ಸಾಹಿತ್ಯ ಸಮ್ಮೇಳನ-೨೦ : ರಾಯಚೂರು
ಡಿಸೆಂಬರ್ ೧೯೩೪

ಅಧ್ಯಕ್ಷತೆ: ಪಂಜೆ ಮಂಗೇಶರಾಯರು

0ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಪಂಜೆ ಮಂಗೇಶರಾಯರು

ಮಕ್ಕಳ ಸಾಹಿತಿಯಾಗಿ, ಶಿಕ್ಷಣಾಧಿಕಾರಿಗಳಾಗಿ, ಹೆಸರು ಮಾಡಿದ್ದ ಪಂಜೆ ಮಂಗೇಶರಾಯರು ರಾಮಪ್ಪಯ್ಯ- ಶಾಂತದುರ್ಗ ದಂಪತಿಗಳ ಎರಡನೇ ಮಗನಾಗಿ ೨೨-೨-೧೮೭೪ರಲ್ಲಿ ದಕ್ಷಿಣಕನ್ನಡದ ಬಂಟವಾಳದಲ್ಲಿ ಜನಿಸಿದರು.

ಪಂಜೆಯವರು ೧೮೯೫ರಲ್ಲಿ ಬಿ.ಎ. ಇಂಗ್ಲಿಷ್ ಕನ್ನಡ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ೧೯00ರಲ್ಲಿ ಐಚ್ಛಿಕ ವಿಷಯಗಳನ್ನು ಮುಗಿಸಿದರು. ೧೯0೪ರಲ್ಲಿ ಎಲ್.ಬಿ. ಪದವಿ ಗಳಿಸಿದರು. ಅನಂತರ ೧೮೯೬ರಲ್ಲಿ ಬಿ.ಎ. ಮುಗಿಸಿ, ಮಂಗಳೂರು ಗೌರ್ನಮೆಂಟ್ ಕಾಲೇಜಿನಲ್ಲಿ ಜೂನಿಯರ್ ಕನ್ನಡ ಪಂಡಿತರಾಗಿ ಕಾರ್ಯ ನಿರ್ವಹಿಸಿದರು. ೧೯೧೫ರಲ್ಲಿ ಮಂಗಳೂರು ಗೌರ್ನಮೆಂಟ್ ಹೈಯರ್ ಎಲಿಮೆಂಟರಿ ಟ್ರೈನಿಂಗ್ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾದರು. ೧೯೨೧ರಲ್ಲಿ ಮಡಿಕೇರಿಯ ಸೆಂಟ್ರಲ್ ಹೈಸ್ಕೂಲಿಗೆ ಮುಖ್ಯೋಪಾಧ್ಯಾಯರಾಗಿ ವರ್ಗವಾದರು. ೧೯೨೯ರಲ್ಲಿ ವೃತ್ತಿಯಿಂದ ನಿವೃತ್ತಿ ಹೊಂದಿದರು. ಇವರು ೧೯೩೪ರಲ್ಲಿ ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದರು. ೧೯೩೫ರಲ್ಲಿ ಹೈದ್ರಾಬಾದ್ ನಾಡಹಬ್ಬದಲ್ಲಿ ಬಾಲಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಿದರು.

ಶಬ್ದಮಣಿದರ್ಪಣಂ (೧೯೨0), ಲಘುಕೋಶ(೧೯೨೩) ಇವರ ಪಾಂಡಿತ್ಯಕ್ಕೆ ಸಾಕ್ಷಿಯಾಗಿವೆ. ಹಲ್ಲಿ, ಬಂದಣಿಕೆ, ಭಾರತ ಶ್ರವಣ, ಕಮಲಾಪುರದ ಹೋಟ್ಲಿನಲ್ಲಿ, ಹಳೆಯ ಸಬ್ ಅಸಿಸ್ಟೆಂಟಿನ ಸುಳ್ಳು ಡೈರಿಯಿಂದ ಮೊದಲಾದ ಪ್ರಬಂಧಗಳನ್ನು ಬರೆದಿದ್ದಾರೆ.

