ಪ್ರಯೋಜನವುಂಟು. ಈ ಉದ್ದೇಶದಿಂದಲೇ ಕನ್ನಡ ಭಾಷಾಭಿವೃದ್ಧಿಯಲ್ಲಿ ಆಸಕ್ತರಾಗಿಯೂ ಸಮರ್ಥರಾಗಿಯೂ ರಾಯಭಾರವನ್ನು ವಹಿಸಲು ತಕ್ಕವರಾಗಿಯೂ ಇರುವ ಜನಗಳು ಸೇರಿ ಅನ್ಯೋನ್ಯ ಸಹಾಯದಿಂದ ಒಟ್ಟುಗೂಡಿ ಕೆಲಸಮಾಡತಕ್ಕ ಒಂದು ಸಮ್ಮೇಳನವನ್ನು ಏರ್ಪಾಡು ಮಾಡಲಾಗಿದೆ”
ಎಂಬುದಾಗಿ ಅಪ್ಪಣೆ ಕೊಡಿಸಿದರು. ಬಳಿಕ, ಅವರು ಆ ಉದ್ದೇಶವನ್ನು ನೇರವೇರಿಸುವುದಕ್ಕಾಗಿ ಯಾವ ರೀತಿಯಿಂದ ನಾವು ವರ್ತಿಸತಕ್ಕುದೆಂಬ ಬಗ್ಗೆ ಹಲವು ಸೂಚನೆಗಳನ್ನು ಕೊಟ್ಟು ಹೃದಯಂಗಮವಾದ ತಮ್ಮ ಉಪನ್ಯಾಸವನ್ನು ಮುಗಿಸುವಲ್ಲಿ,
“ಈ ಕನ್ನಡ ಭಾಷೆಯನ್ನು ಪುರೋಭಿವೃದ್ಧಿಗೆ ತಂದು ಊರ್ಜಿತಪಡಿಸುವುದಕ್ಕೆ ನಮ್ಮ ಶ್ರೀಮನ್ಮಹಾರಾಜರವರು ತಮ್ಮ ದಿವ್ಯಚಿತ್ತದಲ್ಲಿ ನಿಜವಾದ ಅಭಿಮಾನವನ್ನೂ ಆದರಾತಿಶಯವನ್ನೂ ಧರಿಸಿದವರಾಗಿ ತಾವೂ ತಮ್ಮ ಸರ್ಕಾರದವರೂ ಸಾಧ್ಯವಾದ ಕೆಲವು ಸಹಾಯಗಳನ್ನು ಕಲ್ಪಿಸಿಕೊಡಲು ಸಿದ್ಧರಾಗಿರುವರೆಂದು ನಾನು ದೃಢವಾಗಿ ಹೇಳುತ್ತೇನೆ.” ಎಂಬುದಾಗಿ ಭರವಸೆಕೊಟ್ಟರು. ಅವರು ಮಾಡಿದ ಹಲವು ಸೂಚನೆಗಳು ಸಾಹಿತ್ಯ ಪರಿಷತ್ತಿನ ನಿಬಂಧನೆಗಳಲ್ಲಿ ಗರ್ಭೀಕೃತವಾಗಿಯೇ ಇವೆಯಾದುದರಿಂದ ಅವುಗಳನ್ನು ಕುರಿತು ನಾನು ಇಲ್ಲಿ ಪುನಃ ವಿವರಿಸಲು ಅಪೇಕ್ಷಿಸುವುದಿಲ್ಲ. ತಥಾಪಿ, ಇಂತಹ ಸಮ್ಮೇಳನಗಳ ಫಲಿತಾಂಶ ರೂಪವಾಗಿ ಅವರು ವ್ಯಕ್ತಪಡಿಸಿದ ಆಶೋತ್ತರಗಳು ಬಹಳ ಮಟ್ಟಿಗೆ ಸಫಲವಾಗಿರುವುವೆಂಬ ನನ್ನ ಅಭಿಪ್ರಾಯವನ್ನು ಮಾತ್ರ ಇಲ್ಲಿ ಹೇಳದಿರಲಾರೆನು. ಹತ್ತು ವರ್ಷಗಳ ಹಿಂದೆ ಬೆಂಗಳೂರಲ್ಲಿ ನಾವು ಮೊದಲನೆಯ ಬಾರಿ ಕಲೆತಿದ್ದಾಗ ನಮ್ಮನಮ್ಮೊಳಗೆ ಇರುತ್ತಿದ್ದ ಪ್ರೀತಿ ವಿಶ್ವಾಸಗಳು ಅಂದಿನಿಂದೀಚೆಗೆ ಶತಾಧಿಕವಾಗಿ ಬೆಳೆದಿರುವುವು; ಹಾಗೆಯೇ, ನಮಗೆ ನಮ್ಮ ಪರಸ್ಪರ ಭಾವನೆಗಳಲ್ಲಿ ಗೌರವವುಂಟಾಗಿರುವುದು ಮಾತ್ರವೇ ಅಲ್ಲದೆ ಒಬ್ಬರು ಮತ್ತೊಬ್ಬರ ಲೋಪಗಳನ್ನು ಅಷ್ಟಾಗಿ ಗಮನಿಸದಿರಲು ಕೂಡ ಕಲಿತಿರುವೆವೆಂದು ಹೇಳಬಲ್ಲೆನು. ಮತ್ತು ನಾವೆಲ್ಲರೂ ಒಂದೇ ಜನಾಂಗದವರೂ ಒಂದೇ ಉದ್ದೇಶವುಳ್ಳವರೂ ಆಗಿರುವೆವೆಂಬ ಭಾವನೆಯು ಕೂಡ ಸ್ಥಿರಪಟ್ಟಿರುವುದು. ಇಂತಹ ಭಾವನೆಯು ಹಿಂದೆ ಯಾವಾಗಲೂ ನಮ್ಮಲ್ಲಿ ಇರಲೇ ಇಲ್ಲ. ಹೀಗಾದುದರಿಂದ ಇದುವರೆಗೆ ಇದರಲ್ಲಿ ನಮಗೆ ದೊರೆತ ಯಶಸ್ಸು ಅಲ್ಪವಾದುದು ಅಥವಾ ಕ್ಷಣಿಕವಾದುದೆಂದು ಪುರೋಭಾಗಿಯಾದ ಯಾವ ವಿಮರ್ಶಕನೂ ಹೇಳಲು ಧೈರ್ಯಗೊಳ್ಳಲಾರನೆಂದು ನನಗೆ ದೃಢವಾದ ನಂಬುಗೆಯಿದೆ. ಇನ್ನು, ಶ್ರೀಮನ್ಮಹಾರಾಜರವರ ಅಭಿಮಾನವನ್ನೂ ಆದರಾತಿಶಯವನ್ನೂ ವಿಚಾರಿಸುವಲ್ಲಿ, ಶ್ರೀ ನಂಜುಂಡಯ್ಯನವರು ನಮಗೆ ಹೇಳಿದ ಭರವಸೆಗಳಿಗೆ ನಿದರ್ಶನಗಳು ಹೇರಳವಾಗಿ ದೊರೆತಿವೆ. ವಾಸ್ತವವಾಗಿ ಹೇಳುವುದಾದರೆ, ಈ ಸಂಸ್ಥೆಯು ಸ್ಥಾಪಿತವಾದಂದಿನಿಂದ ಇಂದಿನವರೆಗೂ ಶ್ರೀಮನ್ಮಹಾರಾಜರವರ ಸರಕಾರದ ಉದಾರವಾದ ದ್ರವ್ಯ ಸಹಾಯದಿಂದಲೇ ನಡೆಯುತ್ತಿರುವುದಲ್ಲದೆ ಅಷ್ಟಾಗಿ ಮಹಾಜನರ ದ್ರವ್ಯ ಸಹಾಯದಿಂದಲ್ಲ. ಪರಿಷತ್ತಿನ ಯಾವನೊಬ್ಬ ಸದಸ್ಯನಾಗಲಿ ಶ್ರೀಮನ್ಮಹಾರಾಜರವರ ಸರಕಾರ ಈ ಆದರಾತಿಶಯವನ್ನು ಎಂದಿಗೂ ಮರೆಯಲಾನು; ಮತ್ತು ಇದನ್ನು ಕುರಿತು ಕನ್ನಡಿಗರ ಅಂತರಂಗಗಳಲ್ಲಿ ತುಂಬಿ ತುಳುಕುತಿರುವ ಕೃತಜ್ಞತೆಯನ್ನು ಬಾಯಿಮಾತಿನಿಂದ ಸ್ಮರಿಸುವುದರ ಮೂಲಕ ಉಚಿತ ರೀತಿಯಿಂದ ವ್ಯಕ್ತಪಡಿಸಲು ಸಾಧ್ಯವಲ್ಲ.
