ಸಾಹಿತ್ಯ ಸಮ್ಮೇಳನ-೧೯ : ಹುಬ್ಬಳ್ಳಿ
ಡಿಸೆಂಬರ್ ೧೯೩೩

ಅಧ್ಯಕ್ಷತೆ: ವೈ. ನಾಗೇಶಶಾಸ್ತ್ರಿ

೧೯ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ವೈ. ನಾಗೇಶಶಾಸ್ತ್ರಿ

ಸಂಸ್ಕೃತ-ಕನ್ನಡ ವಿದ್ವಾಂಸರಾದ ವೈ. ನಾಗೇಶಶಾಸ್ತ್ರಿಗಳು ಬಳ್ಳಾರಿ ಜಿಲ್ಲೆಯ ಏಳುಬೆಂಚೆಯಲ್ಲಿ ೧೮೯೩ರಲ್ಲಿ ವೀರಶೈವ ಗುರುಸ್ಥಲಮಠದ ನೀಲಾಂಬಿಕೆ-ನಮನಸ್ವಾಮಿಗಳ ಪುತ್ರರಾಗಿ ಜನಿಸಿದರು. ನಿಜಾಮ ಕರ್ನಾಟಕದ ಕೊಪ್ಪಳ ಗವಿಮಠದ ಕೊಂಗೋಡು ವೀರಭದ್ರಶಾಸ್ತ್ರಿಗಳಲ್ಲಿ ೩ ವರ್ಷ ಸಂಸ್ಕೃತ ಸಾಹಿತ್ಯ ಅಭ್ಯಾಸ ಮಾಡಿ ಪಂಡಿತರಾದರು. ಕನ್ನಡ, ಸಂಸ್ಕೃತ, ತೆಲುಗು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರಾದ ಇವರು ೧೯೧೪ರಿಂದ ಬಳ್ಳಾರಿಯ ವಾಡ್ರ್ಲಾ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾದರು. ಅನಂತರ ಮದನಪಲ್ಲಿಯ ಥಿಯಾಸಫಿಕಲ್ ಕಾಲೇಜಿನಲ್ಲಿ, ಬೆಳಗಾಂನ ಲಿಂಗರಾಜ ಕಾಲೇಜಿನಲ್ಲಿ ಮತ್ತು ಬಳ್ಳಾರಿ ವೀರಶೈವ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ಇವರ ಅಗಾಧ ಪಾಂಡಿತ್ಯವನ್ನು ಮೆಚ್ಚಿ ೧೯೨೫ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯವು ‘ಸರ್ವದರ್ಶನತೀರ್ಥ’ ಎಂದೂ ತಮಿಳುನಾಡಿನ ವಿಶ್ವವಿದ್ಯಾಲಯವು ‘ಕನ್ನಡ-ಸಂಸ್ಕೃತ ವಿದ್ವಾನ್’ ಎಂದೂ ಪ್ರಶಸ್ತಿ ನೀಡಿದವು. ೧೯೩೨ರಲ್ಲಿ ಮೈಸೂರು ಮಹಾರಾಜರು ನಾಗೇಶಶಾಸ್ತ್ರಿಗಳನ್ನು  ಆಸ್ಥಾನ ವಿದ್ವಾಂಸರನ್ನಾಗಿ ಪರಿಗಣಿಸಿದರು. ಸೊಂಡೂರು ಮಹಾರಾಜರೂ ಇವರನ್ನು ಸನ್ಮಾನಿಸಿದ್ದಾರೆ.

೨೪-೪-೧೯೫೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇವರನ್ನು ೨0ನೆಯ ಶತಮಾನದ ಮಹಾಕವಿ ಎಂದು ಹೊಗಳಿ ಸನ್ಮಾನಿಸಿತು. ೧೯೩೩ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ೧೯ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರನ್ನು ಪರಿಷತ್ತು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಿತು. ೧೯೩೮ರಲ್ಲಿ ಬಳ್ಳಾರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

೧೯೨೫ರಲ್ಲಿ ಬಳ್ಳಾರಿಯಿಂದ ಕರ್ನಾಟಕ ಬಂಧು ವಾರಪತ್ರಿಕೆಗೆ ಹೊರಡಿಸಿ ಪತ್ರಿಕಾಕ್ಷೇತ್ರದಲ್ಲೂ ದುಡಿದ ಇವರು ಅನೇಕ ಸಾಹಿತ್ಯ ಪೂರ್ಣಗ್ರಂಥಗಳನ್ನು ರಚಿಸಿದ್ದಾರೆ.

ಗವಿಸಿದ್ಧೇಶ್ವರ ಪುರಾಣ, ಮರಿಯೋಗೀಶ್ವರ ಪುರಾಣ (ಪುರಾಣ ಕಾವ್ಯ), ಕಾಳಿದಾಸನ ರಘುವಂಶ, ಕುಮಾರಸಂಭವ ಕಾವ್ಯಗಳು (ಅನುವಾದ), ಮೊಗ್ಗೆಯ ಮಾಯಿದೇವನ ಅನುಭವಸೂತ್ರ (ಕನ್ನಡ ಭಾಷಾಂತರ), ಅಭಿನವ ಸೀತೆ, ವಿದ್ಯಾವಿನೋದಿನಿ (ಕಾದಂಬರಿಗಳು) ವಜ್ರಾಂಗುಳೀಯ, ವಿಜಯನಗರಾಭ್ಯುದಯ (ನಾಟಕಗಳು) – ಇವುಗಳು ಇವರು ರಚಿಸಿದ ಕೃತಿಗಳಲ್ಲಿ ಮುಖ್ಯವಾಗಿವೆ.

ಇವರು ೧೯೭೪ನೆಯ ಇಸವಿಯಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ೧೯

ಅಧ್ಯಕ್ಷರು: ವೈ. ನಾಗೇಶಶಾಸ್ತ್ರಿ

ದಿನಾಂಕ ೨೯, 0, ೩೧ ಡಿಸೆಂಬರ್ ೧೯೩೩

ಸ್ಥಳ : ಹುಬ್ಬಳ್ಳಿ

 ಸಾಹಿತ್ಯ ಪರಿಷತ್ತಿನ ಪ್ರಯೋಜನ

ಪೂರ್ವದಲ್ಲಿ ರಾಜರೂ ಮಂತ್ರಿಗಳೂ ಸಾಹಿತ್ಯ ಪಾರಂಗತರಾದಂತೆ ಅವರು ಬರೆದ ಗ್ರಂಥಗಳಿಂದಲೂ ಚರಿತ್ರಾಂಶಗಳಿಂದಲೂ ತಿಳಿದುಬರುವುದು. ಅವರು ತಮ್ಮ ರಾಜನೀತಿಯನ್ನು ಅಧಿಕಾರದ ಭಯ ದರ್ಪಗಳಿಂದ ಪ್ರಜೆಗಳಲ್ಲಿ ಪ್ರಸರಿಸಲು ಪ್ರಯತ್ನಿಸಲಿಲ್ಲ. ಅವರ ಪ್ರಯತ್ನವು ಸಾಹಿತ್ಯಮುಖದಿಂದ ಸಫಲವಾಗುವಷ್ಟು ಭಯದರ್ಪಗಳಿಂದಾಗುತ್ತಿರಲಿಲ್ಲ. ಅವರ ರಾಜನೀತಿಯೆಲ್ಲವೂ ಸಾಹಿತ್ಯಮಯವಾಗಿತ್ತು. ಜನರು ಉತ್ತಮ ಕಾವ್ಯಗಳನ್ನು ಓದುತ್ತ ಸುಲಭವಾಗಿ ರಾಜನೀತಿಗೊಳಪಟ್ಟು ರಾಜಭಕ್ತಿಯನ್ನು ಪ್ರಕಟಿಸತಕ್ಕವರಾಗುತ್ತಿದ್ದರು, ಸಾಹಿತ್ಯದಲ್ಲಿ ಅಂತಹ ಶಕ್ತಿಯೊಂದಿದೆ. ರಾಜಕೀಯ, ಸಾಮಾಜಿಕ, ಧಾರ್ಮಿಕಾದಿ ವಿಷಯಗಳು ಯಾವ ತರಹದ ಸಮಸ್ಯೆಯನ್ನಾದರೂ ಸರಳವಾಗಿ ಬಿಡಿಸುವ ಶಕ್ತಿಯು ಅದರಲ್ಲಿದೆ. ರಾಜಕೀಯ ಸಾಮಾಜಿಕಾದಿ ಸುಸಂಸ್ಕೃತಿಯನ್ನು ಜನಜೀವನದಲ್ಲಿ ನೆಲೆಗೊಳಿಸಿ ಜನತೆಯನ್ನು ಹುರುಪುಗೊಳಿಸಿ ಕಾರ್ಯಮಾಡಿಸುವ ಮುಂದಾಳಿನಂತಿರುವುದು ಈ ಶಕ್ತಿಯು. ಅಂತಹ ಶಕ್ತಿಯಿಂದ, ಪರಿಸ್ಥಿತಿಗನುಸರಿಸಿ ಜನತೆಯಲ್ಲಿ ಸುಸಂಸ್ಕೃತಿಯನ್ನು ಸ್ಥಾಪಿಸುವುದಕ್ಕಾಗಿಯೇ ಸಾಹಿತ್ಯ ಪರಿಷತ್ತಿನ ಉದಯವೆಂದರೆ ತಪ್ಪಾಗದು.

ಆಗಿರುವ ಪ್ರಯೋಜನಗಳು

ಈ ಪರಿಷತ್ತಿನಿಂದ ಆಗಿರುವ ಪ್ರಯೋಜನಗಳಲ್ಲಿ ಮುಖ್ಯವಾದುದೆಂದರೆ ಸಮ್ಮೇಳನಗಳನ್ನು ನಡೆಸುವುದು. ಈ ಕಾರ್ಯವು ಅತಿಮಹತ್ವದ್ದೆಂದು ನನ್ನ ಭಾವನೆ. ಪಂಡಿತರೂ ಕವಿಗಳೂ ಮೊದಲಾದ ಸಾಹಿತ್ಯಜ್ಞರು ಒಬ್ಬರಿಗೊಬ್ಬರು ಕೂಡಿ ಮೈತ್ರಿಯಿಂದ  ಮಾತನಾಡುವುದೇ ಅಪೂರ್ವ. ಒಬ್ಬರಿಗೊಬ್ಬರು ಮತ್ಸರಗೊಳ್ಳುವುದು ಅವರ ಸ್ವಭಾವ. ಈ ಮತ್ಸರದಿಂದ, ಆಗಬಾರದ ಕೆಲಸವಾಗಿ ಜನತೆಯ ಬಾಳೇ ಹಾಳಾಗುತ್ತಿರುವುದು ನಮ್ಮೆಲ್ಲರ ಅನುಭವ. ಸಮ್ಮೇಳನಗಳು ಇಂತಹ ದೋಷಗಳನ್ನು ಕಳೆದು ಗೆಳೆತನವನ್ನು ಬೆಳೆಯಿಸುವುವು. ಸಾಹಿತ್ಯಜ್ಞರಲ್ಲಿ ಗೆಳೆತನವುಂಟಾದರೆ ಜಗತ್ತಿಗೆ ಮಹೋಪಕಾರವಾಯಿತೆಂದೇ ಹೇಳಬಹುದು. ನಮ್ಮೆಲ್ಲರನ್ನೂ ಅಂತಹ ಸ್ನೇಹರಜ್ಜುವಿನಿಂದ ಬಂಧಿಸಿ ಒಗ್ಗಟ್ಟಿನಲ್ಲಿರಿಸಿ ಹುರಿದುಂಬಿಸಿ ಭಾಷಾಸೇವೆಯನ್ನೂ ತನ್ಮೂಲಕ ದೇಶಸೇವೆಯನ್ನೂ ಮಾಡಲು ಮುಂದುವರಿಸುವುದಕ್ಕಾಗಿಯೇ ಇಂತಹ ಸಮ್ಮೇಳನಗಳು ನಡೆಯುವುವು. ಪರಿಷತ್ತಿನಿಂದ ಪ್ರಯೋಜನಗಳಲ್ಲಿ ಇದು ಮುಖ್ಯವಲ್ಲವೇ? ಈ ಸಮ್ಮೇಳನವು ಕವಿಗಳ, ಪತ್ರಿಕಾಕರ್ತರ, ನಾಯಕರ, ವಾಗ್ಮಿಗಳ, ಇನ್ನು ಸಾಹಿತ್ಯಾಂಗಗಳಾದ ಇತರ ಕಲೆಗಳನ್ನು ಬಲ್ಲವರ ಸಮ್ಮೇಳನಗಳನ್ನು ಈಗ ನಡೆಸುವುದಕ್ಕಿಂತಲೂ ಹೆಚ್ಚಾಗಿ ನಡೆಯಿಸಿ ಪ್ರೋತ್ಸಾಹವನ್ನುಂಟುಮಾಡಿದರೆ ಕನ್ನಡ ಸಾಹಿತ್ಯದೇವಿಯು ಸರ್ವಾಂಗಸುಂದರಳಾಗಿ ರಾರಾಜಿಸುವುದರಲ್ಲಿ ಸಂಶಯವಿಲ್ಲ

ಈ ಪರಿಷತ್ತು ಸ್ಥಾಪಿತವಾದಂದಿನಿಂದ ವಿಶ್ವವಿದ್ಯಾಪೀಠಗಳಿಗೂ, ರಾಜ್ಯಾಧಿಕಾರಿಗಳಿಗೂ ಸ್ಥಾನಿಕ ಸಂಸ್ಥೆಗಳ ಅಧಿಕಾರಿಗಳಿಗೂ, ಭಾಷಾಸೇವೆಯ ಸಂಸ್ಥೆಗಳಿಗೂ ಕಾಲಕಾಲಕ್ಕೆ ತಕ್ಕ ಸೂಚನೆಗಳನ್ನು ಸಮ್ಮೇಳನದಲ್ಲಾಗುವ ಗೊತ್ತುವಳಿಗಳ ಮೂಲಕವಾಗಿ ತಿಳಿಸುತ್ತ ಕನ್ನಡ ಭಾಷೆಯನ್ನೂ ಸಾಹಿತ್ಯವನ್ನೂ ಉತ್ತಮಗೊಳಿಸಿ ಅಭಿವೃದ್ಧಿಪಡಿಸುತ್ತಿರುವುದು ಮುಖ್ಯ ಪ್ರಯೋಜನವಲ್ಲವೆ? ಇದರಂತೆ ಗ್ರಂಥಗಳನ್ನು ಶೋಧಿಸಿ ಪ್ರಕಟಿಸುವುದೂ, ಉತ್ತಮ ರೀತಿಯ ಪರಿಷತ್ಪತ್ರಿಕೆಯೊಂದನ್ನು ಪ್ರಕಟಿಸುತ್ತಿರುವುದೂ, ಗ್ರಂಥಕರ್ತರಿಗೆ ಪ್ರೋತ್ಸಾಹವನ್ನೀಯುವುದೂ-ಇವೇ ಮೊದಲಾದ ಪ್ರಯೋಜನಗಳಾಗಿರುವುದು ತಮಗೆ ತಿಳಿದ ವಿಷಯವಾಗಿದೆ.

ಆಗಬೇಕಾದ ಪ್ರಯೋಜನಗಳು

ಪರಿಷತ್ತಿನಿಂದ ಆಗಬೇಕಾದ ಪ್ರಯೋಜನಗಳು ಅನೇಕವಾಗಿರುವುವು; ಅವೆಲ್ಲಕ್ಕೂ ಜನಸಹಾಯವೂ ಧನಸಹಾಯವೂ ಅವಶ್ಯವೆಂಬುದು ವಿಧಿತವೇ. ಸದ್ಯದಲ್ಲಿರುವ ಪರಿಷತ್ತಿನ ಸದಸ್ಯರ ಸಂಖ್ಯೆಯು ಕನ್ನಡಿಗರ ಭಾಷಾಭಿಮಾನ ಶ್ಯೂನ್ಯತೆಯನ್ನು ಸೂಚಿಸುತ್ತಿರುವುದು. ಸದಸ್ಯರ ಸಂಖ್ಯೆಯನ್ನು ವೃದ್ಧಿಪಡಿಸುವುದು ನಮ್ಮ ಆದ್ಯಕರ್ತವ್ಯವು. ಇದಲ್ಲದೆ, ಜನತೆಯಲ್ಲಿ ವಾಚನಾಭಿರುಚಿಯನ್ನು ವೃದ್ಧಿಪಡಿಸಲಿಕ್ಕೆ ಅನುಕೂಲವಾದ ಕಾರ್ಯಗಳನ್ನು ಪರಿಷತ್ತಿನವರು ಹೆಚ್ಚಾಗಿ ಕೈಕೊಳ್ಳಬೇಕಾಗಿದೆ. ವಾಚನಾಭಿರುಚಿಯುಂಟಾದೊಡನೆ ಜನತೆಯು ಸಾಹಿತ್ಯಾಭಿಮುಖವಾಗುವುದು. ಆಗ ಪರಿಷತ್ತಿಗೆ ಜನಸಹಾಯವು ಅಧಿಕವಾಗಿ ದೊರೆಯಬಹುದು. ಸದ್ಯದಲ್ಲಿ ಪರಿಷತ್ತಿಗೆ ಮೈಸೂರಿನ ಮಹಾರಾಜರೂ ಅವರ ಸರ್ಕಾರದವರೂ ಧನ ಸಹಾಯವನ್ನೂ ಮಾಡಿಯೂ ಮಾಡುತ್ತಲೂ ಇರುವುದು ಅಭಿನಂದನೀಯವೂ ಸ್ತುತ್ಯವೂ ಆಗಿರುವುದು. ಈ ಪರಿಷತ್ತು ಮೈಸೂರು ಬೆಂಗಳೂರಿನವರಿಗೆ ಮಾತ್ರ ಸಂಬಂಧಿಸುದುದಲ್ಲ; ಸರ್ವಪ್ರಾಂತಗಳ ಕನ್ನಡಿಗರಿಗೂ ಸಂಬಂಧಿಸಿರುವುದು. ಕನ್ನಡಿಗರ ಸಾಹಿತ್ಯವನ್ನು ವೃದ್ಧಿಗೊಳಿಸುವುದರಲ್ಲಿ ಅಭಿಮಾನವುಳ್ಳ ಎಲ್ಲಾ ಭಾಗದ ಪ್ರಾಂತಿಕ ಸರಕಾರದವರೂ, ಲೋಕಲ್ ಬೋರ್ಡಿನವರೂ, ಶ್ರೀಮಂತರೂ, ಇನ್ನುಳಿದವರೂ ಈ ಪರಿಷತ್ತಿಗೆ ಧನಸಹಾಯ ಮಾಡುವಂತೆ ಬೇಡುವ ಹಕ್ಕು ಕನ್ನಡಿಗರೆಲ್ಲರಿಗೂ ಇರುವುದು. ಪರಿಷತ್ತಿಗೆ ಜನಧನ ಸಹಾಯವಾದಂತೆ ಅದರಿಂದ ಅನೇಕ ಪ್ರಯೋಜನಗಳು ನಮಗುಂಟಾಗುವುದರಲ್ಲಿ ತೊಡಕಿಲ್ಲ.

ಇನ್ನು ಮುಂದೆ ಬ್ರಿಟಿಷರ ಸರಕಾರಲ್ಲಿಯೂ ದೇಶೀಯ ಸಂಸ್ಥಾನಗಳಲ್ಲಿಯೂ ಹೊಸ ಸುಧಾರಣೆಗಳಾಗಿ ರಾಜ್ಯಭಾರಕ್ರಮಗಳು ಮಾರ್ಪಡುತ್ತಿರುವುವೆಂಬುದು ನಮಗೆ ತಿಳಿದ ವಿಷಯ. ಹೊಸ ಸುಧಾರಣೆಯ ರಾಜ್ಯಭಾರದಲ್ಲಿ ಇತರ ಪ್ರಾಂತಗಳಿಗೂ ಅವುಗಳ ಭಾಷೆಗಳಿಗೂ ಸಲ್ಲುವ ಅನುಕೂಲಗಳು ನಮಗೂ ನಮ್ಮ ಭಾಷೆಗೂ ಸಲ್ಲಲು ಅವಕಾಶವಿರುವುದೆ? ಅಂತಹ ಅನುಕೂಲಗಳನ್ನು ಪಡೆಯಲಿಕ್ಕೆ ಈಗ ನಾವು ಮಾಡಿಕೊಳ್ಳತಕ್ಕ ಪೂರ್ವಸಿದ್ಧತೆಯೇನು? ಈ ಪ್ರಶ್ನೆಯೇ ಸದ್ಯದಲ್ಲಿ ನಮ್ಮ ಮುಂದಿರುವುದು. ಕರ್ಣಾಟಕ ಪ್ರಾಂತರಚನೆಯಾಗಿ ಕನ್ನಡಿಗರಿಗೊಂದು ಸ್ವತಂತ್ರ ವಿಶ್ವವಿದ್ಯಾಲಯವಾದರೆ ಸಾಕೆಂದು ಹಲವರ ಅಭಿಪ್ರಾಯ. ಇದು ಶೀಘ್ರದಲ್ಲಿ ಸಫಲವಾಗಲಾರದೆಂಬುದೂ ಈಗಿನ ಪರಿಸ್ಥಿತಿಯ ಮೂಲಕ ನಮಗೆ ಗೊತ್ತಾಗುತ್ತಿರುವುದು. ಹೀಗೆಂದು ನಾವು ನಿರಾಶೆಯಿಂದ ಸುಮ್ಮನೆ ಕುಳಿತುಕೊಳ್ಳಲಿಕ್ಕೂ ಇರುವಂತಿಲ್ಲ. ನಮಗೆ ಅನುಕೂಲವನ್ನುಂಟುಮಾಡುವ ಕಾರ್ಯಗಳಲ್ಲಿ ಮುಂದುವರಿಯಬೇಕಾಗಿದೆ. ಪರಿಷತ್ತು ಸಮ್ಮೇಳನಗಳಲ್ಲಿಯೂ ತನ್ನ ವಾರ್ಷಿಕಾಧಿವೇಶನಗಳಲ್ಲಿಯೂ ನಿರ್ಣಯಿಸಿದ ಗೊತ್ತುವಳಿಗಳನ್ನೆಲ್ಲ ಕಾರ್ಯರೂಪದಲ್ಲಿ ತರುವುದೇನೋ ವಿಹಿತವೆ. ಆದರೆ ಹಾಗೆ ಮಾಡಬೇಕಾದರೆ ಮೇಲೆ ಹೇಳಿದಂತೆ ಜನಧನ ಸಹಾಯವು ಸಾಕಾದಷ್ಟಿರಬೇಕು. ಪರಿಷತ್ತು ಈಗ ತನಗಿರುವ ಜನಧನ ಸಹಾಯಕ್ಕೆ ತಕ್ಕಂತೆ, ಸದ್ಯದ ಪರಿಸ್ಥಿತಿಗೆ ಯಾವುದು ಮುಖ್ಯವೋ ಅಂತಹ ಒಂದೆರಡು ವಿಷಯಗಳನ್ನು ಕಾರ್ಯರೂಪದಲ್ಲಿ ತರುವುದಕ್ಕಾಗಿ ವರ್ಷಾವಧಿ ದುಡಿಯುವುದೇ ಮುಖ್ಯ ಪ್ರಯೋಜನವೆಂದು ನನ್ನ ಭಾವನೆ. ಅಂತಹ ಕಾರ್ಯಗಳು ಯಾವುವೆಂಬುದನ್ನು ನಿರ್ಣಯಿಸುವುದು ತಮ್ಮೆಲ್ಲರ ವಿಚಾರಕ್ಕೊಳಪಟ್ಟಿರುವುದು.

ಪರಿಷತ್ತಿನ ಇತರ ಪ್ರಯೋಜನಗಳು

ಪರಿಷತ್ತಿನಿಂದ ನಮಗೆ ಬೇಕಾದ ಇತರ ಪ್ರಯೋಜನಗಳಲ್ಲಿ, ನನಗೆ ತಿಳಿದವುಗಳಲ್ಲಿ ಕೆಲವನ್ನು ಇಲ್ಲಿ ಸೂಚಿಸುವೆನು:-

ಈಚೆಗೆ ಭಾಷೆಯಲ್ಲಿ ಎಷ್ಟೋ ವ್ಯತ್ಯಾಸಗಳಾಗಿರುವುವು. ಈ ವ್ಯತ್ಯಾಸಗಳನ್ನು ಪರೀಕ್ಷಿಸಿ, ಅವುಗಳಲ್ಲಿ ಅವಶ್ಯವೂ ಅನಿವಾರ್ಯವೂ ಆಗಿರುವ ವ್ಯತ್ಯಾಸಗಳು ಆಕ್ಷೇಪರಹಿತಗಳೆಂದು ಹೇಳುವ ಹೊಸ ವ್ಯಾಕರಣ ಗ್ರಂಥವೊಂದು ಪರಿಷತ್ತಿನ ಪಂಡಿತ ಮಂಡಲದಿಂದ ರಚಿತವಾಗುವುದು ಅವಶ್ಯ. ಕನ್ನಡ ಭಾಷಾಶಾಸ್ತ್ರವೂ, ಶಾಸ್ತ್ರೀಯ ತತ್ತ್ವಗಳನ್ನು ವಿವರಿಸುವ ಗ್ರಂಥಗಳೂ, ಗ್ರಾಮ ಸುಧಾರಣೆಗೆ ಬೇಕಾದ ಸಣ್ಣಸಣ್ಣ ಪುಸ್ತಕಗಳೂ ನಮ್ಮ ಸಾಹಿತ್ಯಕ್ಕೆ ಬೇಕಾಗಿವೆ. ಇವುಗಳನ್ನು ಬರೆಯಿಸುವುದೂ ಬರೆಯುವವರಿಗೆ ಪ್ರೋತ್ಸಾಹ ವನ್ನುಂಟುಮಾಡುವುದೂ ಪರಿಷತ್ತಿಗೆ ಅವಶ್ಯ.

ಕನ್ನಡದಲ್ಲಿ ಮುದ್ರಿತವಾದ ಪ್ರತಿಯೊಂದು ಗ್ರಂಥವೂ ಸಾಹಿತ್ಯ ಪರಿಷತ್ತಿನ ಪುಸ್ತಕ ಭಾಂಡಾರದಲ್ಲಿ ಸಿಕ್ಕುವಂತೆ ಅದನ್ನು ವೃದ್ಧಿಪಡಿಸಬೇಕು. ಬೇಕಾದ ಗ್ರಂಥವು ಕನ್ನಡಿಗರಿಗೆ ಸಮಯಕ್ಕೆ ಸರಿಯಾಗಿ ಸಿಕ್ಕದೆ ಎಷ್ಟೋ ತೊಂದರೆಯಾಗುತ್ತಿರುವುದು. ಈ ತೊಂದರೆಯನ್ನು ಪರಿಷತ್ತು ಪರಿಹರಿಸಬೇಕು. ಮುದ್ರಿತವಾಗದ ಪುಸ್ತಕಗಳನ್ನು ಸಾಧ್ಯವಾದಮಟ್ಟಿಗೆ ಸಂಗ್ರಹಿಸಬೇಕು.

Tag: Kannada Sahitya Sammelana 19, Y. Nagesha Shastri, Y. Nagesh Shasthri, Nageshshasthri

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)