೧೭ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಮುಳಿಯ ತಿಮ್ಮಪ್ಪಯ್ಯ
ಶ್ರೇಷ್ಠ ಅಧ್ಯಾಪಕರಾಗಿ ಪ್ರಸಿದ್ಧ ಸಾಹಿತಿಗಳಾಗಿ ಕನ್ನಡದಲ್ಲಿ ಪ್ರಸಿದ್ಧರಾದ ಮುಳಿಯ ತಿಮ್ಮಪ್ಪಯ್ಯನವರು ದಕ್ಷಿಣ ಕನ್ನಡ ಜಿಲ್ಲೆಯ ಮುಳಿಯ ಗ್ರಾಮದಲ್ಲಿ ೩-೩-೧೮೮೮ರಲ್ಲಿ ಕೇಶವಭಟ್ಟ-ಮೂಕಾಂಬಿಕಾ ದಂಪತಿಗಳ ಸುಪುತ್ರರಾಗಿ ಜನಿಸಿದರು. ಸ್ಥಳೀಯ ವಿದ್ವಾಂಸರಿಂದ ಸಂಸ್ಕೃತ ಕಲಿತ ಅವರು ಜ್ಞಾನತೃಷೆಯಿಂದ ತಿರುವಾಂಕೂರಿಗೆ ೧೯0೬ರಲ್ಲಿ ಹೋಗಿ ಅನಂತರ ಅಲ್ಲಿಂದ ಬಂದು ಮೈಸೂರಿನಲ್ಲಿ ಸಂಸ್ಕೃತ ಕಾಲೇಜಿನಲ್ಲಿ ವಿದ್ವಾನ್ ವಾಸುದೇವಾಚಾರ್ಯರಿಂದ ಸಂಗೀತ ಕಲಿತರು. ಮಂಗಳೂರಿನಲ್ಲಿ ವಿದ್ವಾನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ೧೯೧೧ರಲ್ಲಿ ಮಂಗಳೂರಿನ ಕೆನರಾ ಪ್ರೌಢಶಾಲೆಯಲ್ಲಿ ಕನ್ನಡ ಪಂಡಿತರಾಗಿ ಉದ್ಯೋಗಕ್ಕೆ ಸೇರಿದರು.
ಏಳು ವರ್ಷಗಳ ನಂತರ ಕೆನರಾ ಪ್ರೌಢಶಾಲೆ ಬಿಟ್ಟು ಸೈಂಟ್ ಅಲೋಷಿಯೆಸ್ ಕಾಲೇಜಿಗೆ ಪಂಡಿತರಾಗಿ ಸೇರಿ ಸುಮಾರು ೩0 ವರ್ಷ ಸೇವೆ ಸಲ್ಲಿಸಿ ೧೯೪೮ರಲ್ಲಿ ನಿವೃತ್ತರಾದರು. ೧೯೧೪-೧೯ರವರೆಗೆ ಕನ್ನಡ ಕೋಗಿಲೆ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು.
೧೯೨೭ರಲ್ಲಿ ಮಂಗಳೂರಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಂಡಯ್ಯನೂ ಕನ್ನಡಮೆನಿಪ್ಪಾ ನಾಡೂ ಎಂಬ ವಿದ್ವತ್ಪೂರ್ಣ ಪ್ರಬಂಧವನ್ನು ಮಂಡಿಸಿದರು. ೧೯೪೧ರಲ್ಲಿ ಲಕ್ಷ್ಮೇಶ್ವರದ ಪಂಪೋತ್ಸವ ಸಮಿತಿಯ ಅಧ್ಯಕ್ಷರಾಗಿದ್ದರು.
೧೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಇವರನ್ನು ಆಯ್ಕೆ ಮಾಡಿದರು.
ಮುಳಿಯ ಅವರ ಸಮಗ್ರ ಕೃತಿಗಳು ಈಚೆಗೆ ಪ್ರಕಟವಾಗಿದೆ. ಇವರ ಕೆಲವು ಮುಖ್ಯ ಕೃತಿಗಳು ಹೀಗಿವೆ:
೧. ವೀರಬಂಕೆಯ (ಕಾದಂಬರಿ) ೨. ಚಂದ್ರಾವಳಿವಿಳಾಸ (ಕಾದಂಬರಿ) ೩. ನವನೀತ ರಾಮಾಯಣ (ಕಾವ್ಯ) ೪. ಸೊಬಗಿನಬಳ್ಳಿ (ಕಾವ್ಯ) ೫. ನಾಡೋಜ ಪಂಪ (ವಿಮರ್ಶೆ) ೬. ನಡತೆಯ ಹಾಡು (ನಾಟಕ) ೭. ಹಗಲಿರುಳು (ನಾಟಕ) ೮. ಕವಿರಾಜಮಾರ್ಗ ವಿವೇಕ ೯. ಪಾರ್ತಿಸುಬ್ಬ ಇತ್ಯಾದಿ
ಮುಳಿಯ ತಿಮ್ಮಪ್ಪಯ್ಯ ೧೬-೧-೧೯೫0ರಲ್ಲಿ ವಿಧಿವಶರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೧೭,
ಅಧ್ಯಕ್ಷರು: ಮುಳಿಯ ತಿಮ್ಮಪ್ಪಯ್ಯ
ದಿನಾಂಕ ೨೮, ೨೯, ೩0 ಡಿಸೆಂಬರ್ ೧೯೩೧
ಸ್ಥಳ : ಕಾರವಾರ
ಕಾರ್ಯಜಾರಿಗೆ ತರುವ ಮಂಡಳಿ ಇರಲಿ
ಈ ಸಾಹಿತ್ಯ ಸಮ್ಮೇಳನವೆಂಬುದು ವರ್ಷಕ್ಕೊಮ್ಮೆ ಜರುಗುವುದು. ಸಾಹಿತ್ಯೋದ್ಧಾರಕ್ಕಾಗಿ ಕೆಲಕೆಲವು ನಿರ್ಣಯಗಳನ್ನು ಮಾಡುವುದು; ಮೇಲೆ ಒಟ್ಟುಗೂಡಿ ವಿಚಾರಿಸುವುದೆಂದರೆ ಆ ಮೇಲಿನ ವರ್ಷದಲ್ಲಿ. ಅದರಿಂದಾಗಿ ಈವರೆಗೆ ನಿರ್ಣಯಿಸಲ್ಪಟ್ಟ ಉದ್ದೇಶಗಳು ಬಹಳಮಟ್ಟಿಗೆ ಕಾರ್ಯರೂಪವಾಗಿ ತಲೆದೋರಲಿಲ್ಲವೆಂದು ತೋರುತ್ತದೆ. ಆ ಉದ್ದೇಶಗಳನ್ನು ಪೂರ್ತಿಗೊಳಿಸಲಿಕ್ಕೂ ಇತರ ಸಾಹಿತ್ಯ ಸುಧಾರಣೆಗಳನ್ನು ಒದಗಿಸಲಿಕ್ಕೂ ಸಮರ್ಥರಾದ ಒಂದು ‘ಕಾರ್ಯಕಾರಿ ಮಂಡಲಿ’ ನಮಗೆ ಅವಶ್ಯವೆಂದು ನನ್ನ ಭಾವನೆ. ಅಖಂಡ ಕರ್ಣಾಟಕದ ನುರಿತ ವಿದ್ವಾಂಸರೇ ಅದರಲ್ಲಿ ಸದಸ್ಯರಾಗಿರಬೇಕು. ಸದಸ್ಯರಾದರೂ ಬಹಳ ಹೆಚ್ಚಾಗಿ ಕಾರ್ಯಸಾಧನೆಗೆ ತೊಡಕಾಗುವಂತಿರಬಾರದು. ಆ ಮಂಡಲಿ ನಮ್ಮ ಸಾಹಿತ್ಯ ಪರಿಷತ್ತಿಗೆ ಸಂಪೂರ್ಣವಾಗಿ ಅಧೀನವಾಗಿರಬೇಕೆಂದು ನನ್ನೆಣಿಕೆಯಲ್ಲ; ಅದಕ್ಕೂ ಕೆಲವು ಸ್ವಾತಂತ್ರ್ಯವಿರತಕ್ಕದ್ದು. ಯಾವಯಾವ ನಿಯಮಗಳಿರತಕ್ಕುದೆಂಬುದನ್ನು ಅರಿತ ವಿದ್ವಾಂಸರೇ ಅಲೋಚಿಸಿ ನಿರ್ಣಯಿಸತಕ್ಕುದು. ಆ ಮೂಲಕವಾಗಿ ಆಯಾ ಪ್ರಾಂತಗಳ ಮುಖ್ಯ ಪಟ್ಟಣಗಳಲ್ಲಿ ಮಾತ್ರವಲ್ಲ ಹಳ್ಳಿಹಳ್ಳಿಗಳಲ್ಲಿಯೂ ಪುಸ್ತಕಾಲಯಗಳನ್ನು ನೆಲೆಗೊಳಿಸಬಹುದು. ಪಟ್ಟಣಗಳಿಂದಲೂ ಹೆಚ್ಚಾಗಿ ಹಳ್ಳಿಯವರಲ್ಲಿ ಸಾಹಿತ್ಯದ ಪ್ರಸಾರವಾದೀತು; ಏಕೆ? ಆಗುತ್ತದೆ. ನೋಡಿರಿ: ನಮ್ಮ ಸಾಹಿತ್ಯ ಪರಿಷತ್ತು ನೆಲೆವಡೆದು ಹದಿನೇಳು ವರ್ಷಗಳಾದರೂ, ಸಾಹಿತ್ಯ ಪರಿಷತ್ತೆಂದರೇನು? ಎಂದು ಪ್ರಶ್ನಿಸುವ ಕನ್ನಡಿಗರು ಈಗಲೂ ಹಳ್ಳಿಗಳಲ್ಲಿದ್ದಾರೆ. ಅವರಿಗೂ ಈಗಿನ ಸಾಹಿತ್ಯದ ಸವಿ ಗೊತ್ತಿದೆ; ಸಾಹಿತ್ಯ ಪರಿಷತ್ತಿನ ಹೊಲವೇ ಗೊತ್ತಿಲ್ಲ. ನಮ್ಮ ಸಾಹಿತ್ಯವು ಸಾರ್ವಜನಿಕವಾಗಬೇಕಲ್ಲ? ಅದರಿಂದ ನುರಿತ ಸಾಹಿತ್ಯಭಕ್ತರ ಸಂಘವೊಂದನ್ನು ಸ್ಥಾಪಿಸಿ ಆ ಮೂಲಕವಾಗಿ ಉದ್ಯೋಗಿಸಬೇಕೆಂದು ನನ್ನ ಸೂಚನೆ.
ಪರಿಷತ್ತು ಏಕರೂಪತೆಗೆ ಶ್ರಮಿಸಬೇಕು
ನಮ್ಮ ಕರ್ಣಾಟಕದ ಆದಿಯ ರಾಜವಂಶಜರಾದ ಕದಂಬಾದಿಗಳೆಲ್ಲರೂ ಕನ್ನಡದೇಳ್ಗೆಗಾಗಿ ಯತ್ನಿಸಿ ಕೃತಾರ್ಥರಾಗಿದ್ದಾರೆ. ಆದರೂ ಪ್ರಾಂತಭೇಧದಿಂದಾಗಿ ಕನ್ನಡ ಸಾಹಿತ್ಯಕ್ಕೆ ಒದಗಿದ ನಾನಾತ್ವವನ್ನು ನಿವಾರಿಸಿ ಏಕರೂಪಯನ್ನು ಒದಗಿಸಿದ ರಾಜನೆಂದರೆ ನೃಪತುಂಗನು. ಅವನು “ಸಭಾಸದ”ರಾದ ವಿದ್ವಾಂಸರ ಮೂಲಕವಾಗಿ ಆ ಪುಣ್ಯಕಾರ್ಯವನ್ನು ಮಾಡಿಸಿದನೆಂದು ತಿಳಿದುಬರುತ್ತದೆ. ಅದರಂತೆ ಈಗಿನ ಕನ್ನಡ ಸಾಹಿತ್ಯದ ಕವಲುಗಳನ್ನು ಹೋಗಲಾಡಿಸಿ ಅದನ್ನು ವೃದ್ಧಿಗೊಳಿಸುತ್ತಿರುವ ನಮ್ಮ ಸಾಹಿತ್ಯ ಪರಿಷತ್ಪೋಷಕರು ಕರ್ಣಾಟಕ ರಾಜರೂ ಆಗಿರುವ ಮೈಸೂರು ಶ್ರೀಮನ್ಮಹಾರಾಜ ಕೃಷ್ಣರಾಜ ಒಡೆಯರವರಿಗೆ ಆಯುರಾರೋಗ್ಯಾದಿಗಳು ಒದಗಲಿ ಎಂದು ಪರಮಾತ್ಮನನ್ನು ಪ್ರಾರ್ಥಿಸುತ್ತೇನೆ.
Tag: Kannada Sahitya Sammelana 18, Muliya Thimmappaiah
ಪ್ರತಿಕ್ರಿಯೆ