ಸಹೋದರರೇ! ಆ ಕಾಲದಲ್ಲಿ ಏರ್ಪಟ್ಟ ನಿಬಂಧನೆಗಳನ್ನು ಪರ್ಯಾಲೋಚಿಸಲಾಗಿ, ಪರಷತ್ತಿನವರು ನೆರವೇರಿಸಬೇಕೆಂದು ಕೈಕೊಂಡ ಉದ್ದೇಶಗಳು ಹದಿಮೂರು ಆಗಿದ್ದುವೆಂದು ಕಂಡುಬರುತ್ತದೆ. ಆ ಬಳಿಕ ಇವುಗಳಲ್ಲಿ ಮುಖ್ಯವಾದ ಯಾವ ಬದಲಾವಣೆಗಳೂ ಇಂದಿನವರೆಗೆ ಆಗಿಲ್ಲವೆಂದು ನಾನು ನಂಬುತ್ತೇನೆ. ಇವುಗಳೊಳಗೆ ಹದಿಮೂರನೆಯದು ಉಳಿದುದನ್ನೇ ಸಂಗ್ರಹಿಸಿ ಹೇಳತಕ್ಕುದಾಗಿರುವುದರಿಂದ ಅದನ್ನು ಬಿಟ್ಟುಬಿಟ್ಟರೆ ಸ್ಪಷ್ಟವಾಗಿ ವಿವರಿಸಲಾದ ಹನ್ನೆರಡು ಮಾತ್ರವೇ ಉಳಿಯುವುವು. ಇವುಗಳ ವಿಷಯದಲ್ಲಿ ಕೂಲಂಕಷವಾಗಿ ಮಾತನಾಡಲು ನಾನು ಅಪೇಕ್ಷಿಸುವುದಲ್ಲ; ಆ ವಿಷಯದಲ್ಲಿ ವಿಸ್ತಾರವಾಗಿ ಭಾಷಣ ಮಾಡುವುದಕ್ಕೆ ಬೇಕಾದಷ್ಟು ವರದಿಗಳನ್ನೂ ಪ್ರಕಟನೆಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸುವುದಕ್ಕೆ ಸಾಕಾದಷ್ಟು ಸಮಯವೂ ನನಗೆ ದೊರೆಯಲಿಲ್ಲ. ಆದುದರಿಂದ ಅವುಗಳನ್ನು ಆಮೂಲಾಗ್ರವಾಗಿ ಪರಾಮರ್ಶಿಸಲು ಬೇಕಾದಷ್ಟು ವಿರಾಮವುಳ್ಳವರಿಗೆ ಆ ವಿಷಯಗಳನ್ನು ಪರಿಶೋಧನೆ ಮಾಡಿ ತಮ್ಮ ಅಭಿಪ್ರಾಯಗಳನ್ನು ಅಧಾರಪುರಸ್ಸರವಾಗಿ ನಿರೂಪಿಸುವ ಸಲುವಾಗಿ ಬಿಟ್ಟು, ಒಂದೊಂದು ಉದ್ದೇಶವನ್ನೂ ಕುರಿತು ಸಂಗ್ರಹವಾಗಿ ಕೆಲವು ಮಾತುಗಳನ್ನು ಹೇಳುವೆನು:-
೧. ‘’ಕರ್ಣಾಟಕ ವ್ಯಾಕರಣ, ಕರ್ಣಾಟಕ ಭಾಷಾ ಚಾರಿತ್ರ, ಕರ್ಣಾಟಕ ನಿಘಂಟುಗಳು ಇವುಗಳನ್ನು ಪ್ರೌಢಮಾರ್ಗದಲ್ಲಿ ಬರೆಯಿಸುವುದು ಅಥವಾ, ಹಾಗೆ ಬರೆಯುವವರಿಗೆ ಸಹಾಯ ಮಾಡುವುದು” ಎಂಬುದು ಮೊದಲನೆಯ ಉದ್ದೇಶವು. ಶ್ಲಾಘ್ಯ ರೀತಿಯಿಂದ ಪರಿಷ್ಕೃತವಾಗಿ ಪ್ರಕಟಗೊಂಡಿರುವ ಶಬ್ದಮಣಿದರ್ಪಣ ಮತ್ತು ಪರಿಷತ್ಪತ್ರಿಕೆಯಲ್ಲಿ ಬಂದಿರುವ ಬುಕ್ಕರಾಯ ಚರಿತ್ರೆ (ಹಂಡೇ ಆನಂತಪುರದ ಚರಿತ್ರೆ), ಕರ್ಣಾಟಕ ರಾಜ್ಯ ವೃತ್ತಾಂತ, ಆರ್ಕಾಟು ಸಂಸ್ಥಾನದ ಕೈಯತ್ತು, ಮಹಮ್ಮದ್ ಗವಾನನ ಜೀವನಚರಿತ್ರೆ- ಇವುಗಳನ್ನು ಬಿಟ್ಟರೆ, ಇದಕ್ಕೂ ಹೆಚ್ಚಾಗಿ ಬೇರೆ ಯಾವುದಾದರೂ ಕೆಲಸವು ನಡೆದಿರುವುದೆಂದು ಹೇಳಲು ಸಾಧ್ಯವಿಲ್ಲ.
೨. ‘’ನವೀನಶಾಸ್ತ್ರ ವಿಷಯಕವಾದ ಕರ್ಣಾಟಕ ಗ್ರಂಥಗಳಲ್ಲಿ ಪ್ರಯೋಗಿಸುವುದಕ್ಕೆ ಯೋಗ್ಯವಾದ ಪಾರಿಭಾಷಿಕ ಶಬ್ದಗಳ ನಿಘಂಟುವೊಂದನ್ನು ಪ್ರಕಟಗೊಳಿಸುವಿಕೆ”ಯೇ ಎರಡನೆಯ ಉದ್ದೇಶವು. ಈ ವಿಷಯದಲ್ಲಿ ಕೆಲವು ಕಾಲ ಪರ್ಯಂತ ಪರಿಷತ್ತಿನೊಡನೆ ಸಾಕ್ಷಾತ್ಸಂಬಂಧವುಳ್ಳವರಾಗಿದ್ದ ಶ್ರೀಮಾನ್ ರಾಜಗೋಪಾಲ ಚಕ್ರವರ್ತಿಯವರಿಂದ ರಚಿತವಾಗಿ ಮೈಸೂರು ಸರಕಾರದವರ ಮೂಲಕ ಪ್ರಚುರಗೊಂಡಿರುವ ಕೋಶದ ಹೊರತು ನಾವು ಮಾಡಿದ ಕೆಲಸವೆಂದು ಹೆಮ್ಮೆಗೊಳ್ಳತಕ್ಕ ಮತ್ತಾವುದೂ ಆಗಿರುವುದಿಲ್ಲ,
೩. ‘’ತತ್ತ್ವವಿಚಾರ, ಭೌತಿಕಶಾಸ್ತ್ರ ಚರಿತ್ರೆ ಸಾಹಿತ್ಯ ಇದೇ ಮೊದಲಾದ ವಿಷಯಗಳನ್ನು ಕುರಿತ ಗ್ರಂಥಗಳನ್ನು ಬರೆಯುವುದಕ್ಕೆ ಪ್ರೋತ್ಸಾಹವನ್ನುಂಟು ಮಾಡುವುದು ಮತ್ತು ಅವುಗಳನ್ನು ಪ್ರಕಟಿಸುವುದು” ಈ ಮೂರನೆಯ ಉದ್ದೇಶವು ಸ್ವಲ್ಪ ಮಟ್ಟಿಗೆ ನೆರವೇರಿರುವುದು. ಪರಿಷತ್ತಿನಿಂದ ಪ್ರಕಟಿತವಾದ ‘ಜೇಮ್ಸ್ ಗಾರ್ಫೀಲ್ಡರವರ ಜೀವಿತ ಚರಿತ್ರೆ’ಯು ವಾಸ್ತವವಾಗಿಯೂ ಹೃದಯಂಗಮವೂ ಶ್ಲಾಘ್ಯಯವೂ ಆಗಿರುವುದು. ತತ್ತ್ವಶಾಸ್ತ್ರ ಭೌತಿಕ ಶಾಸ್ತ್ರಗಳ ವಿಷಯವಾಗಿ ಯಾವ ಗ್ರಂಥಗಳೂ ಪ್ರಕಟವಾದಂತೆ ನನಗೆ ತೋರಲಿಲ್ಲ. ಆದರೆ ‘ಕರ್ಣಾಟಕ ವರ್ಣಮಾಲೆಯ ಉತ್ಪತ್ತಿ ಮತ್ತು ಚರಿತ್ರೆ’ ಗಳನ್ನು ಕುರಿತು ಬರೆದ ಎರಡು ಲೇಖನಗಳು ನನ್ನ ದೃಷ್ಟಿಗೆ ಬಿದ್ದಿವೆ. ಇನ್ನು, ಪುಸ್ತಕ ರೂಪದಲ್ಲಿ ಪ್ರಚುರಗೊಳ್ಳದಿದ್ದರೂ ಪತ್ರಿಕೆಯಲ್ಲಿ ಪ್ರಕಟವಾದ ‘ಕನ್ನಡ ಸಾಹಿತ್ಯ ಮತ್ತು ಕವಿಗಳು’ ಮುಂತಾದ ವಿಷಯಕವಾದ ಲೇಖನಗಳು ಕೇವಲ ಹೃದಯಂಗಮವಾಗಿರುವುದೆಂದು ನಾನು ಹೇಳದಿರಲಾರೆನು.
೪. ‘’ಕರ್ಣಾಟಕ ಭಾಷೆಗೂ ಕರ್ಣಾಟಕ ಗ್ರಂಥಗಳಿಗೂ ಸಂಬಂಧಪಟ್ಟ ವಿವಿಧ ಚರ್ಚ್ಯಾಂಶಗಳನ್ನು ವಿಚಾರ ಪೂರ್ವಕವಾಗಿ ವ್ಯವಸ್ಥೆ ಮಾಡುವುದು” ಎಂಬುದು ನಾಲ್ಕನೆಯ ಉದ್ದೇಶವು. ಇದಕ್ಕನುಗುಣವಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯದ ವಿಷಯವಾಗಿ ಅನೇಕ ಚರ್ಚೆಗಳೂ ಸಿದ್ಧಾಂತಗಳೂ ಆಗಾಗ ಪರಿಷತ್ಪತ್ರಿಕೆಯಲ್ಲಿ ಮುದ್ರಿತವಾಗುತ್ತಲಿರುವುದು ಶುಭ ಪ್ರಾರಂಭವೇ ಸರಿ. ಈ ವಿಷಯದಲ್ಲಿ ನೃಪತುಂಗ, ಲಕ್ಷ್ಮೀಶ ಮುಂತಾದ ಸುಪ್ರಸಿದ್ಧ ಗ್ರಂಥಕರ್ತರ ಮತ್ತು ಅವರ ಗ್ರಂಥಗಳ ವಿಷಯವಾದ ಪ್ರೌಢಲೇಖನಗಳೇ ನಿದರ್ಶನವಾಗಿರುವುವು.
೫. ‘’ಇತರ ಭಾಷೆಯಲ್ಲಿರುವ ಉತ್ತಮ ಗ್ರಂಥಗಳನ್ನು ಕನ್ನಡಿಸಿ ಪ್ರಕಟಿಸುವುದು” ಎಂಬ ಐದನೆಯ ಉದ್ದೇಶವು ಭಾಸ ಮಹಾಕವಿಯ ‘ದೂತವಾಕ್ಯ’ವೆಂಬ ಏಕಾಂಕ-ನಾಟಕವನ್ನು ಕನ್ನಡಿಸಿ ಪ್ರಚುರಗೊಳಿಸಿರುವುದರ ಮೂಲಕ ನಿರ್ವರ್ತಿತವಾದಂತೆ ಭಾವಿಸಬೇಕಾಗಿರುವುದು.
