ಸಾಹಿತ್ಯ ಸಮ್ಮೇಳನ-೨೧ : ಮುಂಬಯಿ
ಡಿಸೆಂಬರ್ ೧೯೩೫

ಅಧ್ಯಕ್ಷತೆ: ಎನ್.ಎಸ್. ಸುಬ್ಬರಾವ್

೨೧ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಎನ್.ಎಸ್. ಸುಬ್ಬರಾವ್

ದಿಟ್ಟ ನಿಲುವು, ಸ್ಪಷ್ಟನಡೆ ಅಸಾಮಾನ್ಯ ಸ್ಮೃತಿಶಕ್ತಿಯ ಶಿಕ್ಷಣ ತಜ್ಞ ಎನ್.ಎಸ್. ಸುಬ್ಬರಾಯರು (ನಂಜನಗೂಡು ಸುಬ್ಬಣ್ಣರಾಯರ ಮಗ ಸುಬ್ಬರಾವ್) ಶ್ರೀಮಂತ ಕುಟುಂಬದಲ್ಲಿ ೧೮೮೫ರಲ್ಲಿ ಹುಟ್ಟಿ ಬೆಳೆದವರು. ಬೆಂಗಳೂರು, ಮದರಾಸುಗಳಲ್ಲಿ ಶಿಕ್ಷಣ ಪಡೆದು ಎಂ.ಎ. ಮತ್ತು ಬಾರ್ ಅಟ್ ಲಾ ಪದವಿಗಳನ್ನು ಕೇಂಬ್ರಿಜ್ ವಿಶ್ವವಿದ್ಯಾನಿಲಯದಿಂದ ಗಳಿಸಿದ ಪ್ರತಿಭಾನ್ವಿತರು. ಕನ್ನಡ ಇಂಗ್ಲಿಷ್, ಫ್ರೆಂಚ್, ಜರ್ಮನ್ ಭಾಷೆಗಳಲ್ಲಿ ಪರಿಣತಿ ಹೊಂದಿದ ಇವರು ನಡೆ ನುಡಿ ಉಡಿಗೆ ತೊಡಿಗೆಗಳಲ್ಲಿ ಶಿಸ್ತಿನ ಸಿಪಾಯಿ ಆಗಿದ್ದರು.

ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಅನಂತರ ವಿದ್ಯಾಇಲಾಖೆಯ ನಿರ್ದೇಶಕರಾಗಿ, ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದರು. ನಿವೃತ್ತಿಯ ನಂತರ ಅಲಹಾಬಾದ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಮೊದಲ ದುಂಡುಮೇಜಿನ ಪರಿಷತ್ತಿಗೆ ಮೈಸೂರಿನ ಪರವಾಗಿ ಹೋದ ಮಿರ್ಜಾ ಇಸ್ಮಾಯಿಲರ ಕಾರ್ಯದರ್ಶಿ ಆಗಿದ್ದರು. ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಿರ್ಮೂಲನಗೊಳಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಚಾರ ಪುಸ್ತಕಮಾಲೆ ಯೋಜನೆ ಜಾರಿಗೆ ತಂದರು. ತಾರಿಫ್ ಬೋರ್ಡ್ ಸದಸ್ಯರಾಗಿ ಬೊಂಬಾಯಿ ಸಮ್ಮೇಳನಕ್ಕೆ ಹೋಗಿದ್ದರು. ಆಲ್ ಇಂಡಿಯಾ ಎಕನಾಮಿಕಲ್ ಕಾನ್ಫರೆನ್ಸಿನ ಅಧ್ಯಕ್ಷರಾಗಿದ್ದುರು. ೧೯೩೫ರಲ್ಲಿ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು. ಶಿಕ್ಷಣ ಇಲಾಖೆಯಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸಿದರು.

ಸುಬ್ಬರಾಯರ ಸೇವೆಯನ್ನು ಮೆಚ್ಚಿ ಮಹಾರಾಜರು ರಾಜಕಾರ್ಯಪ್ರವೀಣ ಬಿರುದನ್ನಿತ್ತರು.

ಅಪಾರ ಪಾಂಡಿತ್ಯವಿದ್ದರೂ ತಮ್ಮ ಬರವಣಿಗೆಯ ಕಡೆಗೆ ಸುಬ್ಬರಾವ್ ಅವರು ಲಕ್ಷ್ಯ ನೀಡಲಿಲ್ಲ. ೧೯೩೩-೩೪ರ ಸುಮಾರಿನಲ್ಲಿ ‘ಸಂ ಆಸ್ಪೆಕ್ಟ್ಸ್ ಆಫ್ ಎಕನಾಮಿಕ್ ಪ್ಲಾನಿಂಗ್’ ಕುರಿತು ಮಾಡಿದ ಭಾಷಣಗಳು ಪುಸ್ತಿಕೆಯ ರೂಪದಲ್ಲಿ ಪ್ರಕಟವಾಗಿವೆ.