ಶಿಕ್ಷಣಕ್ಕೆ ಸಂಬಂಧಿಸಿದಂತೆ ಸುವಾಸಿನಿ ಪತ್ರಿಕೆಯಲ್ಲಿ ಹತ್ತಾರು ಲೇಖನಗಳನ್ನು ಬರೆದಿದ್ದಾರೆ. ಶಿಲಾಶಾಸನಗಳ ಬಗ್ಗೆ ಅಭ್ಯಾಸ ಮಾಡಿದ್ದಾರೆ. ಪ್ರಾಣಿಗಳೂ, ಪ್ರದೇಶಗಳೂ (೧೯೩೩) ಭೂಗೋಲಶಾಸ್ತ್ರ ಪ್ರಸಿದ್ಧ ಗ್ರಂಥವಾಗಿದೆ. ಹೀಗೆ ವೈವಿಧ್ಯಮಯ ಗ್ರಂಥಗಳನ್ನು ರಚಿಸಿರುವ ಪಂಜೆಯವರು ಹೈದ್ರಾಬಾದಿನಲ್ಲಿ ೨೪-೧0-೧೯೩೭ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ0,

ಅಧ್ಯಕ್ಷರು, ಪಂಜೆ ಮಂಗೇಶರಾಯ

ದಿನಾಂಕ ೨೮,೨೯,0 ಡಿಸೆಂಬರ್ ೧೯೩೪                                      

ಸ್ಥಳ : ರಾಯಚೂರು

ಸಮ್ಮೇಳನದ ಸಾಧನೆಗೆ ಉಪಾಧ್ಯಾಯರ ಪಾತ್ರ

ನಮ್ಮ ಹಳ್ಳಿಯ ಶಾಲೆಗಳನ್ನೂ ಹಳ್ಳಿಯ ಉಪಾಧ್ಯಾಯರನ್ನು ನಾವು ಸಾಹಿತ್ಯ ಸಮ್ಮೇಳನದ ಕಾರ್ಯಸಾಧನೆಗಾಗಿ ಎಳಕೊಳ್ಳಲೇಬೇಕು. ಸಾಹಿತ್ಯರಚನೆ, ಭಾಷಾಭಿವೃದ್ಧಿ, ಗ್ರಾಮಾರೋಗ್ಯ, ದೇಶಾಭ್ಯುದಯದ ಯಾವ ಸತ್ಕಾರ್ಯವಾದರೂ ಈ ಅಧ್ಯಾಪಕರ ಕೈಯಲ್ಲಿದೆ. ಸಮ್ಮೇಳನದ ಉದ್ದೇಶಗಳನ್ನೂ ಹಳ್ಳಿಯ ಉಪಾಧ್ಯಾಯರಿಗೆ ಮೊಟ್ಟಮೊದಲು ತಿಳಿಯಹೇಳಿ ಅವರ ಸಂಗತಿಯಲ್ಲಿ ಬೇಕಾದರೆ ವರಮಾನವನ್ನು ತಗ್ಗಿಸಿ, ಅವರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಬೇಕು. ಅಧ್ಯಾಪಕರು ತಮ್ಮ ಕೈದೀವಟಿಗೆಗಳನ್ನು ಸಾಹಿತ್ಯಾಗ್ನಿಯಿಂದ ಹೊತ್ತಿಸಿಬಿಟ್ಟರೆ, ಪ್ರತಿಯೊಂದು ಗ್ರಾಮಶಾಲೆ ಒಂದು ಪರಿಷನ್ಮಂದಿರ! ಅಲ್ಲಿಯ ಮಕ್ಕಳಕೂಟ ಚಿಕ್ಕ ಸಾಹಿತ್ಯ ಸಭೆ! ಹೀಗಾಗುವುದರಲ್ಲಿ ಸಂಶಯವಿಲ್ಲ. ಕನ್ನಡ ಭಾಷೆಯ ವ್ಯಾಪನೆಗೂ, ಜನಜೀವನದ ಸಂಸ್ಥಾನಕ್ಕೂ, ಸಾಹಿತ್ಯರಚನೆಗೂ ಹಳ್ಳಿಯ ಶಿಕ್ಷಣವೇ ಸ್ಥಿರವಾದ ತಳಹದಿ. ಈ ತಳಹದಿಯನ್ನು ಕಟ್ಟತಕ್ಕ ಶಿಲ್ಪಿಗಳು ನನ್ನ ಗೆಳೆಯರಾದ ಹಳ್ಳಿಯ ಯುವಕ ಉಪಾಧ್ಯಾಯರು.

ಪರಿಷತ್ತಿನ ಉತ್ತರಾಧಿಕಾರಿಗಳು ಹೇಗಿರಬೇಕು

ಇನ್ನು ಮುಂದೆ ಯಾರು ಪರಿಷತ್ತಿಗೆ ಹೆಚ್ಚುಮಂದಿ ಸದಸ್ಯರನ್ನು ಸೇರಿಸುತ್ತಾರೆಯೋ ಅವರಿಗೆ ಇಂತಹ ಸಮ್ಮೇಳನದ ಅಧ್ಯಕ್ಷಪಟ್ಟವನ್ನು ಕಟ್ಟುವುದು ಯುಕ್ತವೆಂದು `ಶ್ರೀಮಾನ್ ಡಿ.ವಿ. ಗುಂಡಪ್ಪನವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಒಮ್ಮೆ ವಿನೋದಪರವಾಗಿ ಮಾಡಿದ ಸೂಚನೆಯಲ್ಲಿ ನಾನು ಎರಡೇ ಮಾತುಗಳನ್ನು ಕೂಡಿಸಬೇಕಾಗಿದೆ – ‘ವಯಸ್ಸಾದವರಿಗೆ ಪಟ್ಟಕಟ್ಟಬಾರದು.’ ನಿಜವಾಗಿಯೂ ಸಾಹಿತ್ಯ ಸಮ್ಮೇಳನಕ್ಕೆ ಮುಪ್ಪಿನ ಮುದುಕರು ಅಷ್ಟೊಂದು ಬೇಕಾಗಿಲ್ಲ; ಅದಕ್ಕೆ ಬೇಕಾದವರು ಶಕ್ತಿವಂತರಾದ ಉತ್ಸಾಹಶಾಲಿಗಳಾದ ಯುವಕರು! ಕರ್ಣಾಟಕದ ಏಕೀಕರಣ ಮೊದಲಾದ ಜಟಿಲ ರಾಜಕೀಯ ವಿಷಯಗಳನ್ನು ವಾದಿಸಿ, ದೇಶಹಿತವನ್ನು ಸಾಧಿಸಬಲ್ಲ ಪತ್ರಿಕಾಕರ್ತರು! ಸರಕಾರದ ಮನ್ನಣೆಗೂ ಕನ್ನಡಿಗರ ವಿಶ್ವಾಸಕ್ಕೂ ಪಾತ್ರರಾದ ದೇಶಭಕ್ತರು! ಸಮ್ಮೇಳನದ ಕಾರ್ಯಕಲಾಪಗಳು ಇಂಥವರ ಪ್ರೇಮ, ಅಭಿಮಾನ, ಮನೋಭಾವಗಳಿಗೆ ಅನುರೂಪವಾದವುಗಳು. ಪಂಪಾದಿ ಕವಿಗಳೂ ಪೊನ್ನಮ್ಮಾದಿ ಕವಯತ್ರಿಯರೂ ರಚಿಸಿದ ಪುರಾತನ ಸಾಹಿತ್ಯ ಮತ್ತು ಅದರಿಂದ ಜನಿಸಿದ ಆಧುನಿಕ ಸಾಹಿತ್ಯ ಹೀಗೆ ಸಕಲ ಕನ್ನಡ ಸಾಹಿತ್ಯಕ್ಕೆ – ಹಲವು ತಲೆಮಾರು ಕಳೆದು ನಮ್ಮ ಕೈಗೆ ಬಂದ ಇಷ್ಟು ವಿಸ್ತಾರವಾದ ಈ ಆಸ್ತಿಗೆ ಕನ್ನಡಿಗರು, ಮುಸಲ್ಮಾನರು, ಕ್ರೈಸ್ತರು, ಹಿಂದೂಗಳು, ಬೃಹತ್ ಕರ್ಣಾಟಕದವರೆಲ್ಲರೂ ಹಕ್ಕುದಾರರು. ಕನ್ನಡ ಸಾಹಿತ್ಯದ ಮುಂದಿನ ಕೃಷಿಕಾರ್ಯವು ನಡೆಯಬೇಕು. ನಮ್ಮ ಯುವಕರಿಂದ; ಭಾಷಾಭಕ್ತರೂ, ಸಾಹಿತ್ಯಪ್ರೇಮಿಗಳೂ, ಉತ್ತಮ ಚರಿತರೂ ಉದ್ಯೋಗಶೀಲರೂ ಆಗಿರುವ ವೀರ ಯುವಕರಿಂದ, ಅಂಥವರ ಕೈಗಳಿಗೆ ಹಿರಿಯರ ಹೆಗಲಮೇಲಿನ ನೇಗಿಲು ಬರಲಿಕ್ಕಿದೆ.

ಇಂಗ್ಲಿಷ್ ವಿದ್ಯಾಭ್ಯಾಸವು ಬಂದು ಹಿಂದೂಸ್ಥಾನವನ್ನು ಕೈಹಿಡಿದು ಎಬ್ಬಿಸುವವರೆಗೆ ಕನ್ನಡವು ಚೇತರಿಸಿಕೊಳ್ಳುವಷ್ಟು ಸಮರ್ಥವಾಗಿರಲಿಲ್ಲ. ದೂರದ ದಿಗಂತದಲ್ಲಿಯ ಹೊಸ ಪ್ರಪಂಚವನ್ನು ಕನ್ನಡಿಗನ ಮುಂದೆ ತೋರಿ, ‘ನೋಡಲ್ಲಿ ಮುಂಬೆಳಗು ಮೂಡುತಿದೆ ಹೊಂಬಿಸಿಲು’ ಎಂಬ ಸೊಲ್ಲನ್ನು ಕನ್ನಡಿಗನ ಕಿವಿಯಲ್ಲಿ ಹಾಡಿದುದು ಇಂಗ್ಲಿಷ್ ಐತಿಹಾಸ! ಭಾಷಾಪ್ರೇಮ, ದೇಶವಾತ್ಸಲ್ಯ, ಐಕ್ಯಸಾಧನೆ, ಸ್ವಾತಂತ್ರ್ಯ ಸಿದ್ಧಿ ಎಂಬೀ ಉದಾತ್ತ ವಿಚಾರಗಳನ್ನು ಅವನ ಮನಸ್ಸಿನಲ್ಲಿ ಒತ್ತಿದುದು ಇಂಗ್ಲಿಷ್ ವಾಙ್ಮಯ! ಈ ವಿಚಾರಗಳ ಪ್ರೇರಣೆಯ ಫಲವೇ ಈ ಸಾಹಿತ್ಯ ಸಮ್ಮೇಳನ.

ಹಿಂದಿನವರ ಧ್ಯೇಯಕ್ಕಿಂತ ಈ ಸಾಹಿತ್ಯ ಸಮ್ಮೇಳನದ ಉದ್ದೇಶಗಳು ಇನ್ನೂ ಅಧಿಕವಾಗಿವೆ. ಅವುಗಳ ಕಾರ್ಯಕ್ಷೇತ್ರ ವಿಸ್ತಾರವಾಗಿದೆ. ಸಮ್ಮೇಳನವು ಕನ್ನಡಿಗರಲ್ಲಿ ಪರಸ್ಪರ ಪರಿಚಯಕ್ಕೆ ಅವಕಾಶವನ್ನು ಒದಗಿಸುತ್ತದೆ. ಯೋಗ್ಯ ಸಾಹಿತ್ಯ ರಚನೆಗೆ ಅನುಕೂಲವನ್ನು ಕಲ್ಪಿಸುತ್ತದೆ. ಗ್ರಂಥಕರ್ತರಿಗೆ ಬರಬಹುದಾದ  ಸಮಸ್ಯೆಗಳನ್ನು ವಿಚಾರಿಸುತ್ತದೆ. ಕರ್ಣಾಟಕತ್ವ ಸಿದ್ಧಿಗಾಗಿ ಕನ್ನಡ ಪ್ರಾಂತದಲ್ಲಿ ಜಾಗೃತಿಯುಂಟು ಮಾಡುತ್ತದೆ.

ಈ ಘನೋದ್ದೇಶಗಳನ್ನು ಮುಂದಿಟ್ಟು ಸಮ್ಮೇಳನವು ಅನೇಕ ಕಾರ್ಯಗಳನ್ನು ಮಾಡಿದೆ, ಮಾಡುತ್ತಿದೆ. ಶಬ್ದಮಣಿದರ್ಪಣ, ಚಾವುಂಡರಾಯಪುರಾಣ, ಪಂಪಭಾರತ ಮೊದಲಾದ ಪ್ರಸಿದ್ಧ ಕೃತಿಗಳನ್ನು ಪರಿಷ್ಕರಿಸಿ ಮುದ್ರಿಸಿದೆ. ಒಬ್ಬರ ಮುಖ ಒಬ್ಬರು ನೋಡದೆ, ‘ಬೆಕ್ಕಿನ ಬಿಡಾರ ಬೇರೆ’ಯೆಂದು ನೆನಸಿ, ಪ್ರತ್ಯೇಕವಾಗಿದ್ದವರು ಇಂದು ಕನ್ನಡಕ್ಕಾಗಿ ದುಡಿಯಲು ಸಮೀಪವರ್ತಿಗಳು; ಕರೆದಲ್ಲಿ ಹೋಗಿ ಕಂಡ ತಿಳಿವನ್ನು ಮನವಾರೆ ತಿಳಿಸುವ ಸ್ನೇಹಿತರು. ಇಂಥವರ ಪರಿಚಯದಿಂದ, ಮಾತಾಳಿಕೆಯಿಂದ, ಹುರುಪಿನಿಂದ ಕನ್ನಡವು ತಲೆಯೆತ್ತಿದೆ. ಇದಕ್ಕೆ ಅಲ್ಲಲ್ಲಿ ಸ್ಥಾಪಿತವಾದ ಕರ್ಣಾಟಕಸಂಘ, ಮಂಡಳ, ಗುಂಪು ಇವೇ ಸಾಕ್ಷ್ಯಗಳು. ಜನಸಾಮಾನ್ಯಕ್ಕೆ ಕನ್ನಡದಮೇಲೆ ಅಭಿಮಾನ ಹುಟ್ಟಿಸುವಂಥ ಸಾಹಿತ್ಯ ಸಮಾರಂಭ, ಕವಿಗಳ ಜನ್ಮ ದಿನಾಚರಣ, ಧರ್ಮೋಪದೇಶಕರ ವರ್ಧಂತ್ಯುತ್ಸವ, ಪುಸ್ತಕ ಪ್ರದರ್ಶನ, ಇವು ಸಮ್ಮೇಳನವು ಪರಿಷತ್ಪತ್ರಿಕೆಯ ಮೂಲಕ ಮಾಡುತ್ತಲಿರುವ  ಪ್ರಯತ್ನಫಲಗಳು. ಸಮ್ಮೇಳನದ ಕಾರ್ಯಗಳನ್ನು ಕುರಿತು ನಾನು ಹೇಳುವುದಕ್ಕಿಂತ ಮೈಸೂರು ಸಂಸ್ಥಾನದ ದಿವಾನ್ ಸಾಹೇಬರು ಕಳೆದ ಮೇ ತಿಂಗಳಲ್ಲಿ ಕೊಟ್ಟ ಅಮೂಲ್ಯ ಭಾಷಣದೊಳಗಣ ನಾಲ್ಕು ವಾಕ್ಯಗಳು ಎಷ್ಟು ಸ್ಫುಟವಾಗಿ ಹೇಳುತ್ತವೆ!

ಮುಖ್ಯವಾಗಿ, ಕರ್ಣಾಟಕ ಸಾಹಿತ್ಯ ಪರಿಷತ್ತು ಸ್ಥಾಪಿತವಾದ ಕಾಲದಿಂದಲಂತು ವರ್ಷವರ್ಷವೂ ಪುಸ್ತಕ ಪ್ರಕಟನೆಯು ಹೆಚ್ಚುತ್ತ ಬಂದಿದೆ. ಪುಸ್ತಕಗಳ ಸಂಖ್ಯೆಯು ಹೆಚ್ಚಿರುವುದು ಮಾತ್ರವೇ ಅಲ್ಲದೆ ಪುಸ್ತಕಗಳನ್ನು ಬರೆದಿರುವ ನಾನಾ ವಿಷಯಗಳ ಸಂಖ್ಯೆಯೂ ಹೆಚ್ಚು. ಪುಸ್ತಕಗಳ ಬಾಹ್ಯರೂಪವೂ ಹೆಚ್ಚು ಹೆಚ್ಚಾಗಿ ಅಂದವಾಗುತ್ತ ಬಂದಿವೆ. ದೇಶದಲ್ಲಿ ಗ್ರಂಥರಚನೆಯ ಕಾರ್ಯವು ಈ ರೀತಿ ಶ್ರೇಷ್ಠ ರೀತಿಯಲ್ಲಿ ನಡೆದುದಕ್ಕೆ ಪ್ರಚೋದಕವಾಗಿ ಪ್ರೇರಣೆಗೊಳಿಸಿದ ಖ್ಯಾತಿಯು ಪರಿಷತ್ತಿಗೆ ಸಲ್ಲತಕ್ಕುದಾಗಿದೆ.’

Tag: Kannada Sahitya Sammelana 20, Panje Mangesha Rao, Rayaru

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)