ಸಾಹಿತ್ಯ ಸಮ್ಮೇಳನ-೨೯ : ಮದರಾಸು
ಡಿಸೆಂಬರ್ ೧೯೪೫

ಅಧ್ಯಕ್ಷತೆ: ಟಿ.ಪಿ. ಕೈಲಾಸಂ

೨೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಟಿ. ಪಿ. ಕೈಲಾಸಂ

ಕನ್ನಡ ನಾಟಕರಂಗದಲ್ಲಿ ಹೊಸಶಕೆಯನ್ನು ಆರಂಭಿಸಿದ ಟಿ ಪಿ. ಕೈಲಾಸಂ ಅವರು ಬೆಂಗಳೂರಿನಲ್ಲಿ ೨೯-೭-೧೮೮೫ರಲ್ಲಿ ತ್ಯಾಗರಾಜ ಪರಮಶಿವ ಅಯ್ಯರ್ – ಕಲಮಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬೆಂಗಳೂರು, ಹಾಸನ, ಮೈಸೂರುಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ೧೯0೮ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿ ಬಿ ಎ ಪದವಿಗಳಿಸಿದರು. ಪ್ರೌಢವ್ಯಾಸಂಗಕ್ಕೆ ಲಂಡನ್ನಿಗೆ ತೆರಳಿ ೬ ವರ್ಷಗಳ ಕಾಲ ಭೂಗರ್ಭಶಾಸ್ತ್ರ ಅಭ್ಯಸಿಸಿ ೧೯೧೫ಕ್ಕೆ ಬೆಂಗಳೂರಿಗೆ ಹಿಂತಿರುಗಿದರು.

ಭೂಗರ್ಭಶಾಸ್ತ್ರ ಇಲಾಖೆಯಲ್ಲಿ ಭೂಶೋಧಕರಾಗಿ ಸೇರಿ ೫ ವರ್ಷ ಉದ್ಯೋಗ ಮಾಡಿದರು. ಅನಂತರ ರಾಜೀನಾಮೆ ನೀಡಿ ರಂಗಭೂಮಿಯ ಚಟುವಟಿಕೆಗಳಲ್ಲಿ ನಿರತರಾದರು.

ವ್ಯಾಯಾಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಕೈಲಾಸಂ ಕನ್ನಡ ನಾಟಕಕಾರರಾಗಿ ರಂಗ ನಾಟಕರಂಗಕ್ಕೆ ವಿಶೇಷ ಕೊಡುಗೆಗಳನ್ನಿತ್ತರು. ಅನೇಕರಿಗೆ ಹಾಸ್ಯ ಸಾಹಿತ್ಯ ನಾಟಕಗಳ ಮೂಲಕ ಜನಜಾಗೃತಿ ಮಾಡಿದರು.

೧೯೪೫ರಲ್ಲಿ ಮದರಾಸಿನಲ್ಲಿ ನಡೆದ ೨೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಕೈಲಾಸಂ ಬರೆದುದಕ್ಕಿಂತ ಹೆಚ್ಚಾಗಿ ಹೇಳಿ ಬರೆಸಿದ ಇತರರು ಬರೆದುಕೊಂಡ ನಾಟಕಗಳೇ ಹೆಚ್ಚು.

ಟೊಳ್ಳೂಗಟ್ಟಿ, ಬಹಿಷ್ಕಾರ, ಗಂಡಸ್ಕತ್ರಿ, ಪೋಲಿಕಿಟ್ಟಿ, ಸೂಳೆ, ನಂತರ ಕನ್ನಡ ಸಾಮಾಜಿಕ ನಾಟಕಗಳನ್ನೂ  ತಾವರೆಕೆರೆ (ಕಥಾಸಂಗ್ರಹ), ಕೋಳಿಕೇರಂಗ (ಹಾಡುಗಳು), ಕರ್ಣ, ಕೀಚಕ (ಇಂಗ್ಲಿಷ್ ನಾಟಕಗಳು).

ಕರ್ನಾಟಕ ಪ್ರಹಸನ ಪಿತಾಮಹ ಎನಿಸಿದ್ದ ಕೈಲಾಸಂ ೨೩-೧೧-೧೯೪೬ರಲ್ಲಿ ಕೈಲಾಸವಾಸಿಗಳಾದರು.