ಶ್ರೀ ಸುಬ್ಬರಾಯರು ೨೯-೬-೧೯೪೩ರಂದು ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ-೨೧

ಅಧ್ಯಕ್ಷರು, ಎನ್.ಎಸ್. ಸುಬ್ಬರಾವ್

ದಿನಾಂಕ ೨೬,೨೭,೨೮ ಡಿಸೆಂಬರ್ ೧೯೩೫

ಸ್ಥಳ : ಮುಂಬಯಿ

ಬೊಂಬಾಯಿ ಸಮ್ಮೇಳನ ಸೇರಿದ ಔಚಿತ್ಯ

ಅನುಗ್ರಹಿಯಾದ ಒಂದು ಕನ್ನಡ ಪತ್ರಿಕೆಯು ಈ ಅಧ್ಯಕ್ಷತೆಯಲ್ಲಿ ಕುರಿತು ಬರೆದ ಕೆಲವು ಚತುರೋಕ್ತಿಗಳು ನನ್ನ ನೆನಪಿಗೆ ಬರುತ್ತಿವೆ. ಆ ವಾಕ್ಯಗಳು ನನ್ನ ಅಧ್ಯಕ್ಷತೆಯನ್ನು ಹೀಗೆ ಸಲುವಳಿಸಿವೆ :- ಬೊಂಬಾಯಿಯು ಕರ್ನಾಟಕದ ಭಾಗವಲ್ಲ ಎಂಬುದು ನಿಶ್ಚಯ. ಅಲ್ಲಿ ಈ ಪರಿಷತ್ತನ್ನು ಮಾಡುವುದು. ಅವಧಿಯೇ ಸರಿ. ಆದರೆ ಅಧ್ಯಕ್ಷರೂ ಕನ್ನಡ ಸಾಹಿತ್ಯದಲ್ಲಿ ಅಷ್ಟೇನೂ ಪಾಂಡಿತ್ಯ ಉಳ್ಳವರಲ್ಲ. ಈ ಭಾಷೆಯಲ್ಲಿ ಯಾವೊಂದು ಸಾಹಿತ್ಯ ಸೃಷ್ಟಿಯನ್ನು ಮಾಡಿಸಿದವರಲ್ಲ. ಆದುದರಿಂದ ಕನ್ನಡಕ್ಕೆ ವಿದೇಶಿಯವಾದ ಬೊಂಬಾಯಿಗೆ ಈ ಅಧ್ಯಕ್ಷರೇ ಯೋಗ್ಯರು. ಚೆನ್ನಾಯಿತು ತೀರ್ಮಾನ ವಾಕ್ಯರಚನೆಯಲ್ಲ ಎರಡು ಅಲ್ಲಗಳ ಹೊಂದಿಕೆಯಿಂದ ಇಂದು ಅಹುದು ಎಂಬುವನ್ನೇ ಧೃಢಿಕರಿಸಿದಂತಾಯಿತಲ್ಲವೇ ಇದು! ಇರಲಿ.

ಈ ಬೊಂಬಾಯಿಯು ನಿಶ್ಚಯವಾಗಿ ಕರ್ನಾಟಕದ ಅಂಗವಲ್ಲ;  ಅದಕ್ಕಾಗಿ ನಾವು ವಿಷಾದಿಸಬೇಕಾಗಿಯೂ ಇಲ್ಲ. ಹಾಗೆಯೇ ಈ ನಗರವು ಮಹಾರಾಷ್ಟ್ರ, ಗುಜರಾತ್ಗಳಿಗೆ ಬೇರೆಯಾಗಿ ಸೇರಿದ್ದೂ ಅಲ್ಲ. ಕೆಲವು ವರ್ಷಗಳ ಹಿಂದೆ ಇದಕ್ಕೆ ‘’ಪೂರ್ವದ ಅಲೆಗ್ಸಾಂಡ್ರಿಯ” ಎಂದು ಜಗತ್ತು ಕರೆಯಿತು. ಮತ್ತೀ ವಿಶ್ವವ್ಯಾಪ್ತ ಬಿರುದು ಇದಕ್ಕಿಂದಿಗೂ ಇದೆ. ಇದರ ಜಾತಿಯು ಇವರದೇ. ಯಾವ ಜಾತಿ ಮತ ವರ್ಣ ಸಂಪತ್ತಿಗಳ ದುರಭಿಮಾನಕ್ಕೂ ಸಿಲುಕದ್ದು, ನಿಲುಕದ್ದು. ಯೋಗ್ಯತೆಗೆ ಮುಕ್ತದ್ವಾರ. ಕುಶಲತೆಯ ಕರ್ಮರಂಗ. ನಮ್ಮ ಪರಿಷತ್ತನ್ನು ಇಲ್ಲಿ ಮೆರೆಸಿರುವುದು ನಮ್ಮ ಗ್ರಾಣಾನುರಾಗವನ್ನು ಮೆರೆಸಲಿಕ್ಕಲ್ಲ, ನಮ್ಮ ಪ್ರಾಂತದೊಳಗಣ ಭೇದ ಭಿನ್ನತ್ವ ಕಲಹಗಳ ಕೊಳೆಯನ್ನು ತೊಳಿಯಲಿಕ್ಕಲ್ಲ. ತಂಡ ಪಂಗಡಗಳ ಅಭಿಮಾನ ಗೀತೆಯು ಇಂಥ ಜಗನ್ಮಿತ್ರ ನಗರದಲ್ಲಿ ಅಭಾಸವನ್ನುಂಟುಮಾಡದಿರದು.

ಇಲ್ಲಿ ನಾವು ನಮ್ಮ ವಿಚಾರೋಪಾಯಗಳ ನಿರ್ದೋಷತೆ ನಿರ್ವಹಣತ್ವಗಳನ್ನು ತೋರಿಸಿಕೊಡಬೇಕು. ಇಲ್ಲಿ ನಮ್ಮ ಆಕಾಂಕ್ಷೆಗಳ ಔಚಿತ್ಯ ಯಥಾರ್ಥತೆಗಳನ್ನು ನಾವು ಸಾಧಿಸಬೇಕು: ಅಂದರೆ, ನಮ್ಮ ಪ್ರಾಂತದೊಳಗೆಲ್ಲೆಲ್ಲಿಯೂ ನಮ್ಮ ಧ್ಯೇಯಶಕ್ತಿಯು ಹರಡುವದು: ಅಷ್ಟೇ ಅಲ್ಲ, ಈ ಬೊಂಬಾಯಿಯು ಇಂದು ಜಗತ್ತಿನ ಒಂದು ಮುಖವೂ ಆಗಿರೋದರಿಂದ, ತನ್ಮೂಲಕ ವಿಶಾಲ ವಿಶ್ವಕ್ಕೂ ನಮ್ಮ ಆದರ್ಶ ಪಥವನ್ನು ಸ್ಥಾಪಿಸಿ ತೋರಿಸಿದಂತಾಗುವದು. ಈ ವರ್ಷದ ಪರಿಷತ್ತನ್ನು ಇಲ್ಲಿ ಕೂಡಿಸಿದುದರ ಮಹತ್ವವು ಹೀಗಿದೆಯೆಂದು ನನಗೆ ತೋರುತ್ತದೆ. ಈಗ ಈ ಸ್ಥಾನಕ್ಕೆ ತಕ್ಕಂತೆ ಕಾರ್ಯಮಾನವೂ ಭರದಿಂದ ನಡೆದರೇನೇ ಇದೆಲ್ಲವೂ ಸಾರ್ಥಕ.

ಪರಿಷತ್ತು ಹಳ್ಳಿಗಳಲ್ಲಿ ಕೈಗೊಳ್ಳಬೇಕಾದ ಕಾರ್ಯ

ಹಳ್ಳಿಗಳಲ್ಲಿ ಜ್ಞಾನ ಮತ್ತು ಸಂಸ್ಕೃತಿ ಪ್ರಸಾರಣೆ ಮಾಡಲು ಕರ್ಣಾಟಕ ಸಾಹಿತ್ಯ ಪರಿಷತ್ತು ಈಚೆಗೊಂದು ವ್ಯಾಪಕ ಕಾರ್ಯಕ್ರಮವನ್ನು ಯೋಚಿಸಿರುವುದು. ಅದಕ್ಕೆ ಮೈಸೂರು ಸರಕಾರದ ಒಪ್ಪಿಗೆಯೂ ಬೆಂಬಲವೂ ದೊರೆತಿದೆ. ಆ ಯೋಜನೆಯ ಪ್ರಕಾರ ಪರಿಷತ್ತು ಆಗಾಗ್ಗೆ ಮಾತ್ರ ಭಾಷಣ ಮಾಡದೆ. ಸತತೋದ್ಯೋಗವನ್ನು ಮಾಡಬೇಕೆಂದಿರುವದು. ಮತ್ತೆ ಹಳ್ಳಿಗಳಲ್ಲಿ ಕೆಲಸ ಮಾಡುವದಕ್ಕಾಗಿ ತರುಣರನ್ನು ತರಬೇತು ಮಾಡುವ ಏರ್ಪಾಟುಗಳನ್ನೂ ಅದು ಕೈಕೊಳ್ಳುವದಾಗಿದೆ. ಈ ಸಂದರ್ಭದಲ್ಲಿ ನಾನು ಇನ್ನೊಂದು ಸಾಧ್ಯವಾಗಬಹುದಾದ ಕಾರ್ಯಕ್ರಮವನ್ನು ಸೂಚಿಸುವೆನು: ಇಂಗ್ಲೆಂಡಿನಲ್ಲಿ “ಯೂನಿವರ್ಸಿಟಿ ಸೆಟ್ಲ್ಮೆಂಟ್ಸ್” ಎಂಬ ಸಂಸ್ಥೆಗಳಿವೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯವೂ, ಅದರ ಆಶ್ರಯದಲ್ಲಿರುವ ಹಲವು ಕಾಲೇಜುಗಳೂ, ಲಂಡನ್, ಮತ್ತು ಲಿವರ್ಪೂಲ್ನಂಥಾ ಶಹರುಗಳಲ್ಲಿ, ಬಡಜನರ ವಸತಿಗಳ ಮಧ್ಯೆ ವಾಸಸ್ಥಾನಗಳನ್ನು ಕಾಯಂ ಆಗಿ ಸ್ಥಾಪಿಸಿಕೊಂಡಿವೆ. ಅಲ್ಲಿ ಆ ವಿದ್ಯಾಲಯಗಳ ಅಧಿಕಾರಿಗಳೂ ಪದವಿ ಪರೀಕ್ಷೆಗಳ ಉಮೇದುವಾರರೂ ಹೋಗಿ, ಕೆಲಕಾಲ ಅಲ್ಲಿಯೆ ವಾಸಿಸಿ, ತಮ್ಮ ನೆರೆಹೊರೆಯವರಿಗೆ ಆಮೋದ ಪ್ರಮೋದಗಳಿಂದ ಶಿಕ್ಷಣ ಕೊಡಲೆತ್ನಿಸವರು. ನಮ್ಮ ದೇಶದಲ್ಲಿಯೂ ಅಂಥಾ ಕೆಲಸವು ಆಗಬೇಕಾಗಿದೆ. ಆದರೆ ತರಬೇತಾದ ಕೆಲಸಗಾರರ ಅಧೀನದಲ್ಲಿ “ಗ್ರಾಮ ವಸಾಹತು”ಗಳನ್ನು ಸ್ಥಾಪಿಸಿ, ಅವುಗಳ ಮೂಲಕ ನಮ್ಮ ಕಾಲೇಜಿನ ತರುಣರು ಹಳ್ಳಿಗಳಿಗೆ ಹೋಗಿ ಹಳ್ಳಿಗರ ಹಿತ ಮತ್ತು ಬೋಧನೆಗಾಗಿ ಕೆಲಸ ಮಾಡುವಂತಾಗಬೇಕು. ಈ ಕಾರ್ಯಕ್ಷೇತ್ರವು ಬಹು ವಿಶಾಲವಾಗಿದೆ. ಇಲ್ಲಿ ವಿಶ್ವವಿದ್ಯಾನಿಲಯಗಳನ್ನೂ ವಿದ್ಯಾಭ್ಯಾಸ ಇಲಾಖೆ, ಆರೋಗ್ಯ ಇಲಾಖೆ- ಇವೇ ಮೊದಲಾದ ಸರಕಾರಿ ಸಂಸ್ಥೆಗಳೂ ಪರಿಷತ್ತು ಮತ್ತು ಕರ್ನಾಟಕ ಸಂಘಗಳಂಥಾ ಭಾಷೆ ಮತ್ತು ಸಂಸ್ಕೃತಿಗಾಗಿ ದುಡಿಯುವ ಸಂಸ್ಥೆಗಳೂ ಒಟ್ಟಾಗಿ ಸೇರಿಸಿ ತ್ರಿವೇಣಿ ಸಂಗಮವಾಗಿ ವಿಶಾಲವಾಗಿ ಗ್ರಾಮಕ್ಕೆ ಪುನರ್ಘಟನಾ ಕಾರ್ಯವನ್ನು ಕೈಗೊಳ್ಳಬಹುದಾಗಿದೆ.

Tag: Kannada Sahitya Sammelana 21, N.S. Subbarao

 

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)