೬. “ಉತ್ಕೃಷ್ಟವಾದ ಪ್ರಾಚಿನ ಕಾವ್ಯಗಳನ್ನೂ ಕನ್ನಡ ಸಂಸ್ಥಾನಗಳ ಚರಿತ್ರೆಗಳನ್ನೊಳಕೊಂಡಿರುವ ಗ್ರಂಥಗಳನ್ನೂ ಕ್ರೋಢೀಕರಿಸಿ ಅವುಗಳನ್ನು ಪರಿಷ್ಕರಿಸಿ ಪ್ರಕಟಿಸುವುದು; ಮತ್ತು ಕನ್ನಡ ನಾಡುಗಳ ಪೂರ್ವಸ್ಥಿತಿಯನ್ನು ವಿಶದಗೊಳಿಸುವ ವಸ್ತುಗಳನ್ನು ಸಂಗ್ರಹಿಸಿ, ಅವುಗಳನ್ನಿಡುವುದಕ್ಕಾಗಿ ವಸ್ತು ಸಂಗ್ರಹಾಲಯವೊಂದನ್ನು ಏರ್ಪಡಿಸುವುದು”- ಇದು ಆರನೆಯ ಉದ್ದೇಶವು. ಈ ಉದ್ದೇಶವು ಪುರಾತನ ಚರಿತ್ರೆಗಳ ದೊಡ್ಡದಾದ ಪಟ್ಟಿಯೊಂದನ್ನು ಪರಿಷತ್ಪತ್ರಿಕೆಯಲ್ಲಿ ಪ್ರಕಟಗೊಳಿಸುವಿಕೆ ಮತ್ತು ಪಂಪ ರಾಮಾಯಣವನ್ನು ಶ್ಲಾಘ್ಯ ರೀತಿಯಿಂದ ಪರಿಷ್ಕರಿಸಿ ಟಿಪ್ಪಣದೊಂದಿಗೆ ಪ್ರಕಟಗೊಳಿಸುವಿಕೆಗಳಿಂದ ಮಾತ್ರವೇ ನೆರವೇರಿದಂತೆ ಭಾವಿಸಬೇಕಾಗಿರುವುದು. ಇದಲ್ಲದೆ, ‘ಬುಕ್ಕರಾಯ ಚರಿತ್ರೆ’ ಮತ್ತು ‘ಕರ್ಣಾಟಕ ರಾಜ್ಯ ವೃತ್ತಾಂತಗಳೆಂಬ ವಿಜಯನಗರ ಸಾಮ್ರಾಜ್ಯದ ಅಂತ್ಯಕಾಲದ ಅಸಮಗ್ರ ಚರಿತ್ರೆಗಳ ವಿಷಯವನ್ನು ನಾನು ಹಿಂದೆಯೇ ಸೂಚಿಸಿರುವೆನು. ಇನ್ನು ಯಾವ ವಸ್ತು ಪ್ರದರ್ಶನ ಶಾಲೆಯೂ ಇದುವರೆಗೆ ಸ್ಥಾಪಿತವಾದಂತೆ ನನಗೆ ತೋರಲಿಲ್ಲ; ಅದು ಅಷ್ಟೊಂದು ಸುಲಭ ಸಾಧ್ಯವೂ ಅಲ್ಲ.
೭. “ಕರ್ಣಾಟಕ ಭಾಷಾಸಂಸ್ಕರಣ ಕರ್ಣಾಟಕ ಗ್ರಂಥಾಭಿವೃದ್ಧಿಗಳನ್ನು ಕುರಿತು ಪಂಡಿತರಿಂದ ರಚಿತವಾದ ಉಪನ್ಯಾಸಗಳನ್ನೊಳಗೊಂಡ ಪತ್ರಿಕೆಯನ್ನು ಪ್ರಕಟಿಸುವುದು” ಎಂಬುದು ಏಳನೆಯ ಉದ್ದೇಶವು. ಈ ಕಾರ್ಯವು ಸಮರ್ಪಕವಾಗಿ ನೆರವೇರಿರುವುದು ಮಾತ್ರವಲ್ಲದೆ ಪರಿಷತ್ಪತ್ರಿಕೆಯು ಸಾಹಿತ್ಯ ವಿಷಯಕವಾದ ಉತ್ತಮ ಲೇಖನಗಳ ವಿಷಯದಲ್ಲಿಯೂ ಅಂದವಾದ ಮುದ್ರಣದ ವಿಷಯದಲ್ಲಿಯೂ ಇತರ ಪತ್ರಿಕಾಧಿಪತಿಗಳಿಗೆ ಆದರ್ಶಪ್ರಾಯವಾಗಿರುವುದೆಂದು ಕೂಡ ನಾನು ಅಭಿಮಾನಪುರಸ್ಸರವಾಗಿ ಹೇಳುವೆನು. ಮತ್ತು ಪರಿಷತ್ಪತ್ರಿಕೆಯು ಆಚಂದ್ರಾರ್ಕವಾಗಿ ಪುರೋಭಿವೃದ್ಧಿಯನ್ನು ಪಡೆದು ಜಯಶೀಲವಾಗಿ ಮೆರೆಯಲೆಂದು ಹಾರೈಸುವೆನು.
೮. “ಸ್ವಂತ ವೆಚ್ಚದಿಂದ ಶ್ರೇಷ್ಠವಾದ ಸ್ವವಿರಚಿತ ಗ್ರಂಥಗಳನ್ನು ಮುದ್ರಣಗೊಳಿಸುವ ಗ್ರಂಥಕರ್ತರಿಗೆ ಸಂಭಾವನೆಗಳನ್ನೂ ಬಿರುದುಗಳನ್ನೂ ಪರಿಷತ್ತಿನಿಂದ ಕೊಡುವಿಕೆ”ಯೇ ಎಂಟನೆಯ ಉದ್ದೇಶವು. ಈ ಉದ್ದೇಶವು ಪರಿಷತ್ತಿಗೂ ಗ್ರಂಥಕಾರರಿಗೂ ನಿಕಟವಾದ ಸಂಬಂಧವನ್ನು ಕಲ್ಪಿಸತಕ್ಕದಾಗಿರುವ ಕಾರಣ ಇದೊಂದು ಶ್ಲಾಘ್ಯವೂ ಮುಖ್ಯವೂ ಎನಿಸಿದ ವಿಷಯವಾಗಿರುವುದು. ದ್ರವ್ಯಾನುಕೂಲತೆಗೆ ತಕ್ಕಂತೆ ಸಾಧ್ಯವಾದ ಮಟ್ಟಿಗೂ ಪರಿಷತ್ತಿನವರು ಈ ಕಾರ್ಯವನ್ನು ಚೆನ್ನಾಗಿಯೇ ನೆರವೇರಿಸುತ್ತಲಿರುವರು. ಆದರ ಭಾಷಾವಿಶಾರದರು, ನಾಟಕ ಪ್ರಣೀತರು, ಚಿತ್ರಗಾರರು, ನಟರು, ಗೀತ ಕಲಾವಿಶಾರದರು ಮುಂತಾದ ವಿವಿಧ ಕಲಾವಿಶಾರದರಿಗೆ ಅವರವರ ಯೋಗ್ಯತಾನುಸಾರ ಉಚಿತವಾದ ಬಿರುದನ್ನೋ ಪ್ರಶಸ್ತಿ ಪತ್ರಿಕೆಯನ್ನೋ ಕೊಡುವ ವಿಷಯದಲ್ಲಿ ಇದುವರೆಗೆ ಯಾವ ವಿಧವಾದ ಪ್ರಯತ್ನವನ್ನೂ ಕೈಕೊಂಡಂತಿಲ್ಲ. ನಮ್ಮ ಸಂಸ್ಥೆಯು ಈಗ ಉಜ್ಜೀವಿತವಾಗಿ ಸರ್ವತೋಮುಖವಾದ ಅಭಿವೃದ್ಧಿಯನೈದಿರುವ ಕಾರಣ ಈ ವಿಷಯದಲ್ಲಿ ನಾವು ಇತಃ ಮುಂದುವರಿಯಬಹುದೆಂದು ಊಹಿಸುತ್ತೇನೆ. ವಾಸ್ತವಿಕವಾದ ಅಥವಾ, ಆರೋಪಿತವಾದ ತಮ್ಮ ಯೋಗ್ಯತೆಯ ಅಭಿನಂದನಾರ್ಥವಾಗಿ ನಮ್ಮ ಕನ್ನಡಿಗರು ಬಂಗಾಳ ಅಥವಾ ಪಂಜಾಬು ದೇಶಗಳ ಕಡೆಗೆ ನೋಡಬೇಕಾದ ಪ್ರಮೇಯವು ನನಗೆ ತೋರಲಿಲ್ಲ. ಭಾಷಾಗಂಧವನ್ನೇ ಅರಿಯದ ವಿದೇಶೀಯ ಸಂಸ್ಥೆಗಳಲ್ಲಿ ಪಡೆಯಬಹುದಾದ ಪ್ರಶಸ್ತಿಗಳಿಗಿಂತಲೂ ಪರಿಷತ್ತಿನಿಂದ ದೊರೆಯುವ ಪ್ರಶಸ್ತಿಗಳಲ್ಲಿ ಲೋಕಕ್ಕೆ ಅಧಿಕವಾಗಿ ಭರವಸೆಯು ಇರುವುದೆಂದು ನಾನು ನಂಬುಗೆಯಾಗಿ ಹೇಳಬಲ್ಲೆನು. ಆದರೆ ಈ ಏರ್ಪಾಡು ಯಾವುದೋ ಒಂದು ಮೂಲೆಯ ನಾಲ್ಕಾರು ಮಂದಿಯ ಕೈಯಲ್ಲಿ ಮಾತ್ರವೇ ಇರದೆ ಸಮಗ್ರ ಕರ್ಣಾಟಕ ದೇಶದ ಜನರ ವಿಶ್ವಾಸಕ್ಕೂ ಗೌರವಕ್ಕೂ ಪಾತ್ರವಾಗುವಂತಿರಬೇಕು. ಇದೇ ಅಧಿವೇಶನದಲ್ಲಿಯೇ ಸಾಧ್ಯವಲ್ಲದಿದ್ದರೂ ಸಮ್ಮೇಳನದ ಉಪಸಂಹಾರಾನಂತರದಲ್ಲಿ ನಡೆಯುವ ವಾರ್ಷಿಕ ಸಭೆಯಲ್ಲಿಯಾದರೂ ಚೆನ್ನಾಗಿ ಚರ್ಚಿಸಿ ಈ ವಿಷಯದಲ್ಲಿ ಒಂದು ವಿಧವಾದ ಸಿದ್ಧಾಂತವನ್ನು ಸ್ಥಿರಪಡಿಸಬೇಕೆಂದು ಸೂಚಿಸುವೆನು.
೯. “ಕರ್ಣಾಟಕ ಭಾಷೆಗೂ ಸಾಹಿತ್ಯಕ್ಕೂ ಸಂಬಂಧಪಟ್ಟ ಅಪೂರ್ವ ವಿಷಯಗಳನ್ನು ಪರಿಶೋಧಿಸುವಲ್ಲಿ ನಿರತವಾಗುವ ವಿದ್ವಾಂಸರಿಗೆ ಪಂಡಿತ ವೇತನಗಳನ್ನು ಕೊಡುವಿಕೆ ಎಂಬೀ ಒಂಬತ್ತನೆಯ ಉದ್ದೇಶವು, ವಿಶೇಷ ದ್ರವ್ಯ ಸಾಧ್ಯವಾದ ಪ್ರಯುಕ್ತ, ಇನ್ನೂ ಕೆಲವು ವರ್ಷಗಳವರೆಗೆ ಕೈಕೊಳ್ಳಲು ಬರುವಂತಿಲ್ಲ.
೧0. “ಕರ್ಣಾಟಕ ಭಾಷೋನ್ನತಿಗೂ ಕರ್ಣಾಟಕ ಗ್ರಂಥಾಭಿವೃದ್ಧಿಗೂ ಸಂಬಂಧಪಡುವ ವಿಷಯಗಳನ್ನು ಆ ಆ ಸರ್ಕಾರದವರ ಪರಾಮರ್ಶಕ್ಕೆ ತಂದು ಅವನ್ನು ತೃಪ್ತಿಕರವಾಗಿ ವ್ಯವಸ್ಥೆ ಪಡಿಸಿಕೊಳ್ಳುವುದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡುವುದು”- ಇದು ಹತ್ತನೆಯ ಉದ್ದೇಶವು. ಪರಿಷತ್ತಿನವರು ಈ ಕಾರ್ಯವನ್ನು ಕೈಕೊಂಡಿರುವುದು ಮಾತ್ರವಲ್ಲದೆ ನಿರೀಕ್ಷಣೆಗಿಂತಲೂ ಅತಿಶಯವಾಗಿಯೇ ಇದನ್ನು ಕುರಿತು ಕೆಲಸಮಾಡಿ, ಕರ್ಣಾಟಕ ಶಿಕ್ಷಣದ ವಿಷಯದಲ್ಲಿಯೂ ಕನ್ನಡಿಗರ ಆಡಚಣೆಗಳನ್ನು ಹೋಗಲಾಡಿಸುವ ವಿಷಯದಲ್ಲಿಯೂ ದೇಶೀಯ ಸಂಸ್ಥಾನಗಳಲ್ಲಿ ಮಾತ್ರವಲ್ಲದೆ ಬ್ರಿಟಿಷ್ ಇಂಡಿಯಾದಲ್ಲಿಯೂ ತಕ್ಕ ಅಧಿಕಾರಿಗಳಲ್ಲಿ ಅರಿಕೆಮಾಡಿ ಕೊಂಡಿರುವರು. ಇಷ್ಟೊಂದನ್ನು ಮಾಡಿಯೂ ಫಲ ಪರಿಣಾಮವು ಏಕರೂಪವಾಗಿರದಿದ್ದರೆ, ಅದು ಪರಿಷತ್ತಿನ ಲೋಪವೆನ್ನುವಂತಿಲ್ಲ. ಇಷ್ಟು ಮಾತ್ರದಿಂದಲೇ ನಾವು ಎದೆಗುಂದಿ ಹಿಂಜರಿಯಬಾರದು. ಪರಿಷತ್ತಿನ ಮುಖ್ಯಾಧಿಕಾರಿಗಳು ಈ ಉದ್ದೇಶವು ನೆರವೇರುವವರೆಗೂ ಚೆನ್ನಾಗಿ ಪರಿಶ್ರಮವನ್ನು ವಹಿಸಿ ಅದನ್ನು ನಡೆಯಿಸದಿರಲಾರರೆಂಬ ಭರವಸೆಯು ನನಗೆ ದೃಢವಾಗಿರುವುದು. ಮೈಸೂರು ಶ್ರೀಮನ್ಮಹಾರಾಜಾ ಸರಕಾರದವರು ಕೆಲವು ಅಂತಸ್ತಿನವರೆಗೆ ಕನ್ನಡವನ್ನೇ ವ್ಯಾವಹಾರಿಕ ಮತ್ತು ರಾಜಕೀಯ ಭಾಷೆಯಾಗಿ ಉಪಯೋಗಿಸುವಂತೆ ಇತ್ತಲಾಗೆ ಅಪ್ಪಣೆ ಕೊಡಿಸಿರುತ್ತಾರೆ, ಈ ವಿಷಯದಲ್ಲಿ ನಮ್ಮೆಲ್ಲರ ಮನಃಪೂರ್ವಕವಾದ ಕೃತಜ್ಞತೆಯು ಆ ಸರಕಾರದವರಿಗೆ ಸಲ್ಲತಕ್ಕುದಾಗಿದೆ.
೧೧ ಮತ್ತು ೧೨. “ಕರ್ಣಾಟಕದ ಸಕಲ ಪ್ರಾಂತಗಳಲ್ಲಿಯೂ ವಾಚನಾಲಯಗಳನ್ನೂ ಪುಸ್ತಕಭಂಡಾರಗಳನ್ನೂ ಸ್ಥಾಪಿಸುವಿಕೆ” ಮತ್ತು “ಕನ್ನಡನಾಡುಗಳ ಪ್ರಮುಖರುಗಳು ಸಮ್ಮೇಳನಗಳನ್ನು ಆಗಾಗ ಏರ್ಪಡಿಸುವುದು ಮತ್ತು ಸಮರ್ಥರಾದ ವಿದ್ವಾಂಸರಿಂದ ಉಪನ್ಯಾಸಗಳನ್ನು ಕೊಡಿಸುವಿಕೆ” ಎಂಬಿವು ಹನ್ನೊಂದನೆಯ ಮತ್ತು ಹನ್ನೆರಡನೆಯ ಉದ್ದೇಶಗಳಾಗಿವೆ. ಈ ವಿಷಯಗಳಲ್ಲಿ ಪರಿಷತ್ತಿನವರು ಇದುವರೆಗೂ ವಿಶೇಷವಾಗಿ ತಕ್ಕಷ್ಟು ಪ್ರಯತ್ನಗಳನ್ನು ನಡೆಯಿಸಿದಂತೆಯೇ ತೋರಲಿಲ್ಲ. ಈ ಉದ್ದೇಶಗಳನ್ನು ನೆರವೇರಿಸುವ ಸಲುವಾಗಿ ಕೂಡಲೆ ತಕ್ಕ ಪ್ರಯತ್ನಗಳನ್ನು ಕೈಕೊಂಡು ಪರಿಷತ್ಪತ್ರಿಕೆಯ ಪ್ರತಿಯೊಂದು ಸಂಚಿಕೆಯಲ್ಲಿಯೂ ಅದರ ಫಲಿತಾಂಶವನ್ನು ಕನ್ನಡಿಗರಿಗೆ ತಿಳಿಯಪಡಿಸಬೇಕೆಂದು ನಾನು ಒತ್ತಿ ಒತ್ತಿ ಹೇಳುವೆನು.
ಸಮ್ಮೇಳನದ ನಿರ್ಣಯಗಳು ಏನಾದವು?
ಈಗಲಿನ್ನು, ಹಿಂದೆ ಹತ್ತು ವರ್ಷಗಳಿಂದ ನಡೆದ ಸಮ್ಮೇಳನಗಳಲ್ಲಿ ನಿರ್ಣೀತವಾದ ನಿಬಂಧನೆಗಳಲ್ಲಿ ಯಾವ ಯಾವುವು ಎಷ್ಟರಮಟ್ಟಿಗೆ ನೆರವೇರಿರುವುವು ಎಂಬುದನ್ನು ನನಗೆ ತಿಳಿದಮಟ್ಟಿಗೆ ತಿಳಿಸಬೇಕೆಂದು ಅಪೇಕ್ಷಿಸುವೆನು. ಆದರೆ ಅವುಗಳಲ್ಲಿ ಮುಖ್ಯ ಮುಖ್ಯವಾದ ವಿಷಯಗಳನ್ನು ಮಾತ್ರವೇ ಸಂಗ್ರಹವಾಗಿ ವಿವರಿಸುವೆನು. “ಆಧುನಿಕ ಕವಿಗಳು, ಗ್ರಂಥಕಾರರು ಮತ್ತು ಗ್ರಂಥಪ್ರಚಾರಕರಲ್ಲಿ ಪ್ರಮುಖರಾದವರ ಜೀವನ ಚರಿತ್ರೆಗಳನ್ನು ಸಂಗ್ರಹಿಸಿ ಪುನರ್ಮುದ್ರಣ ಮಾಡಿಸುವಿಕೆ” ಎಂಬ ವಿಷಯವು ಬಿಜಾಪುರದಲ್ಲಿ ನಡೆದ (ಕಳೆದ ಒಂಬತ್ತನೆಯ) ಸಮ್ಮೇಳನದಲ್ಲಿ ನಿರ್ಣೀತವಾಯಿತು. (ಸಾಧ್ಯವಾದರೆ ಅವರವರ ಭಾವಚಿತ್ರಗಳೊಂದಿಗೆ ಪ್ರಕಟಗೊಳಿಸುವುದು ಮಾತ್ರವಲ್ಲದೆ ಬೇರೆ ಯಾವ ವಿಧವಾದ ಕಾರ್ಯವೂ ನಡೆದಂತೆ ತೋರಲಿಲ್ಲ. ಅದಕ್ಕಿಂತಲೂ ಮುಂಚಿತವಾಗಿ ದಾವಣಗೆರೆಯಲ್ಲಿ ನಡೆದ (೮ನೆಯ) ಸಮ್ಮೇಳನದಲ್ಲಿ “ಕನ್ನಡಿಗರಲ್ಲಿ ಐಕಮತ್ಯವು ಹೆಚ್ಚುವ ಸಲುವಾಗಿ ಕರ್ಣಾಟಕದ ಮಹಾಪುರುಷರ ಗೌರವಾರ್ಥವಾದ ಉತ್ಸವಗಳನ್ನು ಕರ್ಣಾಟಕದ ಸಮಸ್ತ ಭಾಗಗಳಲ್ಲಿಯೂ ಪ್ರತಿವರ್ಷವೂ ನಡೆಯಿಸಬೇಕು” ಎಂಬುದಾಗಿ ನಿರ್ಣೀತವಾಗಿದ್ದಿತು. “ಈ ತೀರ್ಮಾನವು ಪರಿಷತ್ಪತ್ರಿಕೆಯಲ್ಲಿಯೂ ಇನ್ನು ಕೆಲವು ವರ್ತಮಾನ ಪತ್ರಿಕೆಗಳಲ್ಲಿಯೂ ಪ್ರಕಟಗೊಳಿಸಲಾಗಿದೆ” ಎಂದು ಮಾತ್ರವೇ ದುಂದುಭಿ ಸಂಘವತ್ಸರ ವಾರ್ಷಿಕ ವರದಿಯಲ್ಲಿ ಹೇಳಿದೆ. ಈ ವಿಷಯದಲ್ಲಿ ಪರಿಷತ್ತಿನವರು ನಡೆಯಿಸಿದ ಪ್ರಯತ್ನಕ್ಕಿಂತಲೂ ಅವರು ತೋರಿದ ಔದಾಸೀನ್ಯವೇ ಅಧಿಕವಾಗಿರುವುದೆಂದೂ, ಪರಿಷತ್ತಿನ ಕಾರ್ಯನಿರ್ವಾಹಕ ಮಂಡಲಿಗೆ ಇದು ಗೌರವಾರ್ಹವಲ್ಲವೆಂದೂ ನನಗೆ ತೋರುವುದು. ಪರಿಷತ್ತು ಇಂತಹ ಸೂಚನೆಗಳನ್ನು ಮಾತ್ರ ಮಾಡಬಲ್ಲುದೇ ವಿನಾ ಅದಕ್ಕೆ ಕನ್ನಡ ಮಹಾಜನರ ಮೇಲೆ ಅಧಿಕಾರವಿಲ್ಲವೆಂಬುದನ್ನು ನಾನು ಒಪ್ಪಿಕೊಳ್ಳುವೆನು. ಆದರೆ ಪರಿಷತ್ತಿನ ಆಶ್ರಯದಲ್ಲಿಯೇ ಸಾರ್ವಜನಿಕವಾಗಿ ಇಂತಹ ಉತ್ಸವಗಳನ್ನು ನಡೆಯಿಸಬಾರದಾಗಿದ್ದಿತೇ? ನೂರಾರು ಪತ್ರಿಕೆಗಳಲ್ಲಿ ನೂರಾರು ಪ್ರಕಟಣೆಗಳನ್ನು ಹಾಕಿಸುವುದಕ್ಕಿಂತಲೂ ಈ ಉತ್ಸವಗಳನ್ನು ಇವರೇ ನಡೆಯಿಸಿದ್ದ ಪಕ್ಷದಲ್ಲಿ ಅವು ಜನರ ಲಕ್ಷ್ಯವನ್ನು ಮತ್ತಷ್ಟು ಹೆಚ್ಚಾಗಿ ಆಕರ್ಷಿಸುತ್ತಿರಲಿಲ್ಲವೇ? ಈ ಲೋಪವನ್ನು ಪರಿಷತ್ ಅಧಿಕಾರಿಗಳು ಕೂಡಲೇ ಸವರಿಸುವರೆಂದೂ, ಇತಃಪರ ಇಂತಹ ಉತ್ಸವಗಳಲ್ಲಿ ಭಾಗಿಗಳಾಗುವ ಭಾಗ್ಯವು ನಮ್ಮೆಲ್ಲರಿಗೂ ದೊರೆಯುವುದೆಂದೂ ನಾನು ನಂಬುತ್ತೇನೆ. ಇನ್ನು, “ವಿಜಯನಗರ ಸಾಮ್ರಾಜ್ಯಕ್ಕೆ ರಾಜಧಾನಿಯಾಗಿದ್ದ ಪಂಪಾಕ್ಷೇತ್ರದ ಜೀರ್ಣೋದ್ಧಾರ” ವಿಷಯವೂ ಆ ಸಮ್ಮೇಳನದಲ್ಲಿಯೇ ನಿರ್ಣಯವಾಗಿದ್ದಿತು. ಆದರೆ ದ್ರವ್ಯಾನುಕೂಲತೆಯಿಲ್ಲದ ಕಾರಣ ಈ ಕಾರ್ಯವು ನೆರವೇರಲಿಲ್ಲವೆಂಬುದು ಪರಿಷತ್ತಿನ ವಾರ್ಷಿಕ ವರದಿಯಿಂದ ತಿಳಿಯೆ ಬರುವುದು. ಕ್ಷೇತ್ರದ ಮಹಿಮೆಯನ್ನೂ ನಡೆಯಬೇಕಾದ ‘ಕಾಮಗಾರಿ’ಗಳ ವಿವರವನ್ನೂ ಬರೆಯುವ ಸಲುವಾಗಿ ಪರಿಮಿತವಾದ ಸದಸ್ಯರನ್ನೊಳಗೊಂಡ ಒಂದು ಉಪಸಭೆಯನ್ನು ಏರ್ಪಡಿಸಿ ಆ ಉಪಸಭೆಗೆ ಈ ಕಾರ್ಯವನ್ನು ವಹಿಸಿದ್ದ ಪಕ್ಷದಲ್ಲಿ ಸ್ವಲ್ಪಮಟ್ಟಿಗಾದರೂ ಈ ಕಾರ್ಯವು ನೆರವೇರದೆ ಇರುತ್ತಿರಲಿಲ್ಲ. ಪರಿಷತ್ಪತ್ರಿಕೆಯಲ್ಲಿಯೇ ಆಗಲಿ ಅಥವಾ ಇತರ ವಾರ್ತಾಪತ್ರಿಕೆಗಳಲ್ಲಿಯೇ ಆಗಲಿ ಪ್ರಕಟಿಸುವ ಮೂಲಕ ಸ್ವಲ್ಪಮಟ್ಟಿಗಾದರೂ ಹಣವು ಸಂಗ್ರಹವಾಗದಿದ್ದ ಬಳಿಕ ಕಾರ್ಯಸಾಧನೆಗೆ ಸಾಕಾಗುವಷ್ಟು ದ್ರವ್ಯವನ್ನು ಸಂಗ್ರಹಿಸುವ ಭರವಸೆಯ ತಾನೇ ಎತ್ತಣದು?
ಬಂಡವಾಳ ಸಂಗ್ರಹಿಸುವ ಯೋಜನೆ
ಇನ್ನು ಇತರ ಚಿಲ್ಲರೆ ವಿಷಯಗಳನ್ನೂ ಕನ್ನಡದಲ್ಲಿ ವಿಶ್ವಕೋಶವನ್ನು ಬರೆಯಿಸುವಿಕೆಯೇ ಮಂತಾದ, ಪ್ರಕೃತದಲ್ಲಿ ನಮ್ಮ ಶಕ್ತಿಗೆ ಸಾಧ್ಯವಲ್ಲದ ಒಂದೆರಡು ವಿಷಯಗಳನ್ನೂ ಬಿಟ್ಟು, ಕನ್ನಡ ಗ್ರಂಥಗಳನ್ನು ಮುದ್ರಿಸುವ ಸೌಕರ್ಯಾರ್ಥವಾಗಿ ಸುಮಾರು ಐವತ್ತು ಸಾವಿರ ರೂಪಾಯಿಗಳ ಬಂಡವಾಳದಿಂದ ದೊಡ್ಡದಾದ ಒಂದು “ಜಾಯಿಂಟ್ ಸ್ಟಾಕ್ ಕಂಪನಿ” ಯನ್ನು ಸ್ಥಾಪಿಸಬೇಕೆಂದಿದ್ದ ಪರಿಷತ್ತಿನ ಮತ್ತೊಂದು ಉದ್ದೇಶವು ನಾವೆಲ್ಲರೂ ಆವಶ್ಯಕವಾಗಿ ಗಮನಿಸತಕ್ಕುದಾಗಿರುವುದು. ‘ಈ ವಿಷಯದಲ್ಲಿ ಮಹಾಜನರ ಮೂಲಕ ಸಾಕಾದಷ್ಟು ಪ್ರೋತ್ಸಾಹವು ದೊರೆಯದ ಕಾರಣ ಪ್ರಕೃತದಲ್ಲಿ ಈ ವಿಷಯವನ್ನು ಮಾನಸಿಕ ಮಾಡಲಾಯಿತು’ ಎಂಬುದಾಗಿ ವಾರ್ಷಿಕ ವರದಿಯಿಂದ ತಿಳಿದುಬರುವುದು. ಆದರೆ ಮಹಾಜನರ ಸಹಾಯವನ್ನು ಪಡೆಯುವ ಸಲುವಾಗಿ ಈ ವಿಷಯದಲ್ಲಿ ನಡೆಯಿಸಿದ ಪ್ರಯತ್ನಗಳಾದರೂ ಯಾವುವು? ಎಂಬುದೇ ನನ್ನ ಪ್ರಶ್ನೆ. ಸಹಕಾರ ಸಂಘಗಳ ನಿಬಂಧನೆಗಳನ್ನನುಸರಿಸಿ ಕೆಲವು ಮಂದಿ ಚಂದಾದಾರರನ್ನು ಕೂಡಿಸಿ ಪರಿಷತ್ತಿನ ಹೆಸರಿನಲ್ಲಿ ಒಂದು ಚಿಕ್ಕ ಮುದ್ರಣಾಲಯದಲ್ಲಿ ಮುದ್ರಿಸುವುದಾದರೆ ಅವರಿಗೆ ವಿಶೇಷವಾದ `ರಿಯಾಯಿತಿ’ಯನ್ನು ತೋರುವುದಾಗಿಯೂ ಸೂಚಿಸಿದರಾದರೆ ಈ ಉದ್ದೇಶವು ಕೈಗೂಡದಿರದೆಂದುದು ನನ್ನ ಭಾವನೆ. ಆದುದರಿಂದ ಈ ವಿಷಯವನ್ನೂ ಮರಳಿ ವಿಮರ್ಶಿಸಬೇಕೆಂದು ಸೂಚಿಸುವೆನು.
ಪರಿಷತ್ತಿನ ಪದಾಧಿಕಾರಿಗಳನ್ನು ಗಮನಿಸಿ
ಮಹಾಶಯರೇ! ಹೀಗೆ ಈ ಪರಿಷತ್ತು ಸ್ಥಾಪಿತವಾದ ಮೊದಲ್ಗೊಂಡು ಹತ್ತು ವರ್ಷಗಳಿಂದಲೂ ಸಮರ್ಪಕವಾಗಿ ಕೆಲಸ ಮಾಡಿರುವುದು; ಮತ್ತು ಪರಿಷತ್ತಿನ ಉಪಾಧ್ಯಕ್ಷರೂ ಕಾರ್ಯದರ್ಶಿಗಳೂ ಇತರ ಗೌರವಾಧಿಕಾರಿಗಳೂ ಅನೇಕವೇಳೆ ಹಲವು ವಿಧವಾದ ಕ್ಲೇಶಗಳಿಗೆ ಗುರಿಯಾಗಿದ್ದರೂ ಅವುಗಳನ್ನು ಲೆಕ್ಕಿಸದೆ ಎಷ್ಟೋ ಸಲ, ಮಾಡುವ ಕೆಲಸದ ಸುಳಿವು ಕೂಡ ಹೊರಗಿನವರಿಗೆ ತಿಳಿಯದಂತೆ ಸಭೆಯ ಮೇಲ್ಮೆಗಾಗಿ ವಿಶೇಷವಾದ ಪರಿಶ್ರಮವನ್ನು ವಹಿಸುವುದಕ್ಕಾಗಿ ನಾವೆಲ್ಲರೂ ಅಂತಃಕರಣಪೂರ್ವಕವಾದ ನಮ್ಮ ಕೃತಜ್ಞತೆಯನ್ನು ಅವರಿಗೆ ಆರ್ಪಿಸಬೇಕಾಗಿರುವುದು. ಪುರೋಭಾಗಿಗಳಾದ ಕೆಲವರು. “ಇನ್ನೂ ಸಮರ್ಪಕವಾದ ರೀತಿಯಿಂದ ಕೆಲಸಮಾಡಲು ಸಾಧ್ಯವಾಗಿರಲಿಲ್ಲವೆ?”- ಎಂದು ಕೇಳಬಹುದು. ಆದರೆ, ಇಂತಹ ಮಹತ್ತರವಾದ ರಾಷ್ಟ್ರೀಯ ಕಾರ್ಯಗಳಲ್ಲಿ ಮುಂದೆ ಬಂದು ಕೆಲಸ ಮಾಡುವವರ ವಿಷಯದಲ್ಲಿ ದೋಷಗಳನ್ನು ಕಂಡುಹಿಡಿಯುವುದು ಸುಲಭ; ಶ್ರಮವನ್ನು ವಹಿಸಿ ಕೆಲಸಮಾಡುವುದು ಕಷ್ಟ. ಅದಕ್ಕೆ ಮೊದಲೂ ಏನೊಂದೂ ಇಲ್ಲದಿರುತ್ತ, ಕಳೆದ ಹತ್ತು ವರ್ಷಗಳಲ್ಲಿ ಸಾವಿರಾರು ಗ್ರಂಥಗಳನ್ನೊಳಗೊಂಡ ಒಂದು ಭಂಡಾರವನ್ನು ಸ್ಥಾಪಿಸಿ, ಅತ್ಯುತ್ತಮ ವರ್ಗಕ್ಕೆ ಸೇರಿದ ಒಂದು ತ್ರೈಮಾಸಿಕ ಪತ್ರಿಕೆಯನ್ನು ಪ್ರಕಟಗೊಳಿಸುತ್ತ, ಕೆಲವು ಪ್ರೌಢ ಗ್ರಂಥಗಳನ್ನು ಪರಿಷ್ಕರಿಸಿ, ಪ್ರಕಾಶಮಾಡಿ, ಪ್ರತಿವರ್ಷವೂ ಕನ್ನಡ ಪ್ರಾಂತದ ಬೇರೆಬೇರೆ ಕಡೆಗಳಲ್ಲಿ ಉತ್ಸಾಹಭರಿತರೂ ಭಾಷಾಭಿಮಾನಿಗಳೂ ಆದ ಸಾವಿರಾರುಮಂದಿ ಕನ್ನಡಿಗರನ್ನು ಒಟ್ಟುಗೂಡಿಸಿ ಪರಿಷತ್ ಅಧಿಕಾರಿಗಳು ಸಮ್ಮೇಳಗಳನ್ನು ನಡೆಯಿಸುತ್ತಿರುವರು.
ಸಹೋದರರೇ! ತಮ್ಮನ್ನೇ ಪ್ರಶ್ನೆಮಾಡುವೆನು:- ಬೇರೆ ಬೇರೆ ಭಾಗಗಳಿಗೆ ಸೇರಿದವರಾದರೂ ಕನ್ನಡಿಗರೆಲ್ಲರೂ ಒಂದೇ ಪಂಗಡದವರು. ಅವರ ಅಭಿಸಂಧಿಗಳೂ ಅನ್ಯೋನ್ಯಾಶ್ರಿತಗಳಾಗಿವೆ” ಎಂಬ ಅಭಿಪ್ರ್ರಾಯವನ್ನು ಮೊತ್ತಮೊದಲು ನಮ್ಮ ಗಮನಕ್ಕೆ ತಂದವರು ಯಾರು? ಕನ್ನಡ ಪ್ರಾಂತಕ್ಕೆ ಪ್ರತ್ಯೇಕವಾದ ವಿಶ್ವವಿದ್ಯಾಮಂದಿರವು ಆವಶ್ಯಕವೆಂಬುದನ್ನು ನಾವು ಕಂಡುಹಿಡಿದುದಾದರೂ ಯಾರ ಮೂಲಕ? ನಮ್ಮ ಮಾತೃಭೂಮಿಯ ದೂರದೂರವಾದ ಮೂಲೆಗಳಲ್ಲಿ ವಾಸಮಾಡುವ ಕನ್ನಡ ಜನರು ಬಗೆಬಗೆಯ ಕಷ್ಟಗಳಿಗೆ ಈಡಾಗಿರುವರೆಂಬುದನ್ನೂ ಅವರಿಗೆ ನೆರವಾಗುವುದು ನಮ್ಮ ಕರ್ತವ್ಯವೆಂಬುದನ್ನೂ ನಾವು ಯಾರಿಂದ ತಾನೇ ತಿಳಿದುಕೊಂಡೆವು? ಕೆಲವು ವರ್ಷಗಳ ಹಿಂದೆ ನಮಗೂ ಇತರ ಪ್ರಾಂತಗಳಲ್ಲಿರುವ ಕನ್ನಡಿಗರಿಗೂ ಇದ್ದ ಪ್ರೀತಿ ವಿಶ್ವಾಸಗಳಿಗೂ ಇಂದಿನ ಪ್ರೀತಿ ವಿಶ್ವಾಸಗಳಿಗೂ ಎಷ್ಟೋ ತಾರತಮ್ಯವಿರುವುದೆಂಬುದನ್ನು ನಾವು ನಿಷ್ಪಕ್ಷಪಾತವಾಗಿ ಒಪ್ಪಿಕೊಳ್ಳಬೇಕಾಗಿರುವುದಲ್ಲವೆ? ಗ್ರಂಥಗಳಲ್ಲಿ ಗ್ರಾಮ್ಯ ಶಬ್ದಗಳನ್ನು ಉಪಯೋಗಿಸುವ ವಿಷಯದಲ್ಲಿಯೂ ಶೈಲಿಯ ವಿಷಯದಲ್ಲಿಯೂ ಏಕರೂಪತೆಯನ್ನು ಅನುಸರಿಸುವ ವಿಷಯದಲ್ಲಿ ಕನ್ನಡನಾಡಿನವರೆಲ್ಲರೂ ಅನ್ಯೋನ್ಯಭಾವದಿಂದ ಸರ್ವಸಾಮಾನ್ಯವಾದ ಒಂದು ಕಟ್ಟುಪಾಡಿಗೆ ಒಳಪಡಬೇಕೆಂಬುದು ನಮ್ಮ ಗ್ರಂಥಕಾರರಲ್ಲಿ ಇತ್ತೀಚೆಗೆ ಒಂದು ವಿಧವಾದ ಭಾವವು ಅಂಕುರಿತವಾಗಿರುವುದನ್ನು ನೀವು ಗಮನಿಸಲಿಲ್ಲವೇ? ಇವುಗಳಿಗೆಲ್ಲಾ ಸಾಕ್ಷಾತ್ತಾಗಿಯಾಗಲಿ, ಪರಂಪರೆಯಿಂದಾಗಲಿ ಕಾರಣಭೂತರಾದವರು ಯಾರು? ಎಷ್ಟೋ ದೂರದಲ್ಲಿರುವ ಅರ್ರಾ(Arrah) ಎಂಬ ಪಟ್ಟಣದಿಂದ ಪಂಪ ಭಾರತದ ಅಮೂಲ್ಯವಾದ ಪುರಾತನ ಹಸ್ತಪ್ರತಿಯು ಯಾರ ಸಾಹಸದಿಂದ ನಮಗೆ ದೊರೆಯಿತು? ಇದಲ್ಲದೆ ರಾಷ್ಟೀಯ ವಿಚಾರಗಳನ್ನು ಸಕಲ ಕರ್ಣಾಟಕಕ್ಕೂ ಸಮರ್ಪಕವಾಗುವಂತೆಯೂ ಪ್ರಯೋಜನಕಾರಿಯಾಗುವಂತೆಯೂ ನಾವು ವಿಚಾರಮಾಡತೊಡಗಿದುದು ಯಾವ ಕಾಲದಲ್ಲಿ? ಕರ್ಣಾಟಕ ದೇಶವು ಭಿನ್ನಭಿನ್ನವಾಗಿರುವ ಕಾರಣ ಕನ್ನಡಿಗರೆಲ್ಲರೂ ಶೋಚನೀಯವಾದ ದುರ್ಬಲ ಸ್ಥಿತಿಯಲ್ಲಿರುವರೆಂಬ ವಿಷಯವು ನಮ್ಮ ಅಂತರಂಗದಲ್ಲಿ ಯಾರ ಪ್ರೇರಣೆಯಿಂದ ಮೂಡಿತು? ಕಳೆದ ಸಮ್ಮೇಳನದಲ್ಲಿ, ಆಂಗ್ಲೇಯರ ಆಡಳಿತದಲ್ಲಿರುವ ಕರ್ಣಾಟಕಕ್ಕೆ ಪ್ರತ್ಯೇಕವಾದ ಒಂದು ಅಧಿಪತ್ಯವನ್ನು ಏರ್ಪಡಿಸುವುದು ಆವಶ್ಯಕವೆಂದು ಕನ್ನಡಿಗರೆಲ್ಲರೂ ಬಯಸುವ ಮಟ್ಟಿಗಾದರೂ ಮುಂದುವರಿದುದು ಏತರಿಂದ?
ಪರಿಷತ್ತಿನ ಸಾಧನೆಗಳ ಪುಸ್ತಕಗಳು ಪ್ರಕಟವಾಗಲಿ
‘ಪರಿಷತ್ತಿನ ಅಧಿಕಾರ ಸೂತ್ರಗಳು ಬಹಳಮಟ್ಟಿಗೆ ಬೆಂಗಳೂರಿನವರ ಕೈಯಲ್ಲಿಯೇ ಇರುವುವು’ ಎಂಬುದಾಗಿ ಅಲ್ಲಲ್ಲಿ ದೂರು ಕೇಳಿಸುತ್ತಲಿದೆ. ಇದೊಂದು ಕುಂದೆಂದು ಭಾವಿಸುವ ಪಕ್ಷದಲ್ಲಿ, ಇಂತಹ ಪ್ರತಿಯೊಂದು ಸಾರ್ವಜನಿಕ ಸಂಸ್ಥೆಯಲ್ಲಿಯೂ ಅಪರಿಹಾರ್ಯಗಳಾದ ಈ ಬಗೆಯ ಕುಂದುಗಳಿರುವುದು ಸಹಜವಾದ ಕಾರಣ. ಅದಕ್ಕೆ ಪ್ರತೀಕಾರ ಮಾಡಲು ಸಾಧ್ಯವಿಲ್ಲ. ಆದರೆ ನಾವು ಅದರ ಕಾರ್ಯನಿರ್ವಾಹಕರಲ್ಲಿ ದೋಷಗಳನ್ನು ಆರೋಪಿಸುವುದಕ್ಕಿಂತಲೂ, ಅವರ ಧ್ಯೇಯದಲ್ಲಿ ದೃಷ್ಟಿಯನ್ನಿರಿಸಿ ಪರಿಷತ್ತಿನಿಂದ ಎಷ್ಟರಮಟ್ಟಿನ ಕೆಲಸವು ನಡೆದಿದೆ ಎಂಬುದನ್ನು ಗಮನಿಸಿ ಅದರ ಗುಣಾವಗುಣಗಳನ್ನು ನಿರ್ಧರಿಸವುದು ಯುಕ್ತವು. ಹೀಗೆ ಮಾಡಿದಲ್ಲಿ ಪರಿಷತ್ತು ನಮ್ಮ ನಿರೀಕ್ಷೆಗಿಂತಲೂ ಹೆಚ್ಚಾಗಿಯೇ ಮಹತ್ತರವಾದ ಎಷ್ಟೋ ಕಾರ್ಯಗಳನ್ನು ನೆರವೇರಿಸುವುದೆಂಬ ಅಭಿಪ್ರಾಯವು ಖಂಡಿತವಾಗಿ ನಮ್ಮೆಲ್ಲರಿಗೂ ಉಂಟಾಗದಿರದು. ಪರಿಷತ್ತಿನ ಕಾರ್ಯನಿರ್ವಹಣಕ್ಕೆ ಸಾಕಾದಷ್ಟು ‘ಸಿಬ್ಬಂದಿ’ಯು ಇಲ್ಲವೆಂದು ನನ್ನ ತಿಳಿವಳಿಕೆ. ಗೌರವಾಧಿಕಾರಿಗಳು ಎಷ್ಟೋ ಶ್ರಮಪಟ್ಟು ಕೆಲಸಮಾಡುತ್ತಿರುವರಾದರೂ, ವಾಡಿಕೆಯ ಕೆಲಸಗಳನ್ನು ನಿರಾತಂಕವಾಗಿ ನೆರವೇರಿಸುವ ಸಲುವಾಗಿ ಇನ್ನೂ ಕೆಲವು ಮಂದಿ ಸಂಬಳದ ನೌಕರರನ್ನು ಇಟ್ಟುಕೊಳ್ಳುವುದು ಆವಶ್ಯಕವೆಂದು ನಾನು ಭಾವಿಸುತ್ತೇನೆ. ಪರಿಷತ್ತಿನಲ್ಲಿ ನಡೆಯುತ್ತಿರುವ ಕಾರ್ಯಕಲಾಪಗಳನ್ನು ಏತದಧಿಕಾರಿಗಳು ಪತ್ರಿಕೆಗಳ ಮೂಲಕವಾಗಿ ಆಗಾಗ ತಕ್ಕಂತೆ ತಿಳಿಯಪಡಿಸದಿರುವಿಕೆಯಿಂದಲೂ, ಸ್ವಲ್ಪಮಟ್ಟಿಗೆ ನಿಂದಕರು ದುಡುಕಿ ದೋಷಾರೋಪಣೆಗಳನ್ನು ಮಾಡುತ್ತಿರುವುದರ ಮೂಲಕವೂ, ಪರಿಷತ್ತಿನ ವಿಷಯದಲ್ಲಿ ಮಹಾಜನರು ತುಂಬ ಅಸಮಾಧಾನಪಟ್ಟಿರುವರೆಂದು ನನಗೆ ತೋರುವುದು. ಆದುದರಿಂದ ಪರಿಷತ್ತು ಪ್ರಾರಂಭವಾದುದು ಮೊದಲು ಇಂದಿನವರೆಗೆ, ಎಂದರೆ ಕಳೆದ ಹತ್ತು ವರ್ಷಗಳಲ್ಲಿ ನಡೆದ ಕಾರ್ಯಕಲಾಪ, ಪರಿಷತ್ತಿನ ಉದ್ದೇಶ, ವಾರ್ಷಿಕ ಸಮ್ಮೇಳನಗಳಲ್ಲಿ ಪರಿಷತ್ತಿನವರು ನೆರವೇರಿಸಬೇಕೆಂದು ಮಾಡಲಾದ ಹಲವು ನಿರ್ಣಯಗಳು, ಅವುಗಳನ್ನು ನೆರವೇರಿಸುವಲ್ಲಿ ಪ್ರಾಪ್ತವಾದ ಜಯಾಪಜಯಗಳು, ಮಹಾಜನರ ಮೂಲಕ ದೊರೆತ ಒತ್ತಾಸೆ, ಬೇರೆ ಬೇರೆ ಕಾಲಗಳಲ್ಲಿ ಸೇರಿದ ಅಥವಾ ಬಿಟ್ಟ ಸದಸ್ಯರುಗಳ ಪಟ್ಟಿ, ಆರ್ಥಿಕ ಪರಿಸ್ಥಿತಿ-ಇವೇ ಮುಂತಾದುವುಗಳನ್ನೆಲ್ಲ ಕ್ರೋಢೀಕರಿಸಿ ಸಣ್ಣ ಪುಸ್ತಕ ರೂಪವಾಗಿ ಮುದ್ರಿಸಬೇಕೆಂದು ಪರಿಷತ್ತಿನ ಅಧಿಕಾರಿಗಳನ್ನು ನಾನು ಕೇಳಿಕೊಳ್ಳುವೆನು. ಹೀಗೆ ಮಾಡಿದರಾದರೆ ಇಷ್ಟು ವರ್ಷಗಳಿಂದಲೂ ಪರಿಷತ್ತಿನಲ್ಲಿ ನಡೆಯುತ್ತಿರುವ ಕೆಲಸವು ಜನರಿಗೆ ವ್ಯಕ್ತವಾಗಿ ತಿಳಿದುಬಂದು ತಪ್ಪು ತಿಳವಳಿಕೆಗೆ ಕಾರಣವು ಕಡಿಮೆಯಾಗುವುದಲ್ಲದೆ ಪರಿಷತ್ತಿನ ವಾಸ್ತವಸ್ಥಿತಿಯು ಪ್ರಕಟವಾಗುವ ಮೂಲಕ ನಮ್ಮ ಸಂಸ್ಥೆಯು ಅತಿಶಯವಾಗಿ ಅಥವಾ ಇತ್ಯೋಪ್ಯತಿಶಯವಾಗಿ ಜನಗಳ ಮೆಚ್ಚಿಕೆಗೆ ಪಾತ್ರವಾಗದಿರದೆಂದು ಭಾವಿಸುವೆನು.
ಆಗಾಗ ಸಭೆ ಸೇರಿ ನಡೆಯಿಸಿದ ನಡೆವಳಿಕೆಗಳನ್ನು ಓದಿ ನಾನು ಗ್ರಹಿಸಿದಮಟ್ಟಿಗೆ ಪರಿಷತ್ತಿನಿಂದ ಕಳೆದ ಹತ್ತುವರ್ಷಗಳಲ್ಲಿ ಎಷ್ಟರಮಟ್ಟಿನ ಕೆಲಸವು ನಡೆದಿರುವುದೆಂಬ ಅಂಶವನ್ನು ತಮಗೆ ಈ ರೀತಿ ವಿಜ್ಞಾಪಿಸುವೆನು. ಮತ್ತು ಅವರು ನಡೆಯಿಸಿದ ಕೆಲಸಗಳನ್ನು ನಮ್ಮ ರಾಷ್ಟ್ರ ಜಾಗೃತಿಗಾಗಿ ಸಾಹಿತ್ಯಾಭಿವೃದ್ಧಿಗೂ ಎಷ್ಟರಮಟ್ಟಿಗೆ ಪ್ರಯೋಜಕಾರಿಗಳಾಗಿವೆ ಎಂಬ ವಿಷಯದಲ್ಲಿಯೂ ಮುಂದೆ ಯಾವ ಯಾವ ಮಾರ್ಗಗಳನ್ನು ಕೈಗೊಂಡ ಕೆಲಸಗಳನ್ನು ನಡೆಯಿಸಬೇಕಾಗಿದೆ ಎಂಬ ವಿಷಯದಲ್ಲಿಯೂ ನನ್ನ ಸ್ವಾಭಿಪ್ರ್ರಾಯಗಳನ್ನು ತಿಳಿಸಿದಂತಾಯಿತು.
ಏಕರೂಪ ಶಿಕ್ಷಣ ವಿಚಾರ
ನಮ್ಮ ದೇಶದ ವಿದ್ಯಾ ವಿಷಯವಾದ ಸಮಸ್ಯೆಗಳನ್ನು ಕುರಿತು ಮಾಡನಾಡುವಲ್ಲಿ ಒಂದು ಆಲೋಚನೆಯು ನಮ್ಮ ಮನಸ್ಸಿನಲ್ಲಿ ಅಂಕುರಿತವಾಗುವುದು. ಅದೇನೆಂದರೆ – ಮೈಸೂರು, ಮದ್ರಾಸ್, ಬೊಂಬಾಯಿ ಮತ್ತು ಹೈದ್ರಾಬಾದ್ ಯೂನಿವರ್ಸಿಟಿ ಮೆಂಬುರುಗಳನ್ನೂ, ಇತರ ವಿದ್ಯಾಭಿಮಾನಿಗಳನ್ನೂ ಒಳಗೊಂಡ ಒಂದು ಉಪಸಭೆಯನ್ನು ಈ ಸಮ್ಮೇಳನದವರಾಗಲಿ, ಸಾಹಿತ್ಯ ಪರಿಷತ್ತಿನವರಾಗಲಿ ನೇಮಿಸುವುದು ಉತ್ತಮ. ಇಂತಹ ಉಪಸಭೆಯವರು ಒಂದು ಕಡೆ ಸೇರಿ ಬೇರೆ ಬೇರೆ ಭಾಗಗಳಲ್ಲಿಯು ಮಾಧ್ಯಮಿಕ ಮತ್ತು ವಿಶ್ವವಿದ್ಯಾಲಯದ ಅಭ್ಯಾಸಕ್ರಮಗಳಲ್ಲಿ ಕನ್ನಡವು ಯಾವ ಸ್ಥಾನದಲ್ಲಿದೆಯೆಂಬುದನ್ನು ಪರಸ್ಪರ ಚರ್ಚೆಯಿಂದ ಪರ್ಯಾಲೋಚಿಸಿದ್ದಲ್ಲಿ ಕನ್ನಡದ ಅಭಿವೃದ್ಧಿಪಥದಲ್ಲಿರುವ ಕಂಟಕಗಳನ್ನು ತೆಗೆದುಹಾಕುವುದಕ್ಕೂ ಕರ್ನಾಟಕ ದೇಶದ ಸಮಸ್ತಭಾಗಗಲ್ಲಿಯೂ ಕನ್ನಡದ ಅಭ್ಯಾಸವು ಇತ್ಯೋದ್ಯತಿಶಯವಾಗಿ ಏಕರೂಪತೆಯನ್ನು ಪಡೆಯುವುದಕ್ಕೂ ಜನಪ್ರಿಯವಾಗುವುದಕ್ಕೂ ವಿಸ್ತಾರವಾದ ಪ್ರಮಾಣದಲ್ಲಿ ಬೆಳೆಯುವುದಕ್ಕೂ ಉಪಾಯಗಳನ್ನು ಕಂಡುಹಿಡಿಯಲು ಸಾಧ್ಯವಾಗುವುದು.
ಜಾಯಿಂಟ್ ಸ್ಟಾಕ್ ಕಂಪನಿ ಸ್ಥಾಪನೆ ವಿಚಾರ
ನಮ್ಮ ಜನರು – ಖಾಸಗೀ ಜನರಿಂದ ಅಲ್ಲ-ಸಾಹಿತ್ಯ ಪರಿಷತ್ತಿನವರಿಂದಲೇ ಹೊರಡಬೇಕೆಂದಿದ್ದ ‘ಜಾಯಿಂಟ್ ಸ್ಟಾಕ್’ ಕಂಪನಿಯಲ್ಲಿ ಬರಿಯ ಐದು ರೂಪಾಯಿಗಳ ಪಾಲುಗಳನ್ನು ಸಹ ಕೊಂಡುಕೊಳ್ಳುವುದಕ್ಕೆ ಮುಂದೆ ಬಾರದೆಹೋದರು. ನಮ್ಮ ಜನರ ಈ ಔದಾಸೀನ್ಯವೂ ಅಶ್ರದ್ಧೆಯೂ ಅವರ ಪರಂಪರಾ ಪ್ರಾಪ್ತವಾದ ಹೆಸರುವಾಸಿಗೆ ತಕ್ಕುದೆಂದು ಹೇಳಬರುವಂತಿದೆಯೇ? ಎಂದೂ ಇಲ್ಲ. ಈ ನನ್ನ ವಿನಯಪುರಸ್ಸರವೂ ಆಂತರಂಗಿಕವೂ ಆದ ಪ್ರಾರ್ಥನೆಯನ್ನು ನಮ್ಮ ಜನರು ಉದಾಸೀನಭಾವದಿಂದ ಕಾಣಲಿಲ್ಲವೆಂದು ತಿಳಿಯುವ ಭಾಗ್ಯವು ನನಗೆ ಪ್ರಾಪ್ತವಾಗದಿರದೆಂದು ನಾನು ನಂಬಿರುತ್ತೇನೆ.
ಬೇರೆ ಬೇರೆ ಪಂಗಡಗಳ ಪ್ರತಿನಿಧಿಗಳೂ ಉಚ್ಚಪದದಲ್ಲಿರುವವರೂ ಅದ ಪರಿಷತ್ತಿನ ಪ್ರಮುಖ ಸದಸ್ಯರು ಮೂರು ಮಂದಿಯಾದರೂ ಇರುವ ಬಲವತ್ತರವಾದ ಮಂಡಲಿಯೊಂದನ್ನು ಏರ್ಪಡಿಸಬೇಕು. ಈ ಮಂಡಲಿಯವರು ಕರ್ಣಾಟಕ ರಾಷ್ಟ್ರದೊಳಗಣ ಮುಖ್ಯವಾದ ಪ್ರತಿಯೊಂದು ಪಟ್ಟಣಕ್ಕೂ ಹೋಗಿ, ಅಲ್ಲಲ್ಲಿಯ ದೇಶಾಭಿಮಾನಿಗಳೂ ಗೌರವಾರ್ಹರೂ ಆದ ಜನಗಳಿಂದ ಸಹಾಯಪಡೆದು ಅಲ್ಲಲ್ಲಿಯ ಸ್ಥಳೀಯ ವಿದ್ಯಮಾನಗಳನ್ನು ಗಮನಿಸಿ, ಉಪನ್ಯಾಸಗಳನ್ನು ಮಾಡುತ್ತಲೂ, ಖಾಸಗಿಯಾಗಿ ಮಾತನಾಡುತ್ತಲೂ, ಅಮುದ್ರಿತವಾದ ಗ್ರಂಥಗಳ, ಶಾಸನಗಳ ಮತ್ತು ಚರಿತ್ರ ಸಂಬಂಧವಾದ ವಸ್ತುಗಳ ಸಮಾಚಾರಗಳನ್ನು ಸಂಗ್ರಹಿಸುತ್ತಲೂ, ಪರಿಷತ್ತಿಗೆ ಹೊಸ ಸದಸ್ಯರನ್ನು ಸೇರಿಸಿಕೊಳ್ಳುತ್ತಲೂ, ಕರ್ಣಾಟಕ ಸಭೆಗಳನ್ನೂ ಭಾಷಾಪೋಷಕ ಸಂಘಗಳನ್ನೂ ವಾಚನಾಲಯಗಳನ್ನೂ ಪುಸ್ತಕ ಭಂಡಾರಗಳನ್ನೂ ನಾಟಕ ಸಭೆಗಳನ್ನೂ ಏರ್ಪಡಿಸುತ್ತಲೂ, ಕನ್ನಡ ಕೀರ್ತನೆಗಳನ್ನೂ ಗಾಯನ ಸಮಾಜಗಳನ್ನೂ ಪುರಾಣಶ್ರವಣ ಮಂಡಲಿಗಳನ್ನೂ ಏರ್ಪಾಡು ಮಾಡುತ್ತಲೂ, ಕೊನೆಗೆ ಆವಶ್ಯಕವಾದ ಸ್ಥಳಗಳಲ್ಲಿ ವಿದ್ಯಾರ್ಥಿಗಳ ಕನ್ನಡ ಶಿಕ್ಷಣಕ್ಕಾಗಿ ಕನ್ನಡ ಶಾಲೆಗಳನ್ನೂ ಕನ್ನಡ ಸಾಹಿತ್ಯದ ಪ್ರೌಢಾಭ್ಯಾಸಕ್ಕಾಗಿ ಕೂಟಗಳನ್ನೂ ಸ್ಥಾಪಿಸುತ್ತಲೂ ಸಂಚರಿಸುತ್ತಿರಬೇಕು. ಜನರಲ್ಲಿ ಜಾಗೃತಿಯನ್ನುಂಟುಮಾಡತಕ್ಕುದೇ ನಮಗೆ ಪ್ರಕೃತದಲ್ಲಿ ಆವಶ್ಯಕವಾದ ವಿಷಯವಾಗಿದೆ. ಇದನ್ನು ಚಟುವಟಿಕೆಯಿಂದಲೂ ಅವಿರತವಾಗಿಯೂ ಹಲವು ವಿಧದಿಂದ ನಡೆಯಿಸುತ್ತಿರಬೇಕು. ನಮ್ಮ ಕನ್ನಡಿಗರಿಗೆ ಅವರ ಪೂರ್ವದ ಸೌಭಾಗ್ಯವನ್ನು ಜ್ಞಾಪಕಕ್ಕೆ ತಂದುಕೊಡಬೇಕು. ಮತ್ತು ಇಂದಿನ ದುಸ್ಥಿತಿಯಲ್ಲಿಯೂ ಕನ್ನಡಿಗರಿಂದ ಪ್ರಪಂಚದ ಉನ್ನತಿಗಾಗಿ ಮಹತ್ತರವಾದ ಸೇವೆಯು ನಡೆಯತಕ್ಕುದಾಗಿದೆಯೆಂಬುದನ್ನು ಮನಮುಟ್ಟುವಂತೆ ತಿಳಿಯ ಹೇಳಬೇಕು.
ಪೂಜನೀಯರೂ ನಮ್ಮ ಪರಿಷತ್ತಿನ ಉಪಾಧ್ಯಕ್ಷರೂ ಆದ ರಾಜಸಭಾಭೂಷಣ ಶ್ರೀಮಾನ್ ಕರ್ಪೂರ ಶ್ರೀನಿವಾಸರಾಯರವರು ನನಗೆ ಬರೆದ ಪತ್ರದಲ್ಲಿ ಅಂತಹ ಒಂದು ಮಂಡಲಿಯನ್ನೂ ಶೀಘ್ರದಲ್ಲಿಯೇ ಹೊರಡಿಸಬೇಕೆಂಬುದಿಷ್ಟೇ ಅಲ್ಲದೆ ಅನುಕೂಲವಾದಲ್ಲಿ ಅದನ್ನು ತಾವೇ ಹಿರಿಯರಾಗಿ ಮುಂದು ನಿಂತು ಕರೆದುಕೊಂಡು ಹೊರಡುವಂತೆ ಕೂಡ ತಮ್ಮ ಉದ್ದೇಶವಿರುವುದೆಂದು ನನಗೆ ತಿಳಿಸಿರುವರು. ಇದಕ್ಕಾಗಿ ಅವರನ್ನು ಎಷ್ಟು ಹೊಗಳಿದರೂ ಸಾಲದು. ಈ ಮಂಡಲಿಯವರು ಸುಕ್ಷೇಮದಿಂದ ತುಂಬಿದ ಚೀಲಗಳೊಂದಿಗೆ ಪ್ರಸ್ಥಾನಕ್ಕೆ ಹಿಂದಿರುಗಿ ಬರಲೆಂದು ನಾವೆಲ್ಲರೂ ಅನವರತವೂ ಪ್ರಾರ್ಥಿಸೋಣ.
Tag: Kannada Sahitya Sammelana 11, Benagal Ramarao
ಪ್ರತಿಕ್ರಿಯೆ