ಸಾಹಿತ್ಯ ಸಮ್ಮೇಳನ-೧೮ : ಮಡಿಕೇರಿ
ಡಿಸೆಂಬರ್ ೧೯೩೨

ಅಧ್ಯಕ್ಷತೆ: ಡಿ.ವಿ. ಗುಂಡಪ್ಪ

೧೮ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಡಿ.ವಿ. ಗುಂಡಪ್ಪ

ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬರಾಗಿ ಮಂಕುತಿಮ್ಮನ ಕಗ್ಗದಿಂದ ಲೋಕವಿಖ್ಯಾತರಾದ ಡಿವಿಜಿ ಅವರು (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) ವೆಂಕಟರಮಣಯ್ಯ-ಅಲಮೇಲಮ್ಮ ದಂಪತಿಗಳಿಗೆ ಮಗನಾಗಿ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ೧೭-೩-೧೮೮೭ರಂದು ಜನಿಸಿದರು. ಶಾಲಾ ವಿದ್ಯಾಭ್ಯಾಸವನ್ನು ಮುಳುಬಾಗಿಲಿನಲ್ಲಿ, ಪ್ರೌಢಶಾಲಾ ಶಿಕ್ಷಣವನ್ನು ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ಮುಗಿಸಿದರು. ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಸ್ವಂತ ಅಧ್ಯಯನದಿಂದ ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರಾಗಿದ್ದರು.

ಮುಳುಬಾಗಿಲಿನ ಒಂದು ಶಾಲೆಯಲ್ಲಿ ಕೆಲವು ಕಾಲ ಬದಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಅನಂತರ ಕೋಲಾರದ ಸೋಡಾ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿ ಬೇಸತ್ತು ಬೆಂಗಳೂರಿನಲ್ಲಿ ಜಟಕಾಬಂಡಿಗೆ ಬಣ್ಣ ಬಳಿಯುವ ಕಾರ್ಖಾನೆಯಲ್ಲಿ ಕೆಲ ಕಾಲ ಕೆಲಸ ಮಾಡಿದರು.

ಅನಂತರ ಪತ್ರಿಕಾರಂಗ ಪ್ರವೇಶಿಸಿ ಸೂರ್ಯೋದಯ ಪ್ರಕಾಶಿಕಾ, ಭಾರತ ದಿನಪತ್ರಿಕೆ, ಕರ್ನಾಟಕ, ಮೈಸೂರು ಟೈಂಸ್ ಮೊದಲಾದ ಪತ್ರಿಕೆಗಳ ಸಂಪಾದನಾ ಕಾರ್ಯ ಮಾಡಿದರು.. ೧೬ ವರ್ಷ ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿದ್ದರು. ಮೈಸೂರು ಪತ್ರಿಕೋದ್ಯಮ ಸಂಘದ ಸ್ಥಾಪನೆ ಮಾಡಿದರು. ಬೆಂಗಳೂರು ಪುರಸಭೆ ಸದಸ್ಯರು, ರಾಜ್ಯಾಂಗ ಸುಧಾರಣಾ ಸಮಿತಿ ಸದಸ್ಯರು, ಪ್ರಜಾಜನ ಪರಿಷತ್ತು ದೇಶೀಯ ಸಂಸ್ಥಾನಗಳ ಪರಿಷತ್ತು ಮೊದಲಾದ ಹತ್ತಾರು ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿದ್ದರು. ಇಂಗ್ಲಿಷ್ ಕನ್ನಡ ನಿಘಂಟಿನ ಸಂಪಾದಕ ಸಮಿತಿಯಲ್ಲಿದ್ದರು. ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯನ್ನು ೧೯೪೫ರಲ್ಲಿ ಸ್ಥಾಪಿಸಿದರು. ೧೯೧೫ರಲ್ಲಿ ಪರಿಷತ್ತಿನ ಸ್ಥಾಪಕವರ್ಗದಲ್ಲಿದ್ದವರೂ ಆಗಿದ್ದ ಇವರು ೧೯೩೩-೩೭ರಲ್ಲಿ ಪರಿಷತ್ತಿನ ಉಪಾಧ್ಯಾಕ್ಷರಾಗಿದ್ದರು.

ಡಿವಿಜಿ ಅವರಿಗೆ ೧೯೬೧ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಡಿಲಿಟ್ ನೀಡಿತು. ೧೯೬೭ರಲ್ಲಿ ಶ್ರೀಮದ್ಭಗವದ್ಗೀತಾ ತಾತ್ಪರ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು. ೧೯೩೨ರಲ್ಲಿ ಮಡಿಕೇರಿಯಲ್ಲಿ ನಡೆದ ೧೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಪಟ್ಟ ಸಿಕ್ಕಿತು. ೧೯೨೮ರಲ್ಲಿ ಬಾಗಲಕೋಟೆಯಲ್ಲಿ ನಡೆದ ಅಖಿಲ ಭಾರತ ಕರ್ನಾಟಕ ವೃತ್ತ ಪತ್ರಕರ್ತರ ಪ್ರಥಮ ಸಮ್ಮೇಳನದ ಅಧ್ಯಕ್ಷರಾದರು. ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿತು. ಬೆಂಗಳೂರು ನಾಗರಿಕರು ಸಾರ್ವಜನಿಕ ಸಮಾರಂಭದಲ್ಲಿ ಸನ್ಮಾನಿಸಿ ೧ ಲಕ್ಷ ಗೌರವನಿಧಿ ನೀಡಿದರು. ಅದನ್ನು ಗೋಖಲೆ ಸಾರ್ವಜನಿಕ ಸಂಸ್ಥೆಗೆ ನೀಡಿದರು.

ಡಿವಿಜಿ ಅವರ ಸಮಗ್ರ ಕೃತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಪ್ರಕಟಿಸಿದೆ. ಅವರ ಕೆಲವು ಮುಖ್ಯಕೃತಿಗಳು ಹೀಗಿವೆ.

ಜೀವನ ಸೌಂದರ್ಯ ಮತ್ತು ಸಾಹಿತ್ಯ, ಮಂಕುತಿಮ್ಮನ ಕಗ್ಗ, ಬಾಳಿಗೊಂದು ನಂಬಿಕೆ, ಅಂತಃಪುರಗೀತೆ, ಸಂಸ್ಕೃತಿ. ಉಮರನ ಒಸಗೆ, ದಿವಾನ್ ರಂಗಾಚಾರ್ಲು, ಕೃಷ್ಣ ಪರೀಕ್ಷಣ, ಗೋಪಾಲಕೃಷ್ಣ  ಗೋಖಲೆ, ಗೀತಾ, ಶಕುಂತಳ, ರಾಜ್ಯಶಾಸ್ತ್ರ, ಜ್ಞಾಪಕ ಚಿತ್ರಶಾಲೆ, ವಸಂತಕುಸುಮಾಂಜಲಿ(೮ ಸಂಪುಟಗಳು)

ಕನ್ನಡ ಸಾಹಿತ್ಯ ಸಮ್ಮೇಳನ೧೮,

ಅಧ್ಯಕ್ಷರು: ಡಿ.ವಿ. ಗುಂಡಪ್ಪ

ದಿನಾಂಕ ೨೮, ೨೯, 0 ಡಿಸೆಂಬರ್ ೧೯೩೨    

ಸ್ಥಳ : ಮಡಿಕೇರಿ

ಈಗಿನ ಸಾಹಿತ್ಯ

ಅನ್ಯ ಸಾಹಿತ್ಯ ಸಂಪರ್ಕದಿಂದ ಕನ್ನಡಕ್ಕ ಪ್ರಯೋಜವುಂಟೆಂಬುದು ಈಗ ಎಲ್ಲರಿಗೂ ಪ್ರತ್ಯಕ್ಷವಾಗಿದೆ. ಕಳೆದ ಐವತ್ತು ವರ್ಷಗಳಲ್ಲಿ ಕನ್ನಡ ಸಾಹಿತ್ಯವು ಒಂದು ನವೀನ ಕಾಂತಿಯನ್ನೂ ಶಕ್ತಿಯನ್ನೂ ಸಂಪಾದಿಸಿಕೊಳ್ಳುತ್ತ ಬಂದಿದೆ. ಅದರಲ್ಲಿಯೂ ಈಗ ೧೫-೨0 ವರ್ಷಗಳಲ್ಲಿ-ಕರ್ಣಾಟಕ ಸಾಹಿತ್ಯ ಪರಿಷತ್ತು, ಧಾರವಾಡದ ವಿದ್ಯಾವರ್ಧಕ ಸಂಘ, ಬೆಂಗಳೂರಿನ ಕರ್ಣಾಟಕ ಸಂಘ, ಧಾರವಾಡದ ಗೆಳೆಯರ ಗುಂಪು ಮಂಗಳೂರಿನಲ್ಲಿ ಬಾಲಸಾಹಿತ್ಯಮಂಡಲ, ಮೈಸೂರು ಕರ್ಣಾಟಕ ಸಂಘ ಮೊದಲಾದ ಸಂಸ್ಥೆಗಳ ಸ್ಥಾಪನೆಯಾದ ಮೇಲೆ- ಈ ಸಂಸ್ಥೆಗಳ ಮೂಲಕವೂ, ಅವುಗಳ ಪ್ರಭಾವದಿಂದುಂಟಾದ ವಾತಾವರಣದ ಪ್ರೇರಣೆಯಿಂದಲೂ ಹೊಸ ಜಾತಿಯ ಗ್ರಂಥ ರಾಶಿಯು ದೇಶದ ಗಮನವನ್ನಾಕರ್ಷಿಸಿಕೊಳ್ಳುವಷ್ಟರಮಟ್ಟಿಗೆ ಬೆಳದಿದೆ. ಈ ಗ್ರಂಥಗಳಲ್ಲಿ ಕೆಲವುಗಳ ವಿಷಯ ಹೊಸದು, ಕೆಲವುಗಳ ರೀತಿ ಹೊಸದು. ವಾತಾವರಣದ ಲಕ್ಷಣಗಳನ್ನು ನೋಡಿದರೆ ಈಗ ಇನ್ನೂ ವಸಂತಾರಂಭದಂತೆ ತೋರುತ್ತದೆ. ಸಾಹಿತ್ಯೋಪಾಸನೆಯ ಉತ್ಸಾಹವು ನೂರಾರು ಎಳೆಯ ಕಣ್ಣುಗಳಲ್ಲಿ ಹೊಳೆಯುತ್ತಿದೆ.

ಇಂತಹ ಸಮಯದಲ್ಲಿ ತರುಣನಲ್ಲದೆ ಪರಿಣತನಾಗದೆ ಇರುವ ನನ್ನಂಥವನು ನೂತನ ಸಾಹಿತ್ಯವನ್ನು ಕುರಿತು ಒಂದೆರಡು ಮಾತನ್ನಾಡಿದರೆ ಅದು ಕಿರಿಯರ ಗಮನಕ್ಕೆ ತಕ್ಕುದಾಗಿರಬಹುದಲ್ಲವೆ? ಅದು ನಾನು ಗ್ರಂಥ ಲೇಖಕಕನಾಗಿಯಾದಂದಿನಿಂದ ಅದಕ್ಕೆ ಆಧಾರಸ್ತಂಭಪ್ರಾಯರೂ ಆಗಿದ್ದ ರಾಜಸಭಾಭೂಷಣ ಶ್ರೀಮನ್ ಕರ್ಪೂರ ಶ್ರೀನಿವಾಸರಾಯರು ಕಾಲವಶರಾದುದು ನಮಗೆ ಎಣಿಸಲಾಗದಷ್ಟು ದೊಡ್ಡನಷ್ಟವಾಗಿದೆ. ಅವರಂತಹ ವಿದ್ವತ್ಪಕ್ಷಪಾತಿಗಳೂ ಸಾಹಿತ್ಯಪ್ರೇಮಿಗಳೂ ಸಹಾಯಕರ್ತರೂ ದೊರಕುವುದು ಸುಲಭವಲ್ಲ.

ಪರಿಷ್ಮನಂದಿರ

ಮತ್ತೊಂದು ಲಾಭ : ಕರ್ಣಾಟಕ ಸಾಹಿತ್ಯ ಪರಿಷತ್ತು ಈ ೧೮ ವರ್ಷವೂ ಬಾಡಿಗೆಯ ಮನೆಗಳಲ್ಲಿ ವಾಸಮಾಡಿಕೊಂಡಿರಬೇಕಾಗಿತ್ತು. ಈಗ ಮೈಸೂರಿನ ಶ್ರೀಮನ್ಮಹಾರಾಜರವರ, ಅವರ ಸರಕಾರದವರ ಮತ್ತು ಇತರ ಪರಿಷದಭಿಮಾನಿಗಳ ಔದಾರ್ಯದಿಂದ, “ಶ್ರೀಕೃಷ್ಣರಾಜೇಂದ್ರ ಕರ್ಣಾಟಕ ಸಾಹಿತ್ಯ ಪರಿಷನ್ಮಂದಿರ”ವು  ಬೆಂಗಳೂರಿನಲ್ಲಿ ನಿರ್ಮಿತವಾಗಿ, ಆವಾಸಕ್ಕೆ ಸಿದ್ಧವಾಗಿದೆ. ಶುಭದಿನ, ಶುಭಹಸ್ತದಿಂದ ಅವರ ಕವಾಟಪಾಟನೋತ್ಸವವನ್ನು ಮಾಡಿಸಿದ ಬಳಿಕ, ಪರಿಷತ್ತಿನ ಮುಂದಿನ ಕಾರ್ಯಸಮಾರಂಭಗಳು ಸಾಂಗವಾಗಿ ನಡೆಯಲು ಅಲ್ಲಿ ಬೇಕಾದ ಅನುಕೂಲಗಳಿರುವುವು. ಪುಸ್ತಕ ಭಾಂಡಾಗಾರಕ್ಕೂ, ಪತ್ರಿಕಾವಾಚಕರಿಗೂ, ಉಪನ್ಯಾಸ ಚರ್ಚೆಗಳಿಗಾಗಿ ಸೇರುವ ಪಂಡಿತ ಪರಿಶೋಧಕ ಸಭೆಗಳಿಗೂ ಅಲ್ಲಿ ತಕ್ಕ ಸ್ಥಳಾನುಕೂಲವನ್ನು ಕಲ್ಪಿಸಿದೆ. ಅಲ್ಲಿ ನೆಲಸಿದ ಬಳಿಕ, ಪರಿಷತ್ತಿನ ಕಾರ್ಯಗಳು ಹತ್ತರಷ್ಟಿಪ್ಪತ್ತರಷ್ಟಾಗಿ ಬೆಳೆದು ನಡೆದಾವೆಂದು ನನ್ನ ಭರವಸೆ. ಆ ಮುಂದಿರವು ಮೈಸೂರಿನವರದು ಮಾತ್ರ ಅಲ್ಲ. ಎಲ್ಲ ಕನ್ನಡಿಗರಿಗೂ ಸೇರಿದ್ದು. ಕರ್ಣಾಟಕ ಸಾರಸ್ವತ ಪ್ರಪಂಚಕ್ಕೆ ಅದು ಕೇಂದ್ರಸ್ಥಾನವಾಗಬೇಕು. ಎಲ್ಲ ಸಾಹಿತ್ಯ ಸೇವಕರೂ ಅದನ್ನು ನಮ್ಮ ಕುಲದೈವ ಕ್ಷೇತ್ರವೆಂದು ತಿಳಿಯಬೇಕು. ಹೀಗಾಗಲೂ ತಮ್ಮೆಲ್ಲರ ವಿಶ್ವಾಸವು ಸಹಕಾರವು ಬೇಕೆಂದು ಪ್ರಾರ್ಥಿಸುತ್ತೇನೆ.

ಸದ್ಯಕ್ಕೆ ನಮ್ಮ ಪರಿಷತ್ತನ್ನು ನಾವು ಬಲಪಡಿಸಿದರೆ ಅದರ ಮೂಲಕ, ಮೈಸೂರಿನ ಮತ್ತು ಇತರ ಪ್ರಾಂತಗಳ ವಿದ್ಯಾಪ್ರಚಾರದ ಇಲಾಖೆಗಳ ಸಹಕಾರದಿಂದ, ಕನ್ನಡ ಸಾಹಿತ್ಯ ಪಾಂಡಿತ್ಯಕ್ಕೊಂದು ಪ್ರೋತ್ಸಾಹನಕ್ರಮವು ಏರ್ಪಡಬಹುದೆಂದು ತೋರುತ್ತದೆ. ಈಗ ಮೈಸೂರಿನಲ್ಲಿ ನಡೆಯುತ್ತಿರುವ ಅಪ್ಪರ್ಸೆಕೆಂಡರಿ ಮತ್ತು ಪಂಡಿತ ಪರೀಕ್ಷೆಗಳನ್ನು ಪರಿಷ್ಕಾರಗೊಳಿಸಿ, ಆ ಪ್ರಶಸ್ತಿಗಳನ್ನು ಬೊಂಬಾಯಿ, ಮದ್ರಾಸು, ಕೊಡಗು, ಹೈದರಾಬಾದುಗಳ ಸರಕಾರಗಳು ಗೌರವಿಸುವಂತೆ ಮಾಡಿದರೆ ನಾನಾಭಾಗಗಳ ಕನ್ನಡ ವಿದ್ಯಾರ್ಥಿಗಳೂ ಒಂದು ಗೋಷ್ಠಿಯಲ್ಲಿ ಸೇರುವಂತಾಗಿ ಆ ಮೂಲಕ ಕನ್ನಡದ ವಾತಾವರಣವು ಹಬ್ಬಿಕೊಂಡೀತೆಂದು ತೊರುತ್ತದೆ.

ಕನ್ನಡ ಪಾಠಕ್ರಮ

ನಮ್ಮ ಪರಿಷತ್ತಿನ ಕನ್ನಡ ಪಠ್ಯಪುಸ್ತಕಗಳ ಕಡೆಗೂ ಪಾಠಕ್ರಮಗಳ ಕಡೆಗೂ ಹೆಚ್ಚು ಗಮನಕೊಡಬೇಕೆಂದು ತೋರುತ್ತದೆ. ಈ ಸಂಗತಿ ಹೊರಗಡೆ ಹೇಗಿದೆಯೋ ನನಗೆ ತಿಳಿಯದು; ಮೈಸೂರಿನಲ್ಲಿ ಮಾತ್ರ ಪರಿಷ್ಕಾರಕ್ಕೆಡೆ ಬಿಟ್ಟಿದೆ. ಪಾಠಪುಸ್ತಕಗಳನ್ನಾರಿಸುವುದರಲ್ಲಿ ವಿಷಯ ಗೌರವ, ಭಾವಪುಷ್ಟಿ, ಶೈಲಿಯ ಶುದ್ಧತೆ – ಈ ಮೂರಂಶಗಳನ್ನು ಮಾತ್ರವೇ ಗಣನೆಗೆ ತೆಗೆದುಕೊಳ್ಳಬೇಕು. ನೀರಸವಾದ ಗ್ರಂಥಗಳಿಂದ ವಿದ್ಯಾರ್ಥಿಗಳಿಗೆ ಬೇಸರಹುಟ್ಟಿ, ಅಮೇಲೆ ಅವರಿಗೆ ಕನ್ನಡವೆಂದರೆ ಸಾಕೆನಿಸುವುದು.

ಪರಿಷತ್ತು ಕಾರ್ಯೋತ್ಸಾಹ ಹುಟ್ಟಿಸಬೇಕು

ಪಾಠಕರ ಶಿಕ್ಷಣವೂ ಉತ್ತಮಪಡಬೇಕಾಗಿದೆ. ಹಿಂದೆ ಕಾವ್ಯಪಾಠ ಮಾಡಿಸುತ್ತಿದ್ದವರು ಅಷ್ಟಿಷ್ಟಾದರೂ ಸಾಹಿತಿಗಳಾಗಿದ್ದವರು. ಅವರಿಗೆ ವ್ಯಾಕರಣದ ಮೇಲೆಯೂ ಭಾವಾರ್ಥದ ಮೇಲೆಯೂ ದೃಷ್ಟಿಯಿರುತ್ತಿತ್ತು; ಅವರಿಗೆ ಪುರಾಣ ಪೂರ್ವಕಥೆಗಳ ಜ್ಞಾನವಿತ್ತು. ಈಗಿನವರಿಗೆ ಪೂರ್ವಸಾಹಿತ್ಯದ ಪರಿಚಯ ಅಷ್ಟಿಲ್ಲ;  ಇಂಗ್ಲಿಷ್ ಸಾಹಿತ್ಯದ ಸೊಬಗನ್ನೂ ಅವರು ಅರಿತವರಲ್ಲ. ಸಾಹಿತ್ಯಸ್ವರೂಪನ್ನು ಸ್ವಲ್ಪಮಟ್ಟಿಗಾದರೂ ತಿಳಿದುಕೊಂಡಿರದವರು, ಶಿಷ್ಯರಿಗೆ ಭಾಷಾಮರ್ಯಾದೆಯನ್ನು ವಿವರಿಸುವುದೂ, ಅವರಿಗೆ ಕವಿಹೃದಯವನ್ನು ಬಿಚ್ಚಿತೋರಿಸುವುದೂ, ಅವರಲ್ಲಿ ಕಾವ್ಯೋತ್ಸಾಹವನ್ನು ಹುಟ್ಟಿಸುವುದೂ ಹೇಗಾದೀತು? ಇಂಗ್ಲೆಂಡಿನಲ್ಲಿ ಇಂಥಾ ಪ್ರಶ್ನೆಗಳು “ಇಂಗ್ಲಿಷ್ ಅಸೋಸಿಯೇಷನ್” ಎಂಬ ಆಂಗ್ಲ ಸಾಹಿತ್ಯ  ಪರಿಷತ್ತಿನ ಪರಿಶೀಲನೆಗೆ ಬಂದು, ಸಂಸ್ಕಾರ ಪ್ರಯತ್ನಗಳು ನಡೆದಿವೆ. ನಮ್ಮ ಪರಿಷತ್ತು ಆ ಮೇಲ್ಪಂಕ್ತಿಯನ್ನನುಸರಿಸಿ ಕೆಲಸ ನಡೆಸಬೇಕು.

ಕಛೇರಿಯ ಕನ್ನಡ

ಸರಕಾರದ ನಾನಾ ಇಲಾಖೆಗಳವರು ದೇಶಭಾಷೆಗೆ ಸಹಾಯಮಾಡಲು ಬಹುವಿಧವಾಗಿ ಅವಕಾಶವುಂಟು. ಮುಖ್ಯವಾಗಿ, ಅವುಗಳ ಲೆಕ್ಕಪತ್ರಗಳನ್ನು ಕೂಡಿದಮಟ್ಟಿಗೂ ಕನ್ನಡದಲ್ಲಿಯೇ ಬರೆಯಿಸಿಡಬೇಕು. ಅವುಗಳ ನಾನಾ ಪಟ್ಟಿಕೆಗಳೂ ವರದಿಗಳೂ ಸಾಮಾನ್ಯ ಜನರನ್ನು ಮುಟ್ಟುತ್ತವೆ. ಅವುಗಳಲ್ಲಿ ಒಳ್ಳೆಯ ಭಾಷೆಯಿದ್ದರೆ ಎಲ್ಲರಿಗೂ ಒಳ್ಳೆಯದೆ. ಈ ಶೈಲಿಯನ್ನು ನೋಡಿರಿ:-

“ಈ ಹುಕುಂಮಿಗೆ ಲಗತ್ತಿರುವ ತಃಖ್ತೆಯ ಕಲಂಗಳಲ್ಲಿ ಸವಾಲಿಗೆ ಜವಾಬನ್ನು ಹುಷ್ಯಾರೀಯಿಂದ ನಮೂದಿಸತಕ್ಕದ್ದಿದೆ.”

“ಈ ಕೊಳದಲ್ಲಿ ಗಲೀಜುವಗೈರೆ ಮಾಡುವವರನ್ನು ಪ್ರಾಸಿಕ್ಯೂಷನ್ ಮಾಡಲ್ಪಡುತ್ತದೆ.”

ಇದು ಯಾವ ಸೀಮೆಯ ಕನ್ನಡ? ಈ ಉದಾಹರಣೆಗಳು ನನ್ನ ಕಲ್ಪನೆಯಲ್ಲ. ಇಂಥಾ ಅಪಸ್ಮಾರಗಳನ್ನು ತಪ್ಪಿಸುವುದು ಸರಕಾರದ ಅಧಿಕಾರಿಗಳ ಕೈಯಲ್ಲಿದೆ.

ಈ ಸಂಧರ್ಭದಲ್ಲಿ  ಬೊಂಬಾಯಿ, ಮದ್ರಾಸು ಪ್ರಾಂತಗಳ ಅಂಚೆಯ ಇಲಾಖೆಗಳರು ತಮ್ಮ ಕೆಲವು ನಿಬಂಧನೆಗಳ ಮತ್ತು ಪತ್ರಿಕೆಗಳ ಕನ್ನಡ ಪ್ರತಿಯನ್ನು ತಿದ್ದಿ ಸರಿಪಡಿಸುವ ಕಾರ್ಯವನ್ನು ಪರಿಷತ್ತಿನ ಕಾರ್ಯದರ್ಶಿಗಳವರಿಗೆ ಒಪ್ಪಿಸುವರೆಂದು ಕೇಳಲು ಸಂತೋಷವಾಗಿದೆ.

ಹೊಸ ವ್ಯಾಕರಣ

ಎಲ್ಲಕ್ಕಿಂತ ದೊಡ್ಡದಾದ ವಿಚಾರವನ್ನು ಕಡೆಗೆ ಉಳಿಸಿಕೊಂಡಿದ್ದೇನೆ; ಅದು ನಮ್ಮ ಪರಿಷತ್ತನ್ನು ಬಲಪಡಿಸುವ ವಿಚಾರ. ಪರಿಷತ್ತಿನಿಂದ ಆಗಬೇಕಾಗಿ, ಆಗಬಹುದಾಗಿ, ಇರುವ ಕೆಲಸಗಳು ಎಣಿಸಲಾಗದಷ್ಟಿವೆ. ಅವುಗಳಲ್ಲಿ ಕೆಲವನ್ನು ತಮ್ಮ ನೆನಪಿಗೆ ತರುತ್ತೇನೆ.

ನಿಘಂಟುವಿನ ಪ್ರಸ್ತಾಪ ಮೊದಲೇ ಆಗಿದೆ. ಪರಿಷತ್ತು ಈ ದೊಡ್ಡ ಕೆಲಸದಲ್ಲಿ ಭಾಗಿಯಾಗಲೇಬೇಕು. ಕನ್ನಡಕ್ಕೆ ಒಂದು ಹೊಸ ವ್ಯಾಕರಣವು ಅತ್ಯಂತ ಅವಶ್ಯವಾಗಿದೆ. ಶಬ್ದಮಣಿದರ್ಪಣ, ಶಬ್ದಾನುಶಾಸನಗಳ ಕಾಲದಿಂದ ಈಚೆಗೆ ಭಾಷೆಯಲ್ಲಿ ಎಷ್ಟೋ ವ್ಯತ್ಯಾಸಗಳಾಗಿವೆ. ಆದರೆ ಈ ವ್ಯತ್ಯಾಸಗಳನ್ನು ಪರೀಕ್ಷಿಸಿ, ಅವುಗಳಲ್ಲಿ ಅನುಕೂಲವೂ ಅನಿವಾರ್ಯವೂ ಆಗಿರುವ ವ್ಯತ್ಯಾಸಗಳನ್ನು ನಿರಾಕ್ಷೇಪಣೀಯಗಳೆಂದು ಸ್ಪಷ್ಟವಾಗಿ ಹೇಳುವ ವ್ಯಾಕರಣವು ಇನ್ನೂ ಹುಟ್ಟಬೇಕಾಗಿದೆ. ಇನ್ನು ಮುಂದೆ ಭಾಷೆಯು ಹಿಂದಿಗಿಂತ ಹೆಚ್ಚಾದ ಅವಸರ ಆತುರಗಳಿಂದ  ಬೆಳೆಯತಕ್ಕದ್ದಾಗಿದೆ. ಇಂಥಾ ಸಂಧಿ ಸಮಯದಲ್ಲಿ ಭಾಷೆಗೆ ಅಸಹನೀಯವೆಂದು ತೋರಿ ಬಂದಿರುವ ಕಟ್ಟುಗಳನ್ನು  ಸಡಲಿಸಿ, ಅದರ ಅಂಗಾಂಗಳ ಸ್ವತಂತ್ರ ಚಲನೆಗೆ ಅವಕಾಶ ಕೊಡಿಸುವ ವ್ಯಾಕರಣವು ಮಹೋಪಕಾರಕವಾಗುತ್ತದೆ.

ಪರಿಷತ್ತಪತ್ರಿಕೆ

ಪರಿಷತ್ಪತ್ರಿಕೆಯನ್ನು ಇನ್ನೂ ಫಲದಾಯಕವಾಗುವಂತೆ ಮಾಡುವುದಿನ್ನೊಂದು ಕೆಲಸ. ಅದು ಎಂದಿಗಾದರೂ ಪ್ರಜಾಸಾಮಾನ್ಯದ ಪತ್ರಿಕೆಯಾಗುವುದೆಂದು ನಾನು ನಂಬಿಕೊಂಡಿಲ್ಲ. ಅದು ವಿದ್ವತ್ಕಾರ್ಯಕ್ಕೆ ಸಾಧನವಾಗಿರಬೇಕಾದ ಪತ್ರಿಕೆ. ಅದರಿಂದ ಕಾವ್ಯತತ್ತ್ವ ಜಿಜ್ಞಾಸೆಯೂ, ಪೂರ್ವೇತಿಹಾಸಾನ್ವೇಷಣೆಯೂ, ಪ್ರಾಚೀನಗ್ರಂಥ ಯೋಗ್ಯತಾ ನಿರ್ಣಯವೂ, ಭಾಷಾಶಾಸ್ತ್ರ ವ್ಯವಸಾಯವೂ ಆಗುವುದು ಸಾಧುವಾಗಿದೆ. ಇದಕ್ಕೆ ಬೇಕಾದುದು ಶೋಧನಪಟುಗಳಾದ ಪಂಡಿತರ ಸಹಕಾರ.

ಸಾರಸ್ವತ ಸನ್ನಿಧಿ

ಪರಿಷನ್ಮಂದಿರದ ಗ್ರಂಥ ಭಾಂಡಾಗಾರವನ್ನು ಸಮೃದ್ಧಿಗೊಳಿಸುವುದಿನ್ನೊಂದು ಕೆಲಸ. ಇದುವರೆಗೆ ಅಚ್ಚಾಗಿರುವ ಪ್ರತಿಯೊಂದು ಕನ್ನಡ ಪುಸ್ತಕದ ಒಂದು ಪ್ರತಿಯಾದರೂ ಅಲ್ಲಿರಬೇಕು. ತಾಳೆಯೋಲೆಗಳ ಸಂಗ್ರಹವೂ ಇರಬೇಕು. ಇಂಥಾ ಗ್ರಂಥ ಸಮುಚ್ಚಯವು ಒಂದು ಕಡೆ ಕೈಗೆ ಸಿದ್ಧವಾಗಿ ದೊರೆಯದಿದ್ದರೆ ಶೋಧನ ಕಾರ್ಯ ನಡೆಯಲಾರದು.

ಸಂಸ್ಥಾ ಸಂಯೋಜನೆ

ಕನ್ನಡಕ್ಕಾಗಿ ಕೆಲಸಮಾಡಬೇಕೆಂಬ ಸಂಸ್ಥೆಗಳು ಕರ್ಣಾಟಕದೊಳಗೆ ಅನೇಕ ಸ್ಥಳಗಳಲ್ಲಿವೆ; ಹೊರಗೂ ಕೆಲವು ಕಡೆ ಇವೆ. ಅವುಗಳ ವಿವರಗಳನ್ನೆಲ್ಲ ಆಗಾಗ ತರಿಸಿ, ಅವುಗಳ ಕಾರ್ಯಕ್ರಮಗಳನ್ನು ಒಂದು ಸಂಯೋಜನ ವ್ಯವಸ್ಥೆಗೆ ತಂದು, ಅವಕ್ಕೆ ಬೆಂಬಲಕೊಟ್ಟು ಅವುಗಳಿಂದ ಪ್ರಯೋಜನ ಪಡೆದುಕೊಳ್ಳುವ ಏರ್ಪಾಟೂ ಪರಿಷತ್ತಿನಿಂದ ನಡೆಯಬೇಕಾಗಿದೆ.

ಪರಿಷತ್ತಿನ ಸ್ಥಿತಿ

ಪರಿಷತ್ತಿನ ಕೆಲಸಗಳಿನ್ನೆಷ್ಟೋ ಇವೆ. ಆದರೆ ಜನವೆಲ್ಲಿ? ಹಣವೆಲ್ಲಿ? ಈಗಿನ ಸದಸ್ಯರ ಒಟ್ಟು ಸಂಖ್ಯೆ ೧೨೫. ಅದರ ವರ್ಷದ ಸಾಧಾರಣ ವರಮಾನ  ಸುಮಾರು ೨,೨00 ರೂಪಾಯಿಗಳು; ವೆಚ್ಚ ಅದಕ್ಕಿಂತ ಸ್ವಲ್ಪ ಹೆಚ್ಚು. ಈ ವರಮಾನದಲ್ಲಿ ಸರಕಾರದ ಸಹಾಯದ್ರವ್ಯ ೧,೮00 ರೂಪಾಯಿಗಳು. ಹಣದ ಮುಗ್ಗಟ್ಟಿನ ಕಾರಣದಿಂದ ಅದಕ್ಕೂ ಊನ ತಟ್ಟಬಹುದು. ಹೀಗಿದ್ದರೆ, ಪರಿಷತ್ತಿನಿಂದ ವೆಂಕಟನಾರಾಯಣಪ್ಪನವರ ಬೆನ್ನೆಲುಬು ಬಗ್ಗಿಸುವ ಒಂದು ಕೆಲಸಮಾತ್ರ ಸಾಧಿಸಲಾಗುತ್ತದೆ. ಪರಿಷತ್ತಿಗೆ ಪರಿಚಯದವರು ಬೇಕು. ಇನ್ನು ಮುಂದೆ ಯಾರು ಪರಿಷತ್ತಿಗೆ ಹೆಚ್ಚುಮಂದಿ ಸದಸ್ಯರನ್ನು ಸೇರಿಸುತ್ತಾರೆಯೋ ಅವರಿಗೆ ಇಂಥಾ ಸಮ್ಮೇಳನದ ಅಧ್ಯಕ್ಷಪಟ್ಟವನ್ನು ಕಟ್ಟುವುದು ಯುಕ್ತವೆಂದು ನನಗೆ ತೋರುತ್ತದೆ. ಏಕೆಂದರೆ, ಅವರ ಕೆಲಸವು ಭಾಷಾಪ್ರಸಾರದ ತಳಹದಿಯನ್ನು ಭದ್ರಪಡಿಸತಕ್ಕುದು. ಭಾಷಾಪ್ರೇಮಿಗಳ ಕೃತಜ್ಞತೆ ಗೌರವ ವಿಶ್ವಾಸಗಳು ಮೊದಲು ಅವರಿಗೆ ಸಲ್ಲುವುದು ನ್ಯಾಯ.

ಕೊಡಗಿನ ಪರಿಷತ್ತಿನ ಪ್ರೇಮ

ಕೊಡಗಿನ ಮಹಾಜನರೇ, ನಿಮ್ಮ ದೇಶವು ಸೃಷ್ಟಿಯ ಸೌಂದರ್ಯದಿಂದಲೂ ನಿಮ್ಮ ಸರಳತೆ ಉದಾರತೆಗಳಿಂದಲೂ ಕನ್ನಡಿಗರಿಗೆಲ್ಲ ಅತ್ಯಂತ ಪ್ರಿಯವಾಗಿದೆ. ಕರ್ಣಾಟಕ ಮಹಾಸಮಾರಂಭದಲ್ಲಿ ಈ ನಾಡು ತಕ್ಕಷ್ಟು ಮುಂದೆ ಬಂದು ಸೇರಿಲ್ಲವಲ್ಲಾ ಎಂಬ ಕಳವಳವು ಕೆಲವರಿಗೆ ಇದುವರೆಗೂ ಇದ್ದಿತು. ಅಂಥಾ ಕೊರತೆಗೆ ಕಾರಣವಿಲ್ಲವೆಂಬುದು ಈಗ ಸ್ಪಷ್ಟವಾಗಿದೆ. ತಾವು ಭ್ರಾತೃವಾತ್ಸಲ್ಯದಿಂದ ಹೊರಗಿನ ಕನ್ನಡಿಗರನ್ನು ಬರಮಾಡಿಕೊಂಡು, ಕರ್ಣಾಟಕ ಸಾಹಿತ್ಯ ಪರಿಷತ್ತು ನಮಗೂ ಸೇರಿದ್ದೆಂದು ಭಾವಿಸಿ, ಅದನ್ನು ಇಲ್ಲಿಗೆ ಕರೆದು ಅದರಿಸುವುದಕ್ಕಾಗಿ ಎಲ್ಲ ಕನ್ನಡಿಗರ ಪರವಾಗಿ ನಾನು ತಮ್ಮನ್ನು ಅಭಿವಂದಿಸುತ್ತೇನೆ. ನಿಮ್ಮ ನಮ್ಮ ಸೋದರಭಾವವೂ, ನಮ್ಮೆಲ್ಲರ ನುಡಿಯೂ ನಾಡೂ ಏಳಿಗೆ ಪಡೆಯಲಿ.

Tag: Kannada Sahitya Sammelana 18, D.V. Gundappa

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)