ಕನ್ನಡ ಸಾಹಿತ್ಯ ಸಮ್ಮೇಳನ೨೯

ಅಧ್ಯಕ್ಷರು, ಟಿ.ಪಿ. ಕೈಲಾಸಂ

ದಿನಾಂಕ ೨೬, ೨೭, ೨೮ ಡಿಸೆಂಬರ್ ೧೯೪೫

ಸ್ಥಳ : ಮದರಾಸು

 

ಈ ಕನ್ನಡ ಪ್ರಾಂತವನ್ನು ಕಟ್ಟಬೇಕೆನ್ನುವುದೇತಕ್ಕೆ? ಇದರಂತೆ ತಮಿಳು, ತೆಲುಗು, ಕೇರಳ, ಮಹಾರಾಷ್ಟ್ರ ಪ್ರಾಂತಗಳೂ ಆಗಲಿ ಎಂದಲ್ಲವೆ? ದಕ್ಷಿಣ ದೇಶದ ನಾಲ್ಕು ಪ್ರಾಂತಗಳೂ ನಾಲ್ಕು ಭುಜದಂತೆ, ಚತುರಂಗ ಬಲದಂತೆ, ಏಕವಾಗಿ ಐಕಮತ್ಯದಿಂದ ವರ್ತಿಸಬೇಕೆಂದಲ್ಲವೆ? ಇಲ್ಲ ಪರಸ್ಪರ ವೈಷ್ಯಮ್ಯಕ್ಕಾಗಿಯೇ? ತಮಿಳೇನು ತೆಲುಗೇನು ಮಲಯಾಳವೇನು? ಕನ್ನಡಕ್ಕೆ ಅಣ್ಣ ತಮ್ಮ ಎಲ್ಲವೂ ದ್ರಾವಿಡ ಭಾಷೆಯೇ. ಒಂದು ಅಕ್ಷರ ಬದಲಾದರೆ ಕನ್ನಡ ಶಬ್ದ ತೆಲುಗು ಶಬ್ದವಾಯಿತು. ಇನ್ನೊಂದು ಅಕ್ಷರ ಬದಲಾದರೆ ತಮಿಳಾಯಿತು. ಕನ್ನಡ-ತೆಲುಗುಗಳಿಗೆ ಬೇರೆ ಬೇರೆ ಲಿಪಿ ಇಲ್ಲ; ಎರಡೂ ಒಂದೇ. ಕೇರಳ ವರ್ಣಮಾಲೆ ಕನ್ನಡ ಗೀರ್ವಾಣಕ್ಕೆ ಸಮೀಪವಾಗಿದೆ. ಇನ್ನು ಆಚಾರ ವ್ಯವಹಾರ, ಧರ್ಮ ದೈವ ಋಣಾನುಬಂಧ- ಎಲ್ಲರಲ್ಲೂ ಈ ದಾಕ್ಷಿಣಾತ್ಯರಲ್ಲಿ ಅಂಥ ಪ್ರಖರ ಭೇದವಿಲ್ಲ. ನಾವು ಕರ್ನಾಟಕರು ಎಲ್ಲ ದ್ರಾವಿಡ ಸಂಪ್ರದಾಯಕ್ಕೂ ಒಕ್ಕಲು. ಎಲ್ಲ ದ್ರಾವಿಡ ಭಾಷೆಗೂ ಆಶ್ರಯದಾತರು. ತೆಲುಗು, ತಮಿಳು, ಕೇರಳ ಪ್ರಾಂತಗಳಲ್ಲಿ ಕಾಣದ ಭಾಷಾತೀತವಾದ ಕರ್ನಾಟಕತ್ವ ನಮ್ಮಲ್ಲಿ ಹಿಂದಿನಿಂದಲೂ ಬೆಳೆದುಬಂದಿದೆ. ಅದು ಕರ್ನಾಟಕದ ವೈಶಿಷ್ಟ್ಯ. ಈಗಿನ ಪ್ರಾಂತೀಕರಣದ ರಭಸದಲ್ಲಿ ಈ ವೈಶಿಷ್ಟ್ಯವನ್ನು ಅಲ್ಲಗೆಳೆಯಬಾರದು. ಈ ಭಾಷಾವಾರು ಭೇದ ಭಾವನೆ ನಮ್ಮ ರಾಜಕೀಯದ ದುಷ್ಪಲ. ಅಖಂಡ ಭಾರತದ ನಿರ್ಮಾಣಕ್ಕೆ ಮುಂಚೆ ನಮ್ಮ ನಮ್ಮ ಪ್ರಾಂತೀಯ ದ್ವೇಷ ದಮನವಾಗಬೇಕು. ಒಳಗೂ ಹೊರಗೂ ಎಲ್ಲರೊಡನೆ ಸಮರಸವಾಗಿ ನಡೆದು ನಾವು ಕರ್ನಾಟಕರು ಉಳಿದ ದಾಕ್ಷಿಣಾತ್ಯರಿಗೆ ಮೇಲುಪಂಕ್ತಿಯಾಗಿರೋಣ. ದಾಕ್ಷಿಣಾತ್ಯರೆಲ್ಲ ಒಂದಾಗಿ ಉತ್ತರಾದಿಯವರಿಗೆ ಮೇಲುಪಂಕ್ತಿಯಾಗೋಣ. ನಮ್ಮ ನೆರೆಯವರನ್ನು ಬಿಟ್ಟು ನಮಗೆ ಪ್ರಾಂತ ಬಂದರೆ ಕಣ್ಣುರಿ, ನಮಗೆ ಇಲ್ಲದೆ ಅವರಿಗೆ ಬಂದರೂ ಕಣ್ಣುರಿ. ಎಲ್ಲರಿಗೂ ಒಂದೇ ಮೋಕ್ಷ. ಇದು ಸಮಷ್ಟಿ  ರಾಜಕೀಯ.

ಸಮ್ಮೇಳನ ಮತ್ತು ಏಕೀಕರಣ

ಈ ಸಮ್ಮೇಳನದಿಂದ ಕರ್ನಾಟಕದ ಏಕೀಕರಣಕ್ಕೆ ಸಹಾಯವಾಗಿದೆ. ಏಕೀಕರಣಕ್ಕಿಂತ ಮುಖ್ಯವಾದ್ದು ನಮ್ಮ ಜನತೆಯ ಏಕೀಭಾವ. ಆ ಏಕೀಭಾವವೇ ಕರ್ನಾಟಕದ ನಿಜವಾದ ಆಸ್ತಿಭಾರ. ಈ ಮನೋಭಾವವಿಲ್ಲದೆ ರಾಜಕೀಯ ಏಕೀಕರಣ ಫಲಕಾರಿಯಲ್ಲ. ಆ ಏಕೀಭಾವಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನ ದ್ರೋಹವೆಸಗುತ್ತದೆ. ಕಲಾವಿದರ ಮನಸ್ಸ್ಸು ನಿರ್ಮತ್ಸರವಾಗಿ ನಿಷ್ಪಕ್ಷವಾಗಿ ಅಭೇದವಾಗಿ ಐಕಮತ್ಯದ ಪರಿಮಳವನ್ನು ಸೂಸಿದರೆ ಕರ್ನಾಟಕ. ಅವರ ಕಣ್ಣಿಗೇ ಕಾಣದೆ ಅವರ ಮನಸ್ಸಿಗೇ ಸಿಕ್ಕದೆ ಇದ್ದರೆ ಸಾಮಾನ್ಯ ಜನಕ್ಕೆ ಕರ್ನಾಟಕ ಗಗನ ಕುಸುಮ.

ಪರಿಷತ್ತಿನ ಗುರಿ

ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿದಾಗಲೇ ಅಖಂಡ ಕರ್ನಾಟಕವನ್ನು ತನ್ನ ಕಣ್ಣಿನ ಮುಂದೆ ಇರಿಸಿಕೊಂಡಿತ್ತು. ಪರಿಷತ್ತು ಸದ್ದಿಲ್ಲದೆ ವ್ಯಕ್ತಾವ್ಯಕ್ತವಾಗಿ ಕರ್ನಾಟಕವನ್ನು ಒಂದು ಮಾಡುತ್ತಿದೆ. ಪರಿಷತ್ತನ್ನು ಮೊದಲು ಮಾಡಿದ ಶ್ರೀ ನಂಜುಂಡಯ್ಯನವರಿಂದ ಪ್ರಾರಂಭಮಾಡಿ ಈಗ ಅದರ ಭಾರ ಹೊತ್ತು ನಡೆಸುತ್ತಿರುವ ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರವರೆಗೂ ಪರಿಷತ್ತನ್ನು ರಚಿಸಿದ ಎಲ್ಲರೂ ಕರ್ನಾಟಕ ನಿರ್ಮಾಣದಲ್ಲೇ ತಮ್ಮ ಆಯುಷ್ಯವನ್ನು ಕಳೆದಿದ್ದಾರೆ.

Tag: Kannada Sahitya Sammelana 29, T.P. Kailasam

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)