ಸಾಹಿತ್ಯ ಸಮ್ಮೇಳನ-೨೨ : ಜಮಖಂಡಿ
ಡಿಸೆಂಬರ್ ೧೯೩೭

ಅಧ್ಯಕ್ಷತೆ: ಬೆಳ್ಳಾವೆ ವೆಂಕಟನಾರಣಪ್ಪ

bellave-venkatanaranappa

೨೨ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಬೆಳ್ಳಾವೆ ವೆಂಕಟನಾರಣಪ್ಪ

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ, ವಿಜ್ಞಾನರಂಗದಲ್ಲಿ ಮತ್ತು ಸಾರ್ವಜನಿಕರಂಗದಲ್ಲಿ ಅವಿಶ್ರಾಂತವಾಗಿ ದುಡಿದ ಮಹನೀಯರು ಬೆಳ್ಳಾವೆ ವೆಂಕಟನಾರಣಪ್ಪ.  ಅವರು ವೆಂಕಟಕೃಷ್ಣಯ್ಯ- ಲಕ್ಷ್ಮೀದೇವಿ ಅವರ ಪುತ್ರರಾಗಿ ೨-೧0-೧೮೭೨ರಲ್ಲಿ ಜನಿಸಿದರು. ತುಮಕೂರಿನಲ್ಲಿ ಪ್ರೌಢಶಾಲಾಶಿಕ್ಷಣ ಮುಗಿಸಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ೧೮೯೨ ರಲ್ಲಿ ಬಿ.ಎ. ಪದವಿ ಪಡೆದು ಮದ್ರಾಸ್ ವಿಶ್ವವಿದ್ಯಾನಿಲಯದಿಂದ ೧೯0೩ರಲ್ಲಿ ಎಂ.ಎ. ಪದವಿ ಗಳಿಸಿದರು.

೧೮೯೨ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ೧೪ ವರ್ಷಗಳ ಕಾಲ ಎಫ್.ಎ. ತರಗತಿಗಳಿಗೆ ಮಾನವ ಶರೀರ ಶಾಸ್ತ್ರ ಬೋಧಿಸಿದರು. ೩0 ವರ್ಷಗಳ ಸೇವೆಯ ನಂತರ ಸ್ವಇಚ್ಛೆಯಿಂದ ೧೯೨೩ರಲ್ಲಿ ನಿವೃತ್ತರಾದರು.

ಪರಿಷತ್ತಿನ ಸ್ಥಾಪಕರಲ್ಲಿ ಒಬ್ಬರಾಗಿ ಆಧಾರಸ್ತಂಭದಂತೆ ದುಡಿದು ಕೃಷ್ಣರಾಜ ಪರಿಷನ್ಮಂದಿರ ಕಟ್ಟಡದ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸಿದರು. ಪರಿಷತ್ತಿನ ಕಾರ್ಯದರ್ಶಿಗಳಾಗಿ (೧೯೧೬, ೧೯೨೨-೨೬ರಲ್ಲಿ) ದುಡಿದಿದ್ದರು. ೧೯೨0-೧೯೨೧, ೧೯೨೭-೧೯೩೩ವರೆಗೆ ಕೋಶಾಧಿಕಾರಿಗಳಾಗಿ ಸೇವೆ ಸಲ್ಲಿಸಿದರು. ೧೯೧೯-೧೯೩೬ರವರೆಗೆ ಪರಿಷತ್ಪತ್ರಿಕೆ ಸಂಪಾದಕ ಮಂಡಳಿ ಸದಸ್ಯರಾಗಿದ್ದರು. ಬಸವನಗುಡಿ ಸಹಕಾರಿ ಸಂಘಗಳ ಸ್ಥಾಪಕ ಸದಸ್ಯರಾಗಿ, ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಯ ಸ್ಥಾಪಕರಾಗಿ, ಬೆಂಗಳೂರು ಸಿಟಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ, ಮಾಗಡಿ ವೈದಿಕ ಧರ್ಮಶಾಲೆಯ ನಿರ್ದೇಶಕರಾಗಿ, ಮುಲಕನಾಡು ಸಭೆಯ ಅಧ್ಯಕ್ಷರಾಗಿ- ಇನ್ನೂ ಅನೇಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದರು. ಬಸವನಗುಡಿಯ ಮಲ್ಲಿಕಾರ್ಜುನ ಗುಡಿಯನ್ನು ಜೀರ್ಣೋದ್ಧಾರ ಮಾಡಿದ್ದಾರೆ.

ಶ್ರೀಮನ್ಮಹಾರಾಜರು ಇವರ ಸಾರ್ವಜನಿಕ ಸೇವೆಗೆ ಮೆಚ್ಚಿ ರಾಜಸೇವಾಸಕ್ತ ಬಿರುದನ್ನು ದಯಪಾಲಿಸಿದರು. ೧೯೩೭ರಲ್ಲಿ ಜಮಖಂಡಿಯಲ್ಲಿ ನಡೆದ ೨೨ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ನೀಡಿ ಗೌರವಿಸಿದರು. ೧-೧೧-೧೯೪೧ರಲ್ಲಿ ಬೆಂಗಳೂರಿನ ನಾಗರಿಕರು ಮಾನಪತ್ರ ನೀಡಿ ಗೌರವಿಸಿದರು.

ನಿಘಂಟು, ವಿಜ್ಞಾನ, ಪಠ್ಯಗ್ರಂಥಗಳನ್ನು ರಚಿಸಿರುವ ಬೆಳ್ಳಾವೆ ವೆಂಕಟರಮಣಯ್ಯನವರ ಮುಖ್ಯ ಕೃತಿಗಳು ಹೀಗಿವೆ:

ಜೀವವಿಜ್ಞಾನ (೧೯೩೯), ಗುಣಸಾಗರ (ಅನುವಾದಿತ ಕಾದಂಬರಿ), ಕನ್ನಡ ಐದನೆಯ ಪುಸ್ತಕ (ಪಠ್ಯ), ವಿಕ್ರಮಾರ್ಜುನ ವಿಜಯ (ಸಂಪಾದಿತ), ಸೋಮೇಶ್ವರ ಶತಕ (ಸಂಪಾದಿತ), ಶಬ್ದಮಣಿದರ್ಪಣ (ಸಂಪಾದಿತ), ಇಂಗ್ಲಿಷ್-ಕನ್ನಡ ನಿಘಂಟು (ಸಂಪಾದಕತ್ವ), ವಿಜ್ಞಾನ ಮಾಸಪತ್ರಿಕೆ (ಸಂಪಾದನೆ), ಪಂಪರಾಮಾಯಣ (ಸಂಪಾದಿತ) ಇತ್ಯಾದಿ

೩-೮-೧೯೪೩ರಲ್ಲಿ  ಬೆಂಗಳೂರಿನಲ್ಲಿ ಬೆಳ್ಳಾವೆ ವೆಂಕಟನಾರಣಪ್ಪನವರು ವಿಧಿವಶರಾದರು.

ಕನ್ನಡ ಸಾಹಿತ್ಯ ಸಮ್ಮೇಳನ೨೨

ಅಧ್ಯಕ್ಷರು, ಬೆಳ್ಳಾವೆ ವೆಂಕಟನಾರಾಯಣಪ್ಪ

ದಿನಾಂಕ ೨೯,0,೩೧ ಡಿಸೆಂಬರ್ ೧೯೩೭

ಸ್ಥಳ : ಜಮಖಂಡಿ

 ಪರಿಷತ್ತಿನ ಸ್ಥಾಪನೆ ವಿಚಾರ

ಇನ್ನು ಕಾರ್ಯರಂಗಕ್ಕೆ ಇಳಿಯೋಣ. ಮೊದಲನೆಯ ಪ್ರಸ್ತಾಪವು ಕರ್ಣಾಟಕ ಸಾಹಿತ್ಯ ಪರಿಷತ್ತಿನದು. ಈ ಸಂಸ್ಥೆಯು ಈಗ ೨೨ ವರ್ಷಗಳ ಹಿಂದೆ ಮೈಸೂರು ಶ್ರೀಮನ್ಮಹಾರಾಜರ ಉದಾರಾಶ್ರಯದಲ್ಲಿ ದೇಶವತ್ಸಲರಾದ ಸರ್. ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರಿಂದ ಸ್ಥಾಪಿತವಾಯಿತು. ಇದನ್ನು ಆದಿಯಿಂದಲೂ ಅಖಿಲ ಕರ್ಣಾಟಕ ಸಂಸ್ಥೆಯೆಂದೇ ಮೈಸೂರಿನವರು ಭಾವಿಸಿಕೊಂಡಿರುತ್ತಾರೆ. ಇಷ್ಟು ಕಾಲ ಈ ಸಂಸ್ಥೆಯು ಒಂದೇ ಸಮನಾಗಿ ಕೆಲಸ ಮಾಡುತ್ತಿರುವುದು, ಮೈಸೂರು ಶ್ರೀಮನ್ಮಹಾರಾಜರವರ ಸರ್ಕಾರದ ಉದಾರಾಶ್ರಯದಿಂದ, ಇದುವರೆಗೆ ಅರ್ಧ ಲಕ್ಷ ರೂಪಾಯಿಗಳ ಮೇಲೆ ಆ ಸರ್ಕಾರದ ಸಹಾಯ ದೊರೆತಿರಬಹುದು. ಇನ್ನು ಮುಂದೆಯೂ ಈ ಸಹಾಯ ದೊರೆಯಬೇಕಾದರೆ ಎಲ್ಲ ಪ್ರಾಂತಗಳ ಕನ್ನಡಿಗರೂ ಒಗ್ಗಟ್ಟಿನಿಂದ ಕೆಲಸ ಮಾಡಿದ ಹೊರತು ಸಾಗುವಂತಿಲ್ಲ. ಈ ೨೨ ವರ್ಷಗಳಲ್ಲಿ ಪರಿಷತ್ತು ಕನ್ನಡಕ್ಕೆ ಎಷ್ಟು ಅಮೂಲ್ಯವಾದ ಪ್ರೋತ್ಸಾಹವಿತ್ತಿದೆಯೆಂಬುದನ್ನು ಆದಿಯಿಂದಲೂ ಪ್ರಕಟವಾಗುತ್ತಿರುವ ‘’ಕರ್ಣಾಟಕ ಸಾಹಿತ್ಯ ಪರಿಷತ್ಪತ್ರಿ”ಯ ಸಂಚಿಕೆಗಳನ್ನು ಓದುವುದರಿಂದಲೂ ಪರಿಷತ್ತಿನ ‘’ಹನ್ನೆರಡು ವರ್ಷದ ಕಾರ್ಯಕಲಾಪ”ದ ವರದಿಯಿಂದಲೂ ತಿಳಿಯಬಹುದು. ಕನ್ನಡ ನಾಡಿನ ನಾನಾ ಭಾಷೆಗಳ ಕನ್ನಡ ಭಾಷಾಭಿಮಾನಗಳನ್ನು ಒಟ್ಟುಗೂಡಿಸಿ ಅವರಲ್ಲಿ ಭ್ರಾತೃಭಾವವನ್ನು ಹುಟ್ಟಿಸಿ ಕನ್ನಡ ಸಾಹಿತ್ಯವನ್ನು ಇಷ್ಟರಮಟ್ಟಿಗೆ ಮುಂದುವರಿಸಿದ ಕೀರ್ತಿಯು ಪರಿಷತ್ತಿಗೆ ಸಲ್ಲುವುದು. ೧೯೧೫ನೆಯ ಇಸವಿಯಲ್ಲಿ ಬೆಂಗಳೂರಲ್ಲಿ ನೆರೆದ ಮೊದಲನೆಯ ಪರಿಷತ್ ಸಮ್ಮೇಳನದ ವೈಭವವನ್ನು ನೋಡಿದವರು ಈ ಸಭೆಯಲ್ಲಿ ಕೆಲವರಿರುವರು. ಅಂದಿನ ಕನ್ನಡದ ಕಡುಗಲಿಗಳಲ್ಲಿ ಅನೇಕರು ಈಗ ಅದೃಶ್ಯರಾಗಿರುವರು;  ಕೆಲವರು ಕನ್ನಡಕ್ಕಾಗಿ ಇನ್ನೂ ದುಡಿಯುತ್ತಿರುವರು. ಆದರೆ ಇಷ್ಟು ದೀರ್ಘ ಕಾಲ ಕಳೆದರೂ ಪರಿಷತ್ತಿನ ಉದ್ದೇಶಗಳು, ಇನ್ನೂ ನೆರವೇರದೆ ಇರುವುದು ನಮ್ಮ ದುರ್ದೈವವೆಂದೇ ಹೇಳಬೇಕು. ಮಹಾರಾಷ್ಟ್ರದಂತೆ ಕನ್ನಡಿಗರಲ್ಲಿ ಒಗ್ಗಟ್ಟಿಲ್ಲ: ನಮ್ಮ ಮಾತೆಯ ಹೆಸರನ್ನು ‘ಕರ್ಣಾಟಕ’ ಎಂದು ಕೆಲವರೂ, ‘ಕರ್ನಾಟಕ’ ಎಂದು ಮತ್ತೆ ಕೆಲವರೂ ಹಠ ಹಿಡಿದು ಬರೆಯಲು ಸಾಧಿಸುತ್ತ ಬಂದು, ಒಂದು ಶಬ್ದಕ್ಕೆ ಏಕರೂಪತೆ ಕೊಡಲು ಕೂಡ ಒಪ್ಪದ ನಾವು ಒಗ್ಗಟ್ಟಾಗುವುದು ಹೇಗೆ?

ಪರಿಷತ್ತು ಮಾಡಬೇಕಾದ ಕಾರ್ಯಗಳು

ಕರ್ಣಾಟಕ ಸಾಹಿತ್ಯ ಪರಿಷತ್ತು ಮಾಡಬೇಕಾದ ಮುಖ್ಯ ಕಾರ್ಯಗಳು ಯಾವುವೆಂದೂ, ಅವು ಕಾರ್ಯರೂಪಕ್ಕೆ ಬರಬೇಕಾದರೆ ಏನು ಮಾಡಬೇಕೆಂದೂ ೧೯೧೪ನೆಯ ಇಸವಿಯಲ್ಲಿ ಮೈಸೂರು ಅರ್ಥಸಾಧಕ ಸಮಾಜದ ಉಪಸಂಘದವರು ಅಲೋಚಿಸಿ ಒಂದು ತೀರ್ಮಾನಕ್ಕೆ ಬಂದು ಆ ವಿಷಯಗಳನ್ನು ಕುರಿತು ಸಲಹೆಗಳನ್ನು ಬರೆದು ಕಳುಹಿಸುವಂತೆ ಕರ್ಣಾಟಕದ ಎಲ್ಲ ಪ್ರಾಂತಗಳವರಿಗೂ ಆಹ್ವಾನವಿತ್ತರು. ಎಲ್ಲ ಪ್ರಾಂತಗಳಿಂದಲೂ ಸಲಹೆಗಳೇನೋ ಬಂದುವು; ಆದರೆ ಕಾರ್ಯ! ಇಗೋ ನೋಡಿರಿ, ಆ ವಿಷಯಗಳು:-

೧. ಕನ್ನಡನಾಡಿನ ಬೇರೆ ಬೇರೆ ಭಾಗಗಳಲ್ಲಿರುವ ಭಾಷಾಭಿಜ್ಞರಲ್ಲಿ ಐಕಮತ್ಯವನ್ನೂ ಪರಸ್ಪರ ಸೌಹಾರ್ದವನ್ನೂ ಹೆಚ್ಚಿಸುವುದಕ್ಕಾಗಿ ಉತ್ತಮೋತ್ತಮೋಪಾಯಗಳನ್ನು ನಿರ್ಧರಿಸುವುದು;

೨. ಕನ್ನಡ ನಾಡಿನ ಬೇರೆ ಬೇರೆ ಭಾಗಗಳಲ್ಲಿ ಪ್ರಚಾರದಲ್ಲಿರುವ ಗ್ರಾಂಥಿಕ ಭಾಷೆಯನ್ನು ಒಂದೇ ರೂಪಕ್ಕೆ ತರಲು ತಕ್ಕ ಮಾರ್ಗವನ್ನು ನಿಶ್ಚಯಿಸುವುದು;

೩. ಕನ್ನಡವನ್ನೋದುವ ವಿದ್ಯಾರ್ಥಿಗಳಿಗೆ ಎಲ್ಲ ವಿದ್ಯಾ ಶಾಲೆಗಳಲ್ಲಿಯೂ ಪಾಠದ ಪುಸ್ತಕಗಳು ಒಂದೇ ಆಗಿರುವುದಕ್ಕೆ ಬೇಕಾದ ಪ್ರಯತ್ನಗಳನ್ನು ಮಾಡುವುದು;

೪. ಕನ್ನಡವನ್ನಾಡುವ ಜನಸಾಮಾನ್ಯರಲ್ಲಿ ಲೋಕ ವ್ಯವಹಾರ ಜ್ಞಾನವು ಸುಲಭವಾಗಿ ಹರಡುವಂತೆ ತಕ್ಕ ಪುಸ್ತಕಗಳನ್ನು ಬರೆಯಿಸಿ ಪ್ರಚಾರ ಮಾಡುವುದಕ್ಕೆ ಸಾಧಕವಾದ ಉತ್ತಮೋಪಾಯಗಳನ್ನು ನಿರ್ಣಯಿಸುವುದು;

೫. ಕನ್ನಡದಲ್ಲಿ ಬರೆಯುವ ಭೌತಿಕಾದಿ ನಾನಾ ಶಾಸ್ತ್ರಗಳಲ್ಲಿ ಪ್ರಯೋಗಿಸಬೇಕಾದ ಪಾರಿಭಾಷಿಕ ಶಬ್ದಗಳನ್ನು ನಿರ್ಣಯಿಸುವುದಕ್ಕೆ ತಕ್ಕ ಉತ್ತಮೋಪಾಯಗಳನ್ನು ಪರಿಶೀಲಿಸುವುದು.

ಇವನ್ನು “ಸದ್ದೇಶ ಪಂಚಕ” ಎಂದು ಒಬ್ಬ ಪಂಡಿತರು ಹೇಳಿರುತ್ತಾರೆ. ಈ ಉದ್ದೇಶಗಳಲ್ಲಿ ಒಂದಾದರೂ ಅವಶ್ಯಕವಲ್ಲದುದು ಉಂಟೆ? ಈ ೨೨ ವರ್ಷಗಳಲ್ಲಿ ಈ ಉದ್ದೇಶಗಳು ತಕ್ಕಮಟ್ಟಿಗಾದರೂ ಫಲವಾಗುವಂತೆ ನಾವೇನು ಮಾಡಿರುವೆವು?

ಪರಿಷತ್ತಿನ ನಿರ್ಣಯಗಳು

ಪ್ರತಿ ಸಾಹಿತ್ಯ ಸಮ್ಮೇಳನದಲ್ಲಿಯೂ ಅನೇಕ ಠರಾವುಗಳನ್ನು ಏಕಕಂಠತೆಯಿಂದ ಹೊರಡಿಸುವೆವು. ಆದರೆ ಅವುಗಳ ವಿಷಯವಾಗಿ ನಮ್ಮ ಮೇಲಿರುವ ಜವಾಬ್ದಾರಿಯನ್ನು ಎಷ್ಟು ಮಟ್ಟಿಗೆ ಲಕ್ಷ್ಯಕ್ಕೆ ತಂದುಕೊಂಡಿರುವೆವು? ಉದಾಹರಣೆಗಾಗಿ, ಕೆಲವು ಗೊತ್ತುವಳಿಗಳನ್ನು ತೆಗೆದುಕೊಳ್ಳೋಣ:-

೬/೧೪) ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಪ್ರಕಟ ಮಾಡುವವರು ಒಂದು ಪ್ರತಿಯನ್ನು ಪರಿಷತ್ತಿಗೆ ಉಚಿತವಾಗಿ ಕೊಡಬೇಕು.

ಇದನ್ನು ಎಷ್ಟು ಮಂದಿ ಬರೆಹಗಾರರು ಲಕ್ಷ್ಯಕ್ಕೆ ತಂದುಕೊಂಡಿರುವರು?

೭/೨, ೧೨/೩, ೧೭/೮, ೧೯/೭,೨೪, ಕರ್ಣಾಟಕ ಕ್ರಮಿಕ ಪುಸ್ತಕಗಳನ್ನು ಏಕರೂಪತೆಗೆ ತರುವುದು.

ಈ ಕಾರ್ಯವನ್ನು ನಡೆಸಲು ದೊಡ್ಡ ದೊಡ್ಡ ಭಾಷಾ ಪ್ರೇಮಿಗಳ ಮಂಡಲಿಗಳು ಏರ್ಪಟ್ಟುವು; ಆದರೆ ಕಾರ್ಯವೇನೂ ನಡೆಯಲಿಲ್ಲ.

೭/೧೨, ೮/೧೬, ೧೮/೧೭ ಕನ್ನಡದಲ್ಲಿ ವಿಶ್ವಕೋಶ ರಚನೆ.

ಇಷ್ಟು ಭಾರಿ ಕೆಲಸವು ಹಣವಿಲ್ಲದೆ ನಡೆಯುವ ಬಗೆ ಹೇಗೆ?

೮/೮, ಪಂಪಾ ಕ್ಷೇತ್ರ ಜೀರ್ಣೋದ್ಧಾರಕ ಸಭೆ.

೮/೧೧ ‘’ಶ್ರೀ ಕೃಷ್ಣರಾಜ ವಾಣಿವಿಲಾಸ” ಭಾರತದ ಪುರ್ನಮುದ್ರಣ.

೮/೧೩ ಕನ್ನಡ ಭಾಷೆಯ ಪ್ರಸಾರಕ್ಕೆ ದೊಡ್ಡದೊಂದು ಗ್ರಂಥ ಪ್ರಕಾಶಮಂಡಲಿ      ಇರುವುದು ಅವಶ್ಯ. ಪುಸ್ತಕ ಪ್ರಕಟನೆಯೇ ಮುಖ್ಯೋದ್ದೇಶವುಳ್ಳ  ‘’ಜಾಯಿಂಟ್ ಸ್ಟಾಕ್ ಕಂಪನಿ” ಏರ್ಪಾಡಾಗಬೇಕು.

೯/೭, ೧, ೨, ೩ನೆಯ ಇಯತ್ತೆಯ ಬಾಲಕರಿಗಾಗಿ ಅಧಿಕಪಾಠಗಳ   ಪುಸ್ತಕಗಳನ್ನು ತೃಪ್ತಿಕರವಾಗಿ ಬರೆಯಿಸಬೇಕು.

೧೪/೨0 ಕರ್ಣಾಟಕಕ್ಕೆಲ್ಲ ಒಂದೇ ಬಾಲಬೋಧೆಯಾಗಬೇಕು.

ಬಾಲಬೋಧೆಯ ವಿಷಯವಾಗಿ ನನ್ನದೊಂದು ವಿಜ್ಞಾಪನೆ:ಆಡುವ ಭಾಷೆಯಲ್ಲಿ ಪ್ರಾಂತ ಪ್ರಾಂತಕ್ಕೂ ವ್ಯತ್ಯಾಸವಿರುವುದು ಸಹಜ. ಇದು ಎಲ್ಲ ದೇಶಗಳಲ್ಲೂ ಉಂಟು. ಬಾಲಕರು ಓದುವ ಪುಸ್ತಕಗಳಲ್ಲಿ ಅವರು ಮನೆಯಲ್ಲಾಡುವ ಮಾತುಗಳಿದ್ದರೆಯೇ ವಿಷಯ ಅವರ ಮನಸ್ಸಿಗೆ ಹತ್ತುವುದು. ಆದಕಾರಣ, ಮೊದಲೆ ಬಾಲಬೋಧೆಗೆ ಕೈ ಹಾಕದೆ ಭಾಷೆಯನ್ನು ಏಕರೂಪತೆಗೆ ತರುವ ಕಾರ್ಯವನ್ನು ಮೇಲಿನ ತರಗತಿಯ ಪುಸ್ತಕಗಳ ಮೇಲೆ ಮೊದಲು ನಡೆಸಬೇಕು. ಹೀಗೆ ಮಾಡಿದಲ್ಲಿ ಕನ್ನಡ ಭಾಷೆಯು ಎಂದಿಗಾದರೂ ಏಕರೂಪಕ್ಕೆ ಬಂದು ಕನ್ನಡಿಗರನ್ನು ಒಗ್ಗೂಡಿಸಲು ಸಾಧ್ಯವಾಗಬಹುದು.

ಭಾಷಾ ಏಕರೂಪತೆ ವಿಚಾರ

ಧಾರವಾಡ ಪ್ರಾಂತದ ಕೆಲವು ಗ್ರಂಥಗಳ ಭಾಷೆಯು ‘’ಮೈಸೂರಿನ ಭಾಷೆಗೆ ಹತ್ತಿರಹತ್ತಿರವಾಗಿ ಬರುತ್ತಿರುವುದು ನಮಗೆ ಸಂತೋಷಕರವಾದ ವಿಷಯ” ಎಂದು ಪರಿಷತ್ತಿನ ಗ್ರಂಥ ವಿಮರ್ಶಕಾರರು ಬರೆದರು. ಅದಕ್ಕೆ ‘’ಕರ್ಮವೀರ”ದ ಸಂಪಾದಕರು ರೇಗಿ ಬಿದ್ದು, “ಸಾಹಿತ್ಯ ಪರಿಷತ್ಪತ್ರಿಕೆಯಲ್ಲಿ ಮೈಸೂರು ಪ್ರಾಂತಿಕ ಅಭಿಮಾನವು ಪ್ರಮಾಣ ಮೀರಿರುತ್ತದೆಂಬುದು ನಮ್ಮ ಮೊದಲನೆಯ ಆಕ್ಷೇಪ. ಕರ್ಣಾಟಕದ ಎಲ್ಲ ಭಾಗದೊಳಗಿನ ಕನ್ನಡಕ್ಕಿಂತಲೂ ಮೈಸೂರ ಕನ್ನಡವೇ ಶ್ರೇಷ್ಠತರದ್ದೆಂದು ಇದರ ಸಂಪಾದಕರ ಕಲ್ಪನೆಯಿದ್ದಂತೆ ತೋರುತ್ತದೆ. ಇದು ಕನ್ನಡ ಭಾಷೆಯು ಅಭಿವೃದ್ಧಿ ದೃಷ್ಟಿಯಿಂದ ಎಳ್ಳಷ್ಟೂ ಹಿತಕರವಲ್ಲವೆಂದು ವಿನಯಪೂರ್ವಕವಾಗಿ ಅರಿಕೆ ಮಾಡಿಕೊಳ್ಳುತ್ತೇವೆ” ಎಂದು ಬರೆದಿರುತ್ತಾರೆ.

೧0/೩ ಕನ್ನಡನಾಡಿನ ಚರಿತ್ರೆ ಬರೆಯಿಸಬೇಕು.

೧೩/೯, ೧೪/೨೩, ೧೬/೧0 ಅಖಿಲ ಕರ್ಣಾಟಕಕ್ಕೆ ಒಂದು ವಿಶ್ವವಿದ್ಯಾನಿಲಯವಾಗಬೇಕು.

೧೫/೧0, ೧೮/೧೭ ಹೊಸಗನ್ನಡ ವ್ಯಾಕರಣ ರಚನೆ.

೧೬/೭, ಮುದ್ರಿತವಾದ ಪ್ರಾಚೀನ ಅರ್ವಾಚೀನ ಕನ್ನಡ ಪುಸ್ತಕಗಳೆಲ್ಲವೂ  ಒಂದು ಕಡೆ ಇರುವಂತೆ ಕರ್ಣಾಟಕ ಸಾಹಿತ್ಯ ಪರಿಷತ್ತಿನವರು ಒಂದು ದೊಡ್ಡ ಪುಸ್ತಕಾಲಯವನ್ನು ಏರ್ಪಡಿಸಬೇಕು.

ಈ ವಿಷಯವನ್ನು ಇಷ್ಟು ವಿಸ್ತರಿಸಿ ಹೇಳುವುದಕ್ಕೆ ಕಾರಣ ತಿಳಿಯಬೇಕಾಗಿಲ್ಲ. ನಾನು ಪರದೂಷಣೆಗಾಗಿ ಇದನ್ನು  ಹೇಳಿದೆನೆಂದು ತಿಳಿಯಲಾಗದು. ಮೇಲೆ ಹೇಳಿದ ಕೆಲಸಗಳನ್ನು ಮಾಡುವ ಜವಾಬ್ದಾರಿ ಹೊತ್ತ ಕೆಲವು ಮಂಡಲಿಗಳಲ್ಲಿ ನಾನೂ ಒಬ್ಬ ಸದಸ್ಯನಾಗಿದ್ದೇನೆ. ಒಪ್ಪಿಕೊಂಡ ಕೆಲಸವನ್ನು ಮಾಡದೆ ನಿರ್ಲಕ್ಷ್ಯದಿಂದಿದ್ದರೆ ನಾವು ದೋಷಿಗಳಾಗುವುದಿಲ್ಲವೆ? ಅಖಿಲ ಕರ್ಣಾಟಕಕ್ಕೆ ಒಂದು ವಿಶ್ವವಿದ್ಯಾನಿಲಯವು ಈಗಿನ ಪರಿಸ್ಥಿತಿಯಲ್ಲಿ ಸಾಧ್ಯವಾಗಲಾರದೆಂದು ತೋರುತ್ತದೆ.

ಅಂಚೆ ಇಲಾಖೆಗೆ ಕನ್ನಡಾನುವಾದಗಳು

ಈ ಸಂದರ್ಭದಲ್ಲಿ ತಮಗೆ ಸಂತೋಷವನ್ನುಂಟು ಮಾಡುವ ಒಂದು ಸಂಗತಿಯನ್ನು ಬಿನ್ನಯಿಸುತ್ತೇನೆ. ಪೋಸ್ಟಲ್ ಇಲಾಖೆಯ ಮೇಲಧಿಕಾರಿಗಳು ಪೋಸ್ಟ್ ಆಫೀಸಿನ ಮನಿಆರ್ಡರ್ ನಮೂನೆ ಮೊದಲಾದ ಅನೇಕ ವಿಕೃತ ಕನ್ನಡ ಭಾಷೆಯ ನಮೂನೆಗಳನ್ನು ತಿದ್ದಿ ಸರಿಪಡಿಸುವುದಕ್ಕಾಗಿ ಪರಿಷತ್ತಿಗೆ ಕಳುಹಿಸಿದರು. ಈ ಕೆಲಸವನ್ನು ಪರಿಷತ್ತು ಒಪ್ಪಿಕೊಂಡು ಮಾಡಿ ಕಳುಹಿಸಿತು. ಹಾಗೆ ತಿದ್ದಿದ ಕನ್ನಡದ ನಮೂನೆಗಳನ್ನು ಪೋಸ್ಟ್ ಆಫೀಸಿನ ಅಧಿಕಾರಿಗಳು ಮುದ್ರಿಸಿದ್ದಾರೆ. ಇವು ಮುಂಬಯಿ ಮತ್ತು ಮದ್ರಾಸು ಪ್ರಾಂತಗಳಲ್ಲಿ ಚಲಾವಣೆಯಲ್ಲಿರಬಹುದು. ಅಲ್ಲಿಂದೀಚೆಗೆ ಬಂದ ಪೋಸ್ಟ್ ಆಫೀಸಿನ ಸೇವಿಂಗ್ಸ್ ಬ್ಯಾಂಕ್ ನಿಬಂಧನೆಗಳ ಇಂಗ್ಲಿಷ್ ಪುಸ್ತಕವನ್ನು ಪರಿಷತ್ತಿನಲ್ಲಿ ಸುಲಭವಾದ ಬಳಕೆಯ ಕನ್ನಡಕ್ಕೆ ಪರಿವರ್ತನೆ ಮಾಡಿ ಹಿಂದಕ್ಕೆ ಕಳುಹಿಸಲಾಯಿತು. ಇದು ಮದ್ರಾಸಿನಲ್ಲಿ ಮುದ್ರಣವಾಗಿದೆ. ಪ್ರತಿಗಳು ಕನ್ನಡನಾಡಿನ ಪೋಸ್ಟ್ ಅಫೀಸುಗಳಲ್ಲಿ ದೊರೆಯಬಹುದು.

ಕರ್ಣಾಟಕ ಸಾಹಿತ್ಯ ಪರಿಷತ್ತು ಏನೂ ಕೆಲಸ ಮಾಡಲಿಲ್ಲವೆಂದು ಆಗಾಗ್ಗೆ ದೂರು ಕೇಳುತ್ತೇವೆ. ನಾವೆಲ್ಲರೂ ಸೇರಿದುದೇ ಅಲ್ಲವೆ ಪರಿಷತ್ತು! ಕೆಲಸ ಮಾಡದೆ ನಮ್ಮನ್ನು ನಾವೇ ದೂರಿಕೊಂಡಲ್ಲಿ ಸಾರ್ಥಕವೇನು? ಯಾವ ಕೆಲಸಕ್ಕೂ ಹಣ ಬೇಕು. ಪರಿಷತ್ತು ಇಷ್ಟುಮಟ್ಟಿಗೆ ಕೆಲಸ ಮಾಡುತ್ತಿರುವುದು ಮೈಸೂರು ಶ್ರೀಮನ್ಮಾಹಾರಾಜರ ಉದಾರಾಶ್ರಯದಿಂದ. ನಾವೆಲ್ಲರೂ ನಮ್ಮ ಯೋಗ್ಯತೆಗೆ ತಕ್ಕಂತೆ ಕಾಣಿಕೆ ಸಲ್ಲಿಸದಿದ್ದರೆ ಪರಿಷತ್ತಿನ ಕೆಲಸಗಳು ನಡೆಯುವುದೆಂತು? ಪರಿಷತ್ತಿನ ಸದಸ್ಯರ ಪಟ್ಟಿಯನ್ನು ನೋಡಿರಿ, ಎಷ್ಟು ಪುಟ್ಟದ್ದಾಗಿದೆ!

ಕನ್ನಡಿಗರಿಗೆ ತಮ್ಮ ಭಾಷೆಯಲ್ಲಿ ಅಭಿಮಾನ ಹುಟ್ಟಿಸಿ ಭಾಷಾಭಿವೃದ್ಧಿ ಮಾಡಲು ಪರಿಷತ್ತು ಹೊಸ ಮಾರ್ಗಗಳನ್ನು ಹುಡುಕುತ್ತಿದೆ; ಈಗ ನಾಲ್ಕು ವರ್ಷಗಳಿಂದಲೂ ಬಹಳ ವಿಜೃಂಭಣೆಯಿಂದ ನಡೆಯುತ್ತಿರುವ ವಿಶೇಷ ಸಾಹಿತ್ಯೋತ್ಸವಗಳಿಂದ, ಕನ್ನಡ ಭಾಷಣ ಮಾಡಲು ಬಾರದೆಂದು ಇಂಗ್ಲಿಷಿನಲ್ಲೇ ಭಾಷಣ ಮಾಡುತ್ತಿದ್ದ ಅನೇಕ ಮಂದಿ ಪ್ರಮುಖ ಕನ್ನಡಿಗರನ್ನು ಕನ್ನಡದಲ್ಲಿ ಮಾತನಾಡುವಂತೆ ತಯಾರಿಸಿದೆ. ವಿಜ್ಞಾನ ವಿಷಯಗಳನ್ನೂ ಇತರ ಆಧುನಿಕ ವಿಚಾರಗಳನ್ನೂ ಆಯಾ ಭಾಗದಲ್ಲಿ ಇಂಗ್ಲಿಷ್ ಶಿಕ್ಷಣ ಹೊಂದಿ ಪಾಂಡಿತ್ಯ ಪಡೆದ ಕನ್ನಡಿಗರು ಜನಸಾಮಾನ್ಯಕ್ಕೆ ಅರ್ಥವಾಗುವಂತೆ ಕನ್ನಡದಲ್ಲಿಯೇ ಹೇಳುತ್ತಿರುವರು. ಇದೇನೂ ಆಶ್ಚರ್ಯವಲ್ಲ; ಏಕೆಂದರೆ, ಈ ಕೆಲಸಕ್ಕಾಗಿಯೇ ಟೊಂಕ ಕಟ್ಟಿ ನಿಂತಿರುವ ಇಬ್ಬರು ಮುಖಂಡರಿರುತ್ತಾರೆ. ಅಂಥವರು ಹಠ ಹಿಡಿದಲ್ಲಿ ಯಾವುದು ತಾನೆ ಆಸಾಧ್ಯವಾದೀತು?

ಗ್ರಂಥ ರಚನೆ ಮತ್ತು ಪತ್ರಿಕಾ ಪ್ರಕಟನೆ:- ಕನ್ನಡನಾಡಿನಲ್ಲಿ ಗ್ರಂಥರಚನೆಯ ಕಾರ್ಯವು ಹೆಚ್ಚುಹೆಚ್ಚಾಗಿ ನಡೆಯುತ್ತಿದೆ. ಕರ್ಣಾಟಕ ಸಾಹಿತ್ಯ ಪರಿಷತ್ತಿನ ಗ್ರಂಥ ಪ್ರದರ್ಶನಕ್ಕಾಗಿ ಎಲ್ಲ ಕನ್ನಡ ಪ್ರಾಂತಗಳಿಂದಲೂ ಬಂದ ಪುಸ್ತಕಗಳಲ್ಲಿ, ೧೯೧೫ನೆಯ ಇಸವಿಯಿಂದ ೧೯೩೪ನೆಯ ಇಸವಿಯವರೆಗಿನ ೧೯ ವರ್ಷಗಳಲ್ಲಿ, ೨,೩೮೭ ಗ್ರಂಥಗಳಾದರೂ ಪ್ರಕಟವಾಗಿರುವಂತೆ ತಿಳಿದುಬರುತ್ತದೆ. ಪ್ರದರ್ಶನಕ್ಕೆ ಬಾರದಿರುವ ಅನೇಕ ಪುಸ್ತಕಗಳಿರಬಹುದು. ೧೯೩೫ನೆಯ ವರ್ಷದ ಲೆಕ್ಕದಿಂದ, ೧೫ ತಿಂಗಳಲ್ಲಿ ಪ್ರಕಟವಾದ ೧೭೩ ಗ್ರಂಥಗಳು ಪ್ರದರ್ಶನಕ್ಕೆ  ಬಂದಿವೆ. ಇವುಗಳಲ್ಲಿ ಎಷ್ಟು ಗ್ರಂಥಗಳು ಜಳ್ಳೊ ಎಷ್ಟು ಗಟ್ಟಿಯೊ ಎಂಬ ವಿಚಾರ ಬೇರೆ. ಇವುಗಳಲ್ಲಿ ಅನೇಕ ಗ್ರಂಥಗಳ ವೇಷಭೂಷಣಗಳು ನಮ್ಮ  ದರಿದ್ರಾವಸ್ಥೆಯನ್ನು ಬಿಚ್ಚಿ ತೋರಿಸುತ್ತಿವೆ. ಇದನ್ನು ಪರಿಹರಿಸಿ ನಾವೂ ನಮ್ಮ ದೇಶದ ಇತರ ಭಾಷಾ ಬಂಧುಗಳೊಡನೆ ಹೆಮ್ಮೆಯಿಂದ ನಡೆಯುವುದಕ್ಕೆ ತಕ್ಕಷ್ಟು ಪ್ರಯತ್ನ ಮಾಡಬೇಡವೆ?

ದಿವಾನ್ ಬಹಾದ್ದೂರ್ ಶ್ರೀಮಾನ್ ಎಸ್.ಟಿ. ಕಂಬಳಿಯವರು ಮುಂಬಯಿ ಸಮ್ಮೇಳನದ ತಮ್ಮ ಭಾಷಣದಲ್ಲಿ ಕೊಟ್ಟಿರುವ ಲೆಕ್ಕದಿಂದ, ಮುಂಬಯಿ ಇಲಾಖೆಯಲ್ಲಿಯೇ ೧೯೩೨ರಿಂದ ೧೯೩೪ರವರೆಗೆ ಒಟ್ಟು ೩೭೫ ಕನ್ನಡ ಗ್ರಂಥಗಳು ಪ್ರಕಟವಾದಂತೆ ತಿಳಿಯಬರುತ್ತದೆ. ಇದೇ ಕಾಲದಲ್ಲಿ, ಗುಜರಾತಿ ಭಾಷೆಯಲ್ಲಿ ೧,೮೩0 ಗ್ರಂಥಗಳೂ, ಮರಾಠಿಯಲ್ಲಿ ೧,೯೬೩ ಗ್ರಂಥಗಳೂ ಪ್ರಕಟವಾಗಿವೆಯಂತೆ! ಮುಂಬಯಿ ಇಲಾಖೆಯಲ್ಲಿ ಕನ್ನಡ ದೈನಂದಿನ ಪತ್ರಿಕೆಗಳು ೪, ವಾರ ಮತ್ತು ಪಕ್ಷ ಪತ್ರಿಕೆಗಳು ೧೬, ಮಾಸ ಪತ್ರಿಕೆಗಳು ೨0 ಇರುವಂತೆ, ಗುಜರಾತಿಯಲ್ಲಿ ಈ ಸಂಖ್ಯೆಗಳು ೧೯, ೯೬, ೧೯೫; ಮರಾಠಿಯಲ್ಲಿ ೨೩, ೮೪, ೧೩0, ಈ ಅಂಕಿಗಳಿಂದ ಗುಜರಾತಿ ಮರಾಠಿ ಭಾಷೆಗಳು ಕನ್ನಡದ ಆರರಷ್ಟಾದರೂ ಮುಂದುವರಿದಿರುವಂತೆ ತೋರುವುದಿಲ್ಲವೆ!

ಪರಿಷತ್ತಿನ ಗ್ರಂಥ ಪ್ರದರ್ಶನಕ್ಕೆ ೧೯೩೫ರಲ್ಲಿ ಬಂದ ೧೭೩ ಪುಸ್ತಕಗಳಲ್ಲಿ  ಪದ್ಯ ಕಾವ್ಯಗಳು ೨೪, ಕಾದಂಬರಿ  ೧೪,  ಮತಾಚಾರಧರ್ಮ ೨೩, ಸಮಾಜ ವಿಜ್ಞಾನ  ೧೪, ಜೀವನ ಚರಿತ್ರೆ೧೭, ಸಣ್ಣ ಕಥೆ ೧0,  ಸಾಹಿತ್ಯ ಪ್ರಬಂಧ, ವಿಮರ್ಶೆ೧೫, ಶಾಲಾ ಪುಸ್ತಕ ೮, ನಾಟಕ ೧೪, ಪ್ರಕೃತಿ ವಿಜ್ಞಾನ  ೬.

ಪದ್ಯ ಕಾವ್ಯಗಳು ಹೆಚ್ಚಾಗಿ ಬರಬೇಕಾದುದು ನಮಗೆ ತುಂಬಿರುವಾಗ, ಹಸಿದಿರುವಾಗಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಪ್ರವೇಶವಿಲ್ಲದವರೂ ಕವನಕಟ್ಟಲು ಹೊರಟಿದ್ದಾರೆ. ಬಹುಶಃ ಇದನ್ನು ಅರಿತೇ ನಮ್ಮ ಪೂರ್ವಿಕರು, ಸಾಹಿತ್ಯದ ಈ ಪ್ರದೇಶಕ್ಕೆ ಸಾಮಾನ್ಯರು ಹಾರಲಾಗದ ಬೇಲಿ ಹಾಕಿದ್ದು.

ಉಪ ಸಂಹಾರ:

ಮಹನೀಯರೆ. ಪರಿಷತ್ತಿನ ಅಧಿಕಾರಿಗಳು ನನ್ನನ್ನು “ಘನ ವಿದ್ವಾಂಸ” ನೆಂದು ಹೊಗಳಿರುವುದಕ್ಕಾಗಿ ಮನಸ್ಸಿಗೆ ನೋವಾಗುತ್ತದೆ. ನಮ್ಮಲ್ಲಿ ಹೊಗಳು ಭಟ್ಟತನವು ಮೊದಲಿಂದಲೂ ಸಹಜಗುಣವಾಗಿರುವುದು. ಇನ್ನು ಮೇಲಾದರೂ ಈ ಕುಟ್ಟು ಹುಳುವನ್ನು ನಿರ್ಮೂಲ ಮಾಡಿ ಯಥಾರ್ಥವಾದಿತ್ವವನ್ನು ಅಭ್ಯಾಸಮಾಡದಿದ್ದರೆ ನಮಗೆ ಕೇಡು ತಪ್ಪದು. ನಾಣ್ನುಡಿಯಂತೆ, ಯಾವ ಸಂದರ್ಭದಲ್ಲಿ ಎಷ್ಟು ಮಟ್ಟಿಗೆ ಹೇಳಬೇಕೊ ಅಷ್ಟು ಮಾತ್ರ ಹೇಳಿ ಅನ್ಯರ ಮನಸ್ಸನ್ನು ನೋಯಿಸದೆಯೂ, ತಾನು ನೋಯದೆಯೂ ತಪ್ಪಿಸಿಕೊಂಡು ತಿರುಗುವವನೇ ಧನ್ಯ! ಕನ್ನಡಿಗರ ಪಾಂಡಿತ್ಯವನ್ನೂ ಹಿರಿಮೆಯನ್ನೂ ತಿಳಿಯಬೇಕಾದರೆ ನನ್ನ ಹಿಂದೆ ಈ ಪವಿತ್ರ ಪೀಠವನ್ನಲಂಕರಿಸಿದ್ದ ಮಹನೀಯರ ಭಾಷಣಗಳನ್ನೋದಿರಿ. ಕರ್ಣಾಟಕ ಸಾಹಿತ್ಯ ಪರಿಷತ್ತಿನ ಅಧಿಕಾರಿಗಳು ಈ ಭಾಷಣಗಳನ್ನು ಪ್ರತ್ಯೇಕವಾಗಿ ಮುದ್ರಿಸಿ ಕನ್ನಡಿಗರೆಲ್ಲರಿಗೂ ಸುಲಭವಾಗಿ ದೊರೆಯುವಂತೆ ಮಾಡಬೇಕೆಂಬುದೇ ನನ್ನ ಬೇಡಿಕೆ. ಬಾಂಧವರೆ! ಸ್ವಾತಂತ್ರ್ಯಬೇಕೆಂದು ಸುಮ್ಮನೆ ಗಲಭೆ ಮಾಡುವುದರಿಂದ ಪ್ರಯೋಜನವಿಲ್ಲ. ಅದಕ್ಕೆ ತಕ್ಕ ಯೋಗ್ಯತೆಯನ್ನು ಮೊದಲು ಸಂಪಾದಿಸಿಕೊಳ್ಳಬೇಕು. ದೇಶಭಕ್ತಿ, ರಾಜಭಕ್ತಿ, ಆತ್ಮಭಕ್ತಿ ಮೊದಲಾದ ಸದ್ಗುಣಗಳನ್ನು ಜಪಾನಿನವರಿಂದ ಕಲಿಯಲು ಯತ್ನಿಸೋಣ. ಕನ್ನಡಿಗರೊಳಗೆ ಎಷ್ಟೋ ಒಳ್ಳೆಯ ಮುತ್ತುಗಳಿರುವುವು. ಕೆಲವು ಆಣಿಮುತ್ತುಗಳು. ಆದರೆ ಅವೆಲ್ಲವೂ ಒಟ್ಟುಗೂಡದೆ ಬಿಡಬಿಡಿಯಾಗಿರುವುದು. ಅದಕ್ಕೆ ರಂಧ್ರ ಕೊರೆದು ಅದನ್ನು ಚಿನ್ನದ ಸರಿಗೆಯಿಂದ ಕೊಯ್ದು ಆ ಸರವನ್ನು ನಮ್ಮ ಕನ್ನಡ ಮಾತೆಯ ಕೊರಳಿಗೆ ಹಾಕಿ, ಆಕೆಯ ಸಿರಿ ಸಹಜವಾದುದೆಂದು ತೋರಿಸೋಣ. ಸರ್ವೇಶ್ವರನು ಕನ್ನಡಿಗರಲ್ಲಿಯೂ ಏಕೀಭಾವವನ್ನು ಬೆಳೆಯಿಸಿ ಕನ್ನಡದೇಶವು ಹಿಂದಿನ ಉಚ್ಛ್ರಾಯ ಸ್ಥಿತಿಗೇರುವಂತೆ ಅನುಗ್ರಹಿಸಲಿ.

Tag: Tag: Kannada Sahitya Sammelana 22, Bellave Venkatanaranappa

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)