ಸಾಹಿತ್ಯ ಸಮ್ಮೇಳನ-೧೬ : ಮೈಸೂರು
ಅಕ್ಟೋಬರ್ ೧೯೩0

ಅಧ್ಯಕ್ಷತೆ: ಆಲೂರು ವೆಂಕಟರಾಯರು

೧೬ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಆಲೂರು ವೆಂಕಟರಾಯರು

ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಕಾರಣಕರ್ತರಲ್ಲಿ ಒಬ್ಬರು ಮತ್ತು ಪರಿಷತ್ತಿಗೆ ಪ್ರಾರಂಭದಲ್ಲಿ ದುಡಿದವರು ಎಂದರೆ ಆಲೂರರು. ಭೀಮರಾಯ-ಭಾಗೀರಥಿ ದಂಪತಿಗಳಿಗೆ ೧೨-೭-೧೮೮0ರಲ್ಲಿ ಜನಿಸಿದರು. ಶಾಲಾ ಶಿಕ್ಷಣವನ್ನು ಧಾರವಾಡದಲ್ಲಿ ಪೂರೈಸಿ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ೧೯0೩ರಲ್ಲಿ ಬಿಎ ಪದವಿಯನ್ನು ೧೯0೫ರಲ್ಲಿ ಎಲ್.ಎಲ್.ಬಿ. ಪದವಿಯನ್ನು ಗಳಿಸಿದರು.

ಧಾರವಾಡದಲ್ಲಿ ವಕೀಲಿ ವೃತ್ತಿ ಕೈಗೊಂಡ ಆಲೂರರು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿ ವಕೀಲಿವೃತ್ತಿಯನ್ನು ದೂರ ಮಾಡಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಸೂತ್ರಧಾರರಲ್ಲಿ ಒಬ್ಬರಾದರು. ಕನ್ನಡ ಗ್ರಂಥಕರ್ತರ ಸಮ್ಮೇಳನಗಳನ್ನು ನಡೆಸಿದರು. ಕರ್ಣಾಟಕ, ವಾಗ್ಭೂಷಣ ಪತ್ರಿಕೆಗಳನ್ನು ಆರಂಭಿಸಿ ನಡೆಸಿದರು.

ಕರ್ನಾಟಕ ಏಕೀಕಕರಣಕ್ಕೆ ದುಡಿದು ಕರ್ನಾಟಕ ಕುಲ ಪುರೋಹಿತರು ಎನಿಸಿದರು. ಕರ್ನಾಟಕವನ್ನೆಲ್ಲ ಸುತ್ತಿ ಇತಿಹಾಸದ ಮಹತ್ವದ ಸಂಗತಿಗಳನ್ನು ಕನ್ನಡಿಗರಿಗೆ ತಿಳಿಸಿ ಕರ್ನಾಟಕ ಗತ ವೈಭವ ಕೃತಿಯ ಮೂಲಕ ಕನ್ನಡ ಜಾಗೃತಿಯನ್ನು ಉಂಟುಮಾಡಿದರು. ಕರ್ನಾಟಕ ಇತಿಹಾಸ ಸಂಶೋಧನಾ ಮಂಡಲಿಯನ್ನು ಸ್ಥಾಪಿಸಿದರು. ಬೆಂಗಳೂರಿನಲ್ಲಿ ಮೂರನೇ ಕನ್ನಡ ಗ್ರಂಥಕರ್ತರ ಸಮ್ಮೇಳನವನ್ನು ಏರ್ಪಡಿಸಲು ಪ್ರಯತ್ನ ನಡೆಸಿ, ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ ಆಗಲು ಪ್ರೇರಣಕರ್ತರಾದರು. ಸ್ಥಾಪನೆಯ ಕಾರ್ಯದಲ್ಲಿ ಪಾಲ್ಗೊಂಡರು. ೧೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು.

೧೯೪೧ರಲ್ಲಿ ಕರ್ನಾಟಕಕ್ಕೆ ಇವರು ಸಲ್ಲಿಸಿದ ಸೇವೆಗಾಗಿ ಹೈದ್ರಾಬಾದ್ ಕನ್ನಡಿಗರು ಕರ್ನಾಟಕ ಕುಲ ಪುರೋಹಿತರೆಂಬ ಬಿರುದನ್ನಿತ್ತರು. ೧೯೬೧ರಲ್ಲಿ ಸಾಹಿತ್ಯ ಪರಿಷತ್ತು ಸನ್ಮಾನಿಸಿತು. ೧೯೫೬ರಲ್ಲಿ ಕನ್ನಡ ರಾಜ್ಯೋದಯದಲ್ಲಿ ಭುವನೇಶ್ವರಿಯ ಉತ್ಸವವನ್ನು ಹಂಪೆಯಲ್ಲಿ ನಡೆಸಿ ಅದರ ನೇತೃತ್ವ ವಹಿಸಿದ್ದರು.

ರಾಷ್ಟ್ರೀಯ ಜಾಗೃತಿಯನ್ನುಂಟು ಮಾಡುವ ಕೃತಿಗಳನ್ನು ರಚಿಸಿದ ಹಿರಿಮೆಯ ಆಲೂರರು ಕನ್ನಡದ ಹತ್ತಾರು ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ. ಕೆಲವು ಹೀಗಿವೆ:

ಕರ್ನಾಟಕ ಗತವೈಭವ, ಶಿಕ್ಷಣ ಮೀಮಾಂಸೆ, ಸಂಸಾರ ಸುಖ, ಕರ್ನಾಟಕ ವೀರರತ್ನಗಳು, ಕರ್ನಾಟಕತ್ವದ ವಿಕಾಸ, ಗೀತಾ ರಹಸ್ಯ (ಅನುವಾದ), ನನ್ನ ಜೀವನ ಸ್ಮೃತಿಗಳು (ಆತ್ಮಕಥೆ), ಮಧ್ವ ಸಿದ್ಧಾಂತ ಪ್ರಕಾಶಿಕೆ, ಗೀತಾಪರಿಮಳ, ಗೀತಾ ಪ್ರಕಾಶ ಇತ್ಯಾದಿ

ಕನ್ನಡ ಸಾಹಿತ್ಯ ಸಮ್ಮೇಳನ-೧೬

ಅಧ್ಯಕ್ಷರು, ಆಲೂರು ವೆಂಕಟರಾಯ

ದಿನಾಂಕ ೫, , ಅಕ್ಟೋಬರ್ ೧೯೩0                                             

ಸ್ಥಳ : ಮೈಸೂರು

“ನಾಹಂ ಕರ್ತಾ ಹರಃ ಕರ್ತಾ ತತ್ಪೂಜಾ ಕರ್ಮ ಚಾಖಿಲಂ”

ಸ್ವಸ್ತಿ ಶ್ರಿ ಮತ್ಕರ್ನಾಟಕ ವಾಙ್ಮಯ ದೇವತಾಪೂಜೆಗೆ ಸನ್ನದ್ಧರಾದ ಮಹಾಜನಗಳ ಚರಣ ಸನ್ನಿಧಿಯಲ್ಲಿ- ಸರಸ್ವತಿಯ ಪಾದಪದ್ಮಾರಾಧಕನಾದ ನಾನು ತಮ್ಮೆಲ್ಲರಿಗೆ ಸಹಸ್ರ ವಂದನೆಗಳನ್ನು ಸಮರ್ಪಿಸಿ ಅರಿಕೆಮಾಡಿಕೊಳ್ಳುವುದೇನೆಂದರೆ:-

ನಾನು ಮಾತೃಭಾಷಾ ಪುತ್ರರಲ್ಲೊಬ್ಬನೆಂಬ ಪ್ರೇಮದಿಂದ ತಾವೆಲ್ಲರೂ   ನನ್ನನ್ನು ಈ ಸಮ್ಮೇಳನದ ಪ್ರಾಣ ಪ್ರತಿಷ್ಠಾಚಾರ್ಯನಾಗಲು ಆಜ್ಞಾಪಿಸಿರುವಿರಿ. ಆ ಮಹಾಪದವಿಗೆ ನಾನು ತೀರ ಆಯೋಗ್ಯನಿರುವೆನೆಂಬುದು ನನಗೆ ಗೊತ್ತಿದ್ದರೂ, ತಮ್ಮ ಅಪ್ಪಣೆಯನ್ನು ಮೀರಲು ಮನಸ್ಸಿಲ್ಲದ್ದರಿಂದ ಅದನ್ನು ಅಂಗೀಕರಿಸಿರುವೆನು.  ಹಿಂದಕ್ಕೆ ಈ ಪೀಠವನ್ನಲಂಕರಿಸಿದವರು ಅನೇಕ ವಿಧವಾಗಿ ಆಕೆಯ ಪೂಜೆಯನ್ನು ಕಟ್ಟಿರುತ್ತಾರೆ; ಕೆಲವರು ಜ್ಞಾನದೀಪದಿಂದ ಆಕೆಗೆ ಆರತಿಯನ್ನೆತ್ತಿರುತ್ತಾರೆ; ಕೆಲವರು ಅನನ್ಯವಾದ ಭಕ್ತಿಯಿಂದ ಆಕೆಯ ಗುಣಗಳನ್ನು ಗಾನಮಾಡಿ ಆಕೆಯ ಪ್ರಸಾದವನ್ನು ಪಡೆದಿರುತ್ತಾರೆ; ಕೆಲವರು ತಮ್ಮ ಸ್ನಿಗ್ಧ ಮಧುರ ಕಾವ್ಯಮಯವಾಣಿಯಿಂದ ಆಕೆಗೆ ಪಂಚಾಮೃತಾಭಿಷೇಕ ಮಾಡಿರುತ್ತಾರೆ; ಕೆಲವರು ಸಂಶೋಧನದ ನಂದಾದೀಪಗಳನ್ನಿಟ್ಟು ಆಕೆಯ ಮೂರ್ತಿಯನ್ನು ಪ್ರಕಾಶಮಾನವಾಗಿ ಮಾಡಿರುತ್ತಾರೆ; ಮತ್ತೆ ಕೆಲವರು, ಶ್ರೀಮನ್ಮಹಾರಾಜರವರ ಕೃಪಾಜಲಪೋಷಿತವಾದ ಸುಂದರವಾದ ಉದ್ಯಾನಗಳಿಂದ ಸುಂಗಧಪುಷ್ಪಗಳನ್ನು ತೆಗೆದುಕೊಂಡು ಆಕೆಯನ್ನು ಪೂಜಿಸಿರುತ್ತಾರೆ. ನಾನಾದರೋ, ಇವುಗಳಲ್ಲೊಂದನ್ನೂ ಮಾಡಲಾರೆ. ಗಾನದಿಂದ ಹೃದಯವನ್ನು ಸೆಳೆಯಲರಿಯೆ, ಜ್ಞಾನದಿಂದ ಬಗೆಯನ್ನರಳಿಸಲರಿಯೆ, ಸಂಶೋಧನ ದೀಪದಿಂದ ಬೆಳಗಲರಿಯೆ; ಕರ್ಣಾಟಕ ಸಾಹಿತ್ಯಸಾಗರದಲ್ಲಿ ಸ್ನಾನಮಾಡಿ ಶುಚಿರ್ಭೂತನಾದವನೂ ನಾನಲ್ಲ. ಆದಕಾರಣ, ಪಾವನತರವಾದ ಆಕೆಯ ಮೂರ್ತಿಯನ್ನು ಮುಟ್ಟಿ, ಆಕೆಯನ್ನು ಭ್ರಷ್ಟಗೊಳಿಸಲಿಚ್ಛಿಸುವುದಿಲ್ಲ. ಸುಗಂಧ ಪುಷ್ಪಗಳನ್ನಾದರೂ ಏರಿಸಬೇಕೆಂದರೆ ಸಹಾನುಭೂತಿಯ ದ್ರವವು ಕೂಡ ಇಲ್ಲದ ಮರುಭೂಮಿಯಲ್ಲಿ ಹುಟ್ಟಿದ ನನ್ನ ಬಳಿಯಲ್ಲಿ ಹೂವುಗಳೆಲ್ಲಿಂದ ಬರಬೇಕು? ಆದರೆ, ನಾನದರ ಪೂಜೆ ಮಾಡಲಿಕ್ಕೆ ಬೇರೊಂದು ಬಗೆಯ ಅಧಿಕಾರವಿದೆ: ನಾನು ಆರ್ತಭಕ್ತನು; ಆದುದರಿಂದ ಆರ್ತಧ್ವನಿಯಿಂದ ಕೂಗಿಕೊಂಡು, ದೂರದಿಂದಲೇ ನಾಲ್ಕು ದೂರ್ವಾಪತ್ರಗಳನ್ನೇರಿಸಿ ಪೂಜೆ ಮಾಡುವೆನು.

ವಾಙ್ಮಯವನ್ನು ಬೆಳೆಯಿಸುವುದೆಂದರೆ ಉತ್ಕೃಷ್ಟವಾದ ಗ್ರಂಥಗಳನ್ನು ಬರೆದರೆ ತೀರಿತೆಂದು ಕೆಲವರ ತಿಳಿವಳಿಕೆ; ಇದು ತಪ್ಪು. ಪೂಜಾರಿಯು ಪರಿವಾರ ಸಮೇತನಾಗಿಯೇ ಪೂಜೆಯನ್ನು ಸಾಂಗಗೊಳಿಸುವಂತೆ ನಾವು ನಮ್ಮ ಪರಿವಾರ ಸಮೇತರಾಗಿಯೇ ವಾಗ್ದೇವತೆಯ ಪೂಜೆಯನ್ನು ಸಾಂಗಗೊಳಿಸಬೇಕಾಗುತ್ತದೆ. ಮುದ್ರಕರು, ಪುಸ್ತಕ ಮಾರುವವರು, ಇವರೇ ಮುಂತಾದವರು ನಮ್ಮ ಪರಿವಾರ, ಲಘು  ಪುಸ್ತಕಮಾಲೆ, ಮಧ್ಯಮ ಪುಸ್ತಕಮಾಲೆ, ಉದಾತ್ತ ಗ್ರಂಥಮಾಲೆ ಮುಂತಾದವುಗಳನ್ನು ಹೊರಡಿಸಿ ನಾವು ವಾಙ್ಮಯದ ಪ್ರಕಾಶವನ್ನು ಮಾಡಬೇಕು. ಕರ್ನಾಟಕವನ್ನೆಲ್ಲ ವಾಚನಾಲಯಗಳ ಜಾಳಿಗೆಯಿಂದ ತುಂಬಿಬಿಡಬೇಕು. ವಾಚನಾಲಯಗಳೆಂದರೆ ಕರ್ನಾಟಕತ್ವದ ವಿದ್ಯುಚ್ಛಕ್ತಿಯನ್ನೊಯ್ಯುವ ತಂತಿಗಂಬಗಳು, ಆದರೆ ಇವೆಲ್ಲ ಕಾರ್ಯಗಳು ಜರುಗಬೇಕಾದರೆ, ನಾವು ಮುಂದೆ ಅಭಿಮಾನವನ್ನು ಜಾಗ್ರತಪಡಿಸಬೇಕು. ಅದಕ್ಕೋಸ್ಕರ ಪ್ರಚಾರಕರು ಸತತವಾಗಿ ಕರ್ನಾಟಕವನ್ನು ಸುತ್ತುತ್ತಿರಬೇಕು.

Tag: Kannada Sahitya Sammelana 18, Alur Venkatarao